ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು–24: ಒಬ್ಬನೇ ಚಾಲಕ ಇರಬೇಕು!

Published : 16 ಸೆಪ್ಟೆಂಬರ್ 2024, 23:52 IST
Last Updated : 16 ಸೆಪ್ಟೆಂಬರ್ 2024, 23:52 IST
ಫಾಲೋ ಮಾಡಿ
Comments

ರಾಮ ರಾಜ ಆಗಬೇಕು ಅಂತ ಯಾರಿಗೆ ಇಚ್ಛೆ ಇರಲಿಲ್ಲ ಹೇಳಿ. ಸೀತೆಗೆ ತನ್ನ ಗಂಡ ಅಯೋಧ್ಯಾಪತಿ ಆಗ್ತಾನಂತ ಸಂತೋಷವಾಗಿತ್ತು. ದಶರಥನಿಗೂ ರಾಮ ರಾಜ ಆಗುವ ಬಯಕೆ ಇತ್ತು. ತಾಯಿಗೂ ಅದೇ ಆಸೆ ಇತ್ತು. ಅಯೋಧ್ಯೆಪುರದ ಜನರ ಆಸೆಯೂ ಅದೇ ಆಗಿತ್ತು. ಎಲ್ಲರಿಗೂ ಇಚ್ಛೆ ಇದ್ದರೂ 14 ವರ್ಷ ರಾಮ ಅಯೋಧ್ಯೆ ಆಳಲಿಲ್ಲ. ಭರತನೂ ಆಳಲಿಲ್ಲ. ಕಟ್ಟಿಗೆಯಿಂದ ಮಾಡಿದ ಎರಡು ಪಾದುಕೆಗಳು ರಾಜ್ಯ ಆಳಿದವು. ಅಂದರೆ ಬಯಸಿದ್ದೆಲ್ಲಾ ಆಗೋದಿಲ್ಲ ಇಲ್ಲಿ. ಒಂದು ಗಿಡ ಐತಿ. ಅದರೊಳಗ ಒಂದಿಷ್ಟು ಎಲೆಗಳು ಅದಾವು. ನಾ ಹೇಳಿದಂಗೆ ಗಿಡ ಕೇಳಬೇಕು ಅಂತ ಎಲೆಗಳಿಗೆ ಅನಿಸಿದರೆ ನಡೀತೈತೇನು? ನಾನು ಅಲುಗಾಡಿದಾಗಲೆಲ್ಲಾ ಗಿಡ ಅಲುಗಾಡಬೇಕು, ನಾನು ಸುಮ್ಮನಿದ್ದಾಗ ಗಿಡ ಸುಮ್ಮನಿರಬೇಕು ಅಂದರೆ, ಅದು ಸಾಧ್ಯವಿಲ್ಲ. ಈ ಜಗತ್ತು ಐತಲ್ಲ, ಅದು ನಿಸರ್ಗ ನಿರ್ಮಿಸಿದ ವೃಕ್ಷ. ನಾವೆಲ್ಲಾ ಎಲೆಗಳು. ಅದು ನಮಗ ಗೊತ್ತಿರಬೇಕು. ನಿಸರ್ಗ ಹೇಳಿದಂಗೆ ನಾವು ಕೇಳಬೇಕು.

ಮಳೆ ಬರತೈತಿ. ರೈತ ಅಂತಾನ ‘ನಮ್ಮ ಹೊಲದ ಮ್ಯಾಲೆ ಮಾತ್ರ ಮಳೆ ಬರಲಿ’ ಅಂತ. ಅದೇ ಬೀದಿ ವ್ಯಾಪಾರಿ ‘ಒಟ್ಟ ಮಳೆನೇ ಬರಬಾರದು’ ಅಂತಾನ. ಆದರೆ, ಮಳೆ ಯಾರ ಮಾತನ್ನೂ ಕೇಳೋದಿಲ್ಲ. ಜಗತ್ತಿನಲ್ಲಿ ಕೋಟಿ ಕೋಟಿ ಜನರಿದ್ದಾರೆ. ಅವರವರ ಇಚ್ಛೆಯಂತೆ ಜಗತ್ತು ನಡೆಯಲು ಸಾಧ್ಯವೇನು? ಈಗ ಒಂದು ಬಸ್ ಐತಿ. ಹತ್ತಿದ ಪ್ರಯಾಣಿಕರೆಲ್ಲಾ ಚಾಲಕರಾದರೆ ಬಸ್ಸು ಎಲ್ಲಿ ಹೋಗಬೇಕು? ಬಸ್ಸು ಹೋಗಬೇಕಾದರೆ ಒಬ್ಬನೇ ಚಾಲಕ ಇರಬೇಕು. ಅವ ಕರಕೊಂಡು ಹೋದಲ್ಲಿಗೆ ಪ್ರಯಾಣಿಕರು ಹೋಗಬೇಕು. ಹಾಗೆಯೇ ಈ ಜಗತ್ತು ಕೂಡ ಒಂದು ಬಸ್ ಇದ್ದಂಗೆ. ಇದಕ್ಕೆ ದೇವರೇ ಡ್ರೈವರು. ಅವ ಕರಕೊಂಡು ಹೋದಲ್ಲಿ ನಾವು ಹೋಗತಿರಬೇಕು. ಏನು ಬಂದೈತಿ ಅದನ್ನು ಒಪ್ಪಿಕೊಳ್ಳುವುದು ಕಲಿತರೆ ಜೀವನ ಒಂದು ಸಂಭ್ರಮ.

ಡಿವಿಜಿ ಕಗ್ಗದಲ್ಲಿ ‘ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು, ಗುರುತಿಸೊಳಿತಿರುವುದನು ಕೇಡುಗಳ ನಡುವೆ, ಇರುವ ಭಾಗ್ಯವ ನೆನೆದು ಬಾರನೆಂಬುದ ಬಿಡು, ಹರುಷಕಿದು ದಾರಿ ಮಂಕುತಿಮ್ಮ’ ಎಂದು ಹೇಳ್ತಾರೆ. ಮಂದಿ ಕಾರು ತಗೊಂಡಾರಂತ ಚಿಂತಿ ಮಾಡಬ್ಯಾಡ, ದೇವರು ಕಾಲು ಕೊಟ್ಟಾನಲ್ಲ ಅಂತ ಸಂತೋಷಪಡು. ಕಾಲು ಇಲ್ಲದಿದ್ದರೆ ಏನು ಮಾಡಬೇಕು? ನೀವು ಯಾವುದೋ ಊರಿಗೆ ಹೋಗ್ತೀರಿ. ಅಲ್ಲಿ ಹೂವೂ ಕಾಣ್ತವ, ತಿಪ್ಪೆನೂ ಕಾಣ್ತವ. ಹಾಂಗಂತ ನೀವು ಮುಂದಿನ ಊರಿಗೆ ಹೋದಾಗ ಈ ಊರಿನ ತಿಪ್ಪಿ ಪ್ರಚಾರ ಮಾಡಬಾರದು, ಹೂವಿನ ಪ್ರಚಾರ ಮಾಡಬೇಕು. ಒಳಿತನ್ನು ಗುರುತಿಸಬೇಕು. ಅದೇ ಹರುಷದ ಹಾದಿ.

ಅಂಬೆಗಾಲಿಡುವ ಮಗುವನ್ನು ಅಪ್ಪ ಎದಿಮ್ಯಾಲೆ ಕುಳ್ಳಿರಿಸಿಕೊಂಡಾನ. ಅಪ್ಪಗ ಮಗ ಏನೇನೋ ಆಗಬೇಕು ಅಂತ ಇರ್ತದ. ಕನಸು ಕಟ್ಟಿರ್ತಾನ. ಮಗ ಎದಿಮ್ಯಾಗ ಕುಂತಿದ್ದನ್ನು ವಿಡಿಯೋ ಮಾಡಿ ‘ಚಿನ್ನುದು ವಿಡಿಯೊ’ ವಾಟ್ಸಪ್ ನಲ್ಲಿ ಎಲ್ಲರಿಗೂ ಕಳಿಸ್ತಾನ. ಆದರೆ ಮಗ ದೊಡ್ಡವನಾದ ಮೇಲೆ ಎದಿಮ್ಯಾಲೆ ಕುಂಡುರುತಾನಲ್ಲ ಆಗ? ಅವಾಗಲೂ ವಿಡಿಯೊ ಮಾಡಿ ವಾಟ್ಸಪ್‌ನಲ್ಲಿ ಬಿಡಬೇಕು. ಅಂದರ ಕನಸು ಕಾಣೋದು ತಪ್ಪಲ್ಲ. ಆದರೆ, ಎಲ್ಲವೂ ನನಸಾಗಲ್ಲ ಎಂಬ ಅರಿವು ಇರಬೇಕು. ಯುಪಿಎಸ್‌ಸಿ ಪರೀಕ್ಷೆ ಬರೆದೋರೆಲ್ಲ ಐಎಎಸ್ ಆಫೀಸರ್ಸ್ ಆಗಲ್ಲ. ಹಾಗಂತ ಪರೀಕ್ಷೆ ಬರೀದೆ ಇರಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT