ಕೊಪ್ಪಳ: ಕೋಟ್ಯಂತರ ಮೊತ್ತದ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದೇನೆ– ಕರಡಿ ಸಂಗಣ್ಣ

ಸೋಮವಾರ, ಮೇ 27, 2019
24 °C

ಕೊಪ್ಪಳ: ಕೋಟ್ಯಂತರ ಮೊತ್ತದ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದೇನೆ– ಕರಡಿ ಸಂಗಣ್ಣ

Published:
Updated:

ಹಿರಿಯ, ಅನುಭವಿ, ಸಜ್ಜನ ರಾಜಕಾರಣಿ ಎಂದು ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಂಗಣ್ಣ ಕರಡಿ ಮೂಲತಃ ಜನತಾ ರಾಜಕಾರಣದಿಂದ ಬಂದವರು. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಕಳೆದ ನಾಲ್ಕು ದಶಕದಿಂದ ರಾಜಕೀಯದಲ್ಲಿ ಇದ್ದಾರೆ. ನಾಲ್ಕು ಬಾರಿ ಶಾಸಕರಾಗಿ, ಸಂಸದರಾಗಿ ಸೇವೆ ಸಲ್ಲಿಸಿರುವ ಕರಡಿ ತಳಮಟ್ಟದಿಂದ ರಾಜಕೀಯ ಮಾಡಿಕೊಂಡು ಬಂದ ನಾಯಕ. ತಮ್ಮ ಹೊಂದಾಣಿಕೆ ಗುಣದಿಂದ ರಾಜಕೀಯದಲ್ಲಿ ಎದುರಾಳಿಗಳು ಕೂಡಾ ಮೆಚ್ಚುವ ಕೆಲವು ಗುಣದಿಂದ ತಮ್ಮ ಪ್ರಸ್ತುತತೆಯನ್ನು ಈಗಲೂ ಉಳಿಸಿಕೊಂಡು ಬಂದಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ ಮನದ ಮಾತು ಹಂಚಿಕೊಂಡಿದ್ದಾರೆ.

ಸಂಸದರಾಗಿ ನಿಮ್ಮ ಕೆಲಸ ತೃಪ್ತಿ ತಂದಿದೆಯೇ?

ಕಳೆದ ಐದು ವರ್ಷದಿಂದ ಜನಪ್ರಿಯ ಪ್ರಧಾನಿ, ಲೋಕಪ್ರಿಯ ನೇತಾರರಾದ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ರಸ್ತೆ, ರೈಲ್ವೆ ಯೋಜನೆಗಳು, ರಿಂಗ್‌ ರೋಡ್‌, ಮೇಲ್ಸೇತುವೆಗಳು, ಕೇಂದ್ರೀಯ ವಿದ್ಯಾಲಯ, ವೈದ್ಯಕೀಯ ಕಾಲೇಜಿಗೆ ಅನುಮತಿ ಸೇರಿದಂತೆ ಕೋಟ್ಯಂತರ ಮೊತ್ತದ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದೇನೆ. ಹೊಸ ಯೋಜನೆ ಘೋಷಣೆ ಮಾಡದೇ ಇದ್ದರೂ, ನೆನೆಗುದಿಗೆ ಬಿದ್ದಿದ್ದ, ದೀರ್ಘ ಕಾಲದಿಂದ ಪ್ರಗತಿಯಲ್ಲಿ ಇರದ ಹಿಂದಿನ ಸರ್ಕಾರದ ಯೋಜನೆಗಳನ್ನು ಪೂರ್ಣಗೊಳಿಸಿದ ತೃಪ್ತಿ ಇದೆ. ಮಾಡಬೇಕಾದ ಕೆಲಸ ಇನ್ನೂ ಇದೆ. ಅದಕ್ಕೆ ಅವಧಿ ಸಾಕಾಗಲಿಲ್ಲ. ಮತ್ತೊಂದು ಅವಧಿಗೆ ಜನ ಆಶೀರ್ವದಿಸಿದರೆ ಶಾಶ್ವತ ಯೋಜನೆ ತರುವ ಸಂಕಲ್ಪ ಮಾಡಿದ್ದೇನೆ.

ನಿಮ್ಮನ್ನೇ ಏಕೆ ಗೆಲ್ಲಿಸಬೇಕು?

ಕೊಪ್ಪಳ ನಗರದಲ್ಲಿ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕೆಟ್ಟು ಹೋಗಿತ್ತು. ನಿತಿನ್‌ ಗಡ್ಕರಿ ಅವರ ಮೇಲೆ ಒತ್ತಡ ಹಾಕಿ ಹೆದ್ದಾರಿ ಯೋಜನೆಗೆ ₹1 ಸಾವಿರ ಕೋಟಿ ಅನುದಾನ ತಂದಿದ್ದೇನೆ. ಚಂದದ ರಸ್ತೆಯಿಂದ ಜನರ ಪ್ರಯಾಣಕ್ಕೆ ಅನುಕೂಲವಾಗಿದೆ. ಗಂಗಾವತಿವರೆಗೆ ರೈಲು ಓಡಿಸಿದ್ದೇವೆ. ವಾಡಿ ರೈಲು ಕಾಮಗಾರಿ ಅತ್ಯಂತ ವೇಗದಿಂದ ಸಾಗಿದೆ. ಜನರ ಆಸೆ ಮತ್ತೊಮ್ಮೆ ಮೋದಿ. ಮೋದಿ ಅಲೆಯೇ ನಮ್ಮನ್ನು ದಡ ಸೇರಿಸಲಿದೆ. ಇಂತಹ ನಿಸ್ವಾರ್ಥ ನಾಯಕನ ಕೈಗೆ ದೇಶವನ್ನು ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಗೆಲ್ಲಿಸಲೇಬೇಕು ಎಂದು ಜನ ತೀರ್ಮಾನಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ನಿಮಗೆ ಸಮರ್ಥ ಎದುರಾಳಿಯೇ?

ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ ಸಹಜವಾಗಿ ಅವರು ಅಭ್ಯರ್ಥಿಯನ್ನು ಹಾಕಿದ್ದಾರೆ. ನಾನು ಅಭಿವೃದ್ಧಿ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಾರೆ. ನಾ ಮಾಡಿದ ಕೆಲಸ ಅವರ ಕಣ್ಣ ಮುಂದೆಯೇ ಇದೆ. ಪಾಸ್‌ಪೋರ್ಟ್‌ ಸೇವಾ ಕೇಂದ್ರ, ಅಂಚೆ ಕಚೇರಿ ಸ್ಥಾಪನೆಯಿಂದ ಹಲವಾರು ಜನರಿಗೆ ಅನುಕೂಲವಾಗಿದೆ. ಜನರು ಕಾಂಗ್ರೆಸ್‌ ಹೇಳುವ ಸುಳ್ಳನ್ನು ನಂಬುವುದಿಲ್ಲ. ಇದು ಪ್ರಜಾಪ್ರಭುತ್ವ. ಅಭ್ಯರ್ಥಿ ನನ್ನ ಎದುರು ಸಮರ್ಥರೇ, ಅಸಮರ್ಥರೇ ಎಂದು ಮತದಾರರು ತೀರ್ಮಾನಿಸಲಿದ್ದಾರೆ.

ಇನ್ನೂ ಮಾಡಬೇಕಾದ ಕೆಲಸ...

ಅಭಿವೃದ್ಧಿ ಕಾರ್ಯ ನಿರಂತರ. ಮಾಡಬೇಕಾದ ಕೆಲಸ ಸಾಕಷ್ಟಿದೆ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇವೆ. ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮತ್ತು ಸಚಿವರಾಗಿದ್ದ ದಿವಂಗತ ಅನಂತಕುಮಾರ್ ಅವರು ಅನೇಕ ರೀತಿ ಸಹಾಯ ಮಾಡಿದ್ದಾರೆ. ಅಮೃತ್ ಸಿಟಿ, ಆದರ್ಶ ಗ್ರಾಮ, ಕುಡಿಯುವ ನೀರು, ಅತ್ಯಾಧುನಿಕ ಶಿಕ್ಷಣ ಸಂಸ್ಥೆಗಳನ್ನು ಜಿಲ್ಲೆಗೆ ತರಬೇಕಾದ ಆಸೆ ಇದೆ. 

ನಿಮ್ಮದು ಹೊಂದಾಣಿಕೆ ರಾಜಕಾರಣ ಎಂದು ಕಾರ್ಯಕರ್ತರಲ್ಲಿ ಬೇಸರವಿದೆಯಲ್ಲವೇ?

ನೋಡಿ ರಾಜಕಾರಣದಲ್ಲಿ ಕೀಳು ಭಾಷೆ ಪ್ರಯೋಗಿಸಿ ಜನರನ್ನು ಭಾವನಾತ್ಮಕವಾಗಿ ಕೆರಳಿಸುವುದು ಸಲ್ಲದು. ಅಭಿವೃದ್ಧಿ ಕೆಲಸಕ್ಕೆ ಮಾತನಾಡಿಕೊಂಡು ಸಮಸ್ಯೆ ಬಗೆ ಹರಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಯುವ ಮತದಾರರ ಮೇಲೆ ಭರವಸೆ ಇದೆ. ಜನ ಇಂತಹವುಗಳನ್ನು ನಂಬುವುದಿಲ್ಲ. ಇನ್ನೊಬ್ಬರನ್ನು ಟೀಕಿಸುವ ಭರದಲ್ಲಿ ನಮ್ಮ ಬಗ್ಗೆ ಕೀಳರಿಮೆ ಜನಕ್ಕೆ ಬರುತ್ತದೆ. ತತ್ವ, ಸಿದ್ಧಾಂತದೊಂದಿಗೆ ರಾಜೀ ಇಲ್ಲ. ಅವಶ್ಯಕತೆ ಬಂದರೆ ನನಗೂ ಧ್ವನಿ ಜೋರು ಮಾಡುವುದು ಗೊತ್ತು. ಇದರಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ.

ಕಾಂಗ್ರೆಸ್ ಅಸಹಕಾರ ಎಂದು ಪದೇ ಪದೇ ಹೇಳುತ್ತಿರಿ ಕಾರಣ ಏನು?

ಕೇಂದ್ರ ಸರ್ಕಾರದ ಯೋಜನೆ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದೆ. 'ಉಡಾನ್‌' ಯೋಜನೆ ಸ್ಥಳೀಯ ಶಾಸಕರ ಅಸಹಕಾರದಿಂದ ನನೆಗುದಿಗೆ ಬಿದ್ದಿದೆ. ಅವಶ್ಯಕ ಯೋಜನೆಗಳಿಗೆ ಭೂಮಿ ನೀಡಲು ಅನಗತ್ಯ ಕಾಲಹರಣ ಮಾಡುತ್ತಿದ್ದಾರೆ. ಅಭಿವೃದ್ಧಿಯಲ್ಲೂ ರಾಜಕಾರಣ ಮಾಡುವುದು ಶೋಭೆ ತರುವುದಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !