ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮ ಇಲ್ಲದ ಈ ಹೊತ್ತಿನಲ್ಲಿ

ಮಾರ್ಗದರ್ಶನಕ್ಕಾಗಿ ಜನ ಈಗ ಯಾರತ್ತ ಮುಖ ಮಾಡಬೇಕು?
Last Updated 1 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ದೆಹಲಿಯು ದಿನಗಳ ಕಾಲ ಹೊತ್ತಿ ಉರಿಯಿತು. ಗಲಭೆಯು ಮಾರಣಾಂತಿಕ ಸ್ವರೂಪ ಪಡೆದಿತ್ತು. ಕೆಟ್ಟದ್ದೇನೋ ನಡೆಯಲಿದೆ ಎಂಬುದು ಕಳೆದ ಕೆಲವು ವಾರಗಳಿಂದ ಅನಿಸುತ್ತಿತ್ತು. ರಾಜಕಾರಣಿಗಳ ಒಂದು ಗುಂಪು ಮತ್ತು ಹಿಂದುತ್ವ ಬ್ರಿಗೇಡ್‌ನ ಕೆಲವು ಗುಂಪುಗಳು ತಾವು ಸಕ್ರಿಯವಾಗಲು ಇಂಥದ್ದೇನಾದರೂ ನಡೆಯಲಿ ಎಂದು ಕಾಯುತ್ತಿದ್ದವು ಎಂದು ಈಗ ಅನಿಸುತ್ತಿದೆ. ಕ್ರೌರ್ಯದ ಪಾತಾಳಕ್ಕೆ ನಾವು ಮತ್ತೆ ಕುಸಿದಿರುವುದು, ಸಾವಿನಲ್ಲೂ ಕೆಲವು ರಾಜಕಾರಣಿಗಳು ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿರುವುದು,ರಕ್ತ ಹರಿದಿರುವುದನ್ನು ಕಂಡು ಮೂಲಭೂತವಾದಿಗಳು ಹಿಗ್ಗುತ್ತಿರುವುದು… ಇವೆಲ್ಲ ನಮ್ಮ ದುರಂತವನ್ನು ಹೇಳುತ್ತವೆ.

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್

ಅದೆಷ್ಟೋ ಜನ ಜೀವ ಕಳೆದುಕೊಂಡರು, ಎಷ್ಟೋ ಜನ ಜೀವನೋಪಾಯ ಕಳೆದುಕೊಂಡರು. ಆದರೆ, ಒಂದು ಹಿಂಸಾಚಾರ ನಡೆಯಲಿದೆ ಎಂಬ ಅಪಶಕುನವು ವಾರಗಳಿಂದಲೂ ಗೋಚರಿಸುತ್ತಿತ್ತು. ಬಲಪಂಥೀಯ ನಾಯಕರು ಕೋಮು ಜ್ವಾಲೆಯನ್ನು ಹೊತ್ತಿಸುವ ವಿಚಾರದಲ್ಲಿ ಗಟ್ಟಿಯಾಗಿ ರವಾನಿಸುತ್ತಿದ್ದ ಎಚ್ಚರಿಕೆಯ ಸಂದೇಶಗಳು ಬಹಳ ಸ್ಪಷ್ಟವಾಗಿದ್ದವು. ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರು ಮಾಧ್ಯಮಗಳ ಕಣ್ಣು ತಮ್ಮ ಮೇಲಿದ್ದಾಗಲೇ, ಪೊಲೀಸರಿಗೆ ನಿರ್ಲಜ್ಜೆಯಿಂದ ಸವಾಲು ಹಾಕಿದ್ದರು. ರಸ್ತೆಗಳಲ್ಲಿ ಅಡ್ಡಗಟ್ಟಿ ಕುಳಿತಿರುವ ಶಾಂತಿಯುತ ಪ್ರತಿಭಟನಕಾರರನ್ನು ಪೊಲೀಸರು ತೆರವು ಮಾಡದೇ ಇದ್ದರೆ ತಾವು ಮತ್ತು ತಮ್ಮ ಬೆಂಬಲಿಗರು ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಮಿಶ್ರಾ ಹೇಳಿದ್ದರು. ಇದನ್ನು ಪಾಲಿಸಲಿಕ್ಕೋ ಎನ್ನುವಂತೆ ಅವರ ಬೆಂಬಲಿಗರು ರಾಡ್ ಮತ್ತು ಬಡಿಗೆಗಳನ್ನು ಹಿಡಿದು, ಪ್ರತಿಭಟನಕಾರರ ಬಳಿ ಸಾಗಿದರು. ನಂತರ, ಹಿಂಸಾಚಾರ ಶುರುವಾಯಿತು.

ಪೊಲೀಸರು ನಿಸ್ಸಹಾಯಕರಾಗಿ ನಿಂತು ನೋಡಿದರು, ಮೇಲಿನಿಂದ ಸೂಚನೆ ಬರಲಿ ಎಂದು ಮೌನವಾಗಿ ಕಾದರು. ಅವರು ಕೆಲಸ ಆರಂಭಿಸುವ ಹೊತ್ತಿಗೆ ಒಂದು ಡಜನ್ ಮಂದಿ ಸಾವನ್ನಪ್ಪಿದ್ದರು, ದೆಹಲಿಯ ಒಂದು ಭಾಗದಲ್ಲಿ ಕೋಮು ಜ್ವಾಲೆ ಉರಿದಾಗಿತ್ತು. ಎರಡನೆಯ ದಿನ ‘ಕಂಡಲ್ಲಿ ಗುಂಡು’ ಆದೇಶ ಇದ್ದರೂ ಜನ ಸಾಯುವುದು ನಿಲ್ಲಲಿಲ್ಲ. ಒಬ್ಬ ಪೊಲೀಸ್ ಹಾಗೂ ಒಬ್ಬ ಗುಪ್ತಚರ ಅಧಿಕಾರಿ ಕೂಡ ಸಾವನ್ನಪ್ಪಿದರು.

ಇಷ್ಟು ವರ್ಷಗಳವರೆಗೆ ಪ್ರತಿಭಟನೆಗಳನ್ನು ಪುರುಷರೇ ಮುನ್ನಡೆಸುತ್ತಿದ್ದರು. ಇತ್ತೀಚೆಗೆ, ಯುವಕರು ಪ್ರತಿಭಟನೆ
ಗಳನ್ನು ಮುನ್ನಡೆಸಿದ್ದು ಇದೆ. ಪೊಲೀಸರು ಅತಿಯಾಗಿ ಬಲಪ್ರಯೋಗ ಮಾಡಿದಾಗ, ಅದಕ್ಕೂ ತನಗೂ ಸಂಬಂಧವಿಲ್ಲ, ಪೊಲೀಸರು ಸ್ವತಂತ್ರವಾಗಿ ಕರ್ತವ್ಯ ನಿಭಾಯಿಸಿದ್ದಾರೆ ಎಂದು ಆಳುವ ಪಕ್ಷ ಪ್ರತಿಪಾದಿಸುತ್ತಿತ್ತು. ಆದರೆ ಶಾಹೀನ್‌ ಬಾಗ್‌ ಪ್ರತಿಭಟನೆ ಹಾಗಲ್ಲ. ನಾಗರಿಕ ಅಸಹಕಾರ ಹೋರಾಟದಲ್ಲಿ ಗಾಂಧೀಜಿ ನಂತರದ ಕಾಲಘಟ್ಟದಲ್ಲಿ ಇದು ಪರಿವರ್ತನೆಯ ಬಿಂದುವಿನಂತೆ ಕಾಣುತ್ತದೆ. ಈ ಪ್ರತಿಭಟನೆಯನ್ನು ಮುನ್ನಡೆಸಿದ್ದು ಮಹಿಳೆಯರು. ಅವರು ಮೌನ ಪ್ರತಿಭಟನೆ ನಡೆಸುತ್ತಿದ್ದರು. ಬೇರೆ ಬೇರೆ ಸಮುದಾಯಗಳಿಗೆ ಸೇರಿದ ಜನ ಇವರನ್ನು ಸೇರಿಕೊಂಡರು. ಹಾಡುಗಳು, ಪ್ರಾರ್ಥನೆಗಳ ಮೂಲಕ ಪ್ರತಿಭಟಿಸಿದರು. ಶಾಹೀನ್ ಬಾಗ್ ಮಾದರಿಯ ಪ್ರತಿಭಟನೆಗಳು ದೇಶದ ಇತರೆಡೆಗೆ ವ್ಯಾಪಿಸಿದ ನಂತರ, ಉತ್ತರ ದೆಹಲಿಯ ಕೆಲವೆಡೆ ಇದೇ ಮಾದರಿಯ
ಪ್ರತಿಭಟನೆಗಳು ಮಹಿಳೆಯರಿಂದ ನಡೆದವು.

ಇದು ಸರ್ಕಾರ ಮತ್ತು ಪೊಲೀಸರನ್ನು ಗೊಂದಲಕ್ಕೆ ನೂಕಿತು. ಮಹಿಳೆಯರು ಶಾಂತಿಯುತವಾಗಿ ನಡೆಸುವ ಪ್ರತಿಭಟನೆಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಸರಳ ಮಾರ್ಗವೊಂದು ಅವರಿಗೆ ಕಾಣಲಿಲ್ಲ. ಗೃಹ ಸಚಿವರು ಔದಾರ್ಯ ತೋರಿ, ಶಾಹೀನ್ ಬಾಗ್‌ಗೆ ತೆರಳಿ ಪ್ರತಿಭಟನಕಾರರನ್ನು ಭೇಟಿ ಮಾಡಬಹುದಿತ್ತು. ಆದರೆ ಸೊಕ್ಕು ಮತ್ತು ಗತ್ತು ಆಡಳಿತ ಪಕ್ಷವನ್ನು ಕುರುಡಾಗಿಸಿತು. ಆಡಳಿತ ಪಕ್ಷವು ರಸ್ತೆತಡೆಗೆ ಬೆಂಬಲ ನೀಡಿತು, ಇದರಿಂದಾಗಿ ತನಗೆ ದೆಹಲಿ ಚುನಾವಣೆಯಲ್ಲಿ ದೊಡ್ಡ ಲಾಭ ಸಿಗುತ್ತದೆ ಎಂದು ಅಂದಾಜಿಸಿತು. ಆದರೆ, ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ, ಚುನಾವಣೆಯಲ್ಲಿ ದೊಡ್ಡ ಜಯ ಸಾಧಿಸಿತು. ಪ್ರತಿಭಟನೆಗಳು ಮುಂದುವರೆದವು.

ಹಾಡುಗಳು ಮತ್ತು ಭಾಷಣಗಳ ಮೂಲಕ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ಹಾಗೂ ಮಕ್ಕಳ ಮೇಲೆ ಹಿಂಸೆಯನ್ನು ಪ್ರಯೋಗಿಸುವುದು ಹೇಗೆ ಸಾಧ್ಯ? ಪ್ರತಿಭಟನೆ ತಣ್ಣಗಾಗುವ ಸೂಚನೆಯೇ ಇಲ್ಲದಿದ್ದರೆ ಏನು ಮಾಡುವುದು? ಕಾಲ ಕೂಡಿ ಬಂದಾಗ,
ಕೆಲಸ ಆಗುತ್ತದೆ ಎಂಬ ಮಾತು ಇದೆ. ಹೊಣೆಗಾರಿಕೆ ಇಲ್ಲದ ರಾಜಕಾರಣಿಯೊಬ್ಬ ಕೀಳುಮಟ್ಟದ ಆಲೋಚನೆಯೊಂದಿಗೆ ಮುಂದೆ ಬಂದ. ಬಲ ಪ್ರಯೋಗಿಸಿ, ಪ್ರತಿಭಟನಕಾರರ ಮೂಳೆ ಮುರಿಯುವುದಾಗಿ ಆತ ಬೆದರಿಕೆ ಹಾಕಿದ. ಈ ಕೆಟ್ಟ ಆಲೋಚನೆಯು ಹಲವರಿಗೆ ಚೆನ್ನಾಗಿ ಕಂಡಿತು. ಅದರಲ್ಲೂ ಮುಖ್ಯವಾಗಿ ಪೊಲೀಸರಿಗೆ ಚೆನ್ನಾಗಿ ಕಂಡಿತು.

ಪೊಲೀಸರು ಮಾಡಬೇಕಿದ್ದ ಕೆಲಸವನ್ನು ಬೇರೊಬ್ಬರು ಮಾಡಲು ಮುಂದೆಬಂದಂತೆ ಆಗಿತ್ತು. ಮೇಲಿನ ನಾಯಕತ್ವವು ಟ್ರಂಪ್ ಅವರನ್ನು ಖುಷಿಪಡಿಸುವ ಕೆಲಸದಲ್ಲಿ ಮಗ್ನವಾಗಿತ್ತು. ದೇಶಕ್ಕೆಲ್ಲಾ ಸ್ಪಷ್ಟವಾಗಿ ಕೇಳಿಸುತ್ತಿದ್ದ ಸಂದೇಶವನ್ನು ಅವರು ಕೇಳಿಸಿಕೊಳ್ಳಲಿಲ್ಲ. ತಮ್ಮದೇ ಪಕ್ಷದ ಸದಸ್ಯರು, ಕಾನೂನನ್ನು ಕೈಗೆತ್ತಿಕೊಳ್ಳುವಂತೆ ಬೆಂಬಲಿಗರಿಗೆ ಕರೆಕೊಡುತ್ತ ಇದ್ದುದು ಅವರಿಗೆ ಗೊತ್ತಾಗಲಿಲ್ಲ. ಬಲಪಂಥೀಯ ನಾಯಕರನ್ನು ಬಂಧಿಸಿ, ದ್ವೇಷ ಭಾಷಣ ಮಾಡಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸುವ ಬದಲು, ಅದನ್ನು ಉಪೇಕ್ಷಿಸಿದರು. ಅಲ್ಲದೆ, ಪೊಲೀಸರು ಗಲಭೆಕೋರರಿಗೆ ನೆರವಾಗುವಂತೆ ನಡೆದುಕೊಂಡಿರಬಹುದು ಎಂಬ ಆರೋಪಗಳೂ ಇವೆ.

ಆದರೆ, ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಎಲ್ಲಿದ್ದರು?! ಅವರು ತಮ್ಮ ಮನೆಯಲ್ಲಿ ಅವಿತಿದ್ದಿದ್ದು ಏಕೆ? ಈ ಎಲ್ಲ ಸಮಸ್ಯೆಗಳು ಶುರುವಾಗುತ್ತಿದ್ದಾಗ, ಅಪಾಯದ ಮುನ್ಸೂಚನೆಯು ಸಾಮಾನ್ಯ ಜನರಿಗೂ ಕಾಣಿಸುತ್ತಿದ್ದಾಗ ಕೇಜ್ರಿವಾಲ್ ನೇತೃತ್ವದ ಪಕ್ಷದ ನಾಯಕರು ಎಲ್ಲಿದ್ದರು? ದೆಹಲಿ ಹೊತ್ತಿ ಉರಿಯುವುದನ್ನು, ಜನ ಸಾಯುವುದನ್ನು ನೋಡುತ್ತ ಕುಳಿತುಕೊಳ್ಳಲು ಅವರ ಪಕ್ಷ ಗೆಲುವು ಸಾಧಿಸಿತೇ? ಗಲಭೆ ನಿಯಂತ್ರಿಸಲು ಸೇನೆಯನ್ನು ನಿಯೋಜಿಸಲಿಲ್ಲ ಎಂದು ಗೃಹ ಸಚಿವರನ್ನು ದೂಷಿಸುವ ಬದಲು ಕೇಜ್ರಿವಾಲ್ ಅವರು ತಮ್ಮ ಪಕ್ಷದ ನಾಯಕರು ಹಾಗೂ ಲಕ್ಷಾಂತರ ಬೆಂಬಲಿಗರ ಜೊತೆ ಗಲಭೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಬೇಕಿತ್ತಲ್ಲವೇ? ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿ, ಗಲಾಟೆ ಮಾಡಿಕೊಳ್ಳುತ್ತಿದ್ದ ಗುಂಪುಗಳ ನಡುವೆ ಶಾಂತಿ ಮೂಡಬೇಕು ಎಂದು ಕೇಳಿಕೊಳ್ಳಬೇಕಿತ್ತಲ್ಲವೇ?

ಅಣ್ಣಾ ಹಜಾರೆ ಅವರು ಸಂಘಟಿಸಿದ್ದ ಚಳವಳಿಯ ಖ್ಯಾತಿಯನ್ನು ತಮ್ಮ ಬೆನ್ನಿಗೆ ಅಂಟಿಸಿಕೊಂಡಿರುವ, ಗರ್ಜಿಸುವ ಸಿಂಹದಂತೆ ಈ ಮೊದಲು ಇದ್ದ ಕೇಜ್ರಿವಾಲ್ ಹಠಾತ್ ಎಂದು ಅಸಹಾಯಕರೂ, ದುರ್ಬಲರೂ ಆಗಿಬಿಟ್ಟರೇ? ಅಥವಾ, ರಾಜಕೀಯವಾಗಿ ಯಾವುದು ಸರಿ, ಯಾವುದು ಹೆಚ್ಚು ಲಾಭದಾಯಕ ಎಂಬುದನ್ನು ಅವರು ಅಂದಾಜಿಸುತ್ತಿದ್ದರೇ? ಅಥವಾ, ಗಲಭೆಯ ಜ್ವಾಲೆಯನ್ನು ಆರಿಸುವುದರಿಂದ ಆಗುವ ಲಾಭ ಹಾಗೂ ಆರಿಸದೇ ಇರುವುದರಿಂದ ಆಗುವ ಲಾಭದ ಬಗ್ಗೆ ಅವರು ತಮ್ಮ ಸಹೋದ್ಯೋಗಿಗಳ ಜೊತೆ ಕುಳಿತು ಲೆಕ್ಕ ಹಾಕುತ್ತಿದ್ದರೇ? ಅವರ ಲೆಕ್ಕಾಚಾರ ಏನೇ ಇದ್ದಿರಬಹುದು, ಅವರು ದೆಹಲಿಯ ಜನರನ್ನು ಭ್ರಮನಿರಸನಗೊಳಿಸಿದರು. ಅವರು ಮಾಡಿದ್ದು ಕ್ಷಮಾರ್ಹವಲ್ಲ.

ಹಿಂದೂ-ಮುಸ್ಲಿಂ ಗಲಭೆ ನಡೆದು, ಸಹಸ್ರಾರು ಜನ ಸತ್ತಾಗ ಮಹಾತ್ಮ ಗಾಂಧೀಜಿ ಅವರು ದೆಹಲಿಯ ಬಿರ್ಲಾ ಮಂದಿರದಲ್ಲಿ ಪ್ರಾರ್ಥನೆ ಮಾಡುತ್ತ ಕುಳಿತಿದ್ದರೇ? ಅಥವಾ ನೆಹರೂ ಮತ್ತು ಪಟೇಲರನ್ನು ದೂಷಿಸುತ್ತ ಇದ್ದರೇ? ಅವರು ಗಲಭೆ ನಡೆದ ಸ್ಥಳಕ್ಕೆ ಹೋಗಿ, ಸಂತ್ರಸ್ತರ ಕಣ್ಣೀರು ಒರೆಸಿದರು. ಉಪವಾಸ ಸತ್ಯಾಗ್ರಹ ಆರಂಭಿಸಿ, ಕೋಮುಗಲಭೆ ನಿಲ್ಲದ ಹೊರತು ಉಪವಾಸ ಕೈಬಿಡುವುದಿಲ್ಲ ಎಂದು ಘೋಷಿಸಿದರು.

ನಮಗೆ ಮಾರ್ಗದರ್ಶನ ನೀಡಲು ಗಾಂಧಿ ಇಲ್ಲದ ಈ ಹೊತ್ತಿನಲ್ಲಿ, ಜನ ಯಾರತ್ತ ಮುಖ ಮಾಡಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT