ಹಿಂದೆ ಮಕ್ಕಳನ್ನು ಗುರುಕುಲದಲ್ಲಿ 16 ವರ್ಷ ಇಟ್ಟುಕೊಂಡು ವಿದ್ಯೆ ಕಲಿಸುತ್ತಿದ್ದರು. ಶಿಷ್ಯ ವಿದ್ಯೆ ಕಲಿತು ಮನೆಗೆ ಹೋಗುವಾಗ ಗುರುಗಳು ‘ನಾನು ಕಲಿಸಿದ್ದರಲ್ಲಿ ಯಾವುದನ್ನಾದರೂ ಮರೆತುಬಿಡು ಪರವಾಗಿಲ್ಲ. ಆದರೆ ಸತ್ಯಂ ವದ, ಧರ್ಮಂ ಚರ, ಮಾತೃ ದೇವೋಭವ, ಪಿತೃದೇವೋ ಭವ, ಆಚಾರ್ಯದೇವೋ ಭವ, ಅತಿಥಿ ದೇವೋ ಭವ ಎಂಬುದಷ್ಟನ್ನು ನೆನಪಿಟ್ಟುಕೊ, ನಿನಗೆ ಜೀವನ ದರ್ಶನ ಆಗುತ್ತದೆ’ ಎನ್ನುತ್ತಿದ್ದರು. ಈಗಿನ ಮಕ್ಕಳಿಗೂ ಇದನ್ನು ಹೇಳಿಕೊಡಬೇಕು. ಅಂದರೆ ಸಮಾಜ ಸುಧಾರಿಸುತ್ತದೆ.
ಅಪ್ಪ ಅಮ್ಮ 12 ಮಕ್ಕಳನ್ನು ಜ್ವಾಪಾನ ಮಾಡ್ಯಾರ, ಆದರೆ ಈ 12 ಜನ ಮಕ್ಕಳು 24 ಮಂದಿಯಾದಾಗ ಆ ಮುದುಕ ಮುದುಕಿಯನ್ನು ಜ್ವಾಪಾನ ಮಾಡಕಾಗಲ್ಲ. ಅಪ್ಪ ಅಮ್ಮನ ಆಸ್ತಿಯಲ್ಲಿ ನಾವು ಪಾಲು ಕೇಳಿದೆವೇ ವಿನಾ ಅಪ್ಪ ಅಮ್ಮಗ ಪಾಡು ನೋಡಲಿಲ್ಲ. ನಮಗೆ ಜಗತ್ತು ತೋರಿದವರು ಅವರು, ನಮಗೆ ಕಣ್ಣು ಕೊಟ್ಟು ನಾವು ಈ ಜಗತ್ತು ನೋಡಲು ಕಾರಣರಾದವರು ಅವರು. ಅವರೇ ನಿಜವಾದ ಅರ್ಥದಲ್ಲಿ ಜಗದ್ಗುರುಗಳು. ಅವರು ತೋರಿಸದೆ ಇದ್ದರೆ ನಾವು ಜಗತ್ತು ನೋಡಲು ಸಾಧ್ಯವೇ ಇರಲಿಲ್ಲ. ಅವರಿಗಿಂತ ಬೇರೆ ಜಗದ್ಗುರುಗಳಿಲ್ಲ.
ಒಂದು ಮುದುಕಿಯನ್ನು ಮಗ ಮನೆಯಿಂದ ಹೊರಹಾಕಿದ್ದ. ಆಕೆ ಭಿಕ್ಷೆ ಬೇಡುತ್ತಿದ್ದಳು. ಒಂದು ದಿನ ತುಂಬು ಗರ್ಭಿಣಿ ಆಸ್ಪತ್ರೆಗೆ ಹೊರಟಾಗ ಈ ಮುದುಕಿ ತನಗೆ ಏನಾದರೂ ತಿನ್ನಲು ಕೊಡು ಎಂದು ಆ ಗರ್ಭಿಣಿಯನ್ನು ಕೇಳಿದಳು. ‘ನಾನು ಹೆರಿಗೆ ನೋವಿನಿಂದ ಒದ್ದಾಡಕ್ಕತ್ತೀನಿ, ನಿನಗೇನು ಕೊಡೋದು’ ಎಂದಳು ಗರ್ಭಿಣಿ. ಅದಕ್ಕೆ ಮುದುಕಿ ‘ಹೆರಿಗೆ ನೋವು ನನಗೂ ಗೊತ್ತದ. ಆದರೆ ಹೆರಿಗೆ ನೋವಿಗಿಂತ ಮಗ ಮನೆಯಿಂದ ಹೊರಕ್ಕೆ ಹಾಕಿದಾಗ ಆಗುವ ನೋವು ಇನ್ನೂ ಹೆಚ್ಚಿನದು. ಅದನ್ನು ತಡೆಯೋಕಾಗಲ್ಲ’ ಎಂದಳು.
ಯಾರೂ ಇಲ್ಲದ ಮನೆಯಲ್ಲಿ, ಕೋಣೆಯ ಕದ ಹಾಕಿಕೊಂಡರೂ ತಾಯಿ ಮಗುವಿಗೆ ಸೆರಗು ಮುಚ್ಚಿಯೇ ಹಾಲು ಕೊಡುತ್ತಾಳೆ. ಯಾಕಂದರ ತನ್ನ ದೃಷ್ಟಿ ಕೂಡಾ ಮಗುವಿನ ಮ್ಯಾಲೆ ಬೀಳಬಾರದು ಅಂತ. ಅಪ್ಪ ಮಗುವನ್ನು ತನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡು ಜಗತ್ತನ್ನು ತೋರಿಸುತ್ತಾನೆ. ಯಾಕೆಂದರೆ ತಾನು ನೋಡದ ಜಗತ್ತನ್ನು ಮಗ ನೋಡಲಿ ಅಂತ. ಎಲ್ಲ ಜ್ಯೋತಿರ್ಲಿಂಗಗಳಿಗಿಂತ, ಎಲ್ಲ ಪವಿತ್ರ ಸ್ಥಳಗಳಿಗಿಂತ ಅತ್ಯಂತ ಪೂಜ್ಯವಾದ ಎರಡು ಪವಿತ್ರ ಸ್ಥಳಗಳೆಂದರೆ ಒಂದು ತಾಯಿಯ ಮಮತೆಯ ಮಡಿಲು, ಮತ್ತೊಂದು ತಂದೆಯ ಪ್ರೇಮದ ಹೆಗಲು. ಅವರು ಅದಾರ ಅಂತ ನಾವು ಇದೀವಿ. ನಾವು ಅವರನ್ನು ಬಿಟ್ಟೀವಿ. ಅವರು ಹೋದಮೇಲೆ ಅವರ ಫೋಟೋ ಇಟ್ಟೀವಿ. ಇದ್ದಾಗ ಸೇವೆ ಮಾಡದೆ ಹೋದಾಗ ಹಾರ ಹಾಕಿದರೇನು ಪ್ರಯೋಜನ?
ಬಹಳಷ್ಟು ಮಕ್ಕಳು ಹೇಳತಿರ್ತಾರ, ಓದಿದ್ದು ನೆನಪುಳಿಯೋದಿಲ್ಲ ಅಂತ. ಅದಕ್ಕ ಮಾಸ್ತರ್‌ಗಳು ಪರೀಕ್ಷಾ ತಯಾರಿ, ರೀಡ್, ರೈಟ್, ರಿಮೆಂಬರ್, ರಿಹರ್ಸಲ್ ಅಂತ ನೂರು ಹೇಳ್ತಾರ. ಓದಿದ್ದು ನೆನಪಲ್ಲಿ ಉಳಿಯೋಕೆ ಸಾಕಷ್ಟು ಟೆಕ್ನಾಲಜಿ ಬಂದಾವ. ಆದರೆ ಅವೆಲ್ಲ ಪ್ರಯೋಜನಕ್ಕೆ ಬರೋದಿಲ್ಲ. ಓದಿದ್ದು ನೆನಪಿನಲ್ಲಿ ಉಳೀಬೇಕು ಅಂದರೆ ಅದಕ್ಕೆ ಇರೋದು ಒಂದೇ ಟೆಕ್ನಾಲಜಿ. ಅದೆಂದರೆ ಅಪ್ಪನ ಬೆವರು, ಅಮ್ಮನ ಕಷ್ಟ ಎರಡು ತಲ್ಯಾಗ ಇಟ್ಟುಕೊಂಡರೆ ಓದಿದ್ದು ತಾನೇ ನೆನಪುಳಿಯುತ್ತದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.