ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರೋತ್ಸವ: ನೆರಳು ಬೆಳಕಿನ ಹಾದಿ

ಪ್ರೇಕ್ಷಕರ ಮೇಲೆ ಕಮರ್ಷಿಯಲ್‌ ಸಂತೆ ಸರಕಿನ ಹೇರಿಕೆ ಸರಿಯಲ್ಲ
Last Updated 8 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಈ ಬಾರಿಯ ‘ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ಕ್ಕೆ ತೆರೆ ಬಿದ್ದಿದೆ. ಜಗತ್ತಿನಾದ್ಯಂತ ವಿವಿಧ ದೇಶ–ಭಾಷೆಗಳ 250ಕ್ಕೂ ಹೆಚ್ಚು ಸಿನಿಮಾಗಳ ಪ್ರದರ್ಶನ ಈ 12ನೇ ಚಿತ್ರೋತ್ಸವದಲ್ಲಿ ನಡೆಯಿತು. ಪ್ರೇಕ್ಷಕರು ಅವರವರ ಭಾವ–ಭಕುತಿಗೆ ಇಷ್ಟವೆನ್ನಿಸುವ ಸಿನಿಮಾಗಳನ್ನು ನೋಡಿ ಸಂಭ್ರಮಿಸಿದರು, ದುಃಖಿಸಿದರು, ಚಿಂತಿಸಿದರು ಮತ್ತು ಚರ್ಚಿಸಿದರು.

ಬೆಂಗಳೂರು ಚಿತ್ರೋತ್ಸವದ 12 ವರ್ಷಗಳ ಸುದೀರ್ಘ ಯಾನದಲ್ಲಿ ಮುಖ್ಯವಾಗಿ ಗಮನಿಸಬಹುದಾದ ಅಂಶವೆಂದರೆ, ಈ ಚಿತ್ರೋತ್ಸವಕ್ಕೆ ಅದರದ್ದೇ ಆದ ದೊಡ್ಡ ಪ್ರೇಕ್ಷಕ ವರ್ಗವೊಂದು ಸೃಷ್ಟಿಯಾಗಿರುವುದು. ಯಾವ ವಿಮರ್ಶಕ, ಮಾರ್ಗದರ್ಶಕರ
ನೆರವಿಲ್ಲದೆಯೂ ಸಿನಿಮಾಮೋಹಿ ಪ್ರೇಕ್ಷಕರು ತಮಗಿಷ್ಟವಾದ ಸಿನಿಮಾಗಳನ್ನು ಹುಡುಕಿ ನೋಡುವುದು ಈಗ ರೂಢಿಯಾಗಿದೆ. ಕೆಲವು ಸಿನಿಮಾಗಳನ್ನು ನೋಡಲು ನೂರಾರು ಪ್ರೇಕ್ಷಕರು ಎರಡು ಗಂಟೆಗಳ ಕಾಲ ಸರದಿಯಲ್ಲಿ ನಿಂತದ್ದನ್ನು ಗಮನಿಸಿದರೆ, ಈ ಚಿತ್ರೋತ್ಸವದ ಪ್ರಭಾವವನ್ನು ಊಹಿಸಬಹುದು. ಅದರಲ್ಲೂ ಯುವಜನರ ದಂಡು ಎದ್ದು ಕಾಣುತ್ತಿದ್ದುದು ಗಮನಾರ್ಹ.

ಮೈಸೂರು, ಶಿವಮೊಗ್ಗ, ಹಾಸನ, ಧಾರವಾಡ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ ಮುಂತಾದ ಜಿಲ್ಲೆಗಳಿಂದ ಬಂದ ಚಿತ್ರಪ್ರೇಮಿಗಳು ಈ ಸಲ ಕಂಡುಬಂದರು. ಮೈಸೂರಿನಲ್ಲಿ ನಡೆಯುವ ದಸರಾ ಚಲನಚಿತ್ರೋತ್ಸವವೂ ಇತ್ತೀಚೆಗೆ ವ್ಯವಸ್ಥಿತವಾಗಿದ್ದು, ರಾಜ್ಯದಲ್ಲಿ ಚಿತ್ರೋದ್ಯಮಕ್ಕೆ ಪರ್ಯಾಯ ಪ್ರೇಕ್ಷಕರು ಹೆಚ್ಚುತ್ತಿರುವುದು ಗಮನಿಸಬೇಕಾದ ಸಂಗತಿ.

ವಿಶ್ವದಾದ್ಯಂತ 4,000ದಷ್ಟು ಚಿತ್ರೋತ್ಸವಗಳು ನಡೆಯುತ್ತಿವೆ ಎನ್ನುವುದು ಅಂದಾಜು. ಇವುಗಳಲ್ಲಿ ಎಷ್ಟೋ ಚಿತ್ರೋತ್ಸವಗಳ ಬಗ್ಗೆ ಹೊರಜಗತ್ತಿಗೆ ಗೊತ್ತಿರಲಿಕ್ಕಿಲ್ಲ. ವೆನಿಸ್‌, ಕಾನ್‌, ಬರ್ಲಿನ್‌ ಮಾತ್ರ, ಜಗತ್ತಿನಾದ್ಯಂತ ಚಿತ್ರ ನಿರ್ಮಾಪಕರು, ನಿರ್ದೇಶಕರು ಈಗಲೂ ಮುಗಿಬಿದ್ದು ನೋಡಬಯಸುವ ಪ್ರತಿಷ್ಠಿತ ಚಿತ್ರೋತ್ಸವಗಳು. ಭಾರತದಲ್ಲಿ 22 ಚಿತ್ರೋತ್ಸವಗಳು ನಡೆಯುತ್ತಿವೆ. ಗೋವಾದಲ್ಲಿ ನಡೆಯುವ ಇಫೀ (IFFI) ಪ್ರಮುಖವಾದದ್ದು.

ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ಈ ಚಿತ್ರೋತ್ಸವವನ್ನು ವ್ಯವಸ್ಥಿತವಾಗಿ ನಡೆಸುತ್ತಿರುವುದರಿಂದ, ಅಂತರರಾಷ್ಟ್ರೀಯ ಪ್ರತಿಷ್ಠೆಯೂ ಇದಕ್ಕಿದೆ. ಹಿಂದೆ ಈ ಚಿತ್ರೋತ್ಸವವು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ ಮುಂತಾಗಿ ವಿವಿಧೆಡೆ ನಡೆಯುತ್ತಿತ್ತು. 2004ರಿಂದ ಗೋವಾದಲ್ಲೇ ಶಾಶ್ವತ ನೆಲೆ ಕಂಡುಕೊಂಡಿದೆ.

ತಿರುವನಂತಪುರದಲ್ಲಿ ನಡೆಯುವ ಕೇರಳ ಅಂತರರಾಷ್ಟ್ರೀಯ ಚಿತ್ರೋತ್ಸವವೂ (IFFK) ಅಂತರರಾಷ್ಟ್ರೀಯವಾಗಿ ಗಮನ ಸೆಳೆಯುತ್ತಿದೆ. ಮುಂಬೈ, ಕೋಲ್ಕತ್ತ, ಜೈಪುರ, ಧರ್ಮಶಾಲಾ ಮುಂತಾಗಿ ಹಲವೆಡೆ ಚಿತ್ರೋತ್ಸವಗಳು ನಡೆಯುತ್ತಿವೆ. ಭಾರತದಲ್ಲಿ 12 ಚಿತ್ರೋತ್ಸವಗಳಿಗೆ ಮಾತ್ರ ಅಂತರರಾಷ್ಟ್ರೀಯ ಮಾನ್ಯತೆ ಲಭಿಸಿದ್ದು, ಬೆಂಗಳೂರಿಗೆ ಇನ್ನೂ ಈ ಮಾನ್ಯತೆ ಸಿಕ್ಕಿಲ್ಲ.

ಬೆಂಗಳೂರು ಚಿತ್ರೋತ್ಸವವನ್ನು 2006ರಲ್ಲಿ ಆರಂಭಿಸಿದ್ದು ಸುಚಿತ್ರಾ ಫಿಲಂ ಸೊಸೈಟಿ. ಆರಂಭದ ಮೂರು ವರ್ಷಗಳ ಬಳಿಕ ಚಿತ್ರೋತ್ಸವವು ಸರ್ಕಾರದ ತೆಕ್ಕೆಗೆ ಬಂತು. ಕರ್ನಾಟಕ ಚಲನಚಿತ್ರ ಅಕಾಡೆಮಿ ಆರಂಭವಾದ ಮೊದಲ ವರ್ಷ ಚಿತ್ರೋತ್ಸವ ನಡೆಯಲಿಲ್ಲ. ಈಗ 12 ವರ್ಷಗಳಿಂದ ಅಕಾಡೆಮಿಯ ಆಶ್ರಯದಲ್ಲಿ ಚಿತ್ರೋತ್ಸವವು ತಪ್ಪದೇ ನಡೆಯುತ್ತಿದೆ. ಆರಂಭದ ವರ್ಷಗಳಲ್ಲಿ ಉತ್ಸವವು ನಿಗದಿತ ತಿಂಗಳಲ್ಲಿ ನಡೆಯಲಿಲ್ಲ. ಇಷ್ಟು ವರ್ಷಗಳಾದರೂ ಬೆಂಗಳೂರು ಚಿತ್ರೋತ್ಸವಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಸಿಗದಿರಲು ಈ ಅನಿಯಮಿತ ವೇಳಾಪಟ್ಟಿಯೂ ಒಂದು ಕಾರಣ.

ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರು ಚಿತ್ರೋತ್ಸವವು ಫೆಬ್ರುವರಿಯಲ್ಲಿ ನಿಗದಿತವಾಗಿ ನಡೆಯುತ್ತಿದೆ. ವಿದೇಶಗಳಿಂದಲೂ ಜ್ಯೂರಿಗಳು, ಪ್ರತಿನಿಧಿಗಳು ಆಗಮಿಸುತ್ತಿರುವುದು ಚಿತ್ರೋತ್ಸವದ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ಈ ಸಲ ಪ್ಯಾರಿಸ್‌ನಿಂದ ಬಂದಿದ್ದ ಅಂತರರಾಷ್ಟ್ರೀಯ ಮಾನ್ಯತಾ ಸಮಿತಿಯ ಸದಸ್ಯರೊಬ್ಬರು ಚಿತ್ರೋತ್ಸವದಲ್ಲಿ ಪ್ರೇಕ್ಷಕರು, ಸಂಘಟಕರು, ವಿಮರ್ಶಕರ ಜೊತೆ ಮಾತನಾಡಿ, ಚಿತ್ರಗಳ ಗುಣಮಟ್ಟ, ಸಂಘಟನೆಯ ಅಚ್ಚುಕಟ್ಟುತನವನ್ನು ವೀಕ್ಷಿಸಿದ್ದಾರೆ. ಇದು, ಬೆಂಗಳೂರು ಚಿತ್ರೋತ್ಸವಕ್ಕೆ ಶೀಘ್ರವೇ ಅಂತರರಾಷ್ಟ್ರೀಯ ಮಾನ್ಯತೆ ದೊರಕುವ ಆಶಾಭಾವನೆ ಹುಟ್ಟಿಸಿದೆ.

ದೇಶದಲ್ಲಿ ತಿರುವನಂತಪುರ ಮತ್ತು ಬೆಂಗಳೂರು ಚಿತ್ರೋತ್ಸವಗಳನ್ನು ಮಾತ್ರ ಆಯಾ ರಾಜ್ಯದ ಚಲನಚಿತ್ರ ಅಕಾಡೆಮಿಗಳು ನಡೆಸುತ್ತಿವೆ. ನಮ್ಮಲ್ಲಿ ವಾರ್ತಾ ಇಲಾಖೆಯ ಮೇಲುಸ್ತುವಾರಿಯಲ್ಲಿ ನಡೆಯುವ ಚಿತ್ರೋತ್ಸವವು ಆರಂಭದಲ್ಲಿ ನಿರ್ದಿಷ್ಟ ಅವಧಿಯಲ್ಲಿ ನಡೆಯದೇ ಇರಲು ಸರ್ಕಾರಿ ಅಧಿಕಾರಿಗಳ ಉದಾಸೀನ ಧೋರಣೆಯೂ ಕಾರಣ. ಕಳೆದ ಹತ್ತು ವರ್ಷಗಳಲ್ಲಿ ಚಲನಚಿತ್ರ ಅಕಾಡೆಮಿಗೆ ಐವರು ಅಧ್ಯಕ್ಷರು ಬಂದುಹೋಗಿದ್ದಾರೆ. ವಾರ್ತಾ ಇಲಾಖೆಯ ಕಾರ್ಯದರ್ಶಿಗಳ ಬದಲಾವಣೆಯಂತೂ ಪದೇ ಪದೇ ನಡೆದಿದೆ.

ಹೀಗಾಗಿ ಈ ಚಿತ್ರೋತ್ಸವಕ್ಕೊಂದು ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸುವ ಪ್ರಯತ್ನ ಸಫಲವಾಗಿಲ್ಲ. ಎನ್‌.ಆರ್‌.ವಿಶುಕುಮಾರ್‌ ಅವರು ವಾರ್ತಾ ಇಲಾಖೆಯ ನಿರ್ದೇಶಕರಾಗಿದ್ದ ಅವಧಿಯಲ್ಲಿ ಮೂವರು ಅಧಿಕಾರಿಗಳುಳ್ಳ ಪ್ರತ್ಯೇಕ ಘಟಕವೊಂದು ಕೆಲಸ ಮಾಡಿತಾದರೂ, ಅದು ನಿರ್ದೇಶನಾಲಯ ಅನ್ನಿಸಿಕೊಳ್ಳಲಿಲ್ಲ. ಪ್ರತ್ಯೇಕ ನಿರ್ದೇಶನಾಲಯವೊಂದನ್ನು ರಚಿಸಿದರೆ, ಹಣಕಾಸು ನಿರ್ಧಾರಗಳನ್ನು ಸುಲಭವಾಗಿ ಕೈಗೊಂಡು, ಪ್ರತಿವರ್ಷ ಅವಧಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲದಂತೆ ಚಿತ್ರೋತ್ಸವ ನಡೆಸಬಹುದು. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ.

ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು ಹೆಚ್ಚು ವ್ಯವಸ್ಥಿತವಾಗಿ ನಡೆಸಲು ಆರು ತಿಂಗಳ ಸಿದ್ಧತೆಯಾದರೂ ಬೇಕಾಗುತ್ತದೆ. ‘ಮಾಮಿ ಮುಂಬೈ ಚಿತ್ರೋತ್ಸವ’ವು ಅಕ್ಟೋಬರ್‌ನಲ್ಲಿ ನಡೆದರೆ, ಬಳಿಕ ದೇಶದ ಎಲ್ಲ ಚಿತ್ರೋತ್ಸವಗಳೂ ಒಂದೊಂದಾಗಿ ಮುಗಿದ ಮೇಲೆ ಬೆಂಗಳೂರು ಚಿತ್ರೋತ್ಸವವು ಫೆಬ್ರುವರಿ ಕೊನೆಯಲ್ಲಿ ನಡೆಯುತ್ತದೆ. ಅಷ್ಟು ಹೊತ್ತಿಗೆ ಜಗತ್ತಿನ ಇತರ ದೇಶಗಳ ಪ್ರತಿಷ್ಠಿತ ಚಿತ್ರೋತ್ಸವಗಳೂ ಮುಗಿದಿರುತ್ತವೆ. ಇದರಿಂದ ಆಗುವ ಒಂದು ಅನುಕೂಲವೆಂದರೆ, ಜಗತ್ತಿನ ಮತ್ತು ಭಾರತದ ಬೇರೆಲ್ಲಾ ಚಿತ್ರೋತ್ಸವಗಳಲ್ಲಿ ಗಮನ ಸೆಳೆದ ಸಿನಿಮಾಗಳನ್ನು ಇಲ್ಲಿ ಪ್ರದರ್ಶಿಸಬಹುದು. ಕ್ರಿಸ್ಮಸ್‌ ರಜೆಯೂ ಮುಗಿದು, ಫೆಬ್ರುವರಿಯಲ್ಲಿ ಬೆಂಗಳೂರಿನ ಹವೆಯೂ ಸ್ವಲ್ಪ ಹಿತಕರವಾಗಿರುವುದರಿಂದ, ವಿದೇಶಿ ಅತಿಥಿಗಳು ಇಲ್ಲಿಗೆ ಬರಲು ಇಷ್ಟಪಡುತ್ತಾರೆ. ಅಕಾಡೆಮಿಯು ಯೋಜನೆ ಹಾಕಿಕೊಂಡಂತೆ ಪ್ರತಿವರ್ಷ ರಾಜ್ಯದ ಪ್ರಾದೇಶಿಕ ಭಾಷೆಗಳ ಚಿತ್ರೋತ್ಸವವೂ ನಡೆದರೆ ಅಲ್ಲೂ ಒಳ್ಳೆಯ ಬೆಳೆ ಸಾಧ್ಯವಾಗಬಹುದು.

ಹಿಂದೊಮ್ಮೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿನಿಮಾ ಕ್ಲಬ್‌ಗಳು ಜನಪ್ರಿಯವಾಗಿದ್ದವು. ಮಂಗಳೂರು, ಉಡುಪಿ, ಸಾಗರ, ಶಿವಮೊಗ್ಗ ಮುಂತಾದೆಡೆ ನಡೆಯುತ್ತಿದ್ದ ಸಿನಿಮಾ ಕುರಿತ ಚರ್ಚೆಗಳು ರಾಜ್ಯದ ಗಮನ ಸೆಳೆದಿದ್ದವು. ಈಗ ಬೆಂಗಳೂರು, ಮೈಸೂರು, ಬೀದರ್ ಬಿಟ್ಟರೆ ಉಳಿದೆಡೆ ಕ್ಲಬ್‌ನ ಚಟುವಟಿಕೆಗಳು ಕಾಣುತ್ತಿಲ್ಲ. ಮನೆಯಲ್ಲೇ ದೊಡ್ಡ ಪರದೆಗಳ ಸೌಕರ್ಯ ಮತ್ತು ಟಿ.ವಿ.ಯೇ ಥಿಯೇಟರ್‌ ಆಗಿರುವ ಈ ದಿನಗಳಲ್ಲಿ, ಬಹುಶಃ ಹಿಂದಿನಂತೆ ಸಿನಿಮಾ ಕ್ಲಬ್‌ಗಳು ಚಿಗುರುವುದು ಕಷ್ಟವೇನೋ. ಟಿ.ಎಸ್‌.ನಾಗಾಭರಣ ಅವರು ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ, ಸಿನಿಮಾ ಸಂಸ್ಕೃತಿ ಬೆಳೆಸಲು 23 ಜಿಲ್ಲೆಗಳಲ್ಲಿ ರೂಪಿಸಿದ ‘ಬೆಳ್ಳಿಮಂಡಲ’ ಕಾರ್ಯಕ್ರಮ ನಿಜಕ್ಕೂ ಸ್ತುತ್ಯರ್ಹ ಪ್ರಯತ್ನ.

ಕನ್ನಡದಲ್ಲಿ ಈಗ ಬರುತ್ತಿರುವ ಸೂಪರ್‌ತಾರೆಯರ ಸಿನಿಮಾಗಳಿಂದ ಪ್ರೇಕ್ಷಕರ ಬೌದ್ಧಿಕ ಮಟ್ಟ ಬೆಳೆಯುವುದು ಅಷ್ಟರಲ್ಲೇ ಇದೆ. ಸಮಾನಾಂತರ ಮತ್ತು ಬ್ರಿಜ್‌ ಸಿನಿಮಾಗಳ ಬೆಳೆ ಹುಲುಸಾಗಲು ಇಂತಹ ಚಿತ್ರೋತ್ಸವಗಳು ಕಾರಣವಾಗಬೇಕು. ಬೆಂಗಳೂರು ಚಿತ್ರೋತ್ಸವದಲ್ಲಿ ಈ ಸಲ ಜಗತ್ತಿನ ಹಲವು ಶ್ರೇಷ್ಠ ಸಿನಿಮಾಗಳನ್ನು ನೋಡುವುದು ಸಾಧ್ಯವಾಯಿತು. ಆದರೆ ಅದರ ನಡುವೆಯೂ ಕಮರ್ಷಿಯಲ್‌ ಚಿತ್ರಗಳೆಂಬ ಸಂತೆಸರಕನ್ನು ಹೇರಳವಾಗಿ ತುರುಕಿದ್ದು ಆಭಾಸವೆನ್ನಿಸಿತು. ಜಗತ್ತಿನ ಯಾವ ಚಿತ್ರೋತ್ಸವದಲ್ಲೂ ಇಂತಹ ಆಭಾಸಗಳು ನಡೆಯುವುದಿಲ್ಲ ಎನ್ನುವುದನ್ನು ಸರ್ಕಾರ ಗಮನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT