ಶನಿವಾರ, ಏಪ್ರಿಲ್ 4, 2020
19 °C

ವಿಶ್ಲೇಷಣೆ | ಐತಿಹಾಸಿಕ ಪ್ರಮಾದ ಆಗಲಿದೆಯೇ ಶಿವಸೇನಾ– ಕಾಂಗ್ರೆಸ್‌ ಮೈತ್ರಿ?

ರವೀಂದ್ರ ಗಂಗಲ್‌ Updated:

ಅಕ್ಷರ ಗಾತ್ರ : | |

ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರ ರಾಜಕೀಯ ಕಳೆದ ಕೆಲ ದಿನಗಳಿಂದ ತೀವ್ರ ತರದ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಆ ಮೂಲಕ ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್‌ ಮೈತ್ರಿಯೊಂದಿಗೆ ಭಾರತದ ರಾಜಕಾರಣ ಹೊಸ  ತಿರುವು ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಮೂರು ಪಕ್ಷಗಳಿಗೆ ಸಮ್ಮತವಾಗುವ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ಗಳನ್ನು ಮುಂದಿಟ್ಟುಕೊಂಡು ಸಮನ್ವಯ ಸೂತ್ರದ ಬಗ್ಗೆ ಮೂರೂ ಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ, ಈ ಮೈತ್ರಿಯು ದೀರ್ಘಕಾಲ ಬಾಳಿಕೆ ಬರಲಿದೆಯಾ ಎಂಬ ಸಂಶಯಗಳು ಮೂಡಿವೆ.

ಶಿವಸೇನಾ ಮತ್ತು ಕಾಂಗ್ರೆಸ್‌ ಪಕ್ಷಗಳ ಸಿದ್ಧಾಂತಗಳು ಉತ್ತರ–ದಕ್ಷಿಣ ಧ್ರುವಗಳಷ್ಟು ಅಂತರ ಹೊಂದಿದೆ. ಈ ‘ಮಹಾ’ ಮೈತ್ರಿಯಿಂದ ಭವಿಷ್ಯದಲ್ಲಿ ಯಾರಿಗೆ ಲಾಭವಾಗಲಿದೆ, ಯಾವ ಪಕ್ಷ ಹಾನಿ ಅನುಭವಿಸಲಿದೆ ಎಂಬುದರ ಬಗೆಗಿನ ವಿಭಿನ್ನ ಸಂಕಥನಗಳನ್ನು ರಾಜಕೀಯ ವಿಶ್ಲೇಷಕರು ಹರಿಬಿಡುತ್ತಿದ್ದಾರೆ. 

ಈ ಮೊದಲು ದೇಶದ ಅಧಿಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ 2018ರ ಕೊನೆಯಲ್ಲಿ ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಪಂಜಾಬ್‌ ಮತ್ತು ಮಧ್ಯಪ್ರದೇಶಗಳಲ್ಲಿ ಅಧಿಕಾರ ಕಳೆದುಕೊಂಡಿತು. ಈಗ ಮಹಾರಾಷ್ಟ್ರದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಬಹುಮತ ಸಾಧಿಸುವಲ್ಲಿ ವಿಫಲವಾಯಿತು. ಆ ಮೂಲಕ ಬಿಜೆಪಿಗೆ ರಾಜಕೀಯವಾಗಿ ದೊಡ್ಡ ಆಘಾತವೇ ಆಗಿದೆ ಎಂಬ ವಿಚಾರವನ್ನು ವಿಶ್ಲೇಷಕರು ಮುನ್ನೆಲೆಗೆ ತಂದಿದ್ದಾರೆ.

ಬಿಜೆಪಿ ಪ್ರಮುಖ ರಾಜ್ಯವನ್ನು ಕಳೆದುಕೊಂಡಿದ್ದೇನೋ ನಿಜವಿರಬಹುದು. ಆದರೆ, ಮಹಾ ಮೈತ್ರಿಯಿಂದ ಜಾತ್ಯತೀತತೆಯನ್ನು ಪ್ರತಿಪಾದಿಸುತ್ತಲೇ ಬಂದಿರುವ ಕಾಂಗ್ರೆಸ್‌ಗೆ ಲಾಭಕ್ಕಿಂದ ಹಾನಿಯೇ ಹೆಚ್ಚಿದೆ ಎಂಬ ಮಾತುಗಳನ್ನು ಸಹ ಅಲ್ಲಗಳೆಯುವಂತಿಲ್ಲ. 

ಕಾಂಗ್ರೆಸ್‌ ಪಕ್ಷವು, ಹಿಂದು ರಾಷ್ಟ್ರವಾದ ಮತ್ತು ಮರಾಠ ಅಸ್ಮಿತೆಯ ಬುನಾದಿಯ ಮೇಲೆ ರೂಪಗೊಂಡ ಶಿವಸೇನಾಗೆ ಬೆಂಬಲ ನೀಡಿದ್ದರ ಬಗ್ಗೆ ಪರ–ವಿರೋಧ ಚರ್ಚೆಗಳು ಕೇಳಿಬರುತ್ತಿವೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಹಿರಿಯ ಮುಖಂಡರು ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ನಾವು ಒಂದಾಗಿದ್ದೇವೆ ಎಂದಿದ್ದಾರೆ. ಮೇಲ್ನೋಟಕ್ಕೆ ಕಾಂಗ್ರೆಸ್ ನಾಯಕರು ಸಮನ್ವಯದ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಶಿವಸೇನೆ ಜೊತೆಗೆ ಮೈತ್ರಿ ಮಾಡಿಕೊಳ್ಳುವುದರೊಂದಿಗೆ ತಮ್ಮ ಪಕ್ಷವು  ಐತಿಹಾಸಿಕ ‍ಪ್ರಮಾದಕ್ಕೆ ಗುರಿಯಾಗಲಿದೆಯಾ ಎಂಬ ಆತಂಕ ಕಾಂಗ್ರೆಸ್‌ ನಾಯಕರಲ್ಲಿ ಮೂಡಿರುವುದಂತೂ ಸುಳ್ಳಲ್ಲ. 

ಶಿವಸೇನಾ ಜೊತೆ ಕೈಜೋಡಿಸುವ ನಿರ್ಧಾರವನ್ನು ಬಹಿರಂಗವಾಗಿಯೇ ವಿರೋಧಿಸಿರುವ ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ಅವರು, ‘ಯಾವುದೇ ಸಂದರ್ಭದಲ್ಲೂ ಶಿವಸೇನಾದೊಂದಿಗೆ ಅಧಿಕಾರವನ್ನು ಹಂಚಿಕೊಳ್ಳುವ ಬಗ್ಗೆ ನಾವು ಯೋಚಿಸಬಾರದು. ಒಂದು ವೇಳೆ ಶಿವಸೇನಾ ಜೊತೆಗಿನ ಮೈತ್ರಿಗೆ ಕಾಂಗ್ರೆಸ್ ಪಕ್ಷ ಮುಂದಾದರೆ ಅದರಂತಹ ವಿನಾಶಕಾರಿ ನಡೆ ಮತ್ತೊಂದಿಲ್ಲ’ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದರು.

ಕಟ್ಟರ್‌ ಹಿಂದು ರಾಷ್ಟ್ರವಾದ ಪ್ರತಿಪಾದನೆ ಮಾಡುವ ಶಿವಸೇನೆಯೊಂದಿಗೆ ಹೆಜ್ಜೆ ಇಡುತ್ತಿರುವ ಕಾಂಗ್ರೆಸ್‌ ಪಕ್ಷದಿಂದ ಅದರ ಸಾಂಪ್ರದಾಯಿಕ ವೋಟ್‌ ಬ್ಯಾಂಕ್‌ ದೂರವಾಗಲಿದೆ. ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೊಳ್ಳುವಲ್ಲಿ ಕಾಂಗ್ರೆಸ್ ಸಫಲವಾದರೂ, ದೇಶದಾದ್ಯಂತ ಇರುವ ಜಾತ್ಯತೀತ ಶಕ್ತಿಗಳ ಬೆಂಬಲವನ್ನು ಪಕ್ಷ ಕಳೆದುಕೊಳ್ಳಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರ ಕೋಟೆಯಾಗಿದ್ದ ಮಹಾರಾಷ್ಟ್ರ ಈಗ ಬಿಜೆಪಿ, ಶಿವಸೇನೆ, ಎನ್‌ಸಿಪಿ ಪಕ್ಷಗಳಿಗೆ ನೆಲೆ ಒದಗಿಸಿದೆ. 1995ರ ವರೆಗೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. 90 ರ ದಶಕದ ಉತ್ತರಾರ್ಧದಲ್ಲಿ ಹಿಂದು ಮತ ಕ್ರೋಡೀಕರಣ ಮಾಡುವಲ್ಲಿ ಶಿವಸೇನೆ ಮತ್ತು ಬಿಜೆಪಿ ಪಕ್ಷಗಳ ಸಫಲವಾದವು. ಆ ಮೂಲಕ ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿದವು. ಒಂದು ಕಾಲದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಸಾಮರ್ಥ್ಯ ಹೊಂದಿದ್ದ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ಕೇವಲ 44 ಸ್ಥಾನ ಸಿಕ್ಕಿವೆ. ಅಂಕಿ–ಸಂಖ್ಯೆಗಳ ಆಧಾರದಲ್ಲಿ ನೋಡುವುದಾದರೆ, ಮಹಾರಾಷ್ಟ್ರದಲ್ಲಿ ಮತ್ತೆ ಕಾಂಗ್ರೆಸ್‌ ಗಟ್ಟಿ ನೆಲೆ ಕಂಡುಕೊಳ್ಳುವ ಸಾಮರ್ಥ್ಯ ತೀರಾ ಕ್ಷೀಣಿಸಿದೆ. 

ಇದೇ ವೇಳೆ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಮುಂದೆ ಶಿವಸೇನಾದ ಹಿಂದುತ್ವ ತಲೆಬಾಗಿದೆ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ. ಆ ಮೂಲಕ ತನ್ನ ಹಿಂದುತ್ವದ ತಳಹದಿಯನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುವ ಲಾಭದಾಯಕ ಆಲೋಚನೆಯೊಂದಿಗೆ ಬಿಜೆಪಿ ಹೆಜ್ಜೆ ಇಡುತ್ತಿರುವುದು ಇಲ್ಲಿ ಗಮನಾರ್ಹ ಅಂಶ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು