ಬುಧವಾರ, ಆಗಸ್ಟ್ 10, 2022
25 °C
ಸಿಬ್ಬಂದಿ ಕೊರತೆಯಿಂದ ನ್ಯಾಯಾಲಯಗಳ ಮೇಲೆ ಹೆಚ್ಚುತ್ತಿರುವ ಹೊರೆ

ನ್ಯಾಯಾಂಗದ ನೇಮಕಾತಿ: ಬೇಕಿದೆ ಸುಧಾರಣೆ

ದೀಪಿಕಾ ಕಿನ್ಹಾಲ್, ಶ್ರುತಿ ನಾಯ್ಕ್‌ Updated:

ಅಕ್ಷರ ಗಾತ್ರ : | |

ಪ್ರತೀ ಜಿಲ್ಲಾ ನ್ಯಾಯಾಧೀಶರಿಗೂ ಸಾಮಾನ್ಯವಾಗಿ, ಸರಾಸರಿ 12 ಜನ ಆಡಳಿತಾತ್ಮಕ ಸಿಬ್ಬಂದಿ ಇದ್ದೇ ಇರುತ್ತಾರೆ. ನ್ಯಾಯಾಂಗಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿಭಾಯಿಸಲು ಈ ಸಿಬ್ಬಂದಿಯನ್ನು ನೀಡಲಾಗಿರುತ್ತದೆ. ಹಾಗಾಗಿ, ನ್ಯಾಯದಾನವು ನ್ಯಾಯಾಧೀಶರ ಸಂಖ್ಯೆ ಹಾಗೂ ಗುಣಮಟ್ಟವನ್ನು ಎಷ್ಟರಮಟ್ಟಿಗೆ ಅವಲಂಬಿಸಿರುತ್ತದೆಯೋ ಅಷ್ಟರಮಟ್ಟಿಗೆ ಅವರ ಸಿಬ್ಬಂದಿಯನ್ನೂ ಅವಲಂಬಿಸಿರುತ್ತದೆ ಎಂದರೆ ತಪ್ಪಾಗುವುದಿಲ್ಲ. ಹೀಗಿದ್ದರೂ, ನ್ಯಾಯಾಂಗದಲ್ಲಿ ಆಗುವ ವಿಳಂಬ ಮತ್ತು ವಿಳಂಬಕ್ಕೆ ಕಾರಣವಾ
ಗುವ ವ್ಯವಸ್ಥೆಯಲ್ಲಿನ ಅಸಾಮರ್ಥ್ಯಗಳನ್ನು ಅರ್ಥ ಮಾಡಿಕೊಳ್ಳುವಾಗ ಆಡಳಿತಾತ್ಮಕ ಸಿಬ್ಬಂದಿಗೆ ಸಂಬಂಧಿಸಿದ ವಿಚಾರಗಳು ಹಿನ್ನೆಲೆಗೆ ಸರಿದುಬಿಡುತ್ತವೆ. ಇದಕ್ಕೆ ಒಂದು ಉದಾಹರಣೆ, ಬೆಂಗಳೂರು ಗ್ರಾಮಾಂತರ ನ್ಯಾಯಾಲಯಗಳಲ್ಲಿನ ಹುದ್ದೆಗಳು ಖಾಲಿ ಇರುವುದು.

ಬೆಂಗಳೂರು ಗ್ರಾಮಾಂತರ ನ್ಯಾಯಾಲಯಗಳಿಗೆ ಮಂಜೂರಾಗಿರುವ 975 ಆಡಳಿತಾತ್ಮಕ ಸಿಬ್ಬಂದಿ ಹುದ್ದೆಗಳ ಪೈಕಿ, 2018ರ ಮೇ ವೇಳೆಗೆ 410 ಹುದ್ದೆಗಳು ಮಾತ್ರ ಭರ್ತಿಯಾಗಿದ್ದವು. ನ್ಯಾಯಾಂಗದ ಅಗತ್ಯ
ಗಳನ್ನು ಹೇಗೆ ಲೆಕ್ಕಹಾಕಲಾಗುತ್ತದೆ ಎಂಬುದರ ಸರಿ–ತಪ್ಪುಗಳತ್ತ ನೋಡದೆಯೇ, ಈ ನ್ಯಾಯಾಲಯಗಳು ಶೇಕಡ 57.94ರಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿವೆ ಎನ್ನಬಹುದು. ಯಾವುದೇ ಮಾನದಂಡ ಹಿಡಿದು ನೋಡಿದರೂ ಇದು ಅಪಾಯಕಾರಿ. ಈ ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ನ್ಯಾಯಾಧೀಶರು ತಮಗೆ ಮಂಜೂರಾಗಿರುವ ಸಿಬ್ಬಂದಿಯ ಒಟ್ಟು ಸಂಖ್ಯೆಯಲ್ಲಿ ಅರ್ಧದಷ್ಟು ಜನರನ್ನು ಮಾತ್ರ ನೆಚ್ಚಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದು, ನ್ಯಾಯಾಲಯ ಪರಿಣಾಮಕಾರಿಯಾಗಿ ಕೆಲಸ ಮಾಡುವುದರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಿದ್ದರೂ, ಸಿಬ್ಬಂದಿ ನೇಮಕಾತಿಯನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡಿಲ್ಲ. ಇದಕ್ಕೆ ಮೂಲ ಕಾರಣ ಇರುವುದು ಕರ್ನಾಟಕದಲ್ಲಿ ಈಗ ಅನುಸರಿಸುತ್ತಿರುವ ನೇಮಕಾತಿ ವ್ಯವಸ್ಥೆಯ ರಚನೆಯಲ್ಲಿ.

ಇದನ್ನು ವಿವರವಾಗಿ ಹೇಳಬೇಕು. ಈಗಿನ ಸಂದರ್ಭದಲ್ಲಿ ಆಡಳಿತಾತ್ಮಕ ಸಿಬ್ಬಂದಿಯ ನೇಮಕಾತಿ ಎರಡು ರೀತಿಗಳಲ್ಲಿ ನಡೆಯುತ್ತದೆ. ನೇರ ನೇಮಕಾತಿ ಮತ್ತು ಬೇರೆ ಬೇರೆ ಸ್ತರಗಳ (ranks) ಸಿಬ್ಬಂದಿಯ ಮುಂಬಡ್ತಿ. ಸಿಬ್ಬಂದಿಯನ್ನು ನೇರವಾಗಿ ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಎರಡು ಸಂಸ್ಥೆಗಳ ನಡುವೆ ಹಂಚಿಕೆ ಮಾಡಲಾಗಿದೆ: ಪ್ರತೀ ಜಿಲ್ಲೆಯಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ಹಾಗೂ ರಾಜ್ಯ ಲೋಕಸೇವಾ ಆಯೋಗ (ಕೆಪಿಎಸ್‌ಸಿ). ನ್ಯಾಯಾಂಗಕ್ಕೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಈ ಸಂಕೀರ್ಣ ವಿಧಾನವು ದೇಶದಲ್ಲಿ ಕರ್ನಾಟಕ ಹಾಗೂ ಇನ್ನೊಂದು ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಕಾರ್ಯಾಂಗದ ಸಂಸ್ಥೆಯಾಗಿರುವ ಕೆಪಿಎಸ್‌ಸಿ, ನಿಯಮಗಳ ಅನುಸಾರ ಪ್ರಥಮದರ್ಜೆ ಸಹಾಯಕ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕರನ್ನು (ಎಸ್‌ಡಿಎ) ನೇರವಾಗಿ ನೇಮಕ ಮಾಡಿಕೊಳ್ಳುವ ಅಧಿಕಾರವಿರುವ ಏಕೈಕ ಪ್ರಾಧಿಕಾರ.

ನ್ಯಾಯಾಲಯದ ಆಡಳಿತಾತ್ಮಕ ವಿಚಾರಗಳಲ್ಲಿ ಈ ಸಿಬ್ಬಂದಿಯೇ ಬೆನ್ನೆಲುಬು. ಇವರು ಪ್ರಕರಣಗಳ ಕಡತ
ಗಳನ್ನು ನಿಭಾಯಿಸುವುದು, ಪ್ರಕರಣಗಳ ಪರಿಶೀಲನೆ ನಡೆಸುವುದು, ನೋಟಿಸ್‌ಗಳನ್ನು ಸಿದ್ಧಪಡಿಸುವುದು, ದಾಖಲೆಗಳನ್ನು ನಿರ್ವಹಿಸುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಾರೆ. ನ್ಯಾಯಾಂಗ, ವಕೀಲರು ಮತ್ತು ಕಕ್ಷಿದಾರರ ನಡುವೆ ಇವರು ಸಂಪರ್ಕ ಬಿಂದುವಿನ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಹಾಗಾಗಿ, ಈ ಸಿಬ್ಬಂದಿ ಅಗತ್ಯ ಸಂಖ್ಯೆಯಲ್ಲಿ ಇರಬೇಕಾದುದು ಹಾಗೂ ಅವರು ತರಬೇತಿ ಪಡೆದಿರಬೇಕಾದುದು ಮುಖ್ಯ. ಆದರೆ, ಈಗಿನ ವ್ಯವಸ್ಥೆಯ ಅಡಿ ಈ ಅಧಿಕಾರಿಗಳ ನೇಮಕದಲ್ಲಿ ನ್ಯಾಯಾಂಗಕ್ಕೆ ಯಾವ ನಿಯಂತ್ರಣವೂ ಇಲ್ಲದಂತಾಗಿದೆ.

ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಬೇಕಿರುವ ಆಡಳಿತಾತ್ಮಕ ಸಿಬ್ಬಂದಿಯ ನೇಮಕಕ್ಕೆ ಕೆಪಿಎಸ್‌ಸಿ ಸಾಮಾನ್ಯ ಪರೀಕ್ಷೆಯನ್ನು ನಡೆಸುತ್ತದೆ. ಅಭ್ಯರ್ಥಿಗಳು ಪಡೆದ ರ್‍ಯಾಂಕ್‌ ಮತ್ತು ಖಾಲಿ ಇರುವ ಹುದ್ದೆಗಳ ಸಂಖ್ಯೆ ಆಧರಿಸಿ ಅಭ್ಯರ್ಥಿಗಳನ್ನು ಒಂದೋ ಸರ್ಕಾರದ ವಿವಿಧ ಸಂಸ್ಥೆಗಳಿಗೆ ಅಥವಾ ನ್ಯಾಯಾಂಗಕ್ಕೆ ಹಂಚಿಕೆ ಮಾಡಲಾ
ಗುತ್ತದೆ. ಕೆಪಿಎಸ್‌ಸಿ ನಡೆಸುವ ಈ ನೇಮಕಾತಿ ಪ್ರಕ್ರಿಯೆಯು ನ್ಯಾಯಾಂಗದ ನಿರ್ದಿಷ್ಟ ಅಗತ್ಯಗಳನ್ನು, ನ್ಯಾಯಾಂಗದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳನ್ನು ಗುರುತಿಸಲು ವಿಫಲವಾಗುತ್ತಿದೆ. ನೇಮಕಾತಿ ಪ್ರಕ್ರಿಯೆಗಳು ವಿಳಂಬ ಆಗುತ್ತಿರುವುದು ಹಾಗೂ ಆಸಕ್ತಿ ಇಲ್ಲದ ಅಭ್ಯರ್ಥಿ
ಗಳನ್ನೂ ನ್ಯಾಯಾಂಗಕ್ಕೆ ಹಂಚಿಕೆ ಮಾಡುತ್ತಿರುವುದನ್ನು ಗಮನಿಸಿದರೆ, ನ್ಯಾಯಾಂಗದ ಸಿಬ್ಬಂದಿಯನ್ನು ನೇಮಕ ಮಾಡುವ ಅಧಿಕಾರವನ್ನು ಕೆಪಿಎಸ್‌ಸಿಗೆ ವಹಿಸಿರುವುದರ ದುಷ್ಪರಿಣಾಮಗಳು ಅರ್ಥವಾಗುತ್ತವೆ.

2018ರ ಮೇವರೆಗಿನ ಅಂಕಿ–ಅಂಶಗಳ ಪ್ರಕಾರ, ಎಫ್‌ಡಿಎ ಮತ್ತು ಎಸ್‌ಡಿಎ ಖಾಲಿ ಹುದ್ದೆಗಳ ಪ್ರಮಾಣ ಕ್ರಮವಾಗಿ ಶೇಕಡ 48 ಮತ್ತು ಶೇಕಡ 34ರಷ್ಟು. ಸಿಬ್ಬಂದಿಯ ತೀವ್ರ ಕೊರತೆಯ ಕಾರಣದಿಂದಾಗಿ ಬೆಂಗಳೂರು ಗ್ರಾಮಾಂತರ ನ್ಯಾಯಾಲಯಗಳಲ್ಲಿನ ಶೇಕಡ 88ರಷ್ಟು ಆಡಳಿತಾತ್ಮಕ ಸಿಬ್ಬಂದಿ ತಮ್ಮ ಮೇಲೆ ಕೆಲಸದ ಹೊರೆ ವಿಪರೀತವಾಗಿದೆ ಎಂದು ಹೇಳಿದ್ದನ್ನು, ಬಹುತೇಕರಿಗೆ ನ್ಯಾಯಾಂಗದಲ್ಲಿ ಕೆಲಸ ಮಾಡುವುದು ಅವರ ಆಯ್ಕೆ ಆಗಿರಲಿಲ್ಲ ಎಂಬುದನ್ನು ವಿಧಿ ಸೆಂಟರ್‌ ಫಾರ್‌ ಲೀಗಲ್‌ ಪಾಲಿಸಿ ಮತ್ತು ‘ದಕ್ಷ್‌’ ನಡೆಸಿದ ವಿಸ್ತೃತ ಸಂದರ್ಶನ ಕಂಡುಕೊಂಡಿದೆ. ಈಗಿನ ನೇಮಕಾತಿ ವ್ಯವಸ್ಥೆಯ ಅಡಿ ಸಿಬ್ಬಂದಿಗೆ ಉತ್ತೇಜನ ಇಲ್ಲದಿರುವುದು, ಕೆಲಸದ ಹೊರೆ ಹೆಚ್ಚಾಗಿರುವುದು ನ್ಯಾಯಾಂಗಕ್ಕೆ ಹಾನಿಯಾಗುವಂತೆ ಇದೆ ಎಂಬುದು ಸ್ಪಷ್ಟ.

ನೇಮಕಾತಿ ಪ್ರಕ್ರಿಯೆಯನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸುವುದು ಕೂಡ ಪರಿಹಾರವಲ್ಲ. ಅವರು ಇಡೀ ಜಿಲ್ಲೆಯ ನ್ಯಾಯಾಂಗದ ಆಡಳಿತಾತ್ಮಕ ಉಸ್ತುವಾರಿಯಾಗಿ, ತಮ್ಮ ಕೋರ್ಟ್‌ನಲ್ಲಿ ನ್ಯಾಯಾಧೀಶ ಕೂಡ ಆಗಿ ಈಗಾಗಲೇ ಕೆಲಸ ನಿಭಾಯಿಸುತ್ತಿದ್ದಾರೆ. ಅವರ ಮೇಲೆ ಇನ್ನಷ್ಟು ಹೊರೆ ಹೊರಿಸಲಾಗದು. ಹಾಗಾದರೆ ಪರಿಹಾರ ಏನು?

ತನ್ನ ಆಡಳಿತಾತ್ಮಕ ಸಿಬ್ಬಂದಿಯ ನೇಮಕಾತಿಯಲ್ಲಿ ರಾಜ್ಯದ ನ್ಯಾಯಾಂಗಕ್ಕೆ ಹೆಚ್ಚಿನ ನಿಯಂತ್ರಣ ಇರಬೇಕಿರುವುದು ಮುಖ್ಯ. ರಾಜ್ಯದಲ್ಲಿನ ಎಲ್ಲ ಕೋರ್ಟ್‌ಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡುವ ಹೊಣೆಗಾರಿಕೆ ಇರುವ ‘ನೇಮಕಾತಿ ಮತ್ತು ತರಬೇತಿ ಸಮಿತಿ’ಯನ್ನು ಹೈಕೋರ್ಟ್‌ ರಚಿಸಬೇಕು. ಕೇಂದ್ರೀಕೃತವಾದ ಒಂದು ನೇಮಕಾತಿ ಪ್ರಾಧಿಕಾರದ ರಚನೆಯಾದರೆ ಎಲ್ಲ ಜಿಲ್ಲೆಗಳ ಸಿಬ್ಬಂದಿ ಕೊರತೆ ಹೈಕೋರ್ಟ್‌ನ ಗಮನದಲ್ಲಿರುತ್ತದೆ. ಅಷ್ಟೇ ಅಲ್ಲ, ಮಾನವ ಸಂಪನ್ಮೂಲದ ಅಗತ್ಯಗಳಿಗೆ ಅನುಗುಣವಾಗಿ ನ್ಯಾಯಾಂಗದ ಬಜೆಟ್ಟನ್ನು ಹಂಚಿಕೆ ಮಾಡಲು ಆಗುತ್ತದೆ. ಇಂತಹ ಸಮಿತಿಯನ್ನು ಹೊಂದುವುದರಿಂದ, ಈಗ ಎಫ್‌ಡಿಎ ಮತ್ತು ಎಸ್‌ಡಿಎ ಅಲ್ಲದೆ ಇತರ ಸಿಬ್ಬಂದಿಯ ನೇಮಕಾತಿ ಹೊಣೆ ಹೊತ್ತಿರುವ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಮೇಲಿನ ಹೊರೆ ಕೂಡ ತಗ್ಗುತ್ತದೆ.

ಇಂತಹ ಸಮಿತಿಯು ನೇಮಕಾತಿಯನ್ನು ಕಾಲಕಾಲಕ್ಕೆ ವ್ಯವಸ್ಥಿತವಾಗಿ ನಡೆಯುವುದನ್ನು ನೋಡಿಕೊಳ್ಳುವುದಷ್ಟೇ ಅಲ್ಲದೆ, ಸಿಬ್ಬಂದಿಯ ತರಬೇತಿಯ ಜವಾಬ್ದಾರಿಯನ್ನೂ ಹೊತ್ತಿರುತ್ತದೆ. ಸಮಿತಿಯು, ಪ್ರತಿಭೆ ಆಧರಿಸಿದ ಮುಂಬಡ್ತಿ ವ್ಯವಸ್ಥೆಯನ್ನು ಜಾರಿಗೆ ತಂದು, ಬಡ್ತಿ ‍ಪಡೆದು ಆಡಳಿತಾತ್ಮಕ ಸಿಬ್ಬಂದಿ ಹೈಕೋರ್ಟ್‌ಗೆ ಹೋಗುವಂತೆ ಕೂಡ ಮಾಡಬಹುದು. ಇದರಿಂದ ಉತ್ತಮವಾಗಿ ಕೆಲಸ ಮಾಡುವವರಿಗೆ ಉತ್ತೇಜನ ದೊರೆತಂತೆ ಆಗುತ್ತದೆ.

ನ್ಯಾಯಾಂಗದ ಹೊರೆ ಹೆಚ್ಚುತ್ತಲೇ ಇದೆ, ಸಮಯ ಹಾಗೂ ಹಣಕಾಸು ಸಂಪನ್ಮೂಲಗಳು ಸೀಮಿತವಾಗಿವೆ. ಹಾಗಾಗಿ, ಈಗಿರುವ ವ್ಯವಸ್ಥೆಯಲ್ಲಿನ ಸಮಸ್ಯೆಯನ್ನು ಹೆಚ್ಚಿಸುವ ಯಾವುದೇ ವಿಚಾರದ ಬಗ್ಗೆ ನಾವು ಹೆಚ್ಚಿನ ಗಮನ ನೀಡಬೇಕು. ಈಗಿರುವ ನೇಮಕಾತಿ ಪ್ರಕ್ರಿಯೆ ಹಾಗೂ ನ್ಯಾಯಾಂಗದ ಚಟುವಟಿಕೆಗಳಲ್ಲಿ ಮುಖ್ಯ ಪಾತ್ರ ವಹಿಸುವ ಆಡಳಿತಾತ್ಮಕ ಸಿಬ್ಬಂದಿಗೆ ತರಬೇತಿ ನೀಡುವ ವಿಚಾರಗಳಲ್ಲಿ ಹೊಸ ಆಲೋಚನೆಗಳನ್ನು ತರುವುದು ನ್ಯಾಯಾಂಗದ ಸುಧಾರಣೆಯ ಅಗತ್ಯ ಅಂಶ.

ಲೇಖಕಿಯರು: ದೀಪಿಕಾ ಅವರು ‘ವಿಧಿ’ ಸಂಸ್ಥೆಯಲ್ಲಿ ಸೀನಿಯರ್‌ ರೆಸಿಡೆಂಟ್‌ ಫೆಲೊ
ಶ್ರುತಿ ಅವರು ‘ದಕ್ಷ್’ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು