ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು ‌| ಶಿಕ್ಷಣ ಎಂದರೆ ಏನು?

Published : 19 ಆಗಸ್ಟ್ 2024, 1:25 IST
Last Updated : 19 ಆಗಸ್ಟ್ 2024, 1:25 IST
ಫಾಲೋ ಮಾಡಿ
Comments

ಥಾಮಸ್ ಅಲ್ವಾ ಎಡಿಸನ್ ಅಂತ ಒಬ್ಬ ವಿಜ್ಞಾನಿ ಇದ್ದ. ಎಲೆಕ್ಟ್ರಿಕ್ ಬಲ್ಬ್‌ನಲ್ಲಿ ಬಳಸುವ ಟಂಗ ಸ್ಟನ್ ಕಂಡು ಹಿಡಿದವ. ಅವ ಸಣ್ಣವಿದ್ದಾಗ ಒಂದು ದಿನ ಶಾಲಾ ಮಾಸ್ತರ ಎಡಿಸನ್‌ನ ತಾಯಿ ಕರೆದು, ‘ನಿನ್ನ ಮಗ ಕೆಟ್ಟ ದಡ್ಡ ಅದಾನ, ಅವನ್ನ ಕರಕೊಂಡು ಹೋಗು’ ಅಂದ್ರು. ಆಗ ಅವ್ವ ಹೇಳಿದಳು ‘ಗುರುಗಳೇ, ನನ್ನ ಮಗ ದಡ್ಡ ಅಂತ ಹೊರಗೆ ಹಾಕೀರಲ್ಲ, ಒಂದು ದಿನ ಇಡೀ ಜಗತ್ತು ಅವನ್ನ ಕಣ್ಣೆತ್ತಿ ನೋಡುವಂಗ ಮಾಡ್ತೀನಿ. ಯಾಕೆಂದರೆ ಅವ ನನ್ನ ಹೊಟ್ಯಾಗ ಹುಟ್ಯಾನ, ಅವ ಏನಂತ ನನಗ ಗೊತ್ತು’ ಎಂದಳು.

ಯಾಕೆಂದರೆ ಅವಳು ತಾಯಿ. ತಾಯಿ ಅಂದರ ಮಕ್ಕಳನ್ನು ಟ್ಯೂಷನ್‌ಗೆ ಕಳಿಸಿ ಗಪ್ಪನೆ ಕುಂದರಾಕಿ ಅಲ್ಲ. ಮಾಸ್ತರನೆ ತನ್ನ ಮಗ ದಡ್ಡ ಅಂದರೆ ಮಾಸ್ತರ್‌ಗೆ ‘ಮಾರ್ಕ್ಸ ಕಾರ್ಡ್ ನೋಡಿ ಮಕ್ಕಳನ್ನು ಅಳೀಬಾರದು, ಅವನ ಸಂಕಲ್ಪ ಶಕ್ತಿ ನೋಡಿ ಅಳೀಬೇಕು’ ಅಂದಳು ಆ ತಾಯಿ.

ಟಂಗಸ್ಟನ್ ಕಂಡು ಹಿಡಿಯುವುದಕ್ಕಾಗಿ ಥಾಮಸ್ ಅಲ್ವಾ ಎಡಿಸನ್ ಸಾವಿರ ಸಲ ಪ್ರಯೋಗ ಮಾಡಿದ್ದ. ಅಂದರ 999 ಸಲ ಆತ ಫೇಲಾಗಿದ್ದ. ಬಲ್ಬ್ ಕಂಡುಹಿಡಿದಾಗ ಪತ್ರಕರ್ತರು ‘999 ಸಲ ಫೇಲಾಗಿ ಸಾವಿರದ ಸಲ ಪಾಸಾದಿರಲ್ಲ, 999 ಪ್ರಯತ್ನ ವ್ಯರ್ಥವಾಗಲಿಲ್ಲವಾ’ ಎಂದು ಕೇಳಿದರಂತೆ. ಅದಕ್ಕೆ ಎಡಿಸನ್, ‘ಸಾವಿರದ ಬಾರಿ ಪ್ರಯೋಗ ಮಾಡಿದಾಗ ಎಲೆಕ್ಟ್ರಿಕ್ ಬಲ್ಬ್ ಹೇಗೆ ಉರಿಯುತ್ತದೆ ಎನ್ನುವುದನ್ನು ಕಂಡು ಹಿಡಿದೆ. ಆದರೆ 999 ಸಲ ಪ್ರಯೋಗ ಮಾಡಿದಾಗ ಎಲೆಕ್ಟ್ರಿಕಲ್ ಬಲ್ಬ್ ಹೇಗೆ ಹತ್ತೋದಿಲ್ಲ ಎನ್ನುವುದನ್ನು ಕಂಡು ಹಿಡಿದೆ. ಅದೂ ಒಂದು ಸಂಶೋಧನೆ’ ಎಂದು ಉತ್ತರಿಸಿದನಂತೆ.

ಥಾಮಸ್ ಅಲ್ವಾ ಎಡಿಸನ್ ಅವನದ್ದು ಒಂದು ಪ್ರಯೋಗಾಲಯ ಇತ್ತು. ಅದರ ಎದುರಿಗೆ ಬಡವಿಯೊಬ್ಬಳ ಗುಡಿಸಲು ಇತ್ತು. ಆಕೆಗೆ 5–6 ವರ್ಷದ ಒಬ್ಬ ಮಗ ಇದ್ದ. ಆತನ ಅಪ್ಪ ಇರಲಿಲ್ಲ. ಆಕಿಗೆ ತನ್ನ ಮಗ ಥಾಮಸ್ ಅಲ್ವಾ ಎಡಿಸನ್‌ನಂತೆ ದೊಡ್ಡ ಮನುಷ್ಯ ಆಗಬೇಕು ಎಂಬ ಕನಸು. ಕನಸುಗಳು ಯಾವಾಗಲೂ ಗುಡಿಸಲಿನಲ್ಲಿಯೇ ಹುಟ್ಟುತ್ತವೆ. ಮಗನ ಹುಟ್ಟುಹಬ್ಬದ ದಿನ ಆತನನ್ನು ಕರೆದುಕೊಂಡು ಎಡಿಸನ್ ಪ್ರಯೋಗಾಲಯಕ್ಕೆ ಹೋಗಿ ಅವನ ಮುಂದೆ ನಿಲ್ಲಿಸಿ, ‘ಇವ ತಂದೆ ಇಲ್ಲದ ಅನಾಥ. ನೀ ಬೆಳೆದ ಎತ್ತರಕ್ಕೆ ಬೆಳೀಬೇಕು ಎನ್ನುವುದು ನನ್ನ ಆಸೆ. ಅದಕ್ಕೆ ಅವನಿಗೊಂದು ಮಾತು ಹೇಳು’ ಎಂದು ಕೇಳಿಕೊಂಡಳು.

‘ನನ್ನಂತೆ ನೀನು ಬೆಳೆಯಬೇಕು ಎನ್ನುವುದು ನಿನ್ನ ತಾಯಿಯ ಕನಸು. ಅದಕ್ಕೆ ಒಂದು ಮಾತು ಹೇಳ್ತೀನಿ ಕೇಳು. ಈ ಮಾತು ಕೇಳಿದರೆ ನೀನು ಮಾತ್ರ ಅಲ್ಲ, ಇಡೀ ಜಗತ್ತು ಎತ್ತರಕ್ಕೆ ಬೆಳೆಯುತ್ತದೆ’ ಎಂದು ಹೇಳಿ ‘ಕೈಗೆ ಕಟ್ಟಿದ ವಾಚು ನೋಡದಂತೆ ಕೆಲಸ ಮಾಡು ನೀನು ಥಾಮಸ್ ಅಲ್ವಾ ಎಡಿಸನ್ ಆಗ್ತಿ. ಎತ್ತರಕ್ಕೆ ಬೆಳೀತಿ’ ಎಂದನಂತೆ.

ಶಿಕ್ಷಣ ಎಂದರೆ ಏನು? ಇನ್ನೊಬ್ಬರ ಮುಂದೆ ಬೇಡೋದು ಕಲಿಸೋದಲ್ಲ. ದುಡಿದು ಬದುಕೋದನ್ನು ಕಲಿಸೋದು ಶಿಕ್ಷಣ. ಮನುಷ್ಯನನ್ನು ಸ್ವಾವಲಂಬಿ ಮಾಡೋದು ಶಿಕ್ಷಣ. ನಮ್ಮ ಮಕ್ಕಳಿಗೆ ಅದನ್ನು ಕಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT