ಸೋಮವಾರ, ಜನವರಿ 20, 2020
27 °C
ಮರಗಳ ನಿಖರ ಲೆಕ್ಕ ಸಿಕ್ಕಿದರೆ

ನಗರ ಮರಗಣನೆ ಕಡೆಗಣನೆ: ಸರ್ಕಾರಗಳಿಗೆ ಮುಖಭಂಗ ಆಗುವುದೇ ಹೆಚ್ಚು!

ಟಿ.ಆರ್.ಅನಂತರಾಮು Updated:

ಅಕ್ಷರ ಗಾತ್ರ : | |

ನಮ್ಮ ದೇಶದಲ್ಲಿ ಹತ್ತು ವರ್ಷಕ್ಕೊಮ್ಮೆ ಮಾಡುವ ಜನಗಣತಿಗೆ, ಐದು ವರ್ಷಕ್ಕೊಮ್ಮೆ ನಡೆಯುವ ಜಾನುವಾರು ಗಣತಿಗೆ ಸಿಕ್ಕ ಪ್ರಾಶಸ್ತ್ಯ, ನಗರ ಮರಗಣತಿಗೆ ಎಂದೂ ಸಿಕ್ಕಿಲ್ಲ. ಪ್ರತಿಬಾರಿ ನಾಗರಿಕರು ಪ್ರತಿಭಟಿಸಿದಾಗ ಇಲ್ಲವೇ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಾಗ ನಗರಗಳ ಕಾರ್ಪೊರೇಷನ್‍ಗಳು ಮಿಸುಕಾಡುತ್ತವೆ, ಮತ್ತೆ ಅದೇ ಆಮೆನಡಿಗೆ. ಮರಗಣತಿ ಸಂಪೂರ್ಣವಾದರೆ ಎಷ್ಟು ಮರಗಳು ಧರೆಗುರುಳಿವೆ, ಎಷ್ಟು ರೋಗಗ್ರಸ್ತ ಎಂಬ ಲೆಕ್ಕ ಸಿಕ್ಕುತ್ತದೆ. ರಾಜ್ಯ ಸರ್ಕಾರಗಳಿಗೆ ಅದರಿಂದ ಮುಖಭಂಗವಾಗುವುದೇ ಹೆಚ್ಚು.

ಬೆಂಗಳೂರು ಮಹಾನಗರವು ಉದ್ಯಾನನಗರ, ಸಸ್ಯಕಾಶಿ ಎಂದೆಲ್ಲ ಎದೆಯುಬ್ಬಿಸಿ ಹೇಳುತ್ತೇವೆ. ಆದರೆ ವಾಸ್ತವವೇ ಬೇರೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಪುಣೆ ನಗರವು ದೇಶದ ಎಲ್ಲ ನಗರಗಳನ್ನೂ ಹಿಂದಿಕ್ಕಿ ವೃಕ್ಷರಾಶಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು. 2008ರಲ್ಲೇ ಅಲ್ಲಿ ಮರಗಣತಿ ಪ್ರಾರಂಭವಾಯಿತು. ಮಧ್ಯೆ ನಿಧಾನಗತಿಯನ್ನು ಕಂಡಿತ್ತು. ನ್ಯಾಯಾಲಯ ಎಚ್ಚರಿಕೆ ಕೊಟ್ಟಾಗ ಮತ್ತೆ ವೇಗ ಪಡೆಯಿತು. 2019ರ ಡಿಸೆಂಬರ್‌ನಲ್ಲಿ ಗಣತಿ ಮುಗಿಯಿತು. ಅಲ್ಲಿರುವ ಮರಗಳ ಸಂಖ್ಯೆ 40 ಲಕ್ಷ ದಾಟಿತ್ತು. ಪುಣೆಯ ನಾಗರಿಕರು ಎಂಟು ಲಕ್ಷ ಮರಗಳ ಛಾಯಾಚಿತ್ರಗಳನ್ನು ಒದಗಿಸಿದ್ದರು. ಖಾಸಗಿ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದು ಇದರ ಉಸ್ತುವಾರಿ ಹೊತ್ತಿತ್ತು. ಈಗ ಮುಂದಿನ ಐದು ವರ್ಷಗಳ ಪರ್ಯಂತ ನಗರದ ವೃಕ್ಷರಾಶಿಯನ್ನು ಸಂರಕ್ಷಿಸುವ ಹೊಣೆಯೂ ಈ ಸಂಸ್ಥೆಯದೇ.

ದೇಶದ ಪ್ರಮುಖ ನಗರಗಳ ಮರಗಣತಿ ಈಗ ತ್ವರಿತವಾಗಿ ಸಾಗಿದೆ. ಕೆಲವೆಡೆ ಮುಗಿದಿದೆ. ಮಹಾರಾಷ್ಟ್ರದ ನಾಸಿಕ್ ಪಟ್ಟಣದಲ್ಲಿ ಪ್ರತಿಯೊಬ್ಬ ನಗರವಾಸಿಗೆ ಎರಡು ಮರ, ಅಹಮದಾಬಾದ್‍ನಲ್ಲಿ ತಲೆಗೆ ನಾಲ್ಕು ಮರ ಎಂದು ಗುರುತಿಸಿದೆ. ಆದರೆ ಬೆಂಗಳೂರು? ಈ ನಗರವು ವೃಕ್ಷ ಸಂಪತ್ತಿನಲ್ಲಿ ನಾಸಿಕ್‍ಗಿಂತ ಹಿಂದಿದೆ. ಬೆಂಗಳೂರಿನಲ್ಲಿ ಆರು ಜನರಿಗೆ ಒಂದು ಮರ, ಎಂಥ ವಿಪರ್ಯಾಸ? ಈ ಲೆಕ್ಕವೂ ಸಿಕ್ಕುತ್ತಿರಲಿಲ್ಲ. 2013ರಲ್ಲಿ ಪುಣೆಯ ಮರಗಣತಿಯ ಕೆಲಸ ಅರ್ಧದಷ್ಟು ಮುಗಿದಾಗ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿಯಾಗಿ ಪರಿಸರ ಮಾಹಿತಿ ಸಂಸ್ಥೆ ಎಂಬ ಕೇಂದ್ರ ಸ್ಥಾಪಿಸಿಕೊಂಡು ನಗರದ ಮರಗಣತಿಯನ್ನು ಪ್ರಾರಂಭಿಸಿದವು.

ಹೈದರಾಬಾದ್‍ನ ರಾಷ್ಟ್ರೀಯ ದೂರಸಂವೇದಿ ಸಂಸ್ಥೆಯಿಂದ ಉಪಗ್ರಹದ ಚಿತ್ರಗಳ ಮಾಹಿತಿ ಪಡೆದು, ವಾರ್ಡುಗಳ ಮಟ್ಟದಲ್ಲಿ ಎಣಿಕೆ ಪ್ರಾರಂಭವಾಯಿತು. ಈ ಗಣತಿಯಲ್ಲಿ ಯಾವ ಮರದ ಲೆಕ್ಕವೂ ಬಿಟ್ಟುಹೋಗದಂತೆ ಭೌಗೋಳಿಕ ಮಾಹಿತಿ ವ್ಯವಸ್ಥೆ ತಂತ್ರಜ್ಞಾನ ಬಳಸಿ ಎಣಿಸಿದಾಗ, ಬೆಂಗಳೂರಿನ ಮರಗಳ ಸಂಖ್ಯೆ 14,78,412 ಎಂದು ತಿಳಿಯಿತು. ವಿಶೇಷವೆಂದರೆ, ಲಾಲ್‌ಬಾಗ್‌ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಮರಗಳನ್ನು ಪ್ರತ್ಯೇಕವಾಗಿ ಎಣಿಸಿದಾಗ, ದೇಸಿ ಮರಗಳ ಜೊತೆಗೆ ವಿದೇಶಿ ಮರಗಳು ಎಷ್ಟಿವೆ ಎಂಬ ಮಾಹಿತಿ ಕೂಡ ಸಿಕ್ಕಿತು.

ಈ ವರದಿಯನ್ನು ಆಧಾರವಾಗಿ ಇಟ್ಟುಕೊಂಡು ಮರಗಣತಿಯನ್ನು ಇನ್ನಷ್ಟು ಕೂಲಂಕಷವಾಗಿ ಮಾಡುವ ಬದಲು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2017ರಲ್ಲಿ ಹೊಸತಾಗಿ ಮರಗಣತಿಯನ್ನು ಪ್ರಾರಂಭಿಸಿತು. ಆದರೆ ಕುಂಭಕರ್ಣ ನಿದ್ರೆಗೆ ಜಾರಿ ತನ್ನ ಕಾರ್ಯ ಮರೆತಾಗ, ಅದನ್ನು ಎಚ್ಚರಿಸಿದ್ದು ಬೆಂಗಳೂರಿನ ನಾಗರಿಕರು ಮತ್ತು ಹೈಕೋರ್ಟ್. ಒಡನೆಯೇ ಬಿಬಿಎಂಪಿ ನೇತೃತ್ವದಲ್ಲಿ ಕೃಷಿ ಇಲಾಖೆ, ನಗರ ಅರಣ್ಯ ಇಲಾಖೆಯ ಅಧಿಕಾರಿಗಳು, ತೋಟಗಾರಿಕೆಯ ಐವರು ಸಸ್ಯ ವಿಜ್ಞಾನಿಗಳು, ಮೂವತ್ತು ವಿದ್ಯಾರ್ಥಿಗಳು ಸೇರಿದಂತೆ ಒಂದು ಸಮಿತಿ ರಚನೆಯಾಯಿತು.

ಮರಗಣತಿ ಮಾಡುವಾಗ ನೆಲಕಚ್ಚಿದ ಮರಗಳ ಲೆಕ್ಕವನ್ನೂ ಪರಿಗಣಿಸಬೇಕು ಎಂದು ಮಹಾನಗರಪಾಲಿಕೆ ನಿರ್ಣಯ ತೆಗೆದುಕೊಂಡಿತ್ತು. ಈ ಯೋಜನೆಯ ವಿವರ ತಯಾರು ಮಾಡಲು, ಅರಣ್ಯ ಭವನದಲ್ಲೇ ಇರುವ ಮರವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗೆ ವಹಿಸಿತು. ಈ ಯೋಜನೆಗೆ ಕನಿಷ್ಠ ಮೂರು ವರ್ಷಗಳಾದರೂ ಬೇಕಾಗುತ್ತದೆ ಮತ್ತು ನಾಲ್ಕು ಕೋಟಿ ರೂಪಾಯಿ ಭರಿಸಬೇಕಾಗುತ್ತದೆ ಎಂದು ಈ ಸಂಸ್ಥೆ ವರದಿಯನ್ನೂ ಕೊಟ್ಟಿತು. ಈಗ ಮರವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು ಹಲವು ಸ್ವಯಂ ಸೇವಾ ಸಂಸ್ಥೆಗಳನ್ನೂ ತಜ್ಞರನ್ನೂ ಬಳಸಿಕೊಂಡು ಶೀಘ್ರವೇ ಮರಗಣತಿಗೆ ತೊಡಗಲಿರುವುದಾಗಿ ಹೇಳಿಕೆ ಕೊಟ್ಟಿದೆ. ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ– 1976ರ ಪ್ರಕಾರ ಜನಾಭಿಪ್ರಾಯ ಪಡೆಯುವುದು ಕಡ್ಡಾಯ. ಡಿಸೆಂಬರ್ ದಾಟಿದರೂ ಪೂರ್ಣಪ್ರಮಾಣದಲ್ಲಿ ಇದು ಕಾರ್ಯರೂಪಕ್ಕೆ ಬಂದಿಲ್ಲ.

ಬೆಂಗಳೂರಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳಿಗೆ, ತಜ್ಞರಿಗೆ ಬರವಿಲ್ಲ. ವೃಕ್ಷ ಫೌಂಡೇಷನ್, ಗುಬ್ಬಿ ಲ್ಯಾಬ್‍ಗೆ ಈ ಕ್ಷೇತ್ರದಲ್ಲಿ ಪರಿಣತಿ ಇದೆ. ಗಣತಿಗೆ ಬೇಕಾದ ಆ್ಯಪ್‍ಗಳನ್ನು ಅವು ಸಿದ್ಧಪಡಿಸಿವೆ. ಪ್ರತೀ ಮರದ ಆರೋಗ್ಯ, ಎತ್ತರ, ಸುತ್ತಳತೆ, ಪ್ರಭೇದ, ವಯಸ್ಸು ಎಲ್ಲವನ್ನೂ ವಿವರಿಸುವ ಟ್ಯಾಗನ್ನು ಪ್ರತೀ ಮರಕ್ಕೂ ನೀಡಬಹುದು. ಜಿ.ಪಿ.ಎಸ್. ತಂತ್ರಜ್ಞಾನ ಬಳಸಿಕೊಂಡು ಮರಗಳ ನೆಲೆಯನ್ನು ನಿಖರವಾಗಿ ಗುರುತಿಸುವುದೂ ಸುಲಭ. ಇದರ ಜೊತೆಗೆ ವೃಕ್ಷಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರು ದಾಖಲಿಸುವ ಅವಕಾಶವನ್ನು ‘ಇಂಡಿಯನ್ ಬಯೊಡೈವರ್ಸಿಟಿ ಪೋರ್ಟಲ್’ ಕಲ್ಪಿಸಿದೆ.

ಕರ್ನಾಟಕ ಸರ್ಕಾರ ಹಸಿರು ನಿಶಾನೆ ತೋರಿಸಿದೊಡನೆ ಮರಗಣತಿ ಪ್ರಾರಂಭ ಎನ್ನುತ್ತಿದೆ ಮಹಾನಗರಪಾಲಿಕೆ. ಕಲಬುರ್ಗಿ ನಗರದಲ್ಲಿ ಯಾವ ಮಟ್ಟದ ಬಿಸಿಲೇ ಇರಲಿ, ಅಲ್ಲಿನ ವಿಶ್ವವಿದ್ಯಾಲಯದ ಆವರಣದಲ್ಲಿ ಉಷ್ಣತೆಯು ನಗರದ ಮಧ್ಯ ಭಾಗಕ್ಕಿಂತ ಕನಿಷ್ಠ 2 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುತ್ತದೆ. ಇದಕ್ಕೆ ಅಲ್ಲಿರುವ ವೃಕ್ಷರಾಶಿ ನೀಡುವ ವ್ಯಾಪಕ ನೆರಳು ಕಾರಣ. ನಗರದಲ್ಲಿ ಏಳುವ ದೂಳು, ವಾಹನಗಳ ಹೊಗೆಯ ಸೂಕ್ಷ್ಮ ಕಣಗಳು ಎಲೆಯ ಮೇಲೆ ಕೂತು ಅಷ್ಟರಮಟ್ಟಿಗೆ ಮಾಲಿನ್ಯ ತಪ್ಪಿಸುತ್ತವೆ. ಮರಗಳ ಎಲೆಗಳಲ್ಲಿ ಮೇಣವಿದ್ದರೆ, ಮುಳ್ಳಿದ್ದರೆ, ರೋಮದಂಥ ರಚನೆಯಿದ್ದರೆ ಹೆಚ್ಚಿನ ದೂಳನ್ನು ಅವು ಸಂಗ್ರಹಿಸುತ್ತವೆ. ಮರದಲ್ಲಿರುವ ಕೀಟಗಳು, ಮರದಲ್ಲಿ ಆಶ್ರಯ ಪಡೆದಿರುವ ಹಕ್ಕಿಗಳ ಅಧ್ಯಯನಕ್ಕೂ ಮರಗಳೇ ಸೂಕ್ತ ತಾಣ.

ಮರಗಳ ವೈಜ್ಞಾನಿಕ ಅಧ್ಯಯನ ಮಾಡಿರುವ ಭಾರತೀಯ ವಿಜ್ಞಾನ ಸಂಸ್ಥೆಯು ಕೆಲವು ವಿಶೇಷ ಅಂಶಗಳನ್ನು ಗಮನಿಸಿದೆ. ಪ್ರತೀ ನಗರವಾಸಿ ಪ್ರತಿದಿನ 525 ಗ್ರಾಂನಿಂದ 900 ಗ್ರಾಂವರೆಗೆ ಕಾರ್ಬನ್ ಡೈ ಆಕ್ಸೈಡನ್ನು ಹೊರಬಿಡುವುದುಂಟು. ಇದನ್ನು ಹೀರಲು 32ರಿಂದ 55 ಮರಗಳು ಬೇಕಂತೆ. ಇಲ್ಲಿ ಇನ್ನೊಂದು ವೈರುಧ್ಯ ಥಟ್ಟನೆ ಕಣ್ಣಿಗೆ ರಾಚುತ್ತದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶೀಘ್ರ ಸಂಪರ್ಕ ಸಾಧಿಸಲು 2016ರಲ್ಲಿ ಕರ್ನಾಟಕ ಸರ್ಕಾರವು ಹೆಬ್ಬಾಳ ಮತ್ತು ಚಾಲುಕ್ಯ ವೃತ್ತವನ್ನು ಸಂಪರ್ಕಿಸುವ ಏಳು ಕಿಲೊ ಮೀಟರ್ ದೂರದವರೆಗೆ ಸ್ಟೀಲ್ ಫ್ಲೈಓವರ್ ನಿರ್ಮಿಸಲು ಯೋಜಿಸಿತು.

ಈ ಯೋಜನೆಯಲ್ಲಿ 800 ಮರಗಳು ಮಾತ್ರ ಬಲಿಯಾಗುತ್ತವೆ ಎಂದು ಸರ್ಕಾರ ಘೋಷಿಸಿದಾಗ, ಕೆಲವರಿಗೆ ಅನುಮಾನ ಬಂದು ಮರಗಳನ್ನು ಎಣಿಸಿದಾಗ ಸುಮಾರು 2,000 ಮರಗಳು ಬಲಿಯಾಗುತ್ತವೆಂದು ತಿಳಿಯಿತು. ನಾಗರಿಕರು ಮತ್ತೆ ಪ್ರತಿಭಟಿಸಿದರು, ಸರ್ಕಾರ ಮಣಿಯಿತು. ಮತ್ತೆ 2019ರ ಆರಂಭದಲ್ಲಿ ಸರ್ಕಾರ ಅದೇ ಪ್ರಸ್ತಾವ ಮುಂದಿಟ್ಟಾಗ ಮತ್ತೆ ಅದೇ ಸೋಲು ಸರ್ಕಾರಕ್ಕೆ.

ಅಮೆರಿಕವು ತಲೆಗೆ 716 ಮರಗಳನ್ನು ಉಳಿಸಿಕೊಂಡಿದೆ. ಕೈಗಾರಿಕಾ ಮಾಲಿನ್ಯದ ಪರಾಕಾಷ್ಠೆಯಲ್ಲಿರುವ ಚೀನಾ, ತಲೆಗೆ 102 ಮರಗಳನ್ನು ಸಂರಕ್ಷಿಸಿದೆ. ವೈರುಧ್ಯವೆಂದರೆ, ಸದ್ಯದಲ್ಲೇ ಬೆಂಗಳೂರು ರಸ್ತೆ ಅಗಲ ಮಾಡಲು 3,600 ಮರಗಳ ಮಾರಣಹೋಮ ಆಗಬೇಕಾಗಿದೆ. ವನಪ್ರದೇಶ ವಿಸ್ತೀರ್ಣದ ಹೆಚ್ಚಳದಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ ನಗರಗಳನ್ನು ಅದೇ ವೇಗದಲ್ಲಿ ಕಾಂಕ್ರೀಟ್ ಕಾಡುಗಳನ್ನಾಗಿ ಮಾಡಿದರೆ ಮೆಚ್ಚುವುದು ಹೇಗೆ?

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು