ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮದು ‘ಫ್ರೀ ಬೀಸ್‌‘ ಅಲ್ಲ; ಬದುಕು ಕಟ್ಟಿ ಕೊಡುವ ಗ್ಯಾರಂಟಿ: ಡಿ.ಕೆ.ಶಿವಕುಮಾರ್‌

Published 21 ನವೆಂಬರ್ 2023, 0:30 IST
Last Updated 21 ನವೆಂಬರ್ 2023, 0:30 IST
ಅಕ್ಷರ ಗಾತ್ರ

‘ನಮ್ಮ ‘ಗ್ಯಾರಂಟಿ’ಗಳು ‘ಫ್ರೀ ಬೀಸ್‌’ (ಉಚಿತ ಕೊಡುಗೆ) ಅಲ್ಲ. ಜನರ ಬದುಕು ಕಟ್ಟಿ ಕೊಡುವ ಯೋಜನೆಗಳು. ಜನರ ಬದುಕು ದಿವಾಳಿಯಾಗುತ್ತಿದ್ದ ಹೊತ್ತಿನಲ್ಲಿ ಬದಲಾವಣೆ ತರುವ ಕೆಲಸವನ್ನು ಮಾಡಿದ್ದೇವೆ. ಬೆಲೆ ಏರಿಕೆಯು ಜನರ ಪಿಕ್‌ ಪಾಕೆಟ್‌ ಮಾಡುತ್ತಿರುವ ದಿನಗಳಲ್ಲಿ ಪಾಕೆಟ್‌ ತುಂಬಿಸುವ ಕೆಲಸ ಮಾಡಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ರಾಜ್ಯ ಸರ್ಕಾರಕ್ಕೆ ಆರು ತಿಂಗಳು ತುಂಬಿ ಹಿನ್ನೆಲೆಯಲ್ಲಿ ‍‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಸರ್ಕಾರದ ಸಾಧನೆ, ಭವಿಷ್ಯದ ಸವಾಲುಗಳ ಬಗ್ಗೆ ಮಾತನಾಡಿದ ಅವರು, ‘ದೇಶದ ಅನೇಕ ರಾಜ್ಯಗಳು ಈಗ ನಮ್ಮ ಈ ಯೋಜನೆಗಳನ್ನು ನಕಲು ಮಾಡುತ್ತಿವೆ’ ಎಂದರು. 

ಪ್ರ

‘ಗ್ಯಾರಂಟಿ’ಗಳಿಂದ ಅಭಿವೃದ್ಧಿಗೆ ಅನುದಾನವೇ ಇಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರಲ್ಲ?

ಕೊಟ್ಟ ಮಾತು ಉಳಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಹೀಗಾಗಿ ‘ಗ್ಯಾರಂಟಿ’ಗಳಿಗೆ ಆದ್ಯತೆ ನೀಡಿದ್ದೇವೆ. ಹಾಗೆಂದು, ಯಾವ ಅಭಿವೃದ್ಧಿ ಯೋಜನೆಗಳೂ ಸ್ಥಗಿತವಾಗಿಲ್ಲ. ರಸ್ತೆ, ಆರ್‌ಡಿಪಿಆರ್‌, ಕುಡಿಯುವ ನೀರು ವಿಷಯದಲ್ಲಿ ಕಾಮಗಾರಿಗಳು ಮುಂದುವರಿದಿದೆ. 

ಪ್ರ

‘ಶಕ್ತಿ’, ‘ಗೃಹಲಕ್ಷ್ಮಿ’ ಮಹಿಳಾ ಸಮುದಾಯಕ್ಕೆ ಶಕ್ತಿ ತುಂಬಿದೆಯೇ?

ದಸರಾ ಮತ್ತು ಹಾಸನಾಂಬೆಯನ್ನು ನೋಡಲು ಬಂದ ಮಹಿಳಾ ಜನಸಾಗರ ‘ಶಕ್ತಿ’ಯ ಫಲ. ಕಳೆದ ವರ್ಷ ಹಾಸನಾಂಬೆಯನ್ನು ನೋಡಲು 6 ಲಕ್ಷ ಜನ ಬಂದಿದ್ದರು. ₹ 3.50 ಕೋಟಿ ಸಂಗ್ರಹವಾಗಿತ್ತು. ಈ ವರ್ಷ 14 ಲಕ್ಷ ಜನ ಬಂದಿದ್ದು, ₹ 8.45 ಕೋಟಿ ಸಂಗ್ರಹವಾಗಿದೆ. ಗೃಹಲಕ್ಷ್ಮಿ ಯೋಜನೆ ಪ್ರತಿ ತಿಂಗಳು ಒಂದು ಕೋಟಿ ಮಹಿಳೆಯರಿಗೆ ತಲುಪುತ್ತಿದೆ. ಸುಮಾರು 6 ಲಕ್ಷ ಕುಟುಂಬಗಳಿಗೆ ನಾನಾ ಕಾರಣಗಳಿಗೆ  ಗೃಹಲಕ್ಷ್ಮಿ ತಲುಪಿಲ್ಲ. ‌ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಪ್ರ

‘ಗ್ಯಾರಂಟಿ’ ನಡುವೆ ಕಣ್ಣಿಗೆ ಕಾಣುವಂಥ ಅಭಿವೃದ್ಧಿ ಕೆಲಸಗಳು ಯಾವುದೂ ಇಲ್ವಲ್ಲ?

ಯಾಕಿಲ್ಲ? ಆರು ತಿಂಗಳ ಅವಧಿಯಲ್ಲಿ ಜನ ಸಂಭ್ರಮಿಸುವಂಥ ಆಡಳಿತವನ್ನು ಸರ್ಕಾರ ನೀಡಿದೆ. ನನ್ನ ಇಲಾಖೆಯನ್ನೇ (ಜಲಸಂಪನ್ಮೂಲ) ತೆಗೆದುಕೊಳ್ಳಿ. ಕಾವೇರಿ ವಿಚಾರದಲ್ಲಿ ರೈತರನ್ನು ಕಾಪಾಡಿದ್ದೇವೆ. ಮೇಕೆದಾಟು ಯೋಜನೆಯ ಅನುಷ್ಠಾನ ವಿಚಾರದಲ್ಲಿ ನಮಗೆ ಅನುಕೂಲಕರವಾದ ವಾತಾವರಣವಿದೆ. ಎತ್ತಿನಹೊಳೆ ಯೋಜನೆಗೆ ₹ 9,000 ಅನುದಾನಕ್ಕೆ ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದೇವೆ. ಆದರೆ, ಕೊಡುವುದಿಲ್ಲವೆಂದು ಕೇಂದ್ರದಿಂದ ಪತ್ರ ಬಂದಿದೆ. 

ಪ್ರ

ಬಿಜೆಪಿ ಸರ್ಕಾರದ ವಿರುದ್ಧದ ಭ್ರಷ್ಟಾಚಾರ, ಶೇ 40 ಲಂಚ ಆರೋಪ ಕೂಡಾ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಕಾರಣ. ನಿಮ್ಮ ಸರ್ಕಾರ ಬಂದ ಮೇಲೆ ಮುಂದುವರಿದಿದೆ ಎಂಬ ಆರೋಪ ಇದೆಯಲ್ಲ?

ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತಿದೆ ಬಿಜೆಪಿ ಮಾಡುತ್ತಿರುವ ಆರೋಪ. ಕಳೆದ ಚುನಾವಣೆಯಲ್ಲಿ ಜನ ಅವರಿಗೆ ಎದ್ದೇಳಲು ಸಾಧ್ಯವಾಗದಷ್ಟು ಏಟು ಕೊಟ್ಟಿದ್ದಾರೆ. ಚುನಾವಣೆಯಲ್ಲಿ ಏನೇನೋ ಲೆಕ್ಕಾಚಾರ  ಹಾಕಿದ್ದರು. ಅವರು ಇನ್ನೂ ಅದೇ ಗುಂಗಿನಲ್ಲಿದ್ದಾರೆ. ಸರ್ಕಾರ ಕಿತ್ತು ಹಾಕುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅದೇನು ಕಿತ್ತು ಹಾಕಲು ಪೈರಾ?

ಪ್ರ

ಬಿಜೆಪಿ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರ ಜಾತಿ ಸಮೀಕರಣ  ಲೋಕಸಭೆ ಚುನಾವಣೆಯಲ್ಲಿ ನಿಮಗೆ ಹಿನ್ನಡೆಯಾಗಲಿದೆಯೇ?

ಹೀಗೆ ಆಯ್ಕೆ ಆದ ತಕ್ಷಣ ಜನನಾಯಕರಾಗಲು ಸಾಧ್ಯವಿಲ್ಲ. ನಾಯಕತ್ವವನ್ನು ಬೆಳೆಸಿಕೊಳ್ಳಬೇಕು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಬಿಜೆಪಿಯವರಿಗೆ ಬೇಕಿಲ್ಲ. ಆ ಸಮುದಾಯಗಳ ಮೇಲೆ ಅವರಿಗೆ ನಂಬಿಕೆ ಇಲ್ಲ. ಹೀಗಾಗಿಯೇ ಈವರೆಗೂ ಆ ಸಮುದಾಯಗಳ ಒಬ್ಬರನ್ನೂ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಬಿಜೆಪಿ ಮಾಡಿಲ್ಲ. ಆದರೆ, ನಮಗೆ ಜಾತಿಗಿಂತ ನೀತಿ ಮುಖ್ಯ. ನನ್ನ ಮತ್ತು ಸಿದ್ದರಾಮಯ್ಯ ಅವರ ಸಾಮೂಹಿಕ ನಾಯಕತ್ವವನ್ನು ಒಪ್ಪಿಕೊಂಡು ಜನ ನಮಗೆ ಅಧಿಕಾರ ನೀಡಿದ್ದಾರೆ.

ಪ್ರ

ಲೋಕಸಭೆ ಚುನಾವಣೆಯಲ್ಲಿ 20 ಸೀಟು ಗೆಲ್ಲುವುದಾಗಿ ಹೇಳುತ್ತಿದ್ದೀರಿ? ಹೇಗೆ ಸಾಧ್ಯ?

ಬಿಜೆಪಿ, ಜೆಡಿಎಸ್‌ ದುರ್ಬಲವಾಗಿದೆ. ಜನ ನಮ್ಮತ್ತ (ಕಾಂಗ್ರೆಸ್‌) ನೋಡುತ್ತಿದ್ದಾರೆ. ಅದೇ ವಿಶ್ವಾಸ.

ಪ್ರ

‘ಆಪರೇಷನ್‌ ಹಸ್ತ’ ಬೇಕಿತ್ತಾ? 

ನಮ್ಮ ಸಿದ್ಧಾಂತ ಒಪ್ಪಿಕೊಂಡು ಬರುತ್ತಿದ್ದಾರೆ. ಅಂಥವರನ್ನು ಸೇರಿಸಿಕೊಳ್ಳುತ್ತಿದ್ದೇವೆ. ಕೆಲವು ಕಡೆ ನಮಗೂ ಪಕ್ಷದ ಬಲ ಹೆಚ್ಚಿಸಿಕೊಳ್ಳಬೇಕಿದೆ. ತುಮಕೂರು ಗ್ರಾಮಾಂತರ, ದಾಸರಹಳ್ಳಿ, ಕೆ.ಆರ್‌. ಪುರ, ಶಿರಹಟ್ಟಿ, ಕುಂದಗೋಳ ಹೀಗೆ ಕೆಲವು ಕ್ಷೇತ್ರಗಳಲ್ಲಿ ಸಂಘಟನೆ ಬಲಪಡಿಸಲು ಅನ್ಯ ಪಕ್ಷಗಳ ಮಾಜಿ ಶಾಸಕರನ್ನು ಸೇರಿಸಿಕೊಂಡಿದ್ದೇವೆ. ಮತ ಪ್ರಮಾಣ ಹೆಚ್ಚಿಸಿಕೊಳ್ಳಲು ಅನಿವಾರ್ಯ. 

‘ನಾನು ಸ್ಪರ್ಧೆಯಲ್ಲಿ ಇಲ್ಲ’

‘ನಾನು ಅಧಿಕಾರವನ್ನು ಕೇಳಿಕೊಂಡು ಎಂದೂ ಹೋಗಿಲ್ಲ. ಅವರು (ಹೈಕಮಾಂಡ್‌) ನನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ.ನಾನು ಸ್ಪರ್ಧೆಯಲ್ಲಿ ಇಲ್ಲ’ ಎಂದು ಶಿವಕುಮಾರ್ ಹೇಳಿದರು.  ‘ಎರಡೂವರೆ ವರ್ಷದ ಬಳಿಕ ಅಧಿಕಾರ ಹಂಚಿಕೆ ಸೂತ್ರ ಜಾರಿ ಆಗಲಿದೆಯೇ’ ಎಂಬ ಪ್ರಶ್ನೆಗೆ ‘ಈ ವಿಚಾರದಲ್ಲಿ ಯಾರು ಏನು ಬೇಕಾದರೂ ಹೇಳಿಕೊಳ್ಳಲಿ. ನಾನು ಪ್ರತಿಕ್ರಿಯಿಸುವುದಿಲ್ಲ. ಜನ ನಮಗೆ ಶಕ್ತಿ ಕೊಟ್ಟಿದ್ದಾರೆ. 136 ಶಾಸಕರಿಗೆ ಶಕ್ತಿ ತುಂಬುವುದು ನನ್ನ ಆದ್ಯತೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT