ನೀವು ಮೋಟಾರು ಸೈಕಲ್‌ನಲ್ಲಿ ಹೋಗ್ತಿರ್ತೀರಿ. ಒಂದು ಸಣ್ಣ ಮುಳ್ಳು ಚುಚ್ಚಿದರೆ ಟ್ಯೂಬ್ ಪಂಕ್ಚರ್ ಆಗತೈತಿ. ಆಗ ನಿಮ್ಮ ಪ್ರಯಾಣ ನಿಲ್ಲುತ್ತದೆ. ಹಾಗೆಯೇ ದೇಹ ಎಂಬ ಈ ತೊಗಲಿನ ಟ್ಯೂಬ್‌ನಲ್ಲಿ 9 ರಂಧ್ರ ಇಟ್ಟೂ ಪಂಕ್ಚರ್ ಆಗಲಾಗದಂಗೆ ವ್ಯವಸ್ಥೆ ಇಟ್ಟಾನಲ್ಲ ಆ ದೇವರು. ಅವನ ವೈಶಿಷ್ಟ್ಯ ಎಂಥದ್ದು! ಇದು ಸೃಷ್ಟಿಯ ವೈಚಿತ್ರ್ಯ. ಈ ಜೀವನದ ಆಳವನ್ನು ಅಳೆಯಲಾಗುವುದಿಲ್ಲ. ಜಗತ್ತು ಕೂಡಾ ಗೊತ್ತಾಗುವುದಿಲ್ಲ. ಇದನ್ನು ಅರಿಯಬೇಕು ಎಂದರೆ ಅದಕ್ಕೆ ನಮ್ಮ ಆಯಷ್ಯ ಚಿಕ್ಕದು. ಇದನ್ನು ತಿಳಿಯಬೇಕಾದರೆ ಏನು ಮಾಡಬೇಕು? ಯಾಕೆ ನಮ್ಮ ಹುಟ್ಟಾತು? ಹುಟ್ಟಾದ ಮೇಲೆ ಯಾಕೆ ನಮಗೆ ಸಾವು ಬರುತ್ತದೆ? ಹುಟ್ಟು ಸಾವುಗಳ ಮಧ್ಯದಲ್ಲಿ ನಾವೇನು ಮಾಡಬೇಕು ಎನ್ನುವುದು ನಮಗ್ಯಾರಿಗೂ ತಿಳಿದಿಲ್ಲ. ನಾಳೆಯ ಗರ್ಭದೊಳಗೆ ಏನಿದೆ ಎಂಬುದು ನಮಗೆ ಅರ್ಥವಾಗಿಲ್ಲ. ಆದರೂ ಈ ಜೀವನದ ರಹಸ್ಯ ತಿಳಿಸಿಕೊಡುವವ ಒಬ್ಬ ಬೇಕಲ್ಲ.
ನೀವು ಕಾಡಿನೊಳಗೆ ಹೋಗ್ತಿರ್ತೀರಿ. ನಿಮಗೆ ದಾರಿ ಗೊತ್ತಾಗೋದಿಲ್ಲ. ಆಗ ನೀವು ಮೊಬೈಲ್ ಓಪನ್ ಮಾಡ್ತೀರಿ. ಗೂಗಲ್ ಅರ್ಥ್ ತೆಗೀತೀರಿ. ಅದು ನಿಮಗೆ ದಾರಿ ತೋರಿಸ್ತದ. ಈ ವಿಶ್ವವೂ ಕೂಡಾ ದಾರಿಕಾಣದ ಭವಾರಣ್ಯ. ನಾವು ನಮ್ಮ ಬದುಕಿನಲ್ಲಿ ದಾರಿ ಕಾಣದೆ ನಿಂತಾಗ ದಾರಿ ತೋರಿಸುವ ಗೂಗಲ್ ಅರ್ಥ್ ಎಂದರೆ ಅವರೇ ಗುರುಗಳು. ಗುರುಗಳು ಕಲ್ಲು ಸಕ್ಕರೆ ಕೊಟ್ಟರೆ ಅದನ್ನೇ ಎಣಿಸಿ ಓಸಿ ನಂಬರ್‌ಗೆ ದುಡ್ಡು ಹಾಕುವ ಶಿಷ್ಯರೂ ಇರ್ತಾರೆ. ಅವರನ್ನು ಬಿಡಿ.
ಫಿಲ್ಟರ್ ನೀರು ಕುಡಿಯದಿದ್ದರೆ ನಮಗೆ ಕೆಮ್ಮು, ನೆಗಡಿ, ಜ್ವರ ಬರ್ತದ. ಆದರೆ ಆಕಳ ಎಂದೂ ಫಿಲ್ಟರ್ ನೀರು ಕುಡಿಯುವುದಿಲ್ಲ. ರಾಡಿ ನೀರು ಕುಡೀತೈತಿ. ಕಸ ತಿಂತೈತಿ. ಮನೀಗ್ ಬಂದಾಗ ನಾವು ಅದಕ್ಕೆ ಮುಸುರೆ ನೀರು ಕೊಡುತ್ತೀವಿ. ಇಷ್ಟಾದರೂ ಅದಕ್ಕೆ ಇನ್‌ಫೆಕ್ಷನ್ ಆಗಲ್ಲ. ಅದು ಕರುವಿಗೆ ಹಾಲಿನ ರೂಪದ ಅಮೃತ ಕೊಡುತ್ತದೆ. ಜೀವನದಲ್ಲಿ ಬರುವ ಎಲ್ಲ ಕಷ್ಟಗಳನ್ನೂ ಸ್ವೀಕಾರ ಮಾಡಿ ಜನರಿಗೆ ಅಮೃತವನ್ನು ನೀಡುವವನೇ ನಿಜವಾದ ಗುರು. ಯಾರ ಮಾತಿನಲ್ಲಿ ಸತ್ಯದ ಬೆಳಕಿದೆ, ಶಾಂತಿಯ ನೆರಳಿದೆ ಅಂಥವನಿಗೆ ಗುರು ಎನ್ನಬೇಕು. ಯಾರ ಸಾನಿಧ್ಯದಲ್ಲಿ ಕೂಡುವುದರಿಂದ ನಮ್ಮ ಮನಸ್ಸು, ಹೃದಯ ಅರಳುತ್ತದೆಯೋ ಅವನಿಗೆ ಗುರು ಎನ್ನಬೇಕು.
ಮೊಗ್ಗೊಂದನ್ನು ಬಲವಂತವಾಗಿ ಅರಳಿಸಲು ಸಾಧ್ಯವಿಲ್ಲ. ‘ನಾನೇ ನೀರು ಹಾಕಿ, ಗೊಬ್ಬರ ಹಾಕಿ ಬೆಳೆಸಿದ್ದೇನೆ’ ಎಂದು ನೀವು ಮೊಗ್ಗು ಅರಳಿಸಲು ಹೋದರೆ ಅದು ಅರಳುವುದಿಲ್ಲ. ಮೊಗ್ಗೆಯ ಪಕಳೆಗಳು ಉದುರುತಾವ ಅಷ್ಟೆ. ಆದರೆ, 15 ಕೋಟಿ ಕಿಮೀ ದೂರದಲ್ಲಿರುವ ಸೂರ್ಯನ ಕಿರಣ ತಾಗಿದರೆ ಮೊಗ್ಗು ತಾನಾಗಿಯೇ ಅರಳುತ್ತದೆ. ಇದು ಸೂರ್ಯ ಮತ್ತು ಮೊಗ್ಗಿಗೆ ಇರುವ ಸಂಬಂಧ. ಗುರು ಶಿಷ್ಯರ ಸಂಬಂಧವೂ ಹಾಗೆಯೇ ಇರಬೇಕು. ಗುರು ಶಾಂತವಾಗಿರಬೇಕು. ಕಷ್ಟಗಳು ಯಾರಿಗೆ ಬಂದಿಲ್ಲ ಹೇಳಿ? ಇಬ್ಬರಿಗಷ್ಟೇ ಕಷ್ಟ ಇಲ್ಲ. ಅದರಲ್ಲಿ ಒಬ್ಬ ಸತ್ತಾನ, ಇನ್ನೊಬ್ಬ ಹುಟ್ಟಿಲ್ಲ. ಅವರಿಗೆ ಮಾತ್ರ ಕಷ್ಟ ಇಲ್ಲ. ಕಷ್ಟ ಇಲ್ಲ ಎಂದರೆ ನೀವು ಜೀವಂತ ಇಲ್ಲ ಎಂದೇ ಅರ್ಥ. ಪರಿಸ್ಥಿತಿ ಬದಲಾಗಬಹುದು, ಆದರೆ ಮನಃಸ್ಥಿತಿ ಬದಲಾಗಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.