ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ಬುದ್ಧಿ ಭಾವಗಳ ನಿರಂತರ ಬೆಳವಣಿಗೆ

Published : 4 ಆಗಸ್ಟ್ 2024, 23:49 IST
Last Updated : 4 ಆಗಸ್ಟ್ 2024, 23:49 IST
ಫಾಲೋ ಮಾಡಿ
Comments

ಮಹಾತ್ಮ ಗಾಂಧೀಜಿಯವರು ದಕ್ಷಿಣ ಆಫ್ರಿಕಾದ ತಮ್ಮ ಫೀನಿಕ್ಸ್ ಆಶ್ರಮದಲ್ಲಿ ಆಶ್ರಮವಾಸಿಗಳ ಮಕ್ಕಳಿಗಾಗಿ ಶಾಲೆಯೊಂದನ್ನು ತೆರೆದಿದ್ದರು. ಗಾಂಧೀಜಿಯವರ ನಿಲುವಿನಲ್ಲಿ ಶಿಕ್ಷಣವೆಂದರೆ ಬರೀ ಅಂಕ ಗಳಿಕೆಗಷ್ಟೇ ಸೀಮಿತವಾಗಿರದೇ, ನಮ್ಮ ಬುದ್ಧಿ ಹಾಗೂ ಭಾವ ಎರಡನ್ನೂ ವಿಕಾಸಗೊಳಿಸುವಂಥ  ಜ್ಞಾನಾರ್ಜನೆಯಾಗಿರಬೇಕು.ಇಂತಹ ನಿಜವಾದ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು ಎಂಬುದು ಅವರ ಉದ್ದೇಶವಾಗಿತ್ತು. ಹೀಗಾಗಿ ಅವರು ಮಕ್ಕಳ ಪ್ರಗತಿಯನ್ನು ವಿಭಿನ್ನ ಮಾನದಂಡದಲ್ಲಿ ಅಳೆಯುತ್ತಿದ್ದರು. ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಸಮನಾದ ಪ್ರಶ್ನೆಯನ್ನು ನೀಡಲಾಗುತ್ತಿತ್ತು. ಮೌಲ್ಯಮಾಪನದ ನಂತರ ಗಾಂಧೀಜಿಯವರು ಅತಿ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪ್ರಶಂಶಿಸುತ್ತಿದ್ದರು ಹಾಗೂ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬೈದು ಬುದ್ಧಿ ಹೇಳುತ್ತಿದ್ದರು. ಗಾಂಧೀಜಿಯವರ ಈ ನಿಲುವು, ಮಕ್ಕಳು ಹಾಗೂ ಅವರ ಪೋಷಕರನ್ನು ಸಹಜವಾಗಿ ಗೊಂದಲಕ್ಕೆ ದೂಡಿತು. ಅವರು ಗಾಂಧೀಜಿಯವರನ್ನು ‘ಹೀಗೇಕೆ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದಾಗ ಗಾಂಧೀಜಿ, ‘ನಾನು ಕಡಿಮೆ ಅಂಕ ಪಡೆದ ವಿದ್ಯಾರ್ಥಿಯನ್ನು ಅವನು ಪಡುತ್ತಿರುವ ಪರಿಶ್ರಮಕ್ಕಾಗಿ ಪ್ರಶಂಶಿಸುತ್ತಿದ್ದೇನೆ. ಇದರಿಂದಾಗಿ ಅವನ ಪರಿಶ್ರಮ ಇನ್ನಷ್ಟು ಹೆಚ್ಚುತ್ತದೆ. ಹಾಗೆಯೇ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ಕಡಿಮೆ ಅಂಕ ಪಡೆದ ವಿದ್ಯಾರ್ಥಿಯೊಂದಿಗೆ ತನ್ನನ್ನು ತಾನು ಹೋಲಿಸಿಕೊಂಡು ತಾನೇ ಬುದ್ಧಿವಂತ ಎಂಬ ಆಲೋಚನೆಯೊಂದಿಗೆ ಹೆಚ್ಚಿನ ಪರಿಶ್ರಮ ಪಡುವುದನ್ನೇ ನಿಲ್ಲಿಸಿ ಬಿಡುತ್ತಾನೆ. ಇದರಿಂದ ಅವನ ಪ್ರಗತಿ ಕುಂಠಿತವಾಗುತ್ತದೆ. ಜ್ಞಾನ ನಿಂತ ನೀರಾಗುತ್ತದೆ. ಹಾಗಾಗಿ ಅವರಿಗೆ ಬೈದು ಬುದ್ದಿ ಹೇಳುತ್ತೇನೆ’ ಎಂದು ಉತ್ತರಿಸಿದರು.

ಇಂದು ಸಂಪೂರ್ಣವಾಗಿ ವ್ಯಾಪಾರೀಕರಣಗೊಂಡಿರುವ ಶಿಕ್ಷಣದ ಸ್ಥಿತಿ ಗತಿಗಳ ಸಂದರ್ಭದಲ್ಲಿ ಗಮನಿಸಿದಾಗ ಗಾಂಧೀಜಿಯವರ ಚಿಂತನೆ ಎಷ್ಟು ಅರ್ಥಪೂರ್ಣವಾಗಿದೆ ಎಂದೆನಿಸುವುದಿಲ್ಲವೇ?  ಅಂಕ ಗಳಿಕೆಯೇ ಇಂದು ಜ್ಞಾನಾರ್ಜನೆಯ ಏಕೈಕ ಮಾನದಂಡವಾಗಿಬಿಟ್ಟಿದೆ. ಇದರಿಂದ ಹೆಚ್ಚು ಅಂಕ ಪಡೆದವರನ್ನು ಮಾತ್ರ ಜ್ಞಾನಿಗಳು ಎಂದು ಗುರುತಿಸುವಂತಾಗಿದೆ. ಆದರೆ ಅವರ ಜ್ಞಾನ, ಬುದ್ಧಿ ಭಾವಗಳ ವಿಕಾಸಕ್ಕೆ ಕಾರಣವಾಗಿದೆಯೇ? ಜ್ಞಾನಾರ್ಜನೆ ಎಂದರೆ ಎಂದಿಗೂ ನಿಂತ ನೀರಾಗದೆ ನಿರಂತರವಾದ  ಪ್ರಕ್ರಿಯೆ ಎಂಬ ಚಿಂತನೆ ಅವರಲ್ಲಿ ಇದೆಯೇ? ತನಗಷ್ಟೇ ಒಳ್ಳೆಯ ಉದ್ಯೋಗ, ತನ್ಮೂಲಕ ಅತ್ಯುತ್ತಮ ಪಗಾರವನ್ನು ಗಳಿಸಿಕೊಡುವ ಶಿಕ್ಷಣ, ಮಾನಸಿಕವಾಗಿ ನಮ್ಮ ಪ್ರಗತಿಗೆ ಕಾರಣವಾಗುತ್ತಿದೆಯೇ? ಸಮಾಜದ ಬೇರೆಯವರ ನೋವಿಗೆ ಕಷ್ಟಕ್ಕೆ ಸ್ಪಂದಿಸುವ ಸೂಕ್ಷ್ಮತೆಯನ್ನು, ಸಹಾನುಭೂತಿಯನ್ನು ನಮ್ಮ ಮಕ್ಕಳಲ್ಲಿ ತುಂಬುತ್ತಿದೆಯೇ?

ಈ ಬಗೆಯ ಮೌಲ್ಯ ಶಿಕ್ಷಣಕ್ಕೆ ಖಂಡಿತವಾಗಿಯೂ ಅಂಕಗಳ ಹಂಗಿರುವುದಿಲ್ಲ. ಈ ರೀತಿಯ ಶಿಕ್ಷಣವನ್ನೇ, ನಾವು ನಮ್ಮ ಬದುಕಿನುದ್ದಕ್ಕೂ ಪಡೆದುಕೊಳ್ಳಬೇಕಾದದ್ದು. ಹಾಗೂ ಇದು ನಮ್ಮ ಜೀವನ ಮೌಲ್ಯವನ್ನು ನಿರಂತರವಾಗಿ ವಿಕಸನಗೊಳಿಸುವ ಭಾವ ಬುದ್ಧಿಗಳ ಪರಿಷ್ಕರಣೆ. ಮೌಲ್ಯಯುತವಾದ ಸಮಾಜ ನಿರ್ಮಾಣಕ್ಕೆ ಇಂತಹ ಶೈಕ್ಷಣಿಕ ವ್ಯವಸ್ಥೆಯ ಅಗತ್ಯ ಖಂಡಿತವಾಗಿಯೂ ಇದೆಯಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT