ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ – ಭಟ್ಟಂಗಿಗಳ ಬಗ್ಗೆ ಎಚ್ಚರ ಇರಲಿ: ರಣದೀಪ್‌ ಸುರ್ಜೇವಾಲಾ

Last Updated 12 ಜುಲೈ 2021, 19:31 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಆಗಬೇಕು ಎಂಬ ಆಕಾಂಕ್ಷೆ ಒಳ್ಳೆಯದೇ. ಆದರೆ, ಅದು ಪಕ್ಷದ ಶಿಸ್ತನ್ನು ಉಲ್ಲಂಘಿಸುವಂತಿರಬಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಅವರು ಕರ್ನಾಟಕ ಕಾಂಗ್ರೆಸ್‌ನ ಬಣ ರಾಜಕಾರಣದ ಕುರಿತು ಹೇಳಿದ್ದಾರೆ. ಕೆಲವು ಹಿಂಬಾಲಕರು ಭಟ್ಟಂಗಿತನದ ಮೂಲಕ ನಾಯಕರ ಮೆಚ್ಚುಗೆ ಗಳಿಸಲು ಯತ್ನಿಸುತ್ತಾರೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

lಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ನಡುವೆಯೇ ತಿಕ್ಕಾಟ ಇರುವಾಗ ಜನರು ಕಾಂಗ್ರೆಸ್‌ನ ಮೇಲೆ ನಂಬಿಕೆ ಇರಿಸಬಹುದೇ?

ಬಿಜೆಪಿ ಮತ್ತು ಇತರ ಪಕ್ಷಗಳು ರಾಜಕೀಯ ದಿವಾಳಿತನ, ಅವಕಾಶವಾದ, ಸಿದ್ಧಾಂತರಾಹಿತ್ಯ ಮತ್ತು ರಾಜ್ಯದ ಹಿತಕ್ಕೆ ಸಂಬಂಧಿಸಿ ಅಲ್ಪದೃಷ್ಟಿ ಹೊಂದಿವೆ. ಹಾಗಾಗಿ, ನಂಬಿಕೆಗೆ ಅರ್ಹವಾಗಿರುವ ಪಕ್ಷ ಕಾಂಗ್ರೆಸ್‌ ಮಾತ್ರ. ಕೆಲವು ನಾಯಕರು ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಅರ್ಥದಲ್ಲಿ ಆ ನಾಯಕರ ಹಿಂಬಾಲಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಹತ್ವಾಕಾಂಕ್ಷೆ ಒಳ್ಳೆಯದೇ. ಆದರೆ, ಅದು ಪಕ್ಷದ ಶಿಸ್ತನ್ನು, ಜನರ ಸೇವೆ ಮಾಡಬೇಕು ಎಂಬ ಬದ್ಧತೆಯನ್ನು ಉಲ್ಲಂಘಿಸಬಾರದು. ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಒಳಗೊಂಡಂತೆ ಎಲ್ಲ ನಾಯಕರಿಗೂ ಇದು ಗೊತ್ತು ಮತ್ತು ಅವರು ಇದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಅಶಿಸ್ತನ್ನು ಪಕ್ಷವು ಸಹಿಸುವುದಿಲ್ಲ. ಕೆಲವರು ತಮ್ಮ ನಾಯಕರ ಮೆಚ್ಚುಗೆಗಾಗಿ ಭಟ್ಟಂಗಿತನ ಮಾಡುತ್ತಾರೆ ಎಂಬುದನ್ನೂ ನಾಯಕರು ಅರ್ಥ ಮಾಡಿಕೊಳ್ಳಬೇಕು. ಅಪಾರ ಪ್ರತಿಭೆ ಮತ್ತು ವಿವೇಕ ಹೊಂದಿರುವ ನಾಯಕರಿರುವ ಏಕೈಕ ಪಕ್ಷ ಕರ್ನಾಟಕದಲ್ಲಿ ಕಾಂಗ್ರೆಸ್‌ ಮಾತ್ರ. ರಾಜ್ಯವನ್ನು ಮುಂದಕ್ಕೆ ಒಯ್ಯಲು ಈ ಎಲ್ಲವನ್ನೂ ಬಳಸಲಾಗುವುದು. ನಾವು ಒಗ್ಗಟ್ಟಾಗಿಯೇ ಚುನಾವಣೆ ಎದುರಿಸಲಿದ್ದೇವೆ ಮತ್ತು ಕಾಂಗ್ರೆಸ್ ಶಾಸಕರು ಮತ್ತು ಪಕ್ಷದ ನಾಯಕರು ರಾಜ್ಯದ ನಾಯಕತ್ವವನ್ನು ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸಲಿದ್ಧಾರೆ.

lಕರ್ನಾಟಕ ಕಾಂಗ್ರೆಸ್‌ ಪುನರ್‌ರಚನೆಯ ಉದ್ದೇಶ ಇದೆಯೇ? ಈಗ ಇರುವ ಪದಾಧಿಕಾರಿಗಳನ್ನು ಬದಲಾಯಿಸಬೇಕು ಎಂದು ಶಿವಕುಮಾರ್‌ ಬಯಸುತ್ತಿದ್ದಾರೆ...

ಪಕ್ಷ ಕಟ್ಟುವುದು ನಿರಂತರ ಪ್ರಕ್ರಿಯೆ. ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರನ್ನು ಬಿಟ್ಟು ರಾಜ್ಯ ಕಾಂಗ್ರೆಸ್‌ ಸಮಿತಿಯನ್ನು ಬರ್ಖಾಸ್ತು ಮಾಡಲಾಗಿದೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಹೊಸ ಪದಾಧಿಕಾರಿಗಳ ಬಗ್ಗೆ ವ್ಯಾಪಕ ಸಮಾಲೋಚನೆ ನಡೆಸಲಾಗಿದೆ. ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ಸದ್ಯದಲ್ಲೇ ಪುನರ್‌ ರಚಿಸಲಾಗುವುದು. ರಾಜ್ಯ ಘಟಕದ ಪದಾಧಿಕಾರಿಗಳು ಮಾತ್ರವಲ್ಲ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧ್ಯಕ್ಷರು ಎಷ್ಟು ಪರಿಣಾಮಕಾರಿ ಆಗಿದ್ದಾರೆ ಎಂಬ ಬಗ್ಗೆಯೂ ಪರಿಶೀಲನೆ ನಡೆಯಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳು, ಯುವ ಜನರು ಮತ್ತು ಕೃಷಿ ಸಮುದಾಯಕ್ಕೆ ಹೊಸ ನಾಯಕತ್ವ ನೀಡುವುದು ಇದರ ಉದ್ದೇಶ. ಗ್ರಾಮ ಮತ್ತು ವಾರ್ಡ್‌ ಮಟ್ಟದ ಸಮಿತಿ ರಚನೆಯ ಬಗ್ಗೆಯೂ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕರ ಜತೆಗೆ ಚರ್ಚೆ ನಡೆಸಿದ್ದೇನೆ.

lಕರ್ನಾಟಕದಲ್ಲಿ ಬಿಜೆಪಿಯ ಸ್ಥಿತಿ ಚೆನ್ನಾಗಿಲ್ಲ. ಭಿನ್ನಮತೀಯರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ನಿಂತಿದ್ದಾರೆ...

ಕರ್ನಾಟಕದಲ್ಲಿ ಬಿಜೆಪಿ ಅಕ್ರಮ ಸರ್ಕಾರವನ್ನು ನಡೆಸುತ್ತಿದೆ. ಸಹಜವಾಗಿಯೇ, ಜನಾದೇಶವನ್ನು ಅಪಹರಿಸಿದ್ದರ ವಿರೋಧಾಭಾಸಗಳು ಪಕ್ಷಾಂತರಿಗಳ ಮೂಲಕ ಕಾಣಿಸಿಕೊಳ್ಳುತ್ತದೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂಬುದು ನಿಜ. ಭ್ರಷ್ಟಾಚಾರ ಮತ್ತು ಕುಸಿದು ಬಿದ್ದ ಆಡಳಿತದಿಂದಾಗಿ ಜನರು ಬೆಲೆ ತೆರುತ್ತಿದ್ಧಾರೆ.

lಮುಖ್ಯಮಂತ್ರಿಯ ‘ನಿರಂಕುಶಾಧಿಕಾರ’ವನ್ನು ಪ್ರಶ್ನಿಸಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಹಾಲಿ ಸಚಿವರೊಬ್ಬರು ಮುಖ್ಯಮಂತ್ರಿಯ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿರುವುದು ಭಾರತದ ಇತಿಹಾಸದಲ್ಲಿಯೇ ಮೊದಲನೇ ಘಟನೆ. ಈಶ್ವರಪ್ಪ ಸರಿ ಎಂದಾದರೆ ಮುಖ್ಯಮಂತ್ರಿಯನ್ನು, ಇಲ್ಲ ಎಂದಾದರೆ ಈಶ್ವರಪ್ಪ ಅವರನ್ನು ವಜಾ ಮಾಡಬೇಕಲ್ಲವೇ?

ಭ್ರಷ್ಟಾಚಾರ, ಆಡಳಿತದ ವೈಫಲ್ಯ, ದುರಾಡಳಿತ, ಅದಕ್ಷತೆ, ಮುಖ್ಯಮಂತ್ರಿ ಮಗ ಮತ್ತು ಕುಟುಂಬದ ಸದಸ್ಯರು ಆಳ್ವಿಕೆಯ ಮೇಲೆ ಹೊಂದಿರುವ ಅಕ್ರಮ ಹಿಡಿತದ ಬಗ್ಗೆ ಬಸನಗೌಡ ಪಾಟೀಲ ಯತ್ನಾಳ, ವಿಶ್ವನಾಥ್‌, ಯೋಗೇಶ್ವರ್‌, ಅರವಿಂದ ಬೆಲ್ಲದ, ರೇಣುಕಾಚಾರ್ಯ ಅವರಂತಹ ಬಿಜೆಪಿಯ ಹಿರಿಯ ಮುಖಂಡರೇ ಧ್ವನಿ ಎತ್ತಿದ್ದಾರೆ. ಸಿಕ್ಕಿದ್ದನ್ನು ಎಲ್ಲರೂ ಹಂಚಿಕೊಳ್ಳುತ್ತಿರುವುದರ ನಡುವೆಯೇ ಆರೋಪವೂ ಕೇಳಿ ಬರುತ್ತಿದೆ. ಹೀಗೆಲ್ಲ ಆಗುತ್ತಿರುವಾಗಲೂ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಲು ಕಾರಣವಾದರೂ ಏನು ಎಂಬುದೇ ಅರ್ಥ ಆಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT