ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಯೆಟ್ನಾಂನಲ್ಲಿ ಮಿಂಚುತ್ತಿರುವ ರೊಟ್ಟಿಗೊಡದ ಯೋಗಪ್ರತಿಭೆ

'ಉಚಿತವಾಗಿ ಸಿಗುವ ವಸ್ತುವಿಗಿಂತ ಬೆಲೆ ತೆತ್ತು ಪಡೆಯುವುದಕ್ಕೇ ಗೌರವ ಜಾಸ್ತಿ'
Last Updated 21 ಜೂನ್ 2019, 5:48 IST
ಅಕ್ಷರ ಗಾತ್ರ

ಮಾನವನ ದೇಹದ ನರನಾಡಿಗಳಲ್ಲಿ ಹೊಸ ಚೈತನ್ಯ ನೀಡಬಲ್ಲದು ಯೋಗ. ಇಂದು ಜಗತ್ತಿನಾದ್ಯಂತ ವಿಸ್ತರಿಸಿಕೊಂಡಿರುವ ಯೋಗವು ಕೆಲವರಿಗೆ ಆರೋಗ್ಯದ ಆಗರ. ಕೆಲವರಿಗೆ ಜೀವನೋಪಾಯದ ಮಾರ್ಗ. ಜಗತ್ತಿನಾದ್ಯಂತ ಭಾರತೀಯ ಯೋಗ ಶಿಕ್ಷಕರಿಗೆ ಬೇಡಿಕೆಯಿದೆ. ಜೂನ್ 21ಕ್ಕೆ ವಿಶ್ವವೇ ಯೋಗದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ವಿಯೆಟ್ನಾಂ ದೇಶದಲ್ಲಿ ತಮ್ಮ ಪ್ರತಿಭೆ ಹರಡುತ್ತಿರುವ ಬೈಲಬಸಪ್ಪ ಕಬ್ಬೆರಹಳ್ಳಿ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಬೈಲಬಸಪ್ಪ ಅವರ ಹಳ್ಳಿಯ ಹೆಸರು ರೊಡ್ಡಿಗೊಡ. ಧಾರವಾಡ ಜಿಲ್ಲೆ, ಕುಂದಗೋಳ ತಾಲ್ಲೂಕಿನ ಪುಟ್ಟ ಹಳ್ಳಿ ಇದು.

* ನಿಮ್ಮ ಬಾಲ್ಯ, ವಿದ್ಯಾಭ್ಯಾಸದ ಬಗ್ಗೆ ಹೇಳಿ?

ಚಿಕ್ಕ ವಯಸ್ಸಿನಲ್ಲೇ ತಂದೆ–ತಾಯಿ ಕಳೆದುಕೊಂಡು, ಚಿಕ್ಕಪ್ಪನ ಆಶ್ರಯದಲ್ಲಿ ಹೈಸ್ಕೂಲ್, ಐಟಿಐ ಓದಿದೆ. ಬೆಂಗಳೂರಲ್ಲಿ ಒಂದು ವರ್ಷ ಉದ್ಯೋಗ ಮುಗಿಸಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಯೋಗಾಭ್ಯಾಸ ಬಿಟ್ಟಿರಲಿಲ್ಲ. ಯೋಗದ ಬಗೆಗಿನ ನನ್ನ ಆಸಕ್ತಿ ಕಂಡು, ಹುಬ್ಬಳ್ಳಿಯ ರವೀಂದ್ರ ಭಟ್ಟ ಮತ್ತು ಸರಸ್ವತಿ ಭಟ್ಟ ದಂಪತಿಗಳು ನನ್ನನ್ನು ನಗರದ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಕ್ಕೆ ಸೇರಿಸಿದರು. ಅವರೇ ಸಂಪೂರ್ಣ ವಿದ್ಯಾಭ್ಯಾಸದ ಹೊಣೆ ಹೊತ್ತರು. ಅವರಿಗೆ ನಾನು ಚಿರಋಣಿ.ಎಂಟನೇ ತರಗತಿಯಿಂದ ಯೋಗಾಭ್ಯಾಸ ಮಾಡುತ್ತಿದ್ದೆ. ಮಂಗಳೂರು ವಿಶ್ವವಿದ್ಯಾನಿಲಯದ ಮಾನವಪ್ರಜ್ಞೆ ಮತ್ತು ಯೋಗವಿಜ್ಞಾನ ವಿಭಾಗದಲ್ಲಿ ಎಂಎಸ್‌ಸಿ ಪದವಿ ಪಡೆದೆ.

* ಯೋಗದ ಬಗ್ಗೆ ನಿಮಗೆ ಆಸಕ್ತಿ ಹುಟ್ಟಿದ್ದು ಹೇಗೆ?

ನನ್ನ ಯೋಗ ಗುರುಶಿವಾನಂದ ಕೆಲೂರ್. ನಾನು ಎಂಟನೇ ತರಗತಿಯಲ್ಲಿದ್ದಾಗ ಶಾಲೆಯಲ್ಲಿ ಅವರು ಒಂದು ತಿಂಗಳ ಯೋಗ ಶಿಬಿರ ಆಯೋಜಿಸಿದ್ದರು. ಆದರೆ ಶಿಬಿರಕ್ಕೆ ₹50 ಶುಲ್ಕ ನೀಡುವಷ್ಟು ಹಣ ನನ್ನ ಹತ್ತಿರ ಇರಲಿಲ್ಲ. ಯೋಗ ತರಗತಿ ಮುಗಿಸಿ ಬಂದ ವಿದ್ಯಾರ್ಥಿಗಳು ನಮ್ಮ ಹಾಸ್ಟೆಲ್‌ನಲ್ಲಿ ಮತ್ತೆ ಅಭ್ಯಾಸ ಮಾಡುತ್ತಿದ್ದರು. ಅವರನ್ನು ನೋಡಿ ಯೋಗ ಕಲಿತೆ. ಅವರಿಗಿಂತ ಚೆನ್ನಾಗಿಯೇ ಯೋಗ ಮಾಡುತ್ತಿದ್ದ ನಾನು ತಿಂಗಳ ಕೊನೆಯಲ್ಲಿ ಎರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಪ್ರಶಸ್ತಿ ಪಡೆದುಕೊಂಡೆ. ಆ ಯೋಗ ಶಿಬಿರವೇ ನನಗೆ ಪ್ರೇರಣೆ.

* ಯೋಗ ಸಾಧನೆಯ ಹಾದಿಯ ಬಗ್ಗೆ ಹೇಳಿ?

ಸ್ನಾತಕೋತ್ತರ ಪದವಿ ಕಲಿಯುತ್ತಿದ್ದಾಗ ಕಾಲೇಜು ವತಿಯಿಂದ ಮಲೇಷಿಯಾ, ಥಾಯ್ಲೆಂಡ್, ನೇಪಾಳದಲ್ಲಿ ಯೊಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಒಲಂಪಿಕ್ ಯೋಗ, ಆರ್ಟಿಸ್ಟಿಕ್ ಯೋಗ, ಆರ್ಟಿಸ್ಟಿಕ್ ಫೇರ್ ಯೋಗ ಸ್ಪರ್ಧೆಗಳಲ್ಲಿ ಬಂಗಾರದ ಪದಕ ಪಡೆದಿದ್ದೇನೆ. ಖಾನ್ ಫೆಡರೇಷನ್ ಆಫ್ ಇಂಡಿಯಾದ ವತಿಯಿಂದ ‘ಏಷಿಯನ್ ಸಿನೀಯರ್ ಚಾಂಪಿಯನ್ ಶಿಪ್’ನಲ್ಲಿ ಬಂಗಾರದ ಪದಕ ಪಡೆದಿದ್ದೇನೆ. ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರದಿಂದ ‘ಸೋಲಿಗ‘ ಗಿರಿಜನ ಸಮುದಾಯಕ್ಕೆ ಯೋಗ ತರಬೇತಿ ಸೇರಿದಂತೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 40ಕ್ಕೂ ಹೆಚ್ಚು ಉಚಿತ ಯೋಗ ತರಬೇತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇನೆ.

* ಈಗ ನೀವು ಏನು ಮಾಡುತ್ತಿದ್ದೀರಿ ?
ವಿಯೆಟ್ನಾಂ ದೇಶದ, ಬಿನ್ ವಾ ನಗರದ ‘ಸಿದ್ದಿ ಯೋಗ ಕೇದ್ರದಲ್ಲಿ‘ ಒಂದು ವರ್ಷದಿಂದ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೆನೆ. ಇನ್ನು ಕೆಲವೇ ದಿನಗಳಲ್ಲಿ ಇದೇ ನಗರದಲ್ಲಿ ನನ್ನದೇ ಸ್ವಂತ ಯೋಗ ಕೇಂದ್ರವನ್ನು ಆರಂಭಿಸುತ್ತೇನೆ.

* ಯೋಗದಿಂದ ನಿಮಗೆ ಯಾವ ರೀತಿ ಉಪಯೋಗವಾಗಿದೆ?

ನನಗೆ ಚಿಕ್ಕಂದಿನಿಂದಲೂಸಿಟ್ಟು ಜಾಸ್ತಿಇತ್ತು. ಆದರೆ ಯೋಗದಿಂದ ಅದಕ್ಕೆ ಪರಿಹಾರ ಕಂಡುಕೊಂಡಿದ್ದೇ. ಮನುಷ್ಯನಿಗೆ ಯಾವುದು ಬೇಡವೋ ಅವನ್ನೆಲ್ಲ ನನ್ನಿಂದ ತೆಗೆದುಹಾಕಿ, ಶಿಕ್ಷಣದಲ್ಲಿ ಉತ್ತಮ ಅಂಕ ಗಳಿಸಲು ಮತ್ತು ಒಳ್ಳೆಯ ಹೆಸರು ಪಡೆದು ನಾನು ಈ ಹಂತಕ್ಕೆ ಬರಲು ಯೋಗವೇ ಕಾರಣ. ಯೋಗವು ಭಾರತೀಯರು ಜಗತ್ತಿಗೆ ನೀಡಿದ ಒಂದು ದೊಡ್ಡ ಉಡುಗೊರೆ. ಯೋಗಾಭ್ಯಾಸವು ಆರೋಗ್ಯಪೂರ್ಣ ಮತ್ತು ಪರಿಪೂರ್ಣ ಮನುಷ್ಯನನ್ನು ರೂಪಿಸುತ್ತದೆ. ಹಾಗಾಗಿ ಯೋಗವು ವಿಜ್ಞಾನವೂ ಹೌದು, ಕಲೆಯೂ ಹೌದು. ಅಷ್ಟಾಂಗಯೋಗವನ್ನು ಯಾರು ಪರಿಪಾಲನೆ ಮಾಡುತ್ತಾರೋ ಅವರು ಒಬ್ಬ ಪರಿಪೂರ್ಣ ಮನುಷ್ಯರಾಗುತ್ತಾರೆ.

* ವಿಯೆಟ್ನಾಂನಲ್ಲಿ ಯೋಗದ ಪ್ರಭಾವ ಹೇಗಿದೆ?

ಭಾರತೀಯರಿಗೂ ಮತ್ತು ಇಲ್ಲಿಯವರಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿಯ ಜನರು ‘Yoga it's a part of our Life" ಎನ್ನುತ್ತಾರೆ. ಹೆಚ್ಚಿನ ಜನರು ಪ್ರತಿನಿತ್ಯ ಒಂದು ಗಂಟೆ ಯೋಗಕ್ಕೆ ಮೀಸಲಿಟ್ಟಿದ್ದಾರೆ. ಅದರಲ್ಲಿ ಮಹಿಳೆಯರ ಪ್ರಮಾಣ ಹೆಚ್ಚು. ಇಲ್ಲಿನ ಶೇ 90 ರಷ್ಟು ಯೋಗ ಶಿಕ್ಷಕರು ಭಾರತೀಯರೇ ಆಗಿದ್ದಾರೆ. ಈ ದೇಶದಲ್ಲಿ 5ನೇ ತರಗತಿಯಿಂದ ಯೋಗವನ್ನು ಕಡ್ಡಾಯಗೊಳಿಸಲಾಗಿದೆ. ಯೋಗವನ್ನು ಒಂದು ಕ್ರೀಡೆ ಎಂದು ಪರಿಗಣಿಸುತ್ತಾರೆ. ಬಹುತೇಕ ಜನಸಾಮಾನ್ಯರಿಗೆ ಯೋಗದ ಬಗ್ಗೆ ಅರಿವಿದೆ. ಜೂನ್ 21ರಂದು ಯೋಗ ದಿನದ ಪ್ರಯುಕ್ತ ಇಡಿ ದೇಶಾದ್ಯಂತ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಸರ್ಕಾರವೇ ಆಯೋಜಿಸಿದೆ.

* ಯೋಗದಿಂದ ನಮಗೆ ಏನಾದರೂ ಲಾಭವಿದೆಯೇ?

ಭಾರತೀಯ ಯುವಕರು ಜಿಮ್‌ ಸಂಸ್ಕೃತಿಗೆ ಮಾರುಹೋಗಿದ್ದಾರೆ, ಜಿಮ್‌ನಿಂದ ಇಳಿವಯಸ್ಸಿನಲ್ಲಿ ಆರೋಗ್ಯ ಸಮಸ್ಯೆ ಬರಬಹುದು, ಆದರೆ ಯೋಗದಿಂದ ಅಂತಹ ಯಾವುದೇ ಸಮಸ್ಯೆ ಎದುರಾಗುವದಿಲ್ಲ. ಯೋಗದ ಮೂಲಕ ದೇಹವನ್ನು ಹುರಿಗೊಳಿಸಿ ಸದೃಢವಾಗಿಸಲು ಸಾಧ್ಯ. ಆಸನ ದೈಹಿಕವಾಗಿ ಸದೃಢಗೊಳಿಸಿದರೆ, ಪ್ರಾಣಾಯಾಮ–ಧ್ಯಾನಗಳು ನಮ್ಮನ್ನು ಮಾನಸಿಕವಾಗಿ ಸದೃಢಗೊಳಿಸುತ್ತವೆ. ಭಾರತ ದೇಶದಲ್ಲಿ ಯೋಗದ ಸ್ಥಿತಿ ‘ಹಿತ್ತಲ ಗಿಡ ಮದ್ದಲ್ಲ’ ಎನ್ನುವಂತೆ ಆಗಿದೆ. ಹಲವು ಭಾರತೀಯಲ್ಲಿ ಈ ಕುರಿತು ಅಸಡ್ಡೆ ಇದೆ. ಇನ್ನಾದರೂ ನಮ್ಮ ದೇಶದ ಜನರು ವೈಯಕ್ತಿಕ ಆರೋಗ್ಯದ ಕಾಳಜಿ ವಹಿಸುವುದು ಒಳಿತು.

* ಯೋಗ ಇಂದು ವಾಣಿಜ್ಯ ರೂಪ ಪಡೆದು ಕೊಳ್ಳುತ್ತಿದೆ, ಅದು ಸರಿಯೋ ತಪ್ಪೋ?

ಯೋಗ ವಾಣಿಜ್ಯ ರೂಪ ಪಡೆದುಕೊಳ್ಳಲು ಇತ್ತಿಚೆಗೆ ಅದಕ್ಕೆ ಸಿಗುತ್ತಿರುವ ಜನಪ್ರೀಯತೆಯೆ ಕಾರಣ. ‘ಕೆಲವರಿಗೆ ಅದು ಆರೋಗ್ಯವಾದರೆ, ಇನ್ನು ಕೆಲವರಿಗೆ ಅದೇ ಜೀವನೋಪಾಯದ ಮಾರ್ಗ. ಕೆಲವರಿಗೆ ಧ್ಯೇಯ. ಉಚಿತವಾಗಿ ಸಿಗುವ ವಸ್ತುವಿಗಿಂತ ಬೆಲೆ ತೆತ್ತು ಪಡೆಯುವುದಕ್ಕೇ ಗೌರವ ಜಾಸ್ತಿ, ಹಾಗಾಗಿ ಯೋಗ ಕಮರ್ಷಿಯಲ್ ಆಗುವುದು ತಪ್ಪಲ್ಲ. ಆದರೆ ಅದು ಅತಿಯಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT