ಸೋಮವಾರ, ಆಗಸ್ಟ್ 2, 2021
26 °C
ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಕಾರ್ಮಿಕರು ಹಾಗೂ ಮಾಲೀಕರ ಹಿತ ಪರಸ್ಪರ ಪೂರಕವಾಗಿರಲಿ

ಅಜೀಂ ಪ್ರೇಮ್‌ಜಿ ಬರಹ | ಇನ್ನಷ್ಟು ಮಾನವೀಯ ಸಮಾಜ ಕಟ್ಟೋಣವೇ?

ಅಜೀಂ ಪ್ರೇಮ್‌ಜಿ Updated:

ಅಕ್ಷರ ಗಾತ್ರ : | |

Prajavani

ಚಲಿಸುತ್ತಿದ್ದ ರೈಲು ಹದಿನಾರು ಜನ ಯುವಕರನ್ನು ಆಹುತಿ ತೆಗೆದುಕೊಂಡಿತು. ಜೀವನೋಪಾಯ ಕಳೆದುಕೊಂಡ ಲಕ್ಷಾಂತರ ಇತರರಂತೆ, ಈ ಯುವಕರು ಕೂಡ ಹಸಿವಿನಿಂದ ಕಂಗೆಟ್ಟಿದ್ದರು. ಹಾಗಾಗಿ, ನೂರಾರು ಕಿ.ಮೀ. ದೂರದಲ್ಲಿದ್ದ ತಮ್ಮ ಮನೆಗಳಿಗೆ ನಡೆದುಕೊಂಡೇ ಹೋಗೋಣ ಎಂದು ತೀರ್ಮಾನಿಸಿದ್ದ ಇವರು, ರೈಲು ಹಳಿಯ ಮೇಲೆ ಮಲಗಿದ್ದರು. ಲಾಕ್‌ಡೌನ್‌ ಅವಧಿಯಲ್ಲಿ ರೈಲು ಸಂಚಾರ ಇರುವುದಿಲ್ಲ ಎಂದು ಅವರು ಭಾವಿಸಿದ್ದರು. ಸಾಂಕ್ರಾಮಿಕವನ್ನು ತಡೆಯಲು ಒಂದಲ್ಲ ಒಂದು ಬಗೆಯಲ್ಲಿ ಲಾಕ್‌ಡೌನ್‌ ಅಗತ್ಯವಿತ್ತು. ಆದರೆ, ಈ ಬಗೆಯ ದುರಂತಗಳನ್ನು ಕ್ಷಮಿಸಲಾಗದು.


ಅಜೀಂ ಪ್ರೇಮ್‌ಜಿ

‘ಕ್ಷಮಿಸಲಾಗದು’ ಎಂಬ ಪದವನ್ನು ನಾನು ಹಗುರವಾಗಿ ಬಳಸುತ್ತಿಲ್ಲ. ಇದರ ಹೊಣೆಯನ್ನು ನಾವೇ, ಅಂದರೆ ನಾವು ಕಟ್ಟಿದ ಸಮಾಜ ಹೊರಬೇಕು. ನಮ್ಮ ನಡುವಿನ ಅತ್ಯಂತ ದುರ್ಬಲರು, ಅತ್ಯಂತ ಬಡವರು ಅನುಭವಿಸುತ್ತಿರುವ ಯಾತನೆಯನ್ನು ಅತ್ಯಂತ ಗಾಢವಾಗಿ ತೋರಿಸುವ ದುರಂತಗಳಲ್ಲಿ ಇದು ಒಂದು. ನಾವು ವಾಸ್ತವದಲ್ಲಿ ಅನುಭವಿಸುತ್ತಿರುವ ಸಂಕಟ ಇದು.

ವಾಣಿಜ್ಯೋದ್ಯಮಗಳ ಬೆಂಬಲದಿಂದ ಕೆಲವು ರಾಜ್ಯ ಸರ್ಕಾರಗಳು, ಕಾರ್ಮಿಕರನ್ನು ರಕ್ಷಿಸುವ ಹಲವು ಕಾನೂನುಗಳನ್ನು ಅಮಾನತಿನಲ್ಲಿರಿಸುವ ಆಲೋಚನೆಯಲ್ಲಿವೆ (ಅಥವಾ, ಈಗಾಗಲೇ ಅಮಾನತಿನಲ್ಲಿರಿಸಿವೆ) ಎಂಬುದನ್ನು ತಿಳಿದಾಗ ಆಘಾತವಾಯಿತು. ಕೈಗಾರಿಕೆಗಳಲ್ಲಿನ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ, ಕೆಲಸದ ಸ್ಥಳಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ, ಕಾರ್ಮಿಕರ ಆರೋಗ್ಯ, ಕನಿಷ್ಠ ವೇತನ, ಕಾರ್ಮಿಕರ ಸಂಘಟನೆಗಳು, ಗುತ್ತಿಗೆ ಕೆಲಸಗಾರರು ಹಾಗೂ ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಗಳು ಕೂಡ ಇದರಲ್ಲಿ ಸೇರಿವೆ.

ನಮ್ಮಲ್ಲಿ ಸಾಮಾಜಿಕ ಭದ್ರತೆ ಎಂಬುದು ಬಹುತೇಕ ಇಲ್ಲವೇ ಇಲ್ಲ. ಕಾರ್ಮಿಕರ ರಕ್ಷಣೆ ಕೂಡ ತೀರಾ ಅಲ್ಪ ಪ್ರಮಾಣದಲ್ಲಿದೆ. ಹಾಗಾಗಿ, ಆ ಹದಿನಾರು ಯುವಕರು ಪ್ರಾಣ ಕಳೆದುಕೊಳ್ಳಬೇಕಾಯಿತು. ಸಾಂಕ್ರಾಮಿಕದ ಸುನಾಮಿಗೆ ಸಿಲುಕಿ ಲಕ್ಷಾಂತರ ಜನರ ಬದುಕು ಛಿದ್ರವಾಗಿರುವುದಕ್ಕೂ ಇದೇ ಕಾರಣ; ರಾಚನಿಕ ಬಡತನ ಹಾಗೂ ಅಸಮಾನತೆಯೊಂದೇ ಕಾರಣವಲ್ಲ.

ನಾನು ನನ್ನ ವೃತ್ತಿಬದುಕಿನುದ್ದಕ್ಕೂ ಕಾರ್ಮಿಕ ಸಂಘಟನೆಗಳು ಹಾಗೂ ಕಾರ್ಮಿಕ ಕಾನೂನುಗಳ ಜೊತೆ ಒಡನಾಡಿದ್ದೇನೆ. ಕಠಿಣ ಕಾನೂನುಗಳು, ಅತಾರ್ಕಿಕ ಬೇಡಿಕೆ ಇರಿಸುವ ಕಾರ್ಮಿಕ ಸಂಘಟನೆಗಳನ್ನು ಕಳೆದ ಐವತ್ತು ವರ್ಷಗಳಲ್ಲಿ ನಾನು ಕಂಡಿಲ್ಲ ಎಂದಲ್ಲ. ಆದರೆ, ಕಳೆದ ಕೆಲವು ದಶಕಗಳ ಅವಧಿಯಲ್ಲಿ ಕಾರ್ಮಿಕ ಕಾನೂನುಗಳು ಬದಲಾಗಿವೆ; ಈಗ ಅವು ಉದ್ದಿಮೆಗಳ ಪಾಲಿಗೆ ಮುಖ್ಯ ಅಡೆತಡೆಗಳಲ್ಲ. ಈ ಅವಧಿಯಲ್ಲಿ ಸಾಮಾಜಿಕ ಭದ್ರತಾ ಕ್ರಮಗಳು ಏರಿಕೆ ಕಂಡಿಲ್ಲ. ಹಾಗಾಗಿ, ಉದ್ಯೋಗದಲ್ಲಿರುವವರ ಅಭದ್ರತೆ ಹೆಚ್ಚಾಗಿದೆ. ಈಗಾಗಲೇ ದುರ್ಬಲವಾಗಿರುವ ಕಾನೂನುಗಳನ್ನು ಇನ್ನಷ್ಟು ದುರ್ಬಲಗೊಳಿಸುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚುವುದಿಲ್ಲ. ಬದಲಿಗೆ, ಕಡಿಮೆ ಸಂಬಳ ಪಡೆಯುವವರ ಹಾಗೂ ಬಡವರ ಕಷ್ಟಗಳು ಇದರಿಂದ ಹೆಚ್ಚುತ್ತವೆ.

ಇಂತಹ ಕ್ರಮಗಳಿಂದಾಗಿ ಕಾರ್ಮಿಕರು ಹಾಗೂ ವಾಣಿಜ್ಯೋದ್ಯಮಗಳು ಒಬ್ಬರ ವಿರುದ್ಧ ಇನ್ನೊಬ್ಬರು ಸಂಘರ್ಷಕ್ಕಿಳಿಯುವಂತೆ ಆಗುತ್ತದೆ. ಇದು ತಪ್ಪು ಕ್ರಮ. ಕಳೆದ ಕೆಲವು ವಾರಗಳ ಅನುಭವವನ್ನು ಗಮನಿಸಿದರೆ ಸಾಕು. ವಲಸೆ ಕಾರ್ಮಿಕರ ಜೊತೆ ನಾವು ನಡೆದುಕೊಂಡ ರೀತಿ ಸರಿ ಇರಲಿಲ್ಲ; ಇದು, ವಾಣಿಜ್ಯೋದ್ಯಮಗಳು ಹಾಗೂ ಆ ಕಾರ್ಮಿಕರ ನಡುವಿನ ಸಾಮಾಜಿಕ ಒಪ್ಪಂದವನ್ನು ಹಾಳುಗೆಡವಿತು. ಇದರಿಂದಾಗಿ ಕಾರ್ಮಿಕರು ತಮ್ಮ ಊರುಗಳಿಗೆ ವಲಸೆ ಹೊರಟರು, ವಾಣಿಜ್ಯೋದ್ಯಮಕ್ಕೆ ಏಟು ಬಿತ್ತು. ಹಾಗಾಗಿ, ಇಂತಹ ಕ್ರಮಗಳು ಅನ್ಯಾಯದ್ದು ಮಾತ್ರವೇ ಅಲ್ಲ; ಅವು ಕೆಲಸಕ್ಕೆ ಬರುವುದಿಲ್ಲ ಕೂಡ. ಕಾರ್ಮಿಕರ ಹಾಗೂ ಉದ್ದಿಮೆಗಳ ಹಿತ ಪರಸ್ಪರ ಬೆಸೆದುಕೊಂಡಿದೆ– ಹಿಂದೆಂದೂ ಎದುರಾಗಿರದಿದ್ದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಈ ಮಾತು ಸತ್ಯ.

ಇದಕ್ಕಿಂತ ಮುಖ್ಯವಾಗಿ ನಾವು ಇನ್ನೂ ದೊಡ್ಡದಾದ ಸಮಸ್ಯೆಗಳತ್ತ ಗಮನಹರಿಸಬೇಕು. ಈ ಆರ್ಥಿಕ ಬಿಕ್ಕಟ್ಟು ಗ್ರಾಮೀಣ ಕೃಷಿ ವಲಯಕ್ಕೆ ಭಾರಿ ಏಟು ನೀಡಿದೆ. ಅದೇ ‍ಪ್ರಮಾಣದಲ್ಲಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಸ್ವ–ಉದ್ಯೋಗಿಗಳಿಗೂ ಸಣ್ಣ ಉದ್ಯಮಿಗಳಿಗೂ ಏಟು ನೀಡಿದೆ. ಈ ವಲಯಗಳು ಸಂಘಟಿತ ವಲಯದಲ್ಲಿರುವ ಜನರಿಗಿಂತ ಹೆಚ್ಚಿನ ಜನರಿಗೆ ಜೀವನೋಪಾಯ ಕಲ್ಪಿಸಿವೆ.

ಬಹುತೇಕರು ಅರ್ಥ ಮಾಡಿಕೊಂಡಿರುವುದಕ್ಕಿಂತಲೂ ಪರಿಸ್ಥಿತಿ ಹೆಚ್ಚು ಗಂಭೀರವಾಗಿದೆ. ಇದನ್ನು ನಾನು ನಮ್ಮದೇ ಅನುಭವದಿಂದ ಹೇಳುತ್ತಿದ್ದೇನೆ. ದೇಶವು ಕೋವಿಡ್–19 ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸಿರುವ ಹೊತ್ತಿನಲ್ಲಿ, ಅಜೀಂ ಪ್ರೇಮ್‌ಜಿ ಪ್ರತಿಷ್ಠಾನವು ವಿಪ್ರೊ ಕಂಪನಿಯ ಜೊತೆ ಸೇರಿ, ಆರೋಗ್ಯ ಸೇವಾ ಕ್ಷೇತ್ರದಲ್ಲಿ ಹಾಗೂ ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವ ಕೆಲಸ ಮಾಡಿದೆ.

ಆರ್ಥಿಕತೆಗೆ ಆಗಿರುವ ಏಟು ಹಾಗೂ ಅದರ ಪರಿಣಾಮವಾಗಿ ಮನುಷ್ಯ ಎದುರಿಸುತ್ತಿರುವ ಸಂಕಷ್ಟ ತೀವ್ರವಾಗಿದೆ. ಸಾಂಕ್ರಾಮಿಕವನ್ನು ತಡೆಯುವ ವಿಚಾರದಲ್ಲಿ ನಾವಿನ್ನೂ ಆರಂಭಿಕ ಹಂತದಲ್ಲಿದ್ದೇವೆ ಎಂಬುದನ್ನು ಮರೆಯಬಾರದು. ಹಾಗೆಯೇ, ಜನ ಈಗ ಎದುರಿಸುತ್ತಿರುವ ಸಂಕಷ್ಟವನ್ನು ತಗ್ಗಿಸಲು ಹಾಗೂ ದೀರ್ಘಾವಧಿ ಪರಿಣಾಮಗಳನ್ನು ಕಡಿಮೆ ಮಾಡಲು ಅರ್ಥವ್ಯವಸ್ಥೆಗೂ ಜನರಿಗೂ ಸಮಾನ ನೆರವು ಸಿಗಬೇಕು. ಪರಿಸ್ಥಿತಿ ಗಂಭೀರವಾಗಿರುವ ಕಾರಣ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಧಾನ ಪಾತ್ರ ನಿಭಾಯಿಸಬೇಕು.

ಈ ಹಿನ್ನೆಲೆಯಲ್ಲಿ, ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಶೇಕಡ 10ರಷ್ಟಕ್ಕೆ ಸಮನಾದ ಆರ್ಥಿಕ ಉತ್ತೇಜನಾ ಪ್ಯಾಕೇಜನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ನಾವು ಸ್ವಾಗತಿಸಬೇಕು. ಅರ್ಥವ್ಯವಸ್ಥೆಯ ಸ್ಥಿತಿ, ಜನರ ಜೀವನದ ಸ್ಥಿತಿಯನ್ನು ಗಮನಿಸಿದರೆ, ನಮಗೆ ಅಗತ್ಯವಿದ್ದ ಬೆಂಬಲದ ಪ್ರಮಾಣ ಇದೇ ಆಗಿತ್ತು ಎಂಬುದು ನನ್ನ ಅಭಿಪ್ರಾಯ. ಈ ಸಾಂಕ್ರಾಮಿಕವು ಅಲ್ಪಾವಧಿಯಲ್ಲಿ ಹೇಗೆ ಪ್ರಭಾವ ಬೀರಬಲ್ಲದು ಎಂಬ ವಿಚಾರದಲ್ಲಿ ಅನಿಶ್ಚಿತತೆ ಇದೆ.

ಹಾಗಾಗಿ, ಸರ್ಕಾರ ಘೋಷಿಸಿರುವ ಶೇ 10ರಷ್ಟು ಪ್ರಮಾಣದ ಉತ್ತೇಜನಾ ಪ್ಯಾಕೇಜು, ಹೆಚ್ಚುವರಿ ನೆರವು ಆಗಬೇಕು; ಇದು ಸರ್ಕಾರ ಈಗಾಗಲೇ ಹೇಳಿರುವ ವೆಚ್ಚಗಳ ಭಾಗ ಆಗಿರಬಾರದು. ಈ ಹಿಂದೆ ನೀಡಿದ ಭರವಸೆಗಳ ಮರುವರ್ಗೀಕರಣ ಕೂಡ ಆಗಿರಲೇಬಾರದು. ಈ ಹಣಕಾಸಿನ ಮೊತ್ತವನ್ನು ಬಳಸಿ ಹಲವು ಮಹತ್ವದ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ನಾನು ಕೆಲವನ್ನು ಇಲ್ಲಿ ಸಲಹೆಯ ರೂಪದಲ್ಲಿ ಹೇಳಿದ್ದೇನೆ.

ಗ್ರಾಮೀಣ ಭಾರತಕ್ಕೆ ನೆರವಾಗಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅತ್ಯಂತ ಬಡವರಿಗೆ ನೆರವಾಗಲು ನರೇಗಾ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವುದು ಬಹಳ ಮುಖ್ಯ ಕ್ರಮವಾಗಬಹುದು. ಪ್ರತೀ ಮನೆಗೆ ಖಾತರಿ ಕೆಲಸದ ದಿನಗಳ ಸಂಖ್ಯೆಯನ್ನು ಹೆಚ್ಚಿಸುವ ಜೊತೆಯಲ್ಲೇ ದಿನಗೂಲಿ ಮೊತ್ತವನ್ನೂ ಜಾಸ್ತಿ ಮಾಡಬೇಕು. ಹಾಗೆಯೇ, ನರೇಗಾ ಯೋಜನೆಗೆ ಹೆಚ್ಚುವರಿಯಾಗಿ ₹ 1 ಲಕ್ಷ ಕೋಟಿ ನಿಗದಿ ಮಾಡಬೇಕು. ಇದರಿಂದ ಕೆಲಸ ಬಯಸುವ ಎಲ್ಲರಿಗೂ ಸಹಾಯವಾಗುತ್ತದೆ.

ವೇತನವು ಸಕಾಲಕ್ಕೆ ಪಾವತಿ ಆಗುವಂತೆ ನೋಡಿಕೊಳ್ಳುವುದು ಬಹಳ ಮಹತ್ವದ್ದು. ನರೇಗಾ ಮಾದರಿಯಲ್ಲಿ, ನಗರ ಉದ್ಯೋಗ ಖಾತರಿ ಯೋಜನೆ ರೂಪಿಸಿ, ಅದನ್ನು ಜಾರಿಗೆ ತರಬೇಕು. ಈ ಎರಡು ಯೋಜನೆಗಳು ದೇಶದಲ್ಲಿ ಮೂಲಸೌಕರ್ಯ ಹಾಗೂ ಕೃಷಿ ಕ್ಷೇತ್ರದಲ್ಲಿ ಉತ್ಪಾದಕ ಆಸ್ತಿ ಸೃಷ್ಟಿಗೆ ಸಹಾಯಕವಾಗಬಲ್ಲವು; ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಬೆನ್ನೆಲುಬಾಗಬಲ್ಲವು. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ನಿರಂತರವಾಗಿ ಹೂಡಿಕೆ ಮಾಡುವುದು ಈಗ ಎದುರಾಗಿರುವ ಸಾಂಕ್ರಾಮಿಕದ ವಿರುದ್ಧದ ಅಭಿಯಾನಕ್ಕೆ ನೆರವಾಗುತ್ತದೆ. ಮುಂದೆ ಬರಬಹುದಾದ ಸಾಂಕ್ರಾಮಿಕದ ವಿರುದ್ಧವೂ ಕೆಲಸಕ್ಕೆ ಬರುತ್ತದೆ. ಅಷ್ಟೇ ಅಲ್ಲ, ನಮ್ಮ ದೇಶದಲ್ಲಿ ತೀರಾ ಅಗತ್ಯವಾಗಿರುವ ಸ್ಪಂದನಶೀಲ ಹಾಗೂ ಕ್ರಿಯಾಶೀಲ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯನ್ನು ಕಟ್ಟಲು ನೆರವಾಗುತ್ತದೆ.

ಆರ್ಥಿಕತೆಯ ಉತ್ತೇಜನಕ್ಕೆ ಘೋಷಿಸಿರುವ ಹಣದಲ್ಲಿ ಒಂದಿಷ್ಟನ್ನು ಬಳಸಿಕೊಂಡು, ಕೃಷಿಯಲ್ಲಿ ಸರ್ಕಾರಿ ಹೂಡಿಕೆಯನ್ನು ಹೆಚ್ಚಿಸಬೇಕು. ಸುಸ್ಥಿರ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು, ಧಾನ್ಯಗಳನ್ನು ಆಕರ್ಷಕ ಬೆಲೆಗೆ ಖರೀದಿಸುವ ಬಲಿಷ್ಠ ವ್ಯವಸ್ಥೆ ರೂಪಿಸಲು, ಬೇಗ ಹಾಳಾಗುವ ಕೃಷಿ ಉತ್ಪನ್ನಗಳನ್ನು ಸ್ಥಳೀಯವಾಗಿ ದಾಸ್ತಾನು ಮಾಡಲು ಹಾಗೂ ಅವುಗಳಿಗೆ ಮೌಲ್ಯವರ್ಧನೆಯ ಸೌಲಭ್ಯ ಕಲ್ಪಿಸಲು ಈ ಹಣ ಬಳಸಿಕೊಳ್ಳಬಹುದು. ಈ ಹಣವನ್ನು ಬಳಸಿಕೊಂಡು ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯಬೇಕು. ಕೃಷಿ ಹಾಗೂ ಕುಶಲಕರ್ಮಿಗಳಿಗೆ ಸಂಬಂಧಿಸಿದ ಕೈಗಾರಿಕೆಗಳಲ್ಲಿ ಅವಕಾಶಗಳನ್ನು ಹೆಚ್ಚಿಸುವ ಮೂಲಕ ಈ ಅರ್ಥವ್ಯವಸ್ಥೆಗಳನ್ನು ಹೆಚ್ಚು ಶಕ್ತಿಯುತಗೊಳಿಸುವ ಕೆಲಸ ಕೂಡ ಆಗಬೇಕು. ಸ್ಥಳೀಯ ಪ್ರಜಾತಾಂತ್ರಿಕ ವ್ಯವಸ್ಥೆಗಳಾದ ಪಂಚಾಯಿತಿಗಳನ್ನು ಬಳಸಿಕೊಂಡು ಈ ಕೆಲಸ ಮಾಡಬಹುದು.

ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸುವುದು ಈಗಿನ ಬಿಕ್ಕಟ್ಟಿನ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಮುಖ್ಯ. ಆಹಾರ ಭದ್ರತೆಯನ್ನೂ ಖಾತರಿಪಡಿಸಬೇಕು. ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸಬೇಕು, ಅದರ ಅಡಿಯಲ್ಲಿ ವಿತರಣೆ ಮಾಡುವ ವಸ್ತು–ಧಾನ್ಯಗಳ ಪ್ರಮಾಣವನ್ನು ದ್ವಿಗುಣಗೊಳಿಸಬೇಕು, ಉಚಿತವಾಗಿ ವಿತರಣೆ ಮಾಡಬೇಕು.

ಕನಿಷ್ಠ ಮೂರು ತಿಂಗಳ ಅವಧಿಗೆ, ಪ್ರತೀ ತಿಂಗಳಿಗೆ ₹7,000ದಂತೆ ಬಯೊಮೆಟ್ರಿಕ್ ದಾಖಲೆ ಪಡೆಯದೆಯೇ ಎಲ್ಲ ಬಡ ಕುಟುಂಬಗಳಿಗೆ, ವಲಸೆ ಕಾರ್ಮಿಕರ ಕುಟುಂಬಗಳಿಗೆ ತುರ್ತು ಹಣಕಾಸಿನ ಪರಿಹಾರ ನೀಡಬೇಕು. ಪ್ರತೀ ತಿಂಗಳು 25 ದಿನಗಳ ಅವಧಿಗೆ ಕನಿಷ್ಠ ಕೂಲಿಯ ಮೊತ್ತವನ್ನು ನಗರವಾಸಿ ಬಡವರಿಗೆ ಲಾಕ್‌ಡೌನ್‌ ಅವಧಿಗೆ ನೀಡಬೇಕು. ಲಾಕ್‌ಡೌನ್‌ ತೆರವಾದ ನಂತರವೂ ಎರಡು ತಿಂಗಳ ಅವಧಿಗೆ ಇಷ್ಟೇ ಮೊತ್ತ ನೀಡಬೇಕು. ಬೇರೆ ಊರುಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ತಾವು ಎಲ್ಲಿಗೆ ಹೋಗಬೇಕು ಎಂಬುದನ್ನು ತೀರ್ಮಾನಿಸುವ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು, ಇದರ ಜೊತೆಯಲ್ಲೇ ಸಾಂಕ್ರಾಮಿಕವನ್ನು ತಡೆಯಲು ಬೇಕಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಊರಿಗೆ ಹೋಗುವಂತೆಯೂ ಒತ್ತಾಯಿಸಬಾರದು, ಕೆಲಸದ ಸ್ಥಳಗಳಲ್ಲೇ ಇರುವಂತೆಯೂ ಒತ್ತಾಯಿಸಬಾರದು. ಬೇರೆ ಊರುಗಳಲ್ಲಿ ಸಿಲುಕಿಕೊಂಡ ವಲಸೆ ಕಾರ್ಮಿಕರಿಗೆ ಬಸ್ ಮತ್ತು ರೈಲುಗಳ ಮೂಲಕ ಉಚಿತವಾಗಿ ಪ್ರಯಾಣಿಸಲು ಅವಕಾಶ ಇರಬೇಕು.

ಇಲ್ಲಿ ಉಲ್ಲೇಖಿಸಿರುವ ಕ್ರಮಗಳಷ್ಟೇ ಸಾಕಾಗುತ್ತವೆ ಎಂದಲ್ಲ; ಆದರೆ ಇವು ನಾವು ಪರಿಗಣಿಸಬಹುದಾದ ಒಂದಿಷ್ಟು ಮಾದರಿ ಕ್ರಮಗಳು ಮಾತ್ರ. ಇವನ್ನೆಲ್ಲ ರಾತ್ರಿ ಕಳೆದು ಬೆಳಗಾಗುವುದರೊಳಗೆ ಅನುಷ್ಠಾನಕ್ಕೆ ತರಲು ಆಗುವುದಿಲ್ಲ. ರಾಜ್ಯ ಸರ್ಕಾರಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಸೇರಿಸಿಕೊಂಡು, ತಜ್ಞರು ಒಂದು ಅಥವಾ ಎರಡು ವರ್ಷಗಳ ಅವಧಿಯ ಕ್ರಿಯಾಯೋಜನೆಯನ್ನು ತಕ್ಷಣ ಸಿದ್ಧಪಡಿಸಬೇಕು. ಆದರೆ, ಪರಿಸ್ಥಿತಿ ಸುಧಾರಿಸಬೇಕು ಎಂದಾದರೆ, ಕೈಗೊಳ್ಳುವ ಕ್ರಮಗಳು ಇಲ್ಲಿ ಹೇಳಿದಷ್ಟು ಬೃಹತ್ ಆಗಿರಬೇಕು.

ಈ ಬಿಕ್ಕಟ್ಟಿನಿಂದ ನಾವು ಕಾಲಕ್ರಮೇಣ ಹೊರಬರುತ್ತೇವೆ. ಆ ಹೊತ್ತಿಗೆ, ಈ ವಿನಾಶಕಾರಿ ಅನುಭವ ವಾಸ್ತವದಲ್ಲಿ ಏನು ಎಂಬುದನ್ನು ಕಂಡುಕೊಳ್ಳಲು ನಮ್ಮಿಂದ ಸಾಧ್ಯವಾಗಬೇಕು. ಹೆಚ್ಚು ನ್ಯಾಯಸಮ್ಮತವಾದ, ಹೆಚ್ಚು ಸಮಾನವಾದ, ಹೆಚ್ಚು ಮಾನವೀಯವಾದ ಸಮಾಜವನ್ನು ಕಟ್ಟಲು ಇದು ದೇಶಕ್ಕೆ ದುರಂತದ ಮೂಲಕ ಬಂದಿರುವ ಎಚ್ಚರಿಕೆಯ ಕರೆಗಂಟೆ.

ಲೇಖಕ: ವಿಪ್ರೊ ಕಂಪನಿಯ ಸಂಸ್ಥಾಪಕ ಅಧ್ಯಕ್ಷ, ಹೂಡಿಕೆದಾರ, ಉದ್ಯಮಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು