ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗೂರು ರಾಮಚಂದ್ರಪ್ಪ ಬರಹ: ಶಿಕ್ಷಣ ನೀತಿ ಮತ್ತು ಸ್ವಾಯತ್ತತೆ

ಪ್ರಯೋಗಕ್ಕಾಗಿ ಪ್ರಯೋಗವೆಂಬ ಯಾವುದೇ ಪ್ರವೃತ್ತಿ ಪ್ರಶ್ನಾರ್ಹವಾದುದು
Last Updated 4 ಸೆಪ್ಟೆಂಬರ್ 2020, 20:15 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ಜಾರಿಗೆ ತರಲು ಮುಂದಾಗಿರುವ 2020ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಹಿಂದಿನ ನೀತಿಗಳಿಗಿಂತ ಹೆಚ್ಚಾಗಿಯೇ ಆದರ್ಶದ ಮಾತುಗಳನ್ನು ಒಳಗೊಂಡಿದೆ. ‘ಶಿಕ್ಷಣವು ಸಾಮಾಜಿಕ ನ್ಯಾಯ, ಸಮಾನತೆಯನ್ನು ಸಾಧಿಸಲು ಇರುವ ಏಕೈಕ ಮಹತ್ವಪೂರ್ಣ ಸಾಧನ’ ಎಂಬ ಅರಿವಿನ ಆಧಾರದಲ್ಲಿ ‘ಸಮಾನತೆಯ ಶಿಕ್ಷಣ ಮತ್ತು ಒಳಗೊಳ್ಳುವಿಕೆ’ ಎಂಬ ಧ್ಯೇಯವನ್ನು ದೃಢವಾಗಿಯೇ ಹೇಳಿದೆ (ಭಾಗ 6.1). ಇದು ಸ್ವಾಗತಾರ್ಹ ಅಂಶವಾಗಿದ್ದು, ಈ ಧ್ಯೇಯವು ಸಾಕಾರಗೊಳ್ಳುವ ವಿವರಗಳ ಪರೀಕ್ಷೆಯಲ್ಲೇ ನಿಜ ನಕ್ಷೆ ಗೋಚರಿಸಬೇಕಾಗಿದೆ.

ಶಾಲಾ ಶಿಕ್ಷಣದ ಹಂತಗಳ ಮರುಜೋಡಣೆಯಿಂದಲೇ ಚರ್ಚೆಯನ್ನು ಪ್ರಾರಂಭಿಸಬಹುದು. ಈಗ ಇರುವ ಅಂಗನವಾಡಿ, ಕಿರಿಯ- ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪಿ.ಯು ಹಂತಗಳನ್ನು ಬದಲಾಯಿಸಲಾಗಿದೆ. ಆದರೆ ಈ ಬದಲಾವಣೆಗೆ ಪ್ರೇರಣೆಯಾದ ಕಾರಣಗಳು ಸ್ಪಷ್ಟವಾಗಿಲ್ಲ. ಅಂಗನವಾಡಿ ಮತ್ತು ಮೊದಲೆರಡು ತರಗತಿಗಳನ್ನು ಸೇರಿಸಿ ತಳಹದಿಯ ಹಂತ, 3ರಿಂದ 5ನೇ ತರಗತಿಯವರೆಗೆ ಸಿದ್ಧತಾ ಹಂತ, 6ರಿಂದ 8ನೇ ತರಗತಿಯವರೆಗೆ ಮಾಧ್ಯಮಿಕ ಹಂತ, ಪದವಿಪೂರ್ವ ಹಂತವನ್ನು ರದ್ದು ಮಾಡಿ, 9ರಿಂದ 12ನೇ ತರಗತಿಯವರೆಗೆ ಸೆಕೆಂಡರಿ ಹಂತ- ಇದು ಮರುವಿಂಗಡಣೆ (ಭಾಗ-1). ಈ ವಿಂಗಡಣೆಗಿರುವ ವೈಜ್ಞಾನಿಕ ಆಧಾರ ಏನೆಂದು ಅರ್ಥವಾಗುವುದು ಕಷ್ಟ. ಅದರಲ್ಲೂ ಅಂಗನವಾಡಿಗಳನ್ನು ಮೊದಲೆರಡು ತರಗತಿಗಳ ಜೊತೆಗೆ ಸೇರಿಸಿ ‘ಒಂದೇ ಹಂತ’ ಮಾಡಿರುವ ಔಚಿತ್ಯ ಚರ್ಚಾರ್ಹವಾಗಿದೆ. ಇದು ಅಂಗನವಾಡಿಗಳ ಮೂಲ ಉದ್ದೇಶ, ಸ್ವತಂತ್ರ ಅಸ್ತಿತ್ವ ಮತ್ತು ಶೈಕ್ಷಣಿಕ ವ್ಯಕ್ತಿತ್ವಕ್ಕೆ ವಿರುದ್ಧವಾಗಿದೆ.
ಅಂಗನವಾಡಿಗಳನ್ನು ಶಕ್ತಿಶಾಲಿಯಾಗಿ ಮಾಡಲಾಗುವುದೆಂದು ಹೇಳುತ್ತಲೇ (1.5 ಮತ್ತು 6) ಸ್ವತಂತ್ರ ಅಸ್ತಿತ್ವಕ್ಕೇ ಧಕ್ಕೆ ತರುವ ಕ್ರಮಕ್ಕೆ ಕೈಹಾಕಲಾಗಿದೆ.

ಇನ್ನು ಮಾಧ್ಯಮಿಕ ಹಂತಕ್ಕೆ ಒಂದು ‘ಸಿದ್ಧತಾ ಹಂತ’ ಇರುವುದಾದರೆ, ಪದವಿ ಹಂತಕ್ಕೆ ಪಿ.ಯು.ವಿನಂತಹ ಸಿದ್ಧತಾ ಹಂತ ಯಾಕೆ ಬೇಡ? ಪ್ರಯೋಗಕ್ಕಾಗಿ ಪ್ರಯೋಗವೆಂಬ ಯಾವುದೇ ಪ್ರವೃತ್ತಿ ಪ್ರಶ್ನಾರ್ಹವಾದುದು.

ಮಾತೃಭಾಷಾ ಮಾಧ್ಯಮ ಕಡ್ಡಾಯವಾಯಿತೆಂದೇ ಆರಂಭಿಕ ಪ್ರಚಾರ ಪಡೆದ ಅಂಶದ ಅಸಲಿ ಸತ್ಯದ ಪ್ರಕಾರ ‘ಸಾಧ್ಯವಾದ ಕಡೆ’ ಮಾತ್ರ 5ನೇ ತರಗತಿಯವರೆಗೆ ಮಾತೃಭಾಷೆ ಅಥವಾ ಪ್ರಾದೇಶಿಕ (ರಾಜ್ಯ), ಸ್ಥಳೀಯ ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಬಳಸಬಹುದಾಗಿದೆ (1.11). ಇದು ಕಡ್ಡಾಯವಲ್ಲ. ಒಂದು ವೇಳೆ ಕಡ್ಡಾಯವೆಂದು ಮಾಡಿದ್ದರೂ 2014ರ ಸುಪ್ರೀಂ ಕೋರ್ಟ್ ತೀರ್ಪಿನ ಎದುರು ಅದು ಊರ್ಜಿತವಾಗುತ್ತಿರಲಿಲ್ಲ. ‘ಬೋಧನಾ ಮಾಧ್ಯಮದ ಆಯ್ಕೆಯು ಪೋಷಕರ ಹಕ್ಕು’ ಎಂಬ ಆ ತೀರ್ಪನ್ನು ಮೀರಬೇಕಾದರೆ, ಸಂವಿಧಾನದಲ್ಲಿ ಭಾಷೆಗೆ ಸಂಬಂಧಿಸಿದಂತೆ ಇರುವ 343ರಿಂದ 351ನೇ ವಿಧಿಗಳೊಳಗೆ ತಿದ್ದುಪಡಿ ಅಂಶವೊಂದನ್ನು ಸೇರಿಸುವ ತೀರ್ಮಾನವನ್ನು ತೆಗೆದುಕೊಳ್ಳಬೇಕಿತ್ತು. ಅಂಥ ಯಾವುದೇ ಸೂಚನೆಯಿಲ್ಲದ ಪ್ರಸ್ತಾಪವು ಯಥಾಸ್ಥಿತಿಯ ಮುಂದುವರಿಕೆಯಷ್ಟೇ ಆಗಿದೆ. ವಿಚಿತ್ರವೆಂದರೆ, ಇದೇ ರಾಷ್ಟ್ರೀಯ ನೀತಿಯಲ್ಲಿ ಅಧ್ಯಾಪಕರು ಬೋಧನೆಗೆ ದ್ವಿಭಾಷಾ ಮಾಧ್ಯಮವನ್ನು ಬಳಸುವಂತೆ ಸೂಚಿಸಲಾಗಿದೆ!

ಸಂಸ್ಕೃತ ಕಲಿಕೆಯನ್ನು ತ್ರಿಭಾಷಾ ಸೂತ್ರದಡಿಯಲ್ಲಿ ತಂದು ಅದರ ಮಹತ್ವವನ್ನು ವಿಶೇಷವಾಗಿ ಪ್ರತಿಪಾದಿಸಲಾಗಿದೆ. ಶಾಲಾ ಹಂತದಲ್ಲೇ ಬಹುಭಾಷಾ ಕಲಿಕೆಯ ಒತ್ತಾಸೆ ಹೂಡಲಾಗಿದೆ. ಇದಕ್ಕನುಗುಣವಾಗಿ 6ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ‘ಭಾರತದ ಎರಡು ಶಾಸ್ತ್ರೀಯ ಭಾಷೆಗಳನ್ನು ಸಾಹಿತ್ಯ ಸಮೇತ ಎರಡು ವರ್ಷ ಕಲಿಯಬೇಕು’ (4.19) ಎಂದು ಸೂಚಿಸಲಾಗಿದೆ. 6ರಿಂದ 8ನೇ ತರಗತಿಯವರೆಗೆ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಶೀರ್ಷಿಕೆಯಡಿಯಲ್ಲಿ ವಿವಿಧ ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಚಟುವಟಿಕೆ ನಡೆಸಲಾಗುತ್ತದೆ (4.16). ಹೀಗಾಗಿ ಶಾಲಾ ಶಿಕ್ಷಣವು ‘ಬಹುಭಾಷಾ ಸೂತ್ರ’ಕ್ಕೆ ಒಳಪಡಲಿದೆ. ಇಷ್ಟು ಸಾಲದೆಂಬಂತೆ
‘ಜ್ಞಾನಭಾರತ’ದ ಹೆಸರಿನಲ್ಲಿ ಕೃಷಿ, ಅರಣ್ಯ, ಔಷಧಿಯಂತಹ ಕೌಶಲಾಭಿವೃದ್ಧಿ ಕಲಿಕೆಯನ್ನು ಅಳವಡಿಸಲಾಗುವುದು. ಪ್ರೌಢಶಾಲಾ ಹಂತದಲ್ಲಿ ‘ಭಾರತೀಯ ಜ್ಞಾನ ಪದ್ಧತಿ’ಯನ್ನು ಐಚ್ಛಿಕವಾಗಿ ಕಲಿಸುವ ಉದ್ದೇಶ ಹೊಂದಲಾಗಿದೆ (4.27). ಭಾರತೀಯ ಜ್ಞಾನ ಪದ್ಧತಿ ಎಂದರೆ ಯಾವ ಪದ್ಧತಿ ಎಂಬ ವಿವರಗಳಿಲ್ಲವಾದ್ದರಿಂದ ಒಳಗೇನಿದೆಯೆಂಬ ಪ್ರಶ್ನಾರ್ಥಕ ಚಿಹ್ನೆ ಉಳಿಯುತ್ತದೆ.

ಈ ಮಧ್ಯೆ ವಿಷಯಾಧಾರಿತ ಅಧ್ಯಾಪಕರ ನೇಮಕಕ್ಕೆ ಈ ಶಿಕ್ಷಣ ನೀತಿಯು ತೋರಿರುವ ಒಲವು (4.2) ಮತ್ತು 18ನೇ ವಯಸ್ಸಿನವರೆಗೆ ಉಚಿತ- ಕಡ್ಡಾಯ ಶಿಕ್ಷಣವೆಂಬ ನಿಲುವು ಸ್ವಾಗತಾರ್ಹವಾಗಿವೆ. ಆದರೆ ಒಂದು ಆಘಾತಕಾರಿ ಅಂಶವನ್ನು ಈ ನೀತಿಯು ಒಳಗೊಂಡಿದೆ. ಸಣ್ಣ ಶಾಲೆಗಳು ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ ಮತ್ತು ಆಡಳಿತಾತ್ಮಕ ಸವಾಲು ಒಡ್ಡುತ್ತಿವೆ ಎಂದು ನೀತಿಯು ತೀರ್ಮಾನಿಸಿದೆ (7.3). ಆದ್ದರಿಂದ ಸಣ್ಣ ಶಾಲೆಗಳಿಗೆ ಬದಲಾಗಿ 5ರಿಂದ 10 ಕಿಲೊ ಮೀಟರ್ ಒಳಗೆ ಅಂಗನವಾಡಿಯಿಂದ ಸೆಕೆಂಡರಿ ಶಾಲೆಯವರೆಗೆ ಒಂದೇ ಸೂರಿನಲ್ಲಿರುವ ಸುಸಜ್ಜಿತ ಶಾಲಾ ಸಂಕೀರ್ಣಗಳನ್ನು ಸ್ಥಾಪಿಸಬೇಕೆಂದು ರಾಜ್ಯಗಳಿಗೆ ಸೂಚಿಸಲಾಗಿದ್ದು (7.6), ಇದರ ದುಷ್ಪರಿಣಾಮವನ್ನು ಗಮನಿಸಬೇಕು. ಯೋಚಿಸಿ, ಈಗ ಕನಿಷ್ಠ ಎರಡು ಕಿಲೊ ಮೀಟರ್‌ಗೆ ಒಂದರಂತೆ ಕಿರಿಯ ಪ್ರಾಥಮಿಕ ಶಾಲೆಗಳು ಇರಬೇಕೆಂಬ ನೀತಿಯಿದ್ದು, ಹಂತಹಂತವಾಗಿ ಅವು ಮುಚ್ಚಿಹೋಗುತ್ತವೆ. ‘ಸಮಾನತೆಯ ಶಿಕ್ಷಣ ಮತ್ತು ಒಳಗೊಳ್ಳುವಿಕೆ’ ಎಂಬ ಆದರ್ಶ (6.1) ಮಣ್ಣುಪಾಲಾಗುತ್ತದೆ. ಆದ್ದರಿಂದ ಸಣ್ಣ ಶಾಲೆಗಳನ್ನು ಉಳಿಸಿ ಬೆಳೆಸುತ್ತಲೇ 5 ಕಿಲೊ ಮೀಟರ್‌ಗೆ ಒಂದರಂತೆ ಮಾಧ್ಯಮಿಕ ಹಂತದಿಂದ ಆರಂಭವಾಗುವ ಸುಸಜ್ಜಿತ ಶಾಲಾ ಸಂಕೀರ್ಣ ಸ್ಥಾಪಿಸುವುದು ಅಪೇಕ್ಷಣೀಯ.

ಇನ್ನು ಸ್ವಾಯತ್ತತೆಯ ವಿಷಯ. ಸಂವಿಧಾನದ ಪ್ರಕಾರ, ಶಿಕ್ಷಣವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡಕ್ಕೂ ಸಂಬಂಧಿಸಿದ ‘ಸಹವರ್ತಿ’ ಪಟ್ಟಿಯಲ್ಲಿದೆ. ಆದರೂ ಈ ನೀತಿಯಲ್ಲಿ ರಾಜ್ಯಗಳ ಶೈಕ್ಷಣಿಕ ಸ್ವಾಯತ್ತತೆಗೆ ಧಕ್ಕೆ ತರಲಾಗಿದೆ. ನಿದರ್ಶನಗಳನ್ನು ನೋಡಿ: 8ನೇ ತರಗತಿಯವರೆಗಿನ ಪಠ್ಯಕ್ರಮ ಮತ್ತು ಬೋಧನಾ ತಾತ್ವಿಕ ಚೌಕಟ್ಟನ್ನು ಕೇಂದ್ರದ ಎನ್.ಸಿ.ಇ.ಆರ್.ಟಿ.ಯೇ ರೂಪಿಸುತ್ತದೆ (1.3). ಮೊದಲ ತಳಹದಿ ಹಂತದ, ಅಂದರೆ ಎಂಟನೇ ವಯಸ್ಸಿನವರೆಗಿನ ಶಿಕ್ಷಣದ ಪಠ್ಯಕ್ರಮದ ಜವಾಬ್ದಾರಿಯು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯದ್ದಾಗಿರುತ್ತದೆ (1.7). ಶಾಲಾ ಶಿಕ್ಷಣದ ಕಲಿಕಾ ಕೌಶಲ ಮತ್ತು ಮೌಲ್ಯ ಮಾರ್ಗಗಳ ನಿರ್ಧಾರ ಎನ್.ಸಿ.ಇ.ಆರ್.ಟಿ.ಯದು (4.4). ಬಿ.ಇಡಿ. ಶಿಕ್ಷಣದ ಬೋಧನಾ ವಿಧಾನವನ್ನೂ ಎನ್.ಸಿ.ಇ.ಆರ್.ಟಿ.ಯೇ ಶಿಫಾರಸು ಮಾಡುತ್ತದೆ (5.27). ಶಾಲಾ ಶಿಕ್ಷಣದ ವರ್ಕ್‌ಬುಕ್‌ಗಳನ್ನು ಮಾತ್ರ ಕೇಂದ್ರ ಮತ್ತು ರಾಜ್ಯಗಳು ಸೇರಿ ನಿರ್ಧರಿಸುತ್ತವೆ (2.5).

ಇಲ್ಲಿಯೂ ರಾಜ್ಯಗಳಿಗೆ ಪೂರ್ಣ ಸ್ವಾತಂತ್ರ್ಯವಿಲ್ಲ. ಪಠ್ಯಪುಸ್ತಕಗಳು ಕೂಡ ಜಂಟಿಯಾಗಿ ರೂಪುಗೊಳ್ಳಬೇಕೆಂದು ಹೇಳಿದ್ದು, ರಾಜ್ಯಗಳು ಎನ್.ಸಿ.ಇ.ಆರ್.ಟಿ. ಮಾನದಂಡಗಳನ್ನೇ ಅನುಸರಿಸಬೇಕೆಂದೂ ಸಾಧ್ಯವಾದಷ್ಟು ಈ ಸಂಸ್ಥೆಯ ಸಾಮಗ್ರಿಯನ್ನೇ ಬಳಸಬೇಕೆಂದೂ ನಿಯಂತ್ರಿಸಲಾಗಿದೆ. ರಾಜ್ಯಗಳಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಸೇರಿಸಬಹುದೆಂದು ಉದಾರವಾಗಿ ರಿಯಾಯಿತಿ ನೀಡಲಾಗಿದೆ (4.31). ಒಟ್ಟಾರೆ, ಇದು ರಾಜ್ಯಗಳ ಶೈಕ್ಷಣಿಕ ಸ್ವಾಯತ್ತತೆ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲಿನ ಪ್ರಹಾರವೇ ಸರಿ.

ಇಷ್ಟು ಸಾಲದೆಂಬಂತೆ, ‘ಶಾಸ್ತ್ರೀಯ ಭಾಷಾ ಕೇಂದ್ರ’ಗಳನ್ನು ಸ್ವತಂತ್ರ ಸ್ವಾಯತ್ತ ಸಂಸ್ಥೆಗಳಾಗಿ ಬೆಳೆಸುವ ಬದಲು ವಿಶ್ವವಿದ್ಯಾಲಯಗಳ ಜೊತೆಗೆ ವಿಲೀನಗೊಳಿಸುವ ನಿರ್ಧಾರವನ್ನು ಪ್ರಕಟಿಸಲಾಗಿದೆ (22.17). ಹೀಗೆ ಒಂದು ಕಡೆ ಸ್ವಾಯತ್ತತೆಗೆ ಧಕ್ಕೆ ತರುತ್ತಲೇ ಇನ್ನೊಂದು ಕಡೆ ಪದವಿ ಕಾಲೇಜುಗಳನ್ನು ಮಾತ್ರ ಹಂತಹಂತವಾಗಿ ಸ್ವಾಯತ್ತಗೊಳಿಸುವ ಉದ್ದೇಶವನ್ನು ಹೊಂದಲಾಗಿದ್ದು (10.4), ಆಯಾ ಕಾಲೇಜುಗಳೇ ಪಠ್ಯ, ಪರೀಕ್ಷೆ, ಮೌಲ್ಯಮಾಪನವನ್ನು ನಡೆಸಿಕೊಳ್ಳುವುದರಿಂದ ಸರ್ಕಾರಿ ವಿಶ್ವವಿದ್ಯಾಲಯಗಳು ನಿರ್ಜೀವಗೊಳ್ಳುತ್ತವೆ. ಖಾಸಗೀಕರಣದ ಹೆದ್ದಾರಿಗಳು ಸಪೂರಗೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT