ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ರಂಗಭೂಮಿಯ ವರ್ತಮಾನದ ಬಿಂಬ

ಹೊಸ ತುಡಿತವುಳ್ಳ ರಂಗಪ್ರಯೋಗಗಳಿಗಾಗಿ ಕಾಯುತ್ತಿದೆ ಕನ್ನಡ ರಂಗಭೂಮಿ
Last Updated 27 ಆಗಸ್ಟ್ 2020, 20:15 IST
ಅಕ್ಷರ ಗಾತ್ರ
ADVERTISEMENT
""

ಚಲನಶೀಲವಾದ ರಂಗಭೂಮಿಯು ಆಯಾ ಕಾಲದ ವಿದ್ಯಮಾನಗಳಿಗೆ ಸೃಜನಾತ್ಮಕವಾಗಿ ಪ್ರತಿಕ್ರಿಯಿಸುತ್ತ, ಮೌಲ್ಯಗಳನ್ನುಕಟ್ಟಿಕೊಡುತ್ತ ಬಂದಿರುವುದನ್ನು ಕಾಣುತ್ತೇವೆ. ಅದು, ವರ್ತಮಾನದ ಪ್ರತಿಬಿಂಬವಾಗಿ ಮೂಡುತ್ತ ಜನದನಿಯ ರೂಪದಲ್ಲಿ ಕೆನೆಗಟ್ಟುವಂಥದ್ದು. ಇಂತಹ ಎಲ್ಲ ಅಂಶಗಳನ್ನೂ ತನ್ನಲ್ಲಿ ಮೇಳೈಸಿಕೊಂಡು, ಒಂದು ಕಾಲದಲ್ಲಿ ವೈಭವದ ದಿನಮಾನಗಳನ್ನು ಕಂಡ ಕನ್ನಡ ರಂಗಭೂಮಿ ಈಗ ಪ್ರಯೋಗಶೀಲ ಗುಣದ ಕೊರತೆಯಿಂದ ನರಳುತ್ತಿದೆ.

ಭಾರತೀಯ ರಂಗಭೂಮಿಗೆ ಕನ್ನಡವೂ ಸೇರಿ ಮರಾಠಿ, ಬಂಗಾಳಿ, ಮಲಯಾಳಿ ಮುಂತಾದ ಭಾಷೆಗಳ ರಂಗಚಟುವಟಿಕೆಗಳ ಕೊಡುಗೆ ದೊಡ್ಡದಿದೆಯಾದರೂ ವರ್ತಮಾನದಲ್ಲಿ ಅವುಗಳ ಛಾಪು ಹೇಗಿದೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಕನ್ನಡ ರಂಗಭೂಮಿಯು ಒಣಸಿಪ್ಪೆಯ ಮೆಲುಕು ಹಾಕುತ್ತಾ ರಸಗಾಣದೇ ಸೊರಗಿದೆ.

ಎಪ್ಪತ್ತರ ದಶಕವು ಹವ್ಯಾಸಿ ರಂಗಭೂಮಿಯಲ್ಲಿ ಹೊಸತನದ ಚಳವಳಿ ಹುಟ್ಟಿದ ಕಾಲ. ಆ ಚಳವಳಿಯ ಕಾವು ಮತ್ತು ಅದರ ಫಲಶ್ರುತಿಯನ್ನು ಜತನವಾಗಿ ಕಾಪಿಟ್ಟುಕೊಂಡು ಮುನ್ನಡೆದಿದ್ದೇವೆಯೇ? ರಂಗಭೂಮಿಯು ಸಮಾಜದ ಒಂದು ಅಂಗವಾಗಿದೆಯೇ? ಹಾಗೆ ಉಳಿದಿದ್ದರೆ ಮಾತ್ರ ಉಳಿವುಂಟು. ಸರ್ಕಾರದ ಸಹಾಯಧನ ಪಡೆದ ಹವ್ಯಾಸಿ ತಂಡಗಳು, ಬಹಳಷ್ಟು ರಂಗಶಾಲೆಗಳು, ರೆಪರ್ಟರಿಗಳು ಕನ್ನಡ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿವೆ. ಆದರೆ, ಪ್ರೇಕ್ಷಕರನ್ನು ನಿರೀಕ್ಷಿತ ಮಟ್ಟದಲ್ಲಿ ಕಟ್ಟಿಕೊಡಲು ಅವುಗಳಿಗೆ ಆಗಿಲ್ಲ. ಪ್ರೇಕ್ಷಕರ ಹಣದಿಂದ ನಡೆಯುವ ‘ಪ್ರೇಕ್ಷಕ ರಂಗಭೂಮಿ’ ನಮ್ಮಲ್ಲಿ ಇಲ್ಲ. ‘ಆ್ಯಕ್ಟರ್ ಓರಿಯಂಟೆಡ್’ ರಂಗಭೂಮಿಯೂ ಇಲ್ಲ. ರಂಗನಿರ್ದೇಶಕರಿಂದ ಬೆರಳೆಣಿಕೆಯ ನಟವರ್ಗವನ್ನಷ್ಟೇ ಸೃಷ್ಟಿಸಲು ಸಾಧ್ಯವಾಗಿದೆ. ನಟನಿಗೆ ಸವಾಲೊಡ್ಡುವ ರೀತಿಯ ವಾಸ್ತವಶೈಲಿಯ ನಾಟಕಗಳ ಪಠ್ಯವು ಅಧಿಕ ಪ್ರಮಾಣದಲ್ಲಿ ಪ್ರಯೋಗಕ್ಕೆ ಒಳಗಾಗಿಲ್ಲ. ಬರೀ ಶೈಲೀಕೃತ ರಂಗ ಪ್ರಯೋಗಗಳಿಂದ ಇದೆಲ್ಲ ಸಾಧ್ಯವಿಲ್ಲ. ಸವಾಲೊಡ್ಡುವ ನಾಟಕಗಳಲ್ಲಿ ಅಭಿನಯಿಸುವುದರಿಂದ ಅಥವಾ ಪ್ರಯೋಗಗಳಿಗೆ ತೆರೆದುಕೊಳ್ಳುವುದರಿಂದ ಉತ್ತಮ ನಟನನ್ನು ಕಾಣಲು ಸಾಧ್ಯ.

ರಾಷ್ಟ್ರೀಯ ನಾಟಕ ಶಾಲೆ (ಎನ್.ಎಸ್.ಡಿ) ಸೇರಿದಂತೆ ವಿವಿಧ ರಂಗಶಾಲೆಗಳಲ್ಲಿ ಕಲಿತವರು ಆಯಾ ‘ಶಾಲೆ’ಯ ನಿರ್ದಿಷ್ಟ ರಂಗಚಿಂತನೆಯಿಂದ ಹೊರಬರಬೇಕು. ಒಂದು ಘರಾಣೆಯ ಸಂಗೀತವನ್ನು ಕಲಿತವರು, ಅದರಾಚೆ ಶ್ರಮದಿಂದ ತಮ್ಮದೇ ಅನನ್ಯತೆ ಒಡಮೂಡಿಸಿಕೊಳ್ಳುವಂತೆ, ಸೃಜನಶೀಲತೆಯನ್ನು ಮೆರೆಯುವ, ಹೊಸತನದ ನಾಟಕ ಕಟ್ಟುವ ರಂಗನಿರ್ದೇಶಕರ ಅಗತ್ಯ ಕನ್ನಡ ರಂಗಭೂಮಿಗೆ ಬಹಳ ಇದೆ. ನಮ್ಮಲ್ಲಿಯ ದುರಂತವೆಂದರೆ, ಇನ್ನೂ ಕಾರ್ನಾಡ, ಕಂಬಾರ, ಬಿ.ವಿ. ಕಾರಂತ ಎಂಬ ಹೆಸರುಗಳ ಶ್ರೇಷ್ಠತೆಯ ವ್ಯಸನದ ಹಿಂದೆಯೇ ಬಿದ್ದು ಗಿಳಿಪಾಠ ಒಪ್ಪಿಸುವುದರಲ್ಲೇ ಸಂತೋಷಪಡುತ್ತಿದ್ದೇವೆ. ಆ ಪರಂಪರೆಯ ಶಕ್ತಿ ಪಡೆದು ನವಸೃಷ್ಟಿಗೆ ತೊಡಗಬೇಕೆನ್ನುವ ಛಲ ಮುಖ್ಯ. ಪ್ರಸನ್ನ, ಜಂಬೆ, ಜಯತೀರ್ಥ, ಸಿ.ಜಿ.ಕೆ., ಏಣಗಿ, ಬಸೂ, ಅಕ್ಷರ, ಆನಗಳ್ಳಿ, ಹೊನ್ನವಳ್ಳಿ, ಪ್ರಮೋದ ಮುಂತಾದವರ ನಂತರದ ಪೀಳಿಗೆಯು ರಂಗಭೂಮಿಗೆ ಇನ್ನಷ್ಟು ತೀವ್ರವಾಗಿ ತೆರೆದುಕೊಳ್ಳಬೇಕು. ನಾಟಕ ಕಟ್ಟುವ ಕಾಯಕ ನಡೆಯಬೇಕು. ಅವು ಪ್ರಯೋಗಶೀಲ ಮತ್ತು ಇನ್ನೂ ಹೆಚ್ಚಿನ ಗುಣಮಟ್ಟದಿಂದ ಕೂಡಿ ಪ್ರೇಕ್ಷಕರನ್ನು ಹುಟ್ಟು ಹಾಕಬೇಕು.

ರೆಪರ್ಟರಿ ಛಾಯೆಯ ಮತ್ತು ಕಾರಂತಪ್ರಣೀತ ಶೈಲೀಕೃತ ರೂಪಗಳನ್ನು ಮೀರಿದ ಹೊಸ ಪಟ್ಟುಗಳ ಅಳವಡಿಕೆ ನಮ್ಮ ಅನೇಕ ನಾಟಕಗಳಲ್ಲಿಲ್ಲ. ಯಕ್ಷಗಾನದ ಹೆಜ್ಜೆ ಮತ್ತು ಚಂಡೆ ಮದ್ದಳೆಯ ಹಿನ್ನೆಲೆ ಬಳಸಿದವುಗಳೇ ಹೆಚ್ಚು. ನಮ್ಮ ಸಣ್ಣಾಟ, ದೊಡ್ಡಾಟಗಳ ಪಟ್ಟುಗಳನ್ನು ಯಕ್ಷಗಾನದ ರೀತಿಯಲ್ಲಿ ಆಧುನಿಕ ರಂಗ ಪ್ರಯೋಗಗಳಲ್ಲಿ ಬಳಸಿದ್ದು ತೀರಾ ಕಡಿಮೆ. ಅದನ್ನು ಅನುಲಕ್ಷಿಸಿಯೇ ನಿರ್ದೇಶಕ ಪ್ರಕಾಶ ಗರುಡ ಅವರು ಧಾರವಾಡ ರಂಗಾಯಣಕ್ಕೆ ‘ತಮಾಶಾ’ ಜನಪದ ನಾಟಕ ಪ್ರಯೋಗಿಸಿದರು. ಇದು, ಮರಾಠಿಯ ಕನ್ನಡ ರೂಪವಾದರೂ ಇದರ ಗೌಳಣ (ಗೊಲ್ಲತಿ) ಪ್ರಕರಣಕ್ಕೂ ನಮ್ಮ ‘ಶ್ರೀಕೃಷ್ಣ ಪಾರಿಜಾತ’ಕ್ಕೂ ಪರಸ್ಪರ ಕೊಡುಕೊಳ್ಳುವಿಕೆಯಾದುದು ಸಣ್ಣಾಟದ ಹೊಸ ಪ್ರಯೋಗ. ತಮಾಶಾ ಬಹು ಯಶಸ್ವಿ ರಂಗಪ್ರಯೋಗವೂ ಹೌದು.

ಸಿದ್ಧ ಮಾದರಿಯನ್ನು ಮುರಿದು ಕಟ್ಟುವ ಮತ್ತು ವರ್ತಮಾನಕ್ಕೆ ಮುಖಾಮುಖಿಯಾಗುವ ಅನುಭವಜನ್ಯ ನಾಟಕಗಳು ಈಗಲೂ ಕನ್ನಡದಲ್ಲಿ ವಿರಳ. ಮರಾಠಿ, ಹಿಂದಿ, ಗುಜರಾತಿಯ ಇಂದಿನ ರಂಗಪಠ್ಯ ಮತ್ತು ಪ್ರಯೋಗದಲ್ಲಿ ನಾವೀನ್ಯವಿದೆ, ಹೊಸ ಹುಡುಕಾಟವಿದೆ. ನಮ್ಮಲ್ಲಿ ಈಗಲೂ ಜನಪದ, ಪುರಾಣ, ಇತಿಹಾಸವನ್ನು ಆಧರಿಸಿಯೇ ಹೆಚ್ಚಿನ ನಾಟಕಗಳನ್ನು ರಚಿಸಲಾಗುತ್ತಿದೆ. ವಾಸ್ತವ ಶೈಲಿಯವು ಬೆರಳೆಣಿಕೆಯಷ್ಟಿವೆ. ಮರಾಠಿ ರಂಗಭೂಮಿಯಲ್ಲಿ ನಟವರ್ಗವು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾದುದಕ್ಕೆ ಅಲ್ಲಿಯ ರಿಯಲಿಸ್ಟಿಕ್ ನಾಟಕಗಳ ಪರಂಪರೆಯೇ ಕಾರಣ. ಅವರೆಲ್ಲರೂ ಸೆಲೆಬ್ರಿಟಿಗಳು. ಹಿಂದಿ, ಮರಾಠಿ ಪ್ರಯೋಗಗಳು ಸಮಕಾಲೀನ ಜ್ವಲಂತ ಸಮಸ್ಯೆಗಳನ್ನು ಹೆಚ್ಚು ಆಧರಿಸಿರುತ್ತವೆ. ನೋಡುಗ ಅವುಗಳಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾನೆ. ಬೌದ್ಧಿಕ ಭಾರದ ಪ್ರಯೋಗಗಳೂ ಇವೆ. ಅಸಂಗತತೆ ಅಧಿಕವಿಲ್ಲ. ಹೀಗೆಂದ ಮಾತ್ರಕ್ಕೆ ಅವುಗಳ ರಂಗಕಲೆಯ ಕಲಾತ್ಮಕತೆಯನ್ನು ಅಲ್ಲಗಳೆಯುವಂತೆಯೂ ಇಲ್ಲ. ಸಮಾಜಕಾರಣ, ರಾಜಕಾರಣ, ಅರ್ಥಕಾರಣಗಳ ನಾಟಕಗಳು ನಮ್ಮಲ್ಲಿ ಎಷ್ಟಿವೆ? ಅಭಿಜಾತವೆಂಬ ಅಗ್ಗಳಿಕೆಯ ‘ಏಕಚ ಪ್ಯಾಲಾ’ ಮರಾಠಿ ನಾಟಕವು ಜನರನ್ನು ಅದೆಷ್ಟು ಪ್ರಭಾವಿಸಿದೆಯೆಂದರೆ, ಹಳೆಯ ನಾಟಕವು ಹೊಸ ದೃಷ್ಟಿಕೋನದಿಂದ ನಾಟಕದೊಳಗೊಂದು ನಾಟಕವಾಗಿ ಮರುಸೃಷ್ಟಿ ಕಂಡಿದೆ. ಹಾಗೆಯೇ ಅದರ ಪ್ರಯೋಗಶೀಲ ಸಾದರೀಕರಣದ ಬಂಧವೇ ವಿಲಕ್ಷಣ.

ಹೊಸ ಪೀಳಿಗೆಯ ನಾಟಕಕಾರರು ಮತ್ತು ಯುವ ನಿರ್ದೇಶಕರು ಸೇರಿ ಕಟ್ಟುವ ಬಗೆಯೇ ಸೊಗಸು! ಮುಂಬೈ ಮಹಾನಗರದ ಕೊಳೆಗೇರಿಯಲ್ಲಿ ರಾಜಕಾರಣಿಗಳು ಸ್ವಹಿತಾಸಕ್ತಿಗೆ ರಾಷ್ಟ್ರಪುರುಷರನ್ನು ರಾಜಕೀಯಕ್ಕೆ ಬಳಸುವುದನ್ನು ಸಾರುವ, ಜನಪದ ಪೊವಾಡಾ (ಪವಾಡ) ಹಾಡು ಬಳಸಿ ಕಟ್ಟಿದ ಅತ್ಯಂತ ನವ್ಯ ನಾಟಕ ‘ಶಿವಾಜಿ ಅಂಡರ್‌ಗ್ರೌಂಡ್ ಇನ್ ಭೀಮನಗರ ಮೊಹಲ್ಲಾ’ದ ಏಳನೂರನೆಯ ಪ್ರಯೋಗಕ್ಕೆ ನಟ ಅಮೀರ್‌ಖಾನ್‌ ಬರುತ್ತಾರೆಂದರೆ, ಆ ನಾಟಕ ಜನರ ಮೇಲೆ ಬೀರಿದ ಪರಿಣಾಮ ಅದೆಷ್ಟು ಗಾಢವಿರಬಹುದು ಊಹಿಸಿಕೊಳ್ಳಿ. ಈ ನಾಟಕದ ರಚನೆಕಾರ ರಾಜಕುಮಾರ ತಾಂಗಡೆ, ಹಳ್ಳಿಯಿಂದ ಬಂದ ಹುಡುಗ. ಸಿದ್ಧ ಮಾದರಿಗಳನ್ನು ಒಡೆದು ಕಟ್ಟಿದ ಹೊಸ ಶೈಲೀಕೃತ ನಾಟ್ಯ ಪ್ರಯೋಗಗಳನ್ನು ಮಾಡಿದ ಇಂಥ ಹೊಸಬರ ದಂಡೇ ಇದೆ ಅಲ್ಲಿ. ನಮ್ಮ ನಡುವಿನ ಹಳವಂಡಗಳನ್ನು ಪ್ರೇಕ್ಷಕ ತನಗೆ ‘ರಿಲೇಟ್’ ಮಾಡಿಕೊಳ್ಳಬೇಕು. ಅದು ಅವನದೆನ್ನಿಸಬೇಕು.

ನಮ್ಮಲ್ಲಿ ಹಿಂದೆ ಪ್ರಸನ್ನ ಮತ್ತು ಚಿದಂಬರರಾವ್‌ ಜಂಬೆ ಅವರು ನಟರಾಜ ಏಣಗಿ ಎಂಬ ಅದ್ಭುತ ನಟನನ್ನು ನೀಡಿದ್ದರು. ಸಿಜಿಕೆ ‘ಒಡಲಾಳ’ದ ಉಮಾಶ್ರೀ ಅವರನ್ನು ನೀಡಿದರು. ಹಾಗೆಯೇ ರಘುನಂದನ್, ಬಸವಲಿಂಗಯ್ಯ ಅಂಥವರು ಆ ಬಗೆಯ ಯತ್ನ ನಡೆಸಿದ್ದಾರೆ. ಹೊಸತನಕ್ಕೆ ತುಡಿದಿದ್ದಾರೆ. ನಟರ ನಟನಾ ಚಾತುರ್ಯದ ಶಕ್ತಿಯನ್ನು ಒರೆಗೆ ಹಚ್ಚಿದ್ದಾರೆ. ಆದರೆ ಅಷ್ಟು ಸಾಲುವುದಿಲ್ಲ.‌

ರಘುನಂದನ್ ಅವರ ನವ್ಯ ಶೈಲೀಕೃತ ವಾಸ್ತವವಾದಿ ರಂಗಪ್ರಯೋಗಗಳಲ್ಲಿ ‘ನಮ್ಮ ಸಂಸಾರ’ವು ನಟರ ಮೇಲೆಯೇ ನಿಂತ ನಾಟಕ. ನಟರ ಅಭಿನಯ ಶಕ್ತಿಯನ್ನೇ ನಂಬಿದ ಬಸವಲಿಂಗಯ್ಯ ಅವರ ಮೊದಲ ಯಶಸ್ವಿ ರಿಯಲಿಸ್ಟಿಕ್ ನಾಟಕ ‘ಗಾಂಧಿ ವರ್ಸಸ್ ಗಾಂಧಿ’ ಹೊಸ ಸಂಚಲನವನ್ನೇ ಸೃಷ್ಟಿಸಿತು. ಜಂಬೆ ಅವರ ಈಚಿನ ‘ಬೆಂದಕಾಳೂರು ಆನ್ ಟೋಸ್ಟ್’ನ ಪಠ್ಯ ತೆಳುವಾದರೂ ಪ್ರಯೋಗದಲ್ಲಿ ದಟ್ಟ ಪರಿಣಾಮ ಉಂಟುಮಾಡಿತು. ಇವು ನಟವರ್ಗ ಸೃಷ್ಟಿಸಿದ ಪ್ರಯೋಗಗಳು. ಆದರೆ ಸಂಖ್ಯೆಯಲ್ಲಿ ಕಡಿಮೆ. ಇಂದಿನ ಸ್ಪರ್ಧಾತ್ಮಕ ದೃಶ್ಯ ಮಾಧ್ಯಮ ಯುಗದಲ್ಲಿ ಹೊಸತನಕ್ಕೆ ತುಡಿಯುವ ರಂಗಭೂಮಿಯು ನಮ್ಮನ್ನು ವರ್ತಮಾನದಲ್ಲಿ ಕಾಡುವ ಪ್ರಶ್ನೆಗಳಿಗೆ ಉತ್ತರರೂಪದಲ್ಲಿಯೂ ನಮ್ಮದಾಗುವುದು ಸಾಧ್ಯವಾಗಬೇಕು.

ಡಿ.ಎಸ್.ಚೌಗಲೆ, ನಾಟಕಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT