ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ತೀರ್ಪು: ರಾಶೊಮನ್ ಪರಿಣಾಮ!

Last Updated 17 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಅಯೋಧ್ಯೆ ಪ್ರಕರಣದ ವಿಚಾರವಾಗಿ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಲು ಕಾರಣವಾದ ಘಟನೆಗಳು ಹಾಗೂ ಆ ತೀರ್ಪಿಗೆ ವ್ಯಕ್ತವಾದ ಪ್ರತಿಕ್ರಿಯೆಗಳು ನನಗೆ ಅಕಿರಾ ಕುರೊಸಾವಾ ನಿರ್ದೇಶನದ ಜನಪ್ರಿಯ ಸಿನಿಮಾ ‘ರಾಶೊಮನ್’ ಅನ್ನು ನೆನಪಿಸಿದವು.

ಈ ಅಸಾಮಾನ್ಯ ಚಿತ್ರದಲ್ಲಿ ಸಮುರಾಯ್ ಯೋಧನೊಬ್ಬನ ಪತ್ನಿಯ ಮೇಲೆ ದರೋಡೆಕೋರನೊಬ್ಬ ಅರಣ್ಯವೊಂದರಲ್ಲಿ ಅತ್ಯಾಚಾರ ನಡೆಸುತ್ತಾನೆ. ಆ ಹೆಣ್ಣನ್ನು ಮದುವೆ ಆಗುವಂತೆ ಒಲಿಸಿಕೊಳ್ಳಲು ಸಾಧ್ಯವಾಗದ ದರೋಡೆಕೋರ, ಆಕೆಯ ಪತಿಯನ್ನು ಕೊಲ್ಲುತ್ತಾನೆ. ಅಲ್ಲೇ ಹತ್ತಿರದಲ್ಲಿ ಮರ ಕಡಿಯುತ್ತಿದ್ದ
ಒಬ್ಬ ವ್ಯಕ್ತಿ, ಅತ್ಯಾಚಾರ ಹಾಗೂ ಕೊಲೆಯನ್ನು ಗಮನಿಸುತ್ತಾನೆ. ಅತ್ಯಾಚಾರ ಹಾಗೂ ಕೊಲೆಯನ್ನು ಕಂಡವರು, ಮೃತಪಟ್ಟ ಸಮುರಾಯ್ ಯೋಧ ಕೂಡ ಒಂದು ‘ಮಾಧ್ಯಮ’ದ ಮೂಲಕ ಅದನ್ನು ವಿವರಿಸುತ್ತಾರೆ. ಅವರೆಲ್ಲ ನೀಡುವ ವಿವರಣೆ ವಿರೋಧಾಭಾಸಗಳಿಂದ ಕೂಡಿದ್ದರೂ, ಗೊಂದಲ ಮೂಡಿಸುವಂಥವೂ, ಸ್ವಹಿತಾಸಕ್ತಿಯ ಕಾರಣಗಳಿಂದ ಹೇಳುತ್ತಿರುವಂತೆಯೂ, ತಮ್ಮ ಮುಖ ಉಳಿಸಿಕೊಳ್ಳಲು ಹೇಳುತ್ತಿರುವಂತೆಯೂ ಇರುತ್ತದೆ.

ಅಯೋಧ್ಯೆ ಪ್ರಕರಣದ ತೀರ್ಪಿಗೆ ಪ್ರತಿಯಾಗಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ವ್ಯಕ್ತವಾದ ಭಿನ್ನ ನೆಲೆಯ ಅಭಿಪ್ರಾಯಗಳು, ಸಾಮಾಜಿಕ ಜಾಲತಾಣಗಳಲ್ಲಿ ದಾಖಲಾದ ಅಸಂಖ್ಯ ಅಭಿಪ್ರಾಯಗಳು, ರಾಶೊಮನ್ ಚಿತ್ರದಲ್ಲಿ ಇರುವಂತೆಯೇ ಸತ್ಯದ ಬಹುವಿಧಗಳನ್ನು ಹೇಳುತ್ತವೆ. ಹಿಂದಿನ ಘಟನೆಗಳನ್ನು ಸಾಪೇಕ್ಷ ಸತ್ಯದ ಮೂಲಕ ವಿವರಿಸಿದಾಗ ಅರ್ಥ ಮಾಡಿಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನೂ ಹೇಳುತ್ತವೆ.

ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತವಾದ ಅಭಿಪ್ರಾಯಗಳು ಹತ್ತು ಹಲವು. ಈ ಪ್ರಕರಣದಲ್ಲಿ
ಇತಿಹಾಸ, ಪುರಾಣ, ವಾಸ್ತವ, ನಂಬಿಕೆ, ವಿಶ್ವಾಸ, ಧರ್ಮ, ಧಾರ್ಮಿಕ ಆಚರಣೆಗಳು, ರಾಜಕೀಯ, ಕೋಮು ಉದ್ವಿಗ್ನ ಸ್ಥಿತಿ, ವಾಣಿಜ್ಯಿಕ ಹಿತಾಸಕ್ತಿಗಳು, ಪುರಾತನ ಸಂಪ್ರದಾಯಗಳು, ಕಾನೂನು, ಸಂವಿಧಾನದ ಆಶಯಗಳು... ಇವೆಲ್ಲವೂ ಒಂದರೊಳಗೊಂದು ಎಂಬಂತೆ ಬೆಸೆದುಕೊಂಡಿವೆ. ಇವೆಲ್ಲವೂ ಈ ಪ್ರಕರಣದಲ್ಲಿ
ಭಾಗೀದಾರರ ಮೇಲೆ ಬೇರೆ ಬೇರೆ ಪ್ರಮಾಣದಲ್ಲಿ ಪ್ರಭಾವ ಬೀರಿವೆ. ಪ್ರಕರಣದ ವಾದಿ- ಪ್ರತಿವಾದಿಗಳು ಮಾತ್ರವಲ್ಲದೆ ಸಾರ್ವಜನಿಕರ ಮೇಲೂ ಸರ್ಕಾರದ ಮೇಲೂ ಪ್ರಭಾವ ಬೀರಿವೆ.

‍ಇತಿಹಾಸದ ಮಾಸಿದ ಪುಟಗಳಿಂದ ಚಿತ್ರಗಳನ್ನು ತೆಗೆದು, ಅವುಗಳನ್ನು ಹೊಸ ಚಿತ್ರಗಳ ಜೊತೆ ಒಂದರ ಮೇಲೊಂದರಂತೆ ಇರಿಸಿ, ಅವುಗಳ ಸತ್ಯಾಸತ್ಯತೆ ವಿಚಾರವಾಗಿ ತಕರಾರುಗಳನ್ನು ಎತ್ತಿ, ದಶಕಗಳಿಂದ ಬಗೆಹರಿ
ಯದ ಆ ತಕರಾರುಗಳನ್ನು ಐವರು ನ್ಯಾಯಮೂರ್ತಿಗಳು ಇರುವ ಸಂವಿಧಾನ ಪೀಠದ ಎದುರು ತಂದು, ವಸ್ತುನಿಷ್ಠ ಹಾಗೂ ಸಾಪೇಕ್ಷ ಗ್ರಹಿಕೆಗಳಿಂದ ಹೊರತಾಗಿರದ ಆ ನ್ಯಾಯಮೂರ್ತಿಗಳು ಸಹಸ್ರಾರು ಪುಟಗಳಷ್ಟಿದ್ದ ದಾಖಲೆಗಳನ್ನು ಪರಿಶೀಲಿಸಿ ಸರ್ವಾನುಮತದ ತೀರ್ಪೊಂದನ್ನು ಬರೆಯುವುದು ಪವಾಡವೇ ಸರಿ!

ಬೇರೆ ಬಗೆಯಲ್ಲಿ ತೀರ್ಪು ನೀಡುವುದನ್ನು ಸಾಧ್ಯವಾಗಿಸುತ್ತಿದ್ದ ಬೇರೆ ಆಯ್ಕೆಗಳೂ ಇದ್ದವು ಎಂದು ವಾದಿಸ
ಬಹುದು. ಆದರೆ, ತನ್ನೆದುರು ಇದ್ದ ಹಲವಾರು ಆಯ್ಕೆಗಳ ಪೈಕಿ ಸೈದ್ಧಾಂತಿಕವಾಗಿ ತಟಸ್ಥವಾದ ಒಂದು ಆಯ್ಕೆಯನ್ನು ಸುಪ್ರೀಂ ಕೋರ್ಟ್‌ ಮಾಡಬೇಕಿತ್ತು. ಕಳೆದ 70 ವರ್ಷ ಗಳಿಂದ ಆಗಿರುವಂತೆ, ಈ ಬಾರಿ ಕೂಡ ಯಾವುದೇ ತೀರ್ಮಾನ ಕೈಗೊಳ್ಳದೆಯೇ ಕೋರ್ಟ್‌, ಈ ಸಮಸ್ಯೆಯನ್ನು ಮುಂದಕ್ಕೆ ಹಾಕಿಬಿಡಬಹುದಿತ್ತು.

ಈ ಜಮೀನಿನ ಒಂದೊಂದು ಭಾಗವನ್ನೂ ಹಿಂದೂಗಳು ಮತ್ತು ಮುಸ್ಲಿಮರು ಸ್ವಾಧೀನದಲ್ಲಿ ಇರಿಸಿಕೊಂಡಿದ್ದರು, ವಿವಾದವು 1859ರಲ್ಲಿ ಶುರುವಾಯಿತು, ಪುರಾತನ ದೇವಸ್ಥಾನವೊಂದರ ಅವಶೇಷಗಳ ಮೇಲೆ ಮಸೀದಿ ನಿರ್ಮಾಣ ಆಯಿತು, ಆದರೆ ಆ ದೇವಸ್ಥಾನವನ್ನು ಧ್ವಂಸಗೊಳಿಸಿ ಮಸೀದಿ ಕಟ್ಟಿದ್ದಕ್ಕೆ ಆಧಾರಗಳಿಲ್ಲ, ರಾಮನು ಆ ಜಾಗದಲ್ಲಿ ಹುಟ್ಟಿದ್ದಾನೆ ಎಂದು ಹಿಂದೂಗಳು ನಂಬಿದ್ದಾರೆ, ಆದರೆ ಆ ಜಮೀನು ಯಾರಿಗೆ ಸೇರಬೇಕು ಎಂಬುದನ್ನು ತೀರ್ಮಾನಿಸಲು ಆಗುತ್ತಿಲ್ಲ ಎಂದು ನ್ಯಾಯಮೂರ್ತಿಗಳು ಅದನ್ನು ಎರಡೂ ಕಡೆಗಳವರಿಗೆ ಕೊಡದೆ, ಅವರಿಬ್ಬರಿಗೂ ಪರ್ಯಾಯ ಜಮೀನು ಕೊಡುವ ಘೋಷಣೆ ಮಾಡಬಹುದಿತ್ತು. ಅಂತಿಮ ನಿರ್ಣಯವನ್ನು ಇನ್ನೂ ಬೇರೆಯಾದ ವಿಧಗಳಲ್ಲಿಯೂ ನೀಡಬಹುದಿತ್ತು.

ಆದರೆ, ತಮ್ಮ ಪಾಂಡಿತ್ಯವನ್ನು ಬಳಸಿದ ನ್ಯಾಯಮೂರ್ತಿಗಳು, ತೀರ್ಪು ಯಾರದೇ ಪರವಾಗಿ ಇದ್ದರೂ ತಾವು ಅದನ್ನು ಗೌರವಿಸುತ್ತೇವೆ ಎಂದು ಎರಡೂ ಕಡೆಯವರು ನೀಡಿದ ವಚನವನ್ನು ಪರಿಗಣಿಸಿ, ವಿವಾದಕ್ಕೆ ಅಂತ್ಯ ಹೇಳುವ ತೀರ್ಮಾನ ಕೈಗೊಂಡರು. ಕಾನೂನಿನ ಆಯಾಮಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳದೆ, ನಮ್ಮ ಪುರಾತನ ಪಂಚಾಯತ್ ವ್ಯವಸ್ಥೆ ಕೆಲಸ ಮಾಡುತ್ತಿದ್ದ ರೀತಿಯಲ್ಲೇ ಭಾವನಾತ್ಮಕ ಹಾಗೂ ಇತರ ಅಂಶಗಳನ್ನೂ ಪರಿಗಣಿಸಿ ನ್ಯಾಯಪೀಠವು, ಈ ಹಿಂದೆ ಬಾಬರಿ ಮಸೀದಿ ಇದ್ದ ಜಾಗವನ್ನು ಹಿಂದೂಗಳಿಗೆ ನೀಡುವ ಹಾಗೂ ಮುಸ್ಲಿಮರಿಗೆ ಬೇರೆಡೆ ಐದು ಎಕರೆ ಜಾಗ ನೀಡುವ ತೀರ್ಮಾನಕ್ಕೆ ಬಂದಿತು. ಹೊಸ ಮಸೀದಿ ನಿರ್ಮಿಸಲು ಈಗ ಜಾಗ ಕೊಡುವುದು ಸರ್ಕಾರದ ಹೃದಯ ವೈಶಾಲ್ಯ ಹಾಗೂ ವಿವೇಕಕ್ಕೆ ಸಂಬಂಧಿಸಿದ ವಿಚಾರ.

ಸರ್ಕಾರವು ಸ್ವಾಧೀನ ಮಾಡಿಕೊಂಡಿರುವ 67 ಎಕರೆ ಜಾಗದಲ್ಲೇ ಒಂದನ್ನು ಮಸೀದಿ ನಿರ್ಮಾಣಕ್ಕೆ ಕೊಡುವಂತೆ ಪೀಠ ಹೇಳಬಹುದಿತ್ತು. ಆದರೆ, ಮಸೀದಿಗೆ ಜಾಗ ಕೊಡುವುದನ್ನು ಅದು ಸರ್ಕಾರದ ವಿವೇಚನೆಗೆ ಬಿಟ್ಟಿತು. ಈ ತೀರ್ಮಾನಕ್ಕೆ ಬರುವಲ್ಲಿ ನ್ಯಾಯಮೂರ್ತಿಗಳು ಅವರದೇ ಆದ ತರ್ಕ ಬಳಸಿಕೊಂಡಿರಬಹುದು. ಬೆಂಕಿಯನ್ನು ಪೂರ್ತಿಯಾಗಿ ಆರಿಸಿ, ತಕರಾರನ್ನು ಒಂದೇ ಬಾರಿಗೆ ಪೂರ್ಣಗೊಳಿಸುವ ಉದ್ದೇಶ ಅವರದ್ದಾಗಿರಬಹುದು.

ಈ ತೀರ್ಪಿನ ಬಗ್ಗೆ ತಕರಾರು, ಟೀಕೆ, ಪ್ರತಿಭಟನೆಯ ಮಾತುಗಳು ಮುಸ್ಲಿಮರ ಕಡೆಯಿಂದ ವ್ಯಕ್ತವಾಗಿವೆ. ಈ ವಿವಾದದಲ್ಲಿ ಭಾಗಿಯಾಗಿದ್ದ ಮುಸ್ಲಿಂ ಕಕ್ಷಿದಾರರು ತಮ್ಮ ಮುಂದಿನ ನಡೆ ವಿಚಾರವಾಗಿ ಸ್ಪಷ್ಟತೆ ಹೊಂದಿಲ್ಲ. ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದರ ಪರ ತಾವಿಲ್ಲ ಎಂದು ಕೂಡ ಕೆಲವರು ಹೇಳಿದ್ದಾರೆ. ಮಂದಿರವನ್ನು ಹೇಗೆ ನಿರ್ವಹಿಸಬೇಕು ಎಂಬ ವಿಚಾರದಲ್ಲಿ ಹಿಂದೂಗಳ ನಡುವೆ ಒಮ್ಮತ ಇಲ್ಲ, ಸರ್ಕಾರ ರಚಿಸಲಿರುವ ಟ್ರಸ್ಟ್‌ನಲ್ಲಿ ಯಾರಿರಬೇಕು ಎಂಬ ವಿಚಾರದಲ್ಲಿಯೂ ಒಮ್ಮತ ಇಲ್ಲ. ವಿಎಚ್‌ಪಿ, ಆರ್‌ಎಸ್‌ಎಸ್‌ನಂತಹ ಬೃಹತ್ ಸಂಘಟನೆಗಳ ಜೊತೆಯಲ್ಲೇ, ಅಷ್ಟೇನೂ ಪರಿಚಿತ ಅಲ್ಲದ ಹತ್ತೆಂಟು ಹಿಂದೂ ಸಂಘಟನೆಗಳು ಕೂಡ ಟ್ರಸ್ಟ್‌ನಲ್ಲಿ ಭಾಗಿಯಾಗಲು ಯತ್ನ ಆರಂಭಿಸಿವೆ. ಇವೆಲ್ಲ ತೀರಾ ಅಸಹಜವೇನೂ ಅಲ್ಲ. ರಾಮ ಮಂದಿರವು ಕೋಟ್ಯಂತರ ಹಿಂದೂಗಳನ್ನು ತನ್ನತ್ತ ಆಕರ್ಷಿಸಲಿರುವ ಕಾರಣ, ಈ ರೀತಿ ಸ್ಥಾನ ಪಡೆದುಕೊಳ್ಳಲು ನಡೆದಿರುವ ಯತ್ನವು ಪ್ರಭಾವ, ಅಧಿಕಾರ ಮತ್ತು ಧನಕ್ಕಾಗಿ! ಹಲವರ ಪ್ರಕಾರ ಇದು, ಕಾಶಿಯಷ್ಟೇ ಪ್ರಮುಖವಾದ ಯಾತ್ರಾಸ್ಥಳ ಆಗಲಿದೆ.

ಬಾಬರಿ ಮಸೀದಿ ಇದ್ದ ಜಾಗವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದ ಮುಸ್ಲಿಮರು ಒಂದಿಷ್ಟು ಹೊಂದಾಣಿಕೆ ಮಾಡಿಕೊಂಡು ಹೊಸ ಮಸೀದಿ, ಅದರ ಸ್ಥಳ, ಅದರ ನಿರ್ವಹಣೆ ಬಗ್ಗೆ ಆಲೋಚನೆ ನಡೆಸಬೇಕು. ಈ ಮಸೀದಿ ಕೂಡ ಲಕ್ಷಾಂತರ ಮಂದಿ ಮುಸ್ಲಿಮರನ್ನು ಆಕರ್ಷಿಸಬಲ್ಲದು- ತನ್ನ ಇತಿಹಾಸ, ತನಗಾಗಿ ನಡೆದ ಹೋರಾಟಗಳ ಕಾರಣದಿಂದಾಗಿ! ಆದರೆ ಈ ವಿಚಾರವಾಗಿ ಇನ್ನೂ ಯಾವುದೇ ಒಮ್ಮತದ ತೀರ್ಮಾನ ಹೊರಬಿದ್ದಿಲ್ಲ. ಎರಡೂ ಕಡೆಗಳಲ್ಲಿ ಇಂತಹ ಭಿನ್ನಾಭಿಪ್ರಾಯಗಳು ಇರುವುದೆಲ್ಲ ಸಹಜ. ಇದು ಅನಿರೀಕ್ಷಿತವೇನೂ ಅಲ್ಲ.

ರಾಮಲಲ್ಲಾನನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡಿರುವ ಹಲವಾರು ಟ್ರಸ್ಟ್‌ಗಳು ಮುಂದೊಂದು ದಿನ ಮಂದಿರದ ನಿರ್ವಹಣೆ ಹಾಗೂ ನಿಯಂತ್ರಣದ ವಿಚಾರವಾಗಿ ತಕರಾರು ಆರಂಭಿಸಬಹುದು. ಆದರೆ, ಈ
ಹೊತ್ತಿನಲ್ಲಿ ದೇಶದ ಹಿಂದೂ ಸಮುದಾಯ ಖುಷಿಯಲ್ಲಿದೆ. ದೇಶದ ಸಾಮಾನ್ಯ ಮುಸ್ಲಿಮನಿಗೆ ಈ ತೀರ್ಪು ಖುಷಿ ತಂದಿಲ್ಲದಿರಬಹುದು. ಆದರೆ, ಕೋಮುಸಾಮರಸ್ಯ ಇನ್ನಾದರೂ ಸಾಧ್ಯವಾಗಬಹುದು ಎಂಬ ಸಮಾಧಾನದ ನಿಟ್ಟುಸಿರು ಆತನಲ್ಲಿ ಕಾಣಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT