ದೃಷ್ಟಿ ದೋಷದೊಂದಿಗೆ ಹುಟ್ಟಿ, ನಂತರ ರೆಟಿನೊಪಥಿಯಿಂದ (ಕಣ್ಣಿಗೆ ಸಂಬಂಧಿಸಿದ ಒಂದು ಕಾಯಿಲೆ) ತನ್ನ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಂಡ ಅಂಚಲ್ ಭತೇಜಾ ಸುಪ್ರೀಂ ಕೋರ್ಟ್‌ನಲ್ಲಿ ಕಳೆದ ತಿಂಗಳು ವಾದ ಮಂಡಿಸಿದ್ದು ಒಂದು ಅಪೂರ್ವವಾದ ಗಳಿಗೆಯಾಗಿತ್ತು. ಒಬ್ಬ ಅಂಧ ಮಹಿಳೆಯಾಗಿ ತಾವು ಅನುಭವಿಸಿದ ಕಷ್ಟ, ಮಾಡಿದ ಸಾಧನೆಯ ಬಗ್ಗೆ ಅಂಚಲ್ ಭತೇಜಾ ಅವರು ‘ಪ್ರಜಾವಾಣಿ’ಯ ಶಶಿಕಲಾ ಎಂ.ಎಸ್. ಅವರೊಂದಿಗೆ ಹಂಚಿಕೊಂಡಿದ್ದು ಇಲ್ಲಿದೆ.
ನೀವು ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅಂಗವಿಕಲರ ಹಕ್ಕುಗಳ ಬಗ್ಗೆ ವಾದ ಮಂಡಿಸಿದಿರಿ. ವೈಯಕ್ತಿಕವಾಗಿ ಮತ್ತು ವೃತ್ತಿಜೀವನದ ದೃಷ್ಟಿಯಿಂದ, ಅದು ಹೇಗಿತ್ತು?
ನಾನು ಸಾಂಪ್ರದಾಯಿಕ, ಏಕಪೋಷಕ ಪಂಜಾಬಿ ಕುಟುಂಬದವಳು. ನನ್ನ ಕುಟುಂಬದಲ್ಲಿ ಅಂಗವೈಕಲ್ಯ ಇದ್ದುದು ನನಗೆ ಮಾತ್ರ. ಉನ್ನತ ವಿದ್ಯಾಭ್ಯಾಸಕ್ಕಾಗಿ ನಮ್ಮ ನಗರದಿಂದ ಹೊರಗೆ ಹೋದ ಕುಟುಂಬದ ಮೊದಲಿಗಳೂ ನಾನೇ. ಅದು ವೈಯಕ್ತಿಕವಾಗಿ ನನ್ನೊಬ್ಬಳ ಪ್ರಯಾಣ ಅಲ್ಲ; ಅದು ಹಲವು ಜನರ ನೆರವು, ಪ್ರಯಾಣ, ಪ್ರಯತ್ನಗಳು ಏಕೀಭವಿಸಿದ್ದರ ಫಲ. ಸುಪ್ರೀಂ ಕೋರ್ಟ್‌ನಲ್ಲಿ ಅಷ್ಟೇ ಅಲ್ಲ, ಯಾವುದೇ ನ್ಯಾಯಾಲಯದಲ್ಲೂ ಅದು ನನ್ನ ಮೊದಲ ವಾದ ಮಂಡನೆ.
ಬೆಂಗಳೂರಿನ ನ್ಯಾಷನಲ್ ಲಾ ಕಾಲೇಜಿನಲ್ಲಿ ನೀವು ಏಕಾಂಗಿಯಾಗಿ ಹೇಗೆ ನಿಭಾಯಿಸಿದಿರಿ?
ಅದು ಸುಲಭದ ಕಾರ್ಯವೇನೂ ಆಗಿರಲಿಲ್ಲ. ಅದೊಂದು ಪ್ರತಿಷ್ಠಿತ ಕಾಲೇಜ್ ಆಗಿದ್ದರೂ, ಅಲ್ಲಿ ಅಂಧ ವಿದ್ಯಾರ್ಥಿಯ ವಿದ್ಯಾಭ್ಯಾಸದ ದೃಷ್ಟಿಯಿಂದ ಏನೇನು ವ್ಯವಸ್ಥೆ ಇರಬೇಕು ಎನ್ನುವುದರ ಪ್ರಮಾಣಿತ ಕಾರ್ಯವಿಧಾನವೇ (ಎಸ್‌ಒಪಿ) ಇರಲಿಲ್ಲ; ಇಂದಿಗೂ ಇಲ್ಲ. ನನ್ನ ನೆರವಿಒಗೆ ಬಂದದ್ದು, ಜನರ ಒಳ್ಳೆಯತನ– ವ್ಯವಸ್ಥೆ ಅಲ್ಲ.
ಅಂಗವಿಕಲರ ವಿಚಾರದಲ್ಲಿ ಭಾರತವು ಪಶ್ಚಿಮಕ್ಕಿಂತ ಹೇಗೆ ಭಿನ್ನವಾಗಿದೆ?
ಈ ವಿಚಾರದಲ್ಲಿ ಪಶ್ಚಿಮದ ಬಗ್ಗೆ ಅನೇಕ ಅವಾಸ್ತವಿಕವಾದ ನಂಬಿಕೆಗಳಿವೆ. ಅಮೆರಿಕದಲ್ಲಿ ಎಡಿಎ ಕಾನೂನು ಇದ್ದಂತೆ, ಭಾರತದಲ್ಲಿ ಆರ್‌ಪಿಡಬ್ಲ್ಯುಡಿ ಕಾಯ್ದೆ ಇದೆ. ಆದರೆ, ಕಾಯ್ದೆ ಜಾರಿಯು ಯಾವುದೇ ಸರ್ಕಾರಕ್ಕೆ ಆದ್ಯತೆಯಾಗಿಲ್ಲ. ಏಕೆಂದರೆ, ನಾವು ಮತಬ್ಯಾಂಕ್ ಅಲ್ಲ.
ಅಂಗವಿಕಲರು, ಅದರಲ್ಲೂ ಮಹಿಳಾ ಅಂಗವಿಕಲರು, ಎಂಥ ಸವಾಲುಗಳನ್ನು ಎದುರಿಸುತ್ತಾರೆ?
ಒಬ್ಬ ಅಂಧ ಮಹಿಳೆಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳ ಅನುಭವಿಸುವುದು ನನಗೆ ಸಾಮಾನ್ಯವಾಗಿಬಿಟ್ಟಿದೆ. ಅದಕ್ಕೆ ಪರಿಹಾರ ಹುಡುಕುವುದು ಕಷ್ಟ. ಕೆಲವೊಮ್ಮೆ ಪರಿಸ್ಥಿತಿ ನಮಗೆ ತಿರುಗುಬಾಣವಾದರೂ ಆಗಬಹುದು. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ (ಪಾಶ್) ಕಾಗದದ ಮೇಲೆ ಚೆನ್ನಾಗಿ ಕಾಣುತ್ತದೆ.
ಅಂಗವಿಕಲರ ಹಕ್ಕುಗಳ ಕಾಯ್ದೆ (ಆರ್‌ಪಿಡಬ್ಲ್ಯುಡಿ) ಅತ್ಯಂತ ಪ್ರಗತಿಪರ ಶಾಸನ ಎನ್ನಲಾಗುತ್ತದೆಯಲ್ಲ?
ನ್ಯಾಯಾಲಯದ ತೀರ್ಪುಗಳು ನ್ಯಾಯಮೂರ್ತಿಗಳ ಪ್ರಗತಿಪರವಾದ ಹೇಳಿಕೆಗಳು ಮತ್ತು ಮಾರ್ಗಸೂಚಿಗಳನ್ನು ಒಳಗೊಂಡಿರುತ್ತವೆ. ಆದರೆ, ಅನುಷ್ಠಾನದಲ್ಲಿ ಅವು ಸೋಲುತ್ತಿವೆ. ಅನುಷ್ಠಾನದ ಪರಂಪರೆಯ ಕೊರತೆಯಿಂದ ನ್ಯಾಯಶಾಸ್ತ್ರವು ವಿಫಲಗೊಳ್ಳುವಂತಾಗಿದೆ. ಜತೆಗೆ, ಕಾಯ್ದೆ ಜಾರಿ ಬಗ್ಗೆ ವಿವಿಧ ಇಲಾಖೆ ಮತ್ತು ರಾಜ್ಯಗಳಲ್ಲಿ ಏಕರೂಪತೆ ಇಲ್ಲ.
ಕಾನೂನಿಗೆ ಅಂಗವಿಕಲ–ಸ್ತ್ರೀ ದೃಷ್ಟಿಕೋನದ ಸ್ಪರ್ಶ ನೀಡುವುದು ಹೇಗೆ?
ಕ್ಯಾಥರೀನ್ ಟಿ. ಬಾರ್ಟ್‌ಲೆಟ್ ಅವರು ತಮ್ಮ ಸ್ತ್ರೀವಾದಿ ಕಾನೂನು ಮಾರ್ಗಗಳ ಬಗೆಗಿನ ಕ್ರಾಂತಿಕಾರಕ ಬರಹದಲ್ಲಿ ಮೂರು ಅಂಶಗಳ ಬಗ್ಗೆ ಪ್ರಸ್ತಾಪಿಸುತ್ತಾರೆ: ಮಹಿಳಾ ಪ್ರಶ್ನೆಯನ್ನು ಕೇಳುವುದು, ಕಾನೂನು ಪ್ರಕರಣಗಳ ವಿಶ್ಲೇಷಣೆಯಲ್ಲಿ ಸ್ತ್ರೀವಾದಿ ದೃಷ್ಟಿಕೋನ ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಮತ್ತು ತಿಳಿವಳಿಕೆ ಹೆಚ್ಚಿಸುವುದು. ಅಂಗವಿಕಲ ಮಹಿಳೆಯರ ವಿಚಾರಕ್ಕೂ ಇದು ಅನ್ವಯಿಸುತ್ತದೆ.
ನ್ಯಾಯಾಂಗದಲ್ಲಿ ಅಥವಾ ಸಾರ್ವಜನಿಕ ಜೀವನದಲ್ಲಿ ಅಂಗವಿಕಲ ಮಹಿಳೆ ನೆಲೆ ಕಂಡುಕೊಳ್ಳಬೇಕು ಎಂದರೆ, ಅದಕ್ಕೆ ಏನು ಮಾಡಬೇಕು?
ಪ್ರತಿಯೊಬ್ಬ ಅಂಗವಿಕಲ ಮಗುವಿನೆಡೆಗಿನ ನಮ್ಮ ವರ್ತನೆ ಬದಲಾಗಬೇಕು. ಅದು ಪೋಷಕರಿಂದಲೇ ಆರಂಭವಾಗವೇಕು. ಅದು ಸಹಜವಾಗಿಯೇ ಬಂದಿರುವಂಥದ್ದು, ಗುಣಪಡಿಸುವಂಥದ್ದು ಅಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಾ, ಹಲವು ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ಅಂಗವಿಕಲ ಬಾಲಕಿಯರಿಗೆ ನೀವು ಹೇಳುವುದೇನು?
ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಾ, ಹಲವು ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ಅಂಗವಿಕಲ ಬಾಲಕಿಯರಿಗೆ ನೀವು ಹೇಳುವುದೇನು?
ಶಿಕ್ಷಣ ಬಹಳ ಮುಖ್ಯವಾದುದು. ಅದರಿಂದ ನಿಮಗೆ ಬೇಕಾದ ಭಾಷೆ ಮತ್ತು ಪ್ರಜ್ಞೆ ದಕ್ಕುವುದರಿಂದ, ಹೋರಾಟ ನಡೆಸಿ. ನೀವು ಅಂಗವಿಕಲ ಮಹಿಳೆಯಾಗಿರುವುದರಿಂದ ನಿಮ್ಮ ಬಾಯಿ ಮುಚ್ಚಿಸಲು ದುಪ್ಪಟ್ಟು ಒತ್ತಡ ಹೇರಲಾಗುತ್ತದೆ. ಮೌನವಾಗಿ ಇರಬೇಡಿ. ನಿಮ್ಮ ಹಕ್ಕುಗಳಿಗಾಗಿ ಗಟ್ಟಿಯಾದ ಧ್ವನಿಯೆತ್ತಿ ಹೋರಾಡಿ. ಇದೊಂದು ಯುದ್ಧ. ಆದರೆ, ಇಲ್ಲಿ ನೀವೇ ಹೋರಾಡಬೇಕು. ಮೊದಲು ಮುತ್ಸದ್ದಿತನದಿಂದ ವರ್ತಿಸಿ. ಆದರೆ, ಅಗತ್ಯ ಬಿದ್ದಾಗ ನಿರ್ಧಾರ ತಳೆಯಲು ಸಿದ್ಧರಾಗಿರಿ.
ನೀವೇಕೆ ವಕೀಲ ವೃತ್ತಿ ಆಯ್ಕೆ ಮಾಡಿಕೊಂಡಿರಿ?
ಶಾಲೆಗಳಲ್ಲಿ ಮೊದಲು ನನಗೆ ಪ್ರವೇಶವನ್ನೇ ನೀಡಲಿಲ್ಲ; ನೀಡಿದ ನಂತರ ನನಗೆ ಅಗತ್ಯವಾದ ಸೌಲಭ್ಯಗಳನ್ನು ಕಲಿಯುವ ವಾತಾವರಣವನ್ನು ಕಲ್ಪಿಸಲಿಲ್ಲ. ಬೋರ್ಡ್ ಪರೀಕ್ಷೆ ಇನ್ನು ಒಂದೆರಡು ತಿಂಗಳಿದೆ ಎನ್ನುವಾಗ ನಾನು ನನ್ನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡು ಲಿಪಿಕಾರನನ್ನು ಅವಲಂಬಿಸಬೇಕಾಯಿತು. ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದರೂ ಮುಖ್ಯವಾಹಿನಿಯ ಶಾಲೆಗಳು ನನಗೆ ಪ್ರವೇಶ ನಿರಾಕರಿಸಿದವು; ನಾನು ಕಂಗೆಟ್ಟುಹೋದೆ. ಅಂಗವಿಕಲ ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಹೋರಾಡಲು ನಾನು ಮುಂದಾದೆ. ಆಸಕ್ತಿಕರ ವಿಚಾರ ಎಂದರೆ ಅಂಗವಿಕರ ಹಕ್ಕುಗಳ ಕಾಯ್ದೆ 2016 ಜಾರಿಯಾಗುವ ಎರಡು ತಿಂಗಳ ಹಿಂದಷ್ಟೇ ನಾನು ಸಂಪೂರ್ಣವಾಗಿ ನನ್ನ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದೆ. ಕಾನೂನು ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಅದು ನನ್ನ ಮೊದಲ ಕಾರಣವಾಯಿತು. ಎರಡನೆಯ ಕಾರಣ ಸುಮಾರು 300 ಅಂಧರು ಹಳ್ಳಿಗಳ ತಮ್ಮ ಮನೆಗಳಲ್ಲಿ ಮೂಲೆ ಸೇರಿದ್ದಾರೆ ಎಂಬುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.