ಭಾನುವಾರ, ಸೆಪ್ಟೆಂಬರ್ 27, 2020
21 °C

ಆತ್ಮಹತ್ಯೆಗೆ ಶರಣಾಗಿ ಸಾವು ಗೆದ್ದು ಬಂದ ರಘುನಾಥ್ ಹೇಳಿದ ಕುತೂಹಲಕಾರಿ ಸಂಗತಿಗಳು

ಹರಿಶಂಕರ್ ಆರ್. Updated:

ಅಕ್ಷರ ಗಾತ್ರ : | |

ಇವರು ಸ. ರಘುನಾಥ್‌.  ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಆತ್ಮಹತ್ಯೆಗೆ ಶರಣಾದರೂ ಸಾವು ಗೆದ್ದುಬಂದವರು. ಆತ್ಮಹತ್ಯೆಯ ಯೋಚನೆ, ಆತ್ಮಹತ್ಯೆಯ ಪ್ರಯತ್ನ, ಬದುಕಿನ ದುರಂತದಿಂದ ಕಂಡುಕೊಂಡ ಸತ್ಯದ ಹಾದಿಯಲ್ಲೇ ಸಾಧನೆ ಮಾಡಿದವರು. ಹಲವು ಜೀವಗಳನ್ನು ಉಳಿಸಿಲು ಪ್ರಯತ್ನಿಸಿದವರು. ತಾವಿದ್ದ ಪರಿಸರದಲ್ಲೇ ಖಿನ್ನತೆಗೆ ತುತ್ತಾದವರನ್ನು ಆತ್ಮಹತ್ಯೆಯ ಆಲೋಚನೆಯಿಂದ ಹೊರತಂದವರು. ಮಾನಸಿಕ ವ್ಯಾದಿಗೆ ಸಿಲುಕಿದವರಿಗೆ ಇವರ ಮಾತು ಔಷದವೇ ಸರಿ.

ಇದನ್ನೂ ಓದಿ: ಎಂಥದ್ದೇ ಕಷ್ಟವಿರಲಿ... ಸಾವಿನ ನಿರ್ಧಾರವೇಕೆ? ಒಂದು ಕ್ಷಣ ಇದನ್ನು ಓದಿ

ಏನೇನೋ ಕಾರಣಗಳಿಂದಾಗಿ ಇಂದು ಸಮಾಜದಲ್ಲಿ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಇತ್ತೀಚೆಗೆ ಮಹಿಳೆಯೊಬ್ಬರು ತಮ್ಮ ಪತಿ ತೀರಿಕೊಂಡ ಕಾರಣಕ್ಕೆ ತಮ್ಮ ಮಕ್ಕಳೊಂದಿಗೆ ತಾವೂ ಆತ್ಮಹತ್ಯೆಗೆ ಶರಣಾದರು. ಇದಕ್ಕೂ ಹಿಂದೆ, ಕಾಫಿ ಡೇ ಉದ್ಯಮಿ ಸಿದ್ಧಾರ್ಥ ಅವರೂ ಸಮಸ್ಯೆಗಳಿಗೆ ಹೆದರಿ ಸಾವಿನ ದಾರಿ ಕಂಡುಕೊಂಡರು. ಜಗತ್ತಿನಲ್ಲಿ ಪ್ರತಿ ವರ್ಷ 8 ಲಕ್ಷ ಮಂದಿ ಆತ್ಮಹತ್ಯೆಗಳ ಮೂಲಕವೇ ಸಾವು ತಂದುಕೊಳ್ಳುತ್ತಿರುವ ಈ ಸನ್ನಿವೇಶದಲ್ಲಿ ಸ. ರಘುನಾಥ ಅವರ ಜೀವನಾನುಭವ ಇತರರಿಗೆ ಮದ್ದಾಗಿ ಕೆಲಸ ಮಾಡಬಲ್ಲದು. ಇದೇ ಉದ್ದೇಶದಿಂದ ‘ಪ್ರಜಾವಾಣಿ’ಯಲ್ಲಿ ರಘುನಾಥ ಮೇಷ್ಟ್ರ ಸಂದರ್ಶನ ಪ್ರಕಟಿಸಲಾಗಿದೆ.


ಸ.ರಘುನಾಥ

ಆತ್ಮಹತ್ಯೆಯಂಥ ಕಠಿಣ ನಿರ್ಧಾರ ಕೈಗೊಳ್ಳಲು ನಿಮಗಿದ್ದ  ಕಾರಣಗಳೇನು? 

ನಾನು ನನ್ನ ತಾತನ ಆಶ್ರಯದಲ್ಲಿ ಬೆಳೆದವನು. ಚಿಕ್ಕ ವಯಸ್ಸಿನಲ್ಲಿ ಸ್ನೇಹಿತರ ಜತೆಗೂಡಿ ಮನೆಯಲ್ಲಿ ಎರಡು ರೂಪಾಯಿ ಕದ್ದಿದ್ದೆ. ಇದು ನನಗೆ ಕಳಂಕವಾಗಿ ಅಂಟಿತ್ತು. ಕುಟುಂಬಸ್ಥರು ನನ್ನನ್ನು ಕಳ್ಳನೆಂದೇ ನೋಡುತ್ತಿದ್ದರು. ಯಾರ ಮನೆಯಲ್ಲಿ ಏನೇ ಕಳುವಾದರೂ ಅದಕ್ಕೆ ನಾನೇ ಹೊಣೆಗಾರನಾಗಿರುತ್ತಿದ್ದೆ. ನನ್ನ ತಾತನ ಸಾವಿನೊಂದಿಗೆ ನನಗಿದ್ದ ಆಶ್ರಯವೂ ತಪ್ಪಿತ್ತು. ಬೆಂಗಳೂರಿಗೆ ಬಂದೆ. ಅನ್ನಕ್ಕಾಗಿ ಪರದಾಡಿದೆ. ಚಾಮರಾಜಪೇಟೆಯಲ್ಲಿ ಭಿಕ್ಷೆ ಬೇಡಿದೆ. ಎರಡು ದಿನ ಭಿಕ್ಷೆ ಬೇಡಿದರೂ, ಹಿಡಿ ಅನ್ನ ಸಿಗಲಿಲ್ಲ. ಭಿಕ್ಷೆಗೂ ಅರ್ಹನಲ್ಲದ ನಾನು ಯಾರಿಗೂ ಹಿತವನಲ್ಲ ಎಂಬ ಭಾವ ಮನಸ್ಸು ಹಿಂಡಿತು. ಬದುಕು ಬೇಡವೆನಿಸಿತು. ಬೆಂಗಳೂರು ರೈಲು ನಿಲ್ದಾಣಕ್ಕೆ ಹೋದವನೇ ರೈಲು ಬರುವ ಹಳಿಯ ಮೇಲೆ ಕಣ್ಣುಮುಚ್ಚಿ ನಿಂತೆ.

ಇದನ್ನೂ ಓದಿ: ನದಿಗೆ ಜಿಗಿದ ತಾಯಿ, ಮಕ್ಕಳು; ರಕ್ಷಿಸಲು ಯತ್ನಿಸಿದ್ದ ಸಾಕು ನಾಯಿ

ಆ ಕ್ಷಣದ ಅನುಭವ ಹಂಚಿಕೊಳ್ಳಬಹುದೇ?  

ನಾನು ಸಾಯಲು ಯೋಚಿಸಿದ ದಿನ ನನಗೆ ಕಣ್ಣಿಗೆ ಕಾಣುತ್ತಿದ್ದದ್ದು ಕೇವಲ ರೈಲು ಮಾತ್ರ. ಅದಕ್ಕಾಗಿಯೇ ರೈಲು ಹಳಿಗಳ ಮೇಲೆ ಹೋಗಿ ನಿಂತಿದ್ದೆ ಎನಿಸುತ್ತದೆ. ನನಗೆ ಏಕಾಗ್ರತೆ ಬಂದಿತ್ತು. ಅದು ಸಾವಿನ ಏಕಾಗ್ರತೆಯಾಗಿತ್ತು ಎಂದು ನನಗನಿಸುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಷ್ಟೇ ಮನಸ್ಸಲ್ಲಿತ್ತು. ಮನಸ್ಸು ಶೂನ್ಯವಾಗಿತ್ತು. ನನ್ನಲ್ಲಿ ಬೇರಾವ ಆಲೋಚನೆಗಳೂ ಇರಲಿಲ್ಲ. ಅಂದು ನಾನು ಮೌನಿಯಾಗಿದ್ದೆ. 

ಖಿನ್ನತೆಗೆ ಒಳಗಾದ, ಸಾಯುವ ಮಾತನಾಡುವ ಹಲವರಿಗೆ ನಾನು ಆಪ್ತ ಸಮಾಲೋಚನೆ ಮಾಡಿದ್ದೇನೆ. ಅವರು ಹೇಳುವುದೆಲ್ಲವೂ ಅಂದು ನಾನು ಆತ್ಮಹತ್ಯೆಗೆ ಯೋಚನೆ ಮಾಡಿದ ರೀತಿಯಲ್ಲೇ ಇರುತ್ತದೆ.  ಇಲ್ಲಿ ಮತ್ತೊಂದು ಅಂಶವನ್ನು ನಾನು ಗಮನಿಸಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದವರು ಏಕಾಂತ ಹುಡುಕುತ್ತಾರೆ. ತಾವು ಎಂದಿನಂತಿಲ್ಲ ಎಂದು ಕುಟುಂಬಸ್ಥರಿಗೆ ತಿಳಿದರೆ ಆ ಏಕಾಂತ ತಮಗೆ ಸಿಗುವುದಿಲ್ಲ ಎಂದು ಭಾವಿಸಿ ಸಹಜವಾಗಿರುವಂತೆ ನಟಿಸುತ್ತಾರೆ. ಏಕಾಂತ ಸಿಕ್ಕಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂಥವರ ವರ್ತನೆಗಳ ಬಗ್ಗೆ ನಮಗೆ ಗಮನವಿರಬೇಕು. 

ಇದನ್ನೂ ಓದಿ: ಆತ್ಮಹತ್ಯೆ: ಪರಿಹಾರವಲ್ಲದ ಮಾರ್ಗ

ಆತ್ಮಹತ್ಯೆ ಪ್ರಯತ್ನಿಸಿದ ನೀವು ಬದುಕುಳಿದಿದ್ದಾದರೂ ಹೇಗೆ? 

ನಾನು ಕಣ್ಣು ಬಿಟ್ಟಾಗ ಆಸ್ಪತ್ರೆಯ ಹಾಸಿಗೆ ಮೇಲಿದ್ದೆ. ನನ್ನನ್ನು ರೈಲ್ವೆ ಪೊಲೀಸರು ರಕ್ಷಣೆ ಮಾಡಿ ಬೌರಿಂಗ್‌ ಆಸ್ಪತ್ರೆಗೆ ಸಾಗಿಸಿದ್ದರಂತೆ. ರೈಲು ನನ್ನ ಕಾಲಿನ ಮೇಲೆ ಹರಿದಿದ್ದರಿಂದ ನಾನು ನನ್ನ ಕಾಲು ಕಳೆದುಕೊಳ್ಳಬೇಕಾಯಿತು. ಇದೆಲ್ಲವೂ ನಡೆದದ್ದು 1974ರಲ್ಲಿ 

ಆತ್ಮಹತ್ಯೆ ನಂತರದ ಘಟನೆಗಳು ಹೇಗಿದ್ದವು, ಸಮಾಜ ನಿಮ್ಮನ್ನು ನೋಡುತ್ತಿದ್ದ ರೀತಿ ಹೇಗಿತ್ತು? 

ಆತ್ಮಹತ್ಯೆ ನಂತರದ ದಿನಗಳು ನರಕವೇ ಸರಿ. ಆತ್ಮಹತ್ಯೆಯಲ್ಲಿ ಬದುಕುಳಿದವರನ್ನು ಸಮಾಜ ಅನುಕಂಪದಿಂದ ನೋಡುತ್ತದೆ. ಆದರೆ, ಮೂದಲಿಸುತ್ತದೆ. ಇಂಥ ನಡವಳಿಕೆ ಕುಟುಂಬಸ್ಥರಲ್ಲೇ ಹೆಚ್ಚು. ಅದು ಆಗಬಾರದು. ಆತ್ಮಹತ್ಯೆಯಲ್ಲಿ ಬದುಕುಳಿದವರ ಕಡೆಗೆ ಸಮಾಜ ಸಹಾನುಭೂತಿ ತೋರಬೇಕು. ಆತ್ಮಹತ್ಯೆ ವೈಫಲ್ಯವೇ ಮುಂದೊಂದು ದಿನ ಆತ್ಮಹತ್ಯೆಗೆ ಪೂರಕವಾಗಬಾರದು. 

ಆತ್ಮಹತ್ಯೆ ಭಾವ ಕಾಡಿದಾಗ, ಖಿನ್ನತೆ ಮೂಡಿದಾಗ ಅದನ್ನು ಎದುರಿಸುವುದಾದರೂ ಹೇಗೆ? 

ತಮ್ಮನ್ನು ತಾವೇ ಸಂತೈಸಿಕೊಳ್ಳಬೇಕು. ಬಹುಶಃ ಇದು ಕಷ್ಟಸಾಧ್ಯ. ಆದರೂ ನಮ್ಮನ್ನು ನಾವೇ ಸಮಾಧಾನ ಮಾಡಿಕೊಳ್ಳಬೇಕು. ಶೂನ್ಯ ಭಾವದ ನಡುವೆಯೂ ಬದುಕಲು ಒಂದು ಗುರಿಯೊಂದನ್ನು ಹಾಕಿಕೊಳ್ಳಬೇಕು. ಆತ್ಮಹತ್ಯೆ ತಡೆಯುವಲ್ಲಿ ಕುಟುಂಬಸ್ಥರು, ಸ್ನೇಹಿತರ ಪಾತ್ರವೂ ಇದೆ. ನಿನಗೆ ನಾನು ಆಸರೆಯಾಗಿರುತ್ತೇನೆ ಎಂದು ಯಾರಾದರೂ ಭರವಸೆ ನೀಡಿದರೆ ಅವರು ಬದುಕುಳಿಯುವ ಸಾಧ್ಯತೆಗಳಿವೆ. 

ಇದನ್ನೂ ಓದಿ: ಆತ್ಮಹತ್ಯೆ: ಹಲವು ಆಯಾಮ

ಖಿನ್ನತೆಯಲ್ಲಿರುವವರಿಗೆ ನೀವು ಆಪ್ತ ಸಮಾಲೋಚನೆ ನೀಡುತ್ತಿದ್ದೀರಿ. ಆತ್ಮಹತ್ಯೆ ತಡೆಗೆ ಜಾಗೃತಿ ಕಾರ್ಯ ನಡೆಸುತ್ತಿದ್ದೀರಿ. ಇದು ಆರಂಭವಾಗಿದ್ದು ಹೇಗೆ?

ನಾನು ಆತ್ಮಹತ್ಯೆಗೆ ಪ್ರಯತ್ನಿಸಿ, ಜೀವ ಸಹಿತ ಉಳಿದು ಬಂದ ನಂತರ ನನಗನಿಸಿದ್ದು ಇಷ್ಟು.  ಆತ್ಮಹತ್ಯೆ ಪಾಪವೇನಲ್ಲ. ನಾನು ಬದುಕಲು ಬಂದವನಲ್ಲ ಬದುಕಿಸಲು ಬಂದವನು ಎಂದು ಅಂದುಕೊಂಡೆ. ನನ್ನ ನೋವನ್ನು ಇನ್ನಾರೂ ಅನುಭವಿಸಬಾರದು ಎಂದುಕೊಂಡೆ. ಆಗಲೇ ನನ್ನ ಈ ಕಾರ್ಯ ಆರಂಭವಾಗಿದ್ದು. ಸಮಸ್ಯೆಯಲ್ಲಿರುವವರೊಂದಿಗೆ ಸಮಾಲೋಚನೆ ಆರಂಭಿಸಿದ್ದು.

ನನ್ನ ಸ್ನೇಹಿತ ಸೋಮಶೇಖರ ಗೌಡ ಎಂಬುವವನೊಬ್ಬ ಲೇಖಕನಾಗಿದ್ದ. ಆತನೂ ಯಾವುದೋ ಸಮಸ್ಯೆಯಲ್ಲಿ ಸಿಲುಕಿ ಖಿನ್ನನಾಗಿದ್ದ. ನಾವೊಂದು ದಿನ ಅಂತರಗಂಗೆ ಬೆಟ್ಟದಲ್ಲಿ ಭೇಟಿಯಾಗಿದ್ದವು. ಆಗ ಅವನಾಡಿದ ಮಾತುಗಳೆಲ್ಲವೂ ಅಂದು ನಾನು ಸಾವಿಗೆ ಯೋಚಿಸಿದ ರೀತಿಯಲ್ಲೇ ಇದ್ದವು. ಕೂಡಲೇ ಎಚ್ಚೆತ್ತುಕೊಂಡೆ. ಅವನೊಂದಿಗೆ ಮಾತನಾಡಿದೆ, ನಿನ್ನ ಬರಹಗಳನ್ನೆಲ್ಲ ನನಗೆ ಕೊಡು, ನಿನ್ನ ಹೆಸರಲ್ಲಿ ಮುದ್ರಿಸುತ್ತೇನೆ, ಪುಸ್ತಕ ಮಾಡುತ್ತೇನೆ ಎಂದು ಅವನಲ್ಲಿ ಆಸೆಗಳನ್ನು ಹುಟ್ಟಿಸಿ ಅಲ್ಲಿಂದ ಕರೆದೊಯ್ದೆ. ನನ್ನ ಪರಿಚತರೊಬ್ಬರ ಮನೆಯಲ್ಲಿ ಆತನನ್ನು ಇರಿಸಿದ್ದೆ. ನಾನು ಅವನನ್ನು ಅಲ್ಲಿ ಬಿಟ್ಟು ಬಂದ ನಂತರ ಆತ ಆತ್ಮಹತ್ಯೆ ಮಾಡಿಕೊಂಡೇ ಬಿಟ್ಟ. ಅಂದು ನಾನು ಆ ಪ್ರಕರಣದಲ್ಲಿ ಗೆಲ್ಲಲಿಲ್ಲ. ಆದರೂ, ಆಪ್ತ ಸಮಾಲೋಚನೆಯನ್ನು ಬಿಡಲಿಲ್ಲ. 

ಹತ್ತನೇ ತರಗತಿ ನಪಾಸಾಗಿದ್ದರೂ ನನಗೆ ಶಿಕ್ಷಕ ವೃತ್ತಿ ಸಿಕ್ಕಿತ್ತು. ನನ್ನ ಪರಿಚಿತರೊಬ್ಬರು ನನಗೆ ಈ ವೃತ್ತಿ ಕೊಡಿಸಿದ್ದರು. ನಾನು ಕೆಲಸ ಮಾಡುತ್ತಿದ್ದ ಶಾಲೆಯ ಪರಿಸರದಲ್ಲೇ ನನ್ನ ಸಂಪರ್ಕಕ್ಕೆ ಸಿಕ್ಕವರಲ್ಲೇ ಸಮಸ್ಯೆ ಹುಡುಕಿ ಸಮಾಲೋಚನೆ ನಡೆಸಿದೆ. ನನ್ನ ಈ ಕಾರ್ಯ ಜನರಿಂದ ಜನರಿಗೆ ಹರಡಿತು. ವೈದ್ಯರೂ ನನ್ನನ್ನು ಕರೆದು ರೋಗಿಗಳೊಂದಿಗೆ ಆಪ್ತ ಸಮಾಲೋಚನೆ ನಡೆಸುವಂತೆ ಮನವಿ ಮಾಡುವಂತಾಯಿತು. ಜನರಿಂದಲೂ ಕರೆಗಳು ಬರತೊಡಗಿದವು. ನನ್ನ ಮಾತುಗಳು ಯಾವ ಮಟ್ಟಿಗೆ ಕೆಲಸ ಮಾಡುತ್ತಿದ್ದವರೆಂದರೆ, ‘ನಮ್ಮ ಮೇಷ್ಟ್ರು ಇರುವಾಗ ನನಗೇನು ಭಯ,’ ಎಂದು ಜನರಲ್ಲೆ ಮಾತನಾಡಲಾರಂಭಿಸಿದರು. ನನ್ನ ಮಾತುಗಳು ಅವರಲ್ಲಿ ಭರವಸೆ ಹುಟ್ಟಿಸುತ್ತಿದ್ದವು. ಭರವಸೆಯೇ ಬದುಕಲ್ಲವೇ?  ಆದರೆ, ನನ್ನ ಕಾರ್ಯಕ್ಕೆ ಪ್ರಚಾರ ಕೊಟ್ಟುಕೊಂಡಿಲ್ಲ. ‌

ಇದನ್ನೂ ಓದಿ: ಅವಮಾನ, ಸ್ವಾಭಿಮಾನ ಮತ್ತು ಆತ್ಮಹತ್ಯೆ

ಸಾವಿನ ಮಾರ್ಗದಲ್ಲಿರುವವರಲ್ಲಿ ಭರವಸೆ ಮೂಡಿಸಿದೆ ಎಂದಿರಲ್ಲವೇ? ಇಂಥ ಪ್ರಕರಣಗಳನ್ನು ಬಗೆಹರಿಸುವಾಗ  ನಿಮಗೇನಾದರೂ ವಿಶೇಷ ಸಂಗತಿಗಳು ತಿಳಿದವೇ? ಸವಾಲುಗಳೇನಾದರೂ ಇದ್ದವೇ? ಈ ಕಾರ್ಯದಲ್ಲಿ ನಿಜಕ್ಕೂ ನೀವು ಯಶಸ್ವಿಯಾಗಿದ್ದೀರಾ? 

ಖಿನ್ನತೆಗೆ ಒಳಗಾದವರು ಗ್ರಾಮೀಣ ಭಾಗದಲ್ಲೇ ಹೆಚ್ಚು. ಅದಕ್ಕೇ ಅಲ್ಲಿ ದೇವರು, ದೆವ್ವಗಳು ಬರುವ ಪ್ರಕರಣಗಳೂ ಹೆಚ್ಚು. ಅದರಲ್ಲೂ ಮಹಿಳೆಯರಲ್ಲೇ ಖಿನ್ನತೆ, ದೇವರು–ದೆವ್ವಗಳು ಹೆಚ್ಚು. ದೇವರು, ದೆವ್ವ ಬರುವುದೆಲ್ಲವೂ ಸುಳ್ಳು. ಆದರೆ, ಸಮಸ್ಯೆಗೆ ಸಿಲುಕಿದವರು ಆತ್ಮಹತ್ಯೆಗೆ ಧೈರ್ಯವಿಲ್ಲದೇ ಈ ನಾಟಕವಾಡುತ್ತಾರೆ. ಹಾಗಾಗಿ ದೇವರು ದೆವ್ವ ಬಂದವರನ್ನು ಮೂದಲಿಸಬಾರದು. ವಿಶ್ವಾಸಕ್ಕೆ ಪಡೆದು ಅವರ ಸಮಸ್ಯೆ ಬಗೆಹರಿಸಬೇಕು. 

ಈ ಕಾರ್ಯದಲ್ಲಿ ನಾನು ಈಗ 60–70 ಮಂದಿ ಯುವ ಸಮುದಾಯದವರ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. 150ಕ್ಕೂ ಅಧಿಕ ಸಾಂಸಾರಿಕ ಪ್ರಕರಣಗಳು, 300–400 ವಯೋವೃದ್ಧರನ್ನು ಖಿನ್ನತೆ, ಆತ್ಮಹತ್ಯೆ ಯೋಚನೆ ಪ್ರಕರಣಗಳಿಂದ ಹೊರ ತಂದಿದ್ದೇನೆ. ನನ್ನ ಕೆಲಸದಲ್ಲಿ ಶೇ 95ರಷ್ಟು ಯಶಸ್ವಿಯೂ ಆಗಿದ್ದೇನೆ. 

ನಾನು ನೋಡಿದಂತೆ ಗ್ರಾಮೀಣ ಪ್ರದೇಶದಲ್ಲೇ ಇಂಥ ಯೋಚನೆಗಳು ಹೆಚ್ಚು. ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿರುವುದೂ ಅಲ್ಲಿಯೇ. ಹಾಗಿಯೇ ನಾನು ಎರಡು ಗ್ರಾಮಗಳಲ್ಲಿ ವೈಜ್ಞಾನಿಕವಾದ ಅಧ್ಯಯನವನ್ನೂ ನಡೆಸಿದ್ದೆ. ಆಗಲೂ ನನಗೆ ಗೊತ್ತಾಗಿದ್ದೇನೆಂದರೆ, ಮಹಿಳೆಯರಲ್ಲೇ ಖಿನ್ನತೆ ಹೆಚ್ಚು ಎಂಬುದು. ಪ್ರತಿ ಗ್ರಾಮಗಳಲ್ಲಿ 10 ಮಂದಿ ಅನ್ಯಮನಸ್ಕರು ನಮಗೆ ಸಿಗುತ್ತಾರೆ. ಅದರಲ್ಲಿ 8 ಮಂದಿ ಮಹಿಳೆಯರಿರುತ್ತಾರೆ.  ಈ ಮನೋರೋಗ ನಿವಾರಿಸಲು ಆಶಾ ಕಾರ್ಯಕರ್ತರನ್ನು ಬಳಸಿಕೊಳ್ಳಬಹುದು ಎಂದು ನನಗೆ ಅನಿಸಿದೆ. 

ಇದನ್ನೂ ಓದಿ: ಬದುಕಿನ ಕಷ್ಟಕ್ಕೆ ಆತ್ಮಹತ್ಯೆ ಪರಿಹಾರವಲ್ಲ

ಮಾನಿಸಿಕ ವ್ಯಾಕುಲತೆಯಿಂದ ಬಳಲುತ್ತಿರುವವರಿಗೆ, ಸಾವಿನ ಆಲೋಚನೆಯಲ್ಲಿರುವವರಿಗೆ ನಿಮ್ಮ ಸಲಹೆಗಳೇನು? 

ಯಾರೂ ಕೂಡ ಆತ್ಮಹತ್ಯೆ ಯೋಚನೆ ಮಾಡದೇ, ಬದುಕಿನ ದಾರಿಗಳನ್ನು ಹುಡುಕಬೇಕು. ಇನ್ನೇನು ಇಲ್ಲ.. ನಾನು ಈ ಕ್ಷಣ ಸಾಯಬೇಕು ಎಂದು ಅಂದುಕೊಂಡವರು ಯಾರೊಂದಿಗಾದರೂ ಮಾತನಾಡಿ. ಯಾರೊಂದಿಗಾದರೂ ಜಗಳವಾಡಿ. ಏನಾದರೊಂದು ಕೆಲಸದಲ್ಲಿ ಮಗ್ನರಾಗಿ. ಸಾಯಬೇಕು ಎನಿಸಿದಾಗ ಏನಾದರೂ ಸಾಧನೆ ಮಾಡಬೇಕಲ್ಲ ಎಂದು ಒಂದು ಬಾರಿ ಅಂದುಕೊಳ್ಳಿ. ಅಷ್ಟೇ ಸಾಕು ನಿಮ್ಮ ಜೀವ ನಿಮ್ಮ ಕೈಲಿರುತ್ತದೆ. ಭವಿಷ್ಯ ಬಂಗಾರವಾಗುತ್ತದೆ.

ರಘುನಾಥ ಮೇಷ್ಟ್ರು ಹೇಳಿದ ಕುತೂಹಲಕಾರಿ ಸಂಗತಿಗಳು 

– ಒಂದು ಬಾರಿ ವ್ಯಕ್ತಿಯೊಬ್ಬ ಯಾವುದಾದರೂ ಮಾರ್ಗವಾಗಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದರೆ, ತಾನು ಸಾವಿಗೆ ಯತ್ನಿಸಿದ ಆ ಮಾರ್ಗದ ಬಗ್ಗೆ ಭಯಭೀತನಾಗುತ್ತಾನೆ. ಉದಾಹರಣೆಗೆ ನೀರಿಗೆ ಬಿದ್ದು ಸಾವು ತಂದುಕೊಳ್ಳಬೇಕೆಂದವನು ಆ ಪ್ರಯತ್ನದಲ್ಲಿ ವಿಫಲನಾಗಿ ಬದುಕಿ ಬಂದಿದ್ದೇ ಆದರೆ, ನೀರಿನ ಬಗ್ಗೆ ಆತನಲ್ಲಿ ಭಯ ಹುಟ್ಟುತ್ತದೆ. ನೀರಿನ ಬಳಿಗೆ ಆತ ಹೋಗಲಾರ. 

–ನಾನು ಸಾಯಲು ಯತ್ನಿಸಿದ ದಿನ ನನಗೆ ನನ್ನ ಕನಸು ಮನಸ್ಸಲ್ಲೆಲ್ಲ ಕಾಣುತ್ತಿದ್ದು ರೈಲು ಮಾತ್ರ. ಹಾಗಾಗಿಯೇ ನಾನು ಅಂದು ರೈಲಿಗೆ ಎದುರಾಗಿದ್ದೆ. ನಾನು ಮಾತನಾಡಿಸಿದ ಬಹುತೇಕರೂ ಹೀಗೇ ಹೇಳುತ್ತಾರೆ. ಯಾವುದಾದರು ಒಂದು ಮಾರ್ಗದಲ್ಲಿ ಸಾಯಬೇಕೆಂದು ಕೊಂಡರೆ ಅವರ ಕಣ್ಣ ಮುಂದೆ ಬರುವುದೆಲ್ಲ ಅದೇ ಚಿತ್ರವೇ. 

– ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲವಾದಾಗ ಅವರ ನೆರವಿಗೆ ಬರುವವರು ಕುಟುಂಬಸ್ಥರಿಗಿಂತಲೂ ಹೆಚ್ಚಾಗಿ ಸ್ನೇಹಿತರು. ನಾನು ಕಂಡ ಬಹುತೇಕ ಪ್ರಕರಣಗಳಲ್ಲಿ ಸ್ನೇಹಿತರೇ ಹೆಚ್ಚು ಸಹಾನುಭೂತಿ ತೋರಿದ್ದಾರೆ. ಹಾಗಾಗಿ ಎಂಥದ್ದೇ ಸಮಸ್ಯೆ ಇದ್ದರೂ ಒಂದು ಬಾರಿ ಸ್ನೇಹಿತರೊಂದಿಗೆ ಮಾತನಾಡಬೇಕು. 

– ಗಂಡಸರು ಖಿನ್ನತೆ ಮತ್ತು ಮಾನಸಿಕ ರೋಗದಿಂದ ಹೊರ ಬರುವುದು ಕಡಿಮೆ. ಆದರೆ, ಮಹಿಳೆಯರು ಬಹುಬೇಗ ಅದರಿಂದ ಹೊರ ಬರುತ್ತಾರೆ. ಬದುಕಿನ ಬಗ್ಗೆ ಮಹಿಳೆಯರಲ್ಲಿ ಆಶಾ ಭಾವ ಅಧಿಕ.

(ಸ.ರಘುನಾಥ ಅವರ ಇಮೇಲ್ ವಿಳಾಸ: raghunathamalitata@gmail.com)

ಆತ್ಮಹತ್ಯೆ ಬಗ್ಗೆ ಯೋಚನೆ ಮಾಡುವವರನ್ನು ಅದರಿಂದ ಹೊರಗೆ ತರಬೇಕ್ಕೆಂದೇ ಹಲವು ಸಹಾಯವಾಣಿಗಳು ಕೆಲಸ ಮಾಡುತ್ತಿವೆ. SAHAI(080 - 25497777), AASRA (022 2754 6669), ಸ್ಪಂದನ (8025497777, 65000111) ಅವುಗಳಲ್ಲಿ ಪ್ರಮುಖವಾದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು