ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಭಯ ಬಿಸಾಕಿ

ನವೀನ ಕುಮಾರ್‌ ಹೊಸದುರ್ಗ
Published 19 ಮೇ 2024, 22:30 IST
Last Updated 19 ಮೇ 2024, 22:30 IST
ಅಕ್ಷರ ಗಾತ್ರ

ಒಂದೂರಲ್ಲಿ ದೆವ್ವ ಭೂತ ಪ್ರೇತ ಪಿಶಾಚಿ ಇತ್ಯಾದಿಗಳನ್ನು ನಂಬದ ಒಬ್ಬ ಧೈರ್ಯಶಾಲಿ ಇದ್ದ. ಅವನು ಈ ರೀತಿಯ ಮೂಢನಂಬಿಕೆಗಳಿಂದ ಭಯಪಡುತ್ತಿದ್ದ ಜನರ ಎದುರಿಗೆ ಒಂದು ಸವಾಲೆಸೆದ. ‘ನಾನು  ನಮ್ಮೂರಿನ ಸ್ಮಶಾನಕ್ಕೆ ಅಮಾವಾಸ್ಯೆಯ ದಿನ ಮಧ್ಯರಾತ್ರಿಯಲ್ಲಿ ಹೋಗಿ ಅಲ್ಲಿರುವ  ಆಲದ ಮರಕ್ಕೆ ಒಂದು ಮೊಳೆ ಹೊಡೆಯುತ್ತೇನೆ’  ಎಂಬುದೇ ಅವನೆಸೆದ  ಸವಾಲು.

 
ಆ ದಿನ ಬಂತು. ನಮ್ಮ ಧೈರ್ಯಶಾಲಿ ವ್ಯಕ್ತಿ ಅಮಾವಾಸ್ಯೆಯ ಮಧ್ಯರಾತ್ರಿ ಸ್ಮಶಾನಕ್ಕೆ ಹೊರಟೇಬಿಟ್ಟ. ಧೈರ್ಯದಿಂದಲೇ ಆಲದ ಮರಕ್ಕೆ ಮೊಳೆಯನ್ನೂ ಹೊಡೆದ. ಆಮೇಲೆ ಆತ ಇನ್ನೇನು ವಾಪಸ್‌ ಹೊರಡಬೇಕು ಆಗ ಅವನು ಉಟ್ಟಿದ ಪಂಚೆಯನ್ನು ಯಾರೋ ಬಲವಾಗಿ ಹಿಡಿದು ಎಳೆದಂತಾಯಿತು. ಈಗ ನಮ್ಮ ಧೈರ್ಯಶಾಲಿಯ ಎದೆ ಗುಂಡಿಗೆ ಧಸಕ್ಕೆಂದಿತು... ಆತ ಯಾವುದೋ  ಭೂತ ತನ್ನನ್ನು ಹಿಡಿದೆಳೆಯುತ್ತಿದೆ ಎಂಬ  ಭಯದಿಂದ ಹೃದಯಾಘಾತಕ್ಕೊಳಗಾಗಿ ಅಲ್ಲಿಯೇ ಸತ್ತು ಹೋದ.

ಮರುದಿನ ಹೋಗಿ ನೋಡಿದರೆ ಈ ವ್ಯಕ್ತಿ ಮರಕ್ಕೆ ಮೊಳೆಯನ್ನು ಹೊಡೆಯುವ ಗಡಿಬಿಡಿಯಲ್ಲಿ ತಾನು ಉಟ್ಟಿದ್ದ ಪಂಚೆಯ ತುದಿಯನ್ನೂ ಸೇರಿಸಿ ಮೊಳೆ ಹೊಡೆದು ಬಿಟ್ಟಿದ್ದಾನೆ. ಹೀಗಾಗಿ ಅವನು ಹೊರಟಾಗ ಯಾರೋ ಅವನ ಪಂಚೆಯನ್ನು ಹಿಡಿದು ಎಳೆದಂತಾಗಿದೆ. ಪಂಚೆ ಹಿಡಿದೆಳೆದಂತೆ ಆ ವ್ಯಕ್ತಿಗಾದ ಅನುಭವವೇನೋ ನಿಜ ಆದರೆ ಅದು ಯಾವುದೇ ದೆವ್ವ ಭೂತದ ಕೆಲಸವಲ್ಲ ಬದಲಿಗೆ ಅವನೇ ಹೊಡೆದ ಮೊಳೆಯಿಂದಾದದ್ದು.

ಎಂದರೆ ಹೀಗೆಯೆ... ಇಂಗ್ಲಿಷ್‌ನಲ್ಲಿ ಭಯಕ್ಕೆ ಬಳಸುವ FEAR ಎನ್ನುವ ಪದವನ್ನು False Evidence Appearing as Real ಎಂಬುದಾಗಿ ವಿಸ್ತರಿಸಬಹುದು. ಎಷ್ಟೋ ಬಾರಿ ನಮ್ಮ ಧೈರ್ಯಸ್ಥ ವ್ಯಕ್ತಿಗೆ ಆದಂತೆ, ಅನುಭವಕ್ಕೆ ಬಂದಿದ್ದು ಸಹ ಸುಳ್ಳಾಗಿರಬಹುದು. ಅದನ್ನು ತಣ್ಣನೆಯ ಮನಃಸ್ಥಿತಿಯಿಂದ ವಿಮರ್ಶಿಸಿದಾಗ ಮಾತ್ರ ಅದು ಭಯವಾಗಿ ಪರಿವರ್ತನೆಗೊಳ್ಳುವುದಿಲ್ಲ. ಕೆಲವೊಮ್ಮೆ ಕತ್ತಲಲ್ಲಿ ಹರಿದಾಡಿದ ಹಗ್ಗ ಹಾವೆಂದು ಭಾಸವಾಗಿ ಭಯ ಮೂಡಿಸುವುದಿಲ್ಲವೇ? 

ನಮ್ಮ ವ್ಯಕ್ತಿತ್ವಕ್ಕೆ ಕಾಟ ಕೊಡುವ ವೈರಸ್‌ಗಳಲ್ಲಿ FOF ಅಂದರೆ Fear Of Failure ಕೂಡ ಒಂದು. ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳುವ ಮೊದಲು ಅದರಲ್ಲಿ ನಾನು ಸೋತುಬಿಟ್ಟರೆ ಎನ್ನುವ ಭಯವೇ ನಮ್ಮನ್ನು ಆ ಕೆಲಸ ಮಾಡುವುದನ್ನು ತಡೆ ಹಿಡಿದುಬಿಡುತ್ತದೆ. ಹೀಗಾಗಿ ಈ FEAR ಎನ್ನುವ ಪದವನ್ನು ಧನಾತ್ಮಕವಾಗಿ ಹಾಗೂ ಋಣಾತ್ಮಕವಾಗಿ ಎರಡು ರೀತಿಯಲ್ಲೂ ವಿಸ್ತರಿಸಬಹುದು. ನಕಾರಾತ್ಮಕವಾಗಿ ಯೋಚಿಸಿದಾಗ FEAR ಎನ್ನುವುದು Forget Everything And Run ಎಂಬುದಾಗಿ ಗೋಚರಿಸುತ್ತದೆ ಹಾಗೂ ಧನಾತ್ಮಕವಾಗಿ ಚಿಂತಿಸಿದಾಗ Face Everything And Rise ಎಂಬುದಾಗಿ ಹೊಳೆದು, ಯಾವುದೇ ಸನ್ನಿವೇಶ ಎದುರಾಗಲಿ ಅದನ್ನು ಧೈರ್ಯವಾಗಿ ಎದುರಿಸಿ ನೋಡೋಣ ಎನ್ನುವ ಮನಸ್ಥಿತಿಯನ್ನು ನಮ್ಮಲ್ಲಿ ರೂಪಿಸುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT