ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸ್ವಾಗತಾರ್ಹ ಗುಜರಿ ನೀತಿಪರಿಣಾಮಕಾರಿ ಅನುಷ್ಠಾನ ಬೇಕು

ಬಳಕೆಗೆ ಯೋಗ್ಯವಲ್ಲದ ವಾಹನಗಳನ್ನು ಗುಜರಿಗೆ ಹಾಕುವುದರಿಂದ, ದೇಶದಲ್ಲಿನ ಇಂಧನ ಬಳಕೆ ಇಂದಿಗಿಂತ ಹೆಚ್ಚು ದಕ್ಷವಾಗಬಹುದು
Last Updated 16 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ಅಗತ್ಯವಾಗಿದ್ದ ನೀತಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಅನಾವರಣಗೊಳಿಸಿದ್ದಾರೆ. ವಾಣಿಜ್ಯ ಉದ್ದೇಶದ ಹಾಗೂ ವೈಯಕ್ತಿಕ ಬಳಕೆಯ ವಾಹನಗಳಿಗೆ ಅನ್ವಯ ಆಗುವ ಈ ನೀತಿಯನ್ನು ಆಟೊಮೊಬೈಲ್‌ ಉದ್ಯಮವು ಸ್ವಾಗತಿಸಿದೆ. ಇದು ದೇಶದ ವಾಹನ ಉದ್ಯಮ ವಲಯದಲ್ಲಿ ಮಹತ್ವದ, ಬಹುನಿರೀಕ್ಷಿತ ಬದಲಾವಣೆಗಳನ್ನು ತರಬಲ್ಲದು ಎಂದು ಪ್ರಮುಖ ಕಂಪನಿಗಳು ಹೇಳಿವೆ. ಹೊಸ ನೀತಿಯ ಬಗ್ಗೆ ಕೆಲವು ವಲಯಗಳಿಂದ ಅನುಮಾನ, ಆತಂಕ ವ್ಯಕ್ತವಾಗಿರುವುದೂ ಇದೆ. ಪರಿಸರದ ಮೇಲೆ ಆಗಬಹುದಾದ ಪೂರಕ ಪರಿಣಾಮ, ಇಂಧನ ಬಳಕೆ ತುಸುಮಟ್ಟಿಗೆ ತಗ್ಗುವ ಸಾಧ್ಯತೆ, ವಾಹನವನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ಹಾಕಿದವರಿಗೆ ಸಿಗುವ ಆರ್ಥಿಕ ಪ್ರೋತ್ಸಾಹಗಳು, ಗುಜರಿಗೆ ಬಂದ ವಾಹನಗಳಲ್ಲಿನ ಲೋಹ, ರಬ್ಬರ್, ಪ್ಲಾಸ್ಟಿಕ್‌ ವಸ್ತುಗಳ ಪುನರ್ಬಳಕೆಯಿಂದ ಉದ್ಯಮಕ್ಕೆ ಆಗುವ ಪ್ರಯೋಜನ... ಇವೆಲ್ಲ ಈ ನೀತಿಯ ಸ್ವಾಗತಾರ್ಹ ಅಂಶಗಳು.

ಪ್ರಧಾನಿಯವರು ಹೇಳಿರುವಂತೆ ಇದು, ತ್ಯಾಜ್ಯವೆಂದು ಚೆಲ್ಲಿದ್ದನ್ನು ಮತ್ತೆ ಮತ್ತೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ಆರ್ಥಿಕ ರಚನೆಗಳನ್ನು ರೂಪಿಸಿಕೊಡುತ್ತದೆ. ಬಹುತೇಕ ಆರ್ಥಿಕ ಚಟುವಟಿಕೆಗಳು ಪರಿಸರದ ಮೇಲೆ ಒಂದಲ್ಲ ಒಂದು ಬಗೆಯಲ್ಲಿ ತುಸುವಾದರೂ ದುಷ್ಪರಿಣಾಮ ಉಂಟುಮಾಡುತ್ತಿರು ವುದು ನಿಜ. ಆದರೆ, ಬಳಸಿ ಸವಕಲಾದ ವಸ್ತುಗಳನ್ನು ಹೊಸ ಉತ್ಪನ್ನಗಳ ತಯಾರಿಕೆಯಲ್ಲಿ ಮತ್ತೆ ಬಳಸಿಕೊಳ್ಳುವುದು ಪರಿಸರಕ್ಕೆ ಅಲ್ಪಮಟ್ಟಿಗಾದರೂ ಹಿತಕರವಾಗಬಹುದು. ಬಳಕೆಗೆ ಯೋಗ್ಯವಲ್ಲದ ವಾಹನಗಳನ್ನು ಗುಜರಿಗೆ ಹಾಕುವುದರಿಂದ, ದೇಶದಲ್ಲಿನ ಇಂಧನ ಬಳಕೆ ಇಂದಿಗಿಂತ ಹೆಚ್ಚು ದಕ್ಷವಾಗಬಹುದು. ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳ ನೋಂದಣಿ ಅವಧಿ ಮುಗಿದ ನಂತರ, ಅವುಗಳನ್ನು ಪರೀಕ್ಷೆಗೆ ಒಳಪಡಿಸಿ, ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಆ ವಾಹನವನ್ನು ಗುಜರಿಗೆ ಹಾಕಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸ ಲಾಗುತ್ತದೆ.

ಹೀಗೆ ತೀರ್ಮಾನ ಮಾಡುವಾಗ, ವಾಹನ ದಲ್ಲಿನ ಕೆಲವು ಸುರಕ್ಷತಾ ಪರಿಕರಗಳು ಎಷ್ಟರ
ಮಟ್ಟಿಗೆ ಸುಸ್ಥಿತಿಯಲ್ಲಿವೆ ಎಂಬುದನ್ನು ಕೂಡ ಪರೀಕ್ಷಿಸಲಾಗುತ್ತದೆ. ಇದರಿಂದಾಗಿ, ಸುರಕ್ಷಿತವಲ್ಲದ ವಾಹನಗಳು ರಸ್ತೆಗಳಿಂದ ದೂರ ಸರಿಯಬಹುದು, ರಸ್ತೆ ಪ್ರಯಾಣವು ಇಂದಿಗಿಂತ ಹೆಚ್ಚು ಸುರಕ್ಷಿತವಾಗ ಬಹುದು.

ದೇಶದ ವಾಹನ ಉದ್ಯಮವು ಈಗ ಪ್ರತಿವರ್ಷ ಸರಾಸರಿ ₹ 4.5 ಲಕ್ಷ ಕೋಟಿ ವಹಿವಾಟು ನಡೆಸುತ್ತಿದೆ. ಹೊಸ ನೀತಿ ಜಾರಿಗೆ ಬಂದ ನಂತರದಲ್ಲಿ ಈ ಉದ್ಯಮದ ವಾರ್ಷಿಕ ವಹಿವಾಟಿನ ಮೊತ್ತವು ₹ 10 ಲಕ್ಷ ಕೋಟಿ ಆಗಬಹುದು ಎಂದು ಕೇರ್‌ ರೇಟಿಂಗ್ಸ್‌ ಸಂಸ್ಥೆ ಅಂದಾಜಿಸಿದೆ. ‘ಈ ನೀತಿ ಜಾರಿಗೆ ಬಂದ ನಂತರದಲ್ಲಿ, ಹಳೆಯ 51 ಲಕ್ಷ ವಾಹನಗಳು ಗುಜರಿಗೆ ಸೇರುವ ನಿರೀಕ್ಷೆಯಿದೆ. ಗುಜರಿ ವಸ್ತುಗಳನ್ನು ವಾಹನ ತಯಾರಿಕೆಗೆ ಮತ್ತೆ ಬಳಕೆ ಮಾಡಿಕೊಳ್ಳುವುದರಿಂದ ಹೊಸ ವಾಹನಗಳ ಉತ್ಪಾದನಾ ವೆಚ್ಚವು ಶೇಕಡ 30ರಿಂದ 40ರಷ್ಟು ಕಡಿಮೆಯಾಗಲಿದೆ’ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.

15 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ವಾಹನಗಳನ್ನು, 20 ವರ್ಷಗಳಿಗಿಂತ ಹಳೆಯದಾದ ಖಾಸಗಿ ವಾಹನಗಳನ್ನು ಗುಜರಿಗೆ ಹಾಕುವುದು ಕಡ್ಡಾಯವೇನೂ ಅಲ್ಲ. ಅವುಗಳು ಸುಸ್ಥಿತಿಯಲ್ಲಿ ಇವೆ ಎಂದಾದರೆ, ಅವುಗಳ ಬಳಕೆ ಮುಂದುವರಿಸಲು ಅಡ್ಡಿಯಿಲ್ಲ. ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ ನೋಂದಣಿ ಶುಲ್ಕ ಮನ್ನಾ ಆಗಲಿದೆ ಹಾಗೂ ರಸ್ತೆ ತೆರಿಗೆ ಪಾವತಿಯಲ್ಲಿ ಕೆಲವು ವಿನಾಯಿತಿಗಳು ಸಿಗಲಿವೆ ಎಂದು ಸರ್ಕಾರ ಹೇಳಿದೆ. ಇದು ಹಳೆಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ಹಾಕಲು ವಾಹನಗಳ ಮಾಲೀಕರಿಗೆ ಪ್ರೋತ್ಸಾಹಕವಾಗಿ ಕೆಲಸ ಮಾಡುವ ನಿರೀಕ್ಷೆ ಇದೆ. ಇಂತಹ ಕ್ರಮಗಳು ಮುಂದುವರಿದ ಹಲವು ದೇಶಗಳಲ್ಲಿ ಇವೆ.

ವಾಹನಗಳು ಸುಸ್ಥಿತಿಯಲ್ಲಿ ಇವೆಯೇ ಎಂಬುದನ್ನು ಸ್ವಯಂಚಾಲಿತ ವ್ಯವಸ್ಥೆಯೊಂದರ ಮೂಲಕ ಪರೀಕ್ಷಿಸಲಾಗುತ್ತದೆ. ಈಗಿನ ವ್ಯವಸ್ಥೆಯ ಅಡಿಯಲ್ಲಿ ಅಧಿಕಾರಿಗಳು ಬರಿಗಣ್ಣಿನಿಂದ ಪರೀಕ್ಷಿಸಿದ ಬಳಿಕ ವಾಹನದ ಅರ್ಹತಾ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇಲ್ಲಿ, ಅಧಿಕಾರಿಗಳಿಗೆ ತಮ್ಮ ವಿವೇಚನಾ ಅಧಿಕಾರ ಬಳಸುವ ಅವಕಾಶ ಹೆಚ್ಚಿರುವ ಕಾರಣ ಭ್ರಷ್ಟಾಚಾರದ ಸಾಧ್ಯತೆಯೂ ಹೆಚ್ಚಾಗಿಯೇ ಇದೆ. ಹೊಸ ವ್ಯವಸ್ಥೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಗಳು ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಿದ್ದು, ಇದು ಸ್ವಯಂಚಾಲಿತ ಆಗಿರುವ ಕಾರಣ ಭ್ರಷ್ಟಾಚಾರಕ್ಕೆ ಆಸ್ಪದ ಇರದಿರಬಹುದು.

ಹೊಸ ಗುಜರಿ ನೀತಿಯ ಯಶಸ್ಸು ಅಡಗಿರುವುದೇ ಈ ಕೇಂದ್ರಗಳು ಎಷ್ಟರಮಟ್ಟಿಗೆ ದಕ್ಷವಾಗಿ, ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದರ ಆಧಾರದ ಮೇಲೆ. ನೀತಿಯು ಜಾರಿಗೆ ಬಂದ ನಂತರದಲ್ಲಿ ದೇಶದಲ್ಲಿ 50ರಿಂದ 60 ಗುಜರಿ ಘಟಕಗಳು ತಲೆ ಎತ್ತುವ ಸಾಧ್ಯತೆ ಇದೆ ಎಂದು ಡೆಲಾಯ್ಟ್‌ ಇಂಡಿಯಾ ಅಂದಾಜು ಮಾಡಿದೆ. ಇಲ್ಲಿ ಹೊಸ ಹೂಡಿಕೆ ಆಗಲಿದೆ, ಹೊಸದಾಗಿ ಉದ್ಯೋಗ ಸೃಷ್ಟಿ ಕೂಡ ಆಗಲಿದೆ ಎಂಬುದನ್ನು ಪ್ರತ್ಯೇಕ ವಾಗಿ ಹೇಳುವ ಅಗತ್ಯವಿಲ್ಲ. ವಾಹನಗಳ ಸ್ಥಿತಿಯನ್ನು ಪರೀಕ್ಷಿಸಲು, ಅವುಗಳಿಗೆ ಅರ್ಹತಾ ಪ್ರಮಾಣಪತ್ರ ನೀಡಲು ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರಗಳು ಸ್ಥಾಪನೆ ಆಗಲಿರುವ ಕಾರಣ, ಇಲ್ಲಿ ಕೂಡ ಹೊಸದಾಗಿ ಖಾಸಗಿ ಹೂಡಿಕೆ ಆಗಬಹುದು. ಗುಜರಿ ಘಟಕಗಳು ಹಾಗೂ ಪರೀಕ್ಷಾ ಕೇಂದ್ರಗಳು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ಯಮ ವಲಯಕ್ಕೆ ಸೀಮಿತ ಪ್ರಮಾಣದಲ್ಲಿಯಾದರೂ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT