ಶುಕ್ರವಾರ, ಮಾರ್ಚ್ 5, 2021
24 °C
ಮಹಿಷ ದಸರಾ ಆಚರಣೆಯಿಂದ ಚಾಮುಂಡಿಗೆ ಅಪಚಾರ ಆಗುವುದಾದರೂ ಹೇಗೆ?

ಮಹಿಷ ದ್ವೇಷದಿಂದ ಕೇಡು ನಾಶವಾದೀತೇ?

ಡಾ. ಟಿ.ಎನ್‌.ವಾಸುದೇವಮೂರ್ತಿ Updated:

ಅಕ್ಷರ ಗಾತ್ರ : | |

ಸಾರ್ವಜನಿಕ ಉತ್ಸವ, ಮೆರವಣಿಗೆಗಳು ಕೇವಲ ಕಂದಾಚಾರವಲ್ಲ. ಜನಮಾನಸದ ಇಂಗಿತ, ಸಂತೋಷ, ಪ್ರತಿರೋಧಗಳಿಗೆ ಅವು ವಿಭಿನ್ನವಾದ, ಸೃಜನಶೀಲವಾದ ಅಭಿವ್ಯಕ್ತಿ ನೀಡಬಲ್ಲವು. ಬಹುಕಾಲದಿಂದಲೂ ಖಾಸಗಿಯಾಗಿ ನಡೆಯುತ್ತಿದ್ದ ಗಣೇಶೋತ್ಸವಕ್ಕೆ ಬಾಲಗಂಗಾಧರ ತಿಲಕರು ಜನಸಂಘಟನೆಯ ಮತ್ತು ಪ್ರತಿಭಟನೆಯ ಆಯಾಮ ನೀಡಿದರು. ಯಾವುದೇ ಸಾಂಪ್ರದಾಯಿಕ ಆಚರಣೆಯು ಸಾರ್ವಜನಿಕ ಉತ್ಸವವಾಗಿ ಮಾರ್ಪಡುವುದರ ಹಿಂದೆ ಒಂದು ರಾಜಕಾರಣ ಇರುತ್ತದೆ. ಮೈಸೂರು ದಸರೆಯೂ ಇದಕ್ಕೆ ಹೊರತಲ್ಲ.

ವಿಜಯದಶಮಿಯಂದು ಬನ್ನಿಮಂಟಪವನ್ನು ಅರ್ಚಿಸುವುದಿರಲಿ, ಮಹಾನವಮಿಯಂದು ರಾಜಖಡ್ಗಕ್ಕೆ ಪೂಜೆ ಸಲ್ಲಿಸುವುದಿರಲಿ ಅಥವಾ ಸಾಮಂತರನ್ನು, ವಿದ್ವಾಂಸರನ್ನು, ಅನ್ಯದೇಶದ ಗಣ್ಯ ಅತಿಥಿಗಳನ್ನು ಆಹ್ವಾನಿಸಿ ಅವರನ್ನು ದರ್ಬಾರ್ ಹಾಲ್‍ನಲ್ಲಿ ಸತ್ಕರಿಸುವುದಿರಲಿ- ಇವನ್ನೆಲ್ಲ ಧಾರ್ಮಿಕ, ಆಧ್ಯಾತ್ಮಿಕ ಆಚರಣೆ ಎನ್ನುವುದಕ್ಕಿಂತ, ರಾಜರ ಕಾಲದ ರಾಜತಾಂತ್ರಿಕ ಶಿಷ್ಟಾಚಾರದಂತೆ ಪರಿಭಾವಿಸುವುದೇ ಸೂಕ್ತವೆಂದು ತೋರುತ್ತದೆ.

ಆದರೆ, ಸ್ವಾತಂತ್ರ್ಯಾನಂತರ ನಮ್ಮ ರಾಜ ಸಂಸ್ಥಾನಗಳು ದುರ್ಬಲಗೊಂಡವು. 70ರ ದಶಕದಲ್ಲಿ ಮೈಸೂರು ಸಂಸ್ಥಾನವು ರಾಜಭತ್ಯೆಯಿಂದ ವಂಚಿತವಾಯಿತು. ಅಷ್ಟೂ ಕಾಲ ವೈಭವದಿಂದ ಆಚರಿಸಲಾಗುತ್ತಿದ್ದ ದಸರಾ ಮಹೋತ್ಸವವನ್ನು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌, ಹಣಕಾಸು ಮುಗ್ಗಟ್ಟಿನ ನೆವವೊಡ್ಡಿ ರದ್ದುಗೊಳಿಸಿದರು. ತಲೆತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದ ಕಾರಣ ಹಬ್ಬವನ್ನು ಪೂರ್ತಿಯಾಗಿ ನಿಲ್ಲಿಸದೆ, ಅಂಬಾ ವಿಲಾಸ ದರ್ಬಾರ್ ಹಾಲಿನಲ್ಲಿ ಅರಮನೆಯ ಮಟ್ಟಿಗೆ ಆಚರಿಸಿಕೊಳ್ಳಲಾರಂಭಿಸಿದರು.

ರಾಜ ಕುಟುಂಬದ ಈ ನಿರ್ಧಾರ ಮೈಸೂರಿನ ನಾಗರಿಕರಲ್ಲಿ ನಿರಾಶೆ ಮೂಡಿಸಿತು. ಆದರೆ ಅವರು ಸುಮ್ಮನೆ ಕೂರಲಿಲ್ಲ. ನಾ. ನಾಗಲಿಂಗಸ್ವಾಮಿ, ನಾಗಭೂಷಣ ತಿವಾರಿ, ನಂಜರಾಜ ಅರಸ್ ಮುಂತಾದವರು ಕ್ರಿಯಾಶೀಲರಾಗಿ ದಸರೆಯ ಗತವೈಭವ ಮರುಕಳಿಸಲು ಶ್ರಮಿಸಿದರು. ಸಾರ್ವಜನಿಕರಿಂದಲೇ ದೇಣಿಗೆ ಎತ್ತಿ ದಸರಾ ಉತ್ಸವ ಸಮಿತಿಯನ್ನು ಸ್ಥಾಪಿಸಿದರು. ಹಲವು ಉದ್ಯಮಿಗಳು, ಅಧಿಕಾರಿಗಳು ಮತ್ತು ರಾಜಕಾರಣಿಗಳೂ ಸ್ಪಂದಿಸಿದರು. ಅಲ್ಲಿಂದಾಚೆಗೆ ಶುರುವಾದದ್ದೇ ಈಗ ವೈಭವೋಪೇತವಾಗಿ ನಡೆಸಲಾಗುತ್ತಿರುವ ನಾಡಹಬ್ಬ ದಸರಾ ಉತ್ಸವ.

ಯಾವುದೇ ಸರ್ಕಾರ ಅಳಿಯಲಿ, ಉಳಿಯಲಿ; ಯಾವುದೇ ವಿಧಿ ನಿಷೇಧ ಬರಲಿ, ಸಂಸತ್ತಿನಲ್ಲಿ ಯಾವುದೇ ಮಸೂದೆ ಜಾರಿಯಾಗಲಿ, ಒಂದು ಪ್ರಜಾಪ್ರಭುತ್ವದಲ್ಲಿ ಜನರ ಆಸಕ್ತಿ, ಆಶೋತ್ತರಗಳೇ ಅಂತಿಮವಾಗಿ ಗೆಲ್ಲುತ್ತವೆ ಎಂಬುದು ಮೇಲಿನ ಉದಾಹರಣೆಯಿಂದ ತಿಳಿಯುತ್ತದೆ. ಹಾಗೆ ಆದಾಗಷ್ಟೇ ಒಂದು ಪ್ರಜಾಪ್ರಭುತ್ವ ಸಾರ್ಥಕವಾಗಬಲ್ಲದು.

ಪ್ರಗತಿಪರ ಚಿಂತಕರು ಚಾಮುಂಡಿ ಬೆಟ್ಟದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಹಿಷ ದಸರಾ ಕಾರ್ಯ
ಕ್ರಮಕ್ಕೆ ಸಂಸದ ಪ್ರತಾಪ್‌ ಸಿಂಹ ಅವರು ತಡೆಯೊಡ್ಡುವಂತೆ ಮಾಡಿದ್ದು ದುರದೃಷ್ಟಕರ. ಮಹಿಷನನ್ನು ಪೂಜಿಸುವುದು ಅಪರಾಧವೆಂದು ಭಾವಿಸುವ ವ್ಯಕ್ತಿ ತಾನೇ ದಾಂದಲೆ ಮಾಡಿದ್ದು ವಿಪರ್ಯಾಸ. ಕೊನೆಯಪಕ್ಷ ಅವರು ಪ್ರಗತಿಪರರ ಆಲೋಚನೆ ಏನು ಎಂದು ತಿಳಿಯಲು ಪ್ರಯತ್ನಿಸಬಹುದಿತ್ತು. ಹತ್ತು ದಿನಗಳ ಉತ್ಸವದಲ್ಲಿ ಅವರಿಗೆ ತಮ್ಮ ನಿಲುವನ್ನು ವ್ಯಕ್ತಪಡಿಸಲು, ವಿದ್ವತ್‌ ವಲಯದಲ್ಲಿ ಆ ನಿಲುವಿನ ಔಚಿತ್ಯದ ಬಗ್ಗೆ ಚರ್ಚೆಯಾಗಲು ವೇದಿಕೆ ಕಲ್ಪಿಸಬಹುದಿತ್ತು.

ಅಷ್ಟಕ್ಕೂ ಕೆಲವು ಸಮಾನ ಮನಸ್ಕರು ಯಾರಿಗೂ ಉಪದ್ರವ ಕೊಡದೆ ಮಹಿಷ ದಸರೆ ಆಚರಿಸಿಕೊಂಡರೆ ಅದರಿಂದ ಚಾಮುಂಡಿಗೆ ಹೇಗೆ ಅಪಚಾರವಾಗುತ್ತದೆ? ‘ಮಹಿಷ ಮತ್ತು ಚಾಮುಂಡಿ ಇಬ್ಬರೂ ಪೌರಾಣಿಕ ಪಾತ್ರಗಳಷ್ಟೇ. ಅವರಿಬ್ಬರೂ ಇದ್ದುದರ ಬಗ್ಗೆ ಈತನಕ ಯಾವುದೇ ಐತಿಹಾಸಿಕ ದಾಖಲೆ ದೊರೆತಿಲ್ಲ’ ಎಂದು ಇತಿಹಾಸತಜ್ಞ ಪಿ.ವಿ. ನಂಜರಾಜ ಅರಸ್ ಅಭಿಪ್ರಾಯಪಡುತ್ತಾರೆ.

ಪ್ರತಿನಾಯಕನನ್ನು ಪೂಜಿಸುವ ಒಂದು ದೊಡ್ಡ ಪರಂಪರೆಯನ್ನೇ ಭಾರತದ ಉದ್ದಗಲಕ್ಕೂ ನಾವು ಕಾಣಬಹುದು. ಬಂಗಾಳದ ಸಂತಾಲ್ ಎಂಬ ಆದಿವಾಸಿ ಜನಾಂಗಕ್ಕೆ ಮಹಿಷನೇ ನಾಯಕನಾಗಿದ್ದಾನೆ. ಚಂಪಾ ಪ್ರಾಂತ್ಯದ ದೊರೆಯಾಗಿದ್ದ ಇವನಿಗೆ ಹುದುರ್ ದುರ್ಗಾ ಎಂಬ ಮತ್ತೊಂದು ಹೆಸರಿತ್ತು. ಇವನು ಅನ್ಯ ಪ್ರಾಂತ್ಯದ ಚೆಲುವೆಯೊಬ್ಬಳನ್ನು ಮದುವೆಯಾಗುತ್ತಾನೆ. ಅವಳು ಉಪಾಯ ಮಾಡಿ ತನ್ನ ಪ್ರಾಂತ್ಯದ ಜನರ ನೆರವಿನಿಂದ ಮಹಿಷನನ್ನು ಕೊಲ್ಲುತ್ತಾಳೆ. ತಮ್ಮ ದೊರೆ ತೀರಿಕೊಂಡ ಮೇಲೆ ಅವನ ಪ್ರಜೆಗಳು ಪ್ರಾಣ ಉಳಿಸಿಕೊಳ್ಳಲು ನಾಡನ್ನೇ ತೊರೆಯುತ್ತಾರೆ ಎಂದು, ಆ ಸಮುದಾಯ ಇಂದಿಗೂ ಮೌಖಿಕವಾಗಿ ಕಾಪಾಡಿಕೊಂಡು ಬಂದಿರುವ ಜನಪದ ಕಥನ ಹೇಳುತ್ತದೆ. ಈ ಆದಿವಾಸಿ ಸಮುದಾಯ ಇಂದಿಗೂ ದಸರಾ ಹಬ್ಬವನ್ನು ಒಂದು ಸೂತಕದ, ದುಃಖಾಚರಣೆಯ ದಿವಸವಾಗಿ ಆಚರಿಸುತ್ತದೆ.

ತಮಿಳುನಾಡಿನಲ್ಲಿ ಮತ್ತು ಶ್ರೀಲಂಕಾದಲ್ಲಿ ರಾವಣನನ್ನು ಪೂಜಿಸುವ ಸಮುದಾಯಗಳಿವೆ ಮತ್ತು ಅವರ ಜಾನಪದ ವಾಙ್ಮಯದಲ್ಲಿ ಇಂತಹ ಹಲವು ಪ್ರಾಚೀನ ದಂತಕತೆಗಳಿವೆ. ಪ್ರತಿನಾಯಕನನ್ನು ಆದರಭಾವದಿಂದ ಕಾಣುವುದು, ಪೂಜಿಸುವುದು ಖಂಡಿತವಾಗಿ ದುಷ್ಟತನವಲ್ಲ; ಬದಲಾಗಿ ಅದು ನಮ್ಮ ಪರಂಪರೆ ನಮಗೆ ಕಲಿಸಿರುವ ಒಂದು ಉದಾತ್ತ ಗುಣವಾಗಿದೆ. ರಾವಣ ಸತ್ತಾಗ ಶ್ರೀರಾಮ ಕಣ್ಣೀರಿಟ್ಟಿದ್ದ. ತಾನೇ ನಿಂತು ಅವನ ಅಂತ್ಯಸಂಸ್ಕಾರ ಗೌರವಯುತವಾಗಿ, ಶಾಸ್ತ್ರೋಕ್ತವಾಗಿ ನಡೆಯುವಂತೆ ಏರ್ಪಾಟು ಮಾಡಿದ್ದ.

ಎಲ್ಲ ಕಾಲದಲ್ಲೂ ಗೆದ್ದ ಸಂಸ್ಕೃತಿಯೇ ಇತಿಹಾಸ ರಚಿಸುವ ಕಾರಣ ನಾಯಕ, ಖಳನಾಯಕ, ದೈವಶಕ್ತಿ, ದುಷ್ಟಶಕ್ತಿ ಇವೆಲ್ಲ ಖಾಲಿ ಶಬ್ದಗಳಾಗಿವೆ. ಅಣ್ವಸ್ತ್ರದ ಅಪಾಯ ಅರಿತಿರುವ ಇಂದಿನ ಕಾಲಮಾನದಲ್ಲಂತೂ ಕೊಲ್ಲಲು ಕೈಲಿ ಆಯುಧ ಹಿಡಿವ ಎಲ್ಲ ಸಂಕೇತಗಳನ್ನೂ- ನಾಯಕನಿರಲಿ ಅಥವಾ ಪ್ರತಿನಾಯಕನಿರಲಿ- ಒಂದೇ ದೃಷ್ಟಿಯಿಂದ ಪರಿಭಾವಿಸಬೇಕಾಗುತ್ತದೆ.

ದಲಿತ ಸಂಘಟನೆಗಳು ಅಂಬೇಡ್ಕರ್, ಬುದ್ಧನ ಹೆಸರಿನಲ್ಲಿ ಮೆರವಣಿಗೆಗೆ ಅನುಮತಿ ಪಡೆದಿದ್ದರೂ ಅವರನ್ನು ನಿರ್ಬಂಧಿಸಲಾಯಿತು. ಒಂದು ಕೈಲಿ ಹೆಂಡದ ಬುರುಡೆ ಹಿಡಿದು, ಹೆಂಡ ಹೀರುತ್ತ; ಮತ್ತೊಂದು ಕೈಲಿ ಆಯುಧ ಹಿಡಿದು ಕಣ್ಗಳಲ್ಲಿ ಬೆಂಕಿ ಕಾರುತ್ತ ಮಹಿಷನನ್ನು ಹತ್ಯೆಗೈದ ಭವತಾರಿಣಿಯ ಮೆರವಣಿಗೆಗಿಂತ (ದೇವಿ ಮಹಾತ್ಮೆ 3.34) ಶಾಂತಿದೂತನಾದ ಬುದ್ಧನ ಹೆಸರಿನಲ್ಲಿ ನಡೆವ ಮೆರವಣಿಗೆ ಕೀಳೇ?

ಈ ಹಿಂದೆ ಮಹಿಷ ದಸರಾ ಆಚರಿಸಿದಾಗಲೂ ಮಡಿವಂತ ಮನಃಸ್ಥಿತಿಯವರು ಸಿಡಿಮಿಡಿಗೊಂಡಿ
ದ್ದರು. ಈಗ ಆ ಮನಃಸ್ಥಿತಿಗೆ ರಾಜಕೀಯ ಅಧಿಕಾರವೂ ದೊರೆತಿರುವುದರಿಂದ ತಮಗೆ ಪಥ್ಯವೆನಿಸದ ಆಚರಣೆ ನಡೆಯದಂತೆ ನೋಡಿಕೊಳ್ಳಲು ಸ್ಥಳದಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಆಚರಣೆಯಲ್ಲಿನ ವೈವಿಧ್ಯವೇ ಹಿಂದೂ ಧರ್ಮವನ್ನು ಸಮೃದ್ಧಗೊಳಿಸಿದೆ. ಆದರೆ ರಾಜಕೀಯ ಹಿತಕ್ಕಾಗಿ ಏಕರೂಪದ ಏಕಾಕಾರದ ಆಚರಣೆ ಹೇರಲಿಚ್ಛಿಸುವ ವೇಷಡಂಬಕರಿಗೆ ಹಿಂದೂ ಧರ್ಮದ ಈ ವೈಶಿಷ್ಟ್ಯವನ್ನು ಕಾಣುವ ಶಕ್ತಿಯಾಗಲೀ, ಕಾಪಾಡಿಕೊಳ್ಳುವ ಕಾಳಜಿಯಾಗಲೀ ಇದ್ದಂತಿಲ್ಲ. ಆಕಾಶದಿಂದ ಸುರಿವ ನೀರೆಲ್ಲವೂ ಸಾಗರವನ್ನೇ ಸೇರುವಂತೆ ಎಲ್ಲ ಪೂಜೆಗಳೂ ಅಂತಿಮವಾಗಿ ನನಗೇ ಸಲ್ಲುತ್ತವೆ ಎಂಬ ಗೀತಾವಾಕ್ಯವೂ ಕೊನೆಯಪಕ್ಷ ಇವರಿಗೆ ನೆನಪಾಗದೇ ಹೋಯಿತಲ್ಲ!

ಸ್ಥಳೀಯ ಭಕ್ತಗಣಕ್ಕೆ ಮಹಿಷಾಸುರನ ಪೂಜೆ ಇಷ್ಟವಿಲ್ಲವೆಂಬ ನೆಪ ಹೇಳಿ ಪ್ರತಾಪ್ ಸಿಂಹ ಅವರ ಉಪ
ಸ್ಥಿತಿಯಲ್ಲೇ ಚಪ್ಪರ ಕಿತ್ತುಹಾಕಲಾಯಿತು, ಕರ್ತವ್ಯ ನಿರತ ಪೊಲೀಸರನ್ನು ಸಂಸದರೇ ಅವಾಚ್ಯ ಶಬ್ದಗಳಿಂದ ನಿಂದಿಸಿದರು, ಸರಿ. ಆದರೆ ಬಳಿಕ ಮಹಿಷ ದಸರಾ ಉತ್ಸವದ ಪದಾಧಿಕಾರಿಗಳು ಈ ದಬ್ಬಾಳಿಕೆಯನ್ನು
ಪ್ರತಿಭಟಿಸಿದರು. ‘ನಾವು ಆಯ್ಕೆ ಮಾಡಿದ ಸಂಸದರಿಂದ ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದನೆಗೆ ಒಳಗಾದ ಪೊಲೀಸರನ್ನು ನಾವು ಕೈಮುಗಿದು ಕ್ಷಮೆ ಯಾಚಿಸುತ್ತೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ಬಿನ್ನವಿಸಿಕೊಂಡರು. ಈಗ ಭಕ್ತಗಣಕ್ಕೆ ಯಾವುದು ದೈವೀಗುಣ ಮತ್ತು ಯಾವುದು ರಾಕ್ಷಸಗುಣವೆಂದು ವಿವೇಚಿಸಿ ನೋಡುವ ದೃಷ್ಟಿಯನ್ನು ದುರ್ಗಾಮಾತೆಯೇ ಕರುಣಿಸಬೇಕು.

ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು