ಮಂಗಳವಾರ, ಸೆಪ್ಟೆಂಬರ್ 22, 2020
22 °C
ಭಾಷೆ, ಸಾಹಿತ್ಯ ಎದುರಿಸುತ್ತಿರುವ ಅಸಲಿ ಪ್ರಶ್ನೆಗಳಿಗೆ ಮುಖಾಮುಖಿಯಾಗುವ ವೇದಿಕೆಯಾಗಲಿ...

ವಿಶ್ಲೇಷಣೆ | ವ್ಯಕ್ತಿಪೂಜೆ ಮತ್ತು ಸಾಹಿತ್ಯ ಪ್ರವರ್ಧನೆ

ಟಿ.ಎನ್‌.ವಾಸುದೇವಮೂರ್ತಿ Updated:

ಅಕ್ಷರ ಗಾತ್ರ : | |

‘ಆರೇಳು ಶ್ರೇಷ್ಠ ವ್ಯಕ್ತಿಗಳನ್ನು ಪಡೆಯಲು ಹಾಗೂ ಅವರ ಸುತ್ತ ಸದಾ ನೆರೆದಿರಲು ಪ್ರಕೃತಿ ಪಟ್ಟ ಪರಿಶ್ರಮವೇ- ಈ ಜನಸಮೂಹ’ ಎಂದು ಜರ್ಮನ್ ಚಿಂತಕ ಫ್ರೆಡರಿಕ್ ನೀಷೆ ಹೇಳುತ್ತಾನೆ. ವ್ಯಕ್ತಿಪೂಜೆಯಿಂದ ಮತ್ತು ಶ್ರೇಷ್ಠತೆಯ ಉಪಾಸನೆಯಿಂದ ಬಿಡುಗಡೆ ಹೊಂದಿದಾಗ ಮಾತ್ರ ಬದುಕಿನ ಅರ್ಥ ಅಥವಾ ಅರ್ಥಶೂನ್ಯತೆ ನಮ್ಮ ಅರಿವಿಗೆ ನಿಲುಕಬಲ್ಲದು.

ಕನ್ನಡದ ಪ್ರಮುಖ ಸಾಹಿತಿಗಳ ಸುತ್ತಲೂ ಈ ಜನಸಮೂಹ ಅಥವಾ ಭಕ್ತಗಣ ಸದಾ ನೆರೆದಿರುತ್ತಿತ್ತು. ಆದರೆ, ಹೀಗೆ ಭಕ್ತಗಣ ನೆರೆದು ಎಲ್ಲೆಲ್ಲಿ ವ್ಯಕ್ತಿಪೂಜೆ ಪ್ರಾರಂಭವಾಗಿದೆಯೋ ಅಲ್ಲೆಲ್ಲ ಸ್ವಾರ್ಥ, ಸೋಗಲಾಡಿತನ, ಜಾತಿ ರಾಜಕಾರಣ ರಾರಾಜಿಸಿ, ಆ ಸಾಹಿತಿಗಳ ನಿಜವಾದ ಕೊಡುಗೆ ಕುರಿತ ಸಂವಾದಗಳು ಅಂತಹ ಗುಂಪುಗಳ ನಡುವೆ ಗೌಣವಾದವು. ಇಂತಹ ಭಜನಾ ಮಂಡಲಿಯಿಂದ ದೂರವಿದ್ದು ತಮ್ಮ ಪಾಡಿಗೆ ತಾವು ಸಾಹಿತ್ಯ ಸೇವೆ ಮಾಡುತ್ತಿದ್ದವರಷ್ಟೇ ಆ ಸಾಹಿತಿಗಳ ಕೊಡುಗೆಯನ್ನು ಕಂಡಿದ್ದಾರೆ ಮತ್ತು ನಾಡಿನ ಜನರಿಗೂ ಅರ್ಥಪೂರ್ಣವಾಗಿ ಕಂಡರಿಸಿದ್ದಾರೆ.

ವ್ಯಕ್ತಿಪೂಜೆ ಒಂದು ಸಂಸ್ಕೃತಿಯ ಅವನತಿಯ ಸೂಚನೆಯಾಗಿದೆ. ಇಂತಹ ಅವನತಿಯ ಬಾಹ್ಯಲಕ್ಷಣಗಳು ಎಲ್ಲೇ ಕಂಡರೂ ಕನ್ನಡ ಸಂವೇದನೆ ಅದರ ವಿರುದ್ಧ ಬಂಡೆದ್ದುದನ್ನು ನಮ್ಮ ಪರಂಪರೆಯಲ್ಲಿ ಕಾಣಬಹುದು. ಆದರೆ, ಒಂದು ಸಂಸ್ಕೃತಿ ಇದರಿಂದ ಹೊರಬರಬೇಕೆಂದರೆ ರೋಗದ ಮೂಲವನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಬೇಕಲ್ಲದೆ, ರೋಗದ ಬಾಹ್ಯಲಕ್ಷಣಗಳನ್ನು ಕಂಡು ಸುಮ್ಮನೆ ಬಂಡೆದ್ದರೆ ಪ್ರಯೋಜನವಿಲ್ಲ. ಅದೇನೇ ಇರಲಿ, ವ್ಯಕ್ತಿಯನ್ನು ಆರಾಧಿಸುವ ಪ್ರವೃತ್ತಿಯನ್ನು ಕಂಡು ಸಿಡಿಮಿಡಿಯಾಗುವ ನಮ್ಮ ಸಾಂಸ್ಕೃತಿಕ ನಾಯಕರ ಸ್ವಭಾವದಲ್ಲಿ ನಮಗೆ ಅವರ ನೈತಿಕ ಎಚ್ಚರದ ಪರಿಚಯವಾಗುತ್ತದೆ.

ಈ ಹಿನ್ನೆಲೆಯಲ್ಲಿ ಕನ್ನಡದ ಚಿಂತಕರೂ ಪ್ರಾಧ್ಯಾಪಕರೂ ಆಗಿದ್ದ ಕಿ.ರಂ.ನಾಗರಾಜ ಅವರು ವ್ಯಕ್ತಿಪೂಜೆಯನ್ನು ವಿರೋಧಿಸುವ ವಿಷಯದಲ್ಲಿ ತಮ್ಮ ಸಮಕಾಲೀನರಾದ ಉಳಿದೆಲ್ಲರಿಗಿಂತಲೂ ಒಂದು ಕೈ ಮೇಲಾಗಿದ್ದರು. ಅವರಿಗೆ ಅರವತ್ತು ವರ್ಷ ತುಂಬಿದಾಗ ಅವರ ಹೆಸರಿನಲ್ಲಿ ಒಂದು ಅಭಿನಂದನಾ ಗ್ರಂಥ ತರಬೇಕೆಂದು, ಅವರಿಗೊಂದು ಸನ್ಮಾನ ಕಾರ್ಯಕ್ರಮ ಆಯೋಜಿಸಬೇಕೆಂದು, ಅವರ ಶಿಷ್ಯರು, ಸ್ನೇಹಿತರು ಇನ್ನಿಲ್ಲವೆಂಬಷ್ಟು ಹರಸಾಹಸ ಮಾಡಿದರು. ತಮ್ಮನ್ನು ಭೇಟಿ ಮಾಡಲೆಂದು ಆಯೋಜಕರು ಬರುತ್ತಿದ್ದಾರೆ ಎಂಬ ಸೂಚನೆ ಸಿಗುತ್ತಲೇ ಅವರು ತಾವಿದ್ದ ಸ್ಥಳದಿಂದ ನಾಪತ್ತೆಯಾಗಿಬಿಡುತ್ತಿದ್ದರು. ಮನೆಯಲ್ಲೂ ಸಿಗುತ್ತಿರಲಿಲ್ಲ, ಫೋನಿಗೂ ಸಿಗುತ್ತಿರಲಿಲ್ಲ. ಕೊನೆಗೂ ಕಿರಂ ಅವರನ್ನು ಒಪ್ಪಿಸಲು, ಅವರ ಹೆಸರಿನಲ್ಲಿ ಒಂದು ಸ್ಮರಣ ಸಂಚಿಕೆ ತರಲು ಆಯೋಜಕರಿಗೆ ಅವರು ಬದುಕಿದ್ದಷ್ಟೂ ಕಾಲ ಸಾಧ್ಯವಾಗಲೇ ಇಲ್ಲ.

ಇದು, ಕಿರಂ ಒಬ್ಬರ ಕಥೆಯಲ್ಲ. ಕನ್ನಡದ ಬಹುಪಾಲು ಮುಖ್ಯ ಸಾಹಿತಿಗಳಲ್ಲೂ ವಿದ್ವಾಂಸರಲ್ಲೂ ಈ ಸಂಕೋಚದ, ದಾಕ್ಷಿಣ್ಯದ ಪ್ರವೃತ್ತಿಯನ್ನು ಕಾಣಬಹುದು. ಕನ್ನಡದ ಮೊದಲ ಪ್ರೊಫೆಸರ್ ಆದ ಟಿ.ಎಸ್.ವೆಂಕಣ್ಣಯ್ಯನವರು ಕನ್ನಡ ಅಧ್ಯಯನ, ಸಂಶೋಧನೆ ಮತ್ತು ವಿಮರ್ಶೆಗಳಿಗೆ ಒಂದು ಹೊಸ ಮಾರ್ಗವನ್ನು ಹಾಕಿಕೊಟ್ಟವರು. ಕುವೆಂಪು, ಕೆ.ಎಸ್.ನರಸಿಂಹ ಸ್ವಾಮಿ, ಎಸ್.ವಿ.ಪರಮೇಶ್ವರ ಭಟ್ಟ ಮುಂತಾದ ಅಸಂಖ್ಯ ಸಾಹಿತಿಗಳನ್ನು ಬೆಳೆಸಿದವರು. ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ವೆಂಕಣ್ಣಯ್ಯನವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದಾಗಲೆಲ್ಲ ಅವರು ‘ನನಗಿಂತಲೂ ಹಿರಿಯರಾದ ಇನ್ನೂ ಬೇಕಾದಷ್ಟು ಸಾಹಿತಿಗಳಿದ್ದಾರಲ್ಲ, ಮೊದಲು ಅವರ ಆಯ್ಕೆಯಾಗಲಿ’ ಎಂದು ನೆವ ಹೇಳಿ ಪ್ರತಿವರ್ಷ ಪರಿಷತ್ತಿನವರ ಕೋಟಲೆಯನ್ನು ನಿವಾರಿಸಿಕೊಳ್ಳುತ್ತಿದ್ದರಂತೆ. ಕೊನೆಗೆ ಅವರ ಸರದಿ ಬರುವ ಮುನ್ನವೇ ಅವರು ಇಹಲೋಕ ಯಾತ್ರೆ ಮುಗಿಸಿ ಹೊರಟು ಹೋಗಿದ್ದರು.

ನಮ್ಮ ಸಾಹಿತಿಗಳ ಈ ಸ್ವಭಾವದಲ್ಲಿ ವಿನಯ, ನೈತಿಕತೆ ಮುಂತಾದ ವ್ಯಕ್ತಿನಿಷ್ಠ ಮೌಲ್ಯಗಳನ್ನು ಪ್ರದರ್ಶಿಸಬೇಕೆಂಬ ಉದ್ದೇಶಕ್ಕಿಂತಲೂ ಹೆಚ್ಚಾಗಿ, ಸಾಹಿತಿಗಿಂತ ಅವನು ರಚಿಸಿದ ಸಾಹಿತ್ಯ ಮುಖ್ಯ, ವ್ಯಕ್ತಿಗಿಂತ ಅವನನ್ನು ಸೃಷ್ಟಿಸಿದ ಸಂಸ್ಕೃತಿ ಮುಖ್ಯ ಎಂಬ ಉದಾತ್ತ ತಿಳಿವಳಿಕೆ ಕಾಣಿಸುತ್ತದೆ.

ಹಿಂದೆಲ್ಲ ನಾಡಿನ ಯಾವುದೇ ಮೂಲೆಯಲ್ಲಿ ಕುವೆಂಪು, ಬೇಂದ್ರೆ, ಕಾರಂತ, ರಾಜರತ್ನಂ ಮುಂತಾದ ಸಾಹಿತಿಗಳ ಭಾಷಣವೋ ಕಾವ್ಯವಾಚನವೋ ನಡೆದರೆ ಸಭಾಂಗಣ ಕಿಕ್ಕಿರಿದು ತುಂಬಿರುತ್ತಿತ್ತು. ಆದರೆ ಇಂದು ಸಾಹಿತ್ಯ ವಲಯದ ಪರಿಸ್ಥಿತಿ ಕರುಣಾಜನಕವಾಗಿದೆ.
ಕಾವ್ಯವಾಚನದಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಸಭಿಕರಿಲ್ಲದೆ ಭಣಗುಟ್ಟುತ್ತಿರುತ್ತವೆ. ಇಂತಹ ಸನ್ನಿವೇಶದಲ್ಲಿ ಕಿರಂ ಅಂಥವರ ನೆನಪಿನಲ್ಲಿ ನಾಡಿನ ನೂರಾರು ಸಾಹಿತಿಗಳು, ಸಾಹಿತ್ಯ ಪರಿಚಾರಕರು, ಕವಿಪುಂಗವರು ಪ್ರತಿವರ್ಷ ಒಂದೆಡೆ ಸೇರುತ್ತಾರೆ. ‘ಈ ನೆವದಲ್ಲಾದರೂ ನಾವು ಒಂದೆಡೆ ಸೇರಿ ನಮ್ಮ ಕಾವ್ಯಕ್ಕೆ ಒಂದಷ್ಟು ಕೇಳುಗರನ್ನು ಕ್ರೋಡೀಕರಿಸಿದರೆ ತಪ್ಪೇನು?’ ಎಂದು ವಾದಿಸುತ್ತಾರೆ. ಕಿರಂ ಬಳಗಕ್ಕೊಂದು ವೈಶಿಷ್ಟ್ಯ ಇದೆ. ಅಲ್ಲಿ ಜಾತಿ, ಪ್ರದೇಶ, ಅಂತಸ್ತು, ವಿದ್ಯಾರ್ಹತೆ, ಧರ್ಮ, ಐಡಿಯಾಲಜಿಗಳ ಭೇದವಿಲ್ಲದೆ ಎಲ್ಲ ನಮೂನೆಯ ಸಾಹಿತ್ಯ ಜೀವಿಗಳನ್ನೂ ಕಾಣಬಹುದು. ಕಿರಂ ಪ್ರೋತ್ಸಾಹಿಸಿ ಬೆಳೆಸಿದ ಲೆಕ್ಕವಿಲ್ಲದಷ್ಟು ಕವಿಗಳು, ಸಾಹಿತಿಗಳು ನಾಡಿನುದ್ದಗಲಕ್ಕೂ ಪಸರಿಸಿದ್ದಾರೆ.

ಕೇಳುಗರನ್ನು ಗುಂಪುಗೂಡಿಸಿ ಕಾವ್ಯಪ್ರೀತಿಯನ್ನು ಹಂಚಿಕೊಳ್ಳುವುದು ಖಂಡಿತವಾಗಿಯೂ ತಪ್ಪಲ್ಲ. ಆದರೆ ಇಂತಹ ಕಾರ್ಯಕ್ರಮಗಳು ಬರಿದೇ ಕಾವ್ಯವನ್ನು ಕೇಳುವ– ಕೇಳಿಸುವ ಸಂಭ್ರಮದೊಂದಿಗೆ ಪರ್ಯವಸಾನವಾಗಿಬಿಟ್ಟರೆ ಪ್ರಯೋಜನವಿಲ್ಲ. ಕಿರಂ ಪ್ರಾರಂಭಿಸಿದ ಅಹೋರಾತ್ರಿಯ ಕಾರ್ಯಕ್ರಮಕ್ಕೊಂದು ಹಿನ್ನೆಲೆ ಇದೆ. ಅವರು ಬದುಕಿದ್ದಾಗ ‘ಬೆಂಗಳೂರು ಹಬ್ಬ’ದಂತಹ ಐಷಾರಾಮಿ ಹಬ್ಬಗಳನ್ನು ತೀವ್ರವಾಗಿ ವಿರೋಧಿಸಿದ್ದರು. ಅಂತಹ ಬೆಳವಣಿಗೆಗಳನ್ನು ಸಾಂಸ್ಕೃತಿಕ ನೆಲೆಯಿಂದ ಎದುರಿಸಬೇಕೆಂಬ ಉದ್ದೇಶದಿಂದ ಮಂಟೇಸ್ವಾಮಿಯ ಹೆಸರಿನಲ್ಲಿ ‘ಕಾವ್ಯಶಿವರಾತ್ರಿ’ ಹಬ್ಬವನ್ನು ಪ್ರಾರಂಭಿಸಿದ್ದರು. ಅವರು ಬರೀ ಮಂಟೇಸ್ವಾಮಿಯ ಸ್ಮರಣೆಗಾಗಿ ಆ ಕಾರ್ಯಕ್ರಮವನ್ನು ಆಯೋಜಿಸಿರಲಿಲ್ಲ. ಹಾಗೆ ಆಯೋಜಿಸುವ ಅವಶ್ಯಕತೆಯೂ ಅವರಿಗಿರಲಿಲ್ಲ. ಏಕೆಂದರೆ ಅವರ ಮನಸ್ಸಿನಲ್ಲಿ ಮಂಟೇಸ್ವಾಮಿ ಸದಾಕಾಲ ನೆಲೆಸಿಯೇ ಇರುತ್ತಿದ್ದ. ಇದು ಅವರನ್ನು ಹತ್ತಿರದಿಂದ ಕಂಡಿದ್ದ ಅವರ ಶಿಷ್ಯರೆಲ್ಲರಿಗೂ ಚೆನ್ನಾಗಿಯೇ ಗೊತ್ತಿತ್ತು.

ಕಿರಂ ಪ್ರಣೀತವಾದ ಅಹೋರಾತ್ರಿಯ ಕಾರ್ಯಕ್ರಮವನ್ನು ಅವರ ಮರಣಾನಂತರವೂ ಅವರ ಶಿಷ್ಯಂದಿರು ಮುಂದುವರಿಸುತ್ತಿದ್ದಾರೆ. ಆದರೆ ಅವರಿಗೆ ಸಾಹಿತ್ಯ ಪ್ರೇಮಿಗಳನ್ನೆಲ್ಲ ಒಂದೆಡೆ ಸೇರಿಸಬೇಕು ಎಂಬ ಅಲ್ಪತೃಪ್ತಿಗಿಂತಲೂ ಮಿಗಿಲಿನ ಹೊಣೆಗಾರಿಕೆ ಇದೆ. ಸಾಹಿತ್ಯ ಪ್ರೇಮಿಗಳನ್ನು ಹೊಸದಾಗಿ ಸೃಷ್ಟಿಸಬೇಕಾದ ಹೊಣೆಗಾರಿಕೆ ಇಂದು ಅವರ ಹೆಗಲ ಮೇಲಿದೆ. ಯಾವ ಆಧುನಿಕ ಶಕ್ತಿಗಳು ಇಂದು ಸಾಹಿತ್ಯ ಪ್ರೀತಿಯನ್ನು ಬತ್ತಿಸುತ್ತಿವೆ, ಕನ್ನಡ ಭಾಷೆಯನ್ನು ಸೊರಗಿಸುತ್ತಿವೆ ಎಂಬುದನ್ನು ಕಂಡುಕೊಳ್ಳುವುದಕ್ಕೆ ಮತ್ತು ಆ ದಾಳಿಯನ್ನು ದಿಟ್ಟತನದಿಂದ ಎದುರಿಸುವುದಕ್ಕೆ ಇಂತಹ ಕಾರ್ಯಕ್ರಮಗಳು ಒಂದು ವೇದಿಕೆಯಾಗಬೇಕಾಗಿದೆ. ಆಗಮಾತ್ರ ಅಸಲಿಯಾದ ಕನ್ನಡದ ಕೆಲಸ ಪ್ರಾರಂಭವಾಗುತ್ತದೆ. ಇಲ್ಲದೇ ಹೋದರೆ ಈ ಕನ್ನಡದ ಕೆಲಸ ಕ್ರಮೇಣ ವಿಸ್ಮೃತಿಗೆ ಸರಿದು, ಇಂತಹ ಸಾಹಿತ್ಯಿಕ ಚಟುವಟಿಕೆಗಳು ಬರೀ ಸಂಭ್ರಮದ ಕಾರ್ಯಕ್ರಮಗಳಾಗಿಬಿಡುವ ಅಪಾಯವಿದೆ.

ಇಂದು ಕಿರಂ ಬದುಕಿದ್ದಿದ್ದರೆ ತಮ್ಮ ‘ಕಾವ್ಯಶಿವರಾತ್ರಿ’ ಯನ್ನು ತಮ್ಮ ಶಿಶುಮಕ್ಕಳು ಈ ರೀತಿ ನಡೆಸಿಕೊಂಡು ಹೋಗುತ್ತಿರುವುದನ್ನು ಕಂಡು ಖುಷಿಪಡುತ್ತಿದ್ದರೋ ಆಕ್ಷೇಪಿಸುತ್ತಿದ್ದರೋ ತಿಳಿಯದು. ಆದರೆ ಇಂತಹ ಕಾರ್ಯಕ್ರಮಗಳ ಮೂಲಕ ಕನ್ನಡದ ಮುಂದಿರುವ ಅಸಲಿ ಪ್ರಶ್ನೆಗಳಿಗೆ ಶಿಷ್ಯರನ್ನು ಮುಖಾಮುಖಿಯಾಗಿಸಲು ಖಂಡಿತವಾಗಿ ಪ್ರಯತ್ನಿಸುತ್ತಿದ್ದರು, ಇದಕ್ಕೊಂದು ಚಳವಳಿಯ ರೂಪ ನೀಡಿರುತ್ತಿದ್ದರು. ಕನ್ನಡದ ಉಳಿವು ಕೇವಲ ಸಿದ್ಧಾಂತದ ಮಾತಲ್ಲ, ರಾಜಕೀಯ ಮೇಲಾಟದ ಸಂಗತಿಯಲ್ಲ. ಮುಂಬರುವ ತಲೆಮಾರು ಕನ್ನಡವನ್ನೇ ಕಲಿಯದಿದ್ದರೆ ಈ ಕವಿಗಳು ಯಾರಿಗಾಗಿ ಕಾವ್ಯ ರಚಿಸಬೇಕು, ಯಾರಿಗಾಗಿ ಸಾಹಿತ್ಯಿಕ ಕಾರ್ಯಕ್ರಮ ಆಯೋಜಿಸಬೇಕು, ಯಾರ ಮುಂದೆ ಕಾವ್ಯವಾಚನ ಮಾಡಬೇಕು? ಬರಹಗಾರರ ಜೀವನ್ಮರಣದ ಪ್ರಶ್ನೆ ಕಿರಂ ಪ್ರಾರಂಭಿಸಿದ ಅಹೋರಾತ್ರಿಯ ಕಾರ್ಯಕ್ರಮಗಳ ಹಿಂದಿದ್ದ ಮೂಲಪ್ರೇರಣೆಯಾಗಿತ್ತು.

ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.