ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ನಾಟಕ– ಪೊಲೀಸರ ವಿಕಟ ನಾಟಕ | ನಟರಾಜ್ ಹುಳಿಯಾರ್ ಬರಹ

ಬೀದರಿನ ಶಾಲೆಯೊಂದರ ಪ್ರಹಸನಕ್ಕೆ ಸಂಬಂಧಿಸಿ ಪೊಲೀಸರ ‘ಅತಿಪ್ರವೇಶ’ ಖಂಡನಾರ್ಹ
Last Updated 7 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಬೀದರಿನ ಶಾಹೀನ್ ಸ್ಕೂಲಿನ ವಾರ್ಷಿಕೋತ್ಸವದ ಪ್ರಹಸನವೊಂದರಲ್ಲಿ ಭಾಗಿಯಾಗಿದ್ದರೆಂದು ಶಾಲಾ ಮಕ್ಕಳನ್ನು ಮತ್ತೆಮತ್ತೆ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿರುವ ರೀತಿ, ಕರ್ನಾಟಕದಲ್ಲಿ ಅಪಾಯಕಾರಿ ಪೊಲೀಸ್ ರಾಜ್ಯ ಸೃಷ್ಟಿಯಾಗಬಹುದೆನ್ನುವ ಭೀತಿಗೆ ಕಾರಣವಾಗಿದೆ. ಈ ಪ್ರಹಸನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಟೀಕಿಸಲಾಯಿತು; ಪ್ರಧಾನಮಂತ್ರಿಯವರಿಗೆ ಅವಮಾನ ಮಾಡಲಾಯಿತು ಎಂದು ವಿಡಿಯೊವೊಂದನ್ನು ಆಧರಿಸಿ ಸಂಘಟನೆಯೊಂದು ನೀಡಿದ ದೂರಿನ ಆಧಾರದ ಮೇಲೆ ಈ ವಿಚಾರಣೆ ನಡೆಯುತ್ತಿದೆ.

ಈ ವಿಡಿಯೊ ಎಲ್ಲಿಂದ ಬಂತು? ಹೇಗೆ ಬಂತು? ಇದು ಅಸಲಿಯೇ? ಇದೀಗ ದೆಹಲಿ ಚುನಾವಣೆ ವೇಳೆ ಎರಗುತ್ತಿರುವ ಕಳ್ಳವಿಡಿಯೊಗಳ ಸರಣಿಯ ಭಾಗವೇ? ಇಂಥ ನಿರ್ಣಾಯಕ ಪ್ರಶ್ನೆಗಳನ್ನು ತನಿಖೆ ಮಾಡದ ಪೊಲೀಸರು, ಮಕ್ಕಳ ಮೇಲೆ ತಮ್ಮ ಪ್ರತಾಪ ತೋರಿಸುತ್ತಿದ್ದಾರೆ. ಯಾವುದೇ ತಪ್ಪಾಗಿದ್ದರೂ ತಕ್ಕ ಕಾನೂನು ಕ್ರಮ ಇದ್ದೇ ಇದೆ. ಆದರೆ ಶಾಲೆಯೊಂದಕ್ಕೆ ಹೋಗಿ ಮಕ್ಕಳ ಮನಸ್ಸಿನಲ್ಲಿ ಭಯ ಮೂಡಿಸುತ್ತಿರುವ ಈ ಪೊಲೀಸ್ ಅತಿರೇಕವನ್ನು ಗೃಹ ಸಚಿವರು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಬೇಕಾಗಿದೆ.

ನಾಟಕ, ಹಾಡು ಯಾವುದನ್ನೇ ಆಗಲಿ ದುರ್ಬಳಕೆ ಮಾಡಿಕೊಳ್ಳುವುದು ತಪ್ಪು. ಇಂಥ ದುರುಪಯೋಗವನ್ನು ರಾಜಕೀಯ ಪಕ್ಷಗಳೇ ಮಾಡುತ್ತಾ ಬಂದಿವೆ. ಕಾಲೇಜು ಹುಡುಗರು ಕೂಡ ಚಿಲ್ಲರೆ ಅಪಪ್ರಚಾರದ ನಾಟಕಗಳನ್ನು ಆಡಿದ್ದಾರೆ. ಅನ್ಯಧರ್ಮವನ್ನು ಅವಹೇಳನ ಮಾಡುವ ನಾಟಕವೊಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಯೊಂದರಲ್ಲೂ ನಡೆದಿತ್ತು. ಅದನ್ನು ಅಭಿನಯಿಸಿದ ಮಕ್ಕಳ ಹಿಂದೆ ಶಿಕ್ಷಕರಿದ್ದಾರೆ ಎಂಬ ದೂರೂ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನೋಡಿದಾಗ, ಯಾವುದೇ ಕಲೆಯನ್ನಾಗಲೀ ನಾಟಕವನ್ನಾಗಲೀ ಆರೋಗ್ಯಕರ
ವಿಮರ್ಶೆಗೋಸ್ಕರ ಬಳಸದೆ, ಯಾವುದೇ ವಿಷಯದ ಪರ, ವಿರೋಧದ ಪ್ರಚಾರಕ್ಕಾಗಿ ಬಳಸುವುದು ತಪ್ಪು ಎಂಬ ಪ್ರಜ್ಞೆ ಶಿಕ್ಷಕರಲ್ಲೂ ಮಕ್ಕಳಲ್ಲೂ ಇರಬೇಕಾಗುತ್ತದೆ.

ಇಂಥ ಪ್ರಕರಣಗಳಲ್ಲಿ ತಪ್ಪಾಗಿದ್ದರೆ, ಬೈದು ತಿದ್ದುವುದು ಎಲ್ಲ ಹಿರಿಯರ ಕರ್ತವ್ಯ. ಆದರೆ ಬೀದರ್ ಥರದ ಯೋಜಿತ ವಿಚಾರಣೆಗಳು ಯಾವ ಕಾಲದಲ್ಲಿ ನಡೆಯುತ್ತಿವೆ ಎಂಬುದನ್ನು ಗಮನಿಸಿ: ಒಂದೆಡೆ, ‘ಬಟ್ಟೆ ನೋಡಿದ ತಕ್ಷಣ ಜನರನ್ನು ಕಂಡುಹಿಡಿಯಬಹುದು’ ಎಂದಿದ್ದ ಪ್ರಧಾನಮಂತ್ರಿಗಳು; ಮತ್ತೊಂದೆಡೆ, ಮಸೀದಿಯಲ್ಲಿ ಮದ್ದುಗುಂಡುಗಳಿವೆಯೆಂದು ಕೂತಲ್ಲೇ ಕಲ್ಪಿಸಿಕೊಳ್ಳುವ ರೇಣುಕಾಚಾರ್ಯರು; ದೆಹಲಿಯಲ್ಲಿ ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿರುವವರು ಮನೆಗಳಿಗೆ ನುಗ್ಗಬಹುದು ಎಂದು ಚುನಾವಣೆ ಗೆಲ್ಲಲು ಚೀರುವ ಕೇಂದ್ರ ಮಂತ್ರಿಗಳು; ಅದೇ ದೆಹಲಿಯಲ್ಲಿ ‘ಶಾಂತಿಯುತವಾಗಿ ಪ್ರತಿಭಟಿಸುತ್ತಿರುವವರು ಹಿಂಸೆಗಿಳಿಯಲಿ ಹಾಗೂ ವೋಟುಗಳು ಧ್ರುವೀಕರಣಗೊಳ್ಳಲಿ’ ಎಂದು ಉದಯೋನ್ಮುಖ ‘ಭಯೋತ್ಪಾದಕ’ರನ್ನು ಛೂ ಬಿಡುತ್ತಿರುವವರು… ಇವೆಲ್ಲದರ ಮುಂದುವರಿಕೆಯಂತೆ ಬೀದರ್ ಶಾಲೆಯ ಯೋಜಿತ ವಿಚಾರಣೆಯ ವಿಕಟನಾಟಕವೂ ನಡೆದಿರುವಂತಿದೆ...

ಈ ವಿಚಾರಣೆಯ ಬಗ್ಗೆ ಪತ್ರ ಬರೆದಿರುವ ಪೋಷಕರು, ‘ಮಕ್ಕಳನ್ನು ಗಂಟೆಗಟ್ಟಲೆ ತರಗತಿಯಿಂದ ಹೊರಗಿರಿಸಿ ವಿಚಾರಣೆ ನಡೆಸಿರುವುದು ‘ಜುವೆನೈಲ್ ಜಸ್ಟಿಸ್ ಆ್ಯಕ್ಟ್‌ನ (2015) ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂಬುದನ್ನು ತೋರಿಸಿದ್ದಾರೆ. ಈ ವಿಚಾರಣೆಯ ಫೋಟೊಗಳನ್ನು ಪ್ರಕಟಿಸಿರುವುದಂತೂ ಅತಿಹೀನ ಕೆಲಸ. ಇದೀಗ ಈ ವಿಚಾರಣೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಯ ವರ್ಗವಾಗಿದೆ. ಈಗಲಾದರೂ ಅವರು ಹಾಗೂ ಪ್ರಕರಣದ ಹಿನ್ನೆಲೆಯಲ್ಲಿ ಇರುವವರು ಇಂಥ ಪರಿಸ್ಥಿತಿ ತಮ್ಮ ಮನೆಮಕ್ಕಳಿಗೂ ಎದುರಾದರೆ ಅವರ ಮನಸ್ಸಿಗೆ ಏನಾಗುತ್ತದೆ ಎಂದು ಪ್ರಾಮಾಣಿಕವಾಗಿ ಯೋಚಿಸಬೇಕು. ಯಾವುದೇ ಧರ್ಮದ, ಜಾತಿಯ ಮಗು ತಪ್ಪು ಮಾಡಿದರೆ ಪೊಲೀಸರಾಗಲೀ ಮಾಧ್ಯಮಗಳಾಗಲೀ ‘ವಿಚಾರಣಾ ಭಯೋತ್ಪಾದನೆ’ ಆರಂಭಿಸುವುದು ಕ್ರೂರವಾದುದು. ಮಾಧ್ಯಮಗಳು, ರಾಜಕಾರಣಿಗಳು, ಜಾಲತಾಣಗಳು, ಪೊಲೀಸರು ಕೊನೆಯಪಕ್ಷ ತಮ್ಮ ಮನೆಯ ಮಕ್ಕಳನ್ನಾದರೂ ನೆನೆದು ತಮ್ಮ ದ್ವೇಷಭಾಷೆಯನ್ನು ಬಿಡಬೇಕು.

ಧರ್ಮ, ಜಾತಿಗಳ ಹೆಸರಲ್ಲಿ ದ್ವೇಷ ಸೃಷ್ಟಿಸುವುದಕ್ಕೆ ಈಗ ಮನೆಯೇ ಮೊದಲ ಪಾಠಶಾಲೆಯಾಗಿ
ಬಿಟ್ಟಿದೆ! ಮಕ್ಕಳೆದುರು ಇತರ ಧರ್ಮೀಯರ ಬಗ್ಗೆ ಕೆಟ್ಟ ಪೂರ್ವಗ್ರಹಗಳನ್ನು ಕಾರಿಕೊಳ್ಳುವುದನ್ನು ತಂದೆ, ತಾಯಿ ಮೊದಲು ಬಿಡಬೇಕು. ಮಕ್ಕಳ ಮನಸ್ಸಿನಲ್ಲಿ ದ್ವೇಷ ಬಿತ್ತುವ ಪೋಷಕರಾಗಲೀ ಶಿಕ್ಷಕರಾಗಲೀ ಮಕ್ಕಳ ಬೌದ್ಧಿಕ ಬೆಳವಣಿಗೆಯನ್ನು ಶಾಶ್ವತವಾಗಿ ಚಿವುಟಿ ಹಾಕುತ್ತಾರೆ. ಮಕ್ಕಳು ಉಛಾಯಿಸಿ ಮಾತಾಡಿದ್ದರೆ, ಅದನ್ನು ಸರಿಪಡಿಸಿಕೊಳ್ಳುವಂತೆ ಟೀಚರುಗಳು ಹೇಳಬೇಕೇ ಹೊರತು, ಪೊಲೀಸರು ಮಧ್ಯ ಪ್ರವೇಶಿಸುವುದು ಅಪಾಯಕರ. ಎಲ್ಲ ಪೋಷಕರೂ ಇದನ್ನು ದನಿಯೆತ್ತಿ ಹೇಳಬೇಕು.

ಇವತ್ತು ‘ದೇಶದ್ರೋಹ’ ಎಂಬ ಶಬ್ದವನ್ನು ಬೇಕಾಬಿಟ್ಟಿ ಬಳಸುತ್ತಿರುವ ಪೊಲೀಸರು, ರಾಜಕಾರಣಿಗಳು ಹಾಗೂ ನಿತ್ಯ ಚೀರಾಟಗಾರರು, 2016ರಲ್ಲಿ ಕೂಡುಂಕುಳಂ ಅಣು
ಸ್ಥಾವರದ ವಿರುದ್ಧ ಹೋರಾಡಿದವರ ಮೇಲೆ ಹಾಕಲಾಗಿದ್ದ ‘ದೇಶದ್ರೋಹ’ದ ಕೇಸನ್ನು ವಜಾಗೊಳಿಸುತ್ತಾ ಸುಪ್ರೀಂ ಕೋರ್ಟ್‌ ಕೊಟ್ಟ ತೀರ್ಪನ್ನು ನೆನಪಿನಲ್ಲಿ ಇಟ್ಟುಕೊಳ್ಳ
ಬೇಕು: ‘ಯಾರಾದರೂ ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ದೇಶದ್ರೋಹದ ಕೇಸು ದಾಖಲಿಸಲಾಗದು. ‘ಐಪಿಸಿ 124(ಎ) ಸೆಡಿಶನ್’ ನಿಯಮಗಳನ್ನು ಈ ಹಿಂದೆ ಸುಪ್ರೀಂ ಕೋರ್ಟ್‌ ‘ಕೇದಾರನಾಥ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಬಿಹಾರ್’ ಪ್ರಕರಣದಲ್ಲಿ ಕೊಟ್ಟಿರುವ ಮಾರ್ಗದರ್ಶಿ ಸೂತ್ರಗಳ ಪ್ರಕಾರವೇ ಅನ್ವಯಿಸಬೇಕು’.

ಈ ಆದೇಶವನ್ನು ಎಲ್ಲ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ತಲುಪಿಸಬೇಕೆಂದು ಕೋರ್ಟ್‌ ಆದೇಶ ನೀಡಿತ್ತು. ‘ಯಾಂತ್ರಿಕವಾಗಿ ಐಪಿಸಿಯನ್ನು ಅನ್ವಯಿಸುವ ಪೊಲೀಸರಿಗೆ ಈ ಕಾನೂನಿನ ಸೂಕ್ಷ್ಮಗಳು ಹೇಗೆ ಅರ್ಥವಾಗುತ್ತವೆ?’ ಎಂದು ವಕೀಲ ಪ್ರಶಾಂತ ಭೂಷಣ್ ಪ್ರಶ್ನೆಯೆತ್ತಿದಾಗ, ನ್ಯಾಯಮೂರ್ತಿಗಳು ಹೇಳಿದರು: ‘ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಇದು ಅರ್ಥವಾಗದಿದ್ದರೆ ಪರವಾಗಿಲ್ಲ. ಆದರೆ ಮ್ಯಾಜಿಸ್ಟ್ರೇಟರುಗಳು ದೇಶದ್ರೋಹದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ರೂಪಿಸಿರುವ ಈ ಮಾರ್ಗದರ್ಶಿ ಸೂತ್ರಗಳನ್ನು ಅರ್ಥ ಮಾಡಿಕೊಂಡು ಅನುಸರಿಸಬೇಕು’.

ಯಾವನೋ ‘ದೇಶದ್ರೋಹ’ ಎಂದು ಚೀರಿದ ತಕ್ಷಣ ದೇಶದ್ರೋಹದ ಪ್ರಕರಣ ದಾಖಲು ಮಾಡುವ ನ್ಯಾಯವಿರೋಧಿ ನಡವಳಿಕೆಯ ಈ ಕಾಲದಲ್ಲಿ ಎಲ್ಲರೂ ಈ ತೀರ್ಪನ್ನು ಮನನ ಮಾಡಿಕೊಳ್ಳಬೇಕು.

ಆರು ವರ್ಷಗಳ ಕೆಳಗೆ ಪಾರ್ಲಿಮೆಂಟಿನ ಒಳ-ಹೊರಗೆ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಇದೇ ಬಿಜೆಪಿಯವರು ಹೀನಾಯವಾಗಿ ಟೀಕಿಸುತ್ತಿದ್ದರಲ್ಲವೇ? ಆದರೂ ಸಿಂಗ್ ಎಂದೂ ಸೇಡಿನ ರಾಜಕೀಯಕ್ಕೆ ಇಳಿಯಲಿಲ್ಲ. ಇಂದಿನ ಪ್ರಧಾನ ಮಂತ್ರಿ ಅವರೂ ಟೀಕೆಗೆ ಒಳಗಾಗ
ಲೇಬೇಕು; ಟೀಕೆಯನ್ನು ಸಹಿಸುವ ಶಕ್ತಿಯೂ ಅವರಿಗಿರಬೇಕು. ಇನ್ನು ಶಾಲಾ ನಾಟಕಗಳಲ್ಲಿನ ವಿಮರ್ಶೆಗಳನ್ನೇ ಗಮನಿಸಿ: ಕೈಲಾಸಂ, ಕುವೆಂಪು ನಾಟಕಗಳಿಂದ ಹಿಡಿದು ಹಲಬಗೆಯ ಸಮಾಜವಿಮರ್ಶೆಯ ನಾಟಕಗಳು ಶಾಲಾ, ಕಾಲೇಜು ರಂಗಭೂಮಿಯಿಂದ ಹಿಡಿದು ನೂರಾರು ವೇದಿಕೆಗಳಲ್ಲಿ ಪ್ರದರ್ಶಿತವಾಗಿ ಜನರನ್ನು ತಿದ್ದಿವೆ. ಬ್ರಿಟಿಷರ ವಿರುದ್ಧ ನಾಟಕ ಆಡಿ ಸ್ವಾತಂತ್ರ್ಯದ ಕೆಚ್ಚು ತುಂಬಿದ ಈ ನಾಡಿನಲ್ಲಿ ಜಮೀನ್ದಾರರ ಕ್ರೌರ್ಯದ ವಿರುದ್ಧ, ಹಲಬಗೆಯ ಭೇದಭಾವಗಳ ವಿರುದ್ಧ ನಾಟಕ ಪ್ರದರ್ಶಿಸಿ ಮಕ್ಕಳ ಮನಸ್ಸನ್ನು ತಿದ್ದಿದ ಉದಾಹರಣೆಗಳಿವೆ.

ನಟರಾಜ್ ಹುಳಿಯಾರ್

ಇಂಥ ಪರಂಪರೆಯಿರುವ ಕರ್ನಾಟಕದಲ್ಲಿ ಶಾಲೆಯೊಂದರ ಪ್ರಹಸನಕ್ಕೆ ಸಂಬಂಧಿಸಿದಂತೆ ಪೊಲೀಸರ ‘ಅತಿ ಪ್ರವೇಶ’ ಅತ್ಯಂತ ಖಂಡನಾರ್ಹವಾಗಿದೆ. ಇದರ ಹಿಂದೆ ಇರುವ ರಾಜಕಾರಣಿಗಳು, ಸಂಘಟನೆಗಳು, ಈ ಶಾಲೆಗೆ ಮಸಿ ಬಳಿಯಲು ಶಾಮೀಲಾಗಿರಬಹುದಾದ ಪೈಪೋಟಿ ಸಂಸ್ಥೆಗಳು- ಎಲ್ಲರೂ ನೆನಪಿಡಬೇಕಾದ ಸತ್ಯವೊಂದಿದೆ: ಇಂಥ ಅಗ್ಗದ ಕೆಲಸಗಳು ಮುಂದೊಮ್ಮೆ ಅದರಲ್ಲಿ ಭಾಗಿಯಾದವರ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳುತ್ತವೆ. ಉತ್ತಮ ಶಿಕ್ಷಣ ಸಂಸ್ಥೆಗಳನ್ನು ನಾಶ ಮಾಡುವ ಕ್ರೌರ್ಯವು ಉತ್ತರ ಭಾರತದಲ್ಲಿ ಕಳೆದ ಐದು ವರ್ಷದಿಂದ ನಡೆಯುತ್ತಿದೆ. ಈ ರೋಗ ಕರ್ನಾಟಕದಲ್ಲೂ ಹಬ್ಬದಂತೆ ನೋಡಿಕೊಳ್ಳುವ ಹೊಣೆ ಗೃಹ ಸಚಿವರಂತೆ, ಮುಖ್ಯಮಂತ್ರಿಯವರ ಮೇಲೂ ಇದೆ.

ಕೊನೆಯದಾಗಿ, ಮಾಸಲು ಬಟ್ಟೆ ನೋಡಿ ಮಕ್ಕಳ ಕಳ್ಳರನ್ನು ‘ಕಂಡುಹಿಡಿಯುವ’ ಜನರ ಈಚಿನ ಚಾಳಿಯ ಜೊತೆಗೆ, ಈಗ ಮಕ್ಕಳನ್ನೇ ಕಳ್ಳರಂತೆ ನೋಡುವ ಕೆಟ್ಟ ಚಾಳಿಯನ್ನು ಕರ್ನಾಟಕದ ಪೊಲೀಸರು ಆರಂಭಿಸದಿರಲಿ. ಈ ಪ್ರಕರಣದಿಂದಾಗಿ ಒಂಬತ್ತು ವರ್ಷದ ಮುಸಲ್ಮಾನ ಮಗುವೊಂದು ದಿಕ್ಕಿಲ್ಲದೆ ದಿಗ್ಭ್ರಮೆಗೊಂಡಿದೆ. ಈ ಮಗುವಿನ ವಿಧವೆ ತಾಯಿ ಬಂಧನದಲ್ಲಿದ್ದಾಳೆ. ಈ ಅನಾಥ ಮಗುವಿನ ಆಕ್ರಂದನ ಜಾತಿ, ಧರ್ಮಗಳ ಗೋಡೆ ಮೀರಿ ಎಲ್ಲ ನಾಗರಿಕರಲ್ಲಿ ಅನುಕಂಪ, ಆತಂಕಗಳನ್ನು ಉಕ್ಕಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT