ಶನಿವಾರ, ಜನವರಿ 16, 2021
20 °C

ಸಂಪಾದಕೀಯ: ಮಾರುಕಟ್ಟೆ ಚೇತರಿಕೆ ಹಾದಿಯಲ್ಲಿರುವಾಗ ಬೆಲೆ ಹೆಚ್ಚಳದ ಬಿಸಿ ಬೇಡ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ದೇಶದ ಬ್ಯಾಂಕ್‌ಗಳು ನೀಡುವ ಸಾಲದ ಪ್ರಮಾಣದಲ್ಲಿ ಹೆಚ್ಚಳ ಆಗಿರುವುದನ್ನೂ ಬ್ಯಾಂಕ್‌ಗಳಲ್ಲಿ ಇರಿಸುವ ಠೇವಣಿಗಳ ಪ್ರಮಾಣದಲ್ಲಿ ಏರಿಕೆ ಆಗಿರುವುದನ್ನೂ ಹೊಸ ವರ್ಷದ ಆರಂಭಕ್ಕೆ ಒಂದು ದಿನ ಮೊದಲು ಬಂದ ಸುದ್ದಿಯು ತಿಳಿಸಿದೆ. ಈ ಸುದ್ದಿಯಲ್ಲಿ ಗಮನ ಸೆಳೆಯುವ ಅಂಶವೊಂದು ಇದೆ.

ಬ್ಯಾಂಕ್‌ಗಳು ನೀಡುವ ಸಾಲದ ಪ್ರಮಾಣದಲ್ಲಿ ಶೇಕಡ 6.05ರಷ್ಟು ಹೆಚ್ಚಳವಾಗಿದೆ. ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸುವ ಪ್ರಮಾಣದಲ್ಲಿ ಶೇ 11.33ರಷ್ಟು ಹೆಚ್ಚಳ ಆಗಿದೆ. ಇದು ಡಿಸೆಂಬರ್‌ 5ರಿಂದ 18ರ ನಡುವಿನ ಅವಧಿಯಲ್ಲಿ ಆಗಿರುವ ಹೆಚ್ಚಳದ ವಿವರ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ. ಅಂದರೆ, ಜನ ಸಾಲ ತೆಗೆದುಕೊಳ್ಳುತ್ತಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿಯಾಗಿ ಇರಿಸುತ್ತಿದ್ದಾರೆ. ಠೇವಣಿ ಪ್ರಮಾಣದಲ್ಲಿ ಹೆಚ್ಚಳ ಆಗಿರುವುದರಲ್ಲಿ ಈ ಸಂದರ್ಭದಲ್ಲಿ ಯಾವ ಆಶ್ಚರ್ಯವೂ ಇಲ್ಲ. ವ್ಯಕ್ತಿಗತ ನೆಲೆಯಲ್ಲಿ ಆರ್ಥಿಕ ಭದ್ರತೆಯ ಭಾವನೆ ಇನ್ನೂ ಮೂಡಿರದ ಕಾರಣ, ಮುಂದಿನ ದಿನಗಳಿಗಾಗಿ ಒಂದಿಷ್ಟು ಹಣವನ್ನು ಕಾಪಿಟ್ಟುಕೊಳ್ಳುವುದು ತೀರಾ ಸಹಜ. ಆದರೆ, ಈ ವಿದ್ಯಮಾನವನ್ನು ಇನ್ನೊಂದು ಬೆಳವಣಿಗೆಯ ಜೊತೆ ಇಟ್ಟು ನೋಡಬೇಕು.

ಜನವರಿಯಿಂದ ಅನ್ವಯ ಆಗುವಂತೆ ಬಹುತೇಕ ಕಂಪನಿಗಳ ಕಾರುಗಳ ಬೆಲೆಯಲ್ಲಿ, ಕೆಲವು ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಹೆಚ್ಚಳ ಆಗಿದೆ. ಎಲೆಕ್ಟ್ರಾನಿಕ್‌ ಉಪಕರಣಗಳಾದ ಟಿ.ವಿ., ರೆಫ್ರಿಜರೇಟರ್‌ಗಳ ಬೆಲೆ ಹೆಚ್ಚಳ ಮಾಡುವ ಆಲೋಚನೆ ಕೆಲವು ಕಂಪನಿಗಳಿಗೆ ಇದೆ ಎಂದು ವರದಿಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈಗಾಗಲೇ ಹೆಚ್ಚಿನ ಮಟ್ಟದಲ್ಲಿ ಇದೆ. ಒಟ್ಟಾರೆ ಅರ್ಥ ವ್ಯವಸ್ಥೆಯಲ್ಲಿ ಹಣದುಬ್ಬರದ ಪ್ರಮಾಣವು ಹಿತಕರ ಮಟ್ಟಕ್ಕೆ ತಗ್ಗಿಲ್ಲ. ಕೋವಿಡ್–19 ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನ ಉಳಿತಾಯಕ್ಕೆ ಹೆಚ್ಚು ಮಹತ್ವ ನೀಡುತ್ತಿರುವ ವರದಿಗಳು ಇವೆ.

ಜನರ ಬದುಕಿನಲ್ಲಿ ಆರ್ಥಿಕ ಭದ್ರತೆಯ ಭಾವನೆಯನ್ನು ಮೂಡಿಸಿ, ಅವರು ಹೆಚ್ಚೆಚ್ಚು ಖರೀದಿಸುವಂತೆ ಮಾಡಿ, ಮಾರುಕಟ್ಟೆಯಲ್ಲಿ ಹಣದ ಚಲಾವಣೆ ಹೆಚ್ಚುವಂತೆ ಮಾಡಬೇಕಿರುವ ಸಂದರ್ಭ ಇದು. ಆಟೊಮೊಬೈಲ್‌ ಉದ್ಯಮ, ಎಲೆಕ್ಟ್ರಾನಿಕ್‌ ಉತ್ಪನ್ನಗಳ ಉದ್ಯಮವು ಆರ್ಥಿಕ ಆರೋಗ್ಯದ ಸೂಚಕಗಳಿದ್ದಂತೆ. ತಮಗೆ ಅಗತ್ಯವಿರುವ ವಸ್ತುಗಳ ಬೆಲೆ ಹೆಚ್ಚಳ ಆಗಿರುವ ಕಾರಣ, ತಾವು ತಯಾರಿಸುವ ಉತ್ಪನ್ನಗಳ ಬೆಲೆಯನ್ನೂ ಹೆಚ್ಚಿಸ ಬೇಕಾಗಿದೆ ಎಂದು ಆಟೊಮೊಬೈಲ್‌ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಕಂಪನಿಗಳು ಹೇಳಿವೆ. ಲಾಕ್‌ಡೌನ್‌ ನಂತರದಲ್ಲಿ ವಿವಿಧ ಉದ್ಯಮಗಳಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ವ್ಯವಸ್ಥೆಗೆ ಏಟು ಬಿದ್ದಿದೆ ಎಂಬುದೂ ನಿಜ. ಅದು ಕೂಡ ಬೆಲೆ ಹೆಚ್ಚಳಕ್ಕೆ ಒಂದಿಷ್ಟು ಕೊಡುಗೆ ನೀಡುತ್ತಿರಬಹುದು.

ಜನ ಹಣ ಖರ್ಚು ಮಾಡಲು ಮನಸ್ಸು ಮಾಡುತ್ತಿಲ್ಲದ ಸಂದರ್ಭದಲ್ಲಿ, ಇಂತಹ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಆದರೆ ಅದು ಆರ್ಥಿಕ ಚೇತರಿಕೆಗೆ ತೊಡರುಗಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಈ ಅಪಾಯವನ್ನು ಆಳುವವರು ಗ್ರಹಿಸಬೇಕು. ಜನ ಹೆಚ್ಚೆಚ್ಚು ಖರೀದಿಸಲು ಪೂರಕವಾದ ಪರಿಸ್ಥಿತಿಯನ್ನು ಸೃಷ್ಟಿಸಿಕೊಡಬೇಕು– ಅಂದರೆ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆ ತೀರಾ ಹೆಚ್ಚಳ ಆಗದಂತೆ ನೋಡಿಕೊಳ್ಳಬೇಕು. ಖರೀದಿ ಮಾಡುವವರ ಕೈಯಲ್ಲಿ ಹಣ ಇರುವಂತೆಯೂ ನೋಡಿಕೊಳ್ಳಬೇಕು. ಪೂರೈಕೆ ವ್ಯವಸ್ಥೆಗೆ ಆಗಿರುವ ತೊಂದರೆಗಳನ್ನು ಸರಿಪಡಿಸಬೇಕು.

ಹಣದುಬ್ಬರ ತಗ್ಗಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು. ವಸ್ತುಗಳ ಬೆಲೆಯು ಜನರ ಖರೀದಿ ಸಾಮರ್ಥ್ಯವನ್ನು ಮೀರಿ ಹೆಚ್ಚಳವಾಗದಂತೆಯೂ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನರ ಖರೀದಿ ಸಾಮರ್ಥ್ಯ ಇನ್ನಷ್ಟು ತಗ್ಗದಂತೆಯೂ ನೋಡಿಕೊಳ್ಳಬೇಕು. ಈ ಕ್ರಮಗಳು ಮಾರುಕಟ್ಟೆಯಲ್ಲಿ ಮತ್ತೆ ಉತ್ಸಾಹ ಮೂಡಿಸಬಲ್ಲವು. ಫೆಬ್ರುವರಿಯಲ್ಲಿ ಹೊಸ ಬಜೆಟ್ ಮಂಡನೆ ಆಗಲಿದೆ.

ಉದ್ಯಮ ವಲಯಕ್ಕೆ ಹಲವು ಯೋಜನೆಗಳ ಮೂಲಕ ಕೇಂದ್ರವು ಈಗಾಗಲೇ ಒಂದಿಷ್ಟು ನೆರವನ್ನು ನೀಡಿದೆ. ಜನರ ಖರೀದಿ ಸಾಮರ್ಥ್ಯ ಹೆಚ್ಚುವಂತೆ ಮಾಡಲು ಬಜೆಟ್ ಮೂಲಕ ಕೆಲವು ಉಪಕ್ರಮಗಳನ್ನು ಜಾರಿಗೆ ತರುವ ಅವಕಾಶ ಕೇಂದ್ರದ ಮುಂದೆ ಇದೆ. ಜನರ ಆರ್ಥಿಕ ಸಾಮರ್ಥ್ಯ ಹೆಚ್ಚಿದರೆ ಅದರ ಲಾಭ ಉದ್ಯಮಗಳಿಗೂ ಮಾರುಕಟ್ಟೆಗೂ ಸಿಕ್ಕೇ ಸಿಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು