ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕಾಂಗ್ರೆಸ್ ಅಭ್ಯರ್ಥಿ ನಾಯಕ ಸಂದರ್ಶನ ‘ಸಾಂಪ್ರದಾಯಿಕ ಮತದಾರರ ರಕ್ಷೆ’

Last Updated 30 ಏಪ್ರಿಲ್ 2019, 17:10 IST
ಅಕ್ಷರ ಗಾತ್ರ

ಸರಳ, ಸಜ್ಜನ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಬಿ.ವಿ. ನಾಯಕ ಅವರು ಕಾಂಗ್ರೆಸ್‌ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿದ್ದಾರೆ.

ತಂದೆ ದಿ. ವೆಂಕಟೇಶ ನಾಯಕ ಅವರು ನಾಲ್ಕು ಬಾರಿ ಸಂಸದರು ಹಾಗೂ ಒಂದು ಸಲ ಶಾಸಕರಾಗಿದ್ದರು. ಸಹೋದರ ರಾಜಶೇಖರ ನಾಯಕ ಕೂಡಾ ರಾಜಕೀಯದಲ್ಲಿದ್ದು, ಶಾಸಕ ಸ್ಥಾನಕ್ಕೆ ಎರಡು ಸಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಬಿ.ವಿ. ನಾಯಕ ಅವರು ಎಲ್‌ಎಲ್‌ಬಿವರೆಗೂ ಶಿಕ್ಷಣ ಪಡೆದು, ಕಾಂಗ್ರೆಸ್‌ ಪಕ್ಷದ ಸಿದ್ಧಾಂತವನ್ನು ಮೈಗೂಡಿಸಿಕೊಂಡಿದ್ದಾರೆ. ಸಾಮಾಜಿಕ ನ್ಯಾಯ ಹಾಗೂ ಮಾನವೀಯತೆ ವಿಷಯಗಳ ಕುರಿತು ಮೇಲಿಂದ ಮೇಲೆ ಪ್ರಸ್ತಾಪಿಸುತ್ತಾರೆ. ಜನಪರ ಕಾಳಜಿ ಇರುವವರು ಎಂದು ಗುರುತಿಸಿಕೊಂಡಿದ್ದಾರೆ.

ಸಂಸದರಾಗಿ ಕಳೆದ ಐದು ವರ್ಷಗಳಲ್ಲಿ ಮಾಡಿರುವ ಕೆಲಸಗಳು?

ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಪ್ರತಿ ತಾಲ್ಲೂಕಿಗೂ ಕೊಡಲಾಗಿದೆ. ಈ ಅನುದಾನದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಕುಡಿಯುವ ನೀರು, ಚರಂಡಿ, ಸಿಸಿ ರಸ್ತೆ, ಸಮುದಾಯ ಭವನ, ಶಾಲಾ ಕೋಣೆ ನಿರ್ಮಾಣ ಮಾಡಲಾಗಿದೆ. 120 ಕ್ಕೂ ಹೆಚ್ಚು ಅಂಗವಿಕಲರಿಗೆ ದ್ವಿಚಕ್ರ ವಾಹನಗಳನ್ನು ಹಂಚಿಕೆ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸುಮಾರು ₹300 ಕೋಟಿ ವಿಶೇಷ ಅನುದಾನ ಕ್ಷೇತ್ರಕ್ಕೆ ತರಲಾಗಿದೆ. ಜಿಲ್ಲಾಡಳಿತ ಕೇಂದ್ರ ರಾಯಚೂರು ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗಿದೆ. ಲಿಂಗಸುಗೂರು ಮಾರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ಬೈಪಾಸ್‌ವರೆಗೂ ಚತುಷ್ಪಥ ರಸ್ತೆ ನಿರ್ಮಿಸಿ ಹೊಸ ಸ್ಪರ್ಶ ಕೊಡಲಾಗುತ್ತಿದೆ. ನಗರ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಇದ್ದುದರಿಂದ ಸಿಸಿರಸ್ತೆ ಕಾಮಗಾರಿಗೆ ಅಡ್ಡಿಯಾಗಿತ್ತು. ನಿತೀನ್‌ ಗಡ್ಕರಿ ಅವರಿಗೆ ಮನವಿ ಮಾಡಿ, ಹೊಸ ಪೈಪ್‌ಲೈನ್‌ ಅಳವಡಿಸಲು ₹10 ಕೋಟಿ ವಿಶೇಷ ಅನುದಾನ ಕೊಡಿಸಿದ್ದೇನೆ. ಎಸ್‌ಪಿ ಕಚೇರಿಯಿಂದ ಚಂದ್ರಬಂಡಾ ರಸ್ತೆ, ಆರ್‌ಟಿಓ ಕ್ರಾಸ್‌ನಿಂದ ಬಿಆರ್‌ಬಿ ಸರ್ಕಲ್‌ವರೆಗೆ ರಸ್ತೆ ಅಗಲೀಕರಣ ಮಾಡಿಸಿದ್ದೇನೆ. ಕೇಂದ್ರದಲ್ಲಿ ವಿರೋಧ ಪಕ್ಷದಲ್ಲಿದ್ದು ಇಷ್ಟು ಸಾಧ್ಯವೋ ಅಷ್ಟು ಕೆಲಸಗಳನ್ನು ಮಾಡಿಸಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಅಲ್ಪ ಸೇವೆಯನ್ನಾದರೂ ಮಾಡಿದ ಸಂತೃಪ್ತಿ ನನ್ನಲ್ಲಿದೆ.

ಕ್ಷೇತ್ರದಲ್ಲಿ ನೀವು ಗುರುತಿಸಿದ ಸಮಸ್ಯೆಗಳೇನು?

ಈ ಭಾಗಕ್ಕೆ ದಕ್ಷ, ಉತ್ತಮ ಆಡಳಿತ ನಡೆಸುವ ಅಧಿಕಾರಿಗಳು ಬರುವುದಕ್ಕೆ ಹಿಂದೇಟು ಹಾಕುತ್ತಾರೆ. ಅಧಿಕಾರಿಗಳಿಗೆ ಉತ್ತಮ ವಾತಾವರಣ ಕಲ್ಪಿಸಲು, ಜನಪ್ರತಿನಿಧಿಗಳಿಂದ ಯಾವುದೇ ತೊಂದರೆ ಆಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕಿದೆ. ಮೈಸೂರು ಭಾಗಕ್ಕೆ ಹೋಲಿಸಿದರೆ ರಾಯಚೂರಿನಲ್ಲಿ ಬಹಳಷ್ಟು ಪ್ರಾದೇಶಿಕ ಅಸಮಾನತೆ ಇದೆ. ಪ್ರತಿ ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧಿಸಬೇಕಾಗಿದೆ.

ಮತ್ತೆ ಸಂಸದರಾದರೆ ಆದ್ಯತೆಯಿಂದ ಮಾಡುವ ಕೆಲಸಗಳು?

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೊದಲ ಆದ್ಯತೆ ವಹಿಸಲಾಗುವುದು. ನೀರು, ವಿದ್ಯುತ್‌ ಹಾಗೂ ಭೂಮಿ ಇದ್ದರೂ ಹೊಸ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಉದ್ಯೋಗಾವಕಾಶ ಹೆಚ್ಚಿಸುವ ಕೈಗಾರಿಕೆಗಳನ್ನು ತರಲಾಗುವುದು. ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಲು ಹೊಸ ಶಾಲೆಗಳನ್ನು ಆರಂಭಿಸಲಾಗುವುದು. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುತ್ತೇನೆ. ಎಲ್ಲವನ್ನು ನಾನು ಮಾಡುತ್ತೇನೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಆದರೆ, ಸಾಮಾಜಿಕ ನ್ಯಾಯಕ್ಕಾಗಿ ಬಡವರ ಕಣ್ಣೀರು ಒರೆಸುವ ಕೆಲಸ ಮತ್ತು ಮಾನವೀಯ ನೆಲೆಯಲ್ಲಿ ಸದಾ ಕೆಲಸ ಮಾಡುತ್ತೇನೆ.

ಮಾದರಿ ಗ್ರಾಮ ಯೋಜನೆಯಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ?

ಜಾಗಿರ ವೆಂಕಟಾಪುರ ಗ್ರಾಮವನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಗ್ರಾಮದಲ್ಲಿ ಜನಜಾಗೃತಿ ಮೂಡಿಸುವ ಕೆಲಸ. ಮೂಲ ಸೌಕರ್ಯಗಳು ಹಾಗೂ ಶಿಕ್ಷಣದ ಅಭಿವೃದ್ಧಿಗಾಗಿ ಸಾಧ್ಯವಾದಷ್ಟು ಕೆಲಸಗಳನ್ನು ಮಾಡಿಕೊಡಲಾಗಿದೆ. ಗ್ರಾಮದ ಜನರು ಹಳ್ಳದ ನೀರಿನ ಮೇಲೆ ಅವಲಂಬನೆಯಾಗಿದ್ದರು. ಈಗ ಎನ್‌ಆರ್‌ಬಿಸಿ ಕಾಲುವೆ ಮೂಲಕ ನೀರು ಕೊಡುವ ವ್ಯವಸ್ಥೆಯಾಗಿದೆ. ಸಿಸಿ ರಸ್ತೆ, ಚರಂಡಿಗಳು ಹಾಗೂ ಪ್ರೌಢಶಾಲೆಗೆ ಕಟ್ಟಡ ನಿರ್ಮಸಿ ಕೊಡಲಾಗಿದೆ. ಗ್ರಾಮದಲ್ಲಿ ಸಮೀಕ್ಷೆ ಮಾಡಿಸಿ, ಯಾವ ಕೆಲಸಗಳಾಗಬೇಕು ಎಂಬುದರ ಬಗ್ಗೆ ವರದಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಯಾವುದೇ ಸ್ಪಂದನೆ ನೀಡಲಿಲ್ಲ. ಸಿಎಸ್‌ಆರ್‌ ಹಣದಲ್ಲಿ ಕೆಲಸ ಮಾಡಿಸಲಾಗಿದೆ. ಬೇರೆ ಬೇರೆ ಇಲಾಖೆಗಳ ಮೂಲಕ ಎಷ್ಟು ಸಾಧ್ಯವೋ ಅಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ.

ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಮೋದಿ ಅಲೆ?

ಮೋದಿ ಅಲೆ ಬಗ್ಗೆ ಯಾವುದೇ ಅಭಿಪ್ರಾಯ ಹೇಳುವುದಿಲ್ಲ. ಆದರೆ, ಐದು ವರ್ಷಗಳಲ್ಲಿ ಸೇರ್ಪಡೆಯಾದ ಹೊಸ ತಲೆಮಾರಿನ ಮತದಾರರಿಗೆ ದೇಶದ ಇತಿಹಾಸ ತಿಳಿದಿಲ್ಲ. ಯುವಪೀಳಿಗೆ ಭಾವನಾತ್ಮಕವಾಗಿ ಪೂರ್ವಾಗ್ರಹ ಪೀಡಿತರಾಗಿ ಮೋದಿ ಅವರ ಬಗ್ಗೆ ಒಲವು ತೋರಿಸುತ್ತಿದ್ದಾರೆ. ಇದು, ಸಿನಿಮಾದಲ್ಲಿ ನಾಯಕನನ್ನು ನೋಡಿ ಅಭಿಮಾನಿಯಾಗುವ ರೀತಿಯಲ್ಲಿದೆ. ಆದರೆ, ದೇಶದ ಅಭಿವೃದ್ಧಿಗೆ ಕಾಂಗ್ರೆಸ್‌ ಏನು ಕೆಲಸ ಮಾಡಿದೆ ಎಂಬುದನ್ನು ಯುವಪೀಳಿಗೆಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಬಡವರು, ದಲಿತರು ಹಾಗೂ ರೈತರ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಕೊಡುಗೆ ಏನೆಂದು ಹೇಳುತ್ತಿದ್ದೇವೆ. ಶಿಕ್ಷಣ ಹಕ್ಕು, ಆಹಾರ ಭದ್ರತೆ ಹಕ್ಕು ಹಾಗೂ 371(ಜೆ) ವಿಶೇಷ ಸ್ಥಾನಮಾನ, ಕಾಂಗ್ರೆಸ್‌ ಅವಧಿಯಲ್ಲಿ ಐತಿಹಾಸಿಕ ತೀರ್ಮಾನಗಳಾಗಿವೆ.

ದೇಶದ ಅಭಿವೃದ್ಧಿಯಲ್ಲಿ ಬಿಜೆಪಿ ಏನೂ ಕೊಡುಗೆಗಳನ್ನು ನೀಡಿಲ್ಲ. ಈ ಕಾರಣಕ್ಕಾಗಿಯೇ ಅವರು ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇತಿಹಾಸವನ್ನು ಹೇಳಿಕೊಂಡು ಮತ ಕೇಳುವ ಅಧಿಕಾರ ನಮಗಿದೆ. ಬಿಜೆಪಿಯವರಿಗೆ ಇತಿಹಾಸವಿಲ್ಲ.

ಗೆಲುವು ಹೇಗೆ ಸಾಧ್ಯ?

ಕಾಂಗ್ರೆಸ್‌ಗೆ ಸಾಂಪ್ರದಾಯಕ ಮತದಾರರು ಇದ್ದಾರೆ. ದೇಶದ ರಾಜಕೀಯ ಇತಿಹಾಸ ಗೊತ್ತಿದ್ದವರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷಕ್ಕೆ ಮತ ನೀಡುವುದಿಲ್ಲ. ಆದರೆ, ಹೊಸ ತಲೆಮಾರಿಗೆ ಸ್ವಲ್ಪ ಅಂತರ ಏರ್ಪಟ್ಟಿದೆ. ಇದ್ದವರನ್ನೇ ನೋಡಿ ನೋಡಿ.. ಹೊಸದನ್ನು ನೋಡಬೇಕು ಎನ್ನುವ ಮನುಷ್ಯನ ಸಹಜ ಮಾನಸಿಕತೆ ಯುವಪೀಳಿಗೆಯಲ್ಲಿದೆ. ಹೀಗಾಗಿ ಒಂದು ಅವಕಾಶ ಬಿಜೆಪಿಗೆ ನೀಡಿದ್ದರು. ಆದರೆ, ಜನರ ಯಾವ ಭರವಸೆಗಳನ್ನು ಅವರು ಈಡೇರಿಸಿಲ್ಲ. ಬಿಜೆಪಿ ಗೆಲ್ಲುವುದಕ್ಕೆ ಬೇಕಾಗುವ ಗಿಮಿಕ್‌ ಮಾಡುತ್ತದೆ. ಜನರ ಕಿವಿ ಮೇಲೆ ಹೂವು ಇಡುವ ಕೆಲಸ ಮಾಡುತ್ತಿದೆ. ಇದು ಜನರಿಗೆ ಗೊತ್ತಾಗಿದೆ. ನಾಟಕ, ಗಿಮಿಕ್‌ ಹಾಗೂ ಸ್ಟೈಲ್‌ಗಳು ನಡೆಯುವುದಿಲ್ಲ.

ಯಾದಗಿರಿ ಅಭಿವೃದ್ಧಿಗೆ ಆದ್ಯತೆ?

ಲೋಕಸಭೆ ಕ್ಷೇತ್ರವು ತುಂಬಾ ವಿಸ್ತರವಾಗಿದ್ದು, ಇದಕ್ಕೆ ರಾಯಚೂರು ಜಿಲ್ಲಾಧಿಕಾರಿಯೇ ನೋಡಲ್‌ ಅಧಿಕಾರಿ. ಹೀಗಾಗಿ ಏನೇ ಹೊಸ ಕಾರ್ಯ ಮಾಡುವುದಕ್ಕೆ ರಾಯಚೂರಿನಿಂದಲೇ ಅನುಮೋದನೆ ಸಿಗಬೇಕು. ಕಳೆದ ಐದು ವರ್ಷಗಳಲ್ಲಿ ಎಲ್ಲ ಕಡೆಗೂ ಆದ್ಯತೆ ವಹಿಸುವುದರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ. ಆದರೆ, ಮುಂದಿನ ಅವಧಿಯಲ್ಲಿ ಯಾದಗಿರಿ ಜಿಲ್ಲೆಗೆ ಹೆಚ್ಚಿನ ಮಹತ್ವ ನೀಡುವ ಉದ್ದೇಶ ಇಟ್ಟುಕೊಂಡಿದ್ದೇನೆ. ಆ ಜಿಲ್ಲೆಯಲ್ಲಿ ಬಹಳಷ್ಟು ಹಿರಿಯರು, ಅನುಭವಿ ರಾಜಕಾರಣಿಗಳಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈಗಾಗಲೇ ಕೆಲಸ ಮಾಡುವುದಕ್ಕೆ ಯೋಜಿಸಲಾಗಿದೆ. ರಾಜಕೀಯದ ಬಗ್ಗೆ ಜನರಲ್ಲಿ ಗೌರವ ತುಂಬಾ ಕಡಿಮೆಯಾಗಿದೆ. ಕನಿಷ್ಠಮಟ್ಟದ ಗೌರವ ಕಾಪಾಡಿಕೊಂಡು ರಾಜಕೀಯ ಮಾಡಬೇಕು ಎನ್ನುವ ಪ್ರಯತ್ನ ನನ್ನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT