ಬೆಟ್ಟದಡಿಯ
ಕಲ್ಲುಬಂಡೆಗಳ ನಡುವೆ
ಸಾಯಲೆಂದು ಚಿಟ್ಟೆಯೊಂದು ಬಂತು!
ಬೆಟ್ಟ ತನ್ನ ನೆರಳನ್ನು ಚೆಲ್ಲಿ
ಸಾವಿನ ಗುಟ್ಟನ್ನು ಮುಚ್ಚಿಟ್ಟುಬಿಟ್ಟಿತು!

ಇದು ಎಟೆಲ್ ಅದ್ನಾನ್ ಎಂಬ ಅರಬ್ ಹೆಣ್ಣುಮಗಳ ಕವಿತೆಯ ಸಾಲುಗಳಾಗಿದ್ದು, ಕವಿ ಎಂ.ಆರ್.ಕಮಲ ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ. ಈ ಕವಿತೆಯು ಹೆಣ್ಣಿನ ಅಳಲುಗಳನ್ನು ದಾಟಿ ಆಡಲಾರದ ಅನುಭವಿಸಲಾರದ, ಸಾವೂ ಅಲ್ಲದ ಬದುಕೂ ಅಲ್ಲದ, ಸತ್ತ ಸಾವೂ ಗುರುತಿಲ್ಲದ ಸ್ಥಿತಿಯಲ್ಲಿರುವ ಎಲ್ಲರನ್ನೂ ಪ್ರತಿನಿಧಿಸುತ್ತಿದೆ.

ಎಲ್ಲರ ಒಳಿತಿಗಾಗಿ ಮಾಡಿಕೊಂಡ ಪ್ರಜಾಪ್ರಭುತ್ವವೆಂಬ ವ್ಯವಸ್ಥೆಯಲ್ಲೂ ಎಷ್ಟೊಂದು ತಾರತಮ್ಯಗಳು. ಗುರುಬ್ರಹ್ಮ ಎಂದು ಭಾವುಕವಾಗಿ ಠಸ್ಸೆ ಹಾಕಿಸಿಕೊಂಡಿರುವ ಭಾರತೀಯ ಶಿಕ್ಷಕ ವಲಯದಲ್ಲಿ ಎಷ್ಟೊಂದು ಶ್ರೇಣೀಕರಣಗಳು! ಹೌದು, ನನ್ನ ಜೊತೆ ಕೆಲಸ ಮಾಡುವ, ಅತಿಥಿ ಉಪನ್ಯಾಸಕರು ಎಂಬ ಪದನಾಮದೊಳಗೆ ಅಡಗಿ ಹೋಗಿರುವ ಬಂಧುಗಳ ಕುರಿತೇ ನಾನು ಮಾತನಾಡುತ್ತಿರುವುದು.

ಇಪ್ಪತ್ತೆಂಟು ವರ್ಷಗಳ ಹಿಂದಿನ ಮಾತು. ಆಗ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುತ್ತಿದ್ದ ಉಪನ್ಯಾಸಕರ ಕಾಯಮಾತಿ ಮಾಡುವಂತೆ ಕೋರ್ಟ್ ಆದೇಶಿಸಿತು. ಆ ಸಂಭ್ರಮವನ್ನು ಹತ್ತಿಕ್ಕಲಾರದೆ ಉಪನ್ಯಾಸಕರೊಬ್ಬರು ತರಗತಿಯಲ್ಲಿ ಅದನ್ನು ವಿದ್ಯಾರ್ಥಿಗಳ ಮುಂದೆ ಹೇಳಿಕೊಂಡರು. ‘ನೀವು ಇಷ್ಟು ದಿನ ಟೆಂಪರರಿಯಾಗಿ ಇದ್ರಾ?’ ಅಂತ ವಿದ್ಯಾರ್ಥಿಗಳು ಕೇಳಿದರು. ಈ ವಿಷಯ ತಿಳಿದ ಹಿರಿಯ ಉಪನ್ಯಾಸಕರೊಬ್ಬರು ಸಿಟ್ಟಾದರು. ವಿದ್ಯಾರ್ಥಿಗಳ ಮುಂದೆ ಇದನ್ನು ಯಾಕೆ ಹೇಳಬೇಕಿತ್ತು? ಅವರಿಗೆ ಇವರು ಕೇವಲ ಉಪನ್ಯಾಸಕರು. ಹಾಗೆಲ್ಲ ಹೇಳಿ ನಮ್ಮ ಬೆಲೆ ನಾವು ಕಡಿಮೆ ಮಾಡಿಕೊಳ್ಳಬಾರದು ಎಂಬುದು ಅವರ ಸಿಟ್ಟಿಗೆ ಕಾರಣವಾಗಿತ್ತು!

ಆಗ ಉಪನ್ಯಾಸಕರು ಏಳು ಗಂಟೆಗಳ ಕಾಲ ಕಾಲೇಜಿನಲ್ಲಿ ಇರಬೇಕು ಎಂಬ ನಿಯಮ ಇದ್ದಿರಲಿಲ್ಲ. ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವುದು ಮುಖ್ಯವಾಗಿತ್ತು. ಆಗ ಎಷ್ಟೊಂದು ಜನ ಸಿ.ಎಲ್. ಹಾಕಿದರೂ ಬಂದು ಒಂದೆರಡು ತರಗತಿ ತೆಗೆದುಕೊಳ್ಳುವುದೂ ಇತ್ತು. ಕಾಲೇಜಿನಲ್ಲಿ ಪ್ರಿನ್ಸಿಪಾಲರು ಇಲ್ಲದಿದ್ದರೂ ಮಧ್ಯಾಹ್ನದ ಕೊನೆಯ ತರಗತಿಯನ್ನು ಬಿಡದೆ ಮಾಡುತ್ತಿದ್ದ ಅರೆಕಾಲಿಕ ಉಪನ್ಯಾಸಕರೂ ಇದ್ದರು. ಕೆಲಸದೆಡೆಗಿನ ಪ್ರೀತಿ, ಕೊನೆಯ ಗಂಟೆಯಲ್ಲಿಯೂ ತುಂಬಿ ತುಳುಕುವ ತರಗತಿ ಎಲ್ಲವೂ ಅದ್ಭುತ ಅನುಭವಗಳೇ ಹೊರತು ಕಾಗದದ ಮೇಲಿನ ದಾಖಲೆಗಳಲ್ಲ. ನೋಡ ನೋಡುತ್ತಾ ಅನುಭವಕ್ಕಿಂತ ದಾಖಲೆಯೇ ಮುಖ್ಯವೆನಿಸುವ ಯಾಂತ್ರಿಕ ಮತ್ತು ತಾಂತ್ರಿಕತೆಯೆಡೆಗೆ ಎಲ್ಲವೂ ಬದಲಾಗಿವೆ. ಮೊದಲು ಕಾಯಂ, ತಾತ್ಕಾಲಿಕ ಎನ್ನದೆ ಎಲ್ಲರೂ ಜೊತೆಯಲ್ಲಿ ಕಲೆತು ಇರುತ್ತಿದ್ದರು. ಈಗ ‘ನಾವು ಅತಿಥಿ ಉಪನ್ಯಾಸಕರು, ನಮ್ಮನ್ನು ಯಾವುದಕ್ಕೂ ಪರಿಗಣಿಸುವುದೂ ಇಲ್ಲ’ ಎಂದಿವರೂ, ‘ಅವರಿಗ್ಯಾವ ಹೊಣೆಗಾರಿಕೆಯಿಲ್ಲ’ ಎಂದವರೂ ಭಾವಿಸುವ ಬಿರುಕುಗಳೂ ಅವಮಾನಗಳೂ ಹುಟ್ಟಿಕೊಂಡಿವೆ. ಜಾಗತೀಕರಣದ ನಂತರ ಮುಂದುವರಿದ ದೇಶಗಳ ಮಾದರಿಯೇ ನಮ್ಮ ಗುರಿಗಳಾಗಿ ನಿರುದ್ಯೋಗದ ಸ್ವರೂಪವೂ ಬದಲಾಗಿದೆ. ಜನಸಂಖ್ಯೆ ಕಡಿಮೆಯಿರುವ ಆ ದೇಶಗಳಲ್ಲಿ ಹಲವರ ಕೆಲಸ ಒಬ್ಬರು ಮಾಡಿ ಹಲವರ ಸಂಬಳ ಒಬ್ಬರು ಪಡೆದುಕೊಳ್ಳುವುದು ಸಹಜವಿದ್ದೀತು. ಆದರೆ ಹಲವು ಬಾಯಿಗಳಿರುವ ನಮ್ಮಲ್ಲಿ ಇದು ಹಲವರ ತುತ್ತನ್ನು ಕಿತ್ತುಕೊಳ್ಳುತ್ತದೆ. ಅಷ್ಟೇ ಅಲ್ಲ, ಇಲ್ಲಿ ನಮ್ಮ ಕುಟುಂಬದ ಪರಿಕಲ್ಪನೆಯೇ ಭಿನ್ನವಾದುದು. ತಂದೆ ತಾಯಿಯನ್ನು ನೋಡಿಕೊಳ್ಳಬೇಕು. ಮಕ್ಕಳು ತಮ್ಮ ಕಾಲ ಮೇಲೆ ನಿಲ್ಲುವ ತನಕವೂ ಅವರನ್ನು ಪೋಷಿಸಬೇಕು. ಅದರ ಜೊತೆಗೆ ತಮ್ಮ, ತಂಗಿಯರ ಹೊಣೆಗಳೂ ಇರುತ್ತವೆ. ಅಹರ್ನಿಶಿ ಕೆಲಸದ ಒತ್ತಡಗಳಿಂದ ಇಲ್ಲಿನ ಕುಟುಂಬಗಳ ನೆಮ್ಮದಿ ಕೆಟ್ಟು ಹೋಗುತ್ತದೆ. ಮಾನಸಿಕ ಖಿನ್ನತೆ, ಆತ್ಮಹತ್ಯೆ, ಅನಾರೋಗ್ಯ ದಾಳಿಯಿಡುತ್ತವೆ.

ನಮ್ಮ ರೀತಿ ನೀತಿಗೆ ಎಂಟು ಗಂಟೆಗಳ ಕೆಲಸದ ಅವಧಿ ಸರಿ ಹೊಂದುತ್ತದೆ. ಮೊದಲು ಕಾಲೇಜುಗಳ ಉಪನ್ಯಾಸಕರಿಗೆ ಅವರ ಹಿರಿತನಕ್ಕೆ ಅನುಗುಣವಾಗಿ ವಾರಕ್ಕೆ ಹದಿನಾರು, ಹದಿನಾಲ್ಕು ಮತ್ತು ಹನ್ನೆರಡು ಗಂಟೆಗಳ ಕಾರ್ಯಭಾರ ಇತ್ತು. ಇದು ಇನ್ನಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತಿತ್ತು. ಈ ಎಲ್ಲಾ ವ್ಯವಸ್ಥೆಗಳು ಉದ್ಯೋಗ ಸೃಷ್ಟಿಯೆಡೆಗೆ ಗಮನ ನೀಡುತ್ತಿದ್ದವು. ಆದರೆ ಈಗ ಖಾಸಗಿಯಿಂದ ಹಿಡಿದು ಸರ್ಕಾರದವರೆಗೆ ಉದ್ಯೋಗ ಕಡಿತದೆಡೆಗೆ ಗಮನ ಹೆಚ್ಚಿದೆ. ಒಬ್ಬರ ಕೆಲಸವನ್ನು ಹಲವರು ಹಂಚಿಕೊಂಡು ಮಾಡುವ, ನಿನ್ನೊಂದಿಗೆ ನಾನೂ ಬದುಕುತ್ತೇನೆಂಬ, ತರತಮಗಳ ಅಂತರ ಕಡಿಮೆ ಮಾಡಿ ಎಲ್ಲರ ಘನತೆಯನ್ನೂ ಕಾಪಿಟ್ಟುಕೊಳ್ಳುವ ಭಾರತೀಯ ಮಾದರಿಯೊಂದನ್ನು ಹುಟ್ಟು ಹಾಕಬೇಕಿರುವುದು ಇಂದಿನ ತುರ್ತು. ಇಲ್ಲದೇ ಹೋದಲ್ಲಿ ಹತ್ತು–ಹದಿನೈದು ವರ್ಷಗಳಿಂದ ಉಪನ್ಯಾಸಕರಾಗಿದ್ದವರು ತರಕಾರಿ ಮಾರಿ, ಕೂಲಿ ಕೆಲಸ ಮಾಡಿ ಹೊಟ್ಟೆ ಹೊರೆದುಕೊಳ್ಳಬೇಕಾದ, ಕೆಲವೊಮ್ಮೆ ಅದೂ ಇಲ್ಲದೆ ತೊಳಲಾಡಬೇಕಾದ ಇಂದಿನ ಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.

ಅತಿಥಿ ಉಪನ್ಯಾಸಕರಿಗೆ ಮೊದಲು ಮೇ, ಜೂನ್, ಜುಲೈನಲ್ಲಿ ಸಂಬಳ ಸಿಗುತ್ತಿರಲಿಲ್ಲ. ಉಳಿದ ತಿಂಗಳುಗಳ ಸಂಬಳ ಕಂತಿನಲ್ಲಿ ವರ್ಷದಲ್ಲಿ ಎರಡು ಸಲವೋ ಮೂರು ಸಲವೋ ಸಿಗುತ್ತಿತ್ತು. ಈಗ ಕೋವಿಡ್ ಎಂಬ ಧೂರ್ತ ಬೇರೆ ಕಣ್ಣು ಹಾಕಿ ಆಗಸ್ಟ್ ಮುಗಿತಾ ಬಂತು, ಸೆಪ್ಟೆಂಬರ್ನಲ್ಲಿ ಆನ್ಲೈನ್ ಕ್ಲಾಸ್ಗಳೇ ಗತಿ. ಅಕ್ಟೋಬರ್ನಲ್ಲಿ ಶುರುವಾದೀತೇ? ತಿಳಿದಿಲ್ಲ. ಆದರೆ ಹೊಟ್ಟೆ ಎಂಬ ಯಂತ್ರ, ಕಾಯಿಲೆ ಎಂಬ ಅತಿಥಿ, ಮಕ್ಕಳ ಶಿಕ್ಷಣ ಎಂಬ ನಾಳೆಗಳು ನಿಲ್ಲುವುದಿಲ್ಲ. ಏನು ಮಾಡಬೇಕು? ಯಾರನ್ನು ದೂರಬೇಕು? ಈ ಅಯೋಮಯದಲ್ಲಿ ಕಾಲ ಹಾಕುತ್ತಿರುವ ಅತಿಥಿ ಉಪನ್ಯಾಸಕರ ಕುರಿತು ಸರಿ ನಿರ್ಧಾರ ತಳೆಯಲು ವ್ಯವಸ್ಥೆಗೆ ಒಂದೂವರೆ ದಶಕದಿಂದ ಸಾಧ್ಯವಾಗಿಲ್ಲ. ತಾಂತ್ರಿಕ ಕಾರಣಕ್ಕಾಗಿ ‘ಅತಿಥಿ ಉಪನ್ಯಾಸಕರು’ ಎಂಬ ಪದನಾಮವನ್ನು ನೀಡಿದೆ ಈ ವ್ಯವಸ್ಥೆ. ಯಾವ ಅತಿಥಿಯೂ ಹೆಚ್ಚು ದಿನ ಇದ್ದರೆ ಸಾಗಹಾಕುವ ಹಲವು ದಾರಿಗಳನ್ನು ಮನೆಯವರು ಹುಡುಕುತ್ತಾರೆ ಎಂಬ ಸಾಂಕೇತಿಕ ಎಚ್ಚರಿಕೆಯನ್ನೂ ಇದು ಒಳಗೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇದೊಂದು ವಿಪರೀತ ತಾರತಮ್ಯದ ವ್ಯವಸ್ಥೆ. ಕಾಯಂ ಇರುವವರಿಗೂ ತಾತ್ಕಾಲಿಕವಾಗಿ ಕೆಲಸ ಮಾಡುವವರಿಗೂ ಸವಲತ್ತಿನಲ್ಲಿ ಅಜಗಜಾಂತರವಿದೆ. ಇದು ಇರುವಿಕೆಗಳನ್ನು ಮಾತ್ರವಲ್ಲ, ಮನಸ್ಸುಗಳನ್ನೂ ಇಬ್ಭಾಗವಾಗುವಂತೆ ಮಾಡಿ ಇನ್ನೊಂದು ರೀತಿಯ ಸಮಸ್ಯೆಗಳು ಹುಟ್ಟಿಕೊಳ್ಳುವುದಕ್ಕೆ ಕಾರಣವಾಗುತ್ತಿದೆ. ಈ ಹುಣ್ಣು ಬಲಿಯುವುದೆಂದರೆ ಇನ್ನೊಂದು ಸಾಮಾಜಿಕ ಸಮಸ್ಯೆ ಹುಟ್ಟಿಕೊಳ್ಳುವುದು ಎಂಬುದನ್ನು ಕಾಣದೇ ಹೋಗುವುದು ದಡ್ಡತನವಾಗುತ್ತದೆ. ಎಂಥ ವಿಚಿತ್ರ ನೋಡಿ, ನಾವು ಸಂಸ್ಕೃತಿಯ ಬಗೆಗೆ ಬಹಳ ಮಾತಾಡುತ್ತೇವೆ. ಅದೇ ಹೊತ್ತಿಗೆ ಆ ಸಂಸ್ಕೃತಿಯ ಪರಿಕರಗಳನ್ನು ಶೋಷಣೆಗೆ ಅಸ್ತ್ರವಾಗಿಸಿಕೊಳ್ಳುತ್ತೇವೆ. ಗುರು ಪೂರ್ಣಿಮೆಯ ದಿನ ಶಿಕ್ಷಕರ ಕಾಲಿಗೆ ವಿದ್ಯಾರ್ಥಿಗಳನ್ನು ಬೀಳಿಸಿ ಪೂಜೆ ಮಾಡಿಸುತ್ತೇವೆ. ಆದರೆ ಅತಿ ಕಡಿಮೆ ಸಂಖ್ಯೆಯಲ್ಲಿರುವ ಕಾಯಂ ಶಿಕ್ಷಕರನ್ನು ಬಿಟ್ಟು ಉಳಿದವರಿಗೆ ತಾವು ಶಿಕ್ಷಕರು ಎಂದು ಹೆಮ್ಮೆ ಪಡುವುದಕ್ಕೆ ಅವಕಾಶವಿಲ್ಲದಂತೆ ಅವರಿಗೆ ಅತಿ ಕನಿಷ್ಠ ಸಂಬಳ ನೀಡುತ್ತಾ, ಅವರು ಸ್ವಾಭಿಮಾನದಿಂದ ತಲೆಯೆತ್ತದಂತೆ ದೈನೇಸಿ ಸ್ಥಿತಿಗೆ ಅವರನ್ನು ದೂಕುತ್ತಿದ್ದೇವೆ. ಒಂದೆಡೆ, ಉನ್ನತ ಶಿಕ್ಷಣದ ಪಾಲಿಸಿಯು ವಿದ್ಯಾರ್ಥಿ, ಶಿಕ್ಷಕರ ಸಂಬಂಧ ಗುರುಕುಲದ ರೀತಿಯಲ್ಲಿ ಇರಬೇಕು ಎನ್ನುತ್ತದೆ. ಪದವಿ ಕಾಲೇಜಿನ ಗುಣಮಟ್ಟ ಅಳೆಯುವ ನ್ಯಾಕ್, ಶಿಕ್ಷಕ– ವಿದ್ಯಾರ್ಥಿ ಅನುಪಾತದಲ್ಲಿ ಅಂತರ ಕಡಿಮೆ ಇರಬೇಕು ಎನ್ನುತ್ತದೆ. ಇನ್ನೊಂದೆಡೆ, ನೂರಾರು ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕರನ್ನು ನೇಮಿಸಲಾಗುತ್ತದೆ.

ಭಾರತವು ಗುರುಗಳನ್ನು ಪೊರೆಯದಷ್ಟು ಬಡವಾಗಿದೆಯೇ? ಆರು ತಿಂಗಳಿನಿಂದ ಕೆಲಸದಿಂದ ದೂರ ಇಟ್ಟಿರುವ ಅತಿಥಿ ಉಪನ್ಯಾಸಕರಿಗೀಗ ಬೇಕಿರುವುದು ಅವರ ಸಾಮರ್ಥ್ಯ ಮತ್ತು ಅರ್ಹತೆಗೆ ತಕ್ಕ ಕೆಲಸ, ಮತ್ತದಕ್ಕೆ ತಕ್ಕ ವೇತನ. ಬಹುಶಃ ಇದೇ ನಾಗರಿಕ ಸಮಾಜಕ್ಕೊಂದು ಘನತೆಯನ್ನು ನೀಡುವ ದಾರಿ ಕೂಡ.

ಸಬಿತಾ ಬನ್ನಾಡಿ

ಲೇಖಕಿ: ಕನ್ನಡ ಪ್ರಾಧ್ಯಾಪಕಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.