ಸೋಮವಾರ, ಏಪ್ರಿಲ್ 6, 2020
19 °C
ಮಕ್ಕಳಲ್ಲಿ ಗ್ರಹಿಕೆಯ ಸೂಕ್ಷ್ಮತೆಯನ್ನು ರೂಢಿಸುವ ಬಗೆ ಹೇಗೆ?

ಕಲಿಕೆಯಲ್ಲಿ ಆಲಿಸುವಿಕೆಯ ಕೊರತೆ

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

Prajavani

ಪುರಾತನ ಭಾರತದ ಗುರುಕುಲ ಶಿಕ್ಷಣವನ್ನು, ರೋಮ್, ಅರಬ್ ಮತ್ತಿತರೆ ನಾಗರಿಕತೆಗಳನ್ನು ಅಭ್ಯಾಸ ಮಾಡಿ ನಾರಾಯಣ ಶೇವಿರೆ ಅವರು ಇತ್ತೀಚೆಗೆ ‘ವಿಹಿತ ವಿದ್ಯಾ’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಕೃತಿಯಲ್ಲಿ ಅವರು ಪ್ರಸ್ತಾಪಿಸಿರುವ, ಆಲಿಸುವ ಸಾಮರ್ಥ್ಯದ ಕೊರತೆಯ ವಿಚಾರ ಇಂದಿನ ಶೈಕ್ಷಣಿಕ ಸನ್ನಿವೇಶದಲ್ಲಿ ಬಹು ಮಹತ್ವದ್ದು.

ಸಾವಿರಾರು ವರ್ಷಗಳ ಕಾಲ ವೇದ, ಉಪನಿಷತ್ತುಗಳು, ಅರಣ್ಯಕಗಳನ್ನೆಲ್ಲ ಆಲಿಸಿ ನೆನಪಿರಿಸಿಕೊಂಡು ಉಳಿಸಿಕೊಂಡು ಬರುವುದರಲ್ಲಿ ಮನುಷ್ಯರು ಹೊಂದಿದ್ದ ಸಾಮರ್ಥ್ಯವನ್ನು ಲಿಪಿಯ ಆವಿಷ್ಕಾರವು ಕಡಿಮೆಗೊಳಿಸಿತು. ಲಿಪಿಯು ಓದಿ ಗ್ರಹಿಸುವ ಅವಕಾಶವನ್ನು ಸೃಷ್ಟಿಸಿದ್ದೇನೋ ಹೌದು. ಆದರೆ, ಕೇಳಿ ಗ್ರಹಿಸುವಾಗ ಇರುವ ಸೂಕ್ಷ್ಮತೆ, ಓದಿ ಗ್ರಹಿಸುವಾಗ ಕಡಿಮೆಯಾಗುತ್ತದೆ.

ಸೂಕ್ಷ್ಮತೆ ಕಡಿಮೆ ಆದಾಗ ಏನಾಗುತ್ತದೆ? ಒಂದು ತರಗತಿಯ ವಿದ್ಯಾರ್ಥಿಗಳ ಆಲಿಸುವಿಕೆಯ ಸಾಮರ್ಥ್ಯವನ್ನು ಪ್ರಾಯೋಗಿಕವಾಗಿ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಗೆ ಒಳಪಡುವವರಿಗೆ ‘ನೀವು ಪರೀಕ್ಷೆಗೆ ಒಳಪಡುತ್ತೀರಿ’ ಎಂದು ತಿಳಿಸಿಯೇ ನಡೆಸಿದ ಪರೀಕ್ಷೆಯಾಗಿತ್ತು. ಅಲ್ಲದೆ ಇದು ಕೇವಲ ಮೂರು ವಾಕ್ಯಗಳನ್ನು ಇರಿಸಿಕೊಂಡು ನಡೆಸಿದ ಪರೀಕ್ಷೆಯಾಗಿತ್ತು. ನಲವತ್ತೈದು ವಿದ್ಯಾರ್ಥಿಗಳಿರುವ ಒಂದು ತರಗತಿಯಲ್ಲಿ ಆಲಿಸುವ ಸಾಮರ್ಥ್ಯ ಸೊನ್ನೆಯಾಗಿದ್ದರೆ, ನಲವತ್ತೆರಡು ವಿದ್ಯಾರ್ಥಿಗಳಿರುವ ಇನ್ನೊಂದು ತರಗತಿಯಲ್ಲಿ ಆಲಿಸುವ ಸಾಮರ್ಥ್ಯ ಮೂರು ಆಗಿತ್ತು.

ಹಾಗಿದ್ದರೆ ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತಿದ್ದ ಅಷ್ಟೂ ಸಮಯ ನಿರುಪಯುಕ್ತವಲ್ಲವೇ? ಪಾಠ ಬೋಧನೆ ಮಾಡಿದ್ದೆಲ್ಲವೂ ಕೇವಲ ವೇತನ ಪಡೆಯುವ ಅರ್ಹತೆಗಾಗಿಯೇ? ಹಾಗೆ ಹೇಳಲು ಬರುವುದಿಲ್ಲ. ಏಕೆಂದರೆ ಆಲಿಸುವ ಸಾಮರ್ಥ್ಯದ ಕೊರತೆ ಎಂದರೆ ಶಬ್ದ ಕಿವಿಗೆ ಬೀಳುವುದಿಲ್ಲವೆಂದಲ್ಲ. ರಸ್ತೆಯಲ್ಲಿ ನಡೆದು ಹೋಗುತ್ತಿರಬೇಕಾದರೆ ಏನೇನೋ ಶಬ್ದಗಳು ಕೇಳಿಸುತ್ತವೆ. ಮೈಕ್‌ನಲ್ಲಿ ಬರುವ ಶಬ್ದವಂತೂ ಕಿವಿಗಡಚಿಕ್ಕುವಂತೆ ಕೇಳಿಸುತ್ತದೆ. ಆದರೂ ಮೈಕ್‌ನಲ್ಲಿ ಹೇಳಿದ ವಿಷಯವನ್ನು ಗ್ರಹಿಸಿರುವುದಿಲ್ಲ. ಈ ರೀತಿಗಿಂತ ಸ್ವಲ್ಪ ಉತ್ತಮ ಮಟ್ಟದ ಆಲಿಸುವಿಕೆ ತರಗತಿಯಲ್ಲಿಯೂ ನಡೆಯುತ್ತದೆ. ಆದರೆ ಅದು ವಿಷಯವನ್ನು ಸಮರ್ಥವಾಗಿ ಗ್ರಹಿಸುವ ಮಟ್ಟದ ಆಲಿಸುವಿಕೆಯಾಗಿರುವುದಿಲ್ಲ. ಆದರೆ ನಿರಂತರವಾಗಿ ಕೇಳುತ್ತಾ ಕೇಳುತ್ತಾ, ಓದಿದಾಗ ವಿಷಯ ಸ್ವಲ್ಪ ಚೆನ್ನಾಗಿ ಗ್ರಹಿಸಲ್ಪಡಲು ಈ ರೂಪದ ಆಲಿಸುವಿಕೆಯೂ ಸಹಾಯವನ್ನು ಮಾಡುತ್ತದೆ.

ಆಲಿಸುವಿಕೆಯ ಸಾಮರ್ಥ್ಯದ ಕೊರತೆಯು ಪೋಷಕರ; ಅಷ್ಟೇ ಏಕೆ ಸ್ವತಃ ವಿದ್ಯಾರ್ಥಿಗಳ ಗಮನಕ್ಕೂ ಬರುತ್ತದೆ. ಏನಾದರೂ ಕೇಳಿದಾಗ ಅದಕ್ಕೆ ಸಮರ್ಪಕ ಪ್ರತಿಕ್ರಿಯೆ ಬಾರದಿದ್ದರೆ ಆಲಿಸುವಿಕೆಯ ಸಾಮರ್ಥ್ಯ ಕುಸಿದಿದೆ ಎಂದು ಅರ್ಥ. ಅಂದಮಾತ್ರಕ್ಕೆ ಅಂಕಗಳು ಬರುತ್ತಿಲ್ಲವೆಂದಲ್ಲ. ಅಂಕಗಳು ಬರುತ್ತವೆ. ವಾಕ್ಯಗಳನ್ನು ಓದಿ ಓದಿ ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಬರೆಯುವುದರಿಂದ ಅಂಕಗಳು ಬರುತ್ತವೆ. ಆದರೆ ಅಂಕವನ್ನು ತಂದುಕೊಟ್ಟ ವಾಕ್ಯವನ್ನು ವಿವರಿಸಿ ಎಂದರೆ ವಿವರಿಸಲು ಆಗುವುದಿಲ್ಲ. ಏಕೆಂದರೆ ಈ ಪ್ರಕ್ರಿಯೆಯಲ್ಲಿ ಪರೀಕ್ಷೆ ಮುಗಿಯುವ ತನಕವಾದರೂ ನೆನಪಿನಲ್ಲಿರುವುದು ವಾಕ್ಯಗಳೇ ಹೊರತು ವಾಕ್ಯಗಳು ಹೇಳುವ ವಿಷಯಗಳಲ್ಲ. ಅಂದರೆ ಕಲಿಕೆ ನಡೆಯದೆಯೇ ಅಂಕಗಳು ಬಂದಿವೆ ಎಂದು ಅರ್ಥ.

ಆಲಿಸುವಿಕೆಯ ಸಾಮರ್ಥ್ಯ ಕುಸಿತದ ಹಿಂದೆ ಮನುಷ್ಯನ ಸೂಕ್ಷ್ಮಗ್ರಹಣದ ಶಕ್ತಿ ವಿಪರೀತ ಕುಸಿದಿರುವುದರ ಕಾರಣವಿದೆ. ಗ್ರಹಿಸುವ ಶಕ್ತಿ ಕುಸಿದಿರುವುದರಿಂದಾಗಿಯೇ ಕೇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮಕ್ಕಳಲ್ಲಿ‌ ಮಾತ್ರವಲ್ಲ; ಇಡೀ ಸಮಾಜದಲ್ಲಿಯೇ ಸೂಕ್ಷ್ಮತೆಯ ಕುಸಿತ ದೊಡ್ಡ ಪ್ರಮಾಣದಲ್ಲಿ ಆಗಿದೆ. ಭಾಷೆಯ ಬಳಕೆಯಲ್ಲಿ ಆಗುತ್ತಾ ಹೋಗುವ ತೀಕ್ಷ್ಣತೆಯು ಸೂಕ್ಷ್ಮತೆಯ ಕುಸಿತವನ್ನೂ ಸೂಚಿಸುತ್ತದೆ. ‘ನೀನು ಒಳ್ಳೆಯವನಲ್ಲ’ ಎಂದಾಗ ಆ ಮಾತು ಯಾವ ಪರಿಣಾಮವನ್ನೂ ಬೀರದಿದ್ದರೆ, ‘ನೀನು ದುಷ್ಟ’ ಎಂದು ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆ ಮಾತೂ ಪರಿಣಾಮ ಬೀರದಿದ್ದರೆ ಇನ್ನೂ ಕೆಟ್ಟ ಮಾತು ಪ್ರಯೋಗವಾಗುತ್ತದೆ. ಮಾತೇ ಪರಿಣಾಮ ಬೀರಲು ಸೋತಾಗ ಕೈ ಮುಂದೆ ಬರುತ್ತದೆ. ಹಾಗಿದ್ದರೆ, ‘ನೀನು ಒಳ್ಳೆಯವನಲ್ಲ’ ಎನ್ನುವ ಮಾತು ಯಾಕೆ ಪರಿಣಾಮ ಬೀರಲಿಲ್ಲ? ಏಕೆಂದರೆ ಮನುಷ್ಯರ ಸೂಕ್ಷ್ಮತೆಯು ಕುಸಿದಿದೆ.

ಸೂಕ್ಷ್ಮತೆಯ ಕುಸಿತದ ಹಿಂದೆ ಯಂತ್ರ ನಾಗರಿಕತೆಯ ಪಾತ್ರವಿದೆ. ಯಂತ್ರ ನಾಗರಿಕತೆ ಎಂದರೆ ಯಂತ್ರಗಳ ಬಳಕೆಯ ಕುರಿತ ವಿಚಾರವಲ್ಲ. ಬದಲು, ಯಂತ್ರಗಳು ರೂಪಿಸುವ ನಾಗರಿಕತೆಗೆ ಸಂಬಂಧಿಸಿದ ವಿಚಾರ. ಅಂದರೆ ಯಂತ್ರಗಳ ಇರುವಿಕೆಯು ಮನುಷ್ಯರು ತಮ್ಮ ಸಹಜ ಸಾಮರ್ಥ್ಯಗಳನ್ನು ಕೈಬಿಡಲು ಬಳಕೆಯಾದಾಗ ಉಂಟಾಗುವ ನಾಗರಿಕತೆಯೇ ಯಂತ್ರ ನಾಗರಿಕತೆ. ಅಂದರೆ ಲಿಪಿ ಬಂದಾಗ ಆಲಿಸಿಯೇ ನೆನಪಿರಿಸಿಕೊಳ್ಳಬೇಕಾದ ಅನಿವಾರ್ಯ ಹೊರಟುಹೋಗಿ ಮನುಷ್ಯನ ಆಲಿಸುವ ಸಾಮರ್ಥ್ಯ ಕುಸಿದ ಹಾಗೆಯೇ, ಕಂಪ್ಯೂಟರ್ ಬಂದಾಗ ಬರೆಯುವ ಸಾಮರ್ಥ್ಯದ ಕುಸಿತ ಉಂಟಾದ ಹಾಗೆ ಹೊಸ ಯಂತ್ರಗಳು ಮನುಷ್ಯರು ತಮ್ಮ ಸಾಮರ್ಥ್ಯವನ್ನು ಬಿಟ್ಟುಕೊಡಲು ಸ್ವಯಂ ಸಿದ್ಧರಾಗಿರುವ ನಾಗರಿಕತೆಯಾಗಿದೆ.

ಇಲ್ಲಿ ಆಗುವ ಸೂಕ್ಷ್ಮತೆಯ ಕುಸಿತವು ಏಕಮುಖಿಯಲ್ಲ. ವಾಸನೆಯಿಂದ ಗ್ರಹಿಸಿ ಅರ್ಥ ಮಾಡಿಕೊಳ್ಳುವ, ವಾಯುಗುಣದಲ್ಲಿ ಆಗುವ ಬದಲಾವಣೆಯಿಂದ ಮುಂದಿನ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯಗಳೂ ಹೊರಟು ಹೋಗುತ್ತವೆ.

ಮನುಷ್ಯರು ಸೂಕ್ಷ್ಮತೆಯನ್ನು ಕಳೆದುಕೊಳ್ಳುವುದರ ಪರಿಣಾಮ ಶೈಕ್ಷಣಿಕವಾಗಿ ಅಷ್ಟೇ ಇರುವುದಿಲ್ಲ, ಅದು ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಸಮಸ್ಯೆಯಾಗಿದೆ. ಏಕೆಂದರೆ ಪ್ರಜಾಪ್ರಭುತ್ವವು ನಿಂತಿರುವುದು ಮಾತಿನ ಶಕ್ತಿಯ ಮೇಲೆ. ಸೂಕ್ಷ್ಮತೆ ಕಳೆದುಹೋದಾಗ ಮಾತು ಪರಿಣಾಮವನ್ನು ಬೀರುವುದಿಲ್ಲ. ಮಾತು ಪರಿಣಾಮವನ್ನು ಬೀರದೇ ಇದ್ದಾಗ ಪ್ರಜಾಪ್ರಭುತ್ವ ಹೇಗೆ ತಾನೇ ದೃಢವಾಗಲು ಸಾಧ್ಯ. ಆದ್ದರಿಂದ ಸೂಕ್ಷ್ಮತೆಯನ್ನು ಹೆಚ್ಚಿಸಿ ಆಲಿಸುವಿಕೆಯ ಸಾಮರ್ಥ್ಯವನ್ನು ಹೆಚ್ಚಿಸಬೇಕಾದ ಅಗತ್ಯವಿದೆ.

ಆಲಿಸುವಿಕೆಗೆ ಬೇಕಾದ ಸೂಕ್ಷ್ಮತೆ ಹೊರಟು ಹೋಗುತ್ತಿರುವುದು ಮನುಷ್ಯರು ಪ್ರಕೃತಿಯೊಂದಿಗೆ ಹೊಂದಿರುವ ಸಂಸ್ಕೃತಿಯಿಂದ ವಿಮುಖರಾದ್ದರಿಂದ. ಇದನ್ನು ಅರ್ಥ ಮಾಡಿಸಲು ಕಲಿಕೆಯ ಇನ್ನೊಂದು ವಿಧಾನದ ಬಗ್ಗೆ ತಿಳಿಸಬೇಕಾಗುತ್ತದೆ. ಅದು- ‘ಅವಲೋಕನ’.

ಅವಲೋಕನ ಎಂದರೆ ನೋಡುವುದಲ್ಲ. ಮನೆಯಲ್ಲಿ ನಾಯಿ ಇರುತ್ತದೆ. ಆ ನಾಯಿ ಯಾವಾಗ ಮನುಷ್ಯರೊಂದಿಗೆ ನಗುತ್ತಾ ಬಾಲ ಅಲ್ಲಾಡಿಸುತ್ತದೆ, ಯಾವಾಗ ನೊಂದುಕೊಂಡು ತಲೆ ತಗ್ಗಿಸಿ ಕುಳಿತುಕೊಳ್ಳುತ್ತದೆ ಎಂದು ಗಮನಿಸಿದ್ದರೆ, ಯಾವಾಗ ಅದರೊಂದಿಗೆ ಹೇಗೆ ವರ್ತಿಸಬೇಕೆಂದು ಗೊತ್ತಾಗುತ್ತದೆ. ಆಗ ಸೂಕ್ಷ್ಮತೆ ಹೆಚ್ಚಾಗುತ್ತದೆ. ಹಿಂದೆ ಕರಾವಳಿ-ಮಲೆನಾಡುಗಳಲ್ಲಿ ಒಂಟಿ ‘ಪಾಲ’ ಎಂದು ಹಾಕುವ ವ್ಯವಸ್ಥೆ ಇತ್ತು. ಒಂಟಿಪಾಲದಲ್ಲಿ ಎಲ್ಲರಿಗೂ ಹೋಗಲು ಸಾಧ್ಯವಿಲ್ಲ. ದೇಹದ ಭಾರವನ್ನು ಪಾಲ ಯಾವ ರೀತಿ ತೆಗೆದುಕೊಳ್ಳುತ್ತದೆ ಎಂದು ಅರ್ಥವಾದರೆ ಮಾತ್ರ ಅದರಲ್ಲಿ ನಡೆದು ಹೋಗಲು ಸಾಧ್ಯವಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳುತ್ತಾ ಹೋದ ಹಾಗೆ ಸೂಕ್ಷ್ಮಗ್ರಹಣದ ಶಕ್ತಿ ಹೆಚ್ಚುತ್ತದೆ. ಆಗ ಕೇಳಿಸಿಕೊಳ್ಳುವ ಸಾಮರ್ಥ್ಯವೂ ಜಾಸ್ತಿಯಾಗುತ್ತದೆ. ಕೇಳಿಸಿಕೊಂಡದ್ದು ಕಲಿಕೆಯಾಗಿ ನೆನಪಿನಲ್ಲಿ ಉಳಿಯುತ್ತದೆ.

ಸೂಕ್ಷ್ಮಗ್ರಹಣದ ಶಕ್ತಿ ಹೆಚ್ಚುವುದು ಪ್ರಕೃತಿಯ ಒಡನಾಟದಲ್ಲಿಯೇ. ಬೋಧನೆ ಮಾಡಿ, ತರಬೇತಿ ಕೊಟ್ಟು ಅದನ್ನು ಹೆಚ್ಚಿಸುವುದು ಬಲು ಕಷ್ಟ. ತರಗತಿಗಳಲ್ಲಿ ಬಹುಮುಖಿ ಉತ್ತರಗಳ ಪ್ರಶ್ನೆಗಳನ್ನು ಬಳಸುವುದು, ಅವಲೋಕನದ ಮೂಲಕ ಕಲಿಕೆಯನ್ನು ನಡೆಸುವುದು ಶೈಕ್ಷಣಿಕ ಪದ್ಧತಿಗಳಾಗಿ ವಿದ್ಯಾರ್ಥಿಗಳ ಸೂಕ್ಷ್ಮಗ್ರಹಣದ ಶಕ್ತಿಯನ್ನು ಹೆಚ್ಚಿಸಲು ನೆರವಾಗಬಹುದು. ಆದರೆ ಅಂತಿಮವಾಗಿ ಸೂಕ್ಷ್ಮತೆಯ ನೆಲೆ ಪ್ರಕೃತಿಯ ಮಡಿಲೇ ಆಗಿರುತ್ತದೆ. ಇದನ್ನು ಮಕ್ಕಳಿಗೆ ಒದಗಿಸಿ, ಅದು ಸೂಕ್ಷ್ಮತೆಯನ್ನು ಹೆಚ್ಚಿಸುವ ರೂಪದಲ್ಲಿಯೇ ಸಂಪರ್ಕಗೊಳ್ಳುವಂತೆ ಮಾಡುವುದು ಹೇಗೆ ಎನ್ನುವುದು ಭವಿಷ್ಯದ ಬಹುಮುಖ್ಯ ಶೈಕ್ಷಣಿಕ ಸವಾಲೂ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)