ನಿಸರ್ಗದ ಸೃಷ್ಟಿ ಎಷ್ಟು ಅದ್ಭುತ ನೋಡಿ. ಕಾಲಿಲ್ಲದವರು ಹುಟ್ಯಾರ. ಕೈ ಇಲ್ಲದವರು ಅದಾರ. ಕಿವಿ, ಕಣ್ಣು ಇಲ್ಲದವರು ಇದ್ದಾರ. ತಲೆ ಇಲ್ಲದವರಂತೂ ಬೇಕಾದಷ್ಟು ಮಂದಿ ಅದೀವಿ. ಆದರೆ ಹೊಟ್ಟೆ ಇಲ್ಲದವರು ಒಬ್ಬರಾದರೂ ಹುಟ್ಟಿದ್ದಾರಾ?
ಜಗತ್ತಿನಲ್ಲಿ ಹೊಟ್ಟೆ ಇಲ್ಲದವರು ಯಾರೂ ಹುಟ್ಟಿಲ್ಲ. ಹೊಟ್ಟೆ ಇಲ್ಲದವರ ಬಗ್ಗೆ ಯಾವುದಾದರೂ ಮಾಧ್ಯಮದಲ್ಲಿ ಬಂದಿದ್ದು ನೀವು ನೋಡಿರೇನು? ಕೇಳಿರೇನು? ಯಾಕೆ ಹೀಗೆ? ಯಾಕೆಂದರೆ ಕೈ ಇರಲಿ ಬಿಡಲಿ, ಕಾಲು ಇರಲಿ ಇಲ್ಲದೇ ಹೋಗಲಿ, ಕಣ್ಣು ಕಾಣದಿದ್ದರೇನಂತೆ, ಕಿವಿ ಕೇಳದಿದ್ದರೂ ಹೊಟ್ಟೆ ಮಾತ್ರ ಯಾಕಿದೆ ಎಂದರೆ, ‘ನೀನು ದುಡಿದೇ ಉಣ್ಣಬೇಕು’ ಎನ್ನುವುದು ನಿಸರ್ಗದ ನಿಯಮ. ಯಾವುದೇ ಅಂಗ ಇಲ್ಲದಿದ್ದರೂ ಹೊಟ್ಟೆ ತುಂಬಬೇಕು ಅಂದರ ನಾವು ದುಡಿಯಲೇ ಬೇಕು. ದುಡಿಯದಿದ್ದರೆ ಇಲ್ಲಿ ಏನೂ ಸಿಗಲ್ಲ.
ಪ್ರಾಣಿ ಪಕ್ಷಿಗಳೂ ದುಡಿದೇ ತಿನ್ನುತ್ತವೆ. ದುಡಿಯದೆ ಅವಕ್ಕೂ ಆಹಾರ ಸಿಗಲ್ಲ. ಯಾವ ಪಕ್ಷಿಯ ಗೂಡಿನಲ್ಲಿಯೂ ಆಹಾರ ತಂದು ಇಟ್ಟಿಲ್ಲ. ತಾನಾಗಿಯೇ ಆಹಾರ ಬಂದು ಗೂಡಿನೊಳಕ್ಕೆ ಬೀಳಲ್ಲ. ಅವೂ ದುಡಿದೇ ತಿನ್ನಬೇಕು. ದುಡಿಯದಿದ್ದರೆ ಇಲ್ಲಿ ಅನ್ನ ಸಿಗುವುದಿಲ್ಲ. ನಾನು ಕಾಡಿನ ರಾಜ ಇದೇನಿ ಎಂದು ಹೇಳಿದರೆ ಯಾರು ಕೇಳ್ತಾರೆ? ಕಾಡಿನ ರಾಜ ಅಂತ ಕಾಡಿನಲ್ಲಿ ಇರುವ ಪ್ರಾಣಿ ಪಕ್ಷಿಗಳು ಅದರ ಬಾಯಿಯೊಳಗೆ ಬಂದು ಬೀಳ್ತಾವೇನು? ಕಾಡಿನ ರಾಜ ಆದರೂ ಹೊಟ್ಟೆ ತುಂಬಿಸಿಕೊಳ್ಳಲು ಅದು ಬೇಟೆಯಾಡಲೇ ಬೇಕು. ಅದೇ ನಿಸರ್ಗದ ತತ್ವ.
‘ಹಸ್ತಗಳೆರಡು, ಬಾಯ್ ತಾನೊಂದು ಏನಿದರರ್ಥ, ಕಾಲುಗಳೆರಡು ಬಾಯ್ ತಾನೊಂದು ಏನಿದರರ್ಥ.’ ನಿಸರ್ಗ ಎಷ್ಟು ಮಜಾ ಇದೆ ನೋಡಿ. ನಮ್ಮ ದೇಹದಲ್ಲಿ ಎರಡು ಕೈಗಳಿವೆ. ಎರಡು ಕಾಲುಗಳಿವೆ. ಕಿವಿ ಎರಡಿವೆ, ಒನ್ ಬೈ ಟು ಮೂಗಿದೆ. ಆದರೆ ಒಂದೇ ಬಾಯಿ ಇಟ್ಟಿದ್ದಾನೆ ದೇವರು. ಯಾಕೆ? ಒಂದು ಬಾಯಿ ಇಟ್ಟೇ ನಾವು ಈ ಜಗತ್ತನ್ನು ಇಷ್ಟೆಲ್ಲಾ ಹಾಳು ಮಾಡೇವಿ. ಇನ್ನು ಎರಡೆರಡು ಬಾಯಿ ಇಟ್ಟಿದ್ದರೆ ಜಗತ್ತು ಉಳೀತಿತ್ತೇನು ನಮ್ಮ ಕೈಯಾಗ? ಯಾರೋ ಒಬ್ಬಳು ಸ್ವಾಮಿಗಳ ಹತ್ರ ಬಂದು, ‘ನಮ್ಮ ಆಯುಷ್ಯ ಮತ್ತು ಆರೋಗ್ಯ ಚೆನ್ನಾಗಿರಬೇಕು ಅಂದರೆ ಏನ್ ಮಾಡಬೇಕು? ಯಾವ ವ್ರತ ಮಾಡಬೇಕು’ ಎಂದು ಕೇಳಿದಳಂತೆ. ಅದಕ್ಕ ಸ್ವಾಮಿಗಳು, ‘ಮುಖ್ಯವಾಗಿ ಮೌನ ವ್ರತ ಮಾಡಬೇಕು. ಹಂಗಾದರೆ ನಿನ್ನ ಆರೋಗ್ಯ ಕೂಡಾ ಚೆನ್ನಾಗಿರುತ್ತದೆ. ಆಯುಷ್ಯವೂ ಹೆಚ್ಚಾಗುತ್ತದೆ. ನಿನ್ನ ಕುಟುಂಬದವರ ಆರೋಗ್ಯವೂ ಚೆನ್ನಾಗಿರುತ್ತದೆ’ ಎಂದು ಉತ್ತರಿಸಿದರಂತೆ.
ನಮಗೆ ಎರಡು ಕೈ ಯಾಕಿಟ್ಟಾನೆಂದರೆ ಎರಡುಪಟ್ಟು ದುಡಿ ಒಂದು ಪಟ್ಟು ಉಣ್ಣು ಎಂದು. ಎರಡು ಕಾಲು ಯಾಕಿಟ್ಟಾನೆಂದರೆ ಎರಡು ಪಟ್ಟು ನಡಿ, ಒಂದು ಪಟ್ಟು ನುಡಿ ಎಂದು, ಎರಡು ಕಣ್ಣು ಯಾಕಿಟ್ಟಾನಂದರೆ ಎರಡುಪಟ್ಟು ನೋಡು ಒಂದುಪಟ್ಟು ಮಾಡು ಎಂದು. ಎರಡು ಪಟ್ಟು ಕೇಳು ಒಂದು ಪಟ್ಟು ಮಾತಾಡು ಅಂತ ಎರಡು ಕಿಚಿಗಳನ್ನು ಇಟ್ಟಾನೆ. ಕೆಲಸ ಜಾಸ್ತಿ ಮಾಡು, ಮಾತು ಕಡಿಮೆ ಆಡು. ಇದೇ ನಿಸರ್ಗದ ನಿಯಮ. ನಿಸರ್ಗದ ಈ ನಿಯಮವನ್ನು ನಾವು ಪಾಲಿಸಬೇಕು. ಎರಡು ಪಟ್ಟು ದುಡಿಯಬೇಕು. ಒಂದು ಪಟ್ಟು ಉಣ್ಣಬೇಕು. ಆಗ ಬದುಕು ಸಾರ್ಥಕವಾಗ್ತದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.