ಶನಿವಾರ, ಜುಲೈ 31, 2021
26 °C
ಸಣ್ಣ ಅತಿಸಣ್ಣ ರೈತರಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಣ್ಣಾಮುಚ್ಚಾಲೆ ಆಟ ನಡೆದುಹೋಗಿದೆ

ವಿಶ್ಲೇಷಣೆ| ಸಣ್ಣ ರೈತರ ದೊಡ್ಡ ಸಮಸ್ಯೆ

ಜಿ.ವಿ.ಜೋಶಿ Updated:

ಅಕ್ಷರ ಗಾತ್ರ : | |

Prajavani

ನ್ಯಾಯ-ನೀತಿಯ ಆಧಾರದಲ್ಲಿ ಕೃಷಿ ಪ್ರಗತಿ ಎಂದರೆ, ಈಗಾಗಲೇ ಧಾರಾಳವಾಗಿ ಹೊಂದಿರುವವರಿಗೆ ಇನ್ನಷ್ಟು ಸೇರಿಸುವುದಾಗಿರಬಾರದು; ಬದಲಾಗಿ, ಅದು ಸಣ್ಣ ಮತ್ತು ಅತಿಸಣ್ಣ ರೈತರ ಶ್ರೇಯೋಭಿವೃದ್ಧಿಗೆ ಪೂರಕವಾಗಿರಬೇಕು ಎಂದು ಹಸಿರು ಕ್ರಾಂತಿಯ ಜನಕನೆಂದೇ ವಿಶ್ವದಲ್ಲಿ ಗುರುತಿಸಿಕೊಂಡ ಮೆಕ್ಸಿಕೊದ ಕೃಷಿತಜ್ಞ ನಾರ್‌ಮನ್ ಬೋರ್‌ಲಾಗ್ ಹೇಳಿದ್ದರು. ಸಮಸ್ಯೆಗಳ ಬಲೆಯಲ್ಲಿ ಸಿಲುಕಿರುವ, ಆತ್ಮಹತ್ಯೆಗೆ ಶರಣಾಗುತ್ತಿರುವ ಭಾರತದ ಸಣ್ಣ ರೈತರ ಪಾಲಿಗೆ ಇರುವ ಸುಧಾರಣೆಯ ದಾರಿ ಇದೇ ಆಗಿದೆ.

ದೇಶದಲ್ಲಿ ಅಭಿವೃದ್ಧಿ ಪ್ರಕ್ರಿಯೆ ನಿರಂತರವಾಗಿ ಸಾಗಿ ಬಡತನ ನಿವಾರಣೆಯಾಗಬೇಕಾದರೆ, ಒಟ್ಟು ರೈತರ ಸಂಖ್ಯೆಯ ಶೇ 85ರಷ್ಟು ಇರುವ ಸಣ್ಣ ಮತ್ತು ಅತಿಸಣ್ಣ ರೈತರ ಬದುಕು ಸುಧಾರಿಸಬೇಕು. ಈ ಗುರಿಯನ್ನು ಸಾಧಿಸಲು ಕೃಷಿರಂಗದ ಕ್ಷಮತೆಯುಳ್ಳ ಸಂಪನ್ಮೂಲಗಳ ಬಳಕೆ, ಬೆಳೆಗಳ ಪದ್ಧತಿಯಲ್ಲಿ ಕ್ರಿಯಾಶೀಲ ಬದಲಾವಣೆ, ಹವಾಮಾನ ಬದಲಾವಣೆಯನ್ನು ಸಮರ್ಥವಾಗಿ ಎದುರಿಸಬಲ್ಲ ಬೇಸಾಯದ ವಿಧಾನ ಮತ್ತು ಆಧುನಿಕ ತಂತ್ರಜ್ಞಾನದ ಸಮರ್ಪಕ ನಿರ್ವಹಣೆ ಅಗತ್ಯ ಎಂದು 2018-19ನೇ ಸಾಲಿನ ದೇಶದ ಆರ್ಥಿಕ ಸಮೀಕ್ಷೆ ತಿಳಿಸಿದೆ. ಅಂದರೆ, ದುರ್ಬಲ ವರ್ಗಕ್ಕೆ ಸೇರಿದ ರೈತ ಸಮುದಾಯದ ಏಳ್ಗೆ ಸಾಧಿಸುವಲ್ಲಿ ದೇಶ ಹಿಂದೆ ಬಿದ್ದ ಸತ್ಯವನ್ನು ಸಮೀಕ್ಷೆ ಅನಾವರಣಗೊಳಿಸಿದೆ.

ಹಾಗೆಂದು, ವಿಶ್ವದಾದ್ಯಂತ ಸಣ್ಣ ರೈತರ ಬದುಕು ಗೋಳಿನ ಕಥೆಯಾಗಿದೆಯೆಂದು ಭಾವಿಸಬೇಕಾಗಿಲ್ಲ. ಉಳುವವನನ್ನೇ ಹೊಲದೊಡೆಯನನ್ನಾಗಿ ಮಾಡುವ ಪ್ರಗತಿಪರ ದೃಷ್ಟಿಯುಳ್ಳ ಜಪಾನಿನ ಭೂಸುಧಾರಣಾ ಕಾನೂನು ಕೇರಳಕ್ಕೆ ಮಾದರಿಯಾಗಲು ಸುಮಾರು 25 ವರ್ಷಗಳ ಅವಧಿ ಬೇಕಾಯಿತು! ಅದೇ ಕಾನೂನು ಕೇರಳದಲ್ಲಿ ಜಾರಿಯಾಗಲು ಮತ್ತೆ ಸುಮಾರು ಎಂಟು ವರ್ಷಗಳು ಬೇಕಾದವು. 1946ರಲ್ಲಿ ಜಪಾನಿನಲ್ಲಿ ಜಾರಿಗೆ ಬಂದ ಭೂಸುಧಾರಣೆ ಕಾನೂನು ಕೇವಲ ಎರಡು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಂಡಿದ್ದನ್ನು ಬೇರೆ ಬೇರೆ ದೇಶಗಳ ಭೂಸುಧಾರಣಾ ತಜ್ಞರು ಹಾಡಿ ಹೊಗಳಿದ್ದಾರೆ.

ಕಾನೂನಿನ ಅನ್ವಯ ಸಣ್ಣ ಗೇಣಿದಾರರು ಸಣ್ಣ ಭೂಮಾಲೀಕರಾಗಿ ಪರಿವರ್ತನೆಗೊಂಡ ಬಳಿಕ ಅವರ ನೆರವಿಗಾಗಿ ಜಪಾನ್ ಸರ್ಕಾರವು ಸಾಲ, ಕೃಷಿ ಸಾಮಗ್ರಿ, ಲಾಭದಾಯಕ ಬೆಲೆ, ಮಾರುಕಟ್ಟೆ ವ್ಯವಸ್ಥೆ ಮತ್ತು ಮೂಲಸೌಕರ್ಯಗಳನ್ನು ಮುತುವರ್ಜಿ ವಹಿಸಿ ಒದಗಿ
ಸಿದ್ದರಿಂದ, ಹೊಸ ಭೂ ಒಡೆಯರ ಬದುಕು ಹಸನಾಯಿತು. ಜಪಾನ್ ನೀಡಿದ ‘ಭೂಸುಧಾರಣೆಯೊಂದೇ ಸಾಲದು, ಭೂಮಿಯ ಸುಧಾರಣೆಯೂ ಅಗತ್ಯ’ ಎನ್ನುವ ಸಂದೇಶವನ್ನು, ಕ್ರಾಂತಿಕಾರಿ ಭೂಸುಧಾರಣಾ ಕಾನೂನನ್ನು ಅನುಷ್ಠಾನಗೊಳಿಸಿದ ಕೇರಳ, ಕರ್ನಾಟಕ, ಹಿಮಾಚಲ ಪ್ರದೇಶವು ಪ್ರಾಮಾಣಿಕವಾಗಿ ಗಮನಿಸ ಬೇಕಾಗಿತ್ತು. ಭೂಮಿಯ ಸುಧಾರಣೆಯಾಗದ್ದರಿಂದ ಭೂಸುಧಾರಣೆಗಳ ಮೂಲ ಉದ್ದೇಶವಾದ ಉತ್ಪಾದಕತೆಯಲ್ಲಿ ಹೆಚ್ಚಳ ಇಲ್ಲಿ ಸಾಧ್ಯವಾಗಿಲ್ಲ.

ಉಳುವವನನ್ನೇ ಹೊಲದೊಡೆಯನನ್ನಾಗಿ ಮಾಡಲು ಬೇಕಾದ ಕ್ರಾಂತಿಕಾರಿ ಭೂಮಸೂದೆಗೆ 1974ರಲ್ಲಿ ಅನುಮೋದನೆ ನೀಡಿ ಅನುಷ್ಠಾನಗೊಳಿಸಿದ ಕರ್ನಾಟಕದಲ್ಲೂ ದೀರ್ಘಾವಧಿಯಲ್ಲಿ ಇದೇ ಅನುಭವ. ಈಗಂತೂ ರೈತರಲ್ಲದವರಿಗೂ ಕೃಷಿ ಭೂಮಿ ಖರೀದಿಸಲು ಅವಕಾಶ ಕಲ್ಪಿಸಿಕೊಡಲು ಭೂಸುಧಾರಣಾ ಕಾನೂನಿಗೆ ತಿದ್ದುಪಡಿ ಮಾಡುವ ಪ್ರಯತ್ನ ಕರ್ನಾಟಕ ಸರ್ಕಾರದಿಂದಲೇ  ನಡೆಯುತ್ತಿರುವುದು ಒಂದು ವಿಪರ್ಯಾಸ.

ಸಣ್ಣ ರೈತರು ಚೀನಾದಲ್ಲಿ ಅಧಿಕ ಸಂಖ್ಯೆಯಲ್ಲಿದ್ದರೂ ಸರ್ಕಾರ ಅಲ್ಲಿ ನೀರಾವರಿ, ವಿದ್ಯುತ್, ರಸ್ತೆಯಂತಹ ಮೂಲಸೌಕರ್ಯ ಒದಗಿಸಿ, ಮಾರುಕಟ್ಟೆ ವ್ಯವಸ್ಥೆ ಮಾಡಿ ಭೂಸುಧಾರಣೆ ಜಾರಿಗೊಳಿಸಿದ್ದರಿಂದ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸುಧಾರಣೆಗೆ ಬೇಕಾದ ಯೋಜನೆ ಅನುಷ್ಠಾನಗೊಳಿಸಿದ್ದರಿಂದ ಉತ್ಪಾದಕತೆಯಲ್ಲಿ ಹೆಚ್ಚಳ ಸಾಧ್ಯವಾಯಿತು.

ಅಮರ್ತ್ಯ ಸೇನ್ ಅವರು ತಿಳಿಸಿದಂತೆ, ಕೃಷಿರಂಗದ ಸುಧಾರಣೆಯ ವಿಷಯದಲ್ಲಿ ಭಾರತವು ಚೀನಾದಿಂದ ಬಹಳಷ್ಟು ಕಲಿಯುವುದಿದೆ. 1978ರಲ್ಲಿ ಮಾರುಕಟ್ಟೆ ಆಧಾರಿತ ಆರ್ಥಿಕ ಸುಧಾರಣೆಗಿಳಿದ ಚೀನಾ, ಮೊದಲಿನ ಹಂತದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸುಧಾರಣೆ ತಂದು ನಂತರ ನಗರ ಪ್ರದೇಶದಲ್ಲಿ ಸುಧಾರಣೆಗಳನ್ನು ಜಾರಿ ಮಾಡಿ ಗೆಲುವು ಸಾಧಿಸಿತು.

1991ರಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ಭಾರತ ದೊಡ್ಡ ಸಾಲ ಪಡೆಯಲು ಐಎಂಎಫ್‌ಗೆ ಮೊರೆ ಹೋದದ್ದನ್ನಾಗಲೀ ಅದರ ಆದೇಶದಂತೆ ಆರ್ಥಿಕ ಸುಧಾರಣೆಗಳು ಜಾರಿಯಾದ ಸತ್ಯವನ್ನಾಗಲೀ ಬಚ್ಚಿಡಲು ಸಾಧ್ಯವಿಲ್ಲ. 1980ರ ದಶಕದಲ್ಲೇ ಸಾರ್ವಜನಿಕ ರಂಗದ ಹೂಡಿಕೆಯಲ್ಲಾದ ತೀವ್ರ ಇಳಿಕೆಯಿಂದ ಪ್ರಾರಂಭವಾದ ಕೃಷಿರಂಗದ ಅವಸಾನವು ಆರ್ಥಿಕ ಸುಧಾರಣೆಗಳು ಹಂತ ಹಂತವಾಗಿ ಜಾರಿಯಾದಂತೆ ಇನ್ನಷ್ಟು ತೀವ್ರಗೊಂಡಿದ್ದು ಸತ್ಯ. ಹೀಗಾದಂತೆ ಸಣ್ಣ ಮತ್ತು ಅತಿಸಣ್ಣ ರೈತರ ಅಸಹಾಯಕತೆ ಹೆಚ್ಚಿದ್ದು ಸಹ ದಾಖಲೆಗೆ ಸೇರಿದೆ.

ಜಪಾನ್‌ ಮತ್ತು ಚೀನಾದಲ್ಲಿ ಸರ್ಕಾರಗಳು ಹಾಕಿದ ಮಾದರಿಯನ್ನು ಭಾರತದ ಯಾವ ರಾಜ್ಯದಲ್ಲೂ ಕಟ್ಟುನಿಟ್ಟಾಗಿ ಅನುಸರಿಸಲಾಗಿಲ್ಲ. ಕೇರಳದಲ್ಲಿ ಹೋರಾಟ ಮಾಡಿ ಕಾನೂನಿನ್ವಯ ಭೂಒಡೆಯರಾದ ಎಷ್ಟೋ ಸಣ್ಣ ರೈತರು ಸಾಗುವಳಿ ಮಾಡಲಾರದೆ, ಹುಟ್ಟಿದಷ್ಟು ಹಣಕ್ಕೆ ಭೂಮಿ ಮಾರಿಬಿಟ್ಟರು. ನಂತರ ಬದುಕುವ ದಾರಿ ಹುಡುಕುತ್ತ ಮಂಗಳೂರಿಗೆ ವಲಸೆ ಹೋದ ಸಂಗತಿಯನ್ನು ರೈತ ನಾಯಕ ಬಿ.ವಿ.ಕಕ್ಕಿಲ್ಲಾಯ ವಿವರಿಸುತ್ತಿದ್ದ ರೀತಿ ಅನನ್ಯವಾಗಿತ್ತು.

ಪ್ರಧಾನಿಯಾಗಿದ್ದ ಮನಮೋಹನ ಸಿಂಗ್, ಕೃಷಿ ವರಮಾನ ಕುಗ್ಗಿ ರೈತರ ಆತ್ಮಹತ್ಯೆಗಳ ಸಂಖ್ಯೆಯಲ್ಲಾದ ಹೆಚ್ಚಳವನ್ನು ಗಮನಿಸಲೇ ಬೇಕಾಯಿತು. ಹೆಚ್ಚು ಸಂಖ್ಯೆಯಲ್ಲಾದ ಸಣ್ಣ ಮತ್ತು ಅತಿಸಣ್ಣ ರೈತರ ಆತ್ಮಹತ್ಯೆ ಗಳ ಜ್ವಲಂತ ಸಮಸ್ಯೆ ಮುನ್ನೆಲೆಗೆ ಬಂದಾಗ, ಕೃಷಿಗೆ ಸಂಬಂಧಪಟ್ಟ ಹೆಚ್ಚಿನ ವಿಷಯಗಳು ಸಂವಿಧಾನದ ರಾಜ್ಯ ಯಾದಿಯಲ್ಲಿವೆ ಎಂದು ಹೇಳಿ ಮುಜುಗರದಿಂದ ಪಾರಾಗುವ ಪ್ರಯತ್ನವನ್ನು ಅವರು ಮಾಡಿದ್ದರು.

ಪಂಜಾಬ್‌ನಲ್ಲಿರುವ ಕೃಷಿ ವಿಶ್ವವಿದ್ಯಾಲಯವು 2017ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಸಾಲದಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಶೇ 77ರಷ್ಟು ರೈತರು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಾಗಿದ್ದರು. ಅಲ್ಲಿ ರಾಜ್ಯ ಸರ್ಕಾರ ಜಾರಿ ಮಾಡಿದ ಸಾಲಮನ್ನಾ ಯೋಜನೆಯ ನೆರವು ಪಡೆದು ಕಷ್ಟದಿಂದ ಪಾರಾಗಲು ಅವರಿಗೆ ಸಾಧ್ಯವಾಗಲೇ ಇಲ್ಲ. ದೇಶದಲ್ಲಿ ಹೆಚ್ಚು ಭತ್ತ ಬೆಳೆದು ಹೆಸರು ಮಾಡಿದ ಪಶ್ಚಿಮ ಬಂಗಾಳದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಬೇಕಾದ ಸಾಂಸ್ಥಿಕ ವ್ಯವಸ್ಥೆ ಇಲ್ಲವಾದ್ದರಿಂದ, ಅವರ ಪಾಲಿಗೆ ಇರುವುದು ಸಾಲದ ಹೊರೆ ಮಾತ್ರ.

ವಿತ್ತ ಸಚಿವರಾಗಿದ್ದ ಅರುಣ್‌ ಜೇಟ್ಲಿ 2016-17ನೇ ಸಾಲಿನ ಬಜೆಟ್ ಭಾಷಣದಲ್ಲಿ, ಕೃಷಿಯನ್ನು ಅಲಕ್ಷಿಸಿದ ಆರೋಪದಿಂದ ಮುಕ್ತರಾಗಲು ಕೃಷಿ ಎನ್ನುವ ಶಬ್ದವನ್ನು 21 ಸಲ, ರೈತ ಎನ್ನುವ ಪದವನ್ನು 33 ಸಲ, ಗ್ರಾಮೀಣ ಎಂಬ ಪದವನ್ನು 26 ಸಲ ಉಪಯೋಗಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ಕಟುವಾಗಿ ಟೀಕಿಸಿದ್ದರೂ ಜೇಟ್ಲಿ ಅದರ ಮಹತ್ವವನ್ನು ಗುರುತಿಸಿದ್ದರು. ಕೃಷಿಗೆ ಅದು ಪೂರಕವಾಗಬೇಕೆಂಬ ಅವರ ಕನಸು ಈ ತನಕ ಭಾಗಶಃ ಆದರೂ ನೆರವೇರಿದೆ ಎಂದು ಕೂಡ ಹೇಳಲು ಸಾಧ್ಯವಾಗುತ್ತಿಲ್ಲ.

ಸಣ್ಣ ಮತ್ತು ಅತಿಸಣ್ಣ ರೈತರಿಗೆ, ಗ್ರಾಮೀಣ ಕುಶಲಕರ್ಮಿಗಳಿಗೆ ಸಾಲ ನೀಡುವ ಉದ್ದೇಶದಿಂದ ಹುಟ್ಟಿ ಕೊಂಡ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸಾಲದ ನೀತಿಯೇ ಬದಲಾಗಿದೆ. ಈಗ ದೊಡ್ಡ ರೈತರಿಗೂ ಅವು ಸಾಲ ನೀಡುತ್ತಿವೆ. ಕುಗ್ರಾಮಗಳಲ್ಲಿದ್ದ ಅವುಗಳ ಶಾಖೆಗಳು ತುಲನಾತ್ಮಕವಾಗಿ ಅಭಿವೃದ್ಧಿ ಹೊಂದಿದ ಹಳ್ಳಿಗಳಿಗೆ ವರ್ಗಾವಣೆಗೊಂಡಿವೆ. ಕೇಂದ್ರ ಬಜೆಟ್‌ಗಳು ತೋರಿಸಿದಂತೆ ವಾಸ್ತವದಲ್ಲಿ ಅವು ಖಾಸಗೀಕರಣದ ಹೊಸ್ತಿಲಿಗೆ ಬಂದು ನಿಂತಿವೆ! ಸಾಲ ಪೂರೈಕೆ, ಕೃಷಿ ಹುಟ್ಟುವಳಿಗಳ ಮಾರಾಟ, ಮೂಲ ಸೌಕರ್ಯ ಒದಗಿ ಸುವಿಕೆ- ಹೀಗೆ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಂಬಂಧಿಸಿದ ಹೆಚ್ಚು ಕಡಿಮೆ ಎಲ್ಲಾ ವಿಷಯಗಳಲ್ಲಿ ಕಣ್ಣಾಮುಚ್ಚಾಲೆ ಆಟ ನಡೆದುಹೋಗಿದೆ. ‘ಭೂಮಿಗಿದ್ದ ಬೆಲೆ ರೈತನಿಗಿಲ್ಲ’ ಎಂದು ಚಿತ್ರನಟ ಪ್ರಕಾಶ್‌ ರೈ ಸುಮಾರು ಎರಡು ವರ್ಷಗಳ ಹಿಂದೆ ಹೇಳಿದ್ದು, ಸಮಸ್ಯೆಗಳ ಸರಪಳಿಯಲ್ಲಿ ಸಿಲುಕಿರುವ ಸಣ್ಣ ಮತ್ತು ಅತಿಸಣ್ಣ ರೈತರ ಮಟ್ಟಿಗೆ ಅಕ್ಷರಶಃ ಸತ್ಯವಾಗಿ
ಬಿಟ್ಟಿದೆ.


ಜಿ.ವಿ.ಜೋಷಿ

ಲೇಖಕ: ಪ್ರಾಧ್ಯಾಪಕ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ ವಿಭಾಗ, ಆಳ್ವಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌
ಆ್ಯಂಡ್‌ ಟೆಕ್ನಾಲಜಿ, ಮೂಡುಬಿದಿರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು