ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಇಂಡಿಯಾ: ವರ ಬೇಕಾಗಿದ್ದಾನೆ!

ಕಂಪನಿಯ ಷೇರುಗಳನ್ನು ಕಾಲಮಿತಿಯಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು
Last Updated 31 ಜನವರಿ 2020, 19:45 IST
ಅಕ್ಷರ ಗಾತ್ರ

‘ಏರ್ ಇಂಡಿಯಾ’ ಎಂಬ ವಧುವಿಗೆ ಶ್ರೀಮಂತ ವರ ಬೇಕು ಎನ್ನುವ ಜಾಹೀರಾತು ಪ್ರಕಟವಾಗಿರುವುದು ಇದು ಮೂರನೆಯ ಬಾರಿ! ಹಿಂದಿನ ಎರಡು ಪ್ರಯತ್ನಗಳು ಫಲ ನೀಡಿರಲಿಲ್ಲ. ಕೈಕಟ್ಟಿಹಾಕುವಂತಹ ನಿಬಂಧನೆಗಳು ಹಾಗೂ ‘ವರದಕ್ಷಿಣೆ’ಯ ಬಯಕೆಯು ವರನ ಕಡೆಯವರನ್ನು ಬೆದರಿಸಿದ್ದವು. ಈ ವಧುವನ್ನು ಮದುವೆಯಾಗಲು ಸೂಕ್ತ ವ್ಯಕ್ತಿಗಳು ಸಾಲುಗಟ್ಟಿ ನಿಲ್ಲುತ್ತಾರೆ, ವಧುವಿನ ಎಲ್ಲ ಸಾಲಗಳನ್ನು ಅವರೇ ಹೊತ್ತುಕೊಳ್ಳುತ್ತಾರೆ ಎಂದು ಕೇಂದ್ರ ಸರ್ಕಾರ ಭಾವಿಸಿತ್ತು. ಆದರೆ, ಹಾಗೆ ಭಾವಿಸಿದ್ದು ತಪ್ಪು, ಏರ್‌ ಇಂಡಿಯಾದ ಮದುವೆಯನ್ನು ಬಹಳ ಹಿಂದೆಯೇ ಮಾಡಿಸಬೇಕಿತ್ತು ಎಂದು ಈಗ ಅವರಿಗೆ ಅರಿವಾಗಿದೆ. ವರ್ಷ ಕಳೆದಂತೆಲ್ಲಾ ಈ ವಿಮಾನಯಾನ ಕಂಪನಿಯು ಖರೀದಿದಾರರ ಕಣ್ಣಲ್ಲಿ ಆಕರ್ಷಣೆ ಕಳೆದುಕೊಳ್ಳುತ್ತಿದೆ.

ಹೊಸ ಪ್ರಸ್ತಾವದ ಅನ್ವಯ, ಸರ್ಕಾರವು ಈ ವಿಮಾನಯಾನ ಕಂಪನಿಯ ಶೇಕಡ 100ರಷ್ಟು ಷೇರುಗಳನ್ನು ಮಾರಾಟ ಮಾಡಲಿದೆ. ಏರ್‌ ಇಂಡಿಯಾ ಜೊತೆಯಲ್ಲೇ ‘ಏರ್‌ ಇಂಡಿಯಾ ಎಕ್ಸ್‌ಪ್ರೆಸ್’ ಹಾಗೂ ಇತರ ಕೆಲವು ಆಸ್ತಿಗಳು ಕೂಡ ಖರೀದಿದಾರರಿಗೆ ಸಿಗಲಿವೆ. ಆದರೆ, ಮುಂಬೈನಲ್ಲಿ ಇರುವ ಏರ್‌ ಇಂಡಿಯಾ ಕಟ್ಟಡ ಸೇರಿದಂತೆ ದೇಶದ ವಿವಿಧೆಡೆ ಇರುವ ಕೆಲವು ರಿಯಲ್ ಎಸ್ಟೇಟ್ ಆಸ್ತಿಗಳು ಈ ಖರೀದಿಯ ಭಾಗವಲ್ಲ. ಸಂಸ್ಥೆಗೆ ಇರುವ ₹ 23 ಸಾವಿರ ಕೋಟಿ ಸಾಲವು ಖರೀದಿಯ ಭಾಗ. ಕಂಪನಿಯ ಆಸ್ತಿಗಳ ಮೌಲ್ಯ ಕೂಡ ಇಷ್ಟೇ ಮೊತ್ತದ್ದು ಎಂಬ ಮಾತಿದೆ.

ಕಂಪನಿ ಹೊಂದಿರುವ ಸಾಲದ ಮೊತ್ತ ನಿರ್ದಿಷ್ಟವಾಗಿದೆ. ಆದರೆ, ಆಸ್ತಿಯ ಮೌಲ್ಯದ ವಿಚಾರದಲ್ಲಿ ಇದೇ ಮಾತು ಹೇಳಲಾಗದು. ಬಹುತೇಕ ವಿಮಾನಗಳು ಗುತ್ತಿಗೆ ಆಧಾರದಲ್ಲಿ ಪಡೆದಿರುವಂಥವು. ಅಲ್ಲದೆ, ವಿಮಾನಗಳೂ ಸೇರಿದಂತೆ ವರ್ಷಗಳ ಹಿಂದೆ ಖರೀದಿಸಿದ ಇತರ ಹಲವು ಆಸ್ತಿಗಳ ಮೌಲ್ಯ ಈಗ ಪ್ರಶ್ನಾರ್ಹ. ಕೆಲವು ಸಂದರ್ಭಗಳಲ್ಲಿ ಭ್ರಷ್ಟಾಚಾರ ನಡೆದ ಆರೋಪಗಳಿದ್ದು, ಸಿಬಿಐ ಹಾಗೂ ಇತರ ಸಂಸ್ಥೆಗಳು ಆ ಕುರಿತು ತನಿಖೆ ನಡೆಸುತ್ತಿವೆ. ಹಾಗಾಗಿ, ಖರೀದಿಗೆ ಬಿಡ್ ಸಲ್ಲಿಸುವವರು ಕಡಿಮೆ ಅವಧಿಯಲ್ಲಿ ಕಂಪನಿಯ ವಾಸ್ತವ ಮೌಲ್ಯವನ್ನು ಅಂದಾಜಿಸುವುದು ಬಹಳ ಕಷ್ಟದ ಕೆಲಸ. ವಿಚಾರಣೆಗಳಿಗೆ ಸರ್ಕಾರವೇ ಆದೇಶಿಸಿದ್ದ ಕಾರಣ, ಈ ಎಲ್ಲ ಆತಂಕಗಳನ್ನು ಅದು ನಿರ್ಲಕ್ಷಿಸಲು ಆಗದು.

ಖರೀದಿ ಮಾಡುವವರು ಒಪ್ಪಿಕೊಳ್ಳಬೇಕಿರುವ ಷರತ್ತುಗಳಲ್ಲಿ ಬದಲಾವಣೆ ತರಲು ಈಗಲೂ ಅವಕಾಶ ಇದೆ. ಸಲಹೆಗಳಿಗೆ ತಾನು ಮುಕ್ತವಾಗಿ ಇದ್ದೇನೆ ಎಂದು ವಿಮಾನಯಾನ ಸಚಿವಾಲಯ ಹೇಳಬಹುದು. ಈ ವಿಮಾನ
ಯಾನ ಕಂಪನಿಯ ಆಸ್ತಿಯ ಮೌಲ್ಯವನ್ನು ಅಂದಾಜಿಸುವುದು ಸುಲಭದ ಕೆಲಸವಲ್ಲ. ಹಾಗಾಗಿ, ಈ ಕಂಪನಿಯನ್ನು ‘ಶೂನ್ಯ ಸಾಲ’ದ ಸ್ಥಿತಿಯಲ್ಲಿ ಮಾರಾಟ ಮಾಡುವುದಿದ್ದರೂ, ಖರೀದಿದಾರರಿಗೆ ಸೂಕ್ತ ರೀತಿಯಲ್ಲಿ ಪರಾಮರ್ಶೆ ನಡೆಸಲು ಅನುಕೂಲ ಕಲ್ಪಿಸಿಕೊಡಬೇಕು. ಆಗಮಾತ್ರ ತಾವು ಖರೀದಿ ಮಾಡುತ್ತಿರುವ ಕಂಪನಿಯ ಬಗ್ಗೆ ಅವರಿಗೆ ವಿಶ್ವಾಸ ಮೂಡುತ್ತದೆ. ಜೆಟ್‌ ಏರ್‌ವೇಸ್‌ನ ಮಾರಾಟ ಯತ್ನ ವಿಫಲವಾಗಿದ್ದು ಏರ್‌ ಇಂಡಿಯಾ ವಿಚಾರದಲ್ಲಿ ಒಂದು ಪಾಠವಾಗಬಹುದು. ಏರ್‌ ಇಂಡಿಯಾ ಕಂಪನಿಯು ತನ್ನ ಹೊಳಪು ಕಳೆದುಕೊಂಡಿದ್ದರೂ, ಆ ಬ್ರ್ಯಾಂಡ್‌ ಬಗ್ಗೆ ಈಗಲೂ ಪ್ರೀತಿ ಇದೆ. ಸರಿಯಾದ ಹೂಡಿಕೆದಾರ ದೊರೆತರೆ, ಈ ಕಂಪನಿಯ ಶಕ್ತಿಯನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಅವಕಾಶವಿದೆ.

ದೇಶದೊಳಗಿನ ಹಾಗೂ ವಿದೇಶಗಳ ನೂರೆಂಟು ಸ್ಥಳಗಳಿಗೆ ವಿಮಾನ ಸಂಪರ್ಕ, ವಿಮಾನ ನಿಲ್ದಾಣಗಳಲ್ಲಿ ಸ್ಥಳಾವಕಾಶ ಪಡೆದಿರುವುದು, ಎಂಜಿನಿಯರಿಂಗ್‌ ವ್ಯವಸ್ಥೆ, ಮೂಲಸೌಕರ್ಯ, ತರಬೇತಿ ಪಡೆದ ಎಂಜಿನಿಯರ್‌ಗಳು ಹಾಗೂ ವಿಮಾನ ಸಿಬ್ಬಂದಿ, ದ್ವಿಪಕ್ಷೀಯ ಹಕ್ಕುಗಳು ಹಾಗೂ ಆ ಹಕ್ಕುಗಳ ನಿರಂತರ ರಕ್ಷಣೆಗೆ ಇರುವ ಭರವಸೆ, ಅಂದಾಜು ₹ 25 ಸಾವಿರ ಕೋಟಿಗಳಷ್ಟು ಇರುವ ಆದಾಯ (ಕಂಪನಿಯ ಆಡಳಿತ ನಿರ್ವಹಣೆ ಚೆನ್ನಾಗಿದ್ದರೆ ಈ ಆದಾಯವನ್ನು ಕಡಿಮೆ ಅವಧಿಯಲ್ಲಿ ದ್ವಿಗುಣಗೊಳಿಸುವ ಅವಕಾಶ ಇದೆ)... ಇಷ್ಟೆಲ್ಲ ಇರುವ ಈ ಕಂಪನಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿದರೆ, ಮೂರು ಅಥವಾ ನಾಲ್ಕು ವರ್ಷಗಳ ಅವಧಿಯಲ್ಲಿ ಕಂಪನಿಯ ಮೌಲ್ಯವನ್ನು ₹ 50 ಸಾವಿರ ಕೋಟಿಗೆ ನಿಗದಿ ಮಾಡಲು ಅವಕಾಶವಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಬಿಡ್‌ಗಳು ಬರುವಂತೆ ಮಾಡಬಹುದಾದ ಕೆಲವು ಸಲಹೆಗಳು ಇಲ್ಲಿವೆ: ಮೊದಲನೆಯದು, ಬಿಡ್ಡಿಂಗ್ ಪ್ರಕ್ರಿಯೆಗೆ ಸಂಬಂಧಿಸಿದ್ದು. ಇದು ಜಾಗತಿಕ ಮಟ್ಟದ, ಮುಕ್ತವಾದ ಹಾಗೂ
ಪಾರದರ್ಶಕವಾದ ಎಲೆಕ್ಟ್ರಾನಿಕ್ ಟೆಂಡರ್ ಆಗಿರಬೇಕು. ಅಂತಿಮ ಸುತ್ತಿನಲ್ಲಿ ಉಳಿಯುವ ಬಿಡ್ಡರ್‌ಗಳು, ಟೆಂಡರ್‌ನಲ್ಲಿ ಸೂಚಿಸಿದ ಹಣವನ್ನು ಮೊದಲೇ ಠೇವಣಿ ಇರಿಸಬೇಕು. ಬಿಡ್ಡಿಂಗ್‌ ಪ್ರಕ್ರಿಯೆಯು 6ರಿಂದ 8 ತಾಸು
ಗಳಲ್ಲಿ ಪೂರ್ಣಗೊಳ್ಳಬೇಕು. ಅಕ್ರಮಗಳಿಗೆ ದಾರಿ ಮಾಡಿಕೊಡುವ ‘ಮುಚ್ಚಿದ ಲಕೋಟೆಯ’ ಬಿಡ್ಡಿಂಗ್ ಇದಾಗ
ಬಾರದು. ಈ ವ್ಯವಸ್ಥೆಯನ್ನು ನೆಚ್ಚಿಕೊಂಡರೆ ಅತ್ಯುತ್ತಮ ಮೊತ್ತ ಸಿಗುವುದಿಲ್ಲ. ಇತರ ಬಿಡ್ಡರ್‌ಗಳು ಘೋಷಿಸಿದ ಮೌಲ್ಯವನ್ನು ಕಂಡು, ತಮ್ಮ ಮೌಲ್ಯವನ್ನು ಹೆಚ್ಚಿಸುವ ಅವಕಾಶ ಪ್ರತಿ ಬಿಡ್ಡರ್‌ಗೂ ಇರಬೇಕು. ಏರ್‌ ಇಂಡಿಯಾ ಕಂಪನಿಯು ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಬಿಟ್ಟುಕೊಟ್ಟಿಲ್ಲವಾದ ಕಾರಣ, ಈ ಕಂಪನಿಯ ನಿಜವಾದ ಮೌಲ್ಯವನ್ನು ಕಂಡುಕೊಳ್ಳಲು ಇರುವ ಮಾರ್ಗ ಇದೊಂದೇ. ಕೋರಸ್ ಸ್ಟೀಲ್‌ ಕಂಪನಿಯನ್ನು ಟಾಟಾದವರು ಖರೀದಿ ಮಾಡಿದ್ದು ಇದೇ ರೀತಿಯಲ್ಲಿ.

ಏರ್‌ ಇಂಡಿಯಾ ಖರೀದಿಗೆ ಆಸಕ್ತಿ ತೋರಿದವರ ಹೆಸರುಗಳು ಅಂತಿಮಗೊಂಡ ನಂತರ, ಕೇಂದ್ರ ಸರ್ಕಾರ ಟೆಂಡರ್–ಪೂರ್ವ ಸಭೆಯೊಂದನ್ನು ನಡೆಸಬೇಕು. ಟೆಂಡರ್ ದಾಖಲೆಗಳನ್ನು ಅಂತಿಮಗೊಳಿಸುವ ಮುನ್ನ ಪ್ರತಿ ಬಿಡ್ಡರ್‌ನಲ್ಲಿರುವ ಆತಂಕಗಳಿಗೆ ಕಿವಿಗೊಡಬೇಕು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಿಡ್ಡರ್‌ಗಳನ್ನು ಸೆಳೆಯಲು ಇರುವ ದಾರಿ ಇದು.

ಏರ್‌ ಇಂಡಿಯಾದಲ್ಲಿ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ
ವರನ್ನೂ ಗಣನೆಗೆ ತೆಗೆದುಕೊಂಡರೆ ಸಿಬ್ಬಂದಿ ಸಂಖ್ಯೆ 30 ಸಾವಿರ ಮೀರಬಹುದು. ಪ್ರತಿ ವಿಮಾನಕ್ಕೂ ಕನಿಷ್ಠ ಸಂಖ್ಯೆಯಲ್ಲಿ ಮಾತ್ರ ಸಿಬ್ಬಂದಿ ಇರಿಸಿಕೊಳ್ಳುವ ಅವಕಾಶವನ್ನು ಹೊಸ ಮಾಲೀಕರಿಗೆ ನೀಡಬೇಕು. ಇಂಡಿಗೊ ಕಂಪನಿಯಲ್ಲಿ ಪ್ರತಿ ವಿಮಾನಕ್ಕೆ 70 ಸಿಬ್ಬಂದಿ ಇದ್ದರೆ, ಏರ್‌ ಇಂಡಿಯಾದಲ್ಲಿ 470 ಸಿಬ್ಬಂದಿ ಇದ್ದಾರೆ!

ಏರ್‌ ಇಂಡಿಯಾದಲ್ಲಿ ಇರುವ ನುರಿತ, ತರಬೇತಿ ಪಡೆದ ಪೈಲಟ್‌ಗಳು, ಎಂಜಿನಿಯರ್‌ಗಳು, ಗಗನಸಖಿ
ಯರು ಸೇರಿದಂತೆ ವಿಮಾನದ ಇತರ ಸಿಬ್ಬಂದಿ ಹೊಸ ಆಡಳಿತ ವ್ಯವಸ್ಥೆಗೆ ಖಂಡಿತ ಬೇಕಾಗುತ್ತಾರೆ. ಆದರೆ ಈ ವಿಚಾರದಲ್ಲಿ ಹೊಸ ಆಡಳಿತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಆಗ, ಈ ಕಂಪನಿಯನ್ನು ಖರೀದಿಸು
ವವರು ವಿಮಾನಯಾನದ ಮೇಲೆ ಒತ್ತು ನೀಡಲು ಸಾಧ್ಯವಾಗುತ್ತದೆ. ಏರ್‌ ಇಂಡಿಯಾದ ಈಗಿನ ಸಿಬ್ಬಂದಿ ಸಂಖ್ಯೆ ಗಮನಿಸಿದರೆ, ಯಾರೂ ಬಿಡ್‌ ಸಲ್ಲಿಸಲು ಮುಂದಾಗುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು.

ಪರಿಗಣಿಸಬೇಕಾದ ಕೊನೆಯ ಸಂಗತಿಯೊಂದು ಇದೆ. ಏರ್‌ ಇಂಡಿಯಾ ಕಂಪನಿಯನ್ನು ಖರೀದಿ ಮಾಡುವವರು, ಖರೀದಿಸಿದ 36 ತಿಂಗಳುಗಳಲ್ಲಿ ಅದರ ಷೇರುಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂಬ ಷರತ್ತು ವಿಧಿಸಬೇಕು. ಅದರಲ್ಲಿ ಭಾರತದ ಪ್ರಜೆಗಳು ಕನಿಷ್ಠ ಎಷ್ಟು ಪ್ರಮಾಣದ ಷೇರು ಹೊಂದಿರಬೇಕು ಎಂಬುದನ್ನು ನಿಗದಿ ಮಾಡಬೇಕು. ಆಗ ಇದು ‘ರಾಷ್ಟ್ರೀಯ ವಿಮಾನಯಾನ’ ಸಂಸ್ಥೆಯೆಂಬ ಪ್ರೀತಿಯನ್ನು ಉಳಿಸಿಕೊಳ್ಳುತ್ತದೆ. ‘ದೇಶದ ಆಸ್ತಿಯನ್ನು ಮಾರಾಟ ಮಾಡಲಾಗುತ್ತಿದೆ’ ಎಂಬ ಆಧಾರವಿಲ್ಲದ ಆತಂಕವನ್ನು ಆ ಮೂಲಕ ದೂರ ಮಾಡಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT