ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆಯಲ್ಲಿ ಮೈಕ್ರೊಪ್ಲಾಸ್ಟಿಕ್

ನಮ್ಮ ಆಹಾರ ಸರಪಳಿ ಎಲ್ಲಿಂದ ಎಲ್ಲಿಗೆ ನಮ್ಮನ್ನು ಕರೆದೊಯ್ಯುತ್ತಿದೆ?
Last Updated 4 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಪ್ಲಾಸ್ಟಿಕ್‍ನ ಶತಾವತಾರಗಳು ಪರಿಚಯವಾಗಿ ಶತಮಾನವೇ ದಾಟಿದೆ. ಈಗ ಜಗತ್ತು ಅದರ ಬಿಗಿಮುಷ್ಟಿಯಲ್ಲಿದೆ. ಪಾರಾಗಲು ದೊಡ್ಡ ಕ್ರಾಂತಿಯೇ ಆಗಬೇಕು. ಈಗಾಗಲೇ ಸಾಗರಕ್ಕೆ ಸಾವಿರ ಲಕ್ಷ ಟನ್ನು ಪ್ಲಾಸ್ಟಿಕ್ ಉತ್ಪನ್ನಗಳನ್ನು ಜಗತ್ತು ಎಗ್ಗಿಲ್ಲದೇ ಸಾಗಿಸಿದೆ. ಪ್ರತಿವರ್ಷ 80 ಲಕ್ಷ ಟನ್ನು ಕಡಲ ಒಡಲನ್ನು ಸೇರುತ್ತಿದೆ. ಈ ಹೊರೆಯಲ್ಲಿ ಎಲ್ಲ ದೇಶಗಳ ಕೊಡುಗೆಯೂ ಇದೆ.

ಪ್ಲಾಸ್ಟಿಕ್ ಎನ್ನುವಾಗ ಥಟ್ಟನೆ ಕಣ್ಣಮುಂದೆ ಬರುವುದು ಪ್ಲಾಸ್ಟಿಕ್ ಚೀಲ, ಡಬ್ಬಿ, ಪ್ಲಾಸ್ಟಿಕ್ ಪ್ಯಾಕ್, ನೀರಿನ ಬಾಟಲು, ನೈಲಾನ್ ಹಗ್ಗ ಇತ್ಯಾದಿ. ಒಮ್ಮೆ ಬಳಸಿ ಬಿಸುಡುವ ಪ್ಲಾಸ್ಟಿಕ್ಕನ್ನು ಬಾಂಗ್ಲಾದೇಶ, ಚೀನಾ ಸೇರಿದಂತೆ 14 ದೇಶಗಳು ನಿಷೇಧಿಸಿವೆ. ಯುರೋಪಿನ ರಾಷ್ಟ್ರಗಳಾಗಲೀ ಅಮೆರಿಕವಾಗಲೀ ಇನ್ನೂ ಮನಸ್ಸು ಮಾಡಿಲ್ಲ. ಭಾರತದಲ್ಲಿ ಈ ವರ್ಷವಾದರೂ ಇದು ಜಾರಿಗೆ ಬರಬೇಕಾಗಿತ್ತು. ಸದ್ಯಕ್ಕೆ ಅದು ಸಾಧ್ಯವಾಗುವ ಲಕ್ಷಣ ಕಾಣುತ್ತಿಲ್ಲ. 50 ಮೈಕ್ರಾನ್‍ಗಿಂತ ತೆಳ್ಳಗಿರುವ ಪ್ಲಾಸ್ಟಿಕ್ ಚೀಲಗಳು ಬೇಗ ಹರಿಯುತ್ತವೆ, ಸಣ್ಣ ಸಣ್ಣ ಚೂರುಗಳಾಗಿ ಎಲ್ಲೆಡೆ ಹರಡುತ್ತವೆ. ಜೈವಿಕವಾಗಿ ವಿಘಟನೆಯಾಗುವುದಿಲ್ಲ ಎಂಬ ಕಾರಣಕ್ಕೆ ಕರ್ನಾಟಕವೂ ಸೇರಿದಂತೆ ಭಾರತದ 25 ರಾಜ್ಯಗಳು ಉತ್ಪಾದನೆಗೆ ನಿಷೇಧ ಹೇರಿವೆ.

ಇದು, ಸಮಸ್ಯೆಯ ಒಂದು ಭಾಗ ಅಷ್ಟೆ. ಜಗತ್ತು ಈಗ ಕಳವಳಗೊಂಡಿರುವುದು ಬೇರೆಯದೇ ಆದ ಪ್ಲಾಸ್ಟಿಕ್ ಸಮಸ್ಯೆಗೆ. ಇದು, ಮೈಕ್ರೊಪ್ಲಾಸ್ಟಿಕ್- 5 ಮಿಲಿ ಮೀಟರ್‌ನಿಂದ 100 ನ್ಯಾನೊ ಮೀಟರ್‌ವರೆಗಿನ ಸಣ್ಣ ಪ್ಲಾಸ್ಟಿಕ್ ಚೂರುಗಳಿಗೆ ಸಂಬಂಧಿಸಿದ್ದು. ಇಲ್ಲಿ 5 ಮಿ.ಮೀ. ಪ್ಲಾಸ್ಟಿಕ್ ಚೂರುಗಳು ಅಕ್ಕಿ ಗಾತ್ರದವು, ಕಣ್ಣಿಗೆ ಕಾಣುತ್ತವೆ. ನ್ಯಾನೊ ಗಾತ್ರದ ಮೈಕ್ರೊಪ್ಲಾಸ್ಟಿಕ್ ಅನ್ನು ನೋಡಲು ಪ್ರಬಲ ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳೇ ಬೇಕು. ಹೀಗಾಗಿಯೇ ಅವು ಅಗೋಚರ ಶತ್ರು. ನೆಲ–ಜಲ–ಗಾಳಿ ಎಲ್ಲದರಲ್ಲೂ ಹರಡಿರುವುದು ಊಹೆಯಲ್ಲ, ಪ್ರಮಾಣೀಕರಿಸಿದ ಸತ್ಯ. ಪ್ಲಾಸ್ಟಿಕ್ ಉತ್ಪನ್ನಗಳು ಬಿಸಿಲಿನಲ್ಲಿ ಶಿಥಿಲವಾಗುತ್ತವೆ, ಚೂರಾಗುತ್ತವೆ. ಅವುಗಳನ್ನು ಗಾಳಿ ಎತ್ತುತ್ತದೆ, ನೆಲದ ತುಂಬ ಹರಡುತ್ತದೆ, ಹರಿಯುವ ನೀರು ಇಂಥ ಚೂರುಗಳನ್ನು ಸಾಗರಕ್ಕೆ ಸಾಗಿಸುತ್ತದೆ. ಇದಕ್ಕೆ ಭೌಗೋಳಿಕ ಹಂಗೂ ಇಲ್ಲ, ಲಗಾಮೂ ಇಲ್ಲ. ಅತ್ತ ಆರ್ಕ್‌ಟಿಕ್‌ ಸಮುದ್ರದಿಂದ ಪೆಸಿಫಿಕ್ ಸಾಗರದಲ್ಲಿರುವ 11 ಕಿಲೊ ಮೀಟರ್ ಆಳದ ಮೇರಿಯಾನ ಕಮರಿಯವರೆಗೆ, ಇತ್ತ ಆಲ್ಫ್ಸ್‌ನಿಂದ ಅಟಕಾಮ ಮರುಭೂಮಿಯವರೆಗೆ ಮೈಕ್ರೊಪ್ಲಾಸ್ಟಿಕ್‍ನ ರಾಜ್ಯಭಾರ ವಿಸ್ತರಿಸಿದೆ. ಇಷ್ಟೊಂದು ಪ್ರಮಾಣದ ಮೂಲ ಯಾವುದು ಎಂಬ ಪ್ರಶ್ನೆ ಏಳುತ್ತದೆ.

ಆಹಾರ ಸಂಸ್ಕರಣೆ, ವಿಶೇಷವಾಗಿ ಆಹಾರದ ಪೊಟ್ಟಣಗಳು, ಹಾಗೆಯೇ ನೀರಿನ ಬಾಟಲು, ಸೋಡಾ ಬಾಟಲು, ಪೇಯದ ಬಾಟಲುಗಳು ಉತ್ಪಾದನೆಯ ಹಂತದಲ್ಲಿ ಕಳಪೆ ಮಟ್ಟದವಾಗಿದ್ದರೆ ಸುಲಭವಾಗಿ ಮೈಕ್ರೊಪ್ಲಾಸ್ಟಿಕ್ ಆಗಿ ಗಾತ್ರದಲ್ಲಿ ಕುಗುತ್ತಾ ಹೋಗುತ್ತವೆ. ಇವು
ಎಲ್ಲಿ ಅಪಾಯಕಾರಿಯೆಂದರೆ, ಅಸಂಖ್ಯ ಸೂಕ್ಷ್ಮಜೀವಿಗಳನ್ನೂ, ವಿಷಕಾರಿ ರಾಸಾಯನಿಕಗಳನ್ನೂ ಲೇಪನ ಮಾಡಿಕೊಂಡು ಅವು ಒಯ್ಯಬಲ್ಲವು. ಉಸಿರಾಟದ ಮೂಲಕ ಶ್ವಾಸಕೋಶ ಸೇರಬಲ್ಲಷ್ಟು ಸಣ್ಣವು. ನಮ್ಮ ಮೂಗಿನ ರೋಮ, ಲೋಳೆಯಿಂದಾದ ತಡೆಗೋಡೆಯನ್ನೂ ಭೇದಿಸಿ, ಬ್ಯಾಕ್ಟೀರಿಯ-ವೈರಸ್‍ಗಳು ನಮ್ಮ ದೇಹವನ್ನು ಪ್ರವೇಶಿಸುವಂತೆ. ಅಮೆರಿಕದ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು 20 ವರ್ಷಗಳ ಹಿಂದೆಯೇ ಒಂದು ವರದಿ ಪ್ರಕಟಿಸಿ, ಪ್ಲಾಸ್ಟಿಕ್ ಉತ್ಪಾದಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೂರು ಮಂದಿಯಲ್ಲಿ ಶೇ 70 ಮಂದಿಯ ಶ್ವಾಸಕೋಶದಲ್ಲಿ ಮೈಕ್ರೊಪ್ಲಾಸ್ಟಿಕ್ ಇರುವುದಾಗಿ ವರದಿ ಮಾಡಿತ್ತು. ಚಹಾದ ಪುಡಿ ಇರುವ ಪುಟಾಣಿ ಬ್ಯಾಗನ್ನು 95 ಡಿಗ್ರಿ ಸೆಂ. ಉಷ್ಣತೆಯಲ್ಲಿ ಕಾಸಿ, ಚಹಾದ ಸ್ಯಾಂಪಲ್ಲನ್ನು ಸೂಕ್ಷ್ಮದರ್ಶಕದಲ್ಲಿ ಇಟ್ಟು ನೋಡಿದಾಗ, ತಜ್ಞರಿಗೆ ಕಂಡದ್ದು 11 ಶತಕೋಟಿ ಮೈಕ್ರೊಪ್ಲಾಸ್ಟಿಕ್ ಚೂರು. ಇದು ಮೊದಲನೆಯ ಶಾಕ್. ಮೈಕ್ರೊಪ್ಲಾಸ್ಟಿಕ್ ಹೊಟ್ಟೆಯಲ್ಲಿ ವಾಸ್ತವ್ಯ ಹೂಡಿದ್ದು ಖಚಿತವಾಯಿತು.

ಇತ್ತೀಚೆಗೆ ವಿಯೆನ್ನಾದ ವೈದ್ಯಕೀಯ ವಿಶ್ವವಿದ್ಯಾಲಯ ಮೈಕ್ರೊಪ್ಲಾಸ್ಟಿಕ್‌ಗಳ ಹಾವಳಿಯನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಲು ಇನ್ನೊಂದು ತಂತ್ರ ಅನುಸರಿಸಿತ್ತು. ಫಿನ್‍ಲ್ಯಾಂಡ್, ಇಟಲಿ, ಜಪಾನ್, ನೆದರ್‍ಲೆಂಡ್ಸ್, ಪೋಲೆಂಡ್, ರಷ್ಯಾ, ಯು.ಕೆ., ಆಸ್ಟ್ರಿಯಾದ 8 ಮಂದಿಯ ಮಲ ಪರೀಕ್ಷಿಸಿದಾಗ, ಹತ್ತು ಗ್ರಾಂ ಮಲದಲ್ಲಿ ಹತ್ತು ವಿವಿಧಬಗೆಯ 20 ಮೈಕ್ರೊಪ್ಲಾಸ್ಟಿಕ್ ಚೂರುಗಳು ಕಂಡುಬಂದಿದ್ದವು. ಇವರೆಲ್ಲ ಬಾಟಲಿಯ ನೀರು ಕುಡಿದಿದ್ದರು, ಹಾಗೆಯೇ ಸಾಗರ ಜೀವಿಗಳು, ವಿಶೇಷವಾಗಿ ಸೀಗಡಿ, ಮೀನು ಮತ್ತು ಚಿಪ್ಪು ಮೀನನ್ನು ತಿಂದಿದ್ದರು. ನಮ್ಮ ಆಹಾರ ಸರಪಳಿ ಎಲ್ಲಿಂದ ಎಲ್ಲಿಗೆ ನಮ್ಮನ್ನು ಒಯ್ಯುತ್ತಿದೆ?

ಸಾಗರ ಜೀವಿಗಳ ಮೇಲೆಮೈಕ್ರೊಪ್ಲಾಸ್ಟಿಕ್‌ ಭಯಾನಕ ಪರಿಣಾಮ ಬೀರುತ್ತದೆ. ಅವುಗಳ ಪೋಷಕಾಂಶಗಳ ಹೀರುವಿಕೆಗೇ ಭಂಗ ತರುತ್ತದೆ. ಜೀರ್ಣಾಂಗ ವ್ಯವಸ್ಥೆಗೆ ಗಾಸಿ ಮಾಡುತ್ತದೆ. ಏಡಿ, ಸೀಗಡಿ, ಮೀನು ತಿಂದವರಿಗೆ ವಿಷಕಾರಿ ರಾಸಾಯನಿಕಗಳ ನೇರ ಉಚಿತ ಪ್ರವೇಶ ಹೊಟ್ಟೆಗೆ. 150 ಮೈಕ್ರೊಮೀಟರ್ ಗಾತ್ರದ ಪ್ಲಾಸ್ಟಿಕ್ ಚೂರುಗಳನ್ನು ಮನುಷ್ಯನ ಜೀರ್ಣಾಂಗ ಅರಗಿಸಿಕೊಳ್ಳುವುದಿಲ್ಲ.

ನಮ್ಮ ಹೊಟ್ಟೆಯಲ್ಲಿ ಈಮೈಕ್ರೊಪ್ಲಾಸ್ಟಿಕ್ ತರಬಹುದಾದ ಅಪಾಯದ ಕುರಿತು ಸಂಶೋಧನೆಗಳು ಆಗಾಗ ಎಚ್ಚರಿಸುತ್ತಿವೆ. ಮನುಷ್ಯನ ರಕ್ತನಾಳಗಳಲ್ಲಿ ಮೈಕ್ರೊಪ್ಲಾಸ್ಟಿಕ್ ಸೇರಿದರೆ, ರಕ್ತದ ಪ್ರವಹನೆಗೆ ಅಡ್ಡ ಬರುವುದಷ್ಟೇ ಅಲ್ಲ, ರಕ್ತದಲ್ಲಿರುವ ಪ್ರೋಟೀನನ್ನು ನಿಷ್ಕ್ರಿಯಗೊಳಿಸುತ್ತದೆ ಎಂಬುದನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವೇ? ಅದರಲ್ಲೂ ಅದರೊಡನಿರುವ ವಿಷಕಾರಿ ರಾಸಾಯನಿಕಗಳು ಬಿಳಿರಕ್ತಕಣಗಳನ್ನೂ ಕೊಲ್ಲಬಲ್ಲವೆಂದು ವೆಲ್ಲೂರು ತಾಂತ್ರಿಕ ಸಂಸ್ಥೆಯ ತಜ್ಞರು ವರದಿ ಮಾಡಿದ್ದಾರೆ. ಇದೇ ವರ್ಷದ ಆರಂಭದಲ್ಲಿ ಯುರೋಪಿನ ವಿಜ್ಞಾನ ಅಕಾಡೆಮಿಗೆ ವೈಜ್ಞಾನಿಕ ಸಲಹೆ ನೀಡುವ ಸಂಸ್ಥೆಯೊಂದು 173 ಪುಟಗಳ ವಿಶ್ಲೇಷಣಾ ವರದಿ ಸಿದ್ಧಪಡಿಸಿ, ‘ಸದ್ಯದ ಅಧ್ಯಯನಗಳಿಂದ ಮನುಷ್ಯನ ಆರೋಗ್ಯದ ಮೇಲೆ ಮೈಕ್ರೊಪ್ಲಾಸ್ಟಿಕ್ ತರುವ ದುಷ್ಪರಿಣಾಮಗಳು ಸ್ಪಷ್ಟವಾಗಿ ತಿಳಿದುಬಂದಿಲ್ಲ, ಅವು ಅಪಾಯಕಾರಿಯೆಂದು ಘೋಷಿಸುವ ಹಂತದಲ್ಲಿ ನಾವಿಲ್ಲ’ ಎಂದಿದೆ. ‘ಮುಂದೆ ಇದು ಅಪಾಯವಲ್ಲವೆಂದು ಹೇಳುವ ಸ್ಥಿತಿಯಲ್ಲಿ ನಾವಿಲ್ಲ’ ಎಂದು ಸಣ್ಣ ಷರಾ ಬರೆದಿದೆ.

ರಕ್ತನಾಳಗಳಲ್ಲಿ ಹರಿವಿಗೆ, ಕ್ಷೀರಗ್ರಂಥಿ, ಪಿತ್ತಜನಕಾಂಗದ ಮೇಲೆಮೈಕ್ರೊಪ್ಲಾಸ್ಟಿಕ್ ತರಬಹುದಾದ ಅಪಾಯಗಳನ್ನು ಕುರಿತು ಮಾಡುವ ಅಧ್ಯಯನಕ್ಕೆ ಆದ್ಯತೆ ಸಿಗಬೇಕೆಂದು ವಿಯೆನ್ನಾ ವಿಶ್ವವಿದ್ಯಾಲಯ ತನ್ನ ಕಾಳಜಿಯನ್ನು ಮುಂದಿಟ್ಟಿದೆ. ಮೊದಲು ಚಿಪ್ಪು ಮೀನುಗಳ ಬಗ್ಗೆ
ಗಮನಕೊಡಿ, ಅವು ಪ್ಲಾಸ್ಟಿಕ್‍ನಲ್ಲಿರುವ ರಾಸಾಯನಿಕಗಳನ್ನು ನೀರಿನಿಂದ ಬೇರ್ಪಡಿಸಿ, ಯಶಸ್ವಿಯಾಗಿ ಸಂಚಯಿಸಿ
ಕೊಳ್ಳಬಲ್ಲವು. ಜಗತ್ತಿನಲ್ಲಿ ಚಿಪ್ಪು ಮೀನು ತಿನ್ನುವವರ ಸಂಖ್ಯೆ ಕಡಿಮೆ ಇಲ್ಲ ಎಂದು ಮ್ಯೂನಿಚ್‍ನಲ್ಲಿ ಸಮಾವೇಶಗೊಂಡ ರಸಾಯನ ವಿಜ್ಞಾನಿಗಳ ಗೋಷ್ಠಿಯಲ್ಲಿ ಎಚ್ಚರಿಕೆಯ ಗಂಟೆ ಬಾರಿಸಲಾಗಿದೆ.

ಈ ಕುರಿತು ನಿರ್ಣಾಯಕವಾಗಿ ಏನೂ ಹೇಳಲು ಆಗುತ್ತಿಲ್ಲ ಎಂದು ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಸ್ಥೆ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದೆ. ಇದೇ ಆಗಸ್ಟ್ ತಿಂಗಳಲ್ಲಿ ಆರೋಗ್ಯ ಸಂಸ್ಥೆ ಇನ್ನೊಂದು ಕಿವಿಮಾತನ್ನೂ ಹೇಳಿದೆ. ಎಲ್ಲ ದೇಶಗಳೂ ಕೊಳಚೆ ನೀರನ್ನು ಸರಿಯಾಗಿ ಸಂಸ್ಕರಿಸಿದರೆ ಶೇ 80 ಭಾಗ ಮೈಕ್ರೊಪ್ಲಾಸ್ಟಿಕ್‍ನ ಹಾವಳಿಯನ್ನು ನಿವಾರಿಸಬಹುದು ಎಂದಿದೆ. ವ್ಯರ್ಥ ಆಹಾರದೊಡನೆ ದೊಡ್ಡ ಪ್ಲಾಸ್ಟಿಕ್ ಚೀಲಗಳು ದನಕರುಗಳ ಹೊಟ್ಟೆ ಸೇರಿ ಶಸ್ತ್ರಕ್ರಿಯೆ ಮಾಡಿಯೇ ಹೊರತೆಗೆಯಬೇಕಾದ ಪ್ರಸಂಗಗಳು ಭಾರತದ ಅನೇಕ ರಾಜ್ಯಗಳಲ್ಲಿ ಸುದ್ದಿ ಮಾಡಿವೆ.

ಖ್ಯಾತ ಸಸ್ಯವಿಜ್ಞಾನಿ ಬಿ.ಜಿ.ಎಲ್. ಸ್ವಾಮಿ ಅವರ ‘ನಮ್ಮಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಕೃತಿಯಲ್ಲಿ ದಕ್ಷಿಣ ಅಮೆರಿಕದ ಹಲವು ಹಣ್ಣು ಹಂಪಲುಗಳನ್ನು ನಾವು ಹೇಗೆ ನಮ್ಮದಾಗಿ ಮಾಡಿಕೊಂಡಿದ್ದೇವೆ, ಈಗ ಅವಕ್ಕೆ ನಾವು ಹೇಗೆ ಒಗ್ಗಿಹೋಗಿದ್ದೇವೆ ಎಂಬ ವಿಸ್ಮಯ
ಕಾರಿ ಪ್ರಸಂಗಗಳ ಪ್ರಸ್ತಾಪವಿದೆ. ಆದರೆ ಮೈಕ್ರೊ ಪ್ಲಾಸ್ಟಿಕ್ ಜೀರ್ಣಿಸಿಕೊಳ್ಳುವ ತಾಕತ್ತು ಮನುಷ್ಯನಿಗೆಲ್ಲಿ? ನಾವೇ ಹುಟ್ಟುಹಾಕಿದ ಶತ್ರು ನಮ್ಮ ಹೊಟ್ಟೆಯನ್ನೇ ಪ್ರವೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT