ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ| ಕನ್ನಡಿಗರಿಗೇ ಉದ್ಯೋಗವೆಂಬ ನೀತಿ

ಮಹಿಷಿ ವರದಿಯ ಶಿಫಾರಸುಗಳ ಜಾರಿ ಸಂಬಂಧ ಸೂಕ್ತ ಸಮೀಕ್ಷೆ ನಡೆಯಬೇಕಿದೆ
Last Updated 31 ಜುಲೈ 2020, 22:00 IST
ಅಕ್ಷರ ಗಾತ್ರ

ಹೊಸ ಕೈಗಾರಿಕಾ ನೀತಿಗೆ ರಾಜ್ಯ ಸಚಿವ ಸಂಪುಟವು ಜುಲೈ 23ರಂದು ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆಯಾಗುವ ಉದ್ಯಮಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ 70ರಿಂದ 100ರವರೆಗೆ ಆದ್ಯತೆ ನೀಡಲಾಗುವುದು ಎಂಬ ಅಂಶ ಈ ನೀತಿಯಲ್ಲಿ ಅಡಕಗೊಂಡಿದ್ದು, ಅದು ದೊಡ್ಡ ಸುದ್ದಿಯಾಗಿದೆ. ಇದೇ ಸಂದರ್ಭದಲ್ಲಿ ‘ಸರೋಜಿನಿ ಮಹಿಷಿ ವರದಿ ಜಾರಿಗೆ ಬರಲಿ’ ಎಂದು ನಿರಂತರವಾಗಿ ಕೇಳುತ್ತಲೇ ಬಂದ ಕೂಗು ಮಾರ್ದನಿಸುತ್ತಿದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ನೀತಿ ಸ್ವಾಗತಾರ್ಹ. ಮಹಿಷಿ ವರದಿ ಪರವಾದ ಕೂಗು ಕೂಡ ಇದೇ ಕಾಳಜಿಯಿಂದ ಕೂಡಿದೆ. ಆದರೆ ಇಲ್ಲಿ ಎರಡು ಪ್ರಶ್ನೆಗಳಿವೆ. ಕನ್ನಡಿಗರಿಗೆ ಉದ್ಯಮಗಳಲ್ಲಿ ಇಂತಿಷ್ಟು ಉದ್ಯೋಗ ನೀಡಲಾಗುವುದೆಂಬುದು ಹೊಸ ನೀತಿಯೇ? ಸರೋಜಿನಿ ಮಹಿಷಿ ವರದಿ ಜಾರಿಗೆ ಬಂದೇ ಇಲ್ಲವೇ ಅಥವಾ ‘ಸರಿಯಾಗಿ’ ಜಾರಿಯಾಗಿಲ್ಲವೇ? ಈ ಪ್ರಶ್ನೆಗಳನ್ನು ಪರಿಶೀಲಿಸುವ ಅಗತ್ಯವಿದೆ.

2014ರ ರಾಜ್ಯ ಕೈಗಾರಿಕಾ ನೀತಿಯಲ್ಲಿಯೇ ಒಟ್ಟು ಹುದ್ದೆಗಳ ಆಧಾರದಲ್ಲಿ ಶೇ 70ರಷ್ಟು ಮತ್ತು ‘ಡಿ’ ಗ್ರೂಪ್‍ನಲ್ಲಿ ಶೇ 100ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕೆಂಬ ಅಂಶವನ್ನು ಸೇರಿಸಲಾಗಿತ್ತು. ಇದು ಕೂಡ ಹೊಸದಲ್ಲ. ಸರೋಜಿನಿ ಮಹಿಷಿ ವರದಿ ಅನುಷ್ಠಾನದ ಹಾದಿಯಲ್ಲಿ ಬಂಗಾರಪ್ಪ ನೇತೃತ್ವದ ಸರ್ಕಾರವು 1991ರ ಜ. 18ರ ಆದೇಶದಲ್ಲಿ ‘ಕೇಂದ್ರ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಲು ನೆಲ, ಜಲ, ವಿದ್ಯುಚ್ಛಕ್ತಿ ಮುಂತಾದವುಗಳನ್ನು ನೀಡುವಾಗ ಸದರಿ ಕೇಂದ್ರ ಉದ್ದಿಮೆಗಳಲ್ಲಿ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಶೇ 100, ‘ಬಿ’ ಹುದ್ದೆಗಳಿಗೆ ಶೇ 80, ಗ್ರೂಪ್ ‘ಎ’ ಹುದ್ದೆಗಳಿಗೆ ಶೇ 65ರಷ್ಟು ಕನ್ನಡಿಗರನ್ನು ನೇಮಿಸಲು ಷರತ್ತು ಹಾಕಬೇಕು’ ಎಂದು ಹೇಳಿದೆ. ‘ಸರ್ಕಾರದ ಸಹಾಯ ಪಡೆಯುವ ಯಾವುದೇ ಖಾಸಗಿ ಉದ್ದಿಮೆಗೂ’ ಇದೇ ಷರತ್ತನ್ನು ಅನ್ವಯಿಸಲಾಗಿದೆ. ರಾಜ್ಯದ ಸಾರ್ವಜನಿಕ ಉದ್ದಿಮೆಗಳ ಎಲ್ಲಾ ಹಂತಗಳಲ್ಲಿ ಶೇ 100ರಷ್ಟು ಕನ್ನಡಿಗರನ್ನೇ ನೇಮಕಾತಿ ಮಾಡಿಕೊಳ್ಳಬೇಕೆಂದೂ ವಿಶೇಷ ಪರಿಣತಿಯ ಕಾರಣಕ್ಕೆ ಅಗತ್ಯಬಿದ್ದರೆ ‘ಎ’ ಮತ್ತು ‘ಬಿ’ ಗ್ರೂಪ್ ಹುದ್ದೆಗಳಿಗೆ ಬೇರೆಯವರನ್ನು ನೇಮಿಸಲು ಸರ್ಕಾರದ ಅನುಮತಿ ಪಡೆಯಬೇಕೆಂದೂ ಸೂಚಿಸಲಾಗಿದೆ.

ಕನ್ನಡಿಗರೆಂದರೆ ಯಾರು ಎಂಬುದನ್ನು ಸರೋಜಿನಿ ಮಹಿಷಿ ವರದಿ ಸ್ಪಷ್ಟಪಡಿಸಿದ್ದು, ಕನ್ನಡದಲ್ಲಿ ಓದಲು, ಬರೆಯಲು, ವ್ಯವಹರಿಸಲು ಬರುವ ಮತ್ತು ಕನಿಷ್ಠ 15 ವರ್ಷ ಕರ್ನಾಟಕ ವಾಸಿಯಾಗಿರಬೇಕೆಂದು ಶಿಫಾರಸು ಮಾಡಲಾಗಿದೆ. ಕನ್ನಡ ಜ್ಞಾನವುಳ್ಳವರನ್ನು ಕನ್ನಡಿಗರೆಂದು ಪರಿಗಣಿಸುವ ಕುರಿತು 1985ರಲ್ಲೇ ಸರ್ಕಾರವು ಆದೇಶ ಹೊರಡಿಸಿದ್ದು, ಮತ್ತೆ 2019ರ ಡಿಸೆಂಬರ್‌ನಲ್ಲಿ ಹೊಸ ಆದೇಶದ ಮೂಲಕ ಸ್ಪಷ್ಟಪಡಿಸಲಾಗಿದೆ.

ಈಗ ಸರೋಜಿನಿ ಮಹಿಷಿ ವರದಿಯ ಜಾರಿ ಕುರಿತ ವಿಷಯ. ಕೇಂದ್ರೋದ್ಯಮವೂ ಸೇರಿದಂತೆ ಕರ್ನಾಟಕದ ಉದ್ಯೋಗಿಗಳ ಕುಂದುಕೊರತೆ ಹಾಗೂ ನಿವಾರಣೋಪಾಯಗಳನ್ನು ತಿಳಿಸಲು ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರವು ಮೊದಲಿಗೆ ಮಾರ್ಗರೇಟ್ ಆಳ್ವ ಅವರ ಅಧ್ಯಕ್ಷತೆಯಲ್ಲಿ1983ರ ಆಗಸ್ಟ್‌ 6ರಂದು ಸಮಿತಿಯನ್ನು ರಚಿಸಿತು. ಮಾರ್ಗರೇಟ್ ಆಳ್ವ ಅವರು ಒಪ್ಪಲಿಲ್ಲವಾದ್ದರಿಂದ 1984ರ ಜನವರಿ 25ರಂದು ಸರೋಜಿನಿ ಮಹಿಷಿಯವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಪುನರ್‌ರಚಿಸಲಾಯಿತು. ಗೋಪಾಲಕೃಷ್ಣ ಅಡಿಗ, ಜಿ.ಕೆ.ಸತ್ಯ, ಜಿ.ನಾರಾಯಣ ಕುಮಾರ್, ಪ್ರಭಾಕರ ರೆಡ್ಡಿ, ಸಿದ್ಧಯ್ಯ ಪುರಾಣಿಕ್ ಮತ್ತು ಬಿ.ಎಸ್.ಹನುಮಾನ್ ಅವರು ಸಮಿತಿಯ ಸದಸ್ಯರು. 1985ರ ಜೂನ್‌ 28ರಂದು ಮತ್ತೊಂದು ಆದೇಶ ಹೊರಡಿಸಿ ಮಹಿಷಿ ಸಮಿತಿಯ ಕಾರ್ಯವ್ಯಾಪ್ತಿಯನ್ನು ಖಾಸಗಿ ಉದ್ಯಮಗಳಿಗೂ ವಿಸ್ತರಿಸಲಾಯಿತು. ಈ ಸಮಿತಿಯು ಈ ವೇಳೆಗೆ 1984ರ ಜೂನ್‌ 13ರಂದು ಮಧ್ಯಂತರ ವರದಿಯನ್ನು ನೀಡಿತ್ತು. 1986ರ ಡಿಸೆಂಬರ್‌ 30ರಂದು ಅಂತಿಮ ವರದಿ ನೀಡಿತು. ಆಗ ಹೆಗಡೆ ನೇತೃತ್ವದ ಸರ್ಕಾರವು ಈ ವರದಿಯ ಅನುಷ್ಠಾನದ ಕುರಿತು ಪರಿಶೀಲಿಸಲು ಲೋಕಸಭಾ ಸದಸ್ಯ ಡಾ. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ 1988ರ ಮೇ 15ರಂದು ‘ಉದ್ಯೋಗ ಸಮಿತಿ’ಯನ್ನು ರಚಿಸಿತು. ವೆಂಕಟೇಶ್ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಿ ಮಹಿಷಿ ವರದಿಯ 58 ಶಿಫಾರಸುಗಳಲ್ಲಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬಾರದೆ ಇರುವ 12ಶಿಫಾರಸುಗಳನ್ನು ಹೊರತುಪಡಿಸಿ ಉಳಿದವನ್ನು ಅಂಗೀಕರಿಸಲಾಯಿತು. ಈ ಮಧ್ಯೆ ಮಧ್ಯಂತರ ವರದಿಯನ್ನು ಅನುಸರಿಸಿ ಹೆಗಡೆ ನೇತೃತ್ವದ ಸರ್ಕಾರವು ಅನೇಕ ಆದೇಶಗಳನ್ನು ಹೊರಡಿಸಿತ್ತು.

ಎಸ್. ಬಂಗಾರಪ್ಪನವರು ಮುಖ್ಯಮಂತ್ರಿಯಾದ ನಂತರ ಸರೋಜಿನಿ ಮಹಿಷಿ ವರದಿಯ ಅನುಷ್ಠಾನಕ್ಕೆ ಮತ್ತಷ್ಟು ತೀವ್ರತೆ ಬಂದಿತು. 1990ರ ನವೆಂಬರ್‌ 23ರಂದು ಆದೇಶ ಹೊರಡಿಸಿ, ಮಹಿಷಿ ವರದಿಯ ಒಪ್ಪಿತ ಶಿಫಾರಸುಗಳ ಅನುಷ್ಠಾನಕ್ಕೆ ಇಲಾಖಾವಾರು ವಿಂಗಡಣೆ ಮಾಡಿ ಜವಾಬ್ದಾರಿ ವಹಿಸಲಾಯಿತು. 1991ರ ಜುಲೈ 30ರಂದು ಮಹಿಷಿ ವರದಿ ಜಾರಿಯ ಉಸ್ತುವಾರಿಗಾಗಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಕಾಯಂ ಉಪಸಮಿತಿ ರಚಿಸಲಾಯಿತು. ಮುಂದೆ ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾದಾಗ ಅಂದಿನ ಹಿರಿಯ ಸಚಿವ ಕೆ.ಎಚ್. ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿಯನ್ನು ಪುನರ್‌ರಚನೆ ಮಾಡಲಾಯಿತು. ಈ ಮಧ್ಯೆ 1992ರ ಫೆಬ್ರುವರಿ 29ರ ಆದೇಶದ ಪ್ರಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಹಿಷಿ ವರದಿ ಅನುಷ್ಠಾನದ ಹೊಣೆಯನ್ನು ನೀಡಿ ‘ಸರ್ಕಾರ ಅಂಗೀಕರಿಸಿರುವ ಡಾ. ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಕಾರ್ಯವಿಧಾನಗಳನ್ನು ರೂಪಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಜಾರಿಗೊಳಿಸಲು ಕ್ರಮ ಕೈಗೊಳ್ಳುವುದು’ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ನಾನು ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಈ ಆದೇಶ ಮತ್ತು ಅಧಿನಿಯಮದ ಅನ್ವಯ ಕೆಲವು ಉದ್ದಿಮೆಗಳಲ್ಲಿ ತಪಾಸಣೆ ಮಾಡಿದ್ದೇನೆಂದು ವಿನಮ್ರವಾಗಿ ತಿಳಿಸಬಯಸುತ್ತೇನೆ.ಈ ಎಲ್ಲ ಮಾಹಿತಿಯ ತಿರುಳು ಏನೆಂದರೆ- ಸರೋಜಿನಿ ಮಹಿಷಿ ವರದಿಯ ಅನೇಕ ಶಿಫಾರಸುಗಳನ್ನು ಅಂಗೀಕರಿಸಿ, ಅವುಗಳ ಜಾರಿಗಾಗಿ ಕ್ರಮ ಕೈಗೊಳ್ಳಲಾಗಿದೆ. ಆದರೆ ಆದೇಶಗಳು ಹಾಳೆ ಮೇಲೆ ಉಳಿದಿವೆಯೇ ಅಥವಾ ಸರಿಯಾಗಿ ಜಾರಿಯಾಗಿವೆಯೇ ಎಂಬುದನ್ನು ಸೂಕ್ತ ಸಮೀಕ್ಷೆಯ ಮೂಲಕ ಕಂಡುಕೊಳ್ಳಬೇಕಾಗಿದೆ ಅಷ್ಟೆ. ಈಗ, ಮಹಿಷಿ ವರದಿಯ ಕಾಲದಲ್ಲಿ ಇಲ್ಲದೇ ಇದ್ದ ಮುಕ್ತ ಆರ್ಥಿಕ ನೀತಿಯು ಅನುಷ್ಠಾನಕ್ಕೆ ಬಂದು, ಬಹುರಾಷ್ಟ್ರೀಯ ಕಂಪನಿಗಳು ಕೇಂದ್ರಸ್ಥಾನಕ್ಕೆ ಬಂದಿರುವ ಕಟು ವಾಸ್ತವವು ಸಮಸ್ಯೆಯ ಕೇಂದ್ರವಾಗಿದೆ. ಈ ಸಮಸ್ಯೆಯನ್ನು ಗುರುತಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು 2017ರಲ್ಲಿ ಸಲ್ಲಿಸಿರುವ ‘ಸರೋಜಿನಿ ಮಹಿಷಿ ಪರಿಷ್ಕೃತ ವರದಿ’ಯಲ್ಲಿ ಬಹುರಾಷ್ಟ್ರೀಯ ಕಂಪನಿಗಳನ್ನೂ ಒಳಗೊಂಡಂತೆ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಇಂತಿಷ್ಟು ಉದ್ಯೋಗ ನೀಡಬೇಕೆಂಬ ಷರತ್ತು ವಿಧಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಶಿಫಾರಸು ಸರಿಯಾಗಿಯೇ ಇದೆ. ಆದರೆ ಅದು ಇಂದಿನ ಸಂದರ್ಭದಲ್ಲಿ ಆದರ್ಶಮಾತ್ರವಾಗಿ ಉಳಿಯುವ ಸಂಭವವೇ ಹೆಚ್ಚು. ಯಾಕೆಂದರೆ ರಾಜ್ಯ ಸರ್ಕಾರವು ಬಹುರಾಷ್ಟ್ರೀಯ ಕಂಪನಿಗಳಿಗೆ ಇಂತಹ ಷರತ್ತು ವಿಧಿಸಿದ ಕೂಡಲೇ ಷರತ್ತಿಲ್ಲದ ರಾಜ್ಯಗಳತ್ತ ಅವು ಹೋಗುತ್ತವೆಯೆಂಬ ಆತಂಕ ಇದ್ದೇ ಇದೆ. ಆದ್ದರಿಂದ ಕೇಂದ್ರ ಸರ್ಕಾರವೇ ಈ ನಿಟ್ಟಿನಲ್ಲಿ ರಾಷ್ಟ್ರೀಯ ಉದ್ಯೋಗ ನೀತಿಯನ್ನು ರೂಪಿಸಿ ‘ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಆದ್ಯತೆ ಸಿಗುವಂತೆ ಮಾಡಬೇಕು’. ಆದರೆ, ಸ್ವದೇಶಿ ಪ್ರತಿಪಾದನೆ ಮಾಡುತ್ತಲೇ ವಿದೇಶಿ ಬಂಡವಾಳಗಾರರಿಗೆ ರತ್ನಗಂಬಳಿ ಹಾಕುವವರು ಇಂಥ ನೀತಿ ನಿರೂಪಣೆ ಮಾಡುತ್ತಾರೆಯೇ? ಈ ಯಕ್ಷಪ್ರಶ್ನೆಗೆ ವಾಸ್ತವದ ನೆಲೆಯಲ್ಲಿ ಉತ್ತರ ಹುಡುಕುವ ಹಕ್ಕೊತ್ತಾಯವಂತೂ ಜೀವಂತವಿರಬೇಕು. ದೆಹಲಿಯತ್ತ ದೃಷ್ಟಿ ಹರಿಯ
ಬೇಕು; ದೆಹಲಿಯು ದಿಟ್ಟ ದಾರಿ ತೋರಬೇಕು. ಇದು ಈಗಿನ ವಾಸ್ತವ. 1968 ಜೂನ್ 22 ರಂದು ರಾಷ್ಟ್ರೀಯ ಸಮಗ್ರತಾ ಸಮಿತಿಯು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡದಿದ್ದರೆ ಅತೃಪ್ತಿ ಬೆಳೆದು ಪ್ರತ್ಯೇಕತಾವಾದ ಬೆಳೆಯುತ್ತದೆ ಎಂದು ಅಂದಿನ ಕೇಂದ್ರ ಸರ್ಕಾರಕ್ಕೆ ನಿರ್ಣಯದ ಮೂಲಕ ತಿಳಿಸಿದ್ದು ಕೂಡ ಕಟು ವಾಸ್ತವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT