ಭಾನುವಾರ, ಸೆಪ್ಟೆಂಬರ್ 19, 2021
27 °C
ಸಮಸಮಾಜಕ್ಕೆ ಕೊಡುಗೆ ನೀಡಿದವರ ಪರಂಪರೆಯ ಹಾದಿ ನಮ್ಮ ನಡೆಯಾಗಬೇಕು

ಇವನಾರವ ಎಂದೆನಿಸದಿರಯ್ಯ

ಡಾ. ಡಿ.ಎಸ್.ಚೌಗಲೆ Updated:

ಅಕ್ಷರ ಗಾತ್ರ : | |

ಗ್ರಾಮದೇವರ ಪಲ್ಲಕ್ಕಿಗೆ ಕೊರವರ ಸಿದ್ರಾಮನ ಶಹನಾಯಿ, ಮುಸ್ಲಿಮರ ನದಾಫನ ತಾಳಶೆ, ರಾವಳರ ಮಹದೇವನ ಕೈತಾಳ, ಕುಂಬಾರ ವಿರೂಪಾಕ್ಷ ಹಾಗೂ ಸಂಗಡಿಗರು ನುಡಿಸುವ ಕರಡಿಮಜಲು ವಾದ್ಯಗಳು ಸೇರಿ ಹುಟ್ಟುವ ಸಂಗೀತದ ಲಯದಂತಹ ಭಾರತವೇ ನನ್ನ ನಿಜದ ಭಾರತವಾಗಬೇಕು. ಬಾರಾ ಬಲುತೆದಾರ ಅಥವಾ ಆಯಗಾರ ವ್ಯವಸ್ಥೆಯ ಗ್ರಾಮ ಬದುಕು ಹಸನಾಗಿ ನಡೆಯಲು ಸಹಬಾಳ್ವೆ ಅತೀಮುಖ್ಯ.

ಸಮುದಾಯಗಳ ನಡುವೆ ರಾಜಕೀಯ ಕೋಮುವಿಷ ಹರಡುವ ಮುನ್ನ, ಬಾಂಧವ್ಯವೇ ಪ್ರಧಾನ ಧೋರಣೆಯಾಗಿದ್ದ ಗ್ರಾಮ್ಯ ಬದುಕು ಇದೆಯಲ್ಲ, ಅದು ಬಹುಸುಂದರ. ಹಾಗೆ ಬಹುರೂಪಿ ಮತ್ತು ಬಹುತ್ವದ ಭಾರತವು ಸ್ವಾತಂತ್ರ್ಯಾನಂತರದ ಕಾಲದಲ್ಲಿ ಅರಳಿದ್ದಿದೆ. ಕಷ್ಟ–ಸುಖಗಳನ್ನು ಪರಸ್ಪರ ಹಂಚಿಕೊಂಡದ್ದಿದೆ. ವಿಶೇಷವಾಗಿ ಉತ್ತರ ಕರ್ನಾಟಕವು ಸೂಫಿಸಂತರು, ಶರಣರು ಬಾಳಿದ ನೆಲ. ಭ್ರಾತೃತ್ವವೇ ಈ ಮಣ್ಣಿನ ತಾಕತ್ತು ಮತ್ತು ಗುಣ. ಖ್ವಾಜಾ ಬಂದೇನವಾಜರಿಂದ ಹಿಡಿದು ಚಾಂದಸಾಬ ಪೀರಸಾಬನ ದರ್ಗಾತನಕದ ಸಹಬಾಳ್ವೆಯ ಸಂಕೇತಗಳು ಈ ನೆಲದಲ್ಲಿ ಹೇರಳವಾಗಿ ದೊರೆಯುತ್ತವೆ. ಗುರುಗೋವಿಂದನ ಶಿಶುನಾಳ ಶರೀಫರೇ ಬಹುದೊಡ್ಡ ಮಾನವೀಯ ರೂಪಕವಲ್ಲವೇ?

ಲಿಂಗದ ಸೈದಪ್ಪ ಎಂದೇ ಹೆಸರಾಗಿದ್ದ, ಇಸ್ಲಾಂ ಧರ್ಮದ ಸೈದೂಸಾಬ ಅವರು ಇಷ್ಟಲಿಂಗ ತಯಾರಿಸುವುದರಲ್ಲಿ ಪ್ರಸಿದ್ಧರಾಗಿದ್ದರು. ತಮ್ಮ ಬದುಕಿನುದ್ದಕ್ಕೂ ಇಷ್ಟಲಿಂಗವನ್ನು ಭಕ್ತಿಯಿಂದ ಸಿದ್ಧಪಡಿಸುತ್ತಿದ್ದರು. ಲಿಂಗಕ್ಕೆ ಬೇಕಾದ ‘ಕಟಕ’ದ ಕಲ್ಲನ್ನು ಆಯ್ದು ತಂದು, ಉಳಿಪೆಟ್ಟು ನೀಡಿ, ಅದಕ್ಕೆ ಆಕಾರ ಕೊಟ್ಟು ‘ಗಾಡಾ’ಕ್ಕೆ ಅಳವಡಿಸಿ, ಸಾಣೆಗೆ ಹಿಡಿದು, ನಂತರ ನುಣುಪುಗೊಳಿಸಿ ತಯಾರು ಮಾಡುತ್ತಿದ್ದರು. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಎಸ್.ಕೆ.ಕೊಪ್ಪ ಗ್ರಾಮದ ಅವರು ಹೊಳೆಸಾಲ ಮಂದಿ. ನಸುಕಿನ 5 ಗಂಟೆಗೆ ಎದ್ದು, ನದಿಗಿಳಿದು ಸ್ನಾನ ಮಾಡಿ, ಧೋತರ ಉಟ್ಟು, ಬರಿಮೈಲಿ ಮಡಿಯಿಂದ ಬಂದು, ಮೂರ್ತಿಯಿಲ್ಲದ ‘ಮಾಡು’ ಒಳಗೆ ಹಣತೆ ಹಚ್ಚಿ, ಇಷ್ಟಲಿಂಗ ತಯಾರು ಮಾಡುವ ಕಾಯಕದಲ್ಲಿ ನಿರತರಾಗಿರುತ್ತಿದ್ದರು. ಇಡೀ ದಿನ ಅದೇ ಕಾಯಕ. ಮಧ್ಯದಲ್ಲಿ ಊಟ, ತಿಂಡಿ, ವಿರಾಮಕ್ಕೆಂದು ಸಮಯ ಹೊಂದಿಸಿಕೊಳ್ಳುತ್ತಿದ್ದರು. ಇಷ್ಟಲಿಂಗ ಪೂಜಿಸುವವರಲ್ಲಿ ಬಹುಬೇಡಿಕೆ ಹೊಂದಿದ್ದ ಲಿಂಗದ ಸೈದಪ್ಪನವರು ಶರಣರ ವಚನಗಳ ಆಶಯದಂತೆ ಬದುಕಿದರು. ಪವಿತ್ರ ಕುರಾನ್‌ ಅನ್ನೂ ಬಲ್ಲವರಾಗಿದ್ದರು. ಇವತ್ತು ಅವರಿಲ್ಲ. ಅವರು ಹಾಕಿಕೊಟ್ಟ ಪರಂಪರೆಯನ್ನು ಅವರ ಬಂಧುಗಳು ಇಂದಿಗೂ ಮುಂದುವರಿಸಿದ್ದಾರೆ. ಮುಸ್ಲಿಂ ಸಮುದಾಯದ ಅವರನ್ನು ಇಡೀ ಸಮಾಜವು ಲಿಂಗದ ಸೈದಪ್ಪ ಎಂದೇ ಗೌರವಿಸುತ್ತಿತ್ತು.

ವೈಷ್ಣವ ಪಂಥದ ಶ್ರೀಕೃಷ್ಣ ಪಾರಿಜಾತ ಒಂದು ಅಭಿಜಾತ ಜನಪದ ರಂಗಕಲೆ. ಬೆಳಗಾವಿ ಜಿಲ್ಲೆಯಲ್ಲಿ ಜನ್ಮತಾಳಿದ ಇದು, ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತ. ಈ ಸಣ್ಣಾಟದ ಅನೇಕ ಕಲಾವಿದರು ಮುಸ್ಲಿಂ ಸಮುದಾಯದವರು. ಅವರಲ್ಲಿ ದಿವಂಗತ ಅಪ್ಪಾಲಾಲ ನದಾಫ ಒಬ್ಬರು. ಅವರು ಶ್ರೀಕೃಷ್ಣ ಪಾರಿಜಾತದ ಹೆಸರಾಂತ ಕಲಾವಿದರು. ಉದ್ದ ಕೇಶರಾಶಿಯಿದ್ದ ಅವರ ಕೃಷ್ಣನ ಪಾತ್ರವು ಮನೆಮಾತು. ಪಾರಿಜಾತದ ಕೊರವಂಜಿ ಪಾತ್ರವೂ ಬಹು ಪ್ರಧಾನ. ಇವೆರಡರಲ್ಲಿ ಮಿಂಚುತ್ತಿದ್ದ ಅಪ್ಪಾಲಾಲರು ಕೃಷ್ಣನ ವೇಷ ತೊಟ್ಟಾಗ ಮಾತ್ರ ಸಾಕ್ಷಾತ್ ಶ್ರೀಕೃಷ್ಣನ ಪರಮಾವತಾರವೇ ಆಗಿರುತ್ತಿದ್ದರು. ಜನರು ಮುಗಿಬಿದ್ದು ಅವರ ಕಾಲಿಗೆ ನಮಸ್ಕರಿಸುತ್ತಿದ್ದರಂತೆ. ಅಪ್ಪಾಲಾಲರು ವೇದ, ಉಪನಿಷತ್ತು, ಶ್ಲೋಕ, ಪುರಾಣಗಳನ್ನು ಸಾಮಾನ್ಯ ಪ್ರೇಕ್ಷಕನಿಗೂ ತಿಳಿಯುವಂತೆ ಸುಭಗವಾಗಿ ಹೇಳುತ್ತಿದ್ದರು. ಮಾನವೀಯತೆ ಮತ್ತು ಜೀವನ ಮೌಲ್ಯಗಳನ್ನು ಪ್ರತಿಪಾದಿಸುವ ಈ ಅಪರೂಪದ ಕಲಾವಿದ ಇಸ್ಲಾಂ ಧರ್ಮಕ್ಕೆ ಸೇರಿದವರು. ಅವರು ರಂಗಕಲೆಯ ಮೂಲಕ ಗ್ರಾಮ ಬದುಕಿನಲ್ಲಿ ಜೀವನ ಪದ್ಧತಿಯನ್ನು ರೂಢಿಸಿ, ಬಹುಮುಖ್ಯವಾಗಿ ಮೌಲ್ಯವನ್ನು ಕಟ್ಟಿಕೊಟ್ಟವರು.

ಸಾವಿರಾರು ವರ್ಷಗಳ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಅದನ್ನು ಮೆಟ್ಟಿನಿಂತ ಬದುಕುಗಳು ಮತ್ತು ಆ ಬಗೆಯ ಜೀವಗಳು ನಮ್ಮ ಮಧ್ಯೆ ಈಗಲೂ ಇವೆ. ಅವರು ಸಾಮಾನ್ಯರಲ್ಲಿ ಅಸಾಮಾನ್ಯರಾಗಿ ಕಾರ್ಯನಿರ್ವಹಿಸಿದವರು. ಬಾಳು ಎಂಬವ ಕುಲಕರ್ಣಿವಾಡೆಯ ಬಹು ಆಪ್ತ ವ್ಯಕ್ತಿ. ಅವನಿಲ್ಲದೆ ಅಲ್ಲಿಯ ಒಂದು ಕಡ್ಡಿಯೂ ಕದಲುತ್ತಿರಲಿಲ್ಲ. ಎರಡು– ಮೂರು ದಶಕಗಳ ಹಿಂದೆ ಡಾ. ವಿಷ್ಣುಪಂತ ಕುಲಕರ್ಣಿ ಎಂಬ ಹಳೆಯಕಾಲದ ವೈದ್ಯರಿದ್ದರು. ಬಿಳಿ ಧೋತರ, ಕಪ್ಪುಕೋಟು ಮತ್ತು ಕಪ್ಪುಟೋಪಿಯ ವ್ಯಕ್ತಿ. ಕಡಿಮೆ ದುಡ್ಡಿನಲ್ಲಿ ಔಷಧ ನೀಡುವವರು. ಮನೆ ಮನೆಗೆ ತೆರಳಿ ಔಷಧ ಕೊಡುತ್ತಿದ್ದರು. ಅದು ಅವರ ರೂಢಿ. ಅವರಿಗೆ ಸಹಾಯಕನಾಗಿದ್ದ ಬಾಳು, ಅವರನ್ನು ಬಿಟ್ಟಿರುತ್ತಿರಲಿಲ್ಲ. ಅಲ್ಲಿಯೇ ಊಟ, ವಸತಿ. ಇಡೀ ವಾಡೆಯ ಕುಟುಂಬದ ಸದಸ್ಯನಾದ ಬಾಳು ಎಲ್ಲರ ಅಕ್ಕರೆಯವನು. ಆದರೆ ಅವನ ನಿಜ ನಾಮಧೇಯ ಶಂಶುದ್ದೀನ! ಅವನೂ ಇಂದಿಗೂ ಎಲ್ಲರ ಬಾಯಲ್ಲಿ ಒಲವಿನ ‘ಬಾಳು’ ಆಗಿಯೇ ಇದ್ದಾನೆ. ಇದು ಖರೇ ಖರೇ ಇಂಡಿಯಾದ ಸೌಂದರ್ಯ ಅಲ್ಲವೇನು?

ಮಹಾರಾಷ್ಟ್ರದ ವಾರಕರಿ ಸಂಪ್ರದಾಯವು ಬಹುದೊಡ್ಡ ಭಕ್ತಿ ಪರಂಪರೆ. ಅದು ಕರ್ನಾಟಕದಲ್ಲೂ ಇದೆ. ಇವರನ್ನು ವಾರಕರಿ ಮತ್ತು ಮಾಳಕರಿಗಳು (ಕೊರಳಲ್ಲಿ ಮಣಿಸರ ಧರಿಸಿರುವುದರಿಂದ) ಎನ್ನುತ್ತಾರೆ. ವೈಷ್ಣವ ಪಂಥದ ಪಂಢರಾಪುರದ ವಿಠ್ಠಲನ ಸದ್ಭಕ್ತರು ಇವರು. ಅವರು ಸಾಮಾಜಿಕವಾಗಿ ಎಷ್ಟು ಜಾಗರೂಕರಾಗಿದ್ದಾರೆಂದರೆ, ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನೇ ಯಾವುದೋ ವಿವಾದಾತ್ಮಕ ಟೀಕೆ ಹಾಗೂ ಹೇಳಿಕೆಗಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅದರ ಅಧ್ಯಕ್ಷರಾಗಿದ್ದ ಮರಾಠಿಯ ಕಾದಂಬರಿಕಾರ ಆನಂದ ಯಾದವ ತಮ್ಮ ಸ್ಥಾನವನ್ನೇ ತ್ಯಾಗ ಮಾಡಬೇಕಾಯಿತು.

ಇಂಥ ವಾರಕರಿಗಳಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಮತ್ತು ಪುರುಷರಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟದಲ್ಲಿಯೂ ಇದ್ದಾರೆ. ಅಂಥವರಲ್ಲಿ ಬಾಗಲಕೋಟೆ ಜಿಲ್ಲೆಯ ಕಮಾಲಸಾಬ ಡಾಂಗಿ ಒಬ್ಬರು. ಶ್ರೀಕೃಷ್ಣ ಪಾರಿಜಾತದ ಗಾಯಕ ಮತ್ತು ಪೇಟಿಮಾಸ್ತರರೂ (ಹಾರ್ಮೋನಿಯಮ್) ಹೌದು. ಹಾಗೆಯೇ ವಾರಕರಿಗಳ ಭಜನೆಗೆ ಪೇಟಿಮಾಸ್ತರರಾಗಿ, ಗಾಯಕರಾಗಿ ಜೊತೆಗೂಡಿರುತ್ತಾರೆ. ಇದು ನಿತ್ಯವೂ ನಡೆಯುವ ಭಕ್ತಿ ಕಾಯಕ. ಇದರಿಂದ ಅವರೊಂದಿಗೆ ವಿಠ್ಠಲನ ಮಂದಿರದಿಂದ ಹಿಡಿದು ಪಂಢರಾಪುರದ ತನಕ ಸಂಬಂಧ ಬೆಳೆದಿರುತ್ತದೆ. ಇದು ಕಲೆಯ ಒಂದು ಸಾವಯವ ಸ್ವರೂಪವೂ ಸರಿ.

ಮಸೀದಿಯಲ್ಲಿ ನಮಾಜುಗಳನ್ನು ಅರ್ಪಿಸುತ್ತಾ, ಗುಡಿಗಳಲ್ಲಿ ಹಾಡುಗಾರಿಕೆ ಮತ್ತು ಸಂಗೀತದಿಂದ ಸರ್ವರ ಮಧ್ಯೆ ಬೆಸುಗೆಗೊಳ್ಳುವುದು ಒಂದು ಮೌಲ್ಯವೆನಿಸುತ್ತದೆ. ಇಬ್ರಾಹಿಂ ಸುತಾರರು ವಚನಗಳ ಪ್ರವಚನವನ್ನು ಮಾಡುತ್ತಾ ತಮ್ಮ ಧರ್ಮದ ಕ್ರಿಯೆಗಳಲ್ಲೂ ಸಹಜವಾಗಿ ತೊಡಗಿರುತ್ತಾರೆ. ಈ ಸೂಫಿತನವು ನಮ್ಮ ಶಕ್ತಿಯೂ ಹೌದು.

ಇಷ್ಟಲಿಂಗ ತಯಾರಕ ಲಿಂಗದ ಸೈದಪ್ಪ, ತಾಳಶೆ ವಾದ್ಯ ನುಡಿಸುವ ನದಾಫ, ಶ್ರೀಕೃಷ್ಣ ಪಾರಿಜಾತದ ಅಪ್ಪಾಲಾಲ ನದಾಫ ಮತ್ತು ಪೇಟಿಮಾಸ್ತರ ಕಮಾಲಸಾಬ ಡಾಂಗಿ, ಡಾ. ವಿಷ್ಣುಪಂತ ಕುಲಕರ್ಣಿಯವರ ಸಹಾಯಕ ಬಾಳು, ಇಬ್ರಾಹಿಂ ಸುತಾರ, ಶಿಶುನಾಳ ಶರೀಫ ಸಾಹೇಬರು- ಇವರೆಲ್ಲ ಸ್ವಾಭಾವಿಕವಾಗಿ ರಂಗಕಲೆ, ಗಾಯನ, ಅಭಿನಯ, ಸೇವೆ, ಅಧ್ಯಾತ್ಮ, ಪ್ರವಚನ, ಕೀರ್ತನೆ- ಇವುಗಳ ಮೂಲಕ ಸಮಸಮಾಜಕ್ಕೆ ಕೊಡುಗೆಯಾಗಿದ್ದಾರೆ. ನಮ್ಮ ನಡುವೆ ಜಾತಿ, ಧರ್ಮಗಳ ಕುರಿತು ಅಭಿಮಾನ, ಕುರುಡು ನಂಬಿಕೆ, ಪ್ರೀತಿ, ಅಸೂಯೆಗಳು ಇಲ್ಲವೆಂತಲ್ಲ. ಅವುಗಳ ಮಧ್ಯೆಯೂ ಇಂತಹ ಅನೇಕರು ಅಧಿಕಾಧಿಕ ಮಾನವೀಯರಾಗಲು, ಢಾಳಾಗಿ ಎದ್ದುಕಾಣುವಂತೆ ಕಾರ್ಯನಿರ್ವಹಿಸಿದ್ದಾರೆ. ಇಂಥವರ ಪರಂಪರೆಯ ಹಾದಿ ನಮ್ಮ ನಡೆಯಾಗಬೇಕು.


ಡಾ. ಡಿ.ಎಸ್.ಚೌಗಲೆ, ಪ್ರಾಧ್ಯಾಪಕ, ಭಾವುರಾವ ಕಾಕತಕರ ಕಾಲೇಜು, ಬೆಳಗಾವಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು