ಒಂದು ದಿನ ಶಿಷ್ಯನೊಬ್ಬ ಬುದ್ಧನ ಹತ್ತಿರ ಕೇಳಿದ, ‘ಗುರುಗಳೇ, ಒಂದೇ ಥರದ ಸಮಸ್ಯೆ ಇದ್ದರೂ ಕೆಲವರು ಜಾಸ್ತಿ ಸಂಕಷ್ಟ ಅನುಭವಿಸುತ್ತಾರೆ. ಮತ್ತೆ ಕೆಲವರು ಕಡಿಮೆ ನರಳುತ್ತಾರೆ. ಇದು ಏಕೆ ಅನ್ನುವುದು ನನಗಿನ್ನೂ ಅರ್ಥವಾಗಿಲ್ಲ. ಇದಕ್ಕೆ ಕಾರಣವೇನು?’ ಅದಕ್ಕೆ ಬುದ್ಧ ಎರಡು ಬಾಣಗಳ ಕಥೆ ಹೇಳಿದ.

‘ಮನುಷ್ಯನೊಬ್ಬ ಬಾಣವೊಂದರಿಂದ ಗಾಸಿಗೊಂಡಾಗ ನೋವನ್ನನುಭವಿಸುತ್ತಾನೆ. ಯಾರಿಗೇ ಆದರೂ ಬಾಣ ತಗುಲಿದಾಗ ನೋವಾಗುತ್ತದೆ. ಇದು ಸಹಜವಾದದ್ದು. ಆದರೆ ಬಾಣ ನೆಟ್ಟಾಗ ಆತ ಹೇಗೆ ವರ್ತಿಸುತ್ತಾನೆ ಎಂಬುದರ ಮೇಲೆ ಆತನ ಸಂಕಷ್ಟದ ಪ್ರಮಾಣ ನಿರ್ಧಾರವಾಗುತ್ತದೆ. ಮೊದಲನೇ ಬಾಣ ಬದುಕಿನ ಅನಿವಾರ್ಯ ಸಂಕಷ್ಟಗಳು. ಕಾಯಿಲೆ, ನಷ್ಟ, ಕಷ್ಟ, ಸೋಲು ಇವೆಲ್ಲ ಪ್ರತಿಯೊಬ್ಬರ ಬದುಕಿನಲ್ಲೂ ಸಾಮಾನ್ಯ. ಇವನ್ನು ಬಯಸಿದರೂ ತಡೆಯಲಾಗದು. ಆದರೆ ಈ ಅನಿವಾರ್ಯವಾದ ಮೊದಲ ಬಾಣ ಚುಚ್ಚಿದಾಗ ನಾವು ಹೇಗೆ ವರ್ತಿಸುತ್ತೇವೆ ಎಂಬುದು ನಮಗೆ ಎರಡನೇ ಬಾಣ ಚುಚ್ಚುತ್ತದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಭಯ, ಸಿಟ್ಟು, ಅಳು ಇವುಗಳನ್ನು ನಮ್ಮ ಸಂಕಟಕ್ಕೆ ಜತೆಯಾಗಿಸಿಕೊಳ್ಳುತ್ತೇವೆ. ಅದೂ ಸಹಜವೇ. ಆದರೆ ನಮಗೆ ಏನಾದರೂ ತೊಂದರೆ ಆದಾಗ ‘ಅಯ್ಯೋ ನನಗೇ ಏಕೆ ಹೀಗಾಯಿತು? ನನ್ನ ಹಣೆಬರಹ ಇಷ್ಟೇ, ನನ್ನ ಬದುಕೇ ವ್ಯರ್ಥ, ನನ್ನ ಜೀವನದಲ್ಲಿ ಎಲ್ಲ ಮುಗಿದು ಹೋಯಿತು’ ಅಂತೆಲ್ಲ ಅಂದುಕೊಂಡೆವೋ ಆಗ ಎರಡನೇ ಬಾಣವನ್ನು ಚುಚ್ಚಿಸಿಕೊಳ್ಳುತ್ತೇವೆ’ ಅಂದ ಬುದ್ಧ.

ಉದಾಹರಣೆಗೆ ಸಣ್ಣ ಅಪಘಾತವೊಂದರಲ್ಲಿ ಕೈ ಮುರಿದು ಹೋಗಿ ಎರಡು ತಿಂಗಳು ಪಟ್ಟಿ ಹಾಕಿಕೊಂಡಿರಬೇಕಾಯಿತೆನ್ನಿ. ಅದೋ ಅನಿವಾರ್ಯ. ಸೂಕ್ತ ಚಿಕಿತ್ಸೆ ಪಡೆದು ಮತ್ತೆ ಮಾಮೂಲು ಸ್ಥಿತಿಗೆ ಮರಳಿದರೆ ಮುಗಿಯಿತು. ಆದರೆ, ‘ಅಯ್ಯೋ ನನ್ನ ಕೆಲಸದ ಕಥೆ ಏನು, ಎಷ್ಟು ದಿನ ಒಂದು ಕೈಲಿ ಮ್ಯಾನೇಜ್ ಮಾಡಬೇಕಾಗುತ್ತದೆಯೋ, ಜಗತ್ತಿನಲ್ಲಿ ಕೆಟ್ಟದ್ದಕ್ಕೆಲ್ಲ ನಾನೇ ಸಿಗುತ್ತೇನೆ’ ಇಂಥವೆಲ್ಲ ಯೋಚನೆಗಳನ್ನು ಅತಿಯಾಗಿ ಮಾಡುವುದರಿಂದ ಮತ್ತಷ್ಟು ಸಂಕಷ್ಟ ಜಾಸ್ತಿಯಾಗುತ್ತದೆ. ಈ ಹೆಚ್ಚುವರಿ ಸಂಕಟವೇ ಎರಡನೇ ಬಾಣ. ಈ ಎರಡನೇ ಬಾಣ ನೆಟ್ಟರೆ ಅದು ಮೊದಲ ಬಾಣದ ನೋವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಒಂದಂತೂ ನೆನಪಿನಲ್ಲಿರಬೇಕು. ಮೊದಲನೆಯ ಬಾಣ ಅನಿವಾರ್ಯವಾದರೆ ಎರಡನೆಯ ಬಾಣ ಐಚ್ಛಿಕ ಅಷ್ಟೇ.

ಹೀಗಾಗಿ ಬುದ್ಧಿವಂತರು ಎರಡನೆಯ ಬಾಣವನ್ನು ತಪ್ಪಿಸಿಕೊಳ್ಳುತ್ತಾರೆ. ಸಂಕಟ ಅನಿವಾರ್ಯ, ನೋವು ತಾತ್ಕಾಲಿಕ ಅನ್ನುವುದನ್ನು ಅರ್ಥ ಮಾಡಿಕೊಂಡು ಕಡ್ಡಿಯನ್ನು ಗುಡ್ಡವಾಗಿಸಲು ಹೋಗುವುದಿಲ್ಲ. ತಮ್ಮನ್ನು ತಾವೇ ದೂಷಿಸಿಕೊಳ್ಳುವುದಿಲ್ಲ, ತಮ್ಮ ಸ್ಥಿತಿಗಾಗಿ ಬೇರೆಯವರನ್ನು ದೂರುವುದಿಲ್ಲ. ಆದರೆ ಮೂರ್ಖರು ಎರಡನೇ ಬಾಣವನ್ನು ಚುಚ್ಚಿಸಿಕೊಳ್ಳದೇ ಬಿಡುವುದಿಲ್ಲ.

ಹಾಗಾಗಿ ಬರುವ ಸಂಕಷ್ಟಗಳನ್ನು ಪ್ರಶಾಂತ ಮನಸ್ಸಿನಿಂದ ಸ್ವೀಕರಿಸಬೇಕು. ಸಮಸ್ಯೆ ಬಂದ ಮೇಲೆ ಅದನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎನ್ನುವುದನ್ನು ಆಲೋಚಿಸಬೇಕು. ಉದಾಹರಣೆಗೆ ಹಣಕಾಸಿನ ಸಮಸ್ಯೆಯಾದರೆ, ಸಾಲ ಜಾಸ್ತಿಯಾದರೆ ನಮ್ಮ ಅನವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿಕೊಂಡು ಮತ್ತಷ್ಟು ಕಷ್ಟಪಟ್ಟು ದುಡಿದು ನಮ್ಮ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು. ಲೋಕದ ಕಣ್ಣಿಗೆ ಮೆಚ್ಚಿಗೆಯಾಗುವಂತೆ ಬದುಕುವುದನ್ನು ಬಿಟ್ಟು ನಮ್ಮ ಆದಾಯಕ್ಕೆ ಅನುಗುಣವಾಗಿ ಬದುಕಬೇಕು. ಅದನ್ನು ಬಿಟ್ಟು ತನಗೇ ಕಷ್ಟ ಬಂದಿತೆಂದು ಮರುಗುತ್ತ ಕುಳಿತರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಕೆಲವರು ಕೆಟ್ಟ ನಿರ್ಧಾರಗಳನ್ನೂ ತೆಗೆದುಕೊಂಡು ಬಿಡುತ್ತಾರೆ. ಹಾಗಾಗಿ ಮೊದಲ ಬಾಣದ ಗಾಯವನ್ನು ಜಾಗರೂಕತೆಯಿಂದ ವಾಸಿ ಮಾಡಿಕೊಳ್ಳುವುದರಲ್ಲಿಯೇ ಜಾಣತನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.