ಬುಧವಾರ, ಜನವರಿ 22, 2020
18 °C
ಪೌರತ್ವದ ವಿಚಾರದಲ್ಲಿ ಹೊಸದೊಂದು ವ್ಯವಸ್ಥೆಯ ಸೃಷ್ಟಿಗೆ ನಾಂದಿ...

ಪೌರತ್ವ ಕಾನೂನು: ವಿರೋಧ ಏಕೆ?

ಲೀ ವರ್ಗೀಸ್ Updated:

ಅಕ್ಷರ ಗಾತ್ರ : | |

Prajavani

‘ಪೌರತ್ವ (ತಿದ್ದುಪಡಿ) ಮಸೂದೆ– 2019’ ಸಂಸತ್ತಿನ ಅನುಮೋದನೆ ಪಡೆದುಕೊಂಡಿದೆ, ರಾಷ್ಟ್ರಪತಿ ಇದಕ್ಕೆ ಅಂಕಿತ ಹಾಕಿದ್ದಾರೆ. ಇದು ಈಗ ಕಾಯ್ದೆಯಾಗಿದೆ. ಇದು 2016ರಲ್ಲಿ ಲೋಕಸಭೆಯಲ್ಲಿ ಮೊದಲ ಬಾರಿಗೆ ಮಂಡನೆ ಆದ ದಿನದಿಂದಲೂ ವಿವಾದಗಳಿಗೆ ಕಾರಣವಾಗಿದೆ. ಕಾಯ್ದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ.

ಭಾರತದ ಪೌರತ್ವ ನೀಡುವ ವಿಚಾರದಲ್ಲಿ ಈ ಕಾಯ್ದೆಯು ಹೊಸದೊಂದು ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಅಫ್ಗಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ 2014ರ ಡಿಸೆಂಬರ್‌ 31ರೊಳಗೆ ಭಾರತಕ್ಕೆ ಅಕ್ರಮವಾಗಿ ಬಂದವರನ್ನು ಇದು ‘ಅಕ್ರಮ ವಲಸಿಗರು’ ಎಂದು ಪರಿಗಣಿಸುವುದಿಲ್ಲ. ಅವರಿಗೆ ಭಾರತದ ಪೌರತ್ವವನ್ನು ತ್ವರಿತವಾಗಿ ಪಡೆಯಲು ದಾರಿಯೊಂದನ್ನು ಇದು ಕಲ್ಪಿಸುತ್ತದೆ. ಭಾರತದ ನೆರೆ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಕೆಲವು ಅಲ್ಪಸಂಖ್ಯಾತರಿಗೆ ಆಶ್ರಯ ನೀಡುವುದು ಈ ತಿದ್ದುಪಡಿಯ ಉದ್ದೇಶ. ಆಶ್ರಯ ಪಡೆದುಕೊಳ್ಳುವ ಸಮುದಾಯಗಳ ಪಟ್ಟಿಯಲ್ಲಿ ಮುಸ್ಲಿಮರು ಇಲ್ಲದಿರುವುದು ಸ್ಪಷ್ಟ.

1955ರ ಪೌರತ್ವ ಕಾಯ್ದೆಯು ರೂಪಿಸಿದ ಪೌರತ್ವ ನೀಡುವ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ತರಲಿದೆ ಹೊಸದಾಗಿ ತಂದಿರುವ ತಿದ್ದುಪಡಿ. ‘1950ರ ಜನವರಿ 26ರ ನಂತರ ಭಾರತದಲ್ಲಿ ಜನಿಸಿದ ಪ್ರತಿ ವ್ಯಕ್ತಿಯೂ, ಆತನ ಜನನದ ಕಾರಣದಿಂದಾಗಿಯೇ ಭಾರತದ ಪೌರ ಆಗುತ್ತಾನೆ’ ಎಂದು ಕಾಯ್ದೆಯ ಸೆಕ್ಷನ್ 3ರಲ್ಲಿ ಹೇಳಲಾಗಿದೆ. 1986ರ ನಂತರ ಹೆಚ್ಚುವರಿ ನಿಯಮವೊಂದನ್ನು ಇದಕ್ಕೆ ಸೇರಿಸಲಾಯಿತು. ಭಾರತದಲ್ಲಿ ಹುಟ್ಟಿದ ಮಗುವೊಂದು ಭಾರತದ ಪೌರ ಆಗಬೇಕು ಎಂದಾದರೆ, ಇಬ್ಬರು ಪಾಲಕರಲ್ಲಿ ಒಬ್ಬರಾದರೂ ಭಾರತೀಯ ಆಗಿರಬೇಕು ಎನ್ನುವುದು ಆ ನಿಯಮ. ಪೌರತ್ವದ ನಿಯಮಗಳನ್ನು 2003ರಲ್ಲಿ ಇನ್ನಷ್ಟು ಬಿಗಿಗೊಳಿಸಲಾಯಿತು. ವ್ಯಕ್ತಿಯೊಬ್ಬ ಭಾರತದ ಪ್ರಜೆಯಾಗಬೇಕು ಎಂದಾದರೆ, ಆತ ಭಾರತದಲ್ಲಿ ಜನಿಸಿರಬೇಕು ಹಾಗೂ ಆತನ ಇಬ್ಬರೂ ಪಾಲಕರು ಭಾರತದ ಪ್ರಜೆಗಳಾಗಿರಬೇಕು ಅಥವಾ ಇಬ್ಬರಲ್ಲಿ ಒಬ್ಬರು ಭಾರತದ ಪ್ರಜೆಯಾಗಿರಬೇಕು, ಇನ್ನೊಬ್ಬರು ಅಕ್ರಮ ವಲಸಿಗ ಆಗಿರಬಾರದು ಎಂಬ ನಿಯಮ ತರಲಾಯಿತು.

ಸಂವಿಧಾನ ರಚನಾ ಸಭೆಯಲ್ಲಿ ಕೂಡ ಪೌರತ್ವದ ಬಗ್ಗೆ ಬಿರುಸಿನ ಚರ್ಚೆಗಳು ನಡೆದಿದ್ದವು. ಭಾರತದ ಭವ್ಯ ಇತಿಹಾಸದ ಕುರಿತು ಉಲ್ಲೇಖಿಸಿ, ಹಳೆಯದರ ನೆಲೆಯ ಮೇಲೆ ಹೊಸದೊಂದು ಸಮಾಜವನ್ನು ಕಟ್ಟುವ ಅಗತ್ಯವೇ ಚರ್ಚೆಗಳಲ್ಲಿ ವ್ಯಕ್ತವಾಗಿದ್ದ ಪ್ರಮುಖ ಆಶಯವಾಗಿತ್ತು. ನವಭಾರತದ ಪರಿಕಲ್ಪನೆಯಲ್ಲಿ ಧರ್ಮನಿರಪೇಕ್ಷ ತತ್ವವೇ ಪ್ರಧಾನವಾಗಿ ಇರಬೇಕು ಎಂಬ ಆಶಯ ಚರ್ಚೆಗಳಲ್ಲಿ ವ್ಯಕ್ತ
ವಾಗಿತ್ತು. ಕೋಮುವಾದಿ ರಾಜಕಾರಣಕ್ಕೆ ಕಾನೂನಿನ ಮಾನ್ಯತೆ ದೊರೆಯಲೇಬಾರದು ಎಂಬುದಕ್ಕೆ ಸಂವಿಧಾನ ರಚನಾ ಸಭೆಯ ಬಹುತೇಕ ಸದಸ್ಯರು
ಕಟಿಬದ್ಧರಾಗಿದ್ದರು.

ಮೂರು ಬಗೆಯಲ್ಲಿ ವರ್ಗೀಕರಣವನ್ನು ತರುವ ಮೂಲಕ ಈಗಿನ ತಿದ್ದುಪಡಿಗಳು, ಪೌರತ್ವದ ವ್ಯವಸ್ಥೆಯಲ್ಲಿ ಧರ್ಮನಿರಪೇಕ್ಷ ಸ್ವರೂಪಕ್ಕೆ ಭಾರತ ತೋರಿದ್ದ ಬದ್ಧತೆಯನ್ನು ನಿರರ್ಥಕಗೊಳಿಸುತ್ತವೆ. ಒಂದು: ಅಫ್ಗಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಲಸಿಗರಲ್ಲಿ ಮುಸ್ಲಿಮರು, ಮುಸ್ಲಿಮೇತರರು ಎಂಬ ವರ್ಗೀಕರಣ. ಎರಡು: ಈ ಮೂರು ದೇಶಗಳಿಂದ ಬಂದ ವಲಸಿಗರು ಹಾಗೂ ಇತರ ದೇಶಗಳಿಂದ ಬಂದ ವಲಸಿಗರು ಎಂಬ ವರ್ಗೀಕರಣ. ಮೂರು: ಧಾರ್ಮಿಕ ಕಾರಣಗಳಿಗಾಗಿ ದೌರ್ಜನ್ಯಕ್ಕೆ ಗುರಿಯಾಗಿ ವಲಸೆ ಬಂದವರು ಹಾಗೂ ಇತರ ಕಾರಣಗಳಿಂದಾಗಿ ದೌರ್ಜನ್ಯಕ್ಕೆ ಒಳಗಾಗಿ ವಲಸೆ ಬಂದವರ ನಡುವೆ ವರ್ಗೀಕರಣ. ಈ ರೀತಿ ಮಾಡುವ ಮೂಲಕ ಹಿಂದೂಗಳು ಭಾರತದ ಸಹಜ ಪೌರರು, ಭಾರತವು ಹಿಂದೂಗಳ ಸಹಜ ತಾಯ್ನಾಡು ಎನ್ನುವ ಪರಿಕಲ್ಪನೆಗೆ ಜೀವ ಕೊಡುತ್ತಿರುವಂತಿದೆ.

ಇದು ಭಾರತದ ಸಂವಿಧಾನ ನಿರ್ಮಾತೃಗಳು ಕಂಡ ಕನಸಿಗೆ ಭಂಗ ತರುತ್ತದೆ. ಭಾರತವನ್ನು ತಮ್ಮ ತಾಯ್ನಾಡು ಎಂದು ಆಯ್ಕೆ ಮಾಡಿಕೊಂಡವರ ನಂಬಿಕೆಗಳಿಗೆ ಗಾಸಿ ಮಾಡುತ್ತದೆ. ಅಷ್ಟೇ ಅಲ್ಲ, ಸಂವಿಧಾನದಲ್ಲಿ ಹೇಳಿರುವ ಪೌರತ್ವದ ಸರ್ವಸಮಾನತೆಯ ಪರಿಕಲ್ಪನೆಗೆ ವಿರುದ್ಧವೂ ಹೌದು. ಇಸ್ರೇಲ್ ಮಾದರಿಯಲ್ಲಿ, ಪೌರತ್ವದ ಕಾನೂನಿನಲ್ಲಿ ಧರ್ಮಾಧಾರಿತ ವರ್ಗೀಕರಣವನ್ನು ತರುವ ಮೂಲಕ ಭಾರತವು ಸಮಾನತೆ, ಭ್ರಾತೃತ್ವ ಮತ್ತು ಧರ್ಮ
ನಿರಪೇಕ್ಷತೆಗೆ ಬದ್ಧವಾಗಿರುವುದಾಗಿ ಸಂವಿಧಾನದ ಮೂಲಕ ನೀಡಿದ ವಚನವನ್ನು ದುರ್ಬಲಗೊಳಿಸಿದೆ.

ಸಮಾನತೆಯನ್ನು ಹೇಳುವ ಸಂವಿಧಾನದ 14ನೇ ವಿಧಿಗೆ ಕೂಡ ಇದು ವಿರುದ್ಧವಾಗಿದೆ. ಕಾನೂನಿನ ಅಡಿಯಲ್ಲಿ ಸಮಾನ ರಕ್ಷಣೆ ಅಂದರೆ, ಒಂದೇ ರೀತಿಯ ಪರಿಸ್ಥಿತಿ ಎದುರಿಸುತ್ತಿರುವ ಎಲ್ಲರಿಗೂ ಕಾನೂನನ್ನು ಒಂದೇ ಬಗೆಯಲ್ಲಿ ಅನ್ವಯ ಮಾಡುವುದು. ಆದರೆ ಈ ಕಾನೂನು ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದವರಿಗೆ ಮಾತ್ರ ಏಕೆ ಪೌರತ್ವ ನೀಡುತ್ತದೆ, ಮುಸ್ಲಿಮರಿಗೆ ಏಕಿಲ್ಲ ಎಂಬುದಕ್ಕೆ ವಿವರಣೆ ಇಲ್ಲ. ಭಾರತದ ಕೆಲವು ನೆರೆ ದೇಶಗಳಲ್ಲಿ ಮುಸ್ಲಿಂ ಸಮುದಾಯದ ಕೆಲವರು ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ. ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರು, ಚೀನಾದಲ್ಲಿ ಉಯ್ಗುರ್‌ಗಳು ಮತ್ತು ಪಾಕಿಸ್ತಾನದಲ್ಲಿ ಅಹಮದೀಯರು ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಆದರೆ ಅವರನ್ನೆಲ್ಲ ಈ ತಿದ್ದುಪಡಿಯಿಂದ ಹೊರಗಿಡಲಾಗಿದೆ. ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವ ಧರ್ಮ
ನಿರಪೇಕ್ಷ ರಾಷ್ಟ್ರ ನಮ್ಮದಾಗಿರುವ ಕಾರಣ, ಈ ತಿದ್ದುಪಡಿಯಲ್ಲಿ ಇರುವ ಅಸಮಾನತೆಯ ಅಂಶಗಳನ್ನು ಸಮರ್ಥಿಸಿಕೊಳ್ಳುವುದು ಕಷ್ಟವಾಗುತ್ತದೆ. ದೌರ್ಜನ್ಯಕ್ಕೆ ಒಳಗಾದ ಬೇರೆ ಬೇರೆ ಅಲ್ಪಸಂಖ್ಯಾತ ಸಮುದಾಯಗಳ ನಡುವೆ ವರ್ಗೀಕರಣ ಮಾಡಲು ಧರ್ಮವನ್ನು ಬಳಸಿಕೊಳ್ಳುವುದು ವಾಸ್ತವದಲ್ಲಿ ಧರ್ಮನಿರಪೇಕ್ಷತೆಗೆ ವಿರುದ್ಧ. ಧರ್ಮನಿರಪೇಕ್ಷ ತತ್ವವು ನಮ್ಮ ಸಂವಿಧಾನದ ಮೂಲ ಸ್ವರೂಪಗಳಲ್ಲಿ ಒಂದು.

ಪೌರತ್ವ ನೀಡಲು ಧಾರ್ಮಿಕ ದೌರ್ಜನ್ಯವನ್ನು ಮಾತ್ರ ಏಕೆ ಆಧಾರವೆಂದು ಗುರುತಿಸಲಾಗಿದೆ, ಇತರ ಬಗೆಯ ದೌರ್ಜನ್ಯಗಳನ್ನು ಆಧರಿಸಿ ಏಕೆ ಪೌರತ್ವ ನೀಡುವುದಿಲ್ಲ ಎಂಬುದನ್ನು ತಿದ್ದುಪಡಿಯಲ್ಲಿ ಸ್ಪಷ್ಟಪಡಿಸಿಲ್ಲ. ಜನಾಂಗ, ಧರ್ಮ, ಲಿಂಗ, ರಾಷ್ಟ್ರೀಯತೆ ಮುಂತಾದ ಕಾರಣಗಳಿಗಾಗಿ ದೌರ್ಜನ್ಯಕ್ಕೆ ಗುರಿಯಾದ ವಿದೇಶಿಯರ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲು ನಿರ್ದಿಷ್ಟ ಪ್ರಕ್ರಿಯೆ (Standard Operating Procedure) 2011ರಿಂದ ಜಾರಿಯಲ್ಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಈ ಬಗೆಯ ದೌರ್ಜನ್ಯಗಳಿಗೆ ತನ್ನ ದೇಶದಲ್ಲಿ ತುತ್ತಾದ ವಿದೇಶಿಗ ದೀರ್ಘಾವಧಿ ವೀಸಾ ಪಡೆದು ಭಾರತದಲ್ಲಿ ಇರಬಹುದು ಎಂದೂ ಸಚಿವಾಲಯ ಹೇಳಿದೆ. ಹಾಗಾದರೆ, ದೌರ್ಜನ್ಯಕ್ಕೆ ಒಳಗಾದ ವಿದೇಶಿಯರು ಭಾರತದ ಪೌರತ್ವಕ್ಕೆ ಸಲ್ಲಿಸುವ ಅರ್ಜಿಗಳನ್ನೆಲ್ಲ ಈ ಪ್ರಕ್ರಿಯೆಯ ಅನ್ವಯ ತೀರ್ಮಾನಿಸಲು ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಗೆ ಉತ್ತರ ಇಲ್ಲ.

ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಕ್ಕೆ ಮಾನ್ಯತೆ ನೀಡಿ, ಈ ತಿದ್ದುಪಡಿಯು ನಮ್ಮ ಸಂವಿಧಾನ ಹೇಳಿದ ಭಾರತದ ಪರಿಕಲ್ಪನೆಯ ಮೇಲೆ ಏಟು ನೀಡಿದೆ. ಪೌರತ್ವದ ವಿಚಾರವನ್ನು ಧರ್ಮದ ಜೊತೆ ತಳಕು ಹಾಕುವ ಮೂಲಕ ಈ ತಿದ್ದುಪಡಿಯು ಸರ್ಕಾರವು ವಿವಿಧ ಧಾರ್ಮಿಕ ಗುಂಪುಗಳ ಜೊತೆಗೆ ಹೊಂದಿರುವ ಸಂಬಂಧದ ಮೂಲ ಸ್ವರೂಪದಲ್ಲೇ ಬದಲಾವಣೆ ತರಲಿದೆ. ಒಂದು ಗುಂಪಿಗಿಂತ ಹೆಚ್ಚಿನ ಪ್ರಾಧಾನ್ಯವನ್ನು ಇತರ ಒಂದಿಷ್ಟು ಗುಂಪುಗಳಿಗೆ ನೀಡುತ್ತದೆ.

ಪೌರತ್ವ ವ್ಯವಸ್ಥೆಯಲ್ಲಿನ ಈ ಬದಲಾವಣೆಯು ಬಹುಸಂಖ್ಯೆಯ ಜನರ ಮೇಲೆ ಪರಿಣಾಮ ಬೀರದಿರಬಹುದು. ಆದರೆ, ಸಮಾನತೆ, ಭ್ರಾತೃತ್ವ ಹಾಗೂ ಧರ್ಮನಿರಪೇಕ್ಷತೆಯ ವಚನದಿಂದ ಬಹುದೊಡ್ಡ ಮಟ್ಟದಲ್ಲಿ ದೂರ ಸರಿದಂತೆ ಆಗುತ್ತದೆ.

ಲೇಖಕಿ: ಬೆಂಗಳೂರಿನ ‘ದಕ್ಷ್’ ಸಂಸ್ಥೆಯಲ್ಲಿ
ಸಂಶೋಧನಾ ನಿರ್ವಾಹಕಿ

ಪ್ರತಿಕ್ರಿಯಿಸಿ (+)