ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ಹಯ್ಯ ಕುಮಾರ್ ಸಂದರ್ಶನ: ಅಣ್ಣಾ ಹಜಾರೆ ಎಲ್ಲಿದ್ದಾರೆ?

Last Updated 6 ಸೆಪ್ಟೆಂಬರ್ 2019, 2:09 IST
ಅಕ್ಷರ ಗಾತ್ರ

ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯಾಗಿ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ‌ಗೌರಿ ನೆನಪಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ‘ಪ್ರಜಾವಾಣಿ’ ಜತೆ ಮಾತನಾಡಿದರು.

lಆರ್ಥಿಕ ಹಿಂಜರಿತದಿಂದ ದೇಶ ಕಂಗೆಟ್ಟಿದೆ. ನಿಮ್ಮ ದೃಷ್ಟಿಯಲ್ಲಿ ಇದಕ್ಕೆ ಕಾರಣವೇನು?

ಆರ್ಥಿಕ ಹಿಂಜರಿತ ಹೊಸದಲ್ಲ. ಉದಾರೀಕರಣ ನೀತಿ ಆರಂಭವಾದಾಗಿನಿಂದ ಹಲವು ಬಾರಿ ಹಿಂಜರಿತದ ಅನುಭವವನ್ನು ಕಂಡಿದ್ದೇವೆ. ಆರ್ಥಿಕ ತಜ್ಞರಾಗಿದ್ದ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಸರಿಪಡಿಸುವ ಪ್ರಯತ್ನವನ್ನು ಮಾಡಿದ್ದರು. ಕಾರ್ಪೊರೇಟ್ ವಲಯದವರ ಲೂಟಿಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧ ಅಣ್ಣಾ ಹಜಾರೆ ಅವರನ್ನು ಬಂಡವಾಳಶಾಹಿಗಳು ಮುನ್ನೆಲೆಗೆ ತಂದರು. ದೇಶದ ಸ್ಥಿತಿ ಈಗ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆರ್ಥಿಕವಾಗಿ ಅತ್ಯಂತ ಘೋರ ಸ್ಥಿತಿಗೆ ತಲುಪಿದ್ದೇವೆ. ಒಂದೆಡೆ ನವ ಉದಾರೀಕರಣ ನೀತಿಯನ್ನು ಒಪ್ಪಿಕೊಳ್ಳುವ ಕೇಂದ್ರ ಸರ್ಕಾರ, ಮತ್ತೊಂದೆಡೆ ಅದಕ್ಕೆ ವಿರುದ್ಧವಾದ ನೀತಿಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಆರ್ಥಿಕ ನೀತಿಯಲ್ಲಿನ ಲೋಪಗಳನ್ನು ಸರಿಪಡಿಸುವ ಬದಲು ರಾಜಕೀಯ ಕಾರಣಗಳಿಗಾಗಿ ಮತ್ತಷ್ಟು ತಪ್ಪುಗಳನ್ನು ಮಾಡಲಾಗುತ್ತಿದೆ. ಅಣ್ಣಾ ಹಜಾರೆಈಗ ಎಲ್ಲಿದ್ದಾರೆ? ಅವರ ಟೋಪಿ ಎಲ್ಲಿದೆ? ಅಣ್ಣಾ ನಡೆಸಿದ ಹೋರಾಟ ಭ್ರಷ್ಟಾಚಾರ ಕಿತ್ತೊಗೆಯಲು ಅಲ್ಲ, ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲು. ಅವರ ಆಶಯದಂತೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಯಿತು. ಭ್ರಷ್ಟಾಚಾರ ಕಡಿಮೆ ಆಗಲಿಲ್ಲ, ದೇಶದ ವಿಕಾಸ ಆಗಲಿಲ್ಲ, ಅಣ್ಣಾನೂ ಕಾಣಿಸುತ್ತಿಲ್ಲ.

l ಬಿಜೆಪಿಗೆ ಎದುರಾಳಿಯೇ ಇಲ್ಲವಲ್ಲ?

ಸುಳ್ಳಿನೊಂದಿಗೇ ಜನರನ್ನು ಹೆಚ್ಚು ದಿನಗಳ ಕಾಲ ಹಿಡಿದಿಡಲು ಆಗುವುದಿಲ್ಲ. ಜನ ಬದಲಾವಣೆ ಬಯಸುತ್ತಿದ್ದಾರೆ. ಸರಿಯಾದ ಎದುರಾಳಿಗಾಗಿ ಹುಡುಕಾಡುತ್ತಿದ್ದಾರೆ. ಕಾಲಚಕ್ರ ಹೀಗೇ ಇರುವುದಿಲ್ಲ. ಬಿಜೆಪಿ ಕೂಡ ಎರಡು ಸೀಟಿನಿಂದ ಆರಂಭವಾದ ಪಕ್ಷ. ಈಗ ದೇಶ ಆಳುತ್ತಿಲ್ಲವೇ? ನಾನು ನಿರಾಶಾವಾದಿ ಅಲ್ಲ.

ಜಾತ್ಯತೀತ ಶಕ್ತಿಗಳು ಒಗ್ಗೂಡುವ ವಿಶ್ವಾಸವಿದೆ. ಅಭಿಪ್ರಾಯದಲ್ಲಿ ಭಿನ್ನತೆ ಇರುತ್ತದೆ, ಅವುಗಳನ್ನು ಮುನ್ನೆಲೆಗೆ ತರದೆ ಒಂದು ಸಕಾರಣಕ್ಕಾಗಿ ಸಮಾನ ಮನಸ್ಥಿತಿಯ ಪಕ್ಷಗಳು ಒಗ್ಗೂಡಬೇಕಿದೆ.

l ನಿರುದ್ಯೋಗ ಹೆಚ್ಚಿದೆ ಎಂದಾದರೆ ಯುವಜನರು ಏಕೆ ಚಿಂತಿಸುತ್ತಿಲ್ಲ?

ಯುವಕರು ಈ ಬಗ್ಗೆ ಚಿಂತಿಸುತ್ತಿಲ್ಲ ಎಂಬುದು ತಪ್ಪು. ಕೇಂದ್ರ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು, ಯುವ ಜನರ ಗಮನವನ್ನು ಬೇರೆಡೆಗೆ ಸೆಳೆದು ಭ್ರಮೆಯಲ್ಲಿ ಮುಳುಗಿಸುತ್ತಿದೆ. ಹೀಗೆ ಮುಳುಗಿದವರ ಅಬ್ಬರದ ನಡುವೆ ವಾಸ್ತವವಾದಿಗಳ ಪ್ರಶ್ನೆಗಳು ಗೌಣವಾಗುತ್ತಿವೆ. ಹಾಗೊಂದು ವೇಳೆ ಮುನ್ನುಗ್ಗಿ ಪ್ರಶ್ನೆ ಕೇಳಿದವರ ಧ್ವನಿ ಅಡಗಿಸುವ ಪ್ರಯತ್ನಗಳೂ ವ್ಯವಸ್ಥಿತ
ವಾಗಿ ನಡೆಯುತ್ತಿವೆ. ಗೌರಿ ಲಂಕೇಶ್ ಹತ್ಯೆಗೂ ಇದೇ ಕಾರಣ ಅಲ್ಲವೇ? ಅವರೇನು ಬಿಜೆಪಿಗೆ ರಾಜಕೀಯ ಎದುರಾಳಿಯೇ?

l ಬಿಹಾರ ಚುನಾವಣೆ ಸೋಲಿನ ‌ನಂತರ ಹೋರಾಟಕ್ಕೆ ಹಿನ್ನೆಡೆ ಆಗಿದೆಯೇ ?

ರಾಜಕೀಯಕ್ಕೆ ಧುಮುಕಿದ ಮೇಲೆ ಸೋಲು–ಗೆಲುವು ಸಹಜ. ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನನಗೂ 2.60 ಲಕ್ಷ ಜನರು ಮತ ಹಾಕಿದ್ದಾರೆ. ಅವರು ಯಾರು, ನನಗೇ ಏಕೆ ಮತ ಹಾಕಿದರು ಎಂಬುದನ್ನು ಹುಡುಕಬೇಕಲ್ಲವೇ? ಎಲ್ಲರೂ ಹಣ ಮತ್ತು ಅಧಿಕಾರದ ಹಿಂದೆಯೇ ಹೋಗುತ್ತಾರೆ ಎಂಬುದನ್ನು ಒಪ್ಪಲಾಗದು.

lಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರೇ ನಿಜವಾದ ಆರೋಪಿಗಳೇ?

ಅಲ್ಲ, ನಿಜವಾದ ಮತ್ತು ಮೂಲ ಆರೋಪಿಗಳನ್ನು ಹಿಡಿಯಲು ಪೊಲೀಸರಿಂದ ಆಗುತ್ತದೆಯೇ? ಈ ಪ್ರಕರಣದಲ್ಲಿ ಸಿಕ್ಕಿರುವ ಆರೋಪಿಗಳು ಕೆಳ ಹಂತದಲ್ಲಿ ಕೆಲಸ ಮಾಡಿದವರು. ಇದಕ್ಕೆ ಪ್ರೇರಣೆ ನೀಡಿದವರೆಲ್ಲ ಲೋಕಸಭೆಯಲ್ಲಿ ಇದ್ದಾರೆ. ಅವರನ್ನು ಹೇಗೆ ಹಿಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT