ಮಂಗಳವಾರ, ಸೆಪ್ಟೆಂಬರ್ 22, 2020
22 °C
ಕುಸಿಯುತ್ತಿರುವ ಮಾನವ ಸಂಪನ್ಮೂಲದ ಸಾಮರ್ಥ್ಯ ಹಾಗೂ ನೈಸರ್ಗಿಕ ಸಂಪತ್ತು

ವಿಶ್ಲೇಷಣೆ | ಭವಿಷ್ಯ ಮರೆಯುತ್ತಿರುವ ಭಾರತ!

ಕೇಶವ ಎಚ್. ಕೊರ್ಸೆ Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ ಎರಡು ಗಂಭೀರ ಸವಾಲುಗಳನ್ನು ನಾಡು ಎದುರಿಸುತ್ತಿದೆ. ವ್ಯಾಪಕವಾಗಿ ಹಬ್ಬುತ್ತಿರುವ ಕೋವಿಡ್- 19 ರೋಗವು ಸಾರ್ವಜನಿಕ ಆರೋಗ್ಯ ಪರಿಸ್ಥಿತಿ ಹದಗೆಡಿಸುತ್ತಿದ್ದು, ಸಾವುನೋವಿನ ತೀವ್ರತೆ ಹೆಚ್ಚುತ್ತಲೇ ಇದೆ. ಇನ್ನೊಂದೆಡೆ, ಬಿರುಗಾಳಿ ಸಹಿತ ಭಾರಿ ಮಳೆಯಿಂದ ಘಟಿಸುತ್ತಿರುವ ಪ್ರವಾಹ ಹಾಗೂ ಭೂಕುಸಿತ ಸೃಷ್ಟಿಸುತ್ತಿರುವ ನಷ್ಟಗಳು. ಇದರಿಂದಾಗಿ, ಮಲೆನಾಡಿನಲ್ಲಿ ಹುಟ್ಟಿ ಹರಿಯುವ ಬಹುತೇಕ ನದಿತಪ್ಪಲುಗಳಲ್ಲಿ ಜನಜೀವನ ಹೈರಾಣಾಗುತ್ತಿದೆ. ಅಂದರೆ, ನೈಜ ಅಭಿವೃದ್ಧಿಯ ಎರಡು ಪ್ರಮುಖ ಪ್ರತೀಕಗಳಾದ ಆರೋಗ್ಯಪೂರ್ಣ ಮಾನವ ಸಂಪನ್ಮೂಲ ಹಾಗೂ ನೈಸರ್ಗಿಕ ಸಂಪತ್ತಿನ ಸುಸ್ಥಿರ ನಿರ್ವಹಣೆ- ಇವೆರಡರ ಪರಿಸ್ಥಿತಿಯೂ ಅಪಾಯಕಾರಿ ಸ್ಥಿತಿಗೆ ಕುಸಿಯುತ್ತಿದೆ!

ಜಗತ್ತಿನ ಪ್ರಮುಖ ಆರ್ಥಿಕತೆಯಾಗಿ ಹಾಗೂ ಪ್ರಬಲ ನಾಗರಿಕತೆಯಾಗಿ ದೇಶ ವಿಕಾಸವಾಗುತ್ತಿದೆ ಎಂಬ ಆಶೋತ್ತರಗಳನ್ನು ಜನರಲ್ಲಿ ಮೂಡಿಸುತ್ತಿರುವ ಈ ಕಾಲಘಟ್ಟದಲ್ಲಿ, ನಾಡು ಬಿಕ್ಕಟ್ಟುಗಳನ್ನು ನಿರ್ವಹಿಸುತ್ತಿರುವ ಪರಿಯನ್ನು ಹೇಗೆ ಅರ್ಥೈಸಿಕೊಳ್ಳಬೇಕು?

ಕೋವಿಡ್- 19 ಅಥವಾ ಭೂಕುಸಿತ, ಇವೆರಡಕ್ಕೂ ಸಂಕೀರ್ಣ ಕಾರಣಗಳಿರುವುದು ನಿಜ. ಜೊತೆಗೆ ಜಾಗತಿಕ ಆಯಾಮಗಳೂ ಇವೆ. ಕೊರೊನಾ ವೈರಸ್ ಹುಟ್ಟು ಹಾಗೂ ಪ್ರಸರಣದ ಹಿಂದೆ, ಸೂಕ್ಷ್ಮಾಣು ಜೀವಿಲೋಕವನ್ನು ಆಧುನಿಕ ಜಗತ್ತು ನಿರ್ವಹಿಸುತ್ತಿರುವ ರೀತಿ ಮತ್ತು ಭೌಗೋಳಿಕ ರಾಜಕೀಯದ ಒಳಸುಳಿಗಳ ಅರಿವಾಗುತ್ತಿದೆ. ಅಂತೆಯೇ, ಒಮ್ಮೆಲೇ ಸುರಿದು ಪ್ರವಾಹ ಹಾಗೂ ಭೂಕುಸಿತ ತರುವ ಭಾರಿಮಳೆಗೆ ಹವಾಮಾನ ಬದಲಾವಣೆಯ ಹಿನ್ನೆಲೆಯೂ ಇದೆ. ಅಂದರೆ, ಇವೆರಡೂ ಸವಾಲುಗಳಿಗೆ ನಮ್ಮ ಕೈಮೀರಿದ ಜಾಗತಿಕ ಕಾರಣಗಳಿವೆ ಎಂದು ಸಮಾಧಾನ ತಾಳುವ ಅವಕಾಶವೇನೋ ಇದೆ. ಆದರೆ ಸದ್ಯದ ಸವಾಲೆಂದರೆ, ಈ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸುವ ಬಗೆ ಹೇಗೆಂಬುದು ತಾನೆ?

ತಕ್ಷಣದ ಸ್ಪಂದನೆಯಾಗಿ ಸರ್ಕಾರವು ಕೋವಿಡ್ ಪ್ರಸರಣ ನಿಯಂತ್ರಣ ಹಾಗೂ ರೋಗಿಗಳ ಚಿಕಿತ್ಸೆಗೆ ಆದ್ಯತೆ ನೀಡುತ್ತಿದೆ. ಭೂಕುಸಿತವಾದಲ್ಲಿ ಜನಜೀವನ ರಕ್ಷಿಸುವ ಪರಿಹಾರ ಕಾರ್ಯಗಳನ್ನೂ ಕೈಗೊಳ್ಳುತ್ತಿದೆ. ಹಲವು ಇತಿಮಿತಿಗಳಲ್ಲಿ ನಿರ್ವಹಿಸಬೇಕಾದ ಈ ತುರ್ತುಕಾರ್ಯಗಳ ಕ್ಷಮತೆಯಲ್ಲಿ ಕೊರತೆಯಿದ್ದರೆ, ಅವನ್ನು ಸಕಾರಣ ಎನ್ನಬಹುದೇನೋ. ಆದರೆ, ಭವಿಷ್ಯದಲ್ಲಿ ಈ ಬಗೆಯ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬಲ್ಲ ಹಾಗೂ ಸುಸ್ಥಿರ ಅಭಿವೃದ್ಧಿ ಸಾಧಿಸಬಲ್ಲ ಬಗೆಯೆಂತು? ಅಂಥ ದೀರ್ಘಕಾಲೀನ ಮತ್ತು ಸಶಕ್ತ ಆಡಳಿತ ನೀತಿಯ ಕುರಿತು ಗಂಭೀರ ಚಿಂತನೆಗಳನ್ನು ಮಾಡಲೇಬೇಕಾದ ಅವಶ್ಯಕತೆಯಿದೆ ಈಗ. ಆದರೆ, ಇಂದಿನ ಆಡಳಿತ ವ್ಯವಸ್ಥೆಯು ತೋರುತ್ತಿರುವ ಅಭಿವೃದ್ಧಿ ದೃಷ್ಟಿಕೋನ, ಆಡಳಿತಕ್ರಮ, ಅಭಿವೃದ್ಧಿ ಯೋಜನೆಗಳ ಸ್ವರೂಪ ಮತ್ತು ಅವು ಅನುಷ್ಠಾನವಾಗುತ್ತಿರುವ ಪರಿ ಇವೆಲ್ಲವನ್ನೂ ಗಮನಿಸಿದರೆ, ಆಗುವುದು ನಿರಾಸೆಯಷ್ಟೇ ಅಲ್ಲ, ಗಾಬರಿ ಕೂಡ! ಸಾಂಕ್ರಾಮಿಕ ಅಥವಾ ಸತತವಾಗಿ ಸಾವುನೋವು ತರುತ್ತಿರುವ ತೀವ್ರ ಪ್ರವಾಹ- ಭೂಕುಸಿತದಂಥ ಸಂದರ್ಭಗಳೂ ಸರ್ಕಾರಗಳಿಗೆ ಅವು ಅಪ್ಪಿಕೊಂಡಿರುವ ಅಭಿವೃದ್ಧಿ ಮಾದರಿಗಳನ್ನು ಮರುಪರಿಶೀಲಿಸಲು ಪ್ರೇರೇಪಿಸುತ್ತಿಲ್ಲವಲ್ಲ ಎನ್ನುವುದೇ ವಿಷಾದದ ಸಂಗತಿ. ಇದಕ್ಕೆ ಉದಾಹರಣೆಯಾಗಿ ಎರಡು ಗಂಭೀರ ಸಂಗತಿಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಕೋವಿಡ್- 19 ಅಷ್ಟೇ ಅಲ್ಲ, ವೈರಾಣು, ಬ್ಯಾಕ್ಟೀರಿಯಾ ತೆರನ ಸೂಕ್ಷ್ಮಾಣುಜೀವಿಯಿಂದ ಬರುವ ಎಲ್ಲ ಬಗೆಯ ಸಾಂಕ್ರಾಮಿಕ ರೋಗಗಳನ್ನೂ ತಡೆಗಟ್ಟಲು ಬೇಕಿರುವ ಪ್ರಾಥಮಿಕ ಅವಶ್ಯಕತೆಯೆಂದರೆ, ಸ್ವಚ್ಛ ಪರಿಸರ ಮತ್ತು ಪರಿಶುದ್ಧ ಆಹಾರ ತಾನೆ? ಊಟದ ಬಟ್ಟಲು ಸೇರುವ ಕಾಳು-ಬೇಳೆ, ತರಕಾರಿ-ಹಣ್ಣು, ಮೊಟ್ಟೆ-ಮೀನು ಯಾವುದೇ ಇರಲಿ, ಗುಣಮಟ್ಟ ಒಳ್ಳೆಯದಿರಲೇಬೇಕು. ಆದರೆ, ಕೇಂದ್ರ ಸರ್ಕಾರದ ವ್ಯಾಪ್ತಿಯ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಪರಿಷತ್ತಿನ (ಸಿ.ಎಸ್.ಐ.ಆರ್.) ಇತ್ತೀಚಿನ ಅಧ್ಯಯನ ವರದಿಗಳ ಪ್ರಕಾರ, ಮಾರುಕಟ್ಟೆಯಲ್ಲಿ ದೊರಕುತ್ತಿರುವ ಬಹುಪಾಲು ಆಹಾರ ಸಾಮಗ್ರಿ ಮತ್ತು ಸಿದ್ಧ ತಿಂಡಿ-ತಿನಿಸುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕ್ರಿಮಿನಾಶಕ ಹಾಗೂ ಭಾರ ಲೋಹಗಳ ಅಂಶ ಕಂಡುಬರುತ್ತಿದೆ. ಇದರಿಂದಾಗಿ ಬಹುಪಾಲು ಜನರ ದೇಹದ ಹಾರ್ಮೋನು ವ್ಯವಸ್ಥೆ ಏರುಪೇರಾಗಿ, ರೋಗನಿರೋಧಕ ಶಕ್ತಿ ಛಿದ್ರವಾಗುತ್ತಿದೆ. ಕುಡಿಯುವ ನೀರಿನ ಮೂಲಗಳಾದ ಬಾವಿ- ಕೊಳವೆಬಾವಿ, ಕೆರೆ- ನದಿಗಳಿಗೆ ದೈನಂದಿನ ಹಾಗೂ ಕೈಗಾರಿಕಾ ತ್ಯಾಜ್ಯ ಸೇರಿ, ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿದ ಮಾನದಂಡ ಮೀರಿ ಕಲುಷಿತವಾಗುತ್ತಿವೆ.

ಕೇಂದ್ರ ಆಹಾರ ಗುಣಮಟ್ಟ ನಿಯಂತ್ರಣ ಪ್ರಾಧಿಕಾರವೇನೋ ವಿಸ್ತೃತವಾದ ಗುಣಮಟ್ಟ ಸಂಹಿತೆಯನ್ನು ಪ್ರಕಟಿಸಿದೆ. ಆದರೆ, ತಳಮಟ್ಟದಲ್ಲಿ ಅವನ್ನು ಅನುಷ್ಠಾನ ಮಾಡಿ, ನಾಗರಿಕರ ಆರೋಗ್ಯ ಕಾಪಾಡುವ ಸಶಕ್ತ ವ್ಯವಸ್ಥೆಯೇ ಇನ್ನೂ ರೂಪುಗೊಂಡಿಲ್ಲ. ಸ್ಥಳೀಯ ಆಡಳಿತದಲ್ಲಿ ಈ ಕುರಿತ ಆದ್ಯತೆ ಹಾಗೂ ತಜ್ಞತೆ ಇಲ್ಲ. ಆಹಾರದ ಗುಣಮಟ್ಟ ಪರಿಶೀಲಿಸಬಲ್ಲ ಪ್ರಯೋಗಾಲಯವು ಜಿಲ್ಲೆಗೊಂದಾದರೂ ಇಲ್ಲ. ಸೀಮಿತ ಅನುದಾನ ಹಾಗೂ ಸರಳ ತಂತ್ರಜ್ಞಾನದಿಂದ ರೂಪಿಸಬಹುದಾದ ಅಗತ್ಯ ಸುರಕ್ಷಾ ಕ್ರಮಗಳಿವು. ಇವನ್ನು ರೂಪಿಸಲು ಇನ್ನೂ ಸಾಧ್ಯವಾಗದಿರುವುದು, ಶಿಕ್ಷಣ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ‘ಪ್ರಗತಿ’ ಸಾಧಿಸಿದ ನಾಡಿನ ಕ್ರೂರ ವ್ಯಂಗ್ಯವಲ್ಲದೆ ಇನ್ನೇನು?

ಇನ್ನೊಂದು, ನೆರೆ ಹಾಗೂ ಭೂಕುಸಿತ ನಿರ್ವಹಣೆಯ ಕುರಿತದ್ದು. ಮಲೆನಾಡಿನಲ್ಲಿ ಹುಟ್ಟಿ ಪೂರ್ವದ ಬಯಲುನಾಡಿಗೂ ಪಶ್ಚಿಮದ ಕರಾವಳಿಯತ್ತಲೂ ಸಾಗುವ ನದಿಗಳ ನಿರ್ವಹಣೆಯು ಅಪಾಯಕಾರಿ ದಾರಿ ತುಳಿಯುತ್ತಿರುವುದು. ನದಿಯಂಚಿನ ಅತಿಕ್ರಮಣ, ಹೊಳೆ- ಹಳ್ಳಗಳ ದಂಡೆಯ ಕಾಡು ನಾಶ, ಮರಳು ಗಣಿಗಾರಿಕೆ ಇತ್ಯಾದಿಗಳು ನದಿಪಾತ್ರವನ್ನೇ ಕುಗ್ಗಿಸಿ, ಸಣ್ಣ ಮಳೆಗೂ ಕೃತಕ ನೆರೆಯನ್ನೇ ಸೃಷ್ಟಿಸುತ್ತಿವೆ. ಪಶ್ಚಿಮಘಟ್ಟದ ಇಳಿಜಾರಾದ ಕಣಿವೆಗಳಲ್ಲಿ ಅವೈಜ್ಞಾನಿಕವಾಗಿ ಗುಡ್ಡದ ಬುಡವನ್ನೇ ಕೊರೆದು ರಸ್ತೆ, ರೈಲು, ಕಟ್ಟಡ, ವಿದ್ಯುತ್ ಉತ್ಪಾದನಾ ಸ್ಥಾವರ, ವಿದ್ಯುತ್ ಮಾರ್ಗ, ವಾಣಿಜ್ಯ ನೆಡುತೋಪು ನಿರ್ಮಿಸುವ ಕಾಮಗಾರಿಗಳೆಲ್ಲ ಸಾಗುತ್ತಿವೆ. ಇವನ್ನು ನಿಯಂತ್ರಿಸಬೇಕಿದ್ದ ಅರಣ್ಯ, ಪರಿಸರ, ಕಂದಾಯ ಹಾಗೂ ನೀರಾವರಿ ಇಲಾಖೆಗಳ ನಡುವೆ ಕನಿಷ್ಠ ಸಮನ್ವಯವೂ ಕಂಡುಬರುತ್ತಿಲ್ಲ.

ಅವಘಡಗಳು ಸಂಭವಿಸತೊಡಗಿದ ಮೇಲಾದರೂ ಸೂಕ್ತ ಭೂಬಳಕೆ ನೀತಿ ಜಾರಿಗೆ ತಂದು, ಜಲಾನಯನ ತತ್ವದಡಿ ಈ ಪ್ರದೇಶಗಳಿಗೆ ಸ್ಥಿರತೆ ಒದಗಿಸುವ ಕಾರ್ಯಕ್ಕೆ ಚಾಲನೆ ಸಿಗಬೇಕಿತ್ತು. ಅದರ ಬದಲು, ಭಾರಿ ಅನುದಾನದೊಂದಿಗೆ ನದಿ ಸೆರಗು ಹಾಗೂ ಕಡಿದಾದ ಪರ್ವತಗಳ ತಪ್ಪಲಿನಲ್ಲಿ ಕಾಂಕ್ರೀಟ್ ಗೋಡೆ ಕಟ್ಟಿ ಭೂಕುಸಿತ ತಡೆಯುತ್ತೇವೆ ಎನ್ನುವ ಹೊಸ ಉದ್ಯಮವೇ ತಲೆಯೆತ್ತಿ ನಿಲ್ಲುತ್ತಿದೆಯಲ್ಲ!

ಸೂಕ್ತ ಹಾಗೂ ಸರಳ ತಂತ್ರಜ್ಞಾನ ಆಧಾರಿತ ಜನಸಹಭಾಗಿತ್ವದ ಯೋಜನೆಗಳ ಬದಲು, ಸರ್ಕಾರದ ಹಣವನ್ನೆಲ್ಲ ಹೀರುವ ಕಾಂಕ್ರೀಟ್ ಕಾಮಗಾರಿಗಳಿಗೇ ಮತ್ತಷ್ಟು ಉತ್ತೇಜನ ದೊರಕುತ್ತಿದೆ ಮತ್ತು ಅದನ್ನೇ ಅಭಿವೃದ್ಧಿ ಎಂದೂ ಬಿಂಬಿಸಲಾಗುತ್ತಿದೆ.

ಇವನ್ನೆಲ್ಲ ಸದಾ ಗಮನಿಸಿ, ನಿಯಂತ್ರಿಸಿ, ಸರ್ಕಾರಕ್ಕೆ ಸರಿದಾರಿ ತೋರಬೇಕಿದ್ದ ಮಾಲಿನ್ಯ ನಿಯಂತ್ರಣ ಮಂಡಳಿಯಂಥ ಸ್ವತಂತ್ರ ನಿಯಂತ್ರಣಾ ವ್ಯವಸ್ಥೆಗಳು ಜಡತ್ವ, ಭ್ರಷ್ಟಾಚಾರ, ಅಧಿಕಾರ ರಾಜಕಾರಣದ ಒತ್ತಡ ಹಾಗೂ ಆಮಿಷಗಳಿಗೆ ಒಳಗಾಗಿ ನಿಷ್ಕ್ರಿಯವಾಗುತ್ತಿವೆ. ವಿಜ್ಞಾನಿಗಳು ಹಾಗೂ ತಜ್ಞರ ಬೌದ್ಧಿಕಲೋಕವೂ ಸರ್ಕಾರವನ್ನು ಎಚ್ಚರಿಸುವಲ್ಲಿ ಮಾತು ಕಳೆದುಕೊಳ್ಳುತ್ತಿದೆ. ಸಾರ್ವಜನಿಕ ಹಿತದ ಮುಖವಾಣಿಯಾಗಬಲ್ಲ ನಾಗರಿಕ ಸಂಘಟನೆಗಳ ಧ್ವನಿಯಡಗುತ್ತಿದೆ. ಇವೆಲ್ಲವುಗಳಿಂದಾಗಿ,
ಆರೋಗ್ಯಪೂರ್ಣ ಸಮಾಜದ ಅಡಿಗಟ್ಟಾಗಬೇಕಾದ ಜನರ ಆರೋಗ್ಯ ಹಾಗೂ ನೈಸರ್ಗಿಕ ಸಂಪತ್ತು- ಇವೆರಡೂ ವೇಗವಾಗಿ ಶಿಥಿಲವಾಗುತ್ತಿವೆ.

ಹಿಂದಣ ನೋಡಿ, ಮುಂದಣ ಸಾಗುವ ವಿವೇಕವನ್ನು ಮೂಡಿಸಬೇಕಾದ ಸ್ವಾತಂತ್ರ್ಯೋತ್ಸವದ ಚಿಂತನಾ ಸಮಯವಿದು. ಆದರೆ, ಹಿಂದಿನ ಹೆಜ್ಜೆಗಳೆಲ್ಲ ಯರ್‍ರಾಬಿರ್‍ರಿಯಾಗಿ ತೋರುತ್ತಿವೆ. ದೂರದೃಷ್ಟಿಯಿರದ ಅಭಿವೃದ್ಧಿ ಮಾದರಿಗಳ ಮಂಜಿನಿಂದಾಗಿ, ಹೆಜ್ಜೆಯಿಡಬೇಕಾದ ಭವಿಷ್ಯದ ದಾರಿ ಮಸುಕಾಗುತ್ತಿದೆ!


ಲೇಖಕ: ಕೇಶವ ಎಚ್. ಕೊರ್ಸೆ, ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು