ಮಂಗಳವಾರ, ಜೂನ್ 2, 2020
27 °C
ಮನೆಯಿಂದಲೇ ‘ಕಚೇರಿ ಕೆಲಸ’ ಎಂಬ ಕನಸನ್ನು ನನಸಾಗಿಸಿದ ಶ್ರೇಯ ಲಾಕ್‌ಡೌನ್‌ಗೆ ಸಲ್ಲುತ್ತದೆ

ಗೃಹಕಚೇರಿ: ಹೊಸ ರಹದಾರಿ

ಜಿ.ಕೃಷ್ಣಕುಮಾರ್, ಡಾ. ಲಕ್ಷ್ಮೀ ಎನ್. ಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ನಿಂದ ದೇಶದಲ್ಲಿ ವಿಧಿಸಿರುವ ನಿರ್ಬಂಧವು ಶೈಕ್ಷಣಿಕ ಸಂಸ್ಥೆಗಳು ಹಾಗೂ ಉದ್ಯೋಗ ಕೇಂದ್ರಗಳ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಈ ಕೇಂದ್ರಗಳು ಅನಿವಾರ್ಯವಾಗಿ ಸ್ಥಗಿತಗೊಳ್ಳಲೇಬೇಕಾದ ಸಂದರ್ಭದಲ್ಲಿ ನಿರಂತರತೆಯನ್ನು ಕಾಪಾಡಿಕೊಂಡಿದ್ದು, ಇಂಟರ್ನೆಟ್‌ ಎಂಬ ಆಧಾರದಿಂದಲೇ. ನಿಷ್ಕ್ರಿಯಗೊಳ್ಳಬಹುದಾಗಿದ್ದ ಅನೇಕರ ಜೀವನ, ಇಂಟರ್ನೆಟ್‌ನಿಂದ ಕ್ರಿಯಾಶೀಲತೆಯನ್ನು ಉಳಿಸಿಕೊಂಡಿದೆ.

ಮನೆಯಿಂದಲೇ ಕೆಲಸ ಅಥವಾ ಗೃಹಕಚೇರಿ ಎಂಬುದು ಪಾಶ್ಚಾತ್ಯ ದೇಶಗಳಲ್ಲಿ ಅನೇಕ ದಶಕಗಳಿಂದ ಹೆಚ್ಚು ಬಳಕೆಯಲ್ಲಿರುವ ಪದ್ಧತಿ. ಆದರೆ ಭಾರತ ಸೇರಿದಂತೆ ಏಷ್ಯಾದ ಅನೇಕ ರಾಷ್ಟ್ರಗಳಲ್ಲಿ ಇದು ಜನ‌ಪ್ರಿಯವಾಗಿಲ್ಲ. ಇದಕ್ಕೆ ಕಂಪನಿ ಮತ್ತು ಸಿಬ್ಬಂದಿಯ ನಡುವೆ ನಂಬಿಕೆಯ ಕೊರತೆ, ಕೆಲವು ಸಾಂಸ್ಕೃತಿಕ ಹಿನ್ನೆಲೆಯಂತಹ ಕಾರಣಗಳಿವೆ. ಒಟ್ಟಿನಲ್ಲಿ ಇಲ್ಲಿ ಪ್ರತ್ಯಕ್ಷ ಉಪಸ್ಥಿತಿಗೇ ಹೆಚ್ಚು ಪ್ರಾಶಸ್ತ್ಯ. ಅಲ್ಲದೆ ಉದ್ಯೋಗಿಗಳು ಪ್ರತಿನಿತ್ಯ ಕಚೇರಿಗೆ ಬಂದು ಕಾರ್ಯನಿರ್ವಹಿಸುವುದರಿಂದ ಅನೇಕ ಅನುಕೂಲಗಳು ಇವೆ. ಸಹೋದ್ಯೋಗಿಗಳು ಪರಸ್ಪರ ಭೇಟಿಯಾಗುವುದರಿಂದ ಅವರ ನಡುವೆ ಸೌಹಾರ್ದ ಸಂಬಂಧ ಏರ್ಪಡುತ್ತದೆ. ಇವೆಲ್ಲದರ ಹೊರತಾಗಿಯೂ ಇಂದು ಪ್ರಪಂಚವು ಪರೋಕ್ಷವಾದ ಕಾರ್ಯನಿರ್ವಹಣೆಯತ್ತ ಹೊರಳುತ್ತಿದೆ. ಸರಕು ತಯಾರಿಕಾ ಘಟಕಗಳಲ್ಲೂ ತಯಾರಿಕಾ ವಿಭಾಗವನ್ನು ಹೊರತುಪಡಿಸಿ ಉಳಿದ ವಿಭಾಗಗಳಾದ ಮಾರ್ಕೆಟಿಂಗ್, ಕಾರ್ಪೊರೇಟ್ ಯೋಜನೆ ಮುಂತಾದವು ಮನೆಯಿಂದ ಅಥವಾ ದೂರದ ಸ್ಥಳದಿಂದ ಬಹಳ ಸಲೀಸಾಗಿ ತಮ್ಮ ಕಾರ್ಯನಿರ್ವಹಿಸಬಹುದು. ಐ.ಟಿ. ಕ್ಷೇತ್ರದಲ್ಲಂತೂ ಈ ಕಾರ್ಯ ಇನ್ನಷ್ಟು ಸುಲಭ.

ಲಾಕ್‌ಡೌನ್‌ನಿಂದ ಉಂಟಾಗಿರುವ ಅತಿ ದೊಡ್ಡ ಅನುಕೂಲವೆಂದರೆ ವಾಹನ ದಟ್ಟಣೆ ಕಡಿಮೆಯಾಗಿರುವುದು, ತನ್ಮೂಲಕ ಪರಿಸರದ ಮೇಲೆ ಉಂಟಾಗಿರುವ ಸಕಾರಾತ್ಮಕ ಪರಿಣಾಮ. ಇದನ್ನು ಗಮನದಲ್ಲಿರಿಸಿ ಕೇಂದ್ರ ಸರ್ಕಾರ ವರ್ಷಕ್ಕೆ ಒಮ್ಮೆಯಾದರೂ ದೇಶದ ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಪರೋಕ್ಷ ಕಾರ್ಯ ನಿರ್ವಹಣೆಯ ಸಪ್ತಾಹವನ್ನು ಕಡ್ಡಾಯವಾಗಿ ಆಚರಿಸುವಂತೆ ನಿಯಮ ರೂಪಿಸಬೇಕು.

ಈಗ್ಗೆ 10-15 ವರ್ಷಗಳ ಹಿಂದೆ ಮನೆಯಲ್ಲಿಯೇ ಕುಳಿತು ಕಚೇರಿಯ ಕಾರ್ಯ ನಿರ್ವಹಿಸುವುದನ್ನು ಊಹಿಸಲೂ ಸಾಧ್ಯವಿರಲಿಲ್ಲ. ಕಾರಣ, ಅತೀ ನಿಧಾನವಾದ ಇಂಟರ್ನೆಟ್ ಸಂಪರ್ಕ. ಆದರೆ ತಂತ್ರಜ್ಞಾನದಲ್ಲಿನ ಕ್ರಾಂತಿಕಾರಕ ಬೆಳವಣಿಗೆಗಳಿಂದ ಕಳೆದ 10 ವರ್ಷಗಳಲ್ಲಿ ಉದ್ಯೋಗಿಗಳು ತಾವಿರುವ ಸ್ಥಳದಿಂದಲೇ ಕಾರ್ಯನಿರ್ವಹಿಸುವುದು ಸಾಧ್ಯವಾಗಿದೆ. ಒಂದೊಮ್ಮೆ ಕಾರ್ಯವು ಒಂದು ತಂಡದಿಂದ ಆಗಬೇಕಾದರೆ, ಅದನ್ನು ಸಾಧ್ಯವಾಗಿಸುವ ಅನೇಕ ಸಾಫ್ಟ್‌ವೇರ್ ತಂತ್ರಜ್ಞಾನಗಳು, ಆ್ಯಪ್‌ಗಳು ಲಭ್ಯವಿವೆ.

ಬದಲಾದ ಸನ್ನಿವೇಶದಲ್ಲಿ ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಹ ವರ್ಚುವಲ್‌ (ವಾಸ್ತವೋಪಮ) ತರಗತಿಗಳನ್ನು ಆರಂಭಿಸಿವೆ. ಇವು ಶಿಕ್ಷಕರಿಗೆ ಆನ್‌ಲೈನ್‌ ತರಗತಿಗಳನ್ನು ನಡೆಸಲು, ವಿಷಯ ಮಂಡಿಸಲು, ಪ್ರಶ್ನೋತ್ತರ ಅವಧಿಗಳನ್ನು ನಡೆಸಲು ಅನುವು ಮಾಡಿಕೊಟ್ಟಿವೆ. ರಸಪ್ರಶ್ನೆ, ಪರೀಕ್ಷೆಗಳಿಗೂ ಇದು ಸಹಕಾರಿ. ಶಿಕ್ಷಣ ಸಂಸ್ಥೆಗಳು ಮುಕ್ತ ಮನಸ್ಸಿನಿಂದ ಈ ತರಗತಿಗಳನ್ನು ಸ್ವಾಗತಿಸಬೇಕು. ಕೆಲವು ವಿಷಯಗಳನ್ನಂತೂ ಕೇವಲ ಆನ್‌ಲೈನ್‌ ಮೂಲಕ ಹೇಳಿಕೊಡಲು ಸಂಪೂರ್ಣವಾಗಿ ಮೀಸಲಿಡಬಹುದು.

ಮಾರ್ಚ್ 23ರಿಂದ ಈವರೆಗೆ 1.4 ಕೋಟಿ ವಿದ್ಯಾರ್ಥಿಗಳು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಆನ್‌ಲೈನ್ ವೇದಿಕೆಯನ್ನು ಬಳಸಿದ್ದಾರೆ. ಸಚಿವಾಲಯದ ‘ಸ್ವಯಂ’ ಆನ್‌ಲೈನ್‌ ವೇದಿಕೆಯಡಿ 26 ಲಕ್ಷ ವಿದ್ಯಾರ್ಥಿಗಳು 574 ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ. ‘ಕೋರ್ಸೆರಾ’ ಎಂಬ ಆನ್‌ಲೈನ್ ಶಿಕ್ಷಣ ಸಂಸ್ಥೆಗೆ ದೇಶದಲ್ಲಿ ಮಾರ್ಚ್ ತಿಂಗಳೊಂದರಲ್ಲೇ 3.60 ಲಕ್ಷ ಹೊಸ ವಿದ್ಯಾರ್ಥಿಗಳು ಸೇರಿದ್ದಾರೆ.

ದೂರದ ಸ್ಥಳದಿಂದ ಕಲಿಕೆ ಮತ್ತು ಉದ್ಯೋಗ ಎರಡೂ ಸಾಧ್ಯವೆಂದು ಸಾಬೀತಾಗಿದೆ. ಆದರೆ ಇದಕ್ಕಿರುವ ಅತೀದೊಡ್ಡ ಸವಾಲೆಂದರೆ, ಉತ್ತಮ ಗುಣಮಟ್ಟದ ಇಂಟರ್ನೆಟ್‌ ಸಂಪರ್ಕ. ಮನೆಯಲ್ಲಿಯೇ ಇರುವವರು ಹೆಚ್ಚಾಗಿ ಮನರಂಜನೆ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಗಾಗಿ ಇಂಟರ್ನೆಟ್‌ ಮೇಲೆ ಅವಲಂಬಿತರಾಗಿರುತ್ತಾರೆ. ಇದಕ್ಕಾಗಿ ಹೆಚ್ಚು ಬ್ಯಾಂಡ್‌ವಿಡ್ತ್‌ ಡೇಟಾ ಅವಶ್ಯವಿರುತ್ತದೆ.

ಇಂಟರ್ನೆಟ್ ವೇಗ ಕಡಿಮೆಯಾಗಿರುವುದಕ್ಕೆ ಇದು ಒಂದು ಪ್ರಮುಖ ಕಾರಣ. ಒಂದು ವರದಿಯ ಪ್ರಕಾರ, ವಿಡಿಯೊಗಳನ್ನು ನೋಡಲು ಬಳಕೆಯಾಗುವ ಡೇಟಾ ಪ್ರಮಾಣ ಶೇ 75ಕ್ಕೂ ಹೆಚ್ಚು. ಮೊಬೈಲ್ ನೆಟ್‌ವರ್ಕ್‌‌ಗಳ ಮೇಲೆ ವಿಡಿಯೊಗಳ ವೀಕ್ಷಣೆಯಿಂದ ಉಂಟಾಗುವ ಈ ಒತ್ತಡವನ್ನು ಕಡಿಮೆ ಮಾಡಲು ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಹಾಟ್‌ಸ್ಟಾರ್‌ ಇತ್ಯಾದಿ ವಿಡಿಯೊ ಸ್ಟ್ರೀಮಿಂಗ್‌ ಕಂಪನಿಗಳು ಈ ನಿರ್ಬಂಧದ ಅವಧಿಯಲ್ಲಿ ತಮ್ಮ ಎಚ್.ಡಿ (ಹೈ ಡೆಫಿನಿಷನ್‌) ವಿಡಿಯೊಗಳನ್ನು ಎಸ್‌.ಡಿ. (ಸ್ಟ್ಯಾಂಡರ್ಡ್‌ ಡೆಫಿನಿಷನ್‌) ವಿಡಿಯೊಗಳಾಗಿ ಬಿತ್ತರಿಸಲು ಒಪ್ಪಿಕೊಂಡಿವೆ. ನಮ್ಮ ಮೊಬೈಲ್, ಟ್ಯಾಬ್ ಅಥವಾ ಕಂಪ್ಯೂಟರ್‌ನಲ್ಲಿ ನಾವು ಒಂದು ಎಚ್‌.ಡಿ. ವಿಡಿಯೊವನ್ನು ವೀಕ್ಷಿಸಿದರೆ, ಒಂದು ಗಂಟೆಗೆ ಗರಿಷ್ಠ 3 ಜಿಬಿ ಡೇಟಾ ವ್ಯಯವಾಗುತ್ತದೆ. ಅದೇ ಎಸ್‌.ಡಿ. ವಿಡಿಯೊ 0.7 ಜಿ.ಬಿ ಡೇಟಾವನ್ನು ಬಳಸಿಕೊಳ್ಳುತ್ತದೆ. ಇದೇ ರೀತಿಯ ಸದುದ್ದೇಶದಿಂದ ಬಿಎಸ್‌ಎನ್‌ಎಲ್‌ ಕಂಪನಿಯು ‘ವರ್ಕ್‌ ಅಟ್‌ ಹೋಮ್‌’ ಎಂಬ ಆಕರ್ಷಕ ಯೋಜನೆಯನ್ನು ಜನರಿಗೆ ನೀಡಿದೆ.

ಇಷ್ಟಾದರೂ ವಿಶ್ವದ ಕೆಲವು ದೇಶಗಳ ಇಂಟರ್ನೆಟ್‌ ವೇಗದೊಂದಿಗೆ ಭಾರತದ ಇಂಟರ್ನೆಟ್ ವೇಗವನ್ನು ಹೋಲಿಸಿದಾಗ ಚಿತ್ರಣ ನಿರಾಶಾದಾಯಕವಾಗಿದೆ. ಮೊಬೈಲ್ ಬ್ರಾಡ್‌ಬ್ಯಾಂಡ್‌ನ ಕಾರ್ಯಕ್ಷಮತೆಯ ಪರೀಕ್ಷೆಯಲ್ಲಿ ವಿಶ್ವದ ಹಲವು ದೇಶಗಳ ಹೋಲಿಕೆಯಲ್ಲಿ ಭಾರತವು 130ನೇ ಸ್ಥಾನವನ್ನು, ಸ್ಥಿರ ಬ್ರಾಡ್‌ಬ್ಯಾಂಡ್‌ನ ವಿಷಯದಲ್ಲಿ 71ನೇ ಸ್ಥಾನವನ್ನು ಹೊಂದಿದೆ. ಮೊಬೈಲ್ ಬ್ರಾಡ್‌ಬ್ಯಾಂಡ್‌ನಲ್ಲಿ ದಕ್ಷಿಣ ಕೊರಿಯಾ, ಯುಎಇ ಮತ್ತು ಕೆನಡಾ 75ರಿಂದ 87 ಎಂಬಿಪಿಎಸ್‌ ಡೌನ್‌ಲೋಡ್‌ ವೇಗವನ್ನು ಹೊಂದಿದ್ದರೆ, ಭಾರತವು 11 ಎಂಬಿಪಿಎಸ್‌ ವೇಗದೊಂದಿಗೆ ಬ್ರಿಕ್ಸ್‌ ರಾಷ್ಟ್ರಗಳ ಪೈಕಿ ಕೊನೆಯ ರ‍್ಯಾಂಕ್‌ ಹೊಂದಿದೆ. ಶ್ರೀಲಂಕಾ, ಪಾಕಿಸ್ತಾನ ಮತ್ತು ನೇಪಾಳದಂತಹ ದೇಶಗಳೂ ಈ ವೇಗದ ವಿಷಯದಲ್ಲಿ ಭಾರತವನ್ನು ಹಿಂದಿಕ್ಕಿವೆ.

ಮೊಬೈಲ್ ಸಂಪರ್ಕ ಸೇವೆಯನ್ನು ಒದಗಿಸುತ್ತಿರುವ ಏರ್‌ಟೆಲ್, ವೊಡಾಫೋನ್, ಬಿಎಸ್‌ಎನ್‌ಎಲ್‌ ಮುಂತಾದ ಕಂಪನಿಗಳು ಹೆಚ್ಚುತ್ತಿರುವ ಸಾಲದ ಹೊರೆ ಮತ್ತು ಸರ್ಕಾರಕ್ಕೆ ಪಾವತಿಸಬೇಕಾದ ಭಾರಿ ತೆರಿಗೆಯಿಂದ ತಮ್ಮ ದೂರಸಂಪರ್ಕ ವ್ಯವಸ್ಥೆಯ ಮೂಲಸೌಕರ್ಯವನ್ನು ಸುಧಾರಿಸಲು ಸಾಧ್ಯವಾಗುತ್ತಿಲ್ಲ. ಇತರ ದೇಶಗಳಲ್ಲಿನ ಮೊಬೈಲ್ ಕಂಪನಿಗಳು ಪಾವತಿಸುವ ತೆರಿಗೆ ಶೇ 3ರಿಂದ ಶೇ 11ರಷ್ಟಿದ್ದರೆ ಭಾರತದಲ್ಲಿ ಇದು ಸುಮಾರು ಶೇ 25ರಿಂದ ಶೇ 30ರಷ್ಟಿದೆ.

ಈಗ ಮುಖ್ಯವಾಗಿ ಲ್ಯಾಂಡ್‌ಲೈನ್ ಬ್ರಾಡ್‌ಬ್ಯಾಂಡ್‌ನ ವ್ಯವಸ್ಥೆಯನ್ನು ಸುಧಾರಿಸುವತ್ತ ಗಮನಹರಿಸಬೇಕಿದೆ. ನಮ್ಮಲ್ಲಿ ಎದುರಾಗುವ ಮುಖ್ಯ ಸಮಸ್ಯೆಯೆಂದರೆ, ರಸ್ತೆ ಕಾಮಗಾರಿ ಕೈಗೊಳ್ಳುವ ಇಲಾಖೆ ಹಾಗೂ ದೂರಸಂಪರ್ಕ ಇಲಾಖೆಯ ನಡುವಿನ ಸಮನ್ವಯದ ಕೊರತೆ. ಈ ಸಮಸ್ಯೆಯನ್ನು ಪರಿಹರಿಸಿದರೆ ಸವಾಲನ್ನು ಯಶಸ್ವಿಯಾಗಿ ನಿರ್ವಹಿಸಬಹುದು.

‘ಡಿಜಿಟಲ್ ಇಂಡಿಯಾ’ ಉಪಕ್ರಮದ ಭಾಗವಾಗಿ ಆಪ್ಟಿಕ್ ಫೈಬರ್ ಕೇಬಲ್‌ಗಳ ಮೂಲಕ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್‌ ಸೇವೆಯನ್ನು ಒದಗಿಸಲಾಗುತ್ತಿದೆ. ಆದರೆ ಪ್ರಗತಿ ಬಹಳ ನಿಧಾನವಾಗಿದೆ. ಲಾಕ್‌ಡೌನ್‌ನ ನಂತರವೂ ಮನೆಯಿಂದ ಕೆಲಸ ಮಾಡುವುದು ಮತ್ತು ಮನೆಯಿಂದಲೇ ವಿದ್ಯಾರ್ಜನೆ ಈ ಎರಡು ವಿಧಾನಗಳನ್ನೂ ಹೆಚ್ಚಿನ ಜನ ಸ್ವೀಕರಿಸಬಹುದು ಎಂದು ಅಂದಾಜಿಸಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಇಂಟರ್ನೆಟ್‌ನ ವೇಗದಲ್ಲಿ ಬಹಳಷ್ಟು ಪ್ರಗತಿ ಉಂಟಾಗಿದ್ದರೂ ಸಣ್ಣ ಪಟ್ಟಣಗಳು ಮತ್ತು ಗ್ರಾಮಗಳಲ್ಲಿ ಇನ್ನೂ ಹೆಚ್ಚಿನ ಅವಶ್ಯಕತೆ ಇದ್ದೇಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು