ಬುಧವಾರ, ಫೆಬ್ರವರಿ 1, 2023
27 °C

ಸಂದರ್ಶನ | ‘ಅನುವಾದಕರಿಗೆ ಗೌರವ ಕಡಿಮೆ...’

ಚಿದಾನಂದ ಸಾಲಿ Updated:

ಅಕ್ಷರ ಗಾತ್ರ : | |

Prajavani

ತಮಿಳುನಾಡು ಸರ್ಕಾರದ ‘ಶ್ರೇಷ್ಠ ಅನುವಾದಕರು ಪ್ರಶಸ್ತಿ’ಗೆ ಪಾತ್ರರಾಗಿರುವ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಪ್ರೊ.ತಮಿಳ್ ಸೆಲ್ವಿ, ನಾಡಿನ ಹೊರಗೆ ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾದವರು. ಕನ್ನಡದ ಹಲವು ಮಹತ್ವದ ಕೃತಿಗಳನ್ನು ತಮಿಳು ಓದುಗರಿಗೂ ದಕ್ಕುವಂತೆ ಮಾಡಿದವರು. ಪ್ರಶಸ್ತಿಗೆ ಭಾಜನರಾದ ನೆಪದಲ್ಲಿ ಅವರೊಡನೆ ಒಂದು ಮಾತುಕತೆ...

***

ಅನುವಾದವನ್ನೇ ನಿಮ್ಮ ಆಯ್ಕೆಯ ಪ್ರಕಾರವಾಗಿ ಪರಿಗಣಿಸಬೇಕೆಂಬ ಆಲೋಚನೆ ನಿಮಗೆ ಬಂದದ್ದು ಹೇಗೆ?
ನಾನು ಅನುವಾದಕ್ಕಿಂತ ಮುಖ್ಯವಾಗಿ ಹಳಗನ್ನಡ ಕಾವ್ಯ, ಶಾಸನಾಧ್ಯಯನ, ಸಂಶೋಧನೆ, ಸಾಹಿತ್ಯ ವಿಮರ್ಶೆ ಇತ್ಯಾದಿ ಪ್ರಕಾರಗಳ ಬಗೆಗೇ ಹೆಚ್ಚು ಆಸಕ್ತಿ ಹೊಂದಿರುವುದು. ಕನ್ನಡ ಪ್ರಾಧ್ಯಾಪಕಿಯಾಗಿ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಬಲ್ಲೆ. ನನಗೆ ಪ್ರಶಸ್ತಿ ದೊರಕಿರುವುದು ಅನುವಾದಕ್ಕೆ ಎಂಬ ಕಾರಣದಿಂದ ಬಹಳ ಜನರು ನನ್ನನ್ನು ಅನುವಾದಕಿ ಎಂದು ಮಾತ್ರವೇ ಗುರುತಿಸುತ್ತಿದ್ದಾರೆ.

ಹೊರನಾಡಿನಲ್ಲಿದ್ದು ಕನ್ನಡದ ಚಟುವಟಿಕೆಗಳನ್ನು ಗಮನಿಸುತ್ತಿರುವ ನಿಮಗೆ, ಕರ್ನಾಟಕ ಮತ್ತು ಕನ್ನಡದಲ್ಲಿ ಅನುವಾದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇನ್ನೂ ಏನೆಲ್ಲಾ ಕೆಲಸಗಳು ಆಗುವ ಅಗತ್ಯವಿದೆ ಅನ್ನಿಸುತ್ತೆ?
ತಮಿಳು ಜನ ಮತ್ತು ಆಡಳಿತಗಾರರು ಇಬ್ಬರೂ ಸಾಹಿತ್ಯ ಪ್ರಸಾರ ಹಾಗೂ ಭಾಷಾಭಿವೃದ್ಧಿಯ ಕಡೆ ತುಂಬ ಗಮನಹರಿಸಿ ಜಾಗರೂಕತೆಯಿಂದ ಕಾರ್ಯಪ್ರವೃತ್ತರಾಗಿದ್ದಾರೆ. ತಮಿಳು ಸಾಹಿತ್ಯವನ್ನು ಜಗತ್ತಿನ ಭಾಷೆಗಳಲ್ಲಿ ಸಾಧ್ಯವಾದಷ್ಟೂ ಪ್ರಚಾರ ಮಾಡುವ ಕಡೆ ಅವರ ಯೋಜನೆ ಗಳು ಇರುತ್ತವೆ. ತಮಿಳಿನ ಪ್ರಾಚೀನ ಸಾಹಿತ್ಯವಾದ ಕ್ರಿ.ಶ. 1ನೇ ಶತಮಾನಕ್ಕೆ ಸೇರಿದ ತೊಲ್ಕಾಪ್ಪಿಯಂ, 2ರಿಂದ 4ನೇ ಶತಮಾನದ ಸಂಗಂ ಸಾಹಿತ್ಯ ಮೊದಲಾದ ಪ್ರಾಚೀನ ಕೃತಿಗಳನ್ನು ಇಂಗ್ಲಿಷನ್ನೂ ಒಳಗೊಂಡಂತೆ ಇತರ ಭಾಷೆಗಳಿಗೆ ಅನುವಾದಿಸುವ ಮೂಲಕ ತಮಿಳು ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ತಿರುಕ್ಕುರಳ್ ಕೃತಿಯಂತೂ ಸುಮಾರು 80 ಭಾಷೆಗಳಿಗೆ ಅನುವಾದವಾಗಿದೆಯೆಂದು ನಾನು ಓದಿದ್ದೇನೆ.

ಆದರೆ ಕನ್ನಡದ ಪ್ರಾಚೀನ ಕೃತಿಗಳನ್ನು ಹೀಗೆ ಬೇರೆ ಭಾಷೆಗಳಿಗೆ ಅನುವಾದಿಸುವ ಮೂಲಕ, ಜಗತ್ತಿಗೆ ಪರಿಚಯಿಸಬೇಕೆನ್ನುವ ನಿಟ್ಟಿನಲ್ಲಿ ಕನ್ನಡಿಗರು ಇನ್ನೂ ಯೋಚಿಸಿಯೇ ಇಲ್ಲ. ಇತ್ತೀಚೆಗೆ ಡಾ.ಆರ್.ವಿ.ಎಸ್.ಸುಂದರಂ ಅವರು ಕವಿರಾಜಮಾರ್ಗ, ವಡ್ಡಾರಾಧನೆ, ಗದಾಯುದ್ಧಗಳನ್ನು ಇಂಗ್ಲಿಷಿಗೆ ತಂದಿರುವುದು ಈ ನಿಟ್ಟಿನಲ್ಲಿ ಒಂದು ಮೈಲುಗಲ್ಲು. ಆದರೆ ಉಳಿದ ಭಾಷೆಗಳಿಗೂ, ಕನ್ನಡದ ಪ್ರಮುಖ ಕೃತಿಗಳನ್ನೂ ಅನುವಾದಿಸುವ ಮೂಲಕ ಕನ್ನಡ ಸಂಸ್ಕೃತಿ, ಸಾಹಿತ್ಯವನ್ನು ಇತರರಿಗೂ ಅರ್ಥ ಮಾಡಿಸಬೇಕಾಗಿದೆ.

ಪ್ರಾಚೀನ ಸಾಹಿತ್ಯ ಕೃತಿಗಳಿರಲಿ, ಜ್ಞಾನಪೀಠ ಪ್ರಶಸ್ತಿ ವಿಜೇತರ ಕೃತಿಗಳನ್ನೂ ಎಲ್ಲಾ ಭಾರತೀಯ ಭಾಷೆಗಳಿಗೆ ಅನುವಾದಿಸಿಲ್ಲ.

ನೀವು ಗದ್ಯ ಮತ್ತು ಪದ್ಯ ಎರಡನ್ನೂ ಅನುವಾದಿಸಿದ್ದೀರಿ. ಯಾವುದು ನಿಮಗೆ ಹೆಚ್ಚು ಸವಾಲಿನದು ಎನಿಸುತ್ತದೆ ಮತ್ತು ಯಾಕೆ?
ಸಹಜವಾಗಿಯೇ ಪದ್ಯದ ಅನುವಾದವೇ ಹೆಚ್ಚು ಸವಾಲಿನದು. ಪದ್ಯದ ಭಾವ ಬದಲಾಗದೆ, ಭಾಷಾಶೈಲಿ ಬದಲಾಗದೆ, ಪದಲಾಲಿತ್ಯವನ್ನೂ ಉಳಿಸಿಕೊಂಡು ಕಾವ್ಯ ಬಂಧದಲ್ಲಿ ಅದನ್ನು ನಿರೂಪಿಸುವುದು ಶ್ರಮದಾಯಕವಾದ ಕಾರ್ಯ. ಹಾಗೆಂದ ಮಾತ್ರಕ್ಕೆ ಗದ್ಯದ ಅನುವಾದ ಸುಲಭವೆಂದು ಅರ್ಥವಲ್ಲ. ಪ್ರಾದೇಶಿಕ ವೈಶಿಷ್ಟ್ಯಗಳಿಂದ ಕೂಡಿರುವ ದೇವನೂರ ಮಹಾದೇವ, ವೈದೇಹಿ, ಕುಂವೀಯವರಂತಹ ಲೇಖಕರ ಗದ್ಯವನ್ನು ಇನ್ನೊಂದು ಭಾಷೆಗೆ ತರುವಾಗ, ಆ ಭಾಷೆಯಲ್ಲಿರುವ ಪ್ರಾದೇಶಿಕ ಭಿನ್ನತೆಗಳಲ್ಲಿ ಯಾವುದನ್ನು ಬಳಸಿಕೊಳ್ಳಬೇಕು ಎಂಬ ಗೊಂದಲ ಮೂಡುತ್ತದೆ.

ತಮಿಳಿನ ಕತೆಗಾರ ಅಶೋಕ ಮಿತ್ರನ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತೆಂದು ನೀವು ಒಂದು ಸಂದರ್ಶನದಲ್ಲಿ ಹೇಳಿದ್ದಿರಿ. ಅತಿ ಶ್ರೀಮಂತ ಮತ್ತು ಪ್ರಾಚೀನ ಸಾಹಿತ್ಯಿಕ ಪರಂಪರೆಯ ತಮಿಳಿಗೆ ಅತಿ ಕಡಿಮೆ ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ತಮಿಳು ಸಾಹಿತ್ಯವನ್ನು ಬಲ್ಲ ನೀವು ಇದನ್ನು ಹೇಗೆ ವಿವರಿಸುತ್ತೀರಿ?
ಹೌದು! ದಕ್ಷಿಣ ಭಾರತೀಯ ಭಾಷೆಗಳಲ್ಲಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ಕನ್ನಡಕ್ಕೇ! ಅದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ತಮಿಳು ಕೂಡ ಸಮೃದ್ಧ ಸಾಹಿತ್ಯವನ್ನು ಹೊಂದಿದೆ. ಅದರಲ್ಲೂ ಆಧುನಿಕ ತಮಿಳು ಸಾಹಿತ್ಯ ಲೋಕ ಹಲವು ಹೊಸತನಗಳಿಗೆ ತನ್ನನ್ನು ತೆರೆದುಕೊಂಡಿದೆ. ಹೊಸ ಸಿದ್ಧಾಂತಗಳನ್ನು ತನ್ನೊಳಗು ಮಾಡಿಕೊಂಡಿದೆ. ನವೀನ ತಂತ್ರಗಳು, ಪ್ರಯೋಗಗಳು, ಭಾಷೆಶೈಲಿಗಳನ್ನೂ ಕಾಣಬಹುದು. ಆದರೂ ಹೆಚ್ಚು ಜ್ಞಾನಪೀಠಗಳು ದೊರಕಿಲ್ಲ, ಅದನ್ನು ಪಡೆದುಕೊಳ್ಳುವ ಅರ್ಹತೆಯಿರುವ ಹಲವು ಬರಹಗಾರರಿದ್ದೂ!

ತಮಿಳುನಾಡಿನಲ್ಲಿ ಇದ್ದುಕೊಂಡು ಕನ್ನಡದ ಕೆಲಸ ಮಾಡುತ್ತಿದ್ದೀರಿ. ಹೊರನಾಡಿನಲ್ಲಿರುವವರ ತಾಯ್ನುಡಿಯ ಸೇವೆಯ ಸ್ವರೂಪ, ಸವಾಲು ಮತ್ತು ಸಾಧ್ಯತೆಗಳ ಬಗ್ಗೆ ಹೇಳಿ.
ಹಿಂದೆ ರಾಜರ ಆಳ್ವಿಕೆಗಳ ಕಾಲದಲ್ಲಿ, ಯುದ್ಧ, ವ್ಯಾಪಾರ ಇತ್ಯಾದಿ ಕಾರಣಗಳಿಂದ ತಮಿಳುನಾಡಿಗೆ ಬಂದು ಇಲ್ಲಿಯೇ ನೆಲೆಸಿರುವ ಸಾವಿರಾರು ಕುಟುಂಬಗಳು ಇಲ್ಲಿವೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಕೂಡ ಸಾಕಷ್ಟು ಜನ ತಮಿಳುನಾಡಿಗೆ ಬಂದು ನೆಲೆ ನಿಂತಿದ್ದಾರೆ. ಕರ್ನಾಟಕದ ಹಲವು ಪ್ರಾಂತ್ಯಗಳು ಮದ್ರಾಸ್ ಪ್ರೆಸಿಡೆನ್ಸಿಯ ಅಧೀನದಲ್ಲಿದ್ದುದರಿಂದ ಸಹಜವಾಗಿಯೇ ತಮಿಳುನಾಡಿನ ಹಲವೆಡೆಗಳಲ್ಲಿ ಕನ್ನಡಿಗರು ನೆಲೆಸಿದ್ದಾರೆ. ಮದ್ರಾಸಿಗೆ ಸಮೀಪದಲ್ಲೇ ಎರಡು ‘ಕನ್ನಡ ಪಾಳ್ಯ’ಗಳಿವೆ, ಒಂದು ‘ಕನ್ನಡ ಹಳ್ಳಿ’ಯೂ ಇದೆ. ಆದರೀಗ ಅಲ್ಲಿ ನೆಲೆಸಿರುವ ಕನ್ನಡಿಗರು ಸ್ಥಳೀಯ ಸಂಸ್ಕೃತಿಯೊಳಗೆ ಬೆರೆತು ಹೋಗಿದ್ದಾರೆ. ಹಲವರು ಮಾತನಾಡುವ ಕನ್ನಡದಲ್ಲಿ ಸಾಕಷ್ಟು ತಮಿಳು ಪದಗಳು ಬೆರೆತು ಹೋಗಿ, ಅದೇ ಒಂದು ಪ್ರತ್ಯೇಕ ಭಾಷೆಯಾಗಿ ಬಳಕೆಯಲ್ಲಿರುವುದು ಭಾಷಾ ವೈವಿಧ್ಯದ ಸ್ವರೂಪಕ್ಕೆ ಕನ್ನಡಿ ಹಿಡಿಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿಗೆ ಬಂದು ನೆಲೆಸುತ್ತಿರುವವರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಸುವುದಕ್ಕೇ ಆಸಕ್ತಿ ತೋರಿಸುತ್ತಿದ್ದಾರಾದರೂ, ಮನೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಕಲಿಸುವುದನ್ನು ಮರೆಯುತ್ತಿಲ್ಲ. ಇದು ನಿಜಕ್ಕೂ ಆಶಾದಾಯಕ ಸಂಗತಿಯಾಗಿದೆ.

ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡಿಗರು ಒಟ್ಟುಗೂಡಿ ಕನ್ನಡ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಕನ್ನಡ ಭಾಷೆ, ಸಂಸ್ಕೃತಿಯನ್ನು ಹರಡುವ, ಬೆಳೆಸುವ ಕಾರ್ಯಗಳಲ್ಲಿ ಇಂದಿಗೂ ಆಸಕ್ತಿ ಹೊಂದಿದ್ದಾರೆ.

ರಾಜಕೀಯ ನೇತಾರರಾಗಿರುವ ಲೇಖಕರಾದ-ವೀರಪ್ಪ ಮೊಯಿಲಿ ಅವರ ಕೃತಿಯನ್ನು ತಮಿಳಿಗೂ ಹಾಗೂ ಎಂ.ಕೆ.ಕನಿಮೊಳಿ ಅವರ ಕೃತಿಯನ್ನು ಕನ್ನಡಕ್ಕೂ ಅನುವಾದಿಸಿದ್ದೀರಿ. ಈ ಹಿನ್ನೆಲೆಯಲ್ಲಿ ಪ್ರಭುತ್ವ ಮತ್ತು ಸಾಹಿತ್ಯಗಳ ಸಂಬಂಧದ ಸ್ವರೂಪವು ಹೇಗಿರಬೇಕೆಂದು ನೀವು ಬಯಸುತ್ತೀರಿ?
ಸಾಹಿತ್ಯ ಮತ್ತು ರಾಜಕೀಯ ಹಿಂದಿನಿಂದಲೂ ಪರಸ್ಪರ ಪೂರಕ, ಪ್ರೇರಕ ಹಾಗೂ ಪೋಷಕಗಳಾಗಿವೆ. ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧ ಸೂಕ್ಷ್ಮವಾದುದು. ಕನ್ನಡ ಸಾಹಿತ್ಯವನ್ನು ಗಮನಿಸಿದರೆ ಅದು ಪ್ರಭುತ್ವವನ್ನು ಬಿಟ್ಟು ಇರಲಿಲ್ಲ. ಇವೆರಡರ ನಡುವಿನ ಸಂಬಂಧವನ್ನು ಗಮನಿಸುವ ಮುನ್ನ ಸಾಹಿತ್ಯದ ಉದ್ದೇಶದ ಬಗ್ಗೆ ಮೊದಲು ನಮಗೆ ಸ್ಪಷ್ಟತೆ ಇರಬೇಕು. ಸಾಹಿತ್ಯ ಸಮಾಜಮಖಿಯಾದುದು. ಪ್ರಭುತ್ವವೂ ಜನರಿಗಾಗಿಯೇ ರೂಪುಗೊಂಡಿರುವುದು. ರಾಜಕೀಯ ವಲಯದಲ್ಲಿರುವವರು ಸಾಹಿತ್ಯದಲ್ಲೂ ಆಸಕ್ತರಾಗಿದ್ದರೆ ಅವರು ಸಮಾಜಮುಖಿಗಳಾಗಿ ಯೋಚಿಸುವ ಬದ್ಧತೆಯನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಡಿಎಸ್‍ಸಿ, ಬೂಕರ್‌ಗಳಂಥ ಸಾಹಿತ್ಯ ಪ್ರಶಸ್ತಿಗಳ ಮೊತ್ತವನ್ನು ಲೇಖಕ ಮತ್ತು ಅನುವಾದಕರಿಗೆ ಸಮನಾಗಿ ಹಂಚುವ ಪರಿಪಾಠವಿದೆ. ಆದರೆ ನೀವು ಈ ಹಿಂದೆ ಪಡೆದುಕೊಂಡಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿಯ ಮೊತ್ತವು ಅದೇ ಸಂಸ್ಥೆ ನೀಡುವ ಮುಖ್ಯ ಪ್ರಶಸ್ತಿಯ ಮೊತ್ತದ ಅರ್ಧದಷ್ಟಿದೆ. ಇದನ್ನು ನೀವು ಹೇಗೆ ನೋಡುತ್ತೀರಿ?
ಭಾರತೀಯ ಮನೋಧರ್ಮ ಹಿಂದಿನಿಂದಲೂ ಅನುವಾದವನ್ನು ಎರಡನೆಯ ದರ್ಜೆಯ ಕ್ರಿಯೆಯೆಂದೇ ನೋಡುತ್ತಿದೆ. ವಾಸ್ತವವಾಗಿ ಒಬ್ಬ ಲೇಖಕ ಒಂದು ಭಾಷೆಯಲ್ಲಿ ಮಾತ್ರವೇ ಯೋಚಿಸಿ ಬರೆದರೆ, ಅನುವಾದಕ ಎರಡೂ ಭಾಷೆಗಳಲ್ಲೂ ಅದನ್ನು ಯೋಚಿಸಬೇಕು. ಮೂಲ ಭಾಷೆಯ ಭಾವ ಬಂಧ, ವಿಚಾರಗಳು ಅನುವಾದಿತ ಭಾಷೆಯಲ್ಲೂ ಯಾವುದೇ ಚ್ಯುತಿಯಿಲ್ಲದೆ ಹಾಗೆಯೇ ಮೂಡಿ ಬರಬೇಕಾದರೆ, ಆ ಭಾಷೆಯಲ್ಲೂ ಅಷ್ಟೇ ಪರಿಣತಿ ಇರಬೇಕು. ಮೂಲಕ್ಕೆ ಯಾವುದೇ ರೀತಿಯಲ್ಲೂ ಅನುವಾದ ಭಿನ್ನವಾಗಿರಬಾರದು.

ಇಷ್ಟೆಲ್ಲ ಶ್ರಮಪಟ್ಟು ಒಂದು ಕೃತಿಯನ್ನು ಅನುವಾದಿಸಿದರೂ ಭಾರತೀಯ ಮನೋಧರ್ಮ ಅದನ್ನು ಮುಖ್ಯ ಧಾರೆಯೊಳಗೆ ಸ್ವೀಕರಿಸುತ್ತಿಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿ ಮೂಲ ಕೃತಿಗೆ ನೀಡುವ ಅರ್ಧದಷ್ಟು ಮೊತ್ತವನ್ನು ಮಾತ್ರವೇ ಅನುವಾದಕ್ಕೆ ನೀಡುವ ಪರಿಪಾಠವನ್ನು ಬದಲಿಸಿಕೊಳ್ಳಬೇಕು. ಹಾಗೆ ನೋಡಿದರೆ ತಮಿಳುನಾಡು ಸರ್ಕಾರ ಅನುವಾದಕ್ಕಾಗಿ ಎರಡು ಲಕ್ಷ ರೂಪಾಯಿ ನೀಡುತ್ತಿದೆ ಮತ್ತು ಇದು ಕೇಂದ್ರ ಸಾಹಿತ್ಯ ಅಕಾಡೆಮಿಯು ಅನುವಾದಕ್ಕಾಗಿ ನೀಡುವ ಪ್ರಶಸ್ತಿಯ ಮೊತ್ತದ ನಾಲ್ಕು ಪಟ್ಟು ಇರುವುದು ಶ್ಲಾಘನೀಯ.

ಅನುವಾದಕ್ಕಾಗಿ ಕೃತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ನಿಮ್ಮ ಆಯ್ಕೆಯ ಹಿಂದಿನ ಪ್ರೇರಣೆ ಮುಖ್ಯವಾಗಿ ಯಾವ ಬಗೆಯದಾಗಿರುತ್ತದೆ?
ಎಲ್ಲಾ ಸಂದರ್ಭಗಳಲ್ಲೂ ಒಂದೇ ಮಾನದಂಡ ಇರುತ್ತದೆ ಎಂದೇನಿಲ್ಲ. ಕೆಲವೊಮ್ಮೆ ಇಷ್ಟದ ಲೇಖಕರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಅಶೋಕ ಮಿತ್ರನ್, ಮ.ರಂಗನಾಥನ್, ಜಯಕಾಂತನ್ ಮೊದಲಾದವರ ಕೃತಿಗಳನ್ನು ಮೆಚ್ಚಿ ಆಯ್ಕೆ ಮಾಡಿಕೊಂಡದ್ದು. ‘ನಾನು ಅವನಲ್ಲ, ಅವಳು’ ಕೃತಿಯನ್ನು ಆಯ್ಕೆ ಮಾಡಿಕೊಂಡದ್ದು ಸಾಮಾಜಿಕ ನ್ಯಾಯಕ್ಕಾಗಿ. ಈ ಕೃತಿ ಬಂದ ನಂತರ ಕರ್ನಾಟಕದೊಳಗೆ ತೃತೀಯ ಲಿಂಗಿಗಳ ಬಗೆಗೆ ಜನರ ಮನೋಭಾವ ಬದಲಾದದ್ದು ನನಗೆ ತುಂಬಾ ಸಂತಸ ನೀಡಿದೆ. ಅವರಿಗೆ ದೊರಕಬೇಕಾದ ಹಲವು ಸವಲತ್ತುಗಳೂ ಈ ಮೂಲಕ ದೊರಕಿವೆ. ಕನಿಮೊಳಿಯಂತಹವರ ಕೃತಿಗಳನ್ನು ಜನಪ್ರಿಯತೆಯ ಹಿನ್ನೆಲೆಯಲ್ಲೂ, ಅವರ ಕಾವ್ಯ ಹೇಗಿರಬಹುದು ಎಂಬ ಕುತೂಹಲದ ಕಣ್ಣೋಟವಿದ್ದವರನ್ನು ತಣಿಸುವುದಕ್ಕಾಗಿಯೂ ಅನುವಾದಿಸಿದೆ. ಯಾವುದೇ ಕಾರಣವಾಗಿರಲಿ ಅದರಲ್ಲಿ ಸಾಹಿತ್ಯಿಕ ಸತ್ವ ಇದ್ದರೆ ಮಾತ್ರವೇ ಆಯ್ಕೆ ಮಾಡಿಕೊಳ್ಳುತ್ತೇನೆ.

ತಮಿಳಿನಲ್ಲಿ ಅನುವಾದಕ್ಕೆ ಸಂಬಂಧಿಸಿದ ವಾತಾವರಣ ಹೇಗಿದೆ?
ಓದುಗರ ವಲಯದಲ್ಲೂ, ಮುಖ್ಯ ಬರಹಗಾರರಲ್ಲೂ ಅನುವಾದಕರ ಬಗ್ಗೆ ಹೆಚ್ಚಿನ ಗೌರವ ಭಾರತೀಯ ವಾತಾವರಣದಲ್ಲೇ ಇಲ್ಲ. ಇದಕ್ಕೆ ಯಾವ ಭಾಷೆಯೂ ಹೊರತಲ್ಲ. ಸಾಕಷ್ಟು ಬರಹಗಾರರು ನಮ್ಮ ಕೃತಿಯನ್ನೂ ಅನುವಾದಿಸಿ ಎಂದು ಕೇಳುತ್ತಾರೆ. ಹಾಗೆ ನೋಡಿದರೆ ಸುಮಾರು ಮೂರು ಸಾವಿರದಷ್ಟು ಹಿರಿ-ಕಿರಿಯ ತಮಿಳು-ಕನ್ನಡಗಳ ಲೇಖಕರು ತಮ್ಮ ಕೃತಿಗಳನ್ನು ಅನುವಾದಿಸಲು ಸಾಧ್ಯವೇ ಎಂದು ನನ್ನನ್ನು ಕೇಳಿರುವುದುಂಟು. ತಮ್ಮ ಕೃತಿ ಮತ್ತೊಂದು ಭಾಷೆಗೂ ಹೋಗಬೇಕು ಎಂಬ ಅಪೇಕ್ಷೆ ಅಲ್ಲಿ ಮುಖ್ಯವೇ ಹೊರತು ಅನುವಾದ ಕಾರ್ಯಕ್ಕೆ ಹೆಚ್ಚಿನ ಗೌರವವೇನೂ ಕಾಣಿಸುತ್ತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು