ಶನಿವಾರ, ಆಗಸ್ಟ್ 13, 2022
27 °C

ಸಂಪಾದಕೀಯ: ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಸಮಸ್ಯೆಗೆ ಮುಷ್ಕರ ಪರಿಹಾರವಲ್ಲ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ತಮ್ಮನ್ನೂ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಗುರುವಾರದಿಂದ ದಿಢೀರ್‌ ಮುಷ್ಕರಕ್ಕೆ ಇಳಿದಿದ್ದಾರೆ. ಶುಕ್ರವಾರ ಮುಷ್ಕರ ಮತ್ತಷ್ಟು ತೀವ್ರಗೊಂಡಿದೆ. ಈ ಬೇಡಿಕೆ ಈಡೇರಿಸಬೇಕು ಎಂದು ನೌಕರರು ಹಲವು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ದೀರ್ಘಕಾಲ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ನಷ್ಟದ ಸುಳಿಗೆ ಸಿಲುಕಿವೆ. ನೌಕರರ ವೇತನ ಪಾವತಿಗೂ ರಾಜ್ಯ ಸರ್ಕಾರದ ಮುಂದೆ ಪದೇ ಪದೇ ಕೈಯೊಡ್ಡಬೇಕಾದ ಪರಿಸ್ಥಿತಿ ಉಂಟಾಗಿದೆ. ವೆಚ್ಚ ಕಡಿತದ ಕಾರ್ಯತಂತ್ರದ ಭಾಗವಾಗಿ ನೌಕರರನ್ನು ರಜೆಯ ಮೇಲೆ ಕಳುಹಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ, ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಈ ನಿಗಮಗಳಿಗೆ ಸಾಧ್ಯವಾಗಿಲ್ಲ. ತಮ್ಮನ್ನೂ ‘ಸರ್ಕಾರಿ ನೌಕರರು’ ಎಂದು ಪರಿಗಣಿಸಿದರೆ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಬಹುದು ಎಂಬ ನಿರೀಕ್ಷೆಯು ಈ ನೌಕರರಲ್ಲಿ ಇದೆ. ಸಾರಿಗೆ ನಿಗಮಗಳ ನೌಕರರ ನಡುವೆ ಸಕ್ರಿಯವಾಗಿರುವ ಹೆಚ್ಚಿನ ಕಾರ್ಮಿಕ ಸಂಘಟನೆಗಳು ‘ಸರ್ಕಾರಿ ನೌಕರರಿಗೆ ಸಮನಾದ ವೇತನ, ಭತ್ಯೆ ಮತ್ತು ಇತರ ಸೌಲಭ್ಯಗಳನ್ನು ನೀಡಬೇಕು’ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಾ ಬಂದಿವೆ. ಈ ಕಾರಣದಿಂದ, ‘ಸರ್ಕಾರಿ ನೌಕರರೆಂದು ಪರಿಗಣಿಸಬೇಕು’ ಎಂಬ ಬೇಡಿಕೆಗೆ ಹೆಚ್ಚಿನ ಬಲ ಬಂದಿರಲಿಲ್ಲ. ಈಗ ಅದೇ ಬೇಡಿಕೆಯು ಮುಷ್ಕರಕ್ಕೆ ದಾರಿ ತೆಗೆದಿದೆ.

ಈ ಸಾರಿಗೆ ನಿಗಮಗಳಲ್ಲಿ 1.30 ಲಕ್ಷಕ್ಕೂ ಹೆಚ್ಚು ನೌಕರರಿದ್ದಾರೆ. ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಮುಷ್ಕರ ಬೆಂಬಲಿಸಿದ್ದಾರೆ. ಈಶಾನ್ಯ ಕರ್ನಾಟಕ ಸಾರಿಗೆ ನಿಗಮ ಮತ್ತು ವಾಯವ್ಯ ಕರ್ನಾಟಕ ಸಾರಿಗೆ ನಿಗಮದ ನೌಕರರಿಂದಲೂ ಮುಷ್ಕರಕ್ಕೆ ಬೆಂಬಲ ದೊರಕಿದೆ. ಲಾಕ್‌ಡೌನ್‌ ಮತ್ತು ನಂತರದ ದಿನಗಳಲ್ಲಿ ಹಲವು ವಲಯಗಳ ನೌಕರರಂತೆ ಸಾರಿಗೆ ನಿಗಮಗಳ ನೌಕರರೂ ಹೆಚ್ಚಿನ ಸಂಕಷ್ಟ ಎದುರಿಸಿದ್ದಾರೆ. ಇಂತಹ ಹೊತ್ತಲ್ಲಿ ಸಾಂತ್ವನದ ಮಾತು ಸಂಕಷ್ಟದ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ. ಆದರೆ, ಅದು ಆಗಿಲ್ಲ. ಬದಲಿಗೆ ಆಡಳಿತ ಮಂಡಳಿಗಳ ಕೆಲವರಿಂದ ಕೆಳಹಂತದ ನೌಕರರಿಗೆ ಕಿರುಕುಳ ಹೆಚ್ಚಾಗಿದೆ ಎಂಬ ದೂರು ಕೇಳಿಬಂದಿದೆ. ಪ್ರತಿಭಟನೆ ತೀವ್ರಗೊಳ್ಳಲು ಇದೂ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಸಾರಿಗೆ ನಿಗಮಗಳ ನೌಕರರ ಒಂದು ಗುಂಪು ದಿಢೀರ್‌ ಮುಷ್ಕರಕ್ಕೆ ಕರೆ ನೀಡಿರುವುದರಿಂದ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಕೋವಿಡ್‌ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನವರು ಈ ಸಾರಿಗೆ ನಿಗಮಗಳ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ, ನೌಕರರ ಮುಷ್ಕರದಿಂದ ಬಹುತೇಕ ಜಿಲ್ಲೆಗಳಲ್ಲಿ ಬಸ್‌ ಸೇವೆ ಸ್ಥಗಿತಗೊಂಡಿದೆ. ಮುಷ್ಕರ ಕೈಬಿಡುವಂತೆ ನೌಕರರ ಮನವೊಲಿಸಲು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ನಡೆಸಿದ ಎರಡು ಸುತ್ತಿನ ಸಭೆಗಳು ಫಲ ನೀಡಿಲ್ಲ. ಮುಷ್ಕರ ಮುಂದುವರಿದರೆ ಸಾರ್ವಜನಿಕ ಸಾರಿಗೆಯನ್ನೇ ನೆಚ್ಚಿಕೊಂಡಿರುವ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಸರ್ಕಾರ ಮತ್ತು ನೌಕರರ ಸಂಘಟನೆಗಳು ಪ್ರತಿಷ್ಠೆ ಬದಿಗಿರಿಸಿ, ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವುದು ವಿಹಿತ. ನೌಕರರ ಬೇಡಿಕೆಯ ಸಾಧಕ–ಬಾಧಕಗಳನ್ನು ನೌಕರರ ಸಂಘಟನೆಗಳ ಮುಖಂಡರಿಗೆ ಸರ್ಕಾರ ಮನವರಿಕೆ ಮಾಡಿಕೊಟ್ಟು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಆಡಳಿತ ಮಂಡಳಿಗಳಿಂದ ನೌಕರರಿಗೆ ಕಿರುಕುಳ ಆಗುತ್ತಿರುವುದು ನಿಜವಾಗಿದ್ದರೆ ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೋವಿಡ್‌ ಸಾಂಕ್ರಾಮಿಕ ಮತ್ತು ಇತರ ಕಾರಣಗಳಿಂದಾಗಿ ಸಾಲದ ಸುಳಿಗೆ ಸಿಲುಕಿರುವ ನಿಗಮಗಳನ್ನು ಮುಷ್ಕರವು ಮತ್ತಷ್ಟು ಬಿಕ್ಕಟ್ಟಿಗೆ ದೂಡಬಹುದು. ಅದಕ್ಕೆ ನೌಕರರು ಮತ್ತು ಸರ್ಕಾರವು ಆಸ್ಪದ ನೀಡಬಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು