ಶನಿವಾರ, ಜೂನ್ 6, 2020
27 °C
‘ಕಾಯಕವೇ ಕೈಲಾಸ’ ಎಂಬ ಮಂತ್ರ ಜಪಿಸಿದ ನಾಡು, ಕಾಯಕಜೀವಿಗಳ ಕೈ ಹಿಡಿಯದೇ?

ವಿಶ್ಲೇಷಣೆ| ಐತಿಹಾಸಿಕ ಹೆಜ್ಜೆ ಮೂಡಲಿ

ಡಿ.ಎಸ್.ಚೌಗಲೆ Updated:

ಅಕ್ಷರ ಗಾತ್ರ : | |

ಕಾಯಕದಲ್ಲಿ ನಿರತನಾದಡೆ

ಗುರುದರ್ಶನವಾದಡೂ ಮರೆಯಬೇಕು

ಲಿಂಗಪೂಜೆಯಾದಡೂ ಮರೆಯಬೇಕು

ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು

ಕಾಯಕವೇ ಕೈಲಾಸವಾದ ಕಾರಣ

ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.

–ಇದು, ಕಾಯಕದ ಮಹತ್ವವನ್ನು ಸಾರಿ ಹೇಳುವ ಆಯ್ದಕ್ಕಿ ಮಾರಯ್ಯನವರ ವಚನ. ಕಾಯಕದಲ್ಲಿರುವ ವ್ಯಕ್ತಿ ತಾನು ಆಯ್ದುಕೊಂಡ ಕೆಲಸದಲ್ಲಿರುವಾಗ ಗುರು, ಲಿಂಗ, ಜಂಗಮ ಆಗಮಿಸಿದರೂ ಮರೆಯಬೇಕು. ಕಾರಣ, ಕಾಯಕವೇ ಕೈಲಾಸವಾಗಿದೆ. ಜಾತಿ, ಪ್ರಾಂತಭೇದ ಮರೆತ ಶರಣರೆಲ್ಲ ಕಾಯಕನಿಷ್ಠರು. ಅವರನ್ನೆಲ್ಲ ಇಂದಿನ ಪರಿಭಾಷೆಯಲ್ಲಿ, ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡ ಕಾರ್ಮಿಕವರ್ಗ ಎನ್ನಬಹುದು.

ಬಸವಣ್ಣ, ಅಲ್ಲಮನಂಥ ಪ್ರಮಥರು ಕಾಯಕ, ದಾಸೋಹಗಳ ಮೂಲಕ ನಾಡನ್ನು ಕಲ್ಯಾಣವಾಗಿಸಿದರು. ದಯವೇ ಧರ್ಮದ ಮೂಲವೆಂದು ಸಕಲ ಜೀವಾತ್ಮಗಳಲ್ಲಿ ಲೇಸನ್ನು ಬಯಸಿದರು. ಇಂದು ಅಂಥ ಕಲ್ಯಾಣದ ಮಾರ್ಗಸೂಚಿಯ ಅಗತ್ಯವು ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ ಅವರಿಗಿದೆ. ಕಾರಣ, ನಾಡು ಕಟ್ಟುವ ಕೆಲಸದಲ್ಲಿ ತೊಡಗಿದ, ದೇಶದ ವಿವಿಧ ಮೂಲೆಗಳಿಂದ ಬಂದಿರುವ ವಲಸೆ ಕಾರ್ಮಿಕರ ಪಾಡು ಮಾತಿಗೆ ನಿಲುಕದು. ಅವರನ್ನು ಮಹಾಮನೆಯ ಶರಣರಂತೆ ಕಾಣಬೇಕಾದ ಅಗತ್ಯ ತೀವ್ರವಾಗಿದೆ. ಹೀಗಾಗಿ, ಕಲ್ಯಾಣದ ಬಸವಣ್ಣನವರ ಕಾಯಕನಿಷ್ಠೆಯನ್ನು ಪರಿಪಾಲಿಸುವ ಅವಕಾಶವೊಂದು ನಮ್ಮ ಸರ್ಕಾರವನ್ನು ಮುನ್ನಡೆಸುತ್ತಿರುವ ಮಹನೀಯರಿಗೆ ಒದಗಿಬಂದಿದೆ. 

ಇದನ್ನೊಂದು ದೃಷ್ಟಾಂತದ ಮೂಲಕ ಹೇಳಬಹುದು. ಹರಿಹರನ ‘ಬಸವರಾಜ ದೇವರ ರಗಳೆ’ಯಲ್ಲಿ ಕಿನ್ನರಿ ಬೊಮ್ಮಯ್ಯನವರ ಪ್ರಸಂಗವೊಂದಿದೆ. ಭೋಜನಕ್ಕೆಂದು ಬಸವಣ್ಣನವರು ಭೋಜನಶಾಲೆಗೆ ಆಗಮಿಸುತ್ತಾರೆ. ಸಹಜವಾಗಿ ಬ್ರಾಹ್ಮಣ ಸಂಪ್ರದಾಯದಂತೆ ಅವರು ಕಂದಮೂಲ ಪದಾರ್ಥಗಳಾದ ಬೆಳ್ಳುಳ್ಳಿ, ಈರುಳ್ಳಿ ಸೇವನೆ ಮಾಡುತ್ತಿರಲಿಲ್ಲ. ಅಲ್ಲಿ ಅಡುಗೆಮನೆಯಲ್ಲಿ ಕಿನ್ನರಿ ಬೊಮ್ಮಯ್ಯ
ನವರು ಈರುಳ್ಳಿ ಹೆಚ್ಚುತ್ತಿದ್ದ ಘಾಟು ಬಸವಣ್ಣನವರ ಮೂಗಿಗೆ ಅಡರುತ್ತದೆ. ಬಸವಣ್ಣನವರು ದೂರದಿಂದ– ಕಿನ್ನರಿಬೊಮ್ಮಯ್ಯನವರನ್ನು ಗುರುತಿಸದೇ- ‘ಅದಾರು ಈರುಳ್ಳಿ ಹೆಚ್ಚುತ್ತಿದ್ದೀರಿ? ಘಾಟು ವಾಸನೆ? ಛೇ!’ ಎಂದು ಕೋಪದಿಂದ ಅರಚುತ್ತಾರೆ. ಈ ಮಾತು ಕಿನ್ನರಿಬೊಮ್ಮಯ್ಯನವರ ಕಿವಿಗೆ ಬೀಳುತ್ತದೆ. ಅದರಿಂದಾದ ಅವಮಾನ ತಾಳಲಾಗದೆ ಕಿನ್ನರಿಬೊಮ್ಮಯ್ಯನವರು ಅಲ್ಲಿಂದ ಹೊರನಡೆಯುತ್ತಾರೆ.

ಭೋಜನದ ಸಮಯ. ಮಹಾಮನೆಯಲ್ಲಿ ಎಲ್ಲ ಶರಣರು ಪ್ರಸಾದಕ್ಕೆ ಕುಳಿತಿರುತ್ತಾರೆ. ಹಸಿದ ಬಸವಣ್ಣನವರು ನಿತ್ಯದಂತೆ –‘ಎಲ್ಲರೂ ಊಟಕ್ಕೆ ಇದ್ದಾರಲ್ಲ?’ ಅಂದಾಗ, ಹಡಪದ ಅಪ್ಪಣ್ಣನವರು- ‘ಕಿನ್ನರಿ ಬೊಮ್ಮಯ್ಯನವರು ಮಾತ್ರ ಇಲ್ಲ. ಅವರು ಕೋಪ ಮಾಡಿಕೊಂಡು ತ್ರಿಪುರಾಂತಕ ಕೆರೆಯ ದಂಡೆಯ ಮೇಲೆ ಕುಳಿತುಬಿಟ್ಟಿರುವರು, ಆ ಸಿಟ್ಟಿಗೆ ತಾವೇ ಕಾರಣ’ ಎನ್ನುವರು. ಬಸವಣ್ಣನವರಿಗೆ ಗಾಬರಿ, ಆತಂಕ. ತನ್ನಿಂದ ಅದಾವ ಅಚಾತುರ್ಯ ಘಟಿಸಿಬಿಟ್ಟಿತೋ ಅಂತ- ‘ಅದು ಹೇಗೆ?’ ಎಂದಾಗ ಅಪ್ಪಣ್ಣ ಹೇಳುವರು- ‘ತಾವು ಭೋಜನಶಾಲೆಗೆ ಬಂದಿದ್ದಾಗ ಕಿನ್ನರಿ ಬೊಮ್ಮಯ್ಯ ಉಳ್ಳಾಗಡ್ಡಿ ಹೆಚ್ಚುತ್ತಿದ್ದರು. ತಮಗೆ ಆ ಪದಾರ್ಥ ವರ್ಜ್ಯ, ಆದರೆ ಬೊಮ್ಮಯ್ಯನವರಿಗೆ ಇಷ್ಟ. ನೀವು ಕೂಗಾಡಿದ್ದರಿಂದ ಅವರು ಹೊರಟುಹೋದರು’.

ಬಸವಣ್ಣನವರಿಗೆ ತಮ್ಮ ತಪ್ಪಿನ ಅರಿವಾಯಿತು. ಇದು ತಮ್ಮ ಅಹಮಿಕೆ ಎಂದರಿತರು. ಮತ್ತೊಬ್ಬರ ಆಹಾರ ಸಂಸ್ಕೃತಿಯನ್ನು ಗೌರವಿಸಲೇಬೇಕು. ಕೆರೆ ದಂಡೆಯತ್ತ ಬೊಮ್ಮಯ್ಯನವರನ್ನು ಕರೆಯಲು ಹೊರಡುತ್ತಾರೆ. ಹೋಗುವಾಗ ಅಡುಗೆಯವರಿಗೆ ‘ಕಿನ್ನರಿಬೊಮ್ಮಯ್ಯನಿಗಾಗಿ ಈರುಳ್ಳಿಯದೇ ಬಗೆಬಗೆಯ ಪದಾರ್ಥಗಳ ಅಡುಗೆ ಸಿದ್ಧಪಡಿಸು’ ಎಂದು ಹೇಳಿ ಬಸವಣ್ಣನವರು ಸ್ವತಃ ಕೊರಳಲ್ಲಿ ಈರುಳ್ಳಿಯ ಮಾಲೆ ಧರಿಸಿ, ಹೊರಟು ನಿಲ್ಲುತ್ತಾರೆ. ತಮ್ಮ ಅಹಮಿಕೆಯನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡು, ಕ್ಷಮೆ ಕೇಳಿ ಅವರನ್ನು ಕರೆತಂದು, ಜೊತೆಗೆ ಕುಳಿತು ಊಟ ಮಾಡುತ್ತಾರೆ.

ಈಗ ಈ ಕತೆ ನೆನಪಾಗುವ ಕಾಲ ವರ್ತಮಾನದ್ದು. ಕಲ್ಯಾಣದ ಮಾನವತಾವಾದಿ ಬಸವಣ್ಣನವರ ನಡೆಯು ಇಂದಿನ ದುರಿತ ಪ್ರಸಂಗದಲ್ಲಿ ನಮ್ಮ ಮುಖ್ಯಮಂತ್ರಿಯವರ ಹಾಗೂ ಅವರ ಸಂಪುಟದ ಸಚಿವರದ್ದಾಗಬೇಕು. ಕಿನ್ನರಿಬೊಮ್ಮಯ್ಯನೆಂಬ ಸಾಮಾನ್ಯ ಕಾಯಕಜೀವಿ ಶರಣನ ಮನ ನೋಯಿಸಿದೆನೆಂದು ಬಸವಣ್ಣನವರು ತಮ್ಮ ಅಹಂ ಒತ್ತಟ್ಟಿಗಿಟ್ಟು ಓಡೋಡಿ ಹೋಗಿ ಕರೆದುಕೊಂಡು ಬಂದಂತೆ, ಇವತ್ತು ಆಡಳಿತ ನಡೆಸುತ್ತಿರುವ ನಮ್ಮ ಜನನಾಯಕರು ತಮ್ಮ ರಾಜಕೀಯ ಕಿರೀಟ, ತುರಾಯಿಗಳನ್ನು ಬದಿಗಿರಿಸಿ, ಕಾಯಕಜೀವಿಗಳಾದ ಲಕ್ಷಾಂತರ ವಲಸೆ ಕಾರ್ಮಿಕರನ್ನು ಕರೆತಂದು ಉಣ್ಣಲು, ಉಡಲು ನೀಡಬೇಕು. ಕೈಗೆ ಕೆಲಸ ಒದಗಿಸಬೇಕು. ಉತ್ತಮ ವಸತಿ ಸೌಲಭ್ಯ ಕಲ್ಪಿಸಬೇಕು. ಈ ಕಾರ್ಯ ಅವರಿಂದ ಸಾಧ್ಯವಿದೆ. ವಲಸೆ ಕಾರ್ಮಿಕರು ಅಂದರೆ ಶರಣರಂತೆ ಕಾಯಕಜೀವಿಗಳಲ್ಲವೇ? ‘ಕಾಯಕವೇ ಕೈಲಾಸ’ ಎಂಬ ಆಯ್ದಕ್ಕಿ ಮಾರಯ್ಯನವರ ಮಹಾಮಂತ್ರ ಜಪಿಸಿದ ಸಂಸ್ಕಾರವಿರುವ ನಾಡು ನಮ್ಮದು.

ಲಾಕ್‌ಡೌನ್‌ ಜಾರಿಗೆ ಬಂದ ನಂತರ, ಕೆಲಸ ಇಲ್ಲದಂತಾದ ಬಹುತೇಕ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸಾಗಲು ವಾಹನ ಸೌಕರ್ಯವೂ ಇಲ್ಲದಿರುವುದನ್ನು ಗಮನಿಸಿ ತಲ್ಲಣಿಸಿಹೋದರು. ಅವರಲ್ಲಿ ಒಂದಿಷ್ಟು ಜನ, ತಮ್ಮ ಪುಟ್ಟ ಮಕ್ಕಳನ್ನು ಬೆನ್ನ ಮೇಲೆ
ಹೊತ್ತು ನಡೆದೇ ತಮ್ಮ ಊರುಗಳಿಗೆ ಹೋಗುವ ನಿರ್ಧಾರ ಕೈಗೊಂಡರು. ನಡೆದು ಸಾಗುವ ಮಾರ್ಗದಲ್ಲಿ ಕೆಲವರು ಸಾವು–ನೋವಿಗೆ ಈಡಾದರು... ಅವರ ಸ್ಥಿತಿ ಈಗಲೂ ಅತಂತ್ರವಾಗಿಯೇ ಇದೆ. ಅಂತಹ ಶ್ರಮಜೀವಿಗಳಿಗೆ ನಮ್ಮ ಸರ್ಕಾರಗಳು ದೊಡ್ಡ ಮಟ್ಟದಲ್ಲಿ ನೆರವಿಗೆ ಬರಬೇಕು.

ಕೊರೊನಾ ಬಿಕ್ಕಟ್ಟಿನ ಆರಂಭದಲ್ಲಿ ಉಂಟಾದ ಒಂದು ಕೋಮು ಇಕ್ಕಟ್ಟಿನ ಪ್ರಸಂಗದಲ್ಲಿ ಯಡಿಯೂರಪ್ಪನವರು ಖಡಕ್‌ ಎಚ್ಚರಿಕೆ ನೀಡಿ, ಶರಣ ಪರಂಪರೆಯು ಇನ್ನೂ ಸತ್ತಿಲ್ಲ, ಜೀವಂತವಿದೆ ಎಂಬುದನ್ನು ಸಾಬೀತುಪಡಿಸಿದ್ದರು. ತಬ್ಲೀಗ್‌ ಸಂಘಟನೆಯ ಸದಸ್ಯರ ಕೊರೊನಾ ಸೋಂಕಿನ ಪ್ರಸಂಗದಲ್ಲಿ ಇಡೀ ಸಮುದಾಯಕ್ಕೆ ಅದರ ಕಳಂಕ ಹಚ್ಚಿ, ಕೋಮು ದ್ವೇಷ ಬಿತ್ತುವ ಕೆಲಸವನ್ನು ಕೆಲವರು ಮಾಡುತ್ತಿದ್ದಾಗ, ‘ಹುಷಾರ್! ಯಾರಾದರೂ ಕೋಮುದ್ವೇಷಕ್ಕೆ ಕಾರಣರಾದರೆ ಸಹಿಸೋಲ್ಲ!’ ಎಂದು ಎಚ್ಚರಿಸಿದ್ದರು. ಇದಕ್ಕೆ ಕಾರಣ ಈ ಮಣ್ಣಿನ ಸಂಸ್ಕಾರ. ಬಸವಣ್ಣ, ಅಲ್ಲಮ, ಕನಕ, ಪುರಂದರ, ಷರೀಫ- ಹೀಗೆ ಸೂಫಿ ಮತ್ತು ಶರಣರು ಉಸಿರಾಡಿ ಓಡಾಡಿದ ಮಾನವ ಕರುಳಿನ ಮಣ್ಣು ಅವರನ್ನು ಜಾಗೃತಗೊಳಿಸಿದ್ದು.

ಈಗಲೂ ಅಂತಹ ಅವಕಾಶವೊಂದು ಒದಗಿಬಂದಿದೆ. ಆದರೆ ಅದೀಗ ಅವರ ಕೈಜಾರುತ್ತಲಿದೆ. ಅದು ಹಾಗೆ ಜಾರದಂತೆ ನೋಡಿಕೊಂಡು, ಮತ್ತೆ ಶರಣರ ನುಡಿಗೆ ಬದ್ಧರಾಗುವ ಅವಕಾಶ ಮುಖ್ಯಮಂತ್ರಿಯವರ ಮುಂದಿದೆ. ಯಡಿಯೂರಪ್ಪನವರು ಮಠಮಾನ್ಯಗಳಿಗೆ ಬಹಳಷ್ಟು ಅನುದಾನವನ್ನು ನೀಡುತ್ತಾ ಬಂದಿದ್ದಾರೆ. ಆ ಮಠಗಳು ಮತ್ತು ಮಠಾಧೀಶರು ಇಂದಿನ ಆಪತ್ಕಾಲದಲ್ಲಿ ಯಡಿಯೂರಪ್ಪನವರ ಕೈ ಹಿಡಿಯುವರೇ ಹೊರತು ಬಿಡಲಾರರು. ಈ ನಂಬಿಕೆ ನಾಡಿನ ಜನರಿಗೂ ಇದೆ.

ವಿವಿಧ ಸಮುದಾಯಗಳ ಮಠಗಳಿಗೆ ಒಂದು ಕರೆ ಕೊಟ್ಟರೆ ಸಾಕು; ಆ ಮಠಾಧೀಶರೆಲ್ಲರೂ ಈ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಅನ್ನದಾಸೋಹ ಮತ್ತು ವಸತಿಯ ಆಶ್ರಯ ನೀಡಬಲ್ಲರು. ಆಗ ಜನಸಮುದಾಯಗಳೂ ಸ್ವಯಂಪ್ರೇರಿತವಾಗಿ ಚೀಲಗಟ್ಟಲೆ ದವಸಧಾನ್ಯ ನೀಡಬಹುದು. ನಮ್ಮಲ್ಲಿ ಅಂಥ ದಾನಿಗಳಿಗೇನೂ ಕೊರತೆಯಿಲ್ಲ. ಇಂತಹದ್ದೊಂದು ಕಾರ್ಯ ಸಾಧ್ಯವಾದರೆ, ಕನ್ನಡ ಮಣ್ಣಿನ ಶರಣರ ವಿಚಾರ ಮತ್ತು ಅದರ ಕ್ರಿಯೆ ಪ್ರಪಂಚಕ್ಕೇ ಗೊತ್ತಾಗಬಹುದು. ಹೀಗೆ ಆಡಳಿತಾರೂಢರು ಬಸವಣ್ಣನವರ ಹೆಜ್ಜೆಗಳ ಮೇಲೆ ಹೆಜ್ಜೆಯಿಟ್ಟು ನಡೆದವರು ಎಂದು ಜಗವು ಕೊಂಡಾಡಬಹುದು. ಅಂತಹ ಒಂದು ಐತಿಹಾಸಿಕ ಹೆಜ್ಜೆಗಳು ಮೂಡಿಬರಲಿ.

ಲೇಖಕ: ಪ್ರಾಧ್ಯಾಪಕ,
ಭಾವುರಾವ ಕಾಕತಕರ ಕಾಲೇಜು, ಬೆಳಗಾವಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.