ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಪುನರ್ವಸತಿಗೆ ಹತ್ತು ಸೂತ್ರಗಳು

ವಾರದ ಸಂದರ್ಶನ
Last Updated 25 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಕೊಡಗಿನ ಘಟ್ಟ ಪ್ರದೇಶದ ಸಂರಚನೆ ಕುರಿತು ದಶಕಗಳಿಂದ ಅಧ್ಯಯನ ನಡೆಸುತ್ತಾ ಬಂದಿದ್ದಾರೆ ಮೈಸೂರು ವಿಶ್ವವಿದ್ಯಾಲಯದ ಭೂಗರ್ಭ ಹಾಗೂ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಎ.ಬಾಲಸುಬ್ರಮಣಿಯನ್‌. ಪ್ರಾಕೃತಿಕ ವಿಪತ್ತಿಗೆ ಸಿಲುಕಿರುವ ಕೊಡಗಿನ ಪುನರ್ವಸತಿಗೆ ಸಂಬಂಧಿಸಿದಂತೆ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆ ಇಲ್ಲಿದೆ:

* ಅತಿವೃಷ್ಟಿ ಹಾಗೂ ಗುಡ್ಡ ಕುಸಿತದಿಂದ ದೊಡ್ಡ ವಿಪತ್ತಿಗೆ ಸಿಲುಕಿರುವ ಕೊಡಗಿನಲ್ಲಿ ಸರ್ಕಾರ ಕೈಗೊಳ್ಳಲಿರುವ ಪುನರ್ವಸತಿ ವ್ಯವಸ್ಥೆ ಹೇಗಿರಬೇಕು?

ಘಟ್ಟ ಪ್ರದೇಶಗಳಿಂದ ಆವೃತವಾದ ಕೊಡಗು ಜಿಲ್ಲೆಯು ಮತ್ತೆ ಮೊದಲಿನಂತೆ ಎದ್ದು ನಿಲ್ಲಬೇಕಾದರೆ ತುರ್ತಾಗಿ ಹತ್ತು ಅಂಶಗಳ ಪರಿಹಾರ ಸೂತ್ರವನ್ನು ರಾಜ್ಯ ಸರ್ಕಾರ ರೂಪಿಸಬೇಕು. ಅವುಗಳೆಂದರೆ:

1. ಕೊಡಗು ಜಿಲ್ಲೆಯಲ್ಲಿರುವ ಎಲ್ಲ ಘಟ್ಟ ಪ್ರದೇಶಗಳನ್ನು ಸಂಪೂರ್ಣ ಸಮೀಕ್ಷೆ ನಡೆಸಿ, ಯಾವುದು ಸ್ಥಿರ ಹಾಗೂ ಯಾವುದು ಅಸ್ಥಿರ ಪ್ರದೇಶ ಎಂಬುದನ್ನು ನಿಖರವಾಗಿ ಗುರುತಿಸುವಂತಹ ನಕ್ಷೆಯನ್ನು ಸಿದ್ಧಪಡಿಸಬೇಕು (ಕಾಲಕಾಲಕ್ಕೆ ಇಂತಹ ಸಮೀಕ್ಷೆ ನಡೆಸಿ ನಕ್ಷೆಯನ್ನು ಪರಿಷ್ಕರಿಸುತ್ತಲೇ ಇರಬೇಕು).

2. ಕರಾವಳಿಯಲ್ಲಿ ನಿರ್ಬಂಧಿತ ವಲಯನ್ನು (ಸಿಆರ್‌ಜೆಡ್‌) ಗುರುತಿಸಿದಂತೆ ಘಟ್ಟದಲ್ಲೂ ನಿರ್ಬಂಧಿತ (ಎಂಆರ್‌ಜೆಡ್‌) ಸರಹದ್ದು ಗುರುತಿಸಿ,ಆ ಪ್ರದೇಶದಲ್ಲಿ ಮಾನವನ ಚಟುವಟಿಕೆಗಳನ್ನು
ಸಂಪೂರ್ಣವಾಗಿ ತಡೆಗಟ್ಟಬೇಕು.

3. ಅಪಾಯಕಾರಿ ವಲಯಗಳನ್ನು ಗುರುತಿಸಿ, ‘ಇಲ್ಲಿ ಗುಡ್ಡ ಕುಸಿಯುವ ಸಂಭವವಿದೆ ಎಚ್ಚರ’ ಎಂಬ ಫಲಕಗಳನ್ನು ದೊಡ್ಡದಾಗಿ ಪ್ರದರ್ಶಿಸಬೇಕು. ಅಭಿವೃದ್ಧಿ ಚಟುವಟಿಕೆಗಳನ್ನು ನಿಯಂತ್ರಿಸಬೇಕು.

4. ಸ್ಥಿರ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸುವ ಮುನ್ನ ಅಡಿಯಲ್ಲಿನ ಗಟ್ಟಿ ತಾಣದವರೆಗೆ ಬುನಾದಿ ಹಾಕಬೇಕು (ಕೊಡಗಿನ ಗುಡ್ಡಗಳ ಮೇಲೆ ಒಂದೂವರೆ ಮೀಟರ್‌ಗಿಂತಲೂ ಅಧಿಕ ದಪ್ಪ ಮಣ್ಣಿನ ಪದರ ಇದೆ. ಈಗ ಉರುಳಿ ಬಿದ್ದಿರುವ ಯಾವ ಮನೆಗಳ ಬುನಾದಿಗಳೂ ಆಳವಾಗಿರಲಿಲ್ಲ).

5. ಮಳೆನೀರು 2–3 ಗಂಟೆಗಳಲ್ಲಿ ಹರಿದು ಹೋಗುವಂತಹ ಡ್ರೈನರ್‌ ಲೈನ್‌ಗಳನ್ನು ರಸ್ತೆಗಳ ಬದಿಯಲ್ಲಿ ನಿರ್ಮಿಸಬೇಕು. ಜಗತ್ತಿನ ಎಲ್ಲ ಘಟ್ಟ ಪ್ರದೇಶಗಳ ರಸ್ತೆಗಳನ್ನು ಕಾಪಾಡಿಕೊಳ್ಳಲು ಈ ವ್ಯವಸ್ಥೆಯನ್ನು ತಪ್ಪದೇ ಮಾಡಿರುತ್ತಾರೆ. ನಮ್ಮ ಕಾಶ್ಮೀರದ ಪ್ರಮುಖ ರಸ್ತೆಗಳಲ್ಲೂ ಡ್ರೈನರ್‌ ಲೈನ್‌ಗಳಿವೆ.

6. ಘಟ್ಟದ 45 ಡಿಗ್ರಿಗಿಂತ ಹೆಚ್ಚಿನ ಕೋನದಲ್ಲಿ ವಾಲಿಕೊಂಡ ಪ್ರದೇಶಗಳಲ್ಲಿ ಆಳವಾದ ಬುನಾದಿ ಹೊಂದಿದ (ಮಣ್ಣಿನ ಪದರವನ್ನೂ ದಾಟಿ ಆಳದಲ್ಲಿರುವ ಕಲ್ಲಿನ ಹಾಸಿಗೆಯನ್ನು ಮುಟ್ಟಬೇಕು) ರಿಟೆನ್ಶನ್‌ ವಾಲ್‌ಗಳನ್ನು (ತಡೆಗೋಡೆ) ನಿರ್ಮಾಣ ಮಾಡಬೇಕು.

7.ಕಡಿದಾದ ಘಟ್ಟ ಪ್ರದೇಶದಲ್ಲಿ ರಸ್ತೆಯ ಅಡಿಯಿಂದ ಘಟ್ಟದ ಮುಡಿಯವರೆಗೂ ತಡೆಗೋಡೆ ನಿರ್ಮಿಸಬೇಕು.

8. ಹೆಚ್ಚಿನ ಮಳೆಯಾಗುವ ಸಂದರ್ಭದಲ್ಲಿ ಮುನ್ನಚ್ಚೆರಿಕೆ ನೀಡುವಂತಹ ಅಲಾರಾಂ ವ್ಯವಸ್ಥೆ ರೂಪಿಸಬೇಕು. ಪ್ರತಿ ಕಿ.ಮೀ.ಗೆ ಒಂದರಂತೆ ಇಂತಹ ಅಲಾರಾಂ ಅಳವಡಿಸಬೇಕು. ಸರಾಸರಿಗಿಂತ ಅಧಿಕ ಪ್ರಮಾಣದ ಮಳೆ ದಾಖಲಾದೊಡನೆ ಅಪಾಯದ ಗಂಟೆ ಮೊಳಗಬೇಕು.

9. ಕೊಡಗಿನ ವಾತಾವರಣಕ್ಕೆ ಸರಿಹೊಂದುವಂತಹ ಸಸ್ಯ ಪ್ರಭೇದಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಬೇಕು.

10. ಕೊಡಗಿನಲ್ಲಿಯೇ ಒಂದು ವಿಪತ್ತು ನಿರ್ವಹಣಾ ಘಟಕವನ್ನು ತೆರೆಯಬೇಕು. ಅದಕ್ಕೆ ಅಗತ್ಯವಾದ ಎಲ್ಲ ವೈಜ್ಞಾನಿಕ ಸೌಲಭ್ಯಗಳನ್ನು ಒದಗಿಸಬೇಕು. ಸ್ಥಳೀಯಜನರು ತಕ್ಷಣದ ವಿಪತ್ತು ನಿರ್ವಹಣೆಗೆ, ತಮ್ಮ ರಕ್ಷಣೆಗೆ ಅಣಿ ಆಗಿರುವಂತೆ ಸೂಕ್ತ ತರಬೇತಿಯ ವ್ಯವಸ್ಥೆ ಮಾಡಬೇಕು. ಶಾಲಾ–ಕಾಲೇಜು ವಿದ್ಯಾರ್ಥಿ ಗಳಿಗೂ ಈ ತರಬೇತಿ ಸಿಗಬೇಕು.

ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಡಿಕೇರಿ ಹೊರವಲಯದ ಉದಯಗಿರಿಯಲ್ಲಿಭೂಕುಸಿತಉಂಟಾಗಿ ಮನೆಯೊಂದು ಸಿಲುಕಿರುವುದು -ಪ್ರಜಾವಾಣಿ ಚಿತ್ರ-ಕೃಷ್ಣಕುಮಾರ್‌ ಪಿ.ಎಸ್‌.
ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಡಿಕೇರಿ ಹೊರವಲಯದ ಉದಯಗಿರಿಯಲ್ಲಿಭೂಕುಸಿತಉಂಟಾಗಿ ಮನೆಯೊಂದು ಸಿಲುಕಿರುವುದು -ಪ್ರಜಾವಾಣಿ ಚಿತ್ರ-ಕೃಷ್ಣಕುಮಾರ್‌ ಪಿ.ಎಸ್‌.

* ಪಶ್ಚಿಮ ಘಟ್ಟದಲ್ಲಿರುವ ಕೊಡಗಿನ ಪ್ರದೇಶ ತುಂಬಾ ಸಂಕೀರ್ಣವಾಗಿದೆ; ಅಷ್ಟೇ ಸೂಕ್ಷ್ಮವಾಗಿದೆ. ಅದರಲ್ಲಿ ಅಪಾಯಕಾರಿ ವಲಯಗಳನ್ನು ಹೇಗೆ ಸಮೀಕ್ಷೆ ಮಾಡುವುದು?

ಸಮೀಕ್ಷೆಗಾಗಿ ಕೊಡಗಿನ ಘಟ್ಟ ಪ್ರದೇಶವನ್ನು ಪ್ರತಿ ನೂರು ಚದರ ಅಡಿಗೆ ಒಂದು ಭಾಗವನ್ನಾಗಿ ನೋಡಬೇಕು. ಗುಡ್ಡದ ಮೇಲಿರುವ ಮಣ್ಣಿನ ಪದರಿನ ಪ್ರಮಾಣ, ಮಳೆಯ ತೀವ್ರತೆ, ಮಳೆ ನೀರು ಹರಿದುಹೋಗುವ ವೇಗ ಇವುಗಳ ಆಧಾರದ ಮೇಲೆ ಆ ಭಾಗ ಎಷ್ಟು ಸ್ಥಿರವಾಗಿದೆ ಎಂಬುದನ್ನು ನೋಡಿಕೊಂಡು ‘ಹೆಚ್ಚು ಅಪಾಯಕಾರಿ’ ಮತ್ತು ‘ಕಡಿಮೆ ಅಪಾಯಕಾರಿ’ ವಲಯಗಳನ್ನು ನಿರ್ಧರಿಸಬೇಕು.

ಸಾಮಾನ್ಯವಾಗಿ ಹೊಸ ರೈಲು ಮಾರ್ಗವನ್ನು ಹಾಕುವಾಗ ಇಂತಹ ಅಧ್ಯಯನಗಳನ್ನು ನಡೆಸಲಾಗುತ್ತದೆ. ಕೊಡಗಿನಲ್ಲಿ ಬಹುತೇಕ ಗುಡ್ಡಗಳು ಒಂದೂವರೆ ಮೀಟರ್‌ಗಿಂತಲೂ ಹೆಚ್ಚು ದಪ್ಪಗಾತ್ರದ ಮಣ್ಣಿನ ಹೊದಿಕೆ ಹೊಂದಿವೆ. ಹೀಗಾಗಿ ಕುಸಿತದ ಅಪಾಯ ಇಲ್ಲಿ ತುಸು ಹೆಚ್ಚಾಗಿಯೇ ಇರುತ್ತದೆ. ಚಿಕ್ಕ ಚಿಕ್ಕ ಭಾಗಗಳನ್ನಾಗಿ ಗುರುತಿಸಿ ನಡೆಸುವ ಅಧ್ಯಯನದಿಂದ ಮಾತ್ರ ಗುಡ್ಡದ ಗಟ್ಟಿತನದ ನಿಖರತೆ ಗೊತ್ತಾಗುತ್ತದೆ.

* ಪುನರ್ವಸತಿ ಸಂದರ್ಭದಲ್ಲಿ ಇಂತಹ ಸಮೀಕ್ಷೆಗಳು ಹೇಗೆ ಪ್ರಯೋಜನಕ್ಕೆ ಬರುತ್ತವೆ?

ಘಟ್ಟ ಪ್ರದೇಶದಲ್ಲಿ ಕುಸಿತದ ಅಪಾಯವಿರುವ ವಲಯಗಳು ಯಾವುವು ಎನ್ನುವುದು ನಿಖರವಾಗಿ ಗೊತ್ತಾದರೆ ಅಂತಹ ಪ್ರದೇಶದಲ್ಲಿ ಮಾನವನ ಚಟುವಟಿಕೆಗಳನ್ನು ಸಂಪೂರ್ಣವಾಗಿ (ಮನೆ ಕಟ್ಟುವುದು, ಕೃಷಿ, ತೋಟಗಾರಿಕೆ ಇಲ್ಲವೆ ಪ್ರವಾಸೋದ್ಯಮ ನಡೆಸುವುದು) ನಿರ್ಬಂಧಿಸಲು ಸಾಧ್ಯವಾಗುತ್ತದೆ. ಆವಾಸಸ್ಥಾನ ಬದಲಿಸಲು ಅನುಕೂಲವಾಗುತ್ತದೆ. ಹೊಸ ಟೌನ್‌ಶಿಪ್‌ ನಿರ್ಮಾಣ ಮಾಡುವುದಾದರೆ ಯಾವ ಪ್ರದೇಶ ಹೆಚ್ಚು ಸುರಕ್ಷಿತ ಎಂಬುದೂ ಗೊತ್ತಾಗುತ್ತದೆ. ಕೇವಲ ಆರು ತಿಂಗಳಲ್ಲಿ ಇಂತಹ ಸಮೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಿದೆ.

* ಘಟ್ಟಕ್ಕೆ ಹಾನಿಯಾಗದಂತೆ ತಡೆಗೋಡೆಗಳನ್ನು ನಿರ್ಮಿಸುವುದು ಹೇಗೆ?

ತಂತಿ ಜಾಲರಿಯಲ್ಲಿ ವ್ಯವಸ್ಥಿತವಾಗಿ ಕಲ್ಲಿನ ಬ್ಲಾಕ್‌ಗಳ ಅಳವಡಿಕೆ, ರಾಕ್‌ ಬೋಲ್ಟಿಂಗ್‌, ಸಿಮೆಂಟ್‌ ಗ್ರೌಟಿಂಗ್‌ (ನೀರಗಾರೆ)– ಹೀಗೆ ಹಲವು ವಿಧಾನಗಳು ಲಭ್ಯವಿವೆ. ಎಲ್ಲಿ, ಯಾವುದು ಸೂಕ್ತ ಆ ವಿಧಾನವನ್ನು ಅನುಸರಿಸಲು ಸಾಧ್ಯವಿದೆ.

* ಹಿಂದೆಂದೂ ಕೊಡಗು ಇಂತಹ ಸನ್ನಿವೇಶಕ್ಕೆ ಸಾಕ್ಷಿ ಆಗಿರಲಿಲ್ಲ. ಗುಡ್ಡ ಕುಸಿತದ ಗಂಡಾಂತರ ಎದುರಾಗಿದ್ದು ಹೇಗೆ?

ದಶಕಗಳ ಅವಧಿಯಲ್ಲಿ ಕೊಡಗು ಭೂಪ್ರದೇಶ ಬದಲಾಗುತ್ತ ಬಂದಿರುವ ಬಗೆಯನ್ನು ನೀವೊಮ್ಮೆ ಅವಲೋಕಿಸಬೇಕು. ಮೂಲ ಸೌಕರ್ಯ ಹಾಗೂ ಕಟ್ಟಡಗಳ ನಿರ್ಮಾಣಕ್ಕಾಗಿ ಮರಗಳನ್ನು ದೊಡ್ಡ ಪ್ರಮಾಣದಲ್ಲಿಯೇ ಕಡಿಯಲಾಗಿದೆ. ಸುರಿದ ಮಳೆ ನೀರನ್ನು ಪ್ರವಾಹದ ರೂಪ ತಾಳದಂತೆ ನೋಡಿಕೊಳ್ಳುವ ತಾಕತ್ತು ಮರಗಳಿಗೆ ಇದೆ. ಅವುಗಳನ್ನು ಬುಡಸಮೇತ ಉರುಳಿಸಿದಾಗ ಹಾಗೂ ಕಟ್ಟಡಗಳನ್ನು ನಿರ್ಮಿಸುವಾಗ ಗುಡ್ಡದ ಮೇಲಿನ ಪದರು ಸಡಿಲಗೊಂಡಿದೆ. ಮಣ್ಣಿನ ಪದರಿನ ಸಮೇತ ಕಟ್ಟಡಗಳು ಉರುಳಿರುವುದನ್ನು ನೋಡಿದಾಗ ಆ ಪದರುಗಳ ಒಳಗೆ ನೀರು ತುಂಬಿಕೊಂಡಿರುವುದು ಸ್ಪಷ್ಟ.

ಘಟ್ಟದ 45 ಡಿಗ್ರಿ ಕೋನಕ್ಕಿಂತ ಹೆಚ್ಚು ವಾಲಿದ ಭಾಗಗಳಲ್ಲಿ ಕಟ್ಟಡಗಳು ಇರಬಾರದು. ಆದರೆ, ಉರುಳಿ ಬಿದ್ದಿರುವ ಮನೆಗಳು ಗುಡ್ಡ 60 ಡಿಗ್ರಿಯಿಂದ 70 ಡಿಗ್ರಿ ಕೋನದಷ್ಟು ವಾಲಿದ ಪ್ರದೇಶಗಳಲ್ಲಿ ನಿರ್ಮಾಣವಾಗಿದ್ದವು. ಅವುಗಳಿಗೆ ಹಾಕಿದ ಬುನಾದಿ ಮೂರು ಅಡಿಗಳಿಗಿಂತ ಕಡಿಮೆ ಇತ್ತು. ಕೆಳಗಿನ ಮಣ್ಣಿನ ಪದರ ತುಂಬಾ ದಪ್ಪ ಗಾತ್ರದಲ್ಲಿತ್ತು. ಮಳೆಯೂ ಈ ಬಾರಿ ಸರಾಸರಿಗಿಂತ ಮೂರು ಪಟ್ಟು ಹೆಚ್ಚಾಗಿ ಸುರಿದಿದೆ. ಈ ಮೇಲಿನ ಎಲ್ಲ ಅಂಶಗಳೂ ಸದ್ಯದ ವಿಪತ್ತಿಗೆ ಕಾರಣವಾಗಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT