ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮಣಿಪುರ ಹಿಂಸಾಚಾರ ಕೊನೆಗೊಳಿಸಿ, ಸಮಸ್ಯೆಗಳಿಗೆ ಪರಿಹಾರ ಸೂತ್ರ ರೂಪಿಸಿ

ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನೆಲೆಸುವಂತೆ ಮಾಡುವುದು ತಕ್ಷಣದ ಅಗತ್ಯ
Published 31 ಮೇ 2023, 19:09 IST
Last Updated 31 ಮೇ 2023, 19:09 IST
ಅಕ್ಷರ ಗಾತ್ರ

ಮಣಿಪುರದಲ್ಲಿ ಕೆಲವು ದಿನಗಳಿಂದ ಶಾಂತವಾಗಿದ್ದ ಪರಿಸ್ಥಿತಿಯು ಮತ್ತೆ ಬಿಗಡಾಯಿಸಿದೆ. ಅಲ್ಲಿ ತೀವ್ರ ಪ್ರತಿಭಟನೆಗಳು, ಆಸ್ತಿಗೆ ಬೆಂಕಿ ಹಚ್ಚಿದ ಪ್ರಕರಣಗಳು, ಹತ್ಯೆಗಳು ನಡೆದಿವೆ. ಇದು ಆಡಳಿತಾತ್ಮಕವಾಗಿ ಹಾಗೂ ರಾಜಕೀಯವಾಗಿ ಹಲವು ಹಂತಗಳಲ್ಲಿ ಆಗಿರುವ ವೈಫಲ್ಯಗಳ ಪರಿಣಾಮ. ದೇಶದ ಈಶಾನ್ಯ ಭಾಗದಲ್ಲಿರುವ ಈ ಪುಟ್ಟ ರಾಜ್ಯದಲ್ಲಿ ಒಂದು ತಿಂಗಳಿನಿಂದ ಹಿಂಸಾಚಾರ ನಡೆಯುತ್ತಿದೆ. ಅಲ್ಲಿನ ಬಹುಸಂಖ್ಯಾತ ಮೈತೇಯಿ ಸಮುದಾಯ ಹಾಗೂ ಬುಡಕಟ್ಟು ಕುಕಿ ಸಮುದಾಯಕ್ಕೆ ಸೇರಿದ ತೀವ್ರವಾದಿಗಳು ಪರಸ್ಪರ ಸೆಣಸಾಟಕ್ಕೆ ನಿಂತಿದ್ದಾರೆ. ಭದ್ರತಾ ಪಡೆಯು ಕುಕಿ ಸಮುದಾಯಕ್ಕೆ ಸೇರಿದ 40 ತೀವ್ರಗಾಮಿಗಳನ್ನು ಹತ್ಯೆ ಮಾಡಿದೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಭಾನುವಾರ ಹೇಳಿದ್ದಾರೆ.

ಒಂದು ತಿಂಗಳಲ್ಲಿ ಹಿಂಸಾಚಾರದ ಕಾರಣದಿಂದ ಕನಿಷ್ಠ 75 ಮಂದಿ ಜೀವ ಕಳೆದುಕೊಂಡಿದ್ದಾರೆ. ಅಲ್ಲಿ ಶಾಸಕರ ಮನೆಗಳು, ಪೊಲೀಸ್ ಠಾಣೆಗಳು ಮತ್ತು ಇತರ ಕೆಲವು ಕಚೇರಿಗಳ ಮೇಲೆ ದಾಳಿಗಳು ನಡೆದಿವೆ. ಶಸ್ತ್ರಾಗಾರಗಳನ್ನು ಲೂಟಿ ಮಾಡಲಾಗಿದೆ. ಮಣಿಪುರದ ಸಮಾಜದಲ್ಲಿ ವಿಭಜನೆಗೆ ಕಾರಣವಾಗುವ ಹಲವು ಸಮಸ್ಯೆಗಳಿವೆ. ಮೈತೇಯಿ ಸಮುದಾಯದವರು ಸಾಮಾನ್ಯವಾಗಿ ಅಲ್ಲಿನ ಸಮತಟ್ಟು ಪ್ರದೇಶಗಳಲ್ಲಿ ವಾಸ ಮಾಡುತ್ತಾರೆ. ಅವರು ಹಿಂದೂ ಧರ್ಮೀಯರು. ಕುಕಿ ಮತ್ತು ಇತರ ಬುಡಕಟ್ಟು ಸಮುದಾಯದವರು ಬೆಟ್ಟ ಪ್ರದೇಶಗಳಲ್ಲಿ ವಾಸಿಸುತ್ತಾರೆ, ಕ್ರೈಸ್ತ ಧರ್ಮವನ್ನು ಪಾಲಿಸುತ್ತಾರೆ. ಬಹುಸಂಖ್ಯಾತ ಸಮುದಾಯದವರ ಕಾರಣದಿಂದಾಗಿ ತಮ್ಮ ಜಮೀನು ಒಡೆತನದ ಹಕ್ಕುಗಳಿಗೆ ಧಕ್ಕೆ ಆಗುತ್ತಿದೆ ಎಂದು ಕುಕಿ ಸಮುದಾಯದವರು ಆತಂಕಕ್ಕೆ ಒಳಗಾಗಿದ್ದಾರೆ. ಇಲ್ಲಿ ರಾಜಕಾರಣವೂ ತನ್ನದೇ ಆದ ಪಾತ್ರ ನಿರ್ವಹಿಸಿದೆ. ಈ ಎರಡು ಸಮುದಾಯಗಳ ನಡುವಿನ ಬಿಕ್ಕಟ್ಟು ಬಹುಕಾಲದಿಂದ ಇದೆ, ಬಿಕ್ಕಟ್ಟು ಬಹಳ ಆಳವಾಗಿಯೂ ಇದೆ.

ಸಂಘರ್ಷವು ಬೂದಿ ಮುಚ್ಚಿದ ಕೆಂಡದಂತೆ ಇದ್ದ ಹೊತ್ತಿನಲ್ಲಿ ಇಲ್ಲವೆ ಹಿಂಸಾಚಾರ ಭುಗಿಲೆದ್ದ ನಂತರ ಮಣಿಪುರಕ್ಕೆ ಭೇಟಿ ನೀಡಿರಲಿಲ್ಲ ಎಂಬ ಆರೋಪಕ್ಕೆ ಗುರಿಯಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗ ಅಲ್ಲಿದ್ದಾರೆ. ಎರಡು ಸಮುದಾಯಗಳ ನಡುವೆ ಮಾತುಕತೆಗೆ ಹಾಗೂ ಬಿಕ್ಕಟ್ಟು ಶಮನಕ್ಕೆ ಗಂಭೀರ ಪ್ರಯತ್ನ ನಡೆಸದೇ ಇದ್ದ ಅವಧಿಯಲ್ಲಿ ತ್ವೇಷಮಯ ವಾತಾವರಣವು ಇನ್ನಷ್ಟು ಹರಡಿದೆ ಎನ್ನಲಾಗಿದೆ. ಮೈತೇಯಿ ಸಮುದಾಯಕ್ಕೆ ಬುಡಕಟ್ಟು ಸಮುದಾಯದ ಸ್ಥಾನಮಾನ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಮಣಿಪುರ ಹೈಕೋರ್ಟ್‌ ಆದೇಶಿಸಿದ್ದು ಈಗಿನ ಸಂಘರ್ಷಕ್ಕೆ ಮೂಲದಂತೆ ಕಾಣುತ್ತಿದೆ. ಈ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಈಗ ತಡೆ ನೀಡಿದೆಯಾದರೂ, ಕುಕಿ ಸಮುದಾಯವು ಈಗಿರುವ ತನ್ನ ಹಕ್ಕುಗಳಿಗೆ ಧಕ್ಕೆ ಎದುರಾಗಬಹುದು ಎಂಬ ಆತಂಕದಲ್ಲಿದೆ. ಹೈಕೋರ್ಟ್‌ ಆದೇಶದ ನಂತರದಲ್ಲಿ ಕುಕಿ ಸಮುದಾಯದವರು ಆಯೋಜಿಸಿದ್ದ ನಡಿಗೆ ಕಾರ್ಯಕ್ರಮವು ಹಿಂಸೆಗೆ ಪ್ರಚೋದನೆ ನೀಡಿತು ಎನ್ನಲಾಗಿದೆ. ಹಿಂಸಾಚಾರಕ್ಕೆ ಹೈಕೋರ್ಟ್ ಆದೇಶವು ಕಾರಣವಾಯಿತು ಎಂದು ಶಾ ಅವರು ಹೇಳಿದ್ದಾರೆ. ಆದರೆ ಹೀಗೆ ಹೇಳುವುದು ಹಲವು ವರ್ಷಗಳಿಂದ ಸೃಷ್ಟಿಯಾಗುತ್ತಿದ್ದ ಸಂಕೀರ್ಣ ಪರಿಸ್ಥಿತಿಯೊಂದನ್ನು ಬಹಳ ಸರಳವಾಗಿ ಕಂಡಂತೆ ಆಗುತ್ತದೆ.

ಅಲ್ಲಿನ ರಾಜ್ಯ ಸರ್ಕಾರವು ಕುಕಿ ಸಮುದಾಯದವರಲ್ಲಿ ವಿಶ್ವಾಸ ಹುಟ್ಟಿಸುತ್ತಿಲ್ಲ. ಏಕೆಂದರೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಮೈತೇಯಿ ಸಮುದಾಯದ ಪರ ಇದ್ದಾರೆ ಎಂಬ ಭಾವನೆ ಇದೆ. ರಾಜ್ಯದ ಆಡಳಿತದಲ್ಲಿ ಮೈತೇಯಿ ಸಮುದಾಯ ಮೇಲುಗೈ ಹೊಂದಿದೆ. ಹೈಕೋರ್ಟ್ ಆದೇಶದಿಂದ ಆಗಬಹುದಾದ ಪರಿಣಾಮಗಳನ್ನು ರಾಜ್ಯ ಸರ್ಕಾರವು ನಿರೀಕ್ಷೆ ಮಾಡಿರಲಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಅದು ವಿಫಲವಾಯಿತು. ಮತ್ತು ಬರಿಸುವ ರಸವುಳ್ಳ ಗಸಗಸೆ ಗಿಡವನ್ನು ಬೆಟ್ಟ ಪ್ರದೇಶಗಳಲ್ಲಿ ಬೆಳೆಯುವುದರ ವಿರುದ್ಧ ಸರ್ಕಾರ ನಡೆಸಿದ ಅಭಿಯಾನವು ಬುಡಕಟ್ಟು ಸಮುದಾಯದವರನ್ನು ಗುರಿಯಾಗಿಸಿಕೊಂಡಿದೆ ಎಂದು ಗ್ರಹಿಸಲಾಯಿತು. ಕುಕಿ ಸಮುದಾಯದವರ ಜೊತೆ ನಂಟು ಹೊಂದಿರುವ ಮ್ಯಾನ್ಮಾರ್ ನಿರಾಶ್ರಿತರು ರಾಜ್ಯವನ್ನು ಪ್ರವೇಶಿಸಿದ್ದು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿತು. ಹಿಂಸಾಚಾರವನ್ನು ಕೊನೆಗಾಣಿಸಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನೆಲೆಸುವಂತೆ ಮಾಡುವುದು ತಕ್ಷಣದ ಅಗತ್ಯ. ಹಾಗೆಯೇ ಅಲ್ಲಿನ ಸಮಾಜವನ್ನು ಒಡೆಯುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸಲು ಸಮಗ್ರವಾದ ಪರಿಹಾರ ಸೂತ್ರವೊಂದನ್ನು ರೂಪಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT