ಮಂಗಳವಾರ, ಮಾರ್ಚ್ 31, 2020
19 °C
ಭವಿಷ್ಯವಾಣಿಯಲ್ಲಿ ಅಸಲಿ– ನಕಲಿಯ ವಿಂಗಡಣೆ ಸಾಧ್ಯವಾಗದಿರುವುದು ಸಮಸ್ಯೆ

ಕೊರೊನಾ ಮತ್ತು ಕಾಲಜ್ಞಾನ

ಟಿ.ಎನ್‌. ವಾಸುದೇವಮೂರ್ತಿ Updated:

ಅಕ್ಷರ ಗಾತ್ರ : | |

ಇಂದು ಕೊರೊನಾ ಎಂಬ ‘ಕ್ರಿಮಿ’ (ಸೂಕ್ಷ್ಮಾಣು) ಜಗತ್ತಿನಾ ದ್ಯಂತ ತಲ್ಲಣ ಸೃಷ್ಟಿಸಿದೆ. ಹಾಗೆ ನೋಡಿದರೆ ಬದುಕಿನ ಅದೆಷ್ಟೋ ತಲ್ಲಣಗಳು ಸೃಷ್ಟಿಯಾಗುವುದು ಕ್ಷುಲ್ಲಕ ಕ್ರಿಮಿಗಳಿಂದಲೇ. ಕಳೆದ ವಾರ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ತೆಲುಗು ಅನುಭಾವಿ ವೀರಬ್ರಹ್ಮೇಂದ್ರರ ಭವಿಷ್ಯವಾಣಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆ ಪದ್ಯದ ಅರ್ಥ ಹೀಗಿದೆ: ‘ಈಶಾನ್ಯದಿಂದ ವಿಷಗಾಳಿ ಹುಟ್ಟುತ್ತದೆ, ಲಕ್ಷಾಂತರ ಮಂದಿಯ ಮಾರಣಹೋಮವಾಗುತ್ತದೆ. ಕೋರಂಕಿ ಎನ್ನುವ ಕಾಯಿಲೆ ಹರಡಿ ಕೋಳಿಗಳಂತೆ ಜನ ಸಾಯುತ್ತಾರೆ’ (ಪದ್ಯದ ಸಂಖ್ಯೆ 114).

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಯಿತು. ಕೆಲವರು ಇಂತಹ ಮೌಢ್ಯವನ್ನೆಲ್ಲ ಪ್ರಚಾರ ಮಾಡಬಾರದೆಂದು ಆಕ್ಷೇಪಿಸಿದರಲ್ಲದೆ, ಆ ಸಂತನಿಗೆ ಇಷ್ಟೆಲ್ಲ ಗೊತ್ತಿದ್ದ ಮೇಲೆ ಪರಿಹಾರವನ್ನೇಕೆ ಸೂಚಿಸಲಿಲ್ಲ ಎಂಬ ವ್ಯಂಗ್ಯದ ಮಾತುಗಳನ್ನೂ ಆಡಿದ್ದರು.

ಜಗತ್ತಿನ ಎಲ್ಲ ಭಾಗದಲ್ಲೂ ಅನುಭಾವಿಗಳು ಒಂದಲ್ಲ ಒಂದು ಭವಿಷ್ಯವಾಣಿ ನುಡಿದಿದ್ದಾರೆ. ಅಸಲಿಗೆ ನಮ್ಮ ಸಮಸ್ಯೆ ಅದಲ್ಲ. ಇಂತಹ ಭವಿಷ್ಯವಾಣಿಯಲ್ಲಿ ಯಾವುದು ಅಸಲಿ ಮತ್ತು ಯಾವುದು ಅಲ್ಲ ಎಂಬ ವಿಂಗಡಣೆ ನಮಗೆ ಸಾಧ್ಯವಾಗದಿರುವುದು ನಮ್ಮ ಸಮಸ್ಯೆಯಾಗಿದೆ. ಲೋಕದಲ್ಲಿ ಒಂದು ಅಸಲಿಯಾದ ವಸ್ತು ಹುಟ್ಟಿದೊಡನೆ ಅದರ ನಕಲಿ ರೂಪಗಳೂ ಮಾರುಕಟ್ಟೆಗೆ ಲಗ್ಗೆಯಿಡು
ತ್ತವೆ. ಈ ವ್ಯಾಪಾರನೀತಿಯು ನಾವು ದಿನನಿತ್ಯ ಬಳಸುವ ಬಟ್ಟೆ-ಬರೆ, ಔಷಧ, ವನಸ್ಪತಿಗಳಿಂದ ಹಿಡಿದು ಧರ್ಮ–
ಅಧ್ಯಾತ್ಮದವರೆಗೆ ಎಲ್ಲದಕ್ಕೂ ಅನ್ವಯವಾಗುತ್ತದೆ. ಎಷ್ಟೋ ಸಲ ನಕಲಿಯಾದುದು ಅಸಲಿಯಾದುದನ್ನು ಹಿಮ್ಮೆಟ್ಟಿಸಿ ಮೆರೆಯಬಲ್ಲದು. ಆದರೆ ಪೂರ್ವಸಿದ್ಧ ನಂಬಿಕೆ, ಸಿದ್ಧಾಂತಗಳನ್ನು ನೆಚ್ಚಿಕೊಂಡವರ ಬಳಿ ಅಸಲಿನಕಲಿಗಳ ವ್ಯತ್ಯಾಸವನ್ನು ಕರಾರುವಾಕ್ಕಾಗಿ ನಿರ್ಧರಿಸ ಬಲ್ಲ ಯಾವ ಪ್ರಮಾಣವೂ ಇರುವುದಿಲ್ಲ. ಅಂತಹ ಪ್ರಮಾಣಕ್ಕಾಗಿ ನಾವು ಮತ್ತೆ ನಮ್ಮ ಪುರಾತನರಿಗೇ ಮೊರೆ ಹೋಗಬೇಕಾಗುತ್ತದೆ.

ಹಿಂದೆ ಗೌತಮ ಬುದ್ಧ ಸಹ ಕಾಲಜ್ಞಾನ ನುಡಿದಿದ್ದ. ಚಂದ್ರಗರ್ಭನೆಂಬ ಓರ್ವ ಬೋಧಿಸತ್ವನ ಪ್ರಶ್ನೆಗೆ ಉತ್ತರಿ ಸುತ್ತ ‘ನನ್ನ ಪರಿನಿರ್ವಾಣವಾದ ಮೇಲೆ ಮೊದಲ ಐದು ನೂರು ವರ್ಷಗಳವರೆಗೆ ಜನ ಧಮ್ಮವನ್ನು ಪಾಲಿಸುತ್ತಾರೆ. ಎರಡನೆಯ ಐದುನೂರು ವರ್ಷಗಳಲ್ಲಿ ಅವರ ಸಂಖ್ಯೆ ಕ್ಷೀಣಿಸುತ್ತದೆ. ಮೂರನೆಯ ಐದುನೂರು ವರ್ಷಗಳಲ್ಲಿ ಧಮ್ಮ ಬರೀ ಬೋಧನೆಗಷ್ಟೇ ಸೀಮಿತವಾಗುತ್ತದೆ ಮತ್ತು ನಾಲ್ಕನೆಯ ಐದುನೂರು ವರ್ಷಗಳಾದ ಮೇಲೆ ಧಮ್ಮವನ್ನು ಕಾಪಾಡುವ ದೇವತೆಗಳು, ನಾಗರು ಬೇರೆ ಲೋಕಗಳಲ್ಲಿ ಧಮ್ಮವನ್ನು ಪ್ರಚಾರ ಮಾಡಲು ಈ ಲೋಕ ದಿಂದ ನಿರ್ಗಮಿಸುತ್ತಾರೆ’ ಎಂದಿದ್ದ. ಮುಂದುವರಿದು, ‘ಎರಡು ಸಾವಿರ ವರ್ಷಗಳ ನಂತರ ನಾನು ಮತ್ತೆ ಹುಟ್ಟಿಬರುತ್ತೇನೆ, ಆಗ ನನ್ನ ಹೆಸರು ‘ಮೈತ್ರೇಯ’ ಎಂದಾಗಿರು ತ್ತದೆ’ ಎಂದು ಭವಿಷ್ಯವಾಣಿ ನುಡಿದಿದ್ದ. ಮೈತ್ರೇಯನೆಂದರೆ ಸ್ನೇಹಿತನೆಂದರ್ಥ. ಅವನು ನಮ್ಮಿಂದ ನಮಸ್ಕರಿಸಿಕೊಳ್ಳುವ ಗುರುವಲ್ಲ. ಬದಲಾಗಿ ಒಬ್ಬ ಆಪ್ತ ಗೆಳೆಯನಂತೆ, ಹೆಗಲ ಮೇಲೆ ಕೈಯಿರಿಸಿ ನಮ್ಮೊಂದಿಗೆ ಹೆಜ್ಜೆ ಹಾಕುವ ಓರ್ವ ಸಹಪಯಣಿಗನಂತೆ ಅವತರಿಸುತ್ತಾನೆ.

ಇಂಥದೇ ಮಾತನ್ನು ಅಲ್ಲಮಪ್ರಭುವೂ ನುಡಿದಿದ್ದ. ‘ಕೃತಯುಗದಲ್ಲಿ ಗುರುವು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ... ಕಲಿ ಯುಗದಲ್ಲಿ ಗುರುವು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿ ದರೆ ಆಗಲಿ ಮಹಾಪ್ರಸಾದವೆಂದೆನಯ್ಯ, ಗುಹೇಶ್ವರ ನಿಮ್ಮ ಕಾಲದ ಕಟ್ಟಲೆಯ ಕಲಿತನಕ್ಕೆ ನಾನು ಬೆರಗಾದೆ’. ಈ ಕಲಿಯುಗದಲ್ಲಿ ಗುರು– ಶಿಷ್ಯರ ಸಂಬಂಧ ಗೆಳೆಯರ ಸಂಬಂಧದಂತಿರುತ್ತದೆ ಎಂಬುದು ಬುದ್ಧ ಮತ್ತು ಅಲ್ಲಮರ ಏಕಕಂಠದ ಭವಿಷ್ಯವಾಣಿಯಾಗಿದೆ.

ಗೆಳೆಯರೆಂದ ಮೇಲೆ ಅವರ ನಡುವೆ ಸಂವಾದವಿರುತ್ತದೆ, ಜಗಳ– ವಾಗ್ವಾದಗಳೂ ಇರುತ್ತವೆ. ಬುದ್ಧ 40 ವರ್ಷಗಳ ಕಾಲ ಇಂತಹ ಹೃದಯಸಂವಾದ ನಡೆಸಿದ್ದ. ಸಾರಿಪುತ್ರ, ಮೊಗ್ಗಲಾಯನ ಮುಂತಾದ ವೇದಪಂಡಿತರು ಸುಮ್ಮನೆ ಬೌದ್ಧಧರ್ಮ ಸ್ವೀಕರಿಸಲಿಲ್ಲ. ಬುದ್ಧನೊಂದಿಗೆ ದಿನಗಟ್ಟಲೆ ವಾಗ್ವಾದ ನಡೆಸಿ ತಮ್ಮ ವಾದ, ಪಾಂಡಿತ್ಯಗಳ ವ್ಯರ್ಥತೆಯನ್ನು ಮನಗಂಡು ಬಳಿಕ ಅವನಿಗೆ ಶರಣಾ ದರು. ಅನುಭವ ಮಂಟಪದಲ್ಲಿ ಅಲ್ಲಮ ಸಹ ಗುರು– ಶಿಷ್ಯ ರೆಂಬ ಭೇದ ಮರೆತು ಮುಕ್ತ ಸಂವಾದದಲ್ಲಿ ತೊಡಗಿದ್ದ.

ಇಂಥ ನೆಲೆಗಳಲ್ಲಿ ನಮಗೆ ಯಾವುದು ಅಸಲಿ ಯಾದ ಅನುಭಾವ ಮತ್ತು ಯಾವುದು ಅಲ್ಲ ಎಂಬುದಕ್ಕೆ ರುಜುವಾತು ಸಿಗಬಹುದು. ಜಗತ್ತಿನ ಯಾವ ನಕಲಿ ಅನುಭಾವಿಯೂ ತನ್ನನ್ನು ಪ್ರಶ್ನೆಗೆ ಒಡ್ಡಿಕೊಳ್ಳಲು, ಅನ್ಯ ರೊಂದಿಗೆ ಮುಕ್ತಸಂವಾದದಲ್ಲಿ ತೊಡಗಿಕೊಳ್ಳಲು
ಸಿದ್ಧನಿರುವುದಿಲ್ಲ.

ಇನ್ನು ಕಾಲಜ್ಞಾನದ ಚರ್ಚೆಗೆ ಹಿಂದಿರುಗೋಣ. ಕಾಲವೆಂಬುದೇ ಇಲ್ಲವೆಂದ ಮೇಲೆ ಜ್ಞಾನವೆಲ್ಲಿಂದ ಬಂತು ಎಂದು ಬೌದ್ಧ ಅನುಭಾವಿ ನಾಗಾರ್ಜುನ ಕೇಳುತ್ತಾನೆ. ಅವನ ವಿಚಿತ್ರ ತರ್ಕವನ್ನು ಈ ರೀತಿ ಸಂಗ್ರಹಿಸಬಹುದು:

‘ಈ ಕ್ಷಣ ಭೂತಕಾಲಕ್ಕೆ ಸರಿಯುತ್ತಿದೆ; ಮತ್ತೊಂದು ಕ್ಷಣ ಭವಿಷ್ಯದ ಗರ್ಭದಿಂದ ಆವಿರ್ಭವಿಸಿ ವರ್ತಮಾನ ದಲ್ಲಿ ಮೈದೋರಿ ಪುನಃ ಭೂತದತ್ತ ಸರಿಯುತ್ತದೆ ಎನ್ನುವಿರಾದಲ್ಲಿ ಭವಿಷ್ಯ ಈಗಾಗಲೇ ಹುಟ್ಟಿಯೇ ಇದೆ ಎಂದು ಭಾವಿಸಬೇಕಾಗುತ್ತದೆ. ಭವಿಷ್ಯವಿನ್ನೂ ಹುಟ್ಟಿಲ್ಲ ಎಂದು ವಾದಿಸುವಿರಾದರೆ ಸಮಯವೆಂಬುದು ಶೂನ್ಯದಿಂದ ಆವಿರ್ಭವಿಸುತ್ತದೆ ಎಂಬ ಅಸಂಗತ ತರ್ಕವನ್ನು ನಂಬಬೇಕಾಗುತ್ತದೆ. ಇನ್ನು ವರ್ತಮಾನದ ಗಳಿಗೆ ಭೂತಕಾಲಕ್ಕೆ ಸರಿದು ಭೂತದ ಗರ್ಭದಲ್ಲಿ ವರ್ತಮಾನ ನೆಲೆಸಿದೆ ಎನ್ನುವಿರಾದಲ್ಲಿ ಭೂತಕಾಲ ಇನ್ನೂ ಲಯವಾಗಿಲ್ಲ ಎಂದು ತೀರ್ಮಾನಿಸಬೇಕಾಗುತ್ತದೆ.

ಅದೇ ರೀತಿ ಈ ಕ್ಷಣದಲ್ಲಿ ವ್ಯಕ್ತಗೊಳ್ಳುತ್ತಿರುವ ವರ್ತಮಾನವು ಭವಿಷ್ಯದ ಗರ್ಭದಲ್ಲಿ ನೆಲೆಸಿತ್ತು ಎನ್ನುವಿರಾದಲ್ಲಿ ಭವಿಷ್ಯತ್ತನ್ನು ಭವಿಷ್ಯತ್ತು ಎಂದು ಕರೆಯಲು ಬರುವುದಿಲ್ಲ. ಭೂತ ಭವಿಷ್ಯಗಳೆರಡೂ ಅಸ್ತಿತ್ವಹೀನ ಎನ್ನುವುದಾದರೆ ಅವೆರಡರ ಸರಣಿಯಲ್ಲೇ ಬರುವ ವರ್ತಮಾನ ಮಾತ್ರ ಹೇಗೆ ಅಸ್ತಿತ್ವವುಳ್ಳದ್ದಾಗುತ್ತದೆ? ಅವೆರಡರ ನಡುವಿನ ವರ್ತಮಾನವೂ ಅಸ್ತಿತ್ವಹೀನವೇ ಆಗಿರಬೇಕು. ಕಾಲದ ವಿವೇಚನೆಯಲ್ಲಿ ನಾವೆಲ್ಲೋ ಮೋಸ ಹೋಗಿರಬೇಕು’.

ನಾಗಾರ್ಜುನನ ಈ ಸುದೀರ್ಘ ವಾದವನ್ನು ಅಲ್ಲಮ ಪ್ರಭು ಒಂದೇ ಒಂದು ಬೆಡಗಿನ ಸಾಲಿನಲ್ಲಿ ಹಿಡಿದಿಟ್ಟಿದ್ದಾನೆ: ‘ಹಿಂದಣ ಅನಂತವನು ಮುಂದಣ ಅನಂತವನು ಒಂದು ದಿನ ಒಳಗೊಂಡಿತ್ತು ನೋಡಾ!’. ದ್ರಷ್ಟಾರನಾದವನಿಗೆ ಭೂತ-ಭವಿಷ್ಯತ್ತುಗಳ ಜ್ಞಾನಸಿದ್ಧಿಯಾಗುತ್ತದೆ ಎಂದು ಹೇಳುವ ಯೋಗಸೂತ್ರಗಳು (ಯೋಗಸೂತ್ರ 3.16) ಅದನ್ನು ಪರಮಜ್ಞಾನವೆನ್ನಲು ಬರುವುದಿಲ್ಲ ಎಂಬ ಮಾತನ್ನೂ ಸೇರಿಸುತ್ತವೆ (ಯೋಗಸೂತ್ರ 3.20).

ಕಾಲಜ್ಞಾನವೆಂಬುದು ಯಾವುದೋ ಅಲೌಕಿಕ ಸಂಗತಿಯಲ್ಲ. ನಮ್ಮ ದೈನಂದಿನ ಬದುಕಿನಲ್ಲಿ ನಾವು ಕೂಡ ಹಲವಾರು ಕಾಲಜ್ಞಾನದ ಮಾತುಗಳನ್ನಾಡುತ್ತಿರುತ್ತೇವೆ. ಒಬ್ಬ ಉಪಾಧ್ಯಾಯ ತನ್ನ ವಿದ್ಯಾರ್ಥಿಗಳಿಗೆ ‘ನೀವು ಹೀಗೇ ಉಡಾಫೆಯಿಂದಿದ್ದರೆ ನಾಳೆ ದಿನ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತೀರಿ’ ಎಂದು ಎಚ್ಚರಿಸುವುದು ಸಹ ಒಂದು ಬಗೆಯ ಕಾಲಜ್ಞಾನವೇ ಅಲ್ಲವೇ? ಕುವೆಂಪು, ಬೇಂದ್ರೆ ಮುಂತಾದವರ ಕಾವ್ಯಗಳಲ್ಲಿ ಕಾಲಜ್ಞಾನದ ಅದೆಷ್ಟೋ ಹೊಳಹುಗಳನ್ನು ಕಾಣಬಹುದು. ಕುವೆಂಪು ಅವರ ಕಲ್ಕಿ ಪದ್ಯ ಇಂದಿನ ಜಾಗತೀಕರಣದ ದುರಂತವನ್ನು ವರ್ಣಿಸುವ ಕಾಲಜ್ಞಾನದ ಕವಿತೆಯಾಗಿದೆ. ಹಿಂದೆ 1997ರ ಸುಮಾರಿನಲ್ಲಿ ಚಿಂತಕ ಚಂದ್ರಶೇಖರ ನಂಗಲಿಯವರು ನಿರ್ಬೀಜೀಕರಣದ ಮಾತುಗಳನ್ನಾಡಿದ್ದರು. ಅಂಥದ್ದೊಂದು ಪದ-ಪರಿಕಲ್ಪನೆ ಆಗ ಹುಟ್ಟಿಯೇ ಇರಲಿಲ್ಲ. ಈಗ, ಎರಡು ದಶಕಗಳಾದ ಮೇಲೆ ಅವರ ಮಾತು ನಿಜವಾಗಿದೆ. ಮುಂಬರುವ ತಲೆಮಾರುಗಳು ಇಂಥದ್ದಕ್ಕೆಲ್ಲ ಕಾಲಜ್ಞಾನವೆಂಬ ಹೆಸರು ಕೊಟ್ಟರೂ ಕೊಡ ಬಹುದೇನೋ!

ವೀರಬ್ರಹ್ಮೇಂದ್ರರಂತಹ ಕಾಲಜ್ಞಾನಿಗಳಿಗೆ ಮತ್ತು ಗಾಂಧಿ, ಕುವೆಂಪು ಮುಂತಾದ ದೂರದರ್ಶಿಗಳಿಗೆ ಭವಿ ಷ್ಯದ ಅಪಾಯಗಳ ಮುನ್ಸೂಚನೆ ಇದ್ದ ಮೇಲೆ ಪರಿಹಾರ ವನ್ನೇಕೆ ಸೂಚಿಸಲಿಲ್ಲ ಎಂದು ವಾದಿಸುವುದು ಬಾಲಿಶತನ ವಾಗುತ್ತದೆ. ದ್ರಷ್ಟಾರರಾದ ಕವಿ– ಅನುಭಾವಿಗಳು ಪ್ರಶ್ನೆಸಮಸ್ಯೆಗಳನ್ನಷ್ಟೇ ಮುಂದೊಡ್ಡಲು ಕಾರಣವಿದೆ. ಅವರಿಗೆ ವರ್ತಮಾನದ ಮೇಲೆ ಭರವಸೆ ಇದ್ದುದರಿಂದಲೇ ಸಿದ್ಧ ಉತ್ತರ ನೀಡುವ ಗೊಡವೆಗೆ ಹೋಗಲಿಲ್ಲ ಎನಿಸುತ್ತದೆ. ವರ್ತಮಾನದ ಸಮಸ್ಯೆಗೆ ಭೂತಕಾಲದಲ್ಲಿ ಪರಿಹಾರವಿರ ಲಾರದು. ಎಷ್ಟೋ ಸಲ ಭೂತಕಾಲದ ಪರಿಹಾರವೇ ವರ್ತಮಾನದ ಸಮಸ್ಯೆಯಾಗಿ ಮೈದಾಳಲೂಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)