ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು–30: ಅಕ್ಕನ ದೇವರು, ನಮ್ಮ ದೇವರು!

Published : 24 ಸೆಪ್ಟೆಂಬರ್ 2024, 19:21 IST
Last Updated : 24 ಸೆಪ್ಟೆಂಬರ್ 2024, 19:21 IST
ಫಾಲೋ ಮಾಡಿ
Comments

ಅಕ್ಕಮಹಾದೇವಿಗೆ ಎಲ್ಲದರಲ್ಲೂ, ಎಲ್ಲರಲ್ಲೂ ಚನ್ನಮಲ್ಲಿಕಾರ್ಜುನನೇ ಕಾಣುತ್ತಿದ್ದ. ಆಕೆಯ ದೇವರು ಈ ವಿಶ್ವವನ್ನು ಮೀರಿದ್ದು. ನಮ್ಮ ದೇವರು ಹಾಂಗಿಲ್ಲ. ನಮ್ಮ ದೇವರು ನಮ್ಮ ಕುಲಕ್ಕಷ್ಟೇ ದೇವರು, ನಮ್ಮ ಜಾತಿಗಷ್ಟೇ ದೇವರು, ಕಷ್ಟಬಂದರಷ್ಟಕ್ಕೇ ದೇವರು. ನಾವು ಸೀಜನ್ ನೋಡಿ ದೇವರನ್ನು ಮಾಡಿಕೊಳ್ಳೋರು. ನಾವು ಸೀಜನ್ಡ್ ಭಕ್ತರು. ಕಷ್ಟ ಬಂತು ಅಂದ್ರ ದೇವರ ಗುಡಿಗೆ ಹೋಗುತ್ತೀವಿ. ಆಗ ದೇವರು ಏನಂತಾನ? ‘ನಮ್ಮ ನಮ್ಮ ಜಗಳ ನಾವೇ ಬಗೆಹರಿಸಿಕೊಂಡು ದೇವರಾಗೀವಿ, ನೀವೂ ಹಾಂಗ ನಿಮ್ಮ ನಿಮ್ಮ ಜಗಳ ನೀವೇ ಬಗೆಹರಿಸಿಕೊಳ್ಳಿ, ನೀವೂ ದೇವರಾಗ್ತೀರಿ’ ಅಂತಾನೆ.

ಅಕ್ಕಮಹಾದೇವಿಯ ಚನ್ನಮಲ್ಲಿಕಾರ್ಜುನನ ಮೇಲಿನ ದೇವ ಪ್ರೇಮ ವಸ್ತು ವಿಷಯಗಳಿಗೆ ಸೀಮಿತವಾಗಿರಲಿಲ್ಲ. ನಾಮರೂಪಗಳಿಗೆ ಸೀಮಿತವಾಗಿರಲಿಲ್ಲ. ಆಕೆಯದ್ದು ಬಯಲಿನಾಚೆಗಿನ ಬೆಳಗು. ವಿಶ್ವದಾಚೆಗಿನ ಸತ್ಯವನ್ನು ಪ್ರೇಮಿಸಿದವಳು ಅಕ್ಕ. ನಮ್ಮ ಕತಿ ಏನಾಗೈತಿ ಅಂದ್ರ ತಲೆ ದೊಡ್ಡದಾಗೈತಿ, ಕೈಯಾಗ ದುಡ್ಡು ಬಂದಾವ. ಆದರೆ ಹೃದಯ ಬಾಡ್ಯಾವ. ತಲೆ ಇರಬೇಕು, ಕೈಯೊಳಗೆ ಭಗೀರಥ ಪ್ರಯತ್ನ ಇರಬೇಕು, ಹೃದಯದೊಳಗೆ ಮುಗ್ದ ಮನಸ್ಸಿನ ಮಗುವಿನ ಪ್ರೇಮ ಇರಬೇಕು. ಅದು ಶಿಕ್ಷಣ.

‘ಓದಿ ಓದಿ ಯಾರೂ ಪಂಡಿತ ಆಗಲ್ಲ. ಹೃದಯದಲ್ಲಿ ಪ್ರೇಮ ಇದ್ದವನೇ ಪಂಡಿತ’ ಅಂತ ಕಬೀರರು ಹೇಳ್ತಾರೆ. ಎದೆಯೊಳಗೆ ಬರೀ ಅಕ್ಷರ ತುಂಬಿದ್ದರೆ ಅವರನ್ನು ವಿದ್ಯಾವಂತ ಅನಕ್ಷರಸ್ಥ ಎನ್ನಬಹುದು. ನಮ್ಮ ಪ್ರೇಮ ಪವಿತ್ರವಾಗಿ ಉಳಿದಿಲ್ಲ. ನಮ್ಮ ಪ್ರೇಮದಲ್ಲಿ ವ್ಯವಹಾರ ಬರತೈತಿ. ವಿಷಯಗಳ ವಾಸನೆ ಬಡಿತೈತಿ. 

ಯಾಜ್ಞ್ಯವಲ್ಕ ಅಂತ ಒಬ್ಬರು ಇದ್ದರು. ಅವರ ಪತ್ನಿ ಮೈತ್ರೇಯಿ. ಆಕಿ ಒಮ್ಮೆ, ‘ಈ ಜಗತ್ತಿನಲ್ಲಿ ಜನ ಅಧಿಕಾರ, ಸಂಪತ್ತು, ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು, ಮಕ್ಕಳನ್ನು ಇಷ್ಟೆಲ್ಲಾ ಪ್ರೀತಿ ಮಾಡ್ತಾರಲ್ಲ ಯಾಕ’ ಎಂದು ಕೇಳಿದಳು. ಅದಕ್ಕೆ ಯಾಜ್ಞ್ಯವಲ್ಕ, ‘ಎದಕ ಪ್ರೀತಿ ಮಾಡ್ತಾರೆಂದರೆ ಯಾರೂ ಇನ್ನೊಬ್ಬರ ಮೇಲಿನ ಪ್ರೀತಿಗಾಗಿ ಪ್ರೀತಿ ಮಾಡಲ್ಲ, ತನ್ನ ಮೇಲಿನ ಪ್ರೇಮಕ್ಕೆ ಪ್ರೇಮ ಮಾಡ್ತಾರ. ತನ್ನ ಸುಖಕ್ಕೆ ಪ್ರೀತಿ ಮಾಡ್ತಾರ’ ಎಂದು ಉತ್ತರಿಸಿದರು.

ಈಗ ನೀವು ಬಹಳ ಪ್ರೀತಿಯಿಂದ ಮನೆ ಕಟ್ಟಿಸ್ತೀರಿ. ಸಾಲ ಮಾಡಿ ಕಟ್ಟಿಸ್ತೀರಿ. ಅದಕ್ಕೆ ನಿಮ್ಮ ಪತ್ನಿ ಹೆಸರೇ ಇಟ್ಟಿರ್ತೀರಿ. ಆದರೆ ಸಾಲ ತೀರಿಸೋಕೆ ಆಗಲ್ಲ. ಬ್ಯಾಂಕ್‌ನವರು ಬಂದು ಧಮಕಿ
ಹಾಕ್ತಾರ. ಪೊಲೀಸರಿಗೆ ದೂರು ಕೊಡ್ತಾರ. ಪೊಲೀಸರು ಬಂದು ನಿನ್ನ ಅರೆಸ್ಟ್ ಮಾಡ್ತೀನಿ ಅಂದಾಗ, ‘ಮನೆ ಹೋದರೆ ಹೋಗಲಿ; ನನ್ನ ಬಟ್ಟು ಬಿಡು’ ಅಂತೀರಿ. ಅಂದರೆ ಮನೆ ಕಟ್ಟಿಸಿದ್ದು ನಿಮ್ಮ ಮೇಲಿನ ಪ್ರೀತಿಗೆ ಅಷ್ಟೆ. ಒಳ್ಳೆ ಗಾಡಿ ತಗೊಂಡಿರ್ತೀರಿ. ಅದು ನನ್ನ‌ ಕನಸು, ಅದು ನನ್ನ ಪ್ರಾಣ ಅಂತೀರಿ. ಒಂದಿನ ಅಪಘಾತವಾಯ್ತು. ಡ್ರೀಮು, ಡ್ರೀಮ್ ಗರ್ಲ್ ಎರಡೂ ಬಿಟ್ಟು ನೀವು 108ರ ಗಾಡಿಯಲ್ಲಿ ಹೋಗ್ತೀರಿ. ನಿಮಗೆ ಅದರ ಬಗ್ಗೆ ಬಹಳ ಪ್ರೀತಿ ಇತ್ತು ಅಂದ್ರ ಗಾಡಿಯನ್ನು 108ರ ವಾಹನದಲ್ಲಿ ಕಳಿಸಬೇಕಿತ್ತಲ್ಲ. ಹಾಗೆ ಮಾಡಿಲ್ಲ ನೀವು. ಯಾಕೆಂದರೆ ನೀವು ಪ್ರೀತಿಸಿದ್ದು ನಿಮ್ಮನ್ನ. ಅಂದರೆ ಮನುಷ್ಯ ಸುಖ ಕೊಡುವುದನ್ನು ಪ್ರೀತಿ ಮಾಡ್ತಾನ ಮತ್ತು ದುಃಖ ಕೊಡತೈತಿ ಎನ್ನುವುದು ಗೊತ್ತಾದ ತಕ್ಷಣ ಅದನ್ನು ಬಿಟ್ಟುಬಿಡ್ತಾನ.

ಇದು ಮನುಷ್ಯನ ಸ್ವಭಾವ ಅಂತಾರ ಯಾಜ್ಞ್ಯವಲ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT