ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಗ್ಬಂಧನದ ಅವಧಿಯ ಆಲೋಚನೆ...

ಪ್ರಕೃತಿಯಲ್ಲಿ ಎಲ್ಲ ಬಗೆಯ ಉಲ್ಲಂಘನೆಗಳಿಗೂ ಇದೆ ಶಿಕ್ಷೆ
Last Updated 7 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ
ADVERTISEMENT
""

ಮನುಷ್ಯ ತನ್ನ ಜೊತೆಗಾರನನ್ನು ಕೊಲ್ಲುವುದಕ್ಕೆ ಹಲವು ಕಾರಣಗಳಿರುತ್ತವೆ. ಅದಕ್ಕೆ ದ್ವೇಷ ಕಾರಣವಾಗಬಹುದು, ಹಳೆಯ ಸಿಟ್ಟನ್ನು ತೀರಿಸಿಕೊಳ್ಳಲು ಕೊಲೆ ಮಾಡಬಹುದು. ದುರಾಸೆಗೆ ಬಲಿಯಾಗಿ ಕೂಡ ಕೊಲೆ ಮಾಡಬಹುದು. ಮನುಷ್ಯನು ಸಿಟ್ಟಿನ ಹಿಡಿತಕ್ಕೆ ಸಿಲುಕಿ, ಕೊಲೆಯಂತಹ ಕೃತ್ಯಗಳನ್ನು ಎಸಗುವುದೇ ಜಾಸ್ತಿ. ಮನುಷ್ಯ ಎಸಗುವ ಹಿಂಸಾಕೃತ್ಯಗಳ ವಿವರಗಳು ಮಾಧ್ಯಮಗಳಲ್ಲಿ ಬಹಳಷ್ಟಿವೆ. ವ್ಯಕ್ತಿಯೊಬ್ಬ ಯಾವುದಾದರೂ ಧಾರ್ಮಿಕ ಗುಂಪಿನ ಸದಸ್ಯನಾಗಿದ್ದರೆ, ಪುಡಿ ಸಂಘಟನೆಗಳಿಗೆ ಸೇರಿದವ ಆಗಿದ್ದರೆ, ರಾಜಕೀಯ ಅಥವಾ ತೀವ್ರಗಾಮಿ ಸಿದ್ಧಾಂತವನ್ನು ವಿವೇಚನೆ ಇಲ್ಲದೆ ಒಪ್ಪಿಕೊಂಡಿದ್ದರೆ, ಮುಂದೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿಂದಲೂ ಇತರರನ್ನು ಹತ್ಯೆ ಮಾಡುವುದಿದೆ.

ಪ್ರಾಣಿಗಳೂ ಇತರ ಪ್ರಾಣಿಗಳನ್ನು ಕೊಲ್ಲುತ್ತವೆ. ಆದರೆ ಅವು ತಮ್ಮ ಹಸಿವು ನೀಗಿಸಿಕೊಳ್ಳಲು ಹಾಗೆ ಮಾಡುತ್ತವೆ. ಆದರೆ, ಸಾಂಕ್ರಾಮಿಕಗಳು, ಭೂಕಂಪ, ಪ್ರವಾಹ... ಇಂಥವುಗಳ ಮೂಲಕ ದೇವರು ಮನುಷ್ಯನನ್ನು ಕೊಂದಾಗ, ‘ದೇವರು ಇಷ್ಟೊಂದು ಕ್ರೂರಿಯೇ’ ಎಂಬ ಪ್ರಶ್ನೆ ಎದುರಾಗುತ್ತದೆ. ಇದೊಂದು ಕ್ರೂರ ಆಟವೇ? ಅಥವಾ ದೇವರ ಆಟದಲ್ಲಿ ಒಂದು ಕ್ರಮ ಎಂಬುದಿದೆಯೇ?

ಮುಗ್ಧರು ಸಹಸ್ರಾರು ಸಂಖ್ಯೆಯಲ್ಲಿ ಸರ್ವಶಕ್ತನೂ ದಯಾಮಯನೂ ಆದ ದೇವರ ಕೈಯಲ್ಲೇ ಸಾಯುವುದಕ್ಕೆ ಕಾರಣವೇನು ಎಂಬುದನ್ನು ತೃಪ್ತಿಕರವಾಗಿ ವಿವರಿಸಲು ಯಾವುದೇ ಧಾರ್ಮಿಕ ಮುಖಂಡನಿಗೆ ಅಥವಾ ಅವಧೂತನಿಗೆ ಸಾಧ್ಯವಾಗಿಲ್ಲ. ‘ಕೆಡುಕು’ ಏಕಿದೆ ಎಂಬ ಪ್ರಶ್ನೆಯನ್ನು ಟ್ಯಾಗೋರ್ ಅವರಲ್ಲಿ ಕೇಳಿದಾಗ, ‘ಒಳಿತು ಎಂಬುದು ಏಕಿದೆ ಎಂದು ಕೇಳಿದಂತಿದೆ ಇದು’ ಎನ್ನುವ ಉತ್ತರ ನೀಡಿದ್ದರು. ಈಗ ಕೊರೊನಾ ವೈರಾಣು ಬಂದಿದೆ. ಇದರ ಉದ್ದೇಶ ಏನು? ಇದು, ವಿಶ್ವದ ಪೂರ್ವನಿರ್ಧರಿತ ನಿಯಮಗಳಿಗೆ ಅನುಸಾರವಾಗಿ ಪ್ರಕೃತಿ ನಡೆದುಕೊಳ್ಳುತ್ತಿರುವ ಬಗೆಯೇ? ಇದರಲ್ಲಿ ದೇವರ ಕೈವಾಡ ಏನೂ ಇಲ್ಲವೇ?

ಮನುಷ್ಯನಿಗೆ ಎದುರಾಗುವ ಹತ್ತು ಹಲವು ಸಮಸ್ಯೆಗಳನ್ನು ಬೇರೆ ಬೇರೆ ಬಗೆಗಳಲ್ಲಿ ವಿವರಿಸಲಾಗಿದೆ. ‘ಹಳೆಯಒಡಂಬಡಿಕೆ’ಯಲ್ಲಿ ಹೇಳಿರುವ ‘ನಿಮ್ಮ ತಂದೆ–ತಾಯಿಮಾಡಿದ ಕೆಟ್ಟ ಕೆಲಸಗಳ ಫಲವನ್ನು ನೀವು ಅನುಭವಿಸಬೇಕು’ ಎಂಬುದನ್ನು ಹಲವರು ನಂಬುತ್ತಾರೆ. ಈ ಜನ್ಮದಲ್ಲಿ ಅನುಭವಿಸುವ ಸಂಕಷ್ಟಗಳಿಗೆ ಕಾರಣ, ಹಿಂದಿನಜನ್ಮದಲ್ಲಿ ಮಾಡಿರುವ ಪಾಪಕೃತ್ಯಗಳು ಎಂದು ಹಿಂದೂಗಳು ಹೇಳಬಹುದು. ತಂತ್ರಜ್ಞಾನದಲ್ಲಿಮುಂದುವರಿದ ಮನುಷ್ಯನ ಅಹಂಕಾರವೇ ಸಂಕಷ್ಟಗಳಿಗೆಕಾರಣ ಎಂದು ತತ್ವಜ್ಞಾನಿ ಅಥವಾ ವೈಜ್ಞಾನಿಕ ಮನೋಭಾವದ ವ್ಯಕ್ತಿಗಳು ಹೇಳಬಹುದು. ಮನುಷ್ಯತನ್ನನ್ನು ಮಾತ್ರ ಗಮನದಲ್ಲಿ ಇರಿಸಿಕೊಂಡು ಆಲೋಚಿಸಿ, ಸಂಪನ್ಮೂಲಗಳನ್ನು ಅತಿಯಾಗಿ ದುರ್ಬಳಕೆ ಮಾಡಿಕೊಂಡು, ನಿಸರ್ಗದ ಸಹಜ ಸಮತೋಲನವನ್ನು ಹಾಳುಮಾಡಿದ್ದಕ್ಕಾಗಿ ನಿಸರ್ಗದ ದೇವತೆಗಳು ಕೊಟ್ಟಿರುವ ಶಿಕ್ಷೆ ಈ ಸಾಂಕ್ರಾಮಿಕಗಳು ಎಂದು ಹೇಳಬಹುದು. ಎಲ್ಲ ಕ್ರಿಯೆಗಳಿಗೂ ಒಂದು ಪರಿಣಾಮ ಎಂಬುದಿರುತ್ತದೆ. ಎಲ್ಲದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಬೆಲೆ ತೆರಬೇಕಾಗುತ್ತದೆ.

ಅಣ್ವಸ್ತ್ರಗಳನ್ನು ಬಳಸಿ ನಡೆಯುವ ಹತ್ಯಾಕಾಂಡವು ಮನುಕುಲಕ್ಕೆ ಎಷ್ಟು ಕಂಟಕಪ್ರಾಯ ಆಗಬಲ್ಲದೋ, ಕೀಟಗಳು, ಸೂಕ್ಷ್ಮಾಣು ಜೀವಿಗಳು ಕೂಡ ಅಷ್ಟೇ ಕಂಟಕಪ್ರಾಯ ಆಗಬಲ್ಲವು ಎಂದು 85 ವರ್ಷಗಳ ಹಿಂದೆ ಬರೆದಿದ್ದ ‘ಮೆನ್ ವರ್ಸಸ್ ಇನ್‌ಸೆಕ್ಟ್ಸ್‌’ ಪ್ರಬಂಧದಲ್ಲಿ ಬರ್ಟ್ರಾಂಡ್ ರಸೆಲ್ ಬರೆದಿದ್ದ. ಆದರೆ, ಅಣ್ವಸ್ತ್ರ ಅಥವಾ ಜೈವಿಕ ಸಮರಕ್ಕಿಂತ ಹೊರತಾದ ಮಾರ್ಗವೊಂದರ ಮೂಲಕ ಮನುಷ್ಯ ತನ್ನನ್ನು ತಾನೇ ನಿರ್ಮೂಲಗೊಳಿಸಿಕೊಳ್ಳುವತ್ತ ಧಾವಿಸುತ್ತಿದ್ದಾನೆ ಎಂಬುದನ್ನು ಕಲ್ಪಿಸಿಕೊಳ್ಳಲು ರಸೆಲ್‌ಗೆ ಸಾಧ್ಯವಾಗಿರಲಿಲ್ಲ. ಅಹಂಕಾರ ಬೆಳೆಸಿಕೊಂಡಿರುವ ಹಾಗೂ ಲೌಕಿಕ ಸಂಪತ್ತಿನ ಬಗ್ಗೆ ಅತಿಯಾದ ಮೋಹ ಹೊಂದಿರುವ ಮನುಷ್ಯ, ತಾನು ಕುಳಿತಿರುವ ನಿಸರ್ಗ ವೃಕ್ಷದ ಬುಡವನ್ನು ತಾನೇ ಕಡಿದುಹಾಕುತ್ತಿದ್ದಾನೆ ಎಂಬುದು ರಸೆಲ್‌ಗೆ ಗೊತ್ತಾಗಿರಲಿಲ್ಲ.

ಪ್ರಕೃತಿಯಲ್ಲಿ ಮಿತಿಮೀರಿ ನಡೆವ ಯಾವುದೂ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಿಲ್ಲ. ಎಲ್ಲ ಬಗೆಯ ಉಲ್ಲಂಘನೆಗಳಿಗೂ ಇಲ್ಲಿ ಶಿಕ್ಷೆಯಿದೆ. ನಾನು ಚಿಕ್ಕವನಾಗಿದ್ದಾಗ ನಾಟಿ ಸಂದರ್ಭದಲ್ಲಿ ನನ್ನ ತಂದೆಯ ಜೊತೆ ಗದ್ದೆಗೆ ಹೋಗುತ್ತಿದ್ದ ದಿನಗಳು ನೆನಪಿನಲ್ಲಿವೆ. ಮಳೆಯಲ್ಲಿ ತಲೆಯ ಮೇಲೊಂದು ಕೊಪ್ಪೆ ಕಟ್ಟಿಕೊಂಡು,ಹಾಡಿಕೊಳ್ಳುತ್ತ, ನಾಟಿ ಕೆಲಸ ಮಾಡುತ್ತಿದ್ದ ಕೃಷಿ ಕಾರ್ಮಿಕರನ್ನು ನನ್ನ ತಂದೆ ನನಗೆ ತೋರಿಸುತ್ತಿದ್ದರು. ಮೈಮೇಲೆ ಎರಡೂ ಕಡೆ ಬಟ್ಟೆಯ ಚೀಲ ಇಳಿಬಿಟ್ಟುಕೊಳ್ಳುತ್ತಿದ್ದರು. ಒಂದರಲ್ಲಿ ಸಸಿಗಳನ್ನು ಇಟ್ಟುಕೊಳ್ಳುತ್ತಿದ್ದರು. ಗದ್ದೆಯ ನೀರಿನಲ್ಲಿ ಸಿಗುತ್ತಿದ್ದ ಏಡಿಗಳನ್ನು ಅವರು ತಮ್ಮ ಇನ್ನೊಂದು ಚೀಲಕ್ಕೆ ಹಾಕಿಕೊಳ್ಳುತ್ತಿದ್ದರು. ಕೆಲಸಗಾರರು ಬಡವರು, ಹಾಗಾಗಿ ಅವರಿಗೆ ದೇವರು ಏಡಿಗಳನ್ನು ಉಚಿತವಾಗಿ ನೀಡುತ್ತಾನೆ ಎಂದು ಅಪ್ಪ ನನ್ನಲ್ಲಿ ಹೇಳುತ್ತಿದ್ದರು. ‘ನಾವು ಮನೆಯಲ್ಲಿ ಸೇವಿಸುವ ಆಹಾರಕ್ಕಿಂತ ಏಡಿಗಳು ಹೆಚ್ಚು ಪೌಷ್ಟಿಕ’ ಎಂದು ಕೂಡ ಅವರು ಹೇಳುತ್ತಿದ್ದರು. ಈ ಮಾತು ನನ್ನ ಮನಸ್ಸಿನಲ್ಲಿ ಉಳಿದುಕೊಂಡಿದೆ.

ಒಂದನ್ನು ಕಳೆದುಕೊಂಡರೆ ಇನ್ನೊಂದು ಸಿಗುತ್ತದೆ ಎನ್ನುವ ನಿಯಮ ವಿಶ್ವದಲ್ಲಿದೆ. ಆ ರೀತಿ ಸಿಗುವುದು ಇದೇ ಜೀವನದಲ್ಲೇ ಹೊರತು ಮುಂದೆ ಇರಬಹುದಾದ ಜನ್ಮದಲ್ಲಿ ಅಲ್ಲ. ಒಬ್ಬನಿಂದ ಏನನ್ನಾದರೂ ಕಸಿದುಕೊಂಡರೆ ಅಥವಾ ಆತನಿಗೆ ವಂಚನೆ ಮಾಡಿದರೆ, ಪ್ರಕೃತಿ ಅವನಿಗೆ ಇನ್ಯಾವುದೋ ರೀತಿಯಲ್ಲಿ ಪರಿಹಾರ ಕೊಡುತ್ತದೆ. ವ್ಯಕ್ತಿಯೊಬ್ಬ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡರೆ, ಪ್ರಕೃತಿ ಆ ಅಧಿಕಾರವನ್ನು ಆತನಿಂದ ಹಿಂದಕ್ಕೆ ಪಡೆಯುತ್ತದೆ ಕೂಡ.

ನನ್ನ ಜೀವನಕ್ಕೆ ಸಂಬಂಧಿಸಿದ ಕೆಲವು ವಿಚಾರಗಳು, ಆಲೋಚನೆಗಳು ಕಣ್ಣ ಮುಂದೆ ಹಾದುಹೋದಾಗ ನನಗೆ ಕಾಶ್ಮೀರದಲ್ಲಿ ಈಚೆಗೆ ನಡೆದ ಕೆಲವು ಘಟನೆಗಳು ನೆನಪಿಗೆ ಬಂದವು. ಕೊರೊನಾ ವೈರಾಣು ದಾಳಿ ನಡೆಸುವ ಮುನ್ನವೇ ಸರ್ಕಾರವು ಕಾಶ್ಮೀರದ ಜನರನ್ನು ಕ್ವಾರಂಟೈನ್ ಮಾಡಿಯಾಗಿತ್ತು. ಭಾರತದಲ್ಲಿ ಈಗ ಕೊರೊನಾ ಚಾಟಿಯಿಂದ ತಪ್ಪಿಸಿಕೊಂಡು, ಅತ್ಯಂತ ಸುರಕ್ಷಿತವಾಗಿ ಇರುವವರು ಕಾಶ್ಮೀರದ ಜನ ಎನ್ನುವ ಆಲೋಚನೆ ನನ್ನ ಮನಸ್ಸಿನಲ್ಲಿ ಬಾರದೆ ಇರಲಿಲ್ಲ. ಕಾಶ್ಮೀರದ ಜನರನ್ನು ದಿಗ್ಬಂಧನಕ್ಕೆ ಒಳಪಡಿಸಿದ್ದು ಒಂದು ರೀತಿಯಲ್ಲಿ ಶಾಪದ ರೂಪದಲ್ಲಿನ ವರವಾಗಿತ್ತೇ? ಪರಿಹಾರವನ್ನು ಕೊಡುವ, ನ್ಯಾಯ ನಿರ್ಣಯ ಮಾಡುವ ದೇವರ ವಿಧಾನ ಇದುವೇ?

ತಪ್ಪುಗಳನ್ನು ತಾನಾಗಿಯೇ ಸರಿಪಡಿಸುವ, ಪರಿಹಾರವನ್ನೂ ಕೊಡುವ ವಿಶ್ವದ ಈ ಧೋರಣೆಯ ಬಗ್ಗೆ ಎಮರ್ಸನ್ ಕೆಲವು ಮಾತುಗಳನ್ನು ಹೇಳಿದ್ದಾನೆ. ‘ಸರ್ಕಾರ ಕ್ರೂರವಾಗಿದೆ ಎಂದಾದರೆ, ಸರ್ಕಾರದಲ್ಲಿ ಇರುವವರ ಜೀವ ಕೂಡ ಸುರಕ್ಷಿತವಾಗಿ ಇರುವುದಿಲ್ಲ. ತೆರಿಗೆಯನ್ನು ವಿಪರೀತ ಪ್ರಮಾಣದಲ್ಲಿ ವಿಧಿಸಿದರೆ, ಆದಾಯದ ರೂಪದಲ್ಲಿ ಕೊನೆಗೆ ಏನೂ ಗಿಟ್ಟುವುದಿಲ್ಲ. ರಕ್ತಪಾತಕ್ಕೆ ದಾರಿಯಾಗುವಂತಹ ಅಪರಾಧ ಸಂಹಿತೆಯನ್ನು ರೂಪಿಸಿದರೆ, ನ್ಯಾಯಮೂರ್ತಿಗಳು ಯಾರನ್ನೂ ಶಿಕ್ಷೆಗೆ ಗುರಿಪಡಿಸುವುದಿಲ್ಲ. ಕಾನೂನು ತೀರಾ ಮೃದುವಾಗಿದ್ದರೆ, ಖಾಸಗಿ ನೆಲೆಯ ದ್ವೇಷ ತಲೆ ಎತ್ತುತ್ತದೆ. ಜೀವನದ ಎಲ್ಲವುಗಳಲ್ಲೂ ಸಮತೋಲನ ತಂದುಕೊಂಡಾಗ, ಎಲ್ಲವನ್ನೂ ಸಮಾನವಾಗಿ ಕಾಣುವ ಸ್ಥಿತಿ ಪ್ರಾಪ್ತವಾಗುತ್ತದೆ.ಎಲ್ಲವಕ್ಕೂ ಇಲ್ಲಿ ಅವುಗಳದೇ ಆದ ಪ್ರಾಧಾನ್ಯ ಇದೆ.’

ವೈಜ್ಞಾನಿಕವಾದ, ಸಾಬೀತು ಮಾಡಲು ಸಾಧ್ಯವಾದ ನಿಯಮಗಳಿಗೆ ಅನುಗುಣವಾಗಿ ವಿಶ್ವ ನಡೆಯುತ್ತಿದೆ ಎಂದು ನಂಬಲಾಗಿತ್ತು. ಈ ನಿಯಮಗಳನ್ನು ದೇವರೂ ಮೀರಲಾರ ಎನ್ನಲಾಗಿತ್ತು. ಆದರೆ, ವಿಶ್ವವು ನಡೆವ ಬಗೆಯನ್ನು ಊಹಿಸಲು ಸಾಧ್ಯವಿಲ್ಲ ಎನ್ನುವುದನ್ನು ಕ್ವಾಂಟಂ ವಿಜ್ಞಾನ ಸಾಬೀತು ಮಾಡಿದೆ.

ಈಗ ಎದುರಾಗಿರುವ ಸಾಂಕ್ರಾಮಿಕವು ದೇವರ ಇನ್ನೊಂದು ಆಟವೇ ಎಂದು ಕೇಳಿಕೊಳ್ಳಬಹುದು. ಅಥವಾ ಇದು ನಮ್ಮ ಸಣ್ಣತನ, ದ್ವೇಷ, ಹಿಂಸಾಚಾರ, ದುರಾಸೆ, ಸೊಕ್ಕು ಮತ್ತು ಎಲ್ಲೆ ಮೀರುವಿಕೆಗಳಿಗೆ ವಿರುದ್ಧವಾಗಿ ಪ್ರಕೃತಿ ಸಾಧಿಸುತ್ತಿರುವ ಹಗೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT