ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಖಾಲಿಸ್ತಾನ ‍ಬೆಂಬಲಿಗರಿಂದ ಹಿಂಸಾಚಾರ ಭಾರತದ ಕಳವಳಕ್ಕೆ ಕಿವಿಗೊಡಬೇಕು

Last Updated 27 ಮಾರ್ಚ್ 2023, 20:52 IST
ಅಕ್ಷರ ಗಾತ್ರ

ಖಾಲಿಸ್ತಾನ ಪರ ಕಾರ್ಯಕರ್ತರು ಬೇರೆ ದೇಶಗಳಲ್ಲಿ ಇರುವ ಭಾರತದ ದೂತಾವಾಸ ಕಚೇರಿಗಳ ಮೇಲೆ ದಾಳಿ ನಡೆಸುವುದು ಹಾಗೂ ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸುವುದು ಈಚಿನ ದಿನಗಳಲ್ಲಿ ಕಣ್ಣಿಗೆ ರಾಚುವಷ್ಟು ಹೆಚ್ಚಾಗಿದೆ. ಲಂಡನ್‌ನಲ್ಲಿ ಇರುವ ಭಾರತದ ಹೈಕಮಿಷನ್ ಕಚೇರಿಯ ಎದುರು ಗುಂಪೊಂದು ಮಾರ್ಚ್ 19ರಂದು ಖಾಲಿಸ್ತಾನ ಪರ ಘೋಷಣೆಗಳನ್ನು ಕೂಗಿತು. ದೂತಾವಾಸ ಕಚೇರಿ ಇರುವ ಕಟ್ಟಡದ ಮೇಲೆ ಬಾಟಲಿಗಳನ್ನು ಎಸೆದಿದ್ದಷ್ಟೇ ಅಲ್ಲದೆ, ಅಲ್ಲಿ ಹಾರಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಆ ಗುಂಪು ಕೆಳಕ್ಕಿಳಿಸಿತು. ಆ ಸಂದರ್ಭದಲ್ಲಿ ಭಾರತದ ದೂತಾವಾಸ ಕಚೇರಿಗೆ ಭದ್ರತೆ ನೀಡಲು ಅಲ್ಲಿ ಪೊಲೀಸರು ಇಲ್ಲದಿದ್ದುದು ಆಘಾತಕಾರಿ ಸಂಗತಿ. ಈ ಘಟನೆ ಜರುಗಿದ ಎರಡು ದಿನಗಳ ನಂತರ ಇನ್ನೊಂದು ದಾಳಿ ನಡೆಯಿತು. ಈ ನಡುವೆ ಖಾಲಿಸ್ತಾನ ಬೆಂಬಲಿಗರು ಅಮೆರಿಕ ಮತ್ತು ಕೆನಡಾದಲ್ಲಿ ಕೂಡ ಪ್ರತಿಭಟನೆ ನಡೆಸಿದ್ದಾರೆ. ಅಮೆರಿಕದ ವಾಷಿಂಗ್ಟನ್‌, ಸ್ಯಾನ್‌ಫ್ರಾನ್ಸಿಸ್ಕೊ, ಕೆನಡಾದ ವ್ಯಾಂಕೂವರ್‌ನಲ್ಲಿ ಭಾರತದ ದೂತಾವಾಸ ಕಚೇರಿಗಳ ಸುತ್ತಲಿನ ಭದ್ರತಾ ಬೇಲಿಯನ್ನು ಮುರಿದು, ಕಚೇರಿಯ ಮೇಲೆ ದಾಳಿ ನಡೆಸಿ ಅಲ್ಲಿ ನಷ್ಟ ಉಂಟುಮಾಡಲು ಅವರು ಯತ್ನಿಸಿದ್ದಾರೆ. ವಾಷಿಂಗ್ಟನ್‌ನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಅಲ್ಲಿನ ವಿದ್ಯಮಾನಗಳನ್ನು ವರದಿ ಮಾಡುತ್ತಿದ್ದ ಭಾರತದ ಹಿರಿಯ ಪತ್ರಕರ್ತರೊಬ್ಬರ ಮೇಲೆ ಖಾಲಿಸ್ತಾನ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಖಾಲಿಸ್ತಾನ ಪರ ಸಹಾನುಭೂತಿ ಹೊಂದಿರುವ, ತೀವ್ರಗಾಮಿ ಸಂಘಟನೆ ‘ವಾರಿಸ್ ಪಂಜಾಬ್ ದೆ’ ನಾಯಕ ಅಮೃತ್ ಪಾಲ್‌ ಸಿಂಗ್‌ಗೆ ಭಾರತದಲ್ಲಿ ಶೋಧ ತೀವ್ರಗೊಂಡಿರುವ ಸಂದರ್ಭದಲ್ಲಿಯೇ ಪಶ್ಚಿಮದ ದೇಶಗಳಲ್ಲಿ ಖಾಲಿಸ್ತಾನ ಪರ ಈ ಬಗೆಯ ಚಟುವಟಿಕೆಗಳು ಹೆಚ್ಚಳವಾಗಿವೆ. ಕಳೆದ ಒಂದು ವಾರದಲ್ಲಿ ಅಮೃತ್‌ ಪಾಲ್‌ ಬೆಂಬಲಿಗರು ಎನ್ನಲಾದ ನೂರಾರು ಮಂದಿಯನ್ನು ಬಂಧಿಸಲಾಗಿದೆ. ಪಂಜಾಬ್‌ನಲ್ಲಿ ಪೊಲೀಸರು ಕೈಗೊಂಡಿರುವ ಕಠಿಣ ಕ್ರಮಗಳನ್ನು ತಾವು ವಿರೋಧಿಸುತ್ತಿರುವುದಾಗಿ ಖಾಲಿಸ್ತಾನ ಪರ ಕಾರ್ಯಕರ್ತರು ಹೇಳಿಕೊಂಡಿದ್ದಾರೆ. ತವರಿನಲ್ಲಿ ಇರುವ ತಮ್ಮವರ ಬಗ್ಗೆ ಅವರಿಗೆ ಕಾಳಜಿ ಇದ್ದಿದ್ದರೆ, ಅದರ ಬಗ್ಗೆ ಅವರು ಭಾರತದ ದೂತಾವಾಸ ಕಚೇರಿಗಳಿಗೆ ಶಾಂತಿಯುತವಾಗಿ ಮನವಿ ಸಲ್ಲಿಸಬಹುದಿತ್ತು. ಆದರೆ ಅವರು ಹಾಗೆ ಮಾಡಿಲ್ಲ. ಅವರು ನಡೆಸಿದ ಪ್ರತಿಭಟನೆಗಳು ಹಿಂಸಾತ್ಮಕವಾಗಿದ್ದವು, ಭಾರತ ವಿರೋಧಿಯಾಗಿದ್ದವು.

ಖಾಲಿಸ್ತಾನ ಬೆಂಬಲಿಗರು ನಡೆಸಿರುವ ದಾಳಿ ಮಾತ್ರವೇ ಅಲ್ಲದೆ, ದಾಳಿಯಿಂದ ಭಾರತದ ದೂತಾವಾಸ ಕಚೇರಿಗಳನ್ನು ರಕ್ಷಿಸುವಲ್ಲಿ ಅಮೆರಿಕ, ಬ್ರಿಟನ್ ಮತ್ತು ಕೆನಡಾ ಸರ್ಕಾರಗಳು ವಿಫಲವಾಗಿದ್ದರ ಬಗ್ಗೆ ಭಾರತವು ಕಳವಳಗೊಂಡಿದೆ. ತಮ್ಮ ದೇಶದಲ್ಲಿ ಇರುವ ವಿದೇಶಿ ದೂತಾವಾಸ ಕಚೇರಿಗಳ ರಕ್ಷಣೆಯು ಆತಿಥೇಯ ದೇಶಗಳ ಹೊಣೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಈ ವಿಚಾರವಾಗಿ ಕಟುವಾದ ಮಾತುಗಳಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.ಈ ದೇಶಗಳ ಸರ್ಕಾರಗಳು ಭಾರತದ ದೂತಾವಾಸ ಕಚೇರಿಗಳಿಗೆ ಭದ್ರತೆ ಕಲ್ಪಿಸುವ ವಿಚಾರದಲ್ಲಿ ಬಾಯಿಮಾತಿನ ಆಚೆಗೂ ಕ್ರಮ ಕೈಗೊಳ್ಳಬೇಕು ಎಂದು ಜೈಶಂಕರ್ ಹೇಳಿದ್ದಾರೆ. ಭಾರತದಲ್ಲಿ ಇರುವ ಈ ದೇಶಗಳ ರಾಯಭಾರಿಗಳನ್ನು ಕರೆಸಿ, ದಾಳಿಗಳ ವಿಚಾರವಾಗಿ ಅವರಲ್ಲಿ ತನ್ನ ಅಸಮಾಧಾನವನ್ನು ಕೇಂದ್ರ ವ್ಯಕ್ತಪಡಿಸಿದೆ. ಅಲ್ಲದೆ, ಮು‌ಯ್ಯಿಗೆ ಮುಯ್ಯಿ ಎಂಬಂತೆ ದೆಹಲಿಯಲ್ಲಿನ ಬ್ರಿಟಿಷ್ ಹೈಕಮಿಷನರ್‌ ನಿವಾಸಕ್ಕೆ ನೀಡಿದ್ದ ಭದ್ರತೆಯ ಮಟ್ಟವನ್ನು ತಗ್ಗಿಸಿದೆ.

ಪಾಶ್ಚಿಮಾತ್ಯ ದೇಶಗಳು ಖಾಲಿಸ್ತಾನ ಉಗ್ರಗಾಮಿ ಚಟುವಟಿಕೆಗಳ ವಿಚಾರದಲ್ಲಿ ಭಾರತವು ಇರಿಸಿದ್ದ ವಿಶ್ವಾಸವನ್ನು ದಶಕಗಳಿಂದಲೂ ಉಳಿಸಿಕೊಂಡಿಲ್ಲ. 1980 ಹಾಗೂ 1990ರ ದಶಕಗಳಲ್ಲಿ ಭಾರತವು ತನ್ನ ಏಕತೆಗೆ ಸವಾಲಾಗಿದ್ದ ಪ್ರತ್ಯೇಕತಾವಾದಿ ಹೋರಾಟವನ್ನು ಹತ್ತಿಕ್ಕಲು ಮುಂದಾಗಿದ್ದಾಗ ಕೆಲವು ದೇಶಗಳು ಖಾಲಿಸ್ತಾನ ಬೆಂಬಲಿಗರಿಗೆ ಭಾರತ ವಿರೋಧಿ ಕೃತ್ಯಗಳನ್ನು ನಡೆಸಲು, ಉಗ್ರಗಾಮಿಗಳನ್ನುನೇಮಕ ಮಾಡಿಕೊಳ್ಳಲು ಹಾಗೂ ಭಾರತದಲ್ಲಿ ಉಗ್ರವಾದಿ ಚಟುವಟಿಕೆಗಳಿಗೆ ಇಂಬು ಕೊಡಲು ಹಣ ಸಂಗ್ರಹಕ್ಕೆ ಅವಕಾಶ ಕಲ್ಪಿಸಿದವು. ಖಾಲಿಸ್ತಾನ ಪರ ಚಟುವಟಿಕೆಗಳಲ್ಲಿ ಭಾಗಿಯಾದ ನೂರಾರು ಮಂದಿಗೆ ಆಶ್ರಯ ಕಲ್ಪಿಸಿದವು. ಕೆನಡಾದ ಶಾಸನಸಭೆಗಳಲ್ಲಿ ಖಾಲಿಸ್ತಾನ ಪರ ಕಾರ್ಯಕರ್ತರು ಇದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಖಾಲಿಸ್ತಾನ ಪರ ಕಾರ್ಯಕರ್ತರು ಭಾರತದ ವಿರೋಧದ ನಡುವೆಯೂ ಯುರೋಪ್, ಉತ್ತರ ಅಮೆರಿಕದಲ್ಲಿ ಜನಮತಗಣನೆ ನಡೆಸಿದ್ದಾರೆ. ಪ್ರಜಾತಂತ್ರವನ್ನು ಬೆಂಬಲಿಸುವ ಹೆಸರಿನಲ್ಲಿ ಪಾಶ್ಚಿಮಾತ್ಯ ದೇಶಗಳು ಖಾಲಿಸ್ತಾನ ಬೆಂಬಲಿಗರನ್ನು ಮುದ್ದುಗರೆಯುವ ಕೆಲಸ ಮಾಡಿವೆ. ಆದರೆ, ಪ್ರತ್ಯೇಕ ಖಾಲಿಸ್ತಾನಕ್ಕೆ ಆಗ್ರಹಿಸುತ್ತಿರುವವರು ಪ್ರಜಾತಂತ್ರವಾದಿಗಳಲ್ಲ. ಏಕೆಂದರೆ ಅವರು ನಡೆಸುತ್ತಿರುವುದು ಹಿಂಸಾತ್ಮಕ ಚಳವಳಿ. ಪಾಶ್ಚಿಮಾತ್ಯ ದೇಶಗಳು ಭಾರತದ ಕಳವಳವನ್ನು ಗಂಭೀರವಾಗಿ ಪರಿಗಣಿಸಬೇಕು. ತಮ್ಮ ನೆಲದಲ್ಲಿ ಭಾರತ ವಿರೋಧಿ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT