ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾಗದ ಘನತೆಯ ಬದುಕು

ಅಪೌಷ್ಟಿಕತೆ ನಿವಾರಣೆ ಮತ್ತು ಉದ್ಯೋಗ ಖಾತರಿ ಯೋಜನೆಗೆ ಬಜೆಟ್‌ನಲ್ಲಿ ದೊರೆಯದ ಬಲ
Last Updated 10 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಆಹಾರ ಭದ್ರತೆ ಅಥವಾ ಉದ್ಯೋಗ ಖಾತರಿಗೆ ಸಂಬಂಧಿಸಿದ ಕಾನೂನುಗಳು, ಜನರ ಹೋರಾಟದ ಫಲವಾಗಿ ರೂಪುಗೊಂಡಂತಹವುಗಳು. ಸಾಮಾಜಿಕ ಸುರಕ್ಷೆ, ಮಾತೃತ್ವ ಸಹಯೋಗ, ಮಕ್ಕಳ ಆಹಾರ ಎಲ್ಲವನ್ನೂ ಒಳಗೊಂಡಿರುವ ಆಹಾರ ಭದ್ರತಾ ಕಾನೂನನ್ನು ಸರ್ಕಾರವು ಒಲ್ಲದ ಮನಸ್ಸಿನಿಂದ ಜಾರಿಗೊಳಿಸುತ್ತಿರುವಂತೆ ಕಾಣಿಸುತ್ತಿದೆ. ಭಾರತದಲ್ಲಿ ಹಸಿವಿನ ಪ್ರಮಾಣ ಏರುತ್ತಲೇ ಇದೆ ಎಂದು ಜಾಗತಿಕ ಹಸಿವಿನ ಸೂಚ್ಯಂಕ ಹೇಳುತ್ತಿದೆ. ಅಪೌಷ್ಟಿಕತೆಯೂ ಅಧಿಕ ಪ್ರಮಾಣದಲ್ಲೇ ಇದೆ. ಪೌಷ್ಟಿಕಾಂಶ ಭದ್ರತೆಗೆ 2020-21ರ ಬಜೆಟ್‌ನಲ್ಲಿ ₹35,600 ಕೋಟಿ ತೆಗೆದಿರಿಸಲಾಗಿದೆಯಾದರೂ ಈ ಬೃಹತ್‌ ಕಾರ್ಯಕ್ಕೆ ಈ ಮೊತ್ತ ಸಾಲದು.

ಪಡಿತರ ಸಬ್ಸಿಡಿಗಾಗಿ 2020–21ರ ಬಜೆಟ್‌ನಲ್ಲಿ ಬರೀ ₹1,15,569 ಕೋಟಿಯನ್ನು ತೆಗೆದಿರಿಸಲಾಗಿದೆ. ರೈತರಿಂದ ಆಹಾರ ಧಾನ್ಯ ಖರೀದಿ, ಗೋದಾಮುಗಳಲ್ಲಿ ಸಂಗ್ರಹ ಮತ್ತು ನಾಗರಿಕರಿಗೆ ಪಡಿತರ ಹಂಚಿಕೆ ಇವೆಲ್ಲವೂ ಇಷ್ಟು ಹಣದಲ್ಲಿಯೇ ಆಗಬೇಕು. ಭಾರತದ ಆಹಾರ ನಿಗಮಕ್ಕೆ ಒದಗಿಸುತ್ತಿರುವ ಹಣ ಸಾಕಾಗದೆ, ಅದು ಸದಾ ಸಾಲದಲ್ಲಿಯೇ ಇರಬೇಕಾದ ಸ್ಥಿತಿ ಇದೆ. ಈ ಸಾಲಕ್ಕೆ ದೊಡ್ಡ ಪ್ರಮಾಣದಲ್ಲಿ ಬಡ್ಡಿ ತೆರಲಾಗುತ್ತಿದೆ.‘ಆಹಾರ ನಿಗಮದ ವೆಚ್ಚ ಹೆಚ್ಚುತ್ತಿದೆ. ಅದನ್ನು ಮುಚ್ಚುವುದೇ ಲೇಸು ಎಂಬ ನಿರ್ಧಾರ ಬಲುಬೇಗ ಹೊರಬೀಳಬಹುದು’ ಎಂಬ ಸಂಶಯವನ್ನು ‘ಆಹಾರದ ಹಕ್ಕಿಗಾಗಿ ಆಂದೋಲನ’ದ ಡಾ. ದೀಪಾ ಸಿನ್ಹಾ ವ್ಯಕ್ತಪಡಿಸುತ್ತಾರೆ.

ದೇಶದ ಗೋದಾಮುಗಳು ತುಂಬಿ ತುಳುಕುತ್ತಿದ್ದರೂ ಆಹಾರಧಾನ್ಯಗಳನ್ನು ಜನರಿಗೆ ಹಂಚುವುದಕ್ಕೆ ಖರ್ಚು ಹೆಚ್ಚು ಬೀಳುತ್ತಿದೆ ಎನ್ನುವ ಕಾರಣಕ್ಕೆ ‘ಕಡಿಮೆ ದರದ ಪಡಿತರವನ್ನು ದೇಶದ ಶೇ 20ರಷ್ಟು ಜನರಿಗೆ ನೀಡಿದರೆ ಸಾಕು, ಉಳಿದವರೆಲ್ಲ ಸಬ್ಸಿಡಿರಹಿತ ದರದಲ್ಲಿ ಪಡಿತರ ಖರೀದಿಸಲಿ’ ಎಂದು ಆರ್ಥಿಕ ಸಮೀಕ್ಷೆಯು ಶಿಫಾರಸು ಮಾಡಿದೆ. ಪಡಿತರವನ್ನು ಸಾರ್ವತ್ರೀಕರಣಗೊಳಿಸಬೇಕು ಎಂಬ ಬೇಡಿಕೆ ಇದೆಯಾದರೂ ಆಹಾರ ಭದ್ರತಾ ಕಾನೂನಿನ ಅಡಿ ಅದು ಈಗ ಶೇ 67ರಷ್ಟು ಜನರಿಗೆ ಸಿಕ್ಕಿದೆ. ಹೀಗೆ ಕಷ್ಟಪಟ್ಟು ಪಡೆದಿದ್ದನ್ನು ಸರ್ಕಾರವು ಸುಲಭದಲ್ಲಿ ಕಿತ್ತುಕೊಳ್ಳಲಾಗದು. ಪಡಿತರವೆಂದರೆ ಬರೀ ಅಕ್ಕಿ, ಗೋಧಿಯಲ್ಲ; ರಾಗಿ, ಜೋಳ, ಬೇಳೆಕಾಳು ಕೂಡ ಇರುವ ಪೌಷ್ಟಿಕ ಆಹಾರ ಪದಾರ್ಥಗಳು, ಗುಣಮಟ್ಟದ ಧಾನ್ಯಗಳು ಎಂದು ಮತ್ತೆ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಇರುವಾಗ, ಪಡಿತರ ವ್ಯವಸ್ಥೆಗೆ ಬಜೆಟ್‌ನಲ್ಲಿ ಬಲ ದೊರೆಯದೇ ಇರುವುದು ನಿರಾಶಾದಾಯಕ.

ಸಮುದಾಯದ ಹಸಿವನ್ನು ನೀಗಿಸುವ ಎರಡನೆಯ ದೊಡ್ಡ ಕಾರ್ಯಕ್ರಮ ಮಧ್ಯಾಹ್ನದ ಬಿಸಿಯೂಟ. ಮಕ್ಕಳ ಆಹಾರದ ಹಕ್ಕು ಮತ್ತು ಬದುಕುವ ಹಕ್ಕನ್ನು ಗೌರವಿಸುವ ಈ ಕಾರ್ಯಕ್ರಮ ಈವರೆಗೆ ಸರಿಯಾಗಿ ಜಾರಿಗೊಳ್ಳದೆ ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಬಿಸಿಯೂಟದಲ್ಲಿ ತತ್ತಿಯನ್ನು ಸೇರಿಸಬೇಕೆಂಬ ಹಕ್ಕೊತ್ತಾಯ ಬಹಳ ಕಾಲದಿಂದಲೂ ಇದ್ದಾಗ್ಯೂ ಜಾತಿ, ಧರ್ಮದ ಹೆಸರಿನಲ್ಲಿ ಅದನ್ನು ಆಗಗೊಡುತ್ತಿಲ್ಲ. ಆಹಾರ ತಯಾರಿಕೆಯನ್ನು ಗುತ್ತಿಗೆ ಕೊಡುವಂತಿಲ್ಲ ಎಂದು ಸಂಬಂಧಿಸಿದ ಕಾಯ್ದೆಯು ಹೇಳುತ್ತಿದ್ದರೂ ಖಾಸಗಿ ಸಂಸ್ಥೆಗಳು ಗುತ್ತಿಗೆ ಪಡೆಯುತ್ತಿರುವುದಷ್ಟೇ ಅಲ್ಲ, ಪ್ರೊಟೀನ್‌ಯುಕ್ತ ಆಹಾರವನ್ನು ಮಕ್ಕಳಿಗೆ ಉಣಬಡಿಸಲು ಒಂದಲ್ಲ ಒಂದು ತಡೆಯನ್ನು ತಂದೊಡ್ಡುತ್ತಲೇ ಇವೆ. ಉತ್ತರಪ್ರದೇಶದ ಅಂಗನವಾಡಿಯೊಂದರಲ್ಲಿ ಮಕ್ಕಳು ಉಪ್ಪು ಹಚ್ಚಿಕೊಂಡು ರೊಟ್ಟಿ ತಿನ್ನುವಂತಹ ಸ್ಥಿತಿ ಬಗ್ಗೆ ವರದಿ ಮಾಡಿದ ಪತ್ರಕರ್ತರೊಬ್ಬರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಲಾಗಿತ್ತು. ಬಿಸಿಯೂಟದ ಕಾರ್ಯಕರ್ತೆಯರು ಸಂಬಳ ಹೆಚ್ಚಳಕ್ಕಾಗಿ ಹೋರಾಟ ಮಾಡಲು ಬೆಂಗಳೂರಿಗೆ ಬಂದರೆ, ಅನುಮತಿ ನೀಡದಿರುವ ಕಾರಣಕ್ಕೆ ಅವರು ರೈಲು ನಿಲ್ದಾಣದಲ್ಲಿಯೇ ಧರಣಿ ಕುಳಿತದ್ದು ಇತ್ತೀಚಿನ ಸುದ್ದಿ.

ಮಧ್ಯಾಹ್ನದ ಬಿಸಿಯೂಟಕ್ಕೆ 2013-14ರಲ್ಲಿ ಮತ್ತು 2014-15ರಲ್ಲಿ ₹13,215 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿತ್ತು. ಅದರ ಮರುವರ್ಷ ಒಮ್ಮೆಗೇ ಈ ಮೊತ್ತವು ₹9,236 ಕೋಟಿಗೆ ಇಳಿಯಿತು. ಮತ್ತೆ ಏರಿಕೆಯ ದಿಕ್ಕಿಗೆ ಹೊರಳಿದರೂ ಈ ವರ್ಷ ಪಡೆದದ್ದು ₹11 ಸಾವಿರ ಕೋಟಿ ಮಾತ್ರ. ಈಗ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳೂ ಸೇರಿ 9.17 ಕೋಟಿ ಮಕ್ಕಳನ್ನು ಅದು ತಲುಪುತ್ತಿದೆ. ನಸುಕಿನಲ್ಲಿಯೇ ಎದ್ದು ಕಾಲೇಜಿಗೆ ಓಡಿಬರುವ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೂ ಬಿಸಿಯೂಟ ಯೋಜನೆಯನ್ನು ವಿಸ್ತರಿಸಬೇಕು ಎನ್ನುವ ಬೇಡಿಕೆ ಈಗ ಕೇಳಿಬಂದಿದೆ. ಆದರೆ, ಅದರ ಕಡೆಗೆ ಸರ್ಕಾರ ಗಮನಹರಿಸಿದಂತೆ ಕಾಣುವುದಿಲ್ಲ.

ಇಡೀ ದೇಶದ ಸಮುದಾಯದ ಹಸಿವನ್ನು ಅಳೆಯುವುದು 5 ವರ್ಷದೊಳಗಿನ ಮಕ್ಕಳ ಹಸಿವು ಮತ್ತು ತೂಕದಿಂದ. ತಾಯಿ ಮತ್ತು ಮಗು ಇಬ್ಬರ ಪೌಷ್ಟಿಕತೆಗೂ ಇದು ಸಂಬಂಧಿಸಿದ್ದು, ಎರಡನ್ನೂ ಅಂಗನವಾಡಿಗಳು ನೋಡಿಕೊಳ್ಳುತ್ತವೆ. ಮಕ್ಕಳ ಬಿಸಿಯೂಟ, ಹಾಲು, ಮೊಟ್ಟೆ, ತಾಯಂದಿರಿಗೆ ಊಟ, ಮಾತೃತ್ವ ಸಹಯೋಗ ಇವೆಲ್ಲ ಕಾರ್ಯಕ್ರಮಗಳನ್ನು ನಡೆಸುವ ಅಂಗನವಾಡಿಗಳಿಗಾಗಿ ಸರ್ಕಾರ ಇಟ್ಟಿರುವ ವಾರ್ಷಿಕ ಅನುದಾನ ₹28,557 ಕೋಟಿ. ಇದು ಕಳೆದ ವರ್ಷಕ್ಕಿಂತ ಶೇ 3.5ರಷ್ಟು ಹೆಚ್ಚು. ಶೇ 21ರಷ್ಟು ಮಕ್ಕಳು ತೀವ್ರ ಅಪೌಷ್ಟಿಕವಾಗಿರುವಾಗ ಅಂಗನವಾಡಿಗಳತ್ತ ಹೆಚ್ಚಿನ ಗಮನಹರಿಸುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ, ಅನುದಾನದಲ್ಲಿ ಅದು ವ್ಯಕ್ತವಾಗಿಲ್ಲ.

ಗರ್ಭಿಣಿ ಮತ್ತು ಬಾಣಂತಿಯರ ಬಗ್ಗೆ ಕಾಳಜಿ ವಹಿಸುವ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಗಾಗಿ ಸರ್ಕಾರವು ಈ ಹಿಂದಿನ ವರ್ಷ ₹ 2500 ಕೋಟಿ ತೆಗೆದಿರಿಸಿತ್ತು. ಈ ಸಲವೂ ಅಷ್ಟೇ ಮೊತ್ತ ಇರಿಸಿದೆ. ಕಳೆದ ವರ್ಷ ಇಟ್ಟ ಹಣದಲ್ಲಿ ₹ 200 ಕೋಟಿ ಮಿಕ್ಕಿತ್ತು. ಸರ್ಕಾರ ಹಾಕಿರುವ ಷರತ್ತುಗಳ ಕಾರಣದಿಂದಾಗಿ, ಮಾಹಿತಿಯುಳ್ಳ ಸಂಘಟಿತ ಕಾರ್ಮಿಕರಿಗೆ ಮಾತ್ರ ಅದು ಲಭ್ಯವಾಗುತ್ತಿದೆಯೇ ಹೊರತು ಅತಿ ಅವಶ್ಯವುಳ್ಳ ಕೂಲಿಕಾರ ಅಸಂಘಟಿತ ಮಹಿಳೆಯರನ್ನು ತಲುಪುತ್ತಿಲ್ಲ. ಮಾಹಿತಿ ಹಕ್ಕಿನ ಪ್ರಶ್ನೆಯೊಂದಕ್ಕೆ ಸಿಕ್ಕ ಉತ್ತರದ ಪ್ರಕಾರ, 2018ರ ಏಪ್ರಿಲ್‌ನಿಂದ 2019ರ ಜುಲೈವರೆಗೆ ಶೇ 49ರಷ್ಟು ಮಹಿಳೆಯರಿಗೆ ಈ ಸೌಲಭ್ಯ ತಲುಪಿಯೇ ಇಲ್ಲ. ಆಹಾರ ಭದ್ರತಾ ಕಾನೂನಿನ ಆಶಯದಂತೆ ಎಲ್ಲ ತಾಯಂದಿರಿಗೂ ತಾಯ್ತನದ ಸುರಕ್ಷೆ ಸಿಗಬೇಕೆಂದರೆ ₹8,000 ಕೋಟಿ ಮೀಸಲಿರಿಸಬೇಕು ಎಂದು ದೇಶದ 60 ತಜ್ಞರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ವಿಚಾರದಲ್ಲಿ ಒಮ್ಮೆ ಚರ್ಚೆ ಮಾಡಲು ಅವಕಾಶ ಕೊಡಿ ಎಂದು ಕೇಳುತ್ತಿರುವ ಆಂದೋಲನಕ್ಕೆ ಇಂದಿಗೂ ಅವಕಾಶ ಸಿಕ್ಕಿಲ್ಲ. ಆದರೂ ಈ ವರ್ಷದ ಬಜೆಟ್‌ನಲ್ಲಿ ನಮ್ಮ ತಾಯಂದಿರಿಗೆ ತಾಯ್ತನದ ಭದ್ರತೆಯನ್ನು ಈ ಸರ್ಕಾರ ಒದಗಿಸಬಹುದೆಂಬ ಆಶಯವಿತ್ತು. ಅದೂ ಆಗಿಲ್ಲ.

ಮಕ್ಕಳ ಅಪೌಷ್ಟಿಕತೆಯ ನಿವಾರಣೆಗೆ ಶ್ರಮಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪರಿಸ್ಥಿತಿಯೇ ದಯನೀಯವಾಗಿದೆ. ತಾವು ಬರೀ ಗೌರವ ಕಾರ್ಯಕರ್ತರಲ್ಲ, ಸರ್ಕಾರದ ನೌಕರರು, ನೌಕರರಿಗೆ ಇರಬೇಕಾದ ಸಂಬಳ, ಪಿಂಚಣಿ ಮತ್ತು ಸಾಮಾಜಿಕ ಭದ್ರತೆ ಬೇಕು ಎಂದು ಅವರು ಹೋರಾಟ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಈಗಿನ ಬಜೆಟ್ ಕೂಡ ಅಂಗನವಾಡಿ ನೌಕರರ ಹಕ್ಕೊತ್ತಾಯಕ್ಕೆ ಕಿವಿ ಕೊಟ್ಟಿಲ್ಲ.

ಗ್ರಾಮೀಣ ಜನರ ಕೈಗಳಿಗೆ ಕೆಲಸ ಕೊಡುವ ಉದ್ಯೋಗ ಖಾತರಿ ಯೋಜನೆಗೆ ಕಳೆದ ವರ್ಷ ₹60,000 ಕೋಟಿ ತೆಗೆದಿರಿಸಲಾಗಿತ್ತು. ಅದು ಸಾಕಾಗದ ಕಾರಣ, ಬಜೆಟ್‌ ಅಂದಾಜನ್ನು ಪರಿಷ್ಕರಿಸಿ ಮೊತ್ತವನ್ನು ₹71,000 ಕೋಟಿಗೆ ಏರಿಸಲಾಯಿತು. ಈ ವರ್ಷದ ಬಜೆಟ್‌ನಲ್ಲಿ ಖಾತರಿ ಯೋಜನೆಗೆ ₹61,500 ಕೋಟಿ ದೊರೆತಿದೆ. ಕಳೆದ ವರ್ಷದ ಕೂಲಿ ಹಣವೇ ಪೂರ್ತಿ ಪಾವತಿಯಾಗಿಲ್ಲ. ಕೂಲಿಗಾಗಿ ಶ್ರಮಿಕರು ಕಾಯುತ್ತಿದ್ದಾರೆ. ಈ ಯೋಜನೆಗೆ ಬಜೆಟ್‌ನಲ್ಲಿ ಕನಿಷ್ಠ ₹85,927 ಕೋಟಿ ಇರಿಸಬೇಕು ಎಂಬುದು ಪರಿಣತರ ಅಂದಾಜು. ಹಾಗಿದ್ದರೂ ಕಡಿಮೆ ಹಣ ತೆಗೆದಿರಿಸಿರುವುದು ನಿರಾಶೆಯನ್ನು ಉಂಟುಮಾಡಿದೆ. ಅಪೌಷ್ಟಿಕತೆ ನಿವಾರಣೆ, ಉದ್ಯೋಗ ಖಾತರಿಯಂತಹ ಯೋಜನೆಗಳಿಗೆ ಅನುದಾನ ಹಂಚಿಕೆಯಲ್ಲಿ ಜಿಪುಣತನ ತೋರುವ ಮೂಲಕ ಸರ್ಕಾರವು ಈ ವಿಚಾರಗಳು ತನ್ನ ಆದ್ಯತಾ ಪಟ್ಟಿಯಲ್ಲಿ ಇಲ್ಲ ಎಂಬುದನ್ನು ತೋರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT